ಭಾರತೀಲೋಚನ (೨೦೧೮)

Bharatilochana

ಮಹಾಮಾಹೇಶ್ವರ ಅಭಿನವಗುಪ್ತ ಜಗತ್ತಿನ ವಿದ್ಯಾವಲಯದಲ್ಲಿ ಮರೆಯಲಾಗದ ಹೆಸರು. ಮುಖ್ಯವಾಗಿ ಶೈವದರ್ಶನ ಮತ್ತು ಸೌಂದರ್ಯಮೀಮಾಂಸೆಗಳ ಪರಮಾಚಾರ್ಯನಾಗಿ  ಸಾವಿರ ವರ್ಷಗಳಿಂದ ಇವನು ಜ್ಞಾನಪ್ರಪಂಚವನ್ನು ಪ್ರಭಾವಿಸುತ್ತಲೇ ಇದ್ದಾನೆ. ಭರತಮುನಿಯ ನಾಟ್ಯಶಾಸ್ತ್ರವನ್ನು ಅರ್ಥಮಾಡಿಕೊಳ್ಳಲು ಇವನೊಬ್ಬನೇ ನಮಗಿರುವ ಆಲಂಬನ. ಇದೇ ರೀತಿ ರಸಧ್ವನಿಸಿದ್ಧಾಂತವನ್ನು ಕರಗತಮಾಡಿಕೊಳ್ಳಲೂ ಇವನ ಯೋಗದಾನ ಅಪಾರ. ಸಾವಿರ ವರ್ಷಗಳ ಮುನ್ನ ಕಾಶ್ಮೀರದಲ್ಲಿ ನೆಲಸಿದ್ದ ಅಭಿನವಗುಪ್ತನು ಅನೇಕಗುರುಗಳ ಬಳಿ ಅನೇಕವಿದ್ಯೆಗಳನ್ನು ಕಲಿತು, ಅನೇಕಶಿಷ್ಯರಿಗೆ ಬೋಧಿಸಿ, ಏಕಮೇವಾದ್ವಿತೀಯನಾಗಿ ನಿಂತ ರಸಸಿದ್ಧ. ಸೌಂದರ್ಯವನ್ನು ವೇದಾಂತದೃಷ್ಟಿಯಿಂದಲೂ ವೇದಾಂತವನ್ನು ಸೌಂದರ್ಯದೃಷ್ಟಿಯಿಂದಲೂ ಮನಗಾಣಿಸುವುದು ಇವನ ಮಹತ್ತ್ವಗಳಲ್ಲೊಂದು. ಗೀತ, ವಾದ್ಯ, ನೃತ್ಯ, ನಾಟ್ಯ, ಸಾಹಿತ್ಯ ಮುಂತಾದ ಕಲೆಗಳಲ್ಲಿ ಹೇಗೋ ಹಾಗೆಯೇ ತಂತ್ರ-ಯೋಗಗಳಲ್ಲಿಯೂ ಇವನು ಪರಿಣತ. ಇಂಥ ವಿಸ್ಮಯಾವಹವಿದ್ವಾಂಸನ ಸಾಹಿತ್ಯ-ಸೌಂದರ್ಯ-ಕಲಾ-ಮೀಮಾಂಸೆಯ ಸ್ವಾರಸ್ಯಗಳನ್ನು ಕನ್ನಡಿಗರಿಗೆ ಹವಣಿಸಿಕೊಡುವುದೇ “ಭಾರತೀಲೋಚನ”ದ ಉದ್ದೇಶ. ಈ ಕೃತಿಯ ಮೂಲಕ ಕನ್ನಡದಲ್ಲಿ ಮೊದಲ ಬಾರಿಗೆ “ಅಭಿನವಭಾರತಿ”ಯ ಸಮಗ್ರಸಮೀಕ್ಷೆ ಬಂದಿರುವುದಲ್ಲದೆ “ಧ್ವನ್ಯಾಲೋಕಲೋಚನ”ದ ವೈಶಿಷ್ಟ್ಯಗಳೂ ಎರಕಗೊಂಡಿವೆ. ಹೀಗಾಗಿ ಇದು ಏಕಕಾಲದಲ್ಲಿ ಸಾಹಿತ್ಯಶೋಧಕರಿಗೂ ಕಲಾಚಿಂತಕರಿಗೂ ಆಪ್ತವಾಗಬಲ್ಲ ಗ್ರಂಥ.