ಸಂಸ್ಕೃತಕವಿಗಳ ಕಾವ್ಯಮೀಮಾಂಸೆ - 14
ಈ ಮಾತುಗಳು ಕಾವ್ಯದ ಸಂದರ್ಭಕ್ಕೆ ಎಷ್ಟು ಯುಕ್ತವಾಗಿವೆಯೋ ಕಾವ್ಯಮೀಮಾಂಸೆಯ ಸಂದರ್ಭಕ್ಕೂ ಅಷ್ಟೇ ಯುಕ್ತವಾಗಿವೆ. ಇಲ್ಲಿ ಭಾರವಿಯು ತನ್ನ ಕಾವ್ಯಾಭಿವ್ಯಕ್ತಿಯ ಆದರ್ಶವನ್ನೇ ಸೂಚಿಸಿರುವನೆಂದರೆ ತಪ್ಪಾಗದು. ಅವನು ವಶ್ಯವಾಕ್ಕಾದ ಮಹಾಕವಿ; ಆದುದರಿಂದ ಆತನ ವೈಯಕ್ತಿಕ ಅಭಿಪ್ರಾಯವೂ ಸಾರ್ವತ್ರಿಕವಾದ ಶಾಸ್ತ್ರಾಭಿಪ್ರಾಯವೆನಿಸುವ ಮಟ್ಟಿಗೆ ಅರ್ಥಗರ್ಭಿತವಾಗಿದೆ. ಭಾರವಿಯ ಪ್ರಕಾರ ಮಾತೆಂಬುದು ವಕ್ತೃವಿನ ಆಶಯವನ್ನೆಲ್ಲ ಚೆನ್ನಾಗಿ ಪ್ರತಿಬಿಂಬಿಸಲು ಸಮರ್ಥವಾದ ಕೊಳಕಿಲ್ಲದ ಹೊಳೆಹೊಳೆಯುವ ಕನ್ನಡಿಯಂತಿರಬೇಕು. ಅಂತೆಯೇ ಅದಕ್ಕೊಂದು ಸರ್ವಹಿತಕರವಾದ ಆಶಯವೂ ಇರಬೇಕು. ಇದೇ ಕನ್ನಡಿಯ ಮಾಂಗಲಿಕತ್ವದ ಸಂಕೇತ.
