ನನಗೆ ಬಾಲ್ಯದಿಂದಲೂ ನಾರದಮುನಿಗಳೆಂದರೆ ತುಂಬ ಆದರ, ಕುತೂಹಲ. ಅಕ್ಷರಾಭ್ಯಾಸಕ್ಕೆ ಮುನ್ನವೇ ರಾಮಾಯಣ, ಮಹಾಭಾರತಗಳ, ವಿವಿಧ ಪುರಾಣಗಳ ಕಥೆಗಳನ್ನು ಕೇಳುತ್ತ ಬೆಳೆದ ನನಗೆ ಕಥಾಕೀರ್ತನಗಳಲ್ಲಿ, ಪೌರಾಣಿಕ ಚಲನಚಿತ್ರಗಳಲ್ಲಿ ನಾರದರ ಬಗೆಗೆ ಮತ್ತೂ ಹತ್ತಾರು ವಿಷಯಗಳು ತಿಳಿಯುತ್ತ ಬಂದವು. ಈ ತಿಳಿವು ಯಾವ ಮಟ್ಟಿಗೆ ನನ್ನನ್ನು ಪ್ರಭಾವಿಸಿತೆಂದರೆ ನನಗೇನಾದರೂ ಋಷಿತ್ವ ಬರುವುದಿದ್ದಲ್ಲಿ ಅದು ನಾನು ನಾರದರಾಗಿ ಬಾಳುವಂತಿದಿದ್ದರೆ ಮಾತ್ರ ಸಮ್ಮತವೆಂದು ಗಟ್ಟಿಯಾಗಿ ನೆಮ್ಮುವಷ್ಟು! ಅಲ್ಲವೇ ಮತ್ತೆ, ನಾರದರಾಗುವುದರಲ್ಲಿ ಅದೆಷ್ಟು ಸೊಗಸಿದೆ, ಅದೆಷ್ಟು ನಲವಿದೆ! ಮನೆ-ಮಠಗಳ ಹಂಗಿಲ್ಲದೆ, ಸಂಸಾರದ ಬಂಧನವಿಲ್ಲದೆ, ಮುಪ್ಪು-ರೋಗ-ಸಾವು-ನೋವುಗಳ ಭಯವಿಲ್ಲದೆ, ಹಾಡಿಕೊಂಡು ಆಡಿಕೊಂಡು ಭಗವದ್ಭಕ್ತಿಯ ಭರದಲ್ಲಿ ತೇಲಿಕೊಂಡು ಬಾಳುವ ಇಂಥ ಬದುಕೇ ಬದುಕು!
ಆಗ ನಾನು ಕಂಡಿದ್ದ ಚಲನಚಿತ್ರಗಳ ಪ್ರಕಾರ ನಾರದಮುನಿಗಳು ಮಿಕ್ಕೆಲ್ಲ ಋಷಿಗಳಂತೆ ಅಡ್ಡಾದಿಡ್ಡಿ ಗಡ್ಡ ಬೆಳೆಸಿದ ಮುದುಕರಲ್ಲ; ಅಚ್ಚುಕಟ್ಟಾಗಿ ಮುಖಕ್ಷೌರ ಮಾಡಿಕೊಂಡ ತರುಣ, ತೇಜಸ್ವಿ, ವರ್ಚಸ್ವಿ. ಹಲವು ವರ್ಷಗಳ ಬಳಿಕ ಉತ್ತರಭಾರತದ ಕೆಲವು ಸಾಂಪ್ರದಾಯಿಕ ಚಿತ್ರಗಳಲ್ಲಿ, ಅಲ್ಲಿಯ ಕ್ಯಾಲೆಂಡರ್ ಕಲೆಯಲ್ಲಿ, ವಿರಳವಾಗಿ ಕೆಲವೊಂದು ಅರ್ಧಶಿಲ್ಪ-ಭಿತ್ತಿಶಿಲ್ಪಗಳಲ್ಲಿ ಗಡ್ಡ-ಮೀಸೆಗಳಿರುವ ನಾರದರನ್ನು ಕಂಡೆನಾದರೂ ಆ ಹೊತ್ತಿಗೆ ‘ಆಘಾತ’ಗೊಳ್ಳುವ ಹದಿಹರೆಯ ಮೀರಿದ್ದ ಕಾರಣ ನನ್ನ ನೆಮ್ಮುಗೆ ಅಕ್ಷತವಾಗಿ ಉಳಿಯಿತು. ಅಂದವಾದ ತಾರುಣ್ಯವೇ ಮೂರ್ತಿವೆತ್ತಂತೆ ಕಾಣುವ ಈ ಸಿನೆಮಾ ನಾರದರು ಹರಿನಾಮಗಳನ್ನು ಇಂಪಾಗಿ ಹಾಡುತ್ತ, ಆ ಗೀತಲಯಕ್ಕೆ ತಕ್ಕಂತೆ ಹಿತಮಿತವಾಗಿ ಹೆಜ್ಜೆ ಹಾಕುತ್ತ ಬೆಳ್ಮುಗಿಲುಗಳ ಮೇಲೆ, ನೀಲನಭದಲ್ಲಿ ತೇಲಿಹೋಗುತ್ತಿದ್ದರೆ ಯಾರಿಗೆ ತಾನೆ ಇಂಥ ‘ಪರಮಹಂಸ’ ಜೀವನ ಇಷ್ಟವಾಗದು? ದೇವತೆಗಳಿಗೂ ತಪೋಬಲವುಳ್ಳ ಅನೇಕ ಮುನಿಗಳಿಗೂ ಆಕಾಶಗಮನವು ಶಕ್ಯವೇ ಇದ್ದರೂ ನಾರದರ ಹಾಗೆ ಬಾನಲ್ಲಿ ಬಾನಾಡಿಯಾಗಿ ಹಾರಾಡಿದವರು ಮತ್ತಾರು? ಈಗಿನ ಕಾಲದಲ್ಲಿ ಹೀಗೆ ಪದೇ ಪದೇ ಗಗನಯಾನ ಮಾಡುವವರಿಗೆಲ್ಲ ವಿಮಾನಸಂಸ್ಥೆಗಳವರು ವಿಶೇಷವಾದ ಸವಲತ್ತುಗಳನ್ನು ಕೊಡುವರೆಂದು ಕೇಳಿದ್ದೇನೆ. ಆದರೆ ನಾರದರಿಗೆ ಇಂಥ ಯಾವುದೇ ಸೌಲಭ್ಯಗಳ ಹಂಗಿಲ್ಲ. ಕವಿ ಪು.ತಿ.ನ. ಅವರು ಹೇಳುವಂತೆ ‘ಅದಕೊ ಅದರಿಚ್ಛೆ ಹಾದಿ; ಇದಕೊ ಹರಿದತ್ತ ಬೀದಿ”. ಈ ಹಿನ್ನೆಲೆಯಲ್ಲಿ ನಮ್ಮ ಅರಿವಿಗೆ ಎಟುಕುವಷ್ಟರ ಮಟ್ಟಿಗೆ ನಾರದರ ವ್ಯಕ್ತಿತ್ವ-ಕೃತಿತ್ವಗಳನ್ನು ನೆನಪಿಸಿಕೊಳ್ಳೋಣ.
ಸಪ್ತರ್ಷಿಗಳಂಥ, ಬ್ರಹ್ಮರ್ಷಿಗಳಂಥ ಯಾವುದೇ ಮುನಿಗಳಿಗಿಲ್ಲದ ವೀಣಾವಾದನ ಮತ್ತು ಗಾನಕೌಶಲ ನಾರದರಿಗುಂಟು. ಇದಕ್ಕೆ ಪೂರಕವಾಗುವ ಹಾಗೆ ಹಿತಮಿತವಾದ ನಾಟ್ಯವಿದ್ಯೆಯೂ ಇವರಿಗಿದೆಯೆಂದರೆ ತಪ್ಪಾಗದು. ಏಕೆಂದರೆ ನಮ್ಮ ಪರಂಪರೆಯಲ್ಲಿ ‘ಸಂಗೀತ’ವು ಗೀತ, ವಾದ್ಯ ಮತ್ತು ನೃತ್ಯಗಳು ಮೂರನ್ನೂ ಒಳಗೊಳ್ಳುತ್ತದೆ. ನಾರದರ ಹೆಸರಿನಲ್ಲಿರುವ ‘ಸಂಗೀತಮಕರಂದ’ ಎಂಬ ಗ್ರಂಥ ಕೂಡ ಇದಕ್ಕೆ ಸಾಕ್ಷಿ. ಈ ಗ್ರಂಥವು ‘ಸಂಗೀತರತ್ನಾಕರ’ಕ್ಕಿಂತ ಪ್ರಾಚೀನವೆಂದು ವಿದ್ವಾಂಸರ ಮತ. ಸಂಗೀತದ ಗೀತಭಾಗದಲ್ಲಿ ‘ಪ್ರಬಂಧ’ರೂಪದ ಸಾಹಿತ್ಯವೂ ಬರುವ ಕಾರಣ ನಾರದರನ್ನು ವಾಗರ್ಥವಿದ್ವಾಂಸರೆಂದೂ ಹೇಳಬಹುದು. ಇಷ್ಟೇ ಅಲ್ಲ, ‘ನಾರದಶಿಲ್ಪ’ವೆಂಬ ಪ್ರಾಚೀನ ಶಿಲ್ಪಶಾಸ್ತ್ರಗ್ರಂಥವನ್ನು ಕಂಡಾಗ ಇವರಿಗೆ ಚಿತ್ರ, ಶಿಲ್ಪ, ವಾಸ್ತುಗಳಲ್ಲಿಯೂ ಹೆಚ್ಚಿನ ಪರಿಣತಿಯಿತ್ತೆಂದು ಊಹಿಸಬಹುದು. ಹೀಗೆ ನಾರದರು ಸಕಲಕಲಾಕೋವಿದರು. ಸಹಜವಾಗಿಯೇ ಎಲ್ಲ ಕಲೆಗಳಲ್ಲಿ ರುಚಿಯುಳ್ಳ ನನಗೆ ಇಂಥ ಮುನಿಗಳು ಅಭಿಮತರಾಗದೆ ಇರುವುದಾದರೂ ಹೇಗೆ?
ಅಪ್ರತಿಮ ವ್ಯಕ್ತಿತ್ವ
ಕಾಲಿಗೆ ಗೆಜ್ಜೆ ಕಟ್ಟಿ ಕೈಯಲ್ಲಿ ವೀಣೆ ಮತ್ತು ಚಿಟಿಕೆಗಳನ್ನು ಹಿಡಿದು ಹಾಡುವ ನಾರದರು ಏಕಕಾಲದಲ್ಲಿ ಗೀತ-ನೃತ್ಯ-ವಾದ್ಯಗಳನ್ನು ನಿರ್ವಹಿಸಬಲ್ಲ ಅಪ್ರತಿಮ ಕಲಾವಿದ. ಇವರ ವೀಣೆಯ ಹೆಸರು ಮಹತೀ. ಇದು ಅಮರಕೋಶದಂಥ ವಿಖ್ಯಾತ ಕೃತಿಯಲ್ಲಿಯೇ ಕಚ್ಛಪೀ ಎಂಬ ಸರಸ್ವತಿಯ ದಿವ್ಯವೀಣೆಯ ಪಂಕ್ತಿಯನ್ನು ಸೇರಿದೆ. ಹಣೆಯಲ್ಲಿ ತಿಲಕ, ಕೊರಳಲ್ಲಿ ತುಲಸೀಮಣಿಮಾಲೆ ಧರಿಸಿ ಕಾಷಾಯಚೀರವನ್ನು ಉಟ್ಟ ಜಟಾಧಾರಿ ನಾರದರು ವಿಷ್ಣುಭಕ್ತರ ವೇಷವನ್ನು ಧರಿಸಿದ್ದರೂ ಸರ್ವದೇವರನ್ನು ಸಾಮರಸ್ಯದಿಂದ ಆದರಿಸಿದ ವಿಶಾಲಮತರು, ವಿಶಾಲಮತಿಗಳು. ದಂಡ-ಕಮಂಡಲುಗಳನ್ನು ಹಿಡಿದ ಯತಿಗಳೇ ಇವರಾದರೂ ಇವರ ಈ ವ್ರತ ಮಡಿ-ಮುಸುರೆಗಳ ಕಿರಿಕಿರಿಯನ್ನು ಉಂಟುಮಾಡದ ಆತ್ಮಾರಾಮತೆಯನ್ನು ಮೈಗೂಡಿಸಿಕೊಂಡಿದೆ. ಇಲ್ಲವಾದರೆ ದೇವ-ದಾನವ-ಮಾನವರೆಂಬ ಯಾವುದೇ ಭೇದವಿಲ್ಲದೆ ಎಲ್ಲೆಡೆ ಸಂಚರಿಸುತ್ತ ಎಲ್ಲರಿಗೂ ಪ್ರಿಯವಾಗಿ÷ಬಾಳಲು ಹೇಗೆ ತಾನೆ ಸಾಧ್ಯ? ‘ನಾರದಭಕ್ತಿಸೂತ್ರ’ವೆಂಬ ಭಕ್ತಿಶಾಸ್ತ್ರವನ್ನು ರಚಿಸಿದ ಈ ಭಾಗವತೋತ್ತಮರು ಸ್ಕಂದಾವತಾರಿಯಾದ ಸನತ್ಕುಮಾರರ ಶಿಷ್ಯರಾಗಿ ಭೂಮವಿದ್ಯೆಯೆಂಬ ಬ್ರಹ್ಮಜ್ಞಾನವನ್ನೂ ಗಳಿಸಿದ ವೇದಾಂತವೇತ್ತರು; ಅಪೌರುಷೇಯವೆನಿಸಿದ ಛಾಂದೋಗ್ಯದಂಥ ಪ್ರಮುಖ ಉಪನಿಷತ್ತಿನಲ್ಲಿಯೇ ಉಲ್ಲೇಖಗೊಂಡ ಋಷಿಗಳು. ಈ ಮೂಲಕ ಭಕ್ತಿ-ಜ್ಞಾನಗಳ ನಡುವೆ ಯಾವುದೇ ವಿರೋಧವಿಲ್ಲವೆಂಬ ತತ್ತ್ವವನ್ನು ಸಾರಿದ ಕರ್ಮಯೋಗಿಯೆಂದರೆ ನಾರದರೇ. ಹೌದು, ನಿಂತಲ್ಲಿ ನಿಲ್ಲದೆ, ಸ್ವಾರ್ಥವೇ ಇಲ್ಲದೆ ಹದಿನಾಲ್ಕು ಲೋಕಗಳನ್ನೂ ಸಂಚರಿಸಿ ಜ್ಞಾನ-ವಿಜ್ಞಾನಗಳನ್ನೂ ನಲವು-ನಮ್ರತೆಗಳನ್ನೂ ಬೋಧಿಸಿದ ಈ ಮಹಾನುಭಾವರಲ್ಲದೆ ಮತ್ತಾರು ತಾನೆ ಕರ್ಮಯೋಗಿಗಳು?
ದೇವರ್ಷಿ ನಾರದರು ತಾವು ತಮ್ಮ ತಪಸ್ಸು-ಉಪಾಸನೆಗಳ ಬಲದಿಂದ ಭಕ್ತಾಗ್ರಣಿಗಳಾಗಿ, ಜ್ಞಾನಿವರೇಣ್ಯರಾಗಿ ನೆಲೆ ನಿಂತ ಬಳಿಕ ತೃಪ್ತರಾಗದೆ ಮತ್ತೆಷ್ಟೋ ಮಂದಿ ಸಾಧಕರಿಗೆ ಮಾರ್ಗದರ್ಶಿಗಳಾದರು. ಈ ಸತ್ಕಾರ್ಯದಲ್ಲಿ ಅವರು ಲಿಂಗ, ವಯಸ್ಸು, ವರ್ಣ, ಸ್ಥಾನ, ಮಾನ ಮುಂತಾದ ಯಾವ ಉಪಾಧಿಗಳನ್ನೂ ಗಮನಿಸಲಿಲ್ಲ. ಅವರು ಕಂಡದ್ದೆಲ್ಲ ಸಾಧಕರ ಸತ್ತ್ವವನ್ನು, ಶ್ರದ್ಧೆ ಮತ್ತು ಸಂಕಲ್ಪಗಳ ಪರಿಶುದ್ಧಿಯನ್ನು. ಆದುದರಿಂದಲೇ ಬಾಲಕರಾದ ಧ್ರುವ, ಪ್ರಹ್ಲಾದರಂಥ ಮಕ್ಕಳಿಗೂ ಸುಲಭರಾದರು. ಧ್ರುವನಿಗೆ ವಿಷ್ಣುಪದವೆಂದು ಹೆಸರಾದ ಬಾನಲ್ಲಿ ಸರ್ವೋನ್ನತವೂ ಶಾಶ್ವತವೂ ಆದ ಸ್ಥಾನ ದಕ್ಕುವ ಹಾದಿಯಲ್ಲಿ ಗುರುವಾದರು. ಪ್ರಹ್ಲಾದನಿಗಂತೂ ಅವನ ಗರ್ಭವಾಸದ ಕಾಲದಿಂದ ಆಚಾರ್ಯರಾಗಿ ಒದಗಿಬಂದರು (ಭಾಗವತ ಮತ್ತು ನೃಸಿಂಹಪುರಾಣ). ಮುಂದೆ ಅವನು ಅಸುರಸಾಮ್ರಾಜ್ಯಕ್ಕೆ ಚಕ್ರವರ್ತಿಯಾದ ಬಳಿಕವೂ ಇವರ ಮಾರ್ಗದರ್ಶನ ದಕ್ಕಿತ್ತು (ಬ್ರಹ್ಮವೈವರ್ತಪುರಾಣ). ಜಗನ್ಮಾತೆಯಾದ ಪಾರ್ವತಿಗೆ ಶಿವನಲ್ಲಿ ಅನುರಾಗವು ಜನಿಸುವಂತೆ ಮಾಡುವಲ್ಲಿ ನಾರದರ ಪಾತ್ರವಿದೆ (ಕುಮಾರಸಂಭವ). ಯಮನನ್ನೇ ಎದುರಿಸಿ ಗೆದ್ದ ಸಾವಿತ್ರಿಯ ವಿವಾಹದಲ್ಲಿಯೂ ನಾರದರ ಪಾತ್ರ ಹಿರಿದು. ಅವಳ ಮನೋನಿಶ್ಚಯವನ್ನು ಗಮನಿಸಿ ಅದಕ್ಕೆ ತಮ್ಮ ಬೆಂಬಲವನ್ನಿತ್ತ ಹಿರಿಮೆ ನಾರದರದೇ (ಮಹಾಭಾರತ, ವನಪರ್ವ). ಮದುವೆಯಿಲ್ಲದೆಯೇ ಮುದಿತನಕ್ಕೆ ಬಂದ ಹತಭಾಗಿನಿ ಹೆಣ್ಣೊಬ್ಬಳಿಗೆ ದಾಂಪತ್ಯಯೋಗವು ಒದಗುವ ಹಾಗೆ ಮಾಡಿ ಅನಂತರ ಆಕೆ ಮುಕ್ತಿಯನ್ನು ಗಳಿಸಲೂ ನೆರವಾದರು (ದೇವೀಭಾಗವತ). ಇಂದ್ರನ ಸಾರಥಿ ಮಾತಲಿಯ ಮಗಳಿಗೆ ನಾಗಲೋಕದ ಒಳ್ಳೆಯ ವರನನ್ನು ಸೂಚಿಸಿದವರು ನಾರದರೇ. ಅಷ್ಟೇಕೆ, ಇವರಿಲ್ಲದಿದ್ದರೆ ನಮಗೆ ರಾಮಾಯಣವಾಗಲಿ, ಮಹಾಭಾರತವಾಗಲಿ ದಕ್ಕುತ್ತಿರಲಿಲ್ಲ! ವರ್ತಮಾನ ಜಗತ್ತಿನಲ್ಲಿ ಸರ್ವಗುಣಸಂಪನ್ನರಾದ ಮನುಷ್ಯೋತ್ತಮರು ಯಾರಾದರೂ ಇರುವರೇ ಎಂಬ ವಾಲ್ಮೀಕಿ ಮುನಿಗಳ ಪ್ರಶ್ನೆಗೆ ಶ್ರೀರಾಮನೇ ಅಂಥ ವ್ಯಕ್ತಿಯೆಂದು ತಿಳಿಸಿ ಆ ಬಳಿಕ ಅವನ ಕಥೆಯನ್ನು ಸಂಗ್ರಹರಾಮಾಯಣದ ರೂಪದಲ್ಲಿ ಅಚ್ಚುಕಟ್ಟಾಗಿ ಅರುಹಿದವರು ನಾರದರೇ. ಇದೇ ರೀತಿ ಮಹಾಭಾರತವನ್ನು ಬರೆದ ಬಳಿಕ ಅದಾವುದೋ ಕೊರತೆಯಿಂದ ಕಳವಳಿಸುತ್ತಿದ್ದ ವೇದವ್ಯಾಸರಿಗೆ ಶ್ರೀಕೃಷ್ಣನ ಜೀವನವನ್ನು ವಿಸ್ತೃತವಾಗಿ ರಚಿಸಬೇಕೆಂದು ಪ್ರೇರಣೆ ನೀಡಿ ಭಾಗವತಪುರಾಣದ ನಿರ್ಮಾಣಕ್ಕೆ ಕಾರಣರಾದವರೂ ಇವರೇ. ರಾಮಾಯಣ ಮತ್ತು ಭಾಗವತಗಳ ಆರಂಭಿಕ ಭಾಗಗಳೇ ಇವಕ್ಕೆ ಸಾಕ್ಷಿ. ಮಹಾಭಾರತದ ವಿಷಯದಲ್ಲಿಯೂ ನಾರದರಿಗೆ ಹೆಚ್ಚಿನ ಅರಿವಿತ್ತು. ಇಂದು ನಮಗೆ ದಕ್ಕಿರುವುದು ಒಂದು ಲಕ್ಷ ಶ್ಲೋಕಗಳ ಭಾರತವಾದರೆ ಅವರಿಗೆ ಮೂರು ಲಕ್ಷ ಶ್ಲೋಕಗಳ ಪ್ರಮಾಣದ ಆ ಗ್ರಂಥ ತಿಳಿದಿತ್ತಂತೆ. ಆ ಕೃತಿಯ ಆದಿಪರ್ವದ ಕೆಲವೊಂದು ಆವೃತ್ತಿಗಳು ಇದನ್ನು ಒಕ್ಕಣಿಸಿವೆ.
ನಾರದಮುನಿಗಳು ಅನೇಕರಿಗೆ ಅನೇಕ ವಿಧದ ಉಪದೇಶಗಳನ್ನು ನೀಡಿದ್ದರು, ಹಿತವಾಕ್ಯಗಳನ್ನು ಹೇಳಿದ್ದರು. ಪ್ರಾಯಶಃ ಇವರ ಒಳ್ನುಡಿಗಳ ನೆರವನ್ನು ಪಡೆಯದ ಮಂದಿಯೇ ಇಲ್ಲವೆನೋ! ದ್ರೌಪದಿಯೊಬ್ಬಳ ಕೈಹಿಡಿದ ಪಂಚ ಪಾಂಡವರು ತಮ್ಮತಮ್ಮೊಳಗೆ ಕಲಹಿಸಿಕೊಳ್ಳಬಾರದೆಂಬ ಎಚ್ಚರಿಕೆಯನ್ನು ಮೊದಲು ನೀಡಿದವರು ನಾರದರೇ. ಅನ್ಯೋನ್ಯ ಪ್ರೀತಿಯಿಂದ ಅಭೇದ್ಯರಾಗಿದ್ದ ಸುಂದ ಮತ್ತು ಉಪಸುಂದರೆಂಬ ರಾಕ್ಷಸರು ತಿಲೋತ್ತಮೆಗಾಗಿ ಪರಸ್ಪರ ಹೊಡೆದಾಡಿಕೊಂಡು ಸತ್ತ ಕಥೆಯನ್ನೂ ಅವರಿಗೆ ಹೇಳಿ ತನ್ಮೂಲಕ ಆ ಸಹೋದರರ ಒಕ್ಕಟ್ಟನ್ನು ಉಳಿಸಿದರು. ಅನಂತರ ಅವರಿಗೆ ಅರ್ಥಶಾಸ್ತ್ರದ ಎಷ್ಟೋ ಮೌಲಿಕ ಸಂಗತಿಗಳನ್ನು ಬೋಧಿಸಿದರು. ಮಹಾಭಾರತದ ಈ ಭಾಗವು ನಾರದರು ಹೇಳಿದ ರಾಜನೀತಿಯೆಂದೇ ಪ್ರಸಿದ್ಧವಿದೆ. ಇಷ್ಟಕ್ಕೇ ಸೀಮಿತವಾಗದೆ ರಾಜಸೂಯದಂಥ ಕ್ಷತ್ತ್ರಿಯಯಾಗವನ್ನು ಮಾಡಿ ಚಕ್ರವರ್ತಿತ್ವವನ್ನು ಗಳಿಸಬೇಕೆಂದು ಪಾಂಡವರನ್ನು ಪ್ರೇರಿಸಿದರು. ಶ್ರೀಕೃಷ್ಣನು ಸಂಧಿಗೆಂದು ಕೌರವಸಭೆಗೆ ಬಂದಾಗ ಆತನ ಮಾತನ್ನು ಕಿವುಡುಗೇಳಿದ ದುರ್ಯೋಧನನಿಗೆ ಇಂಥ ಮೊಂಡುತನ ಸಲ್ಲದೆಂದು ಎಚ್ಚರಿಸಿದವರು ನಾರದರು. ವಿಶ್ವಾಮಿತ್ರನ ಶಿಷ್ಯ ಗಾಲವನು ತನ್ನ ಗುರುವಿನ ಮಾತು ಕೇಳದೆ ಹಠಕ್ಕೆ ಬಿದ್ದು ಒದ್ದಾಡಿದ್ದಲ್ಲದೆ ಯಯಾತಿಯ ಮಗಳು ಮಾಧವಿಯನ್ನೂ ಒದ್ದಾಡಿಸಿದ ಕಥೆಯನ್ನು ಅವನಿಗೆ ಹೇಳಿದ ಕಾಳಜಿ ಇವರದು. ಕುರುಕ್ಷೇತ್ರ ಯುದ್ಧದಲ್ಲಿ ಉಂಟಾದ ಸಾವು-ನೋವುಗಳಿಂದ ಕಂಗೆಟ್ಟ ಧರ್ಮರಾಜನ ಸಾಂತ್ವನಕ್ಕಾಗಿ ಶ್ರೀಕೃಷ್ಣನು ಹೇಳಿದ ಹದಿನಾರು ಮಂದಿ ಚಕ್ರವರ್ತಿಗಳ ಕಥೆಯನ್ನು ನಾರದರೇ ಹಿಂದೆ ಹೇಳಿದ್ದರು. ನಾರದರ ಇಂಥ ಮತ್ತೂ ಹಲವು ಕಥನ-ಸಂವಾದಗಳನ್ನು ಮಹಾಭಾರತದ ಶಾಂತಿಪರ್ವ-ಅನುಶಾಸನಪರ್ವಗಳು ಉಲ್ಲೇಖಿಸಿವೆ. ಆ ಪ್ರಕಾರ ಭೀಷ್ಮನಿಗೆ ಅನ್ನದಾನದ ಮಹಿಮೆಯನ್ನು ಬೋಧಿಸಿದ್ದಾಗಲಿ, ಸಂವರ್ತನನ್ನು ಪುರೋಹಿತನನ್ನಾಗಿ ಮಾಡಿಕೊಳ್ಳಬೇಕೇಂದು ಮರುತ್ತರಾಜನಿಗೆ ಸೂಚಿಸಿದವರಾಗಲಿ ನಾರದರೇ. ಜಗತ್ಸೃಷ್ಟಿಯನ್ನು ಕುರಿತು ಅಸಿತಮಹರ್ಷಿಯೊಡನೆ ಚರ್ಚಿಸಿದ ನಾರದರು ಗಾಲವನಿಗೂ ಹಿತವನ್ನು ಹೇಳಿದ್ದರು. ಶುಕಮುನಿಗೆ ತತ್ತ್ವೋಪದೇಶ ಮಾಡಿದ ಹಲವರ ಪೈಕಿ ಇವರೂ ಗಣ್ಯರು. ಒಮ್ಮೆ ಮೈತ್ರಿಯು ಮುರಿಯಿತೆಂದರೆ ಅದನ್ನು ಮತ್ತೆ ಬೆಸೆಯುವುದು ಅಸಾಧ್ಯವೆಂಬ ಲೋಕನೀತಿಯನ್ನು ಸುವರ್ಣಷ್ಠೀವಿ ಎಂಬ ಪಕ್ಷಿ ಹಾಗೂ ಬ್ರಹ್ಮದತ್ತ ಎಂಬ ದೊರೆಯ ನಡುವೆ ಬೆಳೆದು ಮುರುಟಿದ ಗೆಳೆತನದ ಕಥೆಯ ಮೂಲಕ ಮಾರ್ಮಿಕವಾಗಿ ಅರುಹಿದ್ದರು. ಅಶ್ವತ್ಥಾಮನು ಪ್ರಯೋಗಿಸಿದ ಐಷೀಕ ಅಥವಾ ಬ್ರಹ್ಮಶಿರೋಽಸ್ತ್ರಕ್ಕೆ ಎದುರಾಗಿ ಅರ್ಜುನನು ಅದೇ ಅಸ್ತ್ರವನ್ನು ತಾನು ಬಳಸಿದಾಗ ಮುಂದೆ ಸಂಭವಿಸಲಿರುವ ಲೋಕನಾಶದ ಅನರ್ಥವನ್ನು ಗಮನಿಸಿ ಅವರಿಬ್ಬರನ್ನೂ ತಡೆಯಲು ಮುಂದಾದ ಜೀವ-ಜಗತ್ಕಾರುಣ್ಯ ನಾರದರದು (ಸೌಪ್ತಿಕಪರ್ವ). ಈ ಮುನ್ನ ಕೂಡ ಅವರು ಭೀಷ್ಮ-ಪರಶುರಾಮರ ಸಂಗ್ರಾಮವನ್ನು ತಡೆಯಲೆಳಸಿದ್ದರು (ಉದ್ಯೋಗಪರ್ವ).
ಇವೆಲ್ಲ ನಾರದರು ಗಂಭೀರವಾಗಿ ವಿವೇಕಬೋಧೆಗೋ ವಿಚಾರಕಥನಕ್ಕೋ ತೊಡಗಿದ ಸಂದರ್ಭಗಳಾದುವು. ಎಷ್ಟೋ ಬಾರಿ ಅವರು ದುಷ್ಟರ, ಧೂರ್ತರ, ಅಹಂಕಾರಿಗಳ ದರ್ಪ-ದೌರ್ಜನ್ಯಗಳನ್ನು ಹತ್ತಿಕ್ಕಲೆಂದೇ ಜಾಣ್ಮೆಯ ತಂತ್ರಗಳನ್ನು ಮಾಡಿದ್ದುಂಟು. ಮಹಾಭಾರತದ ಶಾಂತಿಪರ್ವದಲ್ಲಿ ಬರುವ ಶಾಲ್ಮಲೀವೃಕ್ಷವೊಂದರ ಬಿಂಕವನ್ನು ವಾಯುವಿನ ಮೂಲಕ ಅಡಗಿಸಿದ ಕಥೆ ಇಂಥದ್ದೊಂದು ಪ್ರಯತ್ನ. ಶಿವನ ವರದಿಂದ ಕೊಬ್ಬಿದ್ದ ವೃಕಾಸುರ ಅಥವಾ ಭಸ್ಮಾಸುರನನ್ನು ಅವನ ಕೈಚಳಕದಿಂದಲೇ ಬೂದಿಯಾಗುವಂತೆ ಮಾಡಿದ ಶ್ರೇಯಸ್ಸು ನಾರದರದು (ಭಾಗವತ). ಕಂಸ, ರಾವಣ, ಹಿರಣ್ಯಕಶಿಪು ಮುಂತಾದ ಎಷ್ಟೋ ಮಂದಿ ರಾಕ್ಷಸರ ಪಾಪದ ಕೊಡವು ಬೇಗ ಬೇಗ ತುಂಬುವಂತೆ ಮಾಡಿ ತನ್ಮೂಲಕ ಅವರ ಸಾವಿನ ವೇಗಕ್ಕೆ ಕಾರಣರಾದವರು ನಾರದರೇ. ಹೀಗೆ ದುಷ್ಟದಮನದಲ್ಲಿಯೂ ಇವರ ಪಾತ್ರ ಹಿರಿದು. ಬಹುಶಃ ಇದನ್ನು ಗಮನಿಸಿಯೇ ಆಧುನಿಕ ಪೌರಾಣಿಕ ಚಲನಚಿತ್ರಗಳು ಮೇಲ್ನೋಟಕ್ಕೆ ನಾರದರನ್ನು ಅನೇಕ ಲೋಕಕಂಟಕರ ಆಪ್ತರೆಂಬಂತೆ ಬಿಂಬಿಸಿ ಕಡೆಗೆ ಅವರ ಅಂತ್ಯಕ್ಕೆ ಇವರೇ ಹೆದ್ದಾರಿಯನ್ನು ಹಾಕಿಕೊಟ್ಟಂತೆ ನಿರೂಪಿಸಿವೆ. ಅಲ್ಲವೇ ಮತ್ತೆ, ಮುಳ್ಳನ್ನು ಮುಳ್ಳಿನಿಂದಲೇ ತೆಗೆಯಬೇಕೆಂಬ ನೀತಿ ಇದೇ ತಾನೆ!
ನಾರದರು ಆಜನ್ಮಬ್ರಹ್ಮಚಾರಿಯಾಗಿ ಪ್ರಸಿದ್ಧರಾದಂತೆಯೇ ವಿಷ್ಣುಮಾಯೆಯ ಬಲೆಗೆ ಸಿಲುಕಿ ಸಂಸಾರಿಯಾಗಿಯೂ ಸಂದವರು; ಬರಿಯ ಗಂಡಾಗಿ ಮಾತ್ರವಲ್ಲ, ಹೆಣ್ಣಾಗಿಯೂ ಮೆಯ್ವೆತ್ತು ಅರವತ್ತು ಮಕ್ಕಳನ್ನು ಹೆತ್ತು ತಾಯ್ತನದ ಹಿರಿಮೆಯನ್ನೂ ಮೆರೆದವರು. ನಿರಂತರವೂ ಶ್ರೀಹರಿಯ ಶ್ರೀನಾಮವನ್ನು ಜಪಿಸಿ ತಣಿಯುತ್ತಿದ್ದ ನಾರದರು ಆಗೀಗ ಅಹಂಕರಿಸಿ ಅಂಕೆ ತಪ್ಪಿದರೂ ಬಿಂಕ-ಬಿಗುಮಾನಗಳಿಲ್ಲದೆ ತಮ್ಮ ತಪ್ಪನ್ನು ಒಡನೊಡನೆಯೇ ತಿದ್ದಿಕೊಂಡು ಸಮಾಹಿತರಾದವರು. ಇಲ್ಲವಾದರೆ ಗಾನಬಂಧುವೆಂದು ಹೆಸರಾದ ಯಾವುದೋ ಗೂಬೆಯೊಂದರ ಶಿಷ್ಯತ್ವವನ್ನು ವಹಿಸಿ ತಮ್ಮ ಸಂಗೀತವಿದ್ಯೆಯನ್ನು ಮತ್ತಷ್ಟು ನೇರ್ಪುಗೊಳಿಸಿಕೊಳ್ಳುತ್ತಿರಲಿಲ್ಲ. ಎಲ್ಲಕ್ಕಿಂತ ಮಿಗಿಲಾಗಿ ಮಿಕ್ಕ ಯಾವುದೇ ಋಷಿಗಳಿಗಾಗಲಿ, ದೇವತೆಗಳಿಗಾಗಲಿ ಅಷ್ಟಾಗಿ ದಕ್ಕದ ವಿನೋದಪ್ರವೃತ್ತಿಯನ್ನು ತಮ್ಮ ಜೀವನದ ಜೀವಾಳವನ್ನಾಗಿ ಮಾಡಿಕೊಂಡವರಿವರು. ನಿಜವಾದ ಜ್ಞಾನಿಗೆ ಜಗತ್ತೆಲ್ಲವೂ ಒಂದು ದಿವ್ಯಪ್ರಹಸನವಾಗಿ ತೋರುವುದಂತೆ. ಹೀಗೆ ಅವರ ಪಾಲಿಗೆ ಹಾಸ್ಯರಸವು ಪರಮರಸ ಎನಿಸಿದ ಶಾಂತದ್ದೇ ಮತ್ತೊಂದು ಮಗ್ಗುಲು. ಇಂಥ ನಗೆಗಾರರಾದ ಕಾರಣದಿಂದಲೇ ನಾರದರಿಗೆ ಸಕಲ ಲೋಕಗಳ ಸುದ್ದಿಗಳೂ ಸ್ವಾರಸ್ಯಕರ. ಅಷ್ಟೇಕೆ, ಇವರೊಬ್ಬರಿಂದಾಗಿಯೇ ಸ್ವರ್ಗ-ಮರ್ತ್ಯ-ಪಾತಾಳಗಳಲ್ಲಿ ಎಲ್ಲ ಸುದ್ದಿಗಳೂ ಎಲ್ಲರ ಸುದ್ದಿಗಳೂ ಸಲೀಲವಾಗಿ ಸಂಚರಿಸುತ್ತವೆ. ಒಂದು ಮಾತಿನಲ್ಲಿ ಹೇಳುವುದಿದ್ದರೆ ನಮ್ಮ ಪುರಾಣಪ್ರಪಂಚದ ಏಕಮೇವ ಅದ್ವಿತೀಯ ವಾರ್ತಾಹರ ಎಂದರೆ ನಾರದರೇ. ಇಂಥ ಮಹಾತ್ಮರ ವಿಸ್ತೃತ ಪರಿಚಯ ಯಾರಿಗೆ ತಾನೆ ಬೇಕಿಲ್ಲ? ಹಾಗೆ ಪರಿಚಯಿಸಿಕೊಂಡಂತೆಲ್ಲ ನಮ್ಮ ಪುರಾಣಗಳು ನಾರದರನ್ನು ಕೇವಲ ಚಪ್ಪಟೆಯಾದ ಬಿಳಿಯ ಬಣ್ಣವೊಂದರಲ್ಲಿಯೇ ಚಿತ್ರಿಸದೆ ನೋವು-ನಲಿವುಗಳ, ಆಶೆ-ನಿರಾಶೆಗಳ, ಕೋಪ-ತಾಪಗಳ ಹತ್ತಾರು ಬಣ್ಣಗಳನ್ನೂ ಬಳಸಿ ಬಿಂಬಿಸಿವೆಯೆಂದು ತಿಳಿಯುತ್ತದೆ. ಅವುಗಳ ಸ್ವಾರಸ್ಯವನ್ನಿಷ್ಟು ಕಾಣೋಣ.
ಹುಟ್ಟು-ಹಿನ್ನೆಲೆ
ನಮ್ಮ ಪುರಾಣಗಳ ಪ್ರಕಾರ ನಾರದರು ಮೂಲತಃ ಸೃಷ್ಟಿಕರ್ತ ಬ್ರಹ್ಮದೇವನ ಮಾನಸಪುತ್ರ (ದೇವೀಭಾಗವತ, ಪಂಚಮಸ್ಕಂಧ). ತನ್ನ ಇತರ ಮಾನಸಪುತ್ರರಾದ ಅತ್ರಿ, ದಕ್ಷ, ಮರೀಚಿ, ವಸಿಷ್ಠ, ಪುಲಹ, ಪುಲಸ್ತ್ಯ ಮುಂತಾದ ನವಬ್ರಹ್ಮರಂತೆಯೇ ನಾರದರು ಕೂಡ ಸ್ವೀಯ ಸಂತಾನದ ಮೂಲಕ ಸೃಷ್ಟಿಯನ್ನು ಮುಂದುವರಿಸುವನೆಂದು ಬ್ರಹ್ಮನು ಭಾವಿಸಿದ. ಆದರೆ ಇವರು ಸಂಸಾರದ ಸಂಕೋಲೆಯನ್ನೊಲ್ಲದೆ ನೈಷ್ಠಿಕ ಬ್ರಹ್ಮಚಾರಿಯಾಗಿ ನೆಲೆನಿಂತರು. ಇದರಿಂದ ಮುನಿದ ವಿಧಾತ ನಾರದರನ್ನು ಶಪಿಸಿದ. ಇದರ ಪರಿಣಾಮವಾಗಿ ಇವರು ಹಲವು ಜನ್ಮಗಳನ್ನು ತಾಳಬೇಕಾಯಿತು. ಹೀಗಾಗಿ ಮೊದಲು ಉಪಬರ್ಹಣನೆಂಬ ಗಂಧರ್ವನಾಗಿ ಚಿತ್ರಕೇತುವಿಗೆ ಜನಿಸಿದರು. ಬಳಿಕ ಗಂಧರ್ವರಾಜ ಚಿತ್ರರಥನ ಐವತ್ತು ಪುತ್ರಿಯರನ್ನು ವರಿಸಿದರು. ಈ ಜನ್ಮದಲ್ಲಿಯೇ ರಂಭೆಯನ್ನು ಇವರು ಮೋಹಿಸಿದರೆಂದು ತಿಳಿದು ಕೆರಳಿದ ಬ್ರಹ್ಮನಿಂದ ಮತ್ತೆ ಶಾಪಕ್ಕೆ ತುತ್ತಾಗಿ ಸತ್ತು ಕಾನ್ಯಕುಬ್ಜ ನಗರದ ರಾಜ-ರಾಣಿ ದ್ರುಮಿಳ ಮತ್ತು ಕಲಾವತಿಯರ ಮಗನಾಗಿ ಹುಟ್ಟಿದರು. ಇವರ ಜನನಕ್ಕೆ ಕಶ್ಯಪಮಹರ್ಷಿಯ ಅನುಗ್ರಹವೂ ಕಾರಣವೆಂದು ಕೆಲವು ಪುರಾಣಗಳು ಹೇಳುತ್ತವೆ. ತಾಯಿಯ ಗರ್ಭದಲ್ಲಿರುವಾಗಲೇ ತಂದೆ ಅಳಿದ; ರಾಜ್ಯವೂ ಇಲ್ಲವಾಯಿತು. ಹೊಟ್ಟೆಯ ಪಾಡಿಗಾಗಿ ಕಲಾವತಿ ವಿಪ್ರನೊಬ್ಬನ ಮನೆಯಲ್ಲಿ ದಾಸಿಯಾಗಿ ದುಡಿಯತೊಡಗಿದ್ದಳು. ಆಗ ನಾರದರು ಜನಿಸಿದರು. ಇವರು ಹುಟ್ಟಿದ್ದು ಬರಗಾಲದಲ್ಲಿ. ಆದರೆ ಆ ಕೂಡಲೇ ಕುಂಭದ್ರೋಣವಾಗಿ ಮಳೆ ಸುರಿದು ಇಳೆಯೆಲ್ಲ ತಂಪಾಗಿ ನಲಿಯಿತಂತೆ. ಈ ಘಟನೆಯೇ ಇವರ ಹೆಸರಿಗೆ ಕಾರಣವೆಂದು ಭಾಗವತಪುರಾಣದ ಹೇಳಿಕೆ. ‘ನಾರ’ ಎಂದರೆ ನೀರು ಎಂದರ್ಥ. ಹೀಗಾಗಿ ನಾರದನೆಂದರೆ ಜಲಪ್ರದನೆಂದು ತಾತ್ಪರ್ಯ. ಋಗ್ವೇದದಲ್ಲಿ ಇಂದ್ರನೇ ಜಲಪ್ರದನೆಂದು ಪ್ರಸಿದ್ಧ. ಜಗದ ಜಲವನ್ನೆಲ್ಲ ತಡೆದಿಟ್ಟುಕೊಂಡ ವೃತ್ರ ಅಥವಾ ಅಹಿ ಎಂಬ ರಕ್ಕಸನ ಅಳಿವಿನಿಂದಲೇ ಸಕಲ ಲೋಕಗಳೂ ತಮ್ಮ ಬರಡುತನವನ್ನು ನೀಗಿಕೊಂಡವಷ್ಟೆ. ಇದೇ ರೀತಿ ನಾರದರೂ ತನ್ನ ಭಕ್ತಿ-ಜ್ಞಾನ-ವೈರಾಗ್ಯಗಳ ಜಲಸೇಚನದಿಂದ ಪ್ರಪಂಚದ ಶುಷ್ಕತೆಯನ್ನು ಕಳೆಯುತ್ತಾರೆ; ಸಚ್ಚಿದಾನಂದದ ರಸಮಯತೆಯನ್ನು ಸಾರುತ್ತಾರೆ. ಇವರ ಎಳವೆಯಲ್ಲಿಯೇ ತಾಯಿ ಹಾವಿನ ಕಡಿತಕ್ಕೆ ತುತ್ತಾಗಿ ಸತ್ತಳು. ಇದರಿಂದ ವಿರಕ್ತರಾದ ನಾರದರು ವಿಷ್ಣುಭಕ್ತಿಯನ್ನು ಶಿವನಿಂದಲೇ ಪಡೆದು ತಪಸ್ಸು ಮಾಡಿ ವಿದೇಹಮುಕ್ತಿಯನ್ನು ಗಳಿಸಿ ಮತ್ತೆ ಸತ್ಯಲೋಕದಲ್ಲಿ ಬ್ರಹ್ಮನ ಮಾನಸಪುತ್ರನಾಗಿಯೇ ಜನಿಸಿದರಂತೆ. ಇವರ ಜನ್ಮಜಾಲದ ಪಾಡು ಇಷ್ಟಕ್ಕೇ ನಿಲ್ಲುವುದಿಲ್ಲ. ಇನ್ನೊಮ್ಮೆ ಮಂಗನಾಗಿ ಹುಟ್ಟಿ ಮಾಲತಿ ಎಂಬ ಮರ್ಕಟಿಯ ಕೈಹಿಡಿದು ಸಂಸಾರ ಸಾಗಿಸಿ ಕಾಲಕ್ರಮೇಣ ಅಳಿದು ಮತ್ತೆ ಬ್ರಹ್ಮನಿಗೇ ಮಾನಸಪುತ್ರ ಎನಿಸಿದರು! ಪಾಪ, ನಾರದರ ಜನ್ಮಚಕ್ರಕ್ಕೆ ಇನ್ನೂ ನಿಲುಗಡೆ ಬಂದಿರಲಿಲ್ಲ. ಈ ಬಾರಿ ಶಾಪವಿತ್ತವನು ಬ್ರಹ್ಮನಲ್ಲ, ತನ್ನಂತೆಯೇ ಇನ್ನೊಬ್ಬ ಬ್ರಹ್ಮಮಾನಸಪುತ್ರನೇ ಆದ ದಕ್ಷಪ್ರಜಾಪತಿ. ಇವನ ಐದು ಸಾವಿರ ಮಂದಿ ಗಂಡುಮಕ್ಕಳಿಗೆ ವೈರಾಗ್ಯವನ್ನು ಬೋಧಿಸಿ ಅವರೆಲ್ಲ ಗೃಹಸ್ಥಾಶ್ರಮಕ್ಕೆ ಕಾಲಿಡದೆ ನೇರವಾಗಿ ಸಂನ್ಯಾಸಕ್ಕೆ ಸಲ್ಲುವಂತೆ ಮಾಡಿದ ಅಪರಾಧಕ್ಕಾಗಿ ಶಾಪ ಬಂದಿತು. ಇದರ ಫಲವಾಗಿ ನಾರದರು ನಮ್ಮೀ ನೆಲದಲ್ಲಿ ನೆಲೆಯಿಲ್ಲದೆ ಅಲೆದಾಡಿ ಅಳಿದರಂತೆ (ದೇವೀಭಾಗವತ ಮತ್ತು ವಿಷ್ಣುಪುರಾಣ). ಈ ಜನ್ಮದಲ್ಲಿ ಅವರು ಹುಳುವಾಗಿ ಹುಟ್ಟಿದ್ದರೆಂದೂ ಹಲಕೆಲವು ಒಕ್ಕಣೆಗಳಿವೆ.
ಹೀಗೆ ಹಲವು ಜನ್ಮಗಳ ಸುಳಿಗಳಲ್ಲಿ ಸಿಲುಕಿದ ನಾರದರು ಒಂದೆರಡು ಬಾರಿ ಹೆಣ್ಣಾಗಿಯೂ ಹೆಣಗಿದವರು. ಅದೊಮ್ಮೆ ಇವರು ಹಿಮಾಲಯದಲ್ಲಿ ದೀರ್ಘಕಾಲ ತಪಸ್ಸು ಮಾಡಿ ಬಳಿಕ ವಿಷ್ಣುವಿನ ಬಳಿಗೆ ಹೋಗಿ “ಸ್ವಾಮಿ, ಇನ್ನು ನಿನ್ನ ಮಾಯೆ ನನ್ನ ಮೇಲೆ ಯಾವುದೇ ಪರಿಣಾಮ ಬೀರದು” ಎಂದು ಬೀಗಿದರಂತೆ. ಆಗ ಏನನ್ನೂ ನುಡಿಯದ ಶ್ರೀಹರಿ ಸುಮ್ಮನೆ ಇವರೊಡನೆ ಸುತ್ತಾಡಲು ಸಿದ್ಧನಾದನಂತೆ. ಅವರ ಹಾದಿಯಲ್ಲಿ ಹೊಳೆಯೊಂದು ಎದುರಾಯಿತು. ಸ್ನಾನ-ಸಂಧ್ಯೆಗಳಿಗೆಂದು ಅದರಲ್ಲಿ ಇಳಿದ ನಾರದರು ಹೆಣ್ಣಾದರಂತೆ! ಆಗಲೇ ತಾಲಧ್ವಜನೆಂಬ ದೊರೆಯನ್ನು ಪರಿಣಯಿಸಿದ ‘ನಾರದಿ’ ಕಾಲಕ್ರಮೇಣ ಅನೇಕ ಮಕ್ಕಳ ತಾಯಿಯಾದಳಂತೆ. ಬಳಿಕ ಮಕ್ಕಳನ್ನೂ ಕಂಡದ್ದಾಯಿತು. ಆದರೂ ಸಂಸಾರದಲ್ಲಿ ವಿರಕ್ತಿ ಬರಲಿಲ್ಲ, ವಿಷ್ಣುಮಾಯೆಯಿಂದ ಬಿಡುಗಡೆ ಆಗಲಿಲ್ಲ. ಆಗ ಯುದ್ಧವೊಂದರಲ್ಲಿ ಗಂಡ, ಮಕ್ಕಳು, ಮೊಮ್ಮೊಕ್ಕಳು - ಎಲ್ಲರೂ ಅಳಿದಾಗ ನಾರದಿಯ ಸಂಕಟ ಹೇಳತೀರದು. ಪ್ರಾಣತ್ಯಾಗ ಮಾಡಲೆಳಸಿ ಹೊಳೆಗೆ ಹಾರಿದಾಗ ಮೇಲೆದ್ದದ್ದು ನಾರದನಾಗಿ! ಆಗಲೇ ಇದೆಲ್ಲ ವಿಷ್ಣುಮಾಯೆ ಎಂದು ಅರಿವಾದದ್ದು! (ದೇವೀಭಾಗವತ). ಇಂಥದ್ದೇ ಪ್ರಸಂಗ ಇನ್ನೊಮ್ಮೆ ಶ್ರೀಕೃಷ್ಣನೊಡನೆ ಎದುರಾದಾಗ ಹೊಳೆಯ ನೀರನ್ನು ಕುಡಿದೇ ಹೆಣ್ಣಾದ ನಾರದರು ಕಾಲಪುರುಷರೂಪಿಯಾದ ಮುನಿಯೊಬ್ಬನನ್ನು ವರಿಸಿ ಆತನಿಂದ ಅರುವತ್ತು ಮಕ್ಕಳನ್ನು ಪಡೆದರಂತೆ. ಅವರೇ ಪ್ರಭವ, ವಿಭವ, ಶುಕ್ಲ, ಪ್ರಮೋದೂತ ಮುಂತಾದ ಸಂವತ್ಸರಗಳು (ಭಾಗವತ). ಮತ್ತೊಮ್ಮೆ ಹೀಗೆಯೇ ಶ್ರೀಕೃಷ್ಣನೊಡನೆ ಮಾಯೆಯ ವಿಷಯವಾಗಿ ತಗಾದೆ ಮಾಡುತ್ತ ಸಂಚರಿಸುತ್ತಿದ್ದ ನಾರದರು ಹತ್ತಿರದ ಹೊಳೆಯಲ್ಲಿ ಸ್ನಾನಕ್ಕಾಗಿ ಮುಳುಗಿ ಎದ್ದಾಗ ಈ ಬಾರಿ ಹೆಣ್ಣಾಗಲಿಲ್ಲ; ಆದರೆ ಹೆಣ್ಣೊಬ್ಬಳ ಮೋಹದಲ್ಲಿ ಸಿಲುಕಿ ಹಿರಿದಾದ ಕುಟುಂಬವನ್ನು ಕಟ್ಟಿಕೊಂಡು ಒದ್ದಾಡಬೇಕಾಯಿತಂತೆ. ಮದುವೆಯ ಹೊಸತರಲ್ಲಿ ಎಲ್ಲೆ ಮೀರಿ ಪ್ರೀತಿಸುತ್ತಿದ್ದ ಹೆಂಡತಿ ಕ್ರಮೇಣ ದಬ್ಬಾಳಿಕೆಗೇ ತೊಡಗಿದಳು. ಇದನ್ನೆಲ್ಲ ತಾಳಲಾರದೆ ಹೊಳೆಗೆ ಹಾರಿಕೊಂಡ ‘ಗೃಹಸ್ಥ’ ನಾರದ ಮತ್ತೆ ಮೇಲೆದ್ದುದು ವಿರಕ್ತ ನಾರದರಾಗಿ! ಆಗಲೇ ಶ್ರೀಹರಿಯ ಮಾಯೆ ಎಂಥದ್ದೆಂದು ತಿಳಿಯಿತಂತೆ. ಆ ನದಿಯೇ ಸಂಸಾರ - ಸಮ್ಯಕ್ ಸರತೀತಿ ಸಂಸಾರಃ (ಚೆನ್ನಾಗಿ ಹರಿಯುವಂಥದ್ದು, ನಿಲುಗಡೆಯೇ ಇಲ್ಲದೆ ಕೊಚ್ಚಿಕೊಂಡು ಹೋಗುವಂಥದ್ದು); ಇದರ ಮೂಲಕ ಹುಟ್ಟಿಕೊಳ್ಳುವ ಗಂಡ, ಹೆಂಡತಿ, ಮಕ್ಕಳು ಮುಂತಾದ ಎಲ್ಲ ರಕ್ತಸಂಬಂಧಗಳೂ ಬಗೆಬಗೆಯ ಬಂಧಗಳು, ಲೋಕಕ್ಕೆ ನಮ್ಮನ್ನು ಕಟ್ಟಿಹಾಕುವ ಪಾಶಗಳು - ಇದು ಪರಮಾರ್ಥ. ಹೀಗೆ ಹೆಣ್ಣಾಗಿಯೂ ಗಂಡಾಗಿಯೂ ಸಂಸಾರದ ಇಕ್ಕಟ್ಟುಗಳು ಅನುಭವದಿಂದ ಅರಿತು ಹೊರಬಿದ್ದವರು, ಆ ಹೊಳೆಯನ್ನು ದಾಟಿ ಪಾರಾದವರು ನಾರದರು.
ಒಟ್ಟಿನಲ್ಲಿ ಕಾಮದ ಕೋಟಲೆಯಿಂದ ಹೀಗೆ ಸಂಸಾರದಲ್ಲಿ ತೊಳಲಿದ ನಾರದರಿಗೆ ಕ್ರೋಧದ ಕಂಟಕವೂ ಕಾಲಿಗಂಟಿದ ಸಂದರ್ಭಗಳು ಹಲವಾರು. ಆದರೆ ಇವು ಜನ್ಮ-ಜನ್ಮಾಂತರಗಳಲ್ಲಿ ನರಳಿಸಲಿಲ್ಲ; ಹಲವೊಮ್ಮೆ ಅವರಿಗೆ ಬಂದ ಕೋಪವೂ ಸಕಾರಣದ್ದೇ. ಆದರೆ ಪ್ರಸನ್ನಮನೋಹರ ಮನೋಧರ್ಮದ, ವಿನೋದವರ್ತನೆಯ ನಾರದರಿಗೆ ಮುನಿಸು ಬಂದ ಬಗೆಯಾದರೂ ಹೇಗೆಂಬ ಬೆರಗು ನಮ್ಮದು. ದುಡ್ಡಿನ ದೇವರಾದ ಕುಬೇರನ ಪುತ್ರರು ನಳಕೂಬರ-ಮಣಿಗ್ರೀವರು. ಇವರೊಮ್ಮೆ ತಮ್ಮ ನಲ್ಲೆಯರ ಜೊತೆಯಲ್ಲಿ ಜಲಕ್ರೀಡೆಯಲ್ಲಿ ಮೈಮರೆತಿರುವಾಗ ನಾರದರು ಅತ್ತ ಸುಳಿದರಂತೆ. ಹೆಣ್ಣುಗಳೇನೋ ಅವರನ್ನು ಕಂಡು ಬಟ್ಟೆಯುಟ್ಟುಕೊಂಡು ಮರ್ಯಾದೆ ತೋರಿದರು. ಆದರೆ ಮದವೇರಿದ ಆ ಗಂಡುಗಳು ನಿರ್ಲಜ್ಜೆಯಿಂದ ತಮ್ಮ ನಗ್ನತೆಯನ್ನೇ ದೇವರ್ಷಿಯ ಮುಂದೆ ಮೆರೆಯಿಸಿದರಂತೆ. ಆಗ ಮುನಿದ ಮುನಿಗಳು ಅವರನ್ನು ಮತ್ತಿಯ ಮರಗಳಾಗಿ ಭೂಮಿಯಲ್ಲಿ ಬಾಳಿರೆಂದು ಶಪಿಸಿದರು. ಇವರೇ ಮುಂದೆ ಒರಳಿಗೆ ಕಟ್ಟಲ್ಪಟ್ಟ ಶ್ರೀಕೃಷ್ಣನ ಕೃಪೆಯಿಂದ ತಮ್ಮ ಮೂಲರೂಪವನ್ನು ಗಳಿಸಿದ ಕಥೆ ಭಾಗವತದಲ್ಲಿದೆ (ದಶಮಸ್ಕಂಧ, ಪೂರ್ವಾರ್ಧ). ಅವಿವೇಕಿಗಳಾದ ಯಾದವ ತರುಣರು ಭೃಗು, ದುರ್ವಾಸ ಮುಂತಾದ ಮಹರ್ಷಿಗಳನ್ನು ಗೇಲಿ ಮಾಡಿ ಅವರಿಂದ ಯಾದವಕುಲನಾಶದ ಶಾಪವನ್ನು ಪಡೆದಾಗ ಆ ಮುನಿಗಳ ಗುಂಪಿನಲ್ಲಿ ನಾರದರೂ ಇದ್ದರು (ಮಹಾಭಾರತ, ಮೌಸಲಪರ್ವ). ಓಂಕಾರದ ರಹಸ್ಯವನ್ನು ತನಗೆ ಹೇಳಬೇಕೆಂದು ಅದೊಮ್ಮೆ ರಾವಣ ನಾರದರನ್ನು ಕಾಡಿಸಿ ಪೀಡಿಸಿದ್ದಲ್ಲದೆ ನಾಲಗೆಯನ್ನೂ ಕತ್ತರಿಸುವುದಾಗಿ ಬೆದರಿಸಿದನಂತೆ! ಆಗ ಕೆರಳಿದ ನಾರದರು ಶ್ರೀರಾಮನ ಬಾಣದಿಂದ ಅವನ ಹತ್ತೂ ತಲೆಗಳು ನೆಲಕ್ಕುರುಳಲೆಂದು ಶಪಿಸಿದರಂತೆ. ಇದು ತಮಿಳಿನ ಕಂಬರಾಮಾಯಣದಲ್ಲಿ ಮಾತ್ರ ಬರುವ ಕಥೆ.
ನಾರದರನ್ನು ಕಾಮ-ಕ್ರೋಧಗಳೆರಡೂ ಕಾಡಿದ ಕಥೆಯೊಂದುಂಟು. ಪದ್ಮಪುರಾಣದಲ್ಲಿ ಬರುವ ಆ ವೃತ್ತಾಂತ ಹೀಗಿದೆ: ನಾರದರಿಗೆ ಪರ್ವತನೆಂಬ ಗೆಳೆಯನೊಬ್ಬನಿದ್ದ. ಅವನೂ ತ್ರಿಲೋಕಸಂಚಾರಿ, ನಾರದರ ಸಹಯಾತ್ರಿ. ಇಬ್ಬರೂ ಅದೊಮ್ಮೆ ಅಂಬರೀಷ ಮಹಾರಾಜನ ಬಳಿಗೆ ಹೋಗಿದ್ದಾಗ ಸ್ವಯಂವರಕ್ಕೆ ಅಣಿಯಾಗುತ್ತಿದ್ದ ಆತನ ಮಗಳು ಶ್ರೀಮತಿಯನ್ನು ಕಂಡು ಅವಳ ರೂಪಕ್ಕೆ ಮರುಳಾದರು. ಆದರೆ ಆಕೆ ಶ್ರೀಹರಿಯಲ್ಲಿಯೇ ಅನುರಕ್ತೆಯೆಂದು ಅರಿತ ಇಬ್ಬರೂ ಒಬ್ಬರಿಗೆ ತಿಳಿಯದಂತೆ ಮತ್ತೊಬ್ಬರು ಸ್ವಾಮಿಯ ಬಳಿಗೆ ಹೋಗಿ ತಮಗೆ ಹರಿಯ ರೂಪವು ಆ ಸ್ವಯಂವರದ ಹೊತ್ತಿನಲ್ಲಿ ಬರಬೇಕೇಂದೂ ತಮ್ಮ ಜೊತೆಗಾರನ ಮುಖ ಕಪಿಯದಾಗಬೇಕೆಂದೂ ಕೋರಿಕೊಂಡರು. ನಾರಾಯಣನು ಇಬ್ಬರ ಕೋರಿಕೆಯನ್ನೂ ನಗುತ್ತಾ ಮನ್ನಿಸಿದ. ಆದರೆ ಅದು ವಿಪರೀತವಾಗಿ ಫಲಿಸಿತ್ತು - ಇಬ್ಬರ ಮುಖಗಳೂ ಕಪಿಗಳದೇ ಆಗಿದ್ದವು! ಹರಿ ಎಂಬ ಶಬ್ದಕ್ಕೆ ಇರುವ ಅನೇಕಾರ್ಥಗಳ ಪೈಕಿ ಕಪಿ ಎಂಬುದೂ ಒಂದಷ್ಟೆ! ಇದರಿಂದ ಆಶಾಭಂಗ ಮತ್ತು ಅಪಮಾನಗಳಿಗೆ ತುತ್ತಾದ ಇಬ್ಬರೂ ಶ್ರೀಹರಿಯನ್ನೇ ಶಪಿಸಿದರಂತೆ: “ನೀನು ನಮ್ಮನ್ನು ಪ್ರಣಯವಂಚಿತರನ್ನಾಗಿ ಮಾಡಿದ ಕಾರಣ ನಿನಗೂ ಪ್ರೇಯಸಿಯ ವಿಯೋಗವಾಗಲಿ; ನಮ್ಮನ್ನು ಮಂಗನ ಮುಸುಡಿಯವರನ್ನಾಗಿ ಮಾಡಿದ ಕಾರಣ ಕಳೆದುಕೊಂಡ ನಲ್ಲೆಯನ್ನು ಮತ್ತೆ ಸೇರಲು ಮಂಗಗಳನ್ನೇ ಆಶ್ರಯಿಸುವಂತಾಗಲಿ!” ಇದನ್ನೊಪ್ಪಿದ ಸ್ವಾಮಿ ಈ ಶಾಪವನ್ನು ರಾಮಾವತಾರದಲ್ಲಿ ಸೀತಾವಿಯೋಗ ಮತ್ತು ವಾನರಸಖ್ಯದ ರೂಪದಿಂದ ಅನುಭವಿಸಿದನಂತೆ (ಪದ್ಮಪುರಾಣ).













































