ಸಂಸ್ಕೃತಕವಿಗಳ ಕಾವ್ಯಮೀಮಾಂಸೆ - 19
ಭವಭೂತಿ “ಉತ್ತರರಾಮಚರಿತ”ದ ಕಡೆಯ ಅಂಕದಲ್ಲಿ ಗರ್ಭಾಂಕತಂತ್ರವನ್ನು ಬಳಸಿ ಸೀತಾ-ರಾಮರ ಪುನರ್ಮೇಲನವನ್ನು ಸಾಧಿಸಿದ್ದಾನೆ. ಇದನ್ನು ವಾಲ್ಮೀಕಿಮುನಿಗಳ ರಾಮಾಯಣದ ಕಡೆಯ ಭಾಗವೆಂಬಂತೆಯೂ ಕಲ್ಪಿಸಿದ್ದಾನೆ. ಅವನ ಪ್ರಕಾರ ಶ್ರವ್ಯಕಾವ್ಯವಾದ ರಾಮಾಯಣದ ಮುಗಿತಾಯವು ದೃಶ್ಯಕಾವ್ಯದ ಮೂಲಕ ಆಗಬೇಕೆಂದು ವಾಲ್ಮೀಕಿಯದೇ ಸಂಕಲ್ಪ. ಆದುದರಿಂದಲೇ ಕಡೆಯ ಭಾಗವನ್ನು ರಂಗಕ್ಕೆ ತರಲು ಭರತಮುನಿಯ ನೆರವನ್ನು ಕೋರಿ ಅವನಿಗೆ ಹಸ್ತಪ್ರತಿಯನ್ನೂ ಕೊಡಲಾಗಿತ್ತು. ಹೀಗೆ ಸಜ್ಜುಗೊಂಡ ರೂಪಕವು ರಾಮನ ಸಾನ್ನಿಧ್ಯದಲ್ಲಿ, ಅಶೇಷ ಕೋಸಲಪ್ರಜೆಗಳ ಸಮಕ್ಷದಲ್ಲಿ ಪ್ರಯುಕ್ತವಾಯಿತು. ಈ ರೂಪಕದಲ್ಲಿ ಸೀತೆಯ ಪಾತ್ರವನ್ನು ಆಕೆಯೇ ನಿರ್ವಹಿಸಿದ್ದಲ್ಲದೆ ಗಂಗೆ-ಭೂದೇವಿಯರೂ ತಮ್ಮವೇ ಭೂಮಿಕೆಗಳಲ್ಲಿ ಬರುತ್ತಾರೆ.
