ನವಿಲುಗರಿಯ ಸೊಬಗು - 1
ಶತಾವಧಾನಿ ಡಾ|| ಆರ್. ಗಣೇಶರು ರಚಿಸಿರುವ ಹತ್ತು ಸಣ್ಣಕತೆಗಳ ಸಂಕಲನ ‘ಪುಟಗಳ ನಡುವಣ ನವಿಲುಗರಿ’. ಇದರ ಬಣ್ಣಗಳ ಬೆಡಗನ್ನು ಇಲ್ಲಿಯದೇ ನೂರಾರು ಕಣ್ಣುಗಳ ಮೂಲಕ ಓದುಗರಿಗೆ ಕಾಣಿಸಿಕೊಡುವ ಯತ್ನ ಸದ್ಯದ ಲೇಖನದ್ದು. ಸಾಮಾನ್ಯವಾಗಿ ಪುಸ್ತಕ ಓದುವಾಗ ಪುಟಗಳ ಗುರುತಿಗಾಗಿ ಚೀಟಿಯೊಂದನ್ನು ಬಳಸುತ್ತೇವಷ್ಟೆ. ಹಿಂದಿನ ಕಾಲದಲ್ಲಿ (ಈಗಲೂ ಈ ಪರಿಪಾಟಿ ಇದ್ದಲ್ಲಿ ಸಂತೋಷ!) ಇದಕ್ಕಾಗಿ ನವಿಲುಗರಿಯನ್ನು ಉಪಯೋಗಿಸುತ್ತಿದ್ದರು. ಹೀಗೆ ಪುಟಗಳ ನಡುವೆ ಇರಿಸಿದ ನವಿಲುಗರಿ ಮರಿ ಹಾಕುವುದೆಂದು ಮಕ್ಕಳ ಮುಗ್ಧ ವಿಶ್ವಾಸ. ಮಕ್ಕಳದ್ದಷ್ಟೇ ಅಲ್ಲ, ಮುಗ್ಧತೆಯನ್ನು ಕಳೆದುಕೊಂಡಿರದ ಹದಿಹರೆಯದ ಹುಡುಗ-ಹುಡುಗಿಯರಿಂದ ಜೀವನಸಂಧ್ಯೆಯಲ್ಲಿರುವ ವೃದ್ಧರವರೆಗೆ ಎಲ್ಲರ ನಂಬುಗೆಯೂ ಇದೇ. ಈ ಬಗೆಯ ವಿಶ್ವಾಸವೇ ಜೀವನದ ಶ್ವಾಸ.
