ಸ್ಥಿರತೆಯ ಸಮುನ್ನತಿ - ಭೈರಪ್ಪನವರ ಕಾದಂಬರಿಗಳಲ್ಲಿ ಬೆಟ್ಟ-ಗುಡ್ಡ-ಪರ್ವತಗಳು - 1
ಸಂಸ್ಕೃತದಲ್ಲಿ ಬೆಟ್ಟವನ್ನು ಸೂಚಿಸುವ ಹಲವು ಪದಗಳಿವೆ. ಮಹೀಧ್ರ, ಶಿಖರಿ, ಅಹಾರ್ಯ, ಪರ್ವತ, ಗೋತ್ರ, ಅಚಲ, ಶಿಲೋಚ್ಚಯ ಎಂಬುವನ್ನು ಪ್ರಾತಿನಿಧಿಕವಾಗಿ ಪರಿಗಣಿಸಿದರೆ ಭೂಮಿಯನ್ನು ತಳೆದಿರುವುದು, ಉನ್ನತವಾದ ತುದಿಯನ್ನು ಹೊಂದಿರುವುದು, ಒಯ್ಯಲಾಗದ್ದು / ಅಪಹರಿಸಲಾಗದ್ದು, ಪೂರ್ಣವಾದುದು, ಭೂಮಿಯನ್ನು ಕಾಪಾಡುವುದು, ಸ್ಥಿರವಾದುದು, ಬಂಡೆಗಳ ಒಟ್ಟುಗೂಡು ಎಂಬ ಅರ್ಥಗಳು ಹೊರಡುತ್ತವೆ. ಬೆಟ್ಟವೆಂದೊಡನೆ ನಮ್ಮ ಮನಸ್ಸಿಗೆ ಬರುವುವಾದರೂ ಗಟ್ಟಿತನ ಮತ್ತು ಔನ್ನತ್ಯಗಳೇ ತಾನೆ? ಈ ಎಲ್ಲ ಅರ್ಥಗಳೂ ಎಸ್. ಎಲ್. ಭೈರಪ್ಪನವರಲ್ಲಿ ಸಂಗತವಾಗುತ್ತವೆ. ಅವರ ವ್ಯಕ್ತಿತ್ವವೇ ಹಾಗೆ.
