ಸಾಕ್ಷಿ – ಇರುವು; ಅರಿವು; ಹರವು - 1
ಭೈರಪ್ಪನವರ ಕಾದಂಬರಿ “ಸಾಕ್ಷಿ" ಯನ್ನು ಓದುವಾಗ, ಅದು ಚಿತ್ರಿಸುತ್ತಿರುವ ಕಥೆಯ ಬೆರಗು, ಮನುಷ್ಯನ ಧರ್ಮ, ಅರ್ಥ ಮತ್ತು ಕಾಮ, ಅಹಂಕಾರ ಮತ್ತು ಮೌಲ್ಯಗಳ ತಳಹದಿಯ ಪಾತ್ರ-ಪ್ರಸಂಗಗಳ ಚಿತ್ರಣದ ವಿವಿಧ ರೂಪಗಳ ಸೆಳೆತದಲ್ಲಿ, ಗ್ರಾಮೀಣ ಜನಜೀವನ ಮತ್ತು ಸಂಭಾಷಣೆಗಳಲ್ಲಿ ಓದುಗರ ಚಿತ್ತ ಕಳೆದುಹೋಗಿ, ಈ ಕಾದಂಬರಿಯು ಸೂಕ್ಷ್ಮವಾಗಿ, ಸೂಚಿಸುವ - ಪ್ರತಿಯೊಬ್ಬ ಜೀವಿಯಲ್ಲಿ ನಡೆಯುವ/ನಡೆಯಬೇಕಾದ/ನಡೆಯದ - ಮೌಲ್ಯವಿಶ್ಲೇಷಣೆಯನ್ನು, ಅದಕ್ಕೆ ಆಧಾರವಾದ ವಿವಿಧ ರೀತಿಯ ವ್ಯಕ್ತಿಗಳ ಅಹಂಕಾರ ಮತ್ತು ಆತ್ಮಸಾಕ್ಷಿಯ ಸ್ವರೂಪವನ್ನು ಗ್ರಹಿಸದೆ ಇದ್ದುಬಿಡುವ ಸಂಭವವಿದೆ. ಇದಕ್ಕೆ ಕಾರಣ ಕಾದಂಬರಿಯ ವಸ್ತುವಿನ ಆಕರ್ಷಣೆ ಒಂದೆಡೆಯಾದರೆ, ಅದನ್ನು ಅನನ್ಯ ರೀತಿಯಲ್ಲಿ ಪ್ರತಿನಿಧಿಸುವ ಪಾತ್ರಗಳು ಇನ್ನೊಂದೆಡೆ.
