ಅಪ್ಪಾಜಪ್ಪ :
ಅಹಂಕಾರವನ್ನು ಯಾವುದೇ ರೀತಿಯಲ್ಲಿಯೂ ಅಭಿವ್ಯಕ್ತಿಸದ ಅಥವಾ ಲೋಕಸಾಮಾನ್ಯವಾದ ಬಗೆಯಲ್ಲಿ ತೋರಿಸದ ಪಾತ್ರವೇ ಅಪ್ಪಾಜಪ್ಪ. ಇಲ್ಲಿ ಲೇಖಕರೂ ಕೂಡ ಅಪ್ಪಾಜಪ್ಪನ ಮನದೊಳಗಿಳಿದು ಅವನಲ್ಲಾಗುತ್ತಿರುವ ಚಿತ್ತವೃತ್ತಿಗಳನ್ನು ತಿಳಿಸಲು ಹೋಗುವ ಸಾಹಸ ಮಾಡಿಲ್ಲ. ತನ್ಮೂಲಕ ವಾಚ್ಯತಾದೋಷವನ್ನು ತಪ್ಪಿಸಿ, ಓದುಗರ ಸೂಚನಗ್ರಾಹ್ಯಶಕ್ತಿಯನ್ನು ಪರೀಕ್ಷೆಗೆ ಇಟ್ಟಿದ್ದಾರೆ. ಅಹಂಕಾರವನ್ನು ವಿವಿಧರೀತಿಯಲ್ಲಿ ವಿಜೃಂಭಿಸುವ ಹಲವು ಪಾತ್ರಗಳ ನಡುವೆ ಸತ್ತಂತೆ ಬದುಕಿರುವ, ಮೌನವೇ ಅಭಿವ್ಯಕ್ತಿಯಾದ ಈ ಪಾತ್ರಕ್ಕೆ ಇರುವ ಅನನ್ಯತೆಯನ್ನು ಗಮನಿಸಬಹುದು. ಇವನ ಹೆಂಡತಿ ಸರೋಜಾಕ್ಷಿಯ ಮಾತಿನಲ್ಲೇ ಹೇಳುವುದಾದರೆ ಇವನು "ಕೋಪಕ್ಕೆ, ಜಗಳಕ್ಕೆ, ಪ್ರೀತಿಗೆ ಯಾವುದಕ್ಕೂ ಸಾಲದ, ಹೆಂಡತಿಗೆ ಮೋಸವನ್ನಾದರೂ ಸರಿ, ಆತ್ಮವಿಶ್ವಾಸದಿಂದ ಮಾಡಲಾಗದವ. ಕೆಟ್ಟವನಲ್ಲ, ಕೇಡಿಗನಲ್ಲ ಆದರೆ ಸತ್ತ್ವಹೀನ, ಯಾರನ್ನೂ ಏನನ್ನೂ ಆಳಲಾರದವ. ತನ್ನ ಹೆ೦ಡತಿಯು ನಡತೆಗೆಟ್ಟವಳೆ೦ಬುದು ಅವನಿಗೆ ತಿಳಿದಿರಬಹುದು ಅಥವಾ ಇಲ್ಲದಿರಲೂ ಬಹುದು. ತಿಳಿದೂ ಸುಮ್ಮನಿರುವ ಅಧೈರ್ಯಶಾಲಿಯೋ, ಅಥವಾ ವಿಶಾಲಹೃದಯಿಯೋ ಅಥವಾ ಏನೂ ತಿಳಿಯದ ಮುಗ್ಧನೋ? ಅಥವಾ ಸಾಕ್ಷಿ ಭಾವವೇ ಸ್ವಭಾವವಾಗಿ ಎಲ್ಲದಕ್ಕೂ ಕೇವಲ ಸಾಕ್ಷಿಮಾತ್ರವೆಂಬಂತೆ ಬದುಕಿಬಿಡುವ ಪಾತ್ರವೋ? ತನ್ನ ವೃತ್ತಿಯಿಂದ ಅಮಾನತ್ತಾದ ನಂತರ ಅಪ್ಪಾಜಪ್ಪನಲ್ಲಾದ ತಲ್ಲಣವನ್ನು ಕಂಡರೆ, ಇವನೊಬ್ಬ ಪುಕ್ಕಲ ಮತ್ತು ಮುಗ್ಧಸ್ವಭಾವದವನೇ ಹೊರತು, ವಿಶಾಲಹೃದಯೀಯೋ ಅಥವ ಸಾಕ್ಷೀಭಾವವೇ ಮೈವೆತ್ತವನೆಂದೋ ಹೇಳಲಾಗುವುದಿಲ್ಲ. ಹಾಗಾಗಿ ಅಹಂಕಾರದ ಅಭಿವ್ಯಕ್ತಿಯೇ ಇಲ್ಲದವನಲ್ಲಿ ಸಾಕ್ಷಿ, ಅಹಂಕಾರ ಮತ್ತು ಮೌಲ್ಯಗಳು ಹೇಗೆ ಕಾರ್ಯನಿರ್ವಹಿಸುತ್ತವೆ ಎಂಬುದನ್ನು ನೋಡಲು ಅಪ್ಪಾಜಪ್ಪ ಒಂದು ಉದಾಹರಣೆಯಷ್ಟೆ. ಒಟ್ಟಿನಲ್ಲಿದು ಸಾಕ್ಷಿಯ ವಿವಿಧ ರೂಪಗಳ ಚಿತ್ರಣಕ್ಕೆ ಬೇಕಾದ ವಿಭಿನ್ನತೆಯನ್ನು ಕೊಡುವ ಪೂರಕಪಾತ್ರ.
ಸರೋಜಾಕ್ಷಿ
ನಡತೆಯಲ್ಲಿ ಅನೈತಿಕತೆಯಿದೆ ಆದರೆ ಸಂಸಾರವನ್ನು ಬಿಟ್ಟಿಲ್ಲ. ಗಂಡನ ಬಗೆಗೆ ಒಂದುರೀತಿಯ ತಿರಸ್ಕಾರವಿದೆ. ಆದರೆ ಗಂಡನ ಗೌರವಕ್ಕೆ ಚ್ಯುತಿ ಬಂದಾಗ ಮುಂದೆನಿಂತು ಸಮಸ್ಯೆಯನ್ನು ನಿವಾರಿಸುತ್ತಾಳೆ. ತಥಾಕಥಿತ ಪಾತಿವ್ರತ್ಯಕ್ಕೆ ಜೋತುಬಿದ್ದವಳಲ್ಲ ಆದರೆ ಹಾದರಗಿತ್ತಿಯೂ ಅಲ್ಲ. ಸ೦ಸಾರದ ಅಡಿಪಾಯಕ್ಕೆ, ಆತ್ಮಗೌರವಕ್ಕೆ ಚ್ಯುತಿಬರುವುದನ್ನು ಸಹಿಸುವುದಿಲ್ಲ. ಈ ಸರೋಜಾಕ್ಷಿಯ ಪಾತ್ರವನ್ನು ಅರ್ಥಮಾಡಿಕೊಳ್ಳಲು ಕಾಮ(ಪ್ರಕೃತಿ), ಮಮಕಾರ, ಆತ್ಮಗೌರವಗಳ ಬಗೆಗೆ ಗಾಢವಾದ ಚಿಂತನೆ ಅಗತ್ಯವಾಗುತ್ತದೆ. ಇದೊಂದು ಬಗೆಯ ಸೇರಿನಲ್ಲಿ ಅಳೆಯಲಾಗದ, ತಕ್ಕಡಿಯಲ್ಲೂ ತೂಗಿನೋಡಲಾಗದ; ಸಾಮಾನ್ಯ ಅಳತೆಗೋಲುಗಳಲ್ಲಿ ಲೆಕ್ಕಕ್ಕೆ ಸಿಗದ ಪಾತ್ರ. ಇವಳು ಸುಬ್ಬಯ್ಯನೊಂದಿಗೆ ಹೊಂದಿದ್ದ ಅನೈತಿಕಸಂಬಂಧವನ್ನು ಮತ್ತು ಅವನಿಂದ ಪಡೆದಿದ್ದ ಮಗುವನ್ನು ನೋಡಿ ಮಂಜಯ್ಯನು ಎಣಿಸಿದಂತೆ ಅವಳನ್ನು ಹಾದರಗಿತ್ತಿ ಎಂದು ಹಣೆಪಟ್ಟಿ ಕಟ್ಟಲು ಹೋದರೆ ನಮ್ಮ ತೀರ್ಮಾನ ಸೋಲುತ್ತದೆ. ಅಂತೆಯೇ ಇವಳು ತನ್ನ ಗಂಡನ ಕಾರ್ಯದ ಯಶಸ್ಸಿಗಾಗಿಯೋ ಅಥವಾ ಕಾಮಪ್ರವೃತ್ತಿಯ ಚೋದನೆಯಿಂದಲೋ ಇದನ್ನು ನಡೆಸಿದ್ದಲ್ಲ. ತನ್ನ ಪರಿಕಲ್ಪನೆಯ ಕಾಮ ಮತ್ತು ಪುರುಷತ್ವದ ಬೇಡಿಕೆ ಅವಳಿಗೆ ಅಪ್ಪಾಜಪ್ಪನಿಂದ ಸಿಗದೆ ಇದ್ದದ್ದೂ - ಇದನ್ನು ಸಮಾಜ ಅನೈತಿಕವೆಂದು ಕರೆದರೂ - ಅವಳ ಈ ಪರಪುರುಷಸಂಬಂಧಕ್ಕೆ ಕಾರಣವೆನ್ನಬಹುದು. ಆದರೂ ಸುಬ್ಬಯ್ಯ ಮತ್ತು ಮಂಜಯ್ಯರ ಜೊತೆಗಿನ ಅವಳ ಸಂಬಂಧ ಸೂಕ್ಶ್ಮತೆಯಲ್ಲಿ ಭಿನ್ನವಾದದ್ದು. ಸುಬ್ಬಯನೊಂದಿಗೆ ಅವಳಿಗಿದ್ದದ್ದು ಆಕರ್ಷಣೆ ಮತ್ತು ಇನ್ನೂ ಯೌವನದ ಅಪ್ರಬುದ್ಧತೆ . ಆದರೆ ಮಂಜಯ್ಯನೊಂದಿಗೆ ಅವಳಿಗಿದ್ದದ್ದು ಆಳವಾದ ಪ್ರೀತಿ. ಸುಬ್ಬಯ್ಯನನ್ನೂ ದೂರವಿಟ್ಟು, ಅಪ್ಪಾಜಪ್ಪನನ್ನೂ ಬಿಟ್ಟೂ ಅವನೊಂದಿಗೇ ಹೋಗಿ ಸಂಸಾರ ಹೂಡುವ, ಏಕನಿಷ್ಠೆಯನ್ನೂ ಬೇಡದ ಸಾಂಗತ್ಯ. ಆದರೂ ಅದರ ನಡುವೆ ಒಂದು ಪ್ರತಿಷ್ಠೆ ಅಥವಾ ಆತ್ಮಗೌರವವೆಂದು ಕರೆಯಬಹುದಾದ ಅಹಂಕಾರದ ಕುರುಹು. ಅದೇ ಮಂಜಯ್ಯನ ಲೆಕ್ಕಾಚಾರವನ್ನು ತಲೆಕೆಳಗಾಗಿಸಿ ಅವನನ್ನು ಜೀವಚ್ಛವವಾಗಿಸಿ, ಸರೋಜಾಕ್ಷಿಯನ್ನು ವಿಶೇಷಪಾತ್ರವಾಗಿಸಿದುದು. ಇಂದಿನ ತಥಾಕಥಿತ ಮಹಿಳಾವಾದಿಗಳಿಗೇ ಸವಾಲೊಡ್ಡೂವ ಪಾತ್ರ ಇದು. ಇವಳು ಕಾಮದಲ್ಲಿಯೂ ಸ್ವಾತಂತ್ರ್ಯವನ್ನು ಬಯಸುತ್ತಾಳೆ. ಆದರೆ ಅದಕ್ಕೊಂದು ಚೌಕಟ್ಟಿದೆ. ಲೋಕವ್ಯವಹಾರ ತಿಳಿಯದ ಗಂಡನಿದ್ದಾನೆ; ಅವನಿಂದಾದ ಸಂತಾನವೂ ಇದೆ. ಅವನು ಕೆಲಸದಿಂದ ಅಮಾನತಾದಾಗ ತಾನೇ ಮುತುವರ್ಜಿ ವಹಿಸಿ ಅದನ್ನು ವಜಾಗೊಳಿಸುವಂತೆ ಮಾಡುತ್ತಾಳೆ. ಹಿರಿಯ ಅಧಿಕಾರಿ ಸುಬ್ಬಯ್ಯನೊಂದಿಗಿನ ಸಂಬಂಧದಿಂದ ಸಂತಾನವಿದ್ದರೂ ಹಲವು ವರ್ಷಗಳ ನಂತರ ಕಾರ್ಯನಿಮಿತ್ತ ಸಂಧಿಸಿದಾಗ ಅವನ ಪ್ರಚೋದನೆಗಳನ್ನು ನಯವಾಗಿ ತಿರಸ್ಕರಿಸುವುದು, ಅವನು ತನ್ನ ಸಂತಾನದ ಬಗೆಗೆ ವಿಚಾರಿಸದೆ ಇದ್ದಾಗ ಹಲುಬುವುದು, ಅವಳು ತನ್ನ ಪ್ರವೃತ್ತಿಗಿಂತ ಆತ್ಮಗೌರವವನ್ನೇ ಹೆಚ್ಚೆಂದು ಭಾವಿಸಿರುವುದನ್ನು ತೋರಿಸುತ್ತದೆ. ಮಂಜಯ್ಯ ಅವಳನ್ನು ಬಲವಂತ ಮಾಡಿದಾಗಲೂ ಅವಳ ಪ್ರತಿಕ್ರಿಯೆ ಕಪಾಳಮೋಕ್ಷದ ನಕಾರವೇ. ಇವಳು ಬಯಸಿದ್ದು ಸಾತ್ತ್ವಿಕ ಶೃಂಗಾರವನ್ನೇ ಹೊರತು ತಾಮಸ ಮೃಗಾವೇಶವನ್ನಲ್ಲ. ಮಂಜಯ್ಯನಿಂದ ಆಕರ್ಷಿತಳಾಗಿ ಅವನೊಂದಿಗೆ ಸಂಸಾರ ಹೂಡುವ ಮಾತನ್ನಾಡಿದರೂ ತನ್ನ ಮಕ್ಕಳ ಜವಾಬ್ದಾರಿ, ಅಪ್ಪಾಜಪ್ಪನ ಬಗೆಗಿನ ಕಾಳಜಿಯನ್ನು ಮರೆಯುವುದಿಲ್ಲ. ಅವಳ ಶೃಂಗಾರ-ಕಾಮ-ಸಾಂಸಾರದ ಅನಿವಾರ್ಯತೆ ಹಾಗೂ ತುಡಿತವನ್ನು ಯಾವ ಚೌಕಟ್ಟಿನ ನೆಲೆಯಲ್ಲಿಯೂ ಹಿಡಿಯಲಾಗುವುದಿಲ್ಲ. ಹಾಗಾಗಿಯೇ ಅಹಂಕಾರದ, ಸಾಕ್ಷಿಯ ಮತ್ತು ವ್ಯಕ್ತಿತ್ವದ ಅಭಿವ್ಯಕ್ತಿಯ ಹುಡುಕಾಟದ ಈ ಕಾದಂಬರಿಯಲ್ಲಿ ಕಿರಿದಾಗಿಬಂದರೂ ಸರೋಜಾಕ್ಷಿಯದು ಅತಿವಿಭಿನ್ನ ಮತ್ತು ವಿಶೇಷಪಾತ್ರ.
ಇಲ್ಲಿಯ ಮೌಲ್ಯಪ್ರಜ್ಞೆಯುಳ್ಳ ಪಾತ್ರಗಳಾದ ಪರಮೇಶ್ವರಯ್ಯ, ಸತ್ಯಪ್ಪ, ಮತ್ತು ರಾಮಕೃಷ್ಣರಿಗೆ ವಿಧಿಯ ಪರೀಕ್ಷೆಯೆನ್ನಬಹುದಾದ ದ್ವ೦ದ್ವವು ಉ೦ಟಾಗುತ್ತದೆ. ತಾವು ನೆಚ್ಚಿ ನಡೆದುಕೊ೦ಡು ಬ೦ದ೦ತಹ ಮೌಲ್ಯವನ್ನು ಪ್ರತಿಪಾದಿಸುವುದೋ? ಅಥವಾ ಮೌಲ್ಯವನ್ನು ಎತ್ತಿಹಿಡಿಯಲಾಗದ್ದನ್ನು ಒಪ್ಪಿ ಬದುಕುವುದೋ? ಅಥವಾ ಜೀವನಕ್ಕಿ೦ತ ಮೌಲ್ಯ ಪ್ರತಿಪಾದನೆಯೇ ದೊಡ್ಡದೆ೦ದು ಜೀವನವನ್ನೇ ಕಳೆದುಕೊಳ್ಳುವುದೋ? ಅಥವಾ ಕಡೆಯ ಪಕ್ಷ ಪಶ್ಚಾತ್ತಾಪ ಪಡುವುದೋ? ಎ೦ಬ ಗೊ೦ದಲ ಕಾಡುತ್ತದೆ. ಆದರೆ ಇತರ ಪಾತ್ರಗಳಲ್ಲಿ ಈ ರೀತಿಯ ಯಾವುದೇ ಆತ್ಮವಿಮರ್ಶೆಯಾಗಲೀ, ತಮ್ಮ ತಪ್ಪನ್ನು ಒಪ್ಪಿ ಪರಿತಪಿಸುವುದನ್ನಾಗಲೀ ಕಾಣೆವು. ಈ ಮೂಲಕ ಸಾಕ್ಷಿಯ (ಆತ್ಮ) ಪ್ರಭಾವ ಹೇಗೆ ವೈಯಕ್ತಿಕವಾದದ್ದು ಮತ್ತು ವ್ಯಕ್ತಿಗುಣಸಾಪೇಕ್ಷ ಎ೦ಬುದನ್ನು ತೋರಿಸುವಲ್ಲಿ ಲೇಖಕರು ಯಶಸ್ವಿಯಾಗಿದ್ದಾರೆ.
ಮನುಷ್ಯನ ಮೂಲಭಯದ (ಜೀವಭಯ ಅಥವಾ ನೋವಿನ ಭಯ) ಹೊರತಾಗಿ ಸಮಾಜದ (ತನ್ನ ಘನತೆ, ಮರ್ಯಾದೆ ಅಥವಾ ಸಾಮಾಜಿಕ ಸ್ಥಿತಿಯ ಪಲ್ಲಟ) ಭಯ ಮನಸ್ಸಿನ ಮೇಲೆ ಹಾಗೂ ವ್ಯಕ್ತಿಯ ನಿರ್ಧಾರಗಳ ಮೇಲೆ ಬೀರುವ ಪ್ರಭಾವವನ್ನು ಪ್ರತಿಯೊಂದು ಪಾತ್ರದಿಂದಲೂ(ರಾಮಕೃಷ್ಣಯ್ಯನನ್ನು ಹೊರತುಪಡಿಸಿ) ಇಲ್ಲಿ ನಾವು ಗ್ರಹಿಸಬಹುದು. ಸಾಕ್ಷಿಯ ಪಾತ್ರಗಳಿಗೊದಗುವ ಸಂದಿಗ್ಧತೆ, ಭಯ ಅಥವಾ ಗೊಂದಲ ಜೀವಭಯದ್ದಲ್ಲ; ಸಮಾಜದಲ್ಲಿ ಸ್ಥಾಪಿತವಾದ ಮೌಲ್ಯಗಳ, ಕಟ್ಟುಪಾಡುಗಳ ಅಥವಾ ನಂಬಿಕೆಗಳ ವಿರುದ್ಧ ಹೋಗಿದ್ದರಿಂದ ಸಮಾಜದಲ್ಲಿ ತಮ್ಮ ಸ್ಥಿತಿಯ ಬಗೆಗೆ ಚಿಂತಿಸುವುದೇ ಆಗಿದೆ. ಸತ್ಯಪ್ಪ, ಪರಮೇಶ್ವರಯ್ಯ, ಮಂಜಯ್ಯ, ಇವರೆಲ್ಲರ ಗೊಂದಲದ ಮೂಲವೂ ಈ ಸಾಮಾಜಿಕಭಯ. ಪರಮೇಶ್ವರಯ್ಯ ತಾನು ಪರರಿಗಂಜಿ ಆತ್ಮಹತ್ಯೆ ಮಾಡಿಕೊಳ್ಳಲಿಲ್ಲ ಎಂದೆನ್ನುತ್ತಾನಾದರೂ, ತನ್ನ ಮನಸ್ಸಾಕ್ಷಿಯ ಎದುರೇ ತಾನು ಸಣ್ಣವನಾಗಿ ಜೀವನದಲ್ಲಿ ಅರ್ಥಕಳೆದುಕೊಂಡೆ ಎಂದು ಹೇಳುವುದು ತನಗಾದ/ಆಗಬಹುದಾದ ಅವಮಾನಗಳನ್ನು ಎದುರಿಸಲಾಗದೇ ಹೋಗುವುದೇ ಆಗಿದೆ. ಮಂಜಯ್ಯ ತನ್ನ ಅಹಂಕಾರವನ್ನು ಮೆರೆಯಲಾಗದ್ದಕ್ಕೆ, ಅಲ್ಲಿಯವರೆಗೆ ತಾನಂದುಕೊಂಡ ಲೆಕ್ಕಾಚಾರಗಳು ಹೆಚ್ಚು ವ್ಯತ್ಯಾಸವಾಗದ್ದು ಸರೋಜಾಕ್ಷಿಯ ಜೊತೆ ಆಯಿತೆಂಬ ಭ್ರಮನಿರಸನ, ಮತ್ತು ಅವಳ ಕಣ್ಣಲ್ಲಿ ತಾನು ಸಣ್ಣವನಾದೆ, ಹೆಣ್ಣನ್ನು ಗೆಲ್ಲಲಾಗಲಿಲ್ಲ ಎಂಬ ಗೊಂದಲದಿಂದಲೇ ಜೀವಚ್ಛವವಾಗುವುದು.
ಇಲ್ಲಿಯ ಬಹುತೇಕ ಎಲ್ಲ ಪಾತ್ರಗಳ ಅಹಂಕಾರಭಂಜನೆಯ ಸನ್ನಿವೇಶಗಳಿದ್ದರೂ ನಾಗಪ್ಪನಿಗೆ ಅವನ ಜೀವಿತದಲ್ಲಿ ಆ ಅನುಭವವಾಗುವುದಿಲ್ಲ. ಅವನ ಸಾವೇ ಅವನು ನೆಚ್ಚಿದ್ದ ಧನಸಂಗ್ರಹಣೆಯ ಗೀಳಿಗೆ ಉತ್ತರವಾಗುತ್ತದೆ. ಆ ಸ್ಥಿತಿಯನ್ನು ನೋಡಿ ತಿಳಿಯಲು ಅವನಿಲ್ಲದಿದ್ದರೂ, ಅದನ್ನು ಗಮನಿಸುತ್ತಿರುವ ಓದುಗರಿಗೆ ನೀಡಬೇಕಾದ ಸೂಚನೆ ಅಲ್ಲಿದೆ.ಮತ್ತು ರಾಮಕೃಷ್ಣಯ್ಯನಿಗೆ ವೈಯಕ್ತಿಕವಾದ ಲಾಭನಷ್ಟಗಳ, ಮಾನಾಪಮಾನಗಳ ಗೊಂದಲವಿಲ್ಲ. ಅವನದ್ದೇನಿದ್ದರೂ ಧರ್ಮಸೂಕ್ಷ್ಮಗಳ ಪಾಲನೆಯಲ್ಲಿ ತಾನು ಅಥವಾ ತನ್ನ ಕುಟುಂಬ ಎಲ್ಲಿ ವಿಮುಖವಾಗಿಬಿಡುತ್ತದೋ ಎಂಬ ಭಯ ಅಥವಾ ಉದ್ವೇಗ. ಸುಕನ್ಯ ಮತ್ತು ಗಣೇಶರಿಬ್ಬರೂ ಕಡೆಗೆ ನಾಗಪ್ಪನ ಆಸ್ತಿಯನ್ನು ಅನುಭವಿಸಲು ಇವನನ್ನು ಬಿಟ್ಟು ಹೋಗುವುದರಲ್ಲಿ ರಾಮಕೃಷ್ಣನಿಗೊದಗುವ ಸಂದಿಗ್ಧವು ಅಡಕವಾಗಿದೆ. ಇನ್ನು ಮಿಕ್ಕ ಪಾತ್ರಗಳ ಅಹಂಕಾರದ ಅಡಿಪಾಯವು ಅಲುಗಾಡುವುದು ಅಥವಾ ಕುಸಿದೇ ಬಿಡುವುದನ್ನು ನೇರವಾಗಿ ಕಥೆಯಲ್ಲೇ ನೋಡಬಹುದು.
ಈ ಮೇಲಿನ ಪಾತ್ರ ವೈವಿಧ್ಯವು ಕಾದಂಬರಿಯ ಉದ್ದೇಶದ ಈಡೇರಿಕೆಗಾಗಿ ಕೇವಲ ವೈವಿಧ್ಯವನ್ನು ಬಿಂಬಿಸಲು ಮಾತ್ರ ರೂಪುಗೊಂಡದ್ದಲ್ಲ. ಅವು ಕಾವ್ಯದ ಪಾಕದಲ್ಲಿ ಮಿಂದೆದ್ದು, ಕಥೆಯ ಸೂತ್ರದಲ್ಲಿ ಒಂದಕ್ಕೊಂದು ತೀವ್ರವಾಗಿ ಬೆಸೆದುಕೊಂಡಿವೆ. ಪರಮೇಶ್ವರಯ್ಯ, ಸಾವಿತ್ರಿ, ರಾಮಕೃಷ್ಣ ಮತ್ತು ಜಾನಕಮ್ಮ ಒಂದೇ ಮನೆಯವರಾದರೆ, ಸತ್ಯಪ್ಪ, ಮಂಜಯ್ಯ ಆ ಮನೆಯ ಅಳಿಯಂದಿರು. ನಾಗಪ್ಪ ಇವರ ಬೀಗ. ಈ ಕುಟುಂಬದ ಹೊರಗಿನವರಾಗಿ ಸ್ವಲ್ಪ ಪ್ರಮುಖರಾಗಿರುವವರು, ಲಕ್ಕು, ಕಂಚಿ, ಅಪ್ಪಾಜಪ್ಪ ಮತ್ತು ಸರೋಜಾಕ್ಷಿಯಷ್ಟೆ. ಹೀಗೆ, ಪಾತ್ರವೈವಿಧ್ಯವನ್ನು ಸಾಧಿಸುವಲ್ಲೂ ಕಥೆಯ ಚೌಕಟ್ಟನ್ನು ನಿರ್ಮಿಸುವಲ್ಲೂ ಅಚ್ಚುಕಟ್ಟನ್ನು ಮೆರೆದಿರುವ ಲೇಖಕರು, ವ್ಯರ್ಥ ಪಾತ್ರಗಳ ಸಂಕೀರ್ಣ ಹಿನ್ನೆಲೆಯ ಚಿತ್ರಣಕ್ಕೆ ಹೋಗದೆ ಒಂದೇ ಕುಟುಂಬದ ಸುತ್ತ ಕಥೆಯನ್ನು ಹೆಣೆದಿದ್ದು, ಕಾದಂಬರಿಯ ಮೂಲ ಉದ್ದೇಶದ ಮೇಲೆ ಕೇಂದ್ರೀಕರಿಸಿ ಕಥೆಯನ್ನು ಪರಿಣಾಮಕಾರಿಯಾಗಿಸಲು ಸಾಧ್ಯವಾಗಿದೆ.
ಪರಮೇಶ್ವರಯ್ಯ ಸತ್ತಲ್ಲಿಂದ ಮಂಜಯ್ಯ ಸಾಯುವವರೆಗೂ ಓಡುವ ಈ ಕಥೆಯ ಕಾಲ, ಪರೋಕ್ಷವಾಗಿ ಪ್ರಾರಂಭವಾಗುವುದು ಜಾನಕಮ್ಮನ ಸಾವಿನಿಂದ . ಲಕ್ಕುವಿನ ಮಗಳು ಲತಾ ತಾನು ಬಸುರಾಗಿದ್ದನ್ನು ಹೇಳುವ ಸನ್ನಿವೇಶದಲ್ಲಿ ಲೇಖಕರ ನಿರೂಪಣೆಯ - "ಕಂಚಿ ಸತ್ತು ವರ್ಷ ತುಂಬಿತ್ತು" - ಎಂಬುದರ ಮೂಲಕ ಕಥೆಯು ನಡೆದ ಅವಧಿ ತಿಳಿಯುತ್ತದೆ. ಹಾಗಾಗಿ ನೇರವಾಗಿ ಕಥೆಯ ಓಟದ ಅವಧಿಯೂ ಸಂಕ್ಷಿಪ್ತವೇ. ಕಥೆಯ ಕಾಲ ಮತ್ತು ಪಾತ್ರಗಳ ಹಿನ್ನೆಲೆಯ ಸಂಕ್ಷಿಪ್ತತೆ ಎರಡರಲ್ಲೂ ಅಚ್ಚುಕಟ್ಟು ಮೆರೆದಿರುವ ಲೇಖಕರು, ರಸದ ಹೊನಲಿನ ಧಾರಾಳತೆಯಲ್ಲಿ ಸಾರ್ಥಕ್ಯವನ್ನು ಕಂಡಿದ್ದಾರೆ.