ವೇದಮೂರ್ತಿ ಶ್ರೀ ಶೇಷಣ್ಣಶ್ರೌತಿಗಳ ಶ್ರದ್ಧೆ-ಸಿದ್ಧಿ
ಇಂದಿಗೆ ಸುಮಾರು ಇಪ್ಪತ್ತೊಂಬತ್ತು-ಮೂವತ್ತು ವರ್ಷಗಳ ಹಿಂದೆ, ಅಂದರೆ ೧೯೮೯-೯೦ರ ಆಸುಪಾಸಿನಲ್ಲಿ, ಬೆಂಗಳೂರಿನ ರಾಜಾಜಿನಗರನದಲ್ಲಿಯ ಕುಮಾರವ್ಯಾಸಮಂಟಪದ ಯಾವುದೋ ಕಾರ್ಯಕ್ರಮದಲ್ಲಿ ವೇದಮೂರ್ತಿ ಶ್ರೀ ಶೇಷಣ್ಣಶ್ರೌತಿಗಳನ್ನು ನಾನು ಮೊದಲ ಬಾರಿ ನೋಡಿದ ನೆನಪು. ಅನಂತರ ಸ್ವಲ್ಪದ ಅಂತರದಲ್ಲಿಯೇ ಮತ್ತೆ ಬ್ರಾಹ್ಮಣಮಹಾಸಭೆಯ ಹಲಕೆಲವು ಕಾರ್ಯಕ್ರಮಗಳಲ್ಲಿ, ಶಂಕರಜಯಂತಿಯ ಕಾರ್ಯಕ್ರಮಗಳಲ್ಲಿ ಅವರು ಕಂಡಿದ್ದರು. ಆದರೆ ಹೆಚ್ಚಿನ ಪರಿಚಯ ಮತ್ತು ಬಳಕೆ ಆದದ್ದು ಶ್ರೀಪರಮಾನಂದಭಾರತೀಸ್ವಾಮಿಗಳು ಆಯೋಜಿಸಿದ ಮೊತ್ತಮೊದಲ ಗಾಯತ್ರೀಮಹಾಯಾಗದ ಸಂದರ್ಭದಲ್ಲಿ. ಇದೇ ಸಮಯದಲ್ಲಿ ಸಂಧ್ಯಾವಂದನೆ, ಸಮಿದಾಧಾನ, ಬ್ರಹ್ಮಯಜ್ಞ ಮುಂತಾದ ನಿತ್ಯ ಕರ್ಮಗಳ ಪ್ರಾಚೀನ ಮತ್ತು ಪರಿಶುದ್ಧವಾದ ರೂಪವನ್ನು ಶ್ರುತಿ-ಸೂತ್ರಗಳಿಗೆ ಸಮ್ಮತವಾಗಿ ಕೊಡಬೇಕೆಂಬ ಇರಾದೆಯಲ್ಲಿ ನಾನಿದ್ದೆ.
