ವೇದಮೂರ್ತಿ ಶ್ರೀ ಶೇಷಣ್ಣಶ್ರೌತಿಗಳ ಶ್ರದ್ಧೆ-ಸಿದ್ಧಿ

This article is part 1 of 3 in the series Vedamurti Sri Sheshanna Shrauti

ಇಂದಿಗೆ ಸುಮಾರು ಇಪ್ಪತ್ತೊಂಬತ್ತು-ಮೂವತ್ತು ವರ್ಷಗಳ ಹಿಂದೆ, ಅಂದರೆ ೧೯೮೯-೯೦ರ ಆಸುಪಾಸಿನಲ್ಲಿ, ಬೆಂಗಳೂರಿನ ರಾಜಾಜಿನಗರನದಲ್ಲಿಯ ಕುಮಾರವ್ಯಾಸಮಂಟಪದ ಯಾವುದೋ ಕಾರ್ಯಕ್ರಮದಲ್ಲಿ ವೇದಮೂರ್ತಿ ಶ್ರೀ ಶೇಷಣ್ಣಶ್ರೌತಿಗಳನ್ನು ನಾನು ಮೊದಲ ಬಾರಿ ನೋಡಿದ ನೆನಪು. ಅನಂತರ ಸ್ವಲ್ಪದ ಅಂತರದಲ್ಲಿಯೇ ಮತ್ತೆ ಬ್ರಾಹ್ಮಣಮಹಾಸಭೆಯ ಹಲಕೆಲವು ಕಾರ್ಯಕ್ರಮಗಳಲ್ಲಿ, ಶಂಕರಜಯಂತಿಯ ಕಾರ್ಯಕ್ರಮಗಳಲ್ಲಿ ಅವರು ಕಂಡಿದ್ದರು. ಆದರೆ ಹೆಚ್ಚಿನ ಪರಿಚಯ ಮತ್ತು ಬಳಕೆ ಆದದ್ದು ಶ್ರೀಪರಮಾನಂದಭಾರತೀಸ್ವಾಮಿಗಳು ಆಯೋಜಿಸಿದ ಮೊತ್ತಮೊದಲ ಗಾಯತ್ರೀಮಹಾಯಾಗದ ಸಂದರ್ಭದಲ್ಲಿ. ಇದೇ ಸಮಯದಲ್ಲಿ ಸಂಧ್ಯಾವಂದನೆ, ಸಮಿದಾಧಾನ, ಬ್ರಹ್ಮಯಜ್ಞ ಮುಂತಾದ ನಿತ್ಯ ಕರ್ಮಗಳ ಪ್ರಾಚೀನ ಮತ್ತು ಪರಿಶುದ್ಧವಾದ ರೂಪವನ್ನು ಶ್ರುತಿ-ಸೂತ್ರಗಳಿಗೆ ಸಮ್ಮತವಾಗಿ ಕೊಡಬೇಕೆಂಬ ಇರಾದೆಯಲ್ಲಿ ನಾನಿದ್ದೆ. ಇದಕ್ಕೆ ಸ್ವಾಮಿಗಳ ಬೆಂಬಲವೂ ಇತ್ತು.

ಇದಕ್ಕೆ ಸಂಬಂಧಿಸಿದಂತೆ ಶಂಕರಸಮಿತಿಯಲ್ಲಿ ಒಂದು ಗೋಷ್ಠಿಯನ್ನು ಸ್ವಾಮಿಗಳ ಅಧ್ಯಕ್ಷತೆಯಲ್ಲಿ ಏರ್ಪಡಿಸಲಾಗಿತ್ತು. ಮೊದಲಿಗೆ ಸಂಧ್ಯಾವಂದನೆಯೇ ಮುಂತಾದ ನಿತ್ಯಕರ್ಮಗಳಿಗೆ ಸಂಬಂಧಿಸಿದ ನೂರಾರು ಪ್ರಶ್ನೆಗಳ ಪಟ್ಟಿಯೊಂದನ್ನು ಮಾಡಿಕೊಂಡು ಅದನ್ನು ವಿದ್ವಜ್ಜನರ ಅವಗಾಹನೆಗಾಗಿ ಕಳುಹಲಾಗಿತ್ತು. ಅವರಿಂದ ಬಂದ ಲಿಖಿತರೂಪದ ಉತ್ತರಗಳ ಜೊತೆಗೆ ಮೌಖಿಕವಾಗಿಯೇ ಉತ್ತರಿಸಲು ಬಂದ ವಿದ್ವಾಂಸರನ್ನೂ ಒಟ್ಟುಗೂಡಿಸಿಕೊಂಡು ಚರ್ಚಿಸಬೇಕಿತ್ತು. ಇದಕ್ಕಾಗಿ ಹತ್ತಾರು ಮಂದಿ ವೈದಿಕರು ಆಗಮಿಸಿದ್ದರು. ಇವರಲ್ಲಿ ಪುರೋಹಿತರು, ಪ್ರಯೋಗಪಾಠಗಳನ್ನು ಮಾಡಬಲ್ಲವರು, ಧರ್ಮಶಾಸ್ತ್ರಗಳನ್ನು ಓದಿಕೊಂಡವರು ಕೂಡ ಸೇರಿದ್ದರು. ದೊಡ್ಡ ವಿದ್ವಾಂಸರಾದ ತರ್ಕಂ ಕೃಷ್ಣಶಾಸ್ತ್ರಿಗಳು, ಬನವತಿ ರಾಮಕೃಷ್ಣಶಾಸ್ತ್ರಿಗಳು, ಎಸ್. ವಿ. ಶ್ಯಾಮಭಟ್ಟರು, ಧಾಳಿ ಲಕ್ಷ್ಮೀನರಸಿಂಹಭಟ್ಟರು, ಪುಟ್ಟನರಸಿಂಹಶಾಸ್ತ್ರಿಗಳೇ ಮುಂತಾದವರು ಅಲ್ಲಿದ್ದರು. ಇವರೆಲ್ಲರ ವಾದ-ಉಪವಾದಗಳಿಗೆ ನಾನು ಯಥಾಶಕ್ತಿ ಉತ್ತರಿಸುತ್ತಿದ್ದೆ. ಜೊತೆಗೆ, ನನ್ನದಾದ ಪ್ರಶೆಗಳನ್ನೂ ಅವರ ಮುಂದಿಟ್ಟು ಅಭಿಪ್ರಾಯಗಳನ್ನು ಕೇಳುತ್ತಿದ್ದೆ. ಸಾಕಷ್ಟು ಬಿಸಿಬಿಸಿಯಾದ ವಾಗ್ವಾದಗಳು ನಡೆದವು. ಇಂಥ ಕೋಲಾಹಲದ ನಡುವೆ ಶೇಷಣ್ಣನವರೊಬ್ಬರೇ ಒಪ್ಪವಾಗಿ ಪ್ರತಿಯೊಂದನ್ನೂ ಗುರುತುಮಾಡಿಕೊಂಡು ತಮ್ಮದಾದ ಅಭಿಪ್ರಾಯಗಳನ್ನು ಯಥೋಚಿತವಾಗಿ ನಿವೇದಿಸುತ್ತ ಹೆಚ್ಚಿನ ಗೊಂದಲವಾಗದಂತೆ ನೆರವಾದರು.

ಇಲ್ಲೆಲ್ಲ ನನಗೆ ಎದ್ದುಕಂಡದ್ದು ಅವರ ಸಮಾಹಿತಮನಸ್ಸು; ಮತ್ತದು ಧರ್ಮ-ಕರ್ಮಗಳ ವಿಷಯದಲ್ಲಿ ಹೊಂದಿದ್ದ ನಿಷ್ಠೆ. ಸ್ವಾಮಿಗಳ ನಿಯಂತ್ರಣ ಮತ್ತು ಶೇಷಣ್ಣನವರ ಸಮಯಪ್ರಜ್ಞೆಗಳೆರಡೂ ಅಂದಿನ ಗೋಷ್ಠಿಯನ್ನು ಸಾಕಷ್ಟು ಫಲಪ್ರದವಾಗಿಸಿದವು. ಇಷ್ಟಾದರೂ ನಾನು ಕಡೆಗೆ ನನ್ನ ಅಧ್ಯಯನವನ್ನು ನಚ್ಚಿಕೊಂಡೇ ಪುಸ್ತಕವನ್ನು ಬರೆಯಬೇಕಾಗಿ ಬಂದದ್ದು ಬೇರೊಂದು ಕಥೆ. ಅದು ನಮ್ಮ ವೈದಿಕರ, ವಿದ್ವಾಂಸರ ಹಾಗೂ ಇಡಿಯ ಕರ್ಮಕಾಂಡದ ಗೋಜಲಿಗೆ ಮಾರ್ಮಿಕವಾದ ದೃಷ್ಟಾಂತವೂ ಹೌದು.

ಈ ಕಾರ್ಯವನ್ನು ಎಲ್ಲ ವೇದಶಾಖೆಗಳಿಗೆ ಸೇರಿದವರಿಗೂ ಅನ್ವಯಿಸುವಂತೆ ಮಾಡಬೇಕೆಂಬ ನನ್ನ ಸಂಕಲ್ಪಕ್ಕೆ ಮಿಗಿಲಾದ ನೆರವನ್ನಿತ್ತವರು ಶೇಷಣ್ಣಶ್ರೌತಿಗಳು. ನನ್ನ “ಸಂಧ್ಯಾದರ್ಶನ”ಕೃತಿಗಾಗಿ ಸಾಮವೇದದ ಸಂಧ್ಯಾವಂದನೆಯೇ ಮುಂತಾದ ಎಲ್ಲ ನಿತ್ಯಕರ್ಮಗಳ ವಿವಿರಗಳನ್ನು ಅವರೇ ಹವಣಿಸಿಕೊಟ್ಟರು. ಆಗ ನನಗೆ ಅವರ ಸಾಮವೇದಜ್ಞತೆಯ ಪರಿಚಯವಾಯಿತು. ಇದನ್ನು ಕುರಿತು ಮತ್ತೂ ವಿಸ್ತರಿಸಬೇಕು; ಅದನ್ನು ಮುಂದಕ್ಕಿರಿಸಿಕೊಳ್ಳೋಣ.

*       *       *

ಮೊದಲಿಗೆ ಶೇಷಣ್ಣನವರ ವ್ಯಕ್ತಿತ್ವದ ನಿರೂಪಣೆ ಪರಮಾವಶ್ಯ. ಅವರ ಎಲ್ಲ ಶ್ರದ್ಧೆ-ಸಿದ್ಧಿಗಳೂ ದುಡಿದು ಪರಿಪಾಕ ಕಂಡಿರುವುದು ಇಲ್ಲಿಯೇ ಎಂದು ನನ್ನ ವಿಶ್ವಾಸ. ಇದು ಆರ್ಷಧರ್ಮದ ಉದ್ದೇಶವೂ ಹೌದು.

ಶೇಷಣ್ಣನವರು ಎದ್ದುಕಾಣುವ ಬಣ್ಣ-ಮೈಕಟ್ಟುಗಳ ವ್ಯಕ್ತಿಯಲ್ಲ. ಮಾತಿನ ಅಬ್ಬರವೂ ಅವರದಲ್ಲ. ಆದರೆ ಪರಿಶುದ್ಧತೆ, ಪ್ರಾಮಾಣಿಕತೆ, ಸಮರ್ಪಣೆ, ನಿಃಸ್ವಾರ್ಥತೆ ಮುಂತಾದ ಏನೆಲ್ಲ ಸದ್ಗುಣಗಳನ್ನು ನಾವು ಪಟ್ಟಿ ಮಾಡಬಲ್ಲೆವೋ ಅವೆಲ್ಲವೂ ಅವರಲ್ಲಿ ಗೊಂದಲವಿಲ್ಲದೆ ನೆಲೆಸಿದ್ದವು. ಲಾಗಾಯ್ತಿನಿಂದಲೂ ಅವರ ಉಡುಪು ಖಾದಿಯ ಬಟ್ಟೆ. ಇಲ್ಲಿ ಕೂಡ ಅಂಚು-ಸೆರಗಿನ ಬಣ್ಣ-ಬೆಡಗಿಲ್ಲದ ಬಿಳಿಯ ಪಂಚೆ, ಬಿಳಿಯ ಉತ್ತರೀಯ, ಬಿಳಿಯ ಮೇಲಂಗಿ; ಎಲ್ಲವೂ ಅವರ ಅಂತರಂಗ-ಬಹಿರಂಗಗಳಂತೆಯೇ ಅವದಾತ, ಅನಾವಿಲ. ಈ ಖಾದಿವ್ರತವನ್ನವರು ನ್ಯಾಷನಲ್ ಹೈಸ್ಕೂಲ್ ವಿದ್ಯಾರ್ಥಿಯಾಗಿದ್ದಾಗಲೇ ಮೈಗೂಡಿಸಿ ಕೊಂಡರಂತೆ. ಆಗಲೇ ಅವರಿಗೆ ಹಿಂದಿ ಭಾಷೆಯ ಪರಿಚಯವೂ ಆಗಿ ಮುಂದೆ ಅದರ ಸಾಹಿತ್ಯವನ್ನು ವ್ಯಾಸಂಗಮಾಡಿ ರಾಷ್ಟçಭಾಷಾಪ್ರವೀಣ, ಸಾಹಿತ್ಯರತ್ನ, ವಿಜ್ಞಾನರತ್ನ ಮೊದಲಾದ ಪರೀಕ್ಷೆಗಳಲ್ಲಿಯೂ ಉತ್ತೀರ್ಣರಾಗುವ ಪ್ರೌಢಿಮೆ ದಕ್ಕಿತು.

ಅವರ ಉಡುಪಿನಂತೆಯೇ ನಿರ್ವಿಶಿಷ್ಟವಾದರೂ ವಿಶಿಷ್ಟವಾದುದು ಅವರ ಹಳೆಯದಾದರೂ ಸುಸ್ಥಿತಿಯಲ್ಲಿ ಇದ್ದ ಬೈಸಿಕಲ್. ಶೇಷಣ್ಣನವರು ಬಹುಕಾಲದಿಂದ ತಮ್ಮ ಎಲ್ಲ ಸುತ್ತಾಟಗಳಿಗೆ ಇದನ್ನೇ ನಚ್ಚಿಕೊಂಡಿದ್ದರು. ಹೀಗೂ ಅವರು ಸ್ವಾವಲಂಬಿ. ತಮ್ಮ ಎಂಬತ್ತು-ಎಂಬತ್ತೈದರ ಹರೆಯದಲ್ಲಿಯೂ ಬೆಂಗಳೂರಿನ ಹದಗೆಟ್ಟ ರಸ್ತೆಗಳಲ್ಲಿ ಕೂಡ ಕಷ್ಟವೆನ್ನದೆ ಬೈಸಿಕಲ್ ಚಾಲಿಸುತ್ತಿದ್ದರು. ಹಲವೊಮ್ಮೆ ನೆಪಕ್ಕೆ ಮಾತ್ರ ಸೈಕಲ್ ಹಿಡಿದು ದಾರಿಯುದ್ದಕ್ಕೂ ಅದನ್ನು ತಳ್ಳಿಕೊಂಡೇ ಬರುತ್ತಿದ್ದರು. ಇದನ್ನು ಕುರಿತು ಯಾರಾದರೂ ಕೇಳಿದರೆ “ಇದೇನೂ ಕಷ್ಟವಿಲ್ಲ, ಅದಕ್ಕೆ ನಾನು ಜೊತೆ, ನನಗೆ ಅದು ಜೊತೆ” ಎಂದು ಹಗುರವಾಗಿ ತೇಲಿಸುತ್ತಿದ್ದರು.

*       *       *

ಮೂಲತಃ ಹೊಯ್ಸಳಕರ್ಣಾಟಕ ಎಂಬ ಬ್ರಾಹ್ಮಣಸಮುದಾಯಕ್ಕೆ ಸೇರಿದ ಶೇಷಣ್ಣನವರು ತುಮಕೂರು ಜಿಲ್ಲೆಯ ಕಡಬದವರು. ಅವರ ಹೆಸರಿಗೂ ಈ ಊರು ಅಂಟಿಕೊಂಡಿತ್ತೆಂದು ನನ್ನ ನೆನಪು. ಕದಂಬಪುರಿ ಎಂದು ಹಳೆಯ ದಾಖಲೆಗಳಲ್ಲಿ ಈ ಊರು ಸೇರಿದೆ. ಅಲ್ಲಿಯ ಶ್ರೀಕಾಶೀಪತಿ ಮತ್ತು ಶ್ರೀಮತಿ ಚೆಲುವಮ್ಮ ದಂಪತಿಗಳ ಕೊನೆಯ ಮಗನಾಗಿ ೧೯.೭.೧೯೨೩ರಲ್ಲಿ ಹುಟ್ಟಿದರು. ನಾಲ್ಕು ಜನ ಅಣ್ಣಂದಿರು, ಇಬ್ಬರು ಅಕ್ಕಂದಿರ ತುಂಬು ಸಂಸಾರದಲ್ಲಿ ಆ ಕಾಲದ ಬ್ರಾಹ್ಮಣವರ್ಗದ ಕಷ್ಟ-ಕಾರ್ಪಣ್ಯಗಳನ್ನೆಲ್ಲ ಸಮೃದ್ಧವಾಗಿ ಅನುಭವಿಸಿದವರು ಶೇಷಣ್ಣನವರು. ಆದರೆ ಯಾವುದೇ ಸಂದರ್ಭದಲ್ಲಿ ತಮ್ಮ ಬದುಕಿನ ಎಂಥದ್ದೇ ಕಷ್ಟವನ್ನು ಹೇಳಿಕೊಂಡವರಲ್ಲ; ಈಚಿನವರ ಅನುಕೂಲತೆಗಳನ್ನು ಕಂಡು ಕರುಬಿದವರೂ ಅಲ್ಲ.

ಕೃಷಿವಿಜ್ಞಾನದಲ್ಲಿ ಡಿಪ್ಲೊಮೋ ಪದವಿ ಪಡೆದು ಅದೇ ಕ್ಷೇತ್ರದಲ್ಲಿ ದುಡಿಯತೊಡಗಿದ ಶೇಷಣ್ಣನವರು ರೈತರಿಗೆ ನಿರಂತರವಾಗಿ ಸಲಹೆ, ನೆರವು, ತರಪೇತಿಗಳನ್ನು ಕೊಡುತ್ತಿದ್ದವರು, ಕೃಷಿವಿಶ್ವವಿದ್ಯಾಲಯಕ್ಕಾಗಿ ಹಲವಾರು ಆಂಗ್ಲಗ್ರಂಥಗಳನ್ನು ಕನ್ನಡಿಸಿಕೊಟ್ಟವರು, ಆಕಾಶವಾಣಿ-ದೂರದರ್ಶನಗಳಲ್ಲಿ ಕೃಷಿರಂಗದ ಕಾರ್ಯಕ್ರಮಗಳನ್ನು ರೂಪಿಸಿಕೊಟ್ಟವರು. ಆಧುನಿಕಕೃಷಿಶಾಸ್ತ್ರವನ್ನು ನಮ್ಮ ರೈತರಿಗೆ ತಿಳಿಸಿಕೊಟ್ಟಂತೆಯೇ ಸಾಂಪ್ರದಾಯಿಕವಾದ ಭಾರತೀಯಕೃಷಿಪದ್ಧತಿಯಲ್ಲಿರುವ ಮೌಲಿಕಾಂಶಗಳನ್ನೂ ಗಟ್ಟಿಯಾಗಿ ಅವರು ಪ್ರತಿಪಾದಿಸಿದರು. ಶೇಷಣ್ಣನವರಿಗೆ ಇಂಗ್ಲಿಷ್, ಕನ್ನಡ, ಮತ್ತು ಹಿಂದೀಭಾಷೆಗಳಲ್ಲಿ ಒಳ್ಳೆಯ ಗತಿ ಸಿದ್ಧಿಸಿತ್ತು. ಹೀಗಾಗಿ ಅದೆಷ್ಟೋ ಮಂದಿ ಕೃಷಿತಜ್ಞರ ಇಂಗ್ಲಿಷ್-ಹಿಂದೀಭಾಷಣಗಳನ್ನು ಅವರು ಕನ್ನಡದಲ್ಲಿ ಆಶುವಾಗಿ ಅನುವಾದಿಸಿ ರೈತರಿಗೆ ತಿಳಿಸುತ್ತಿದ್ದರು. ಸಾವಿರದ ಒಂಬೈನೂರ ಎಪ್ಪತ್ತೆಂಟರಲ್ಲಿಯೇ ಹಿರಿಯ ಸಹಾಯಕನಿರ್ದೇಶಕರಾಗಿ ನಿವೃತ್ತಿ ಪಡೆದರು. ಅವರ ಈ ಪೂರ್ವಾಶ್ರಮದ ವಿವರಗಳೆಲ್ಲ ನನಗೆ ಪರೋಕ್ಷ. ಇದನ್ನೆಲ್ಲ ಕುರಿತು ಅವರು ಹೆಚ್ಚಾಗಿ ಹೇಳಿಕೊಳ್ಳುತ್ತಲೂ ಇರಲಿಲ್ಲ. ಈಚೆಗಷ್ಟೇ ಅವರ ಬಂಧುಗಳಿಂದ ಇಂಥ ಹಲಕೆಲವು ವಿಚಾರಗಳು ನನಗೆ ತಿಳಿದುಬಂದವು.

*       *       *

ಶೇಷಣ್ಣನವರ ಸುಪುತ್ರ ಪಾರ್ಥಸಾರಥಿ ಬಹುಶಃ ನನ್ನ ಜೊತೆಯಲ್ಲಿಯೇ ಯು.ವಿ.ಸಿ.ಇ. ತಾಂತ್ರಿಕ ಮಹಾವಿದ್ಯಾಲಯದಲ್ಲಿ ಇಂಜಿನಿಯರಿಂಗ್ ವಿದ್ಯಾಭ್ಯಾಸ ಮಾಡಿದ್ದು. ಬಹುಶಃ ಅವರು ಸಿವಿಲ್ ವಿಭಾಗದವರಾದ ಕಾರಣ ನನಗೆ ಅವರ ಬಳಕೆ ಹೆಚ್ಚಾಗಿ ಒದಗಿಬರಲಿಲ್ಲ. ನಾನು ಮ್ಯೆಕಾನಿಕಲ್ ವಿಭಾಗದವನು; ಬೆಂಗಳೂರು ನಗರದ ಕೇಂದ್ರಭಾಗದಲ್ಲಿದ್ದ ಕಟ್ಟಡದಲ್ಲಿ ವ್ಯಾಸಂಗ ಮಾಡಿದವನು. ಆದರೆ ಪಾರ್ಥಸಾರಥಿ ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿಯ ಪರಿಸರದಲ್ಲಿದ್ದ ಕಾರಣ ಆಗೀಗ ನೋಡುವ ಅವಕಾಶವೂ ಇರಲಿಲ್ಲ. ಹೀಗಾಗಿ ಶೇಷಣ್ಣನವರ ಮೂಲಕವೇ ನನಗೆ ಪಾರ್ಥಸಾರಥಿ ಅವರ ಪರಿಚಯ ಬೆಳೆದದ್ದು. ಯಾವಾಗ ‘ಸಂಧ್ಯಾದರ್ಶನ’ದ ಕೆಲಸ ಮೊದಲಾಯಿತೋ ಆಗಲೇ ಶೇಷಣ್ಣನವರ ಮನೆಗೆ ಹೋಗಿಬರುವುದು ಬಳಕೆಯಾಯಿತು. ಅವರ ಮನೆಮಂದಿಯ, ಬಂಧುವರ್ಗದ ಎಲ್ಲರ ಪರಿಚಯವೂ ದಕ್ಕಿತು.

ಕುಮಾರವ್ಯಾಸಮಂಟಪದ ಹತ್ತಿರವೇ ಶೇಷಣ್ಣನವರ ಮನೆ, ‘ದ್ರಾಹ್ಯಾಯಣ.’ ಸ್ವಶಾಖೆಯ ಸೂತ್ರ ಪ್ರವರ್ತಕರಾದ ದ್ರಾಹ್ಯಾಯಣಮುನಿಗಳ ಹೆಸರನ್ನೇ ಅವರು ಮನೆಗಿಟ್ಟಿದ್ದರು. ಮನೆ ಚಿಕ್ಕದಾಗಿದ್ದರೂ ಮನೆಯ ಮುಂದಿನ ಅಂಗಳ ವಿಶಾಲವಾಗಿತ್ತು. ತೆಂಗು, ಬಾಳೆ ಮೊದಲಾದ ಫಲವೃಕ್ಷಗಳಲ್ಲದೆ ನಿತ್ಯಾರ್ಚನೆಗೆ ಸಮೃದ್ಧವಾಗಿ ಒದಗಿಬರುವ ಹೂಗಿಡಗಳೂ ಅಲ್ಲಿ ನಳನಳಿಸಿದ್ದವು. ಪಾರ್ಥಸಾರಥಿ ಅವರ ಮದುವೆಯ ಬಳಿಕವೇ ಆ ಅಂಗಳ ಮನೆಯ ವಿಸ್ತರಣವಾಗಿ ಮರೆಯಾದದ್ದು. ಒಟ್ಟಿನಲ್ಲಿ ಶೇಷಣ್ಣನವರ ಮನೆ ಆ ಹೊತ್ತಿಗೂ ಬೆಂಗಳೂರಿನಲ್ಲಿ ವಿರಳವೆನಿಸಬಲ್ಲ ಸಾಂಪ್ರದಾಯಿಕಸ್ವರೂಪದ್ದು, ಮಡಿವಂತಿಕೆಯ ಕೋಲಾಹಲವಿಲ್ಲದೆ ತನ್ನ ಹಸುರು-ಹಸನುಗಳಿಂದಲೇ ನೋಡುಗರ ಮನಸ್ಸನ್ನು ತಂಪುಗೊಳಿಸುವಂಥದ್ದು.

ಶೇಷಣ್ಣನವರ ಧರ್ಮಪತ್ನಿ ಶಾರದಮ್ಮನವರು ಅವರಿಗೆ ತಕ್ಕ ಕುಟುಂಬಿನಿ. ನಾಗಮಂಗಲದವರಾದ ಈಕೆಯ ಸಹೋದರ ವೇದಮೂರ್ತಿ ಶ್ರೀನಾರಾಯಣಶಾಸ್ತ್ರಿಗಳ ಪರಿಚಯವೂ ನನಗುಂಟು. ಅವರ ವೇದಶ್ರದ್ಧೆ, ಜನಜಾಗರಣ ಮತ್ತು ಆತ್ಮವಂತಿಕೆಗಳು ನಿಜವಾಗಿಯೂ ಸ್ತವನೀಯ. ಇವರ ಸುಪುತ್ರಿ ಶ್ರೀಮತಿ ಶಾಂತಾ ಗೋಪಾಲ್ ಅವರು ಇಂದಿಗೂ ನನ್ನ ಬಳಕೆಯಲ್ಲಿರುವ ವಿದ್ವತ್ಸಹೋದರಿ. ಶೇಷಣ್ಣನವರ ಧರ್ಮನಿಷ್ಠೆ ಎಂಥದ್ದೆಂದರೆ ಮದುವೆಯಾದ ಬಳಿಕ ಶಾರದಮ್ಮನವರಿಗೆ ಆಕೆ ಸಂಸಾರಕ್ಕೆ ಬರುವುದರೊಳಗೆ  ಭಗವದ್ಗೀತೆಯನ್ನು ಸಮಗ್ರವಾಗಿ ಕಂಠಪಾಠ ಮಾಡಬೇಕೆಂದು ತಾಕೀತು ಮಾಡುವ ಮಟ್ಟದ್ದು! ಈ ಕಾಲದಲ್ಲಿ ಇಂಥವನ್ನೆಲ್ಲ ಊಹಿಸಲೂ ಸಾಧ್ಯವಿಲ್ಲ. ಪುಣ್ಯವಶಾತ್ ಶಾರದಮ್ಮನವರು ಪತಿಗೆ ತಕ್ಕ ಸತಿ. ಹೀಗಾಗಿ ಭಗವದ್ಗೀತೆ ಅವರ ಪಾಲಿಗೆ ಬರಿಯ ಕಂಠಪಾಠದ ಗಂಟೆಯಾಗದೆ ಜೀವನಧರ್ಮಕ್ಕೂ ಅಂಟಿ ಬಂದ ನಂಟನಾಯಿತು. ಮುಂದೆ ಅವರೂ ಗಂಡನ ಹಾಗೆ ರಾಷ್ಟçಭಾಷಾಪ್ರವೀಣರಾದರು. ಶೇಷಣ್ಣನವರ ಭಗವದ್ಗೀತಾಭಕ್ತಿಯೇ ಅವರ ಮಕ್ಕಳಿಗೆ ಗೀತಾ ಮತ್ತು ಪಾರ್ಥಸಾರಥಿ ಎಂದು ಹೆಸರಿಡುವಂತೆ ಮಾಡಿತು. ಹೀಗೆ ಅವರ ಬದುಕ್ಕೆಲ್ಲ ಭಗವದ್ಗೀತೆ; ಅದನ್ನು ನಡಸಿದವನು ಆ ಪಾರ್ಥಸಾರಥಿ.

*       *       *

ವಿದ್ಯಾರ್ಥಿದಶೆಯಲ್ಲಿ ಇದ್ದಾಗಲೇ ಶೇಷಣ್ಣನವರು ದಯಾನಂದಸರಸ್ವತಿಗಳ, ಸ್ವಾಮಿ ವಿವೇಕಾನಂದರ, ರಮಣಮಹರ್ಷಿಗಳ ಹಾಗೂ ಚಿನ್ಮಯಾನಂದರ ಬರೆವಣಿಗೆಗಳನ್ನು ಓದಿಕೊಂಡು ಪ್ರಭಾವಿತರಾದರು. ವಿಶೇಷತಃ ಚಿನ್ಮಯಾನಂದರ ವೇದಾಂತಗ್ರಂಥಗಳು ಅವರಿಗೆ ಅಚ್ಚುಮೆಚ್ಚಾಗಿದ್ದವು. ಇದರ ಜೊತೆಗೆ ಡಿವಿಜಿ, ಕುವೆಂಪು, ದೇವುಡು, ಮಾಸ್ತಿ, ತೀನಂಶ್ರೀ, ವಿಸೀ, ನರಸಿಂಹಸ್ವಾಮಿ ಮುಂತಾದ ಕನ್ನಡನವೋದಯದ ಮಹಾಶಿಖರಗಳನ್ನು ಹತ್ತಿ ಇಳಿದು ಹೊಸಹುರುಪನ್ನು ಗಳಿಸಿದ್ದರು. ಹಿಂದಿಯಲ್ಲಿಯೂ ಅವರು ಮೈಥಿಲಿ ಶರಣಗುಪ್ತ, ಜಯಶಂಕರ ಪ್ರಸಾದ್, ಸುಮಿತ್ರಾನಂದನ್ ಪಂತ್, ನಿರಾಲಾ ಮೊದಲಾದ ಖ್ಯಾತನಾಮರನ್ನು ಓದಿಕೊಂಡಿದ್ದರು. ಅವರಿಗೆ ವೇದ, ವೇದಾಂತ, ಕರ್ಮಕಾಂಡಗಳಲ್ಲಿ ಅದೆಷ್ಟು ಆಸಕ್ತಿಯೋ ಒಳ್ಳೆಯ ಸಾಹಿತ್ಯದಲ್ಲಿಯೂ ಅಷ್ಟೇ ಪ್ರೀತಿ-ಆದರಗಳಿದ್ದವು. ಇವರಂತೆ ಸಾಹಿತ್ಯರಸಿಕರಾದ ಮತ್ತೊಬ್ಬ ವೈದಿಕರನ್ನು ನಾನು ಕಂಡಿಲ್ಲ.

ಈ ಎಲ್ಲ ಸತ್ಪ್ರಭಾವಗಳೊಟ್ಟಿಗೆ ಅವರ ವ್ಯಕ್ತಿತ್ವದಲ್ಲಿಯೇ ಧಾರ್ಮಿಕಪ್ರಜ್ಞೆ ನೆಲೆನಿಂತ ಕಾರಣ ವೇದಾಧ್ಯಯನ ಅವರಿಗೆ ಅನಿವಾರ್ಯವಾಯಿತು. ಅವರ ಅಣ್ಣಂದಿರು ವಿದ್ವಲ್ಲೋಕದಲ್ಲಿ ವಿಶ್ರುತರಾದ ವೇದಬ್ರಹ್ಮಶ್ರೀ ನಾಗಪ್ಪಶ್ರೌತಿಗಳು, ಬೆಂಗಳೂರಿನ ಚಾಮರಾಜೇಂದ್ರ ಸಂಸ್ಕೃತಮಹಾಪಾಠಶಾಲೆಯಲ್ಲಿ ಸಾಮವೇದ ಪ್ರಾಧ್ಯಾಪಕರು. ಮನೆಮಂದಿಯೆಲ್ಲ ಸಾಮವೇದವನ್ನು ಕಲಿತವರೇ. ಸಾಮಾನ್ಯವಾಗಿ ಎಷ್ಟೋ ಜನರು ಕಾಲೋಚಿತವಾದ ಮಂತ್ರಭಾಗಗಳನ್ನೂ ಅಲ್ಪಸ್ವಲ್ಪದ ಪ್ರಯೋಗಭಾಗವನ್ನೂ ಕಲಿತು ಅಲ್ಲಿಗೆ ತಮ್ಮ ವೇದಾಭ್ಯಾಸವನ್ನು ನಿಲ್ಲಿಸುತ್ತಾರೆ. ಆದರೆ ಶೇಷಣ್ಣನವರು ಹಾಗಲ್ಲ. ತಮ್ಮ ಅಣ್ಣಂದಿರ ಬಳಿ ಸಂಹಿತಾ-ಬ್ರಾಹ್ಮಣಗಳನ್ನೆಲ್ಲ ಸಭಾಷ್ಯವಾಗಿ ಅಧ್ಯಯನಮಾಡಿದರು. ಸಾಮವೇದಕ್ಕೆ ಉಳಿದೆಲ್ಲ ವೇದಗಳಿಗಿಂತ ಹೆಚ್ಚಾಗಿ ಬ್ರಾಹ್ಮಣಗಳ ಭಾರವಿದೆ (ಅಷ್ಟಬ್ರಾಹ್ಮಣಾತ್ಮಕವಾದ ಸಂಹಿತೆಯೆಂದೇ ಸಾಮವೇದದ ಪ್ರಸಿದ್ಧಿ). ಹೀಗಾಗಿ ಅವುಗಳ ಅರಿವು ಅನಿವಾರ್ಯ.

ಶೇಷಣ್ಣನವರು ಸಾಯಣಭಾಷ್ಯವನ್ನಲ್ಲದೆ ಇನ್ನುಳಿದ ವೇದಭಾಷ್ಯಗಳನ್ನೂ ತಾವಾಗಿ ಓದಿಕೊಂಡರು. ಗಾನವೇ ಜೀವಾಳವಾದ ಸಾಮವೇದಕ್ಕೆ ಶಿಕ್ಷಾ-ಪ್ರಾತಿಶಾಖ್ಯಗಳ ಪರಿಜ್ಞಾನ ಅತ್ಯವಶ್ಯ. ಹೀಗಾಗಿ ಅವನ್ನೂ ಚೆನ್ನಾಗಿ ಕಲಿತರು. ಹತ್ತಿರದಲ್ಲಿಯೇ ನವರಂಗ್ ಚಿತ್ರಮಂದಿರದ ಬಳಿಯಿದ್ದ ವೇದಮೂರ್ತಿ ಶ್ರೀ ಎಸ್. ವಿ. ಶ್ಯಾಮಭಟ್ಟರ ಬಳಿ ಋಕ್-ಯಜುರ್ವೇದಗಳ ಪರಿಚಯವನ್ನೂ ಸಕ್ರಮವಾಗಿ ಮಾಡಿಕೊಂಡದ್ದಲ್ಲದೆ ಶ್ರೀಶಂಕರಭಗವತ್ಪಾದರ ಪ್ರಸ್ಥಾನತ್ರಯಭಾಷ್ಯಗಳ ಪಾಠವನ್ನೂ ಹೇಳಿಸಿಕೊಂಡರು. ವಿದ್ವಾನ್ ಶ್ಯಾಮಭಟ್ಟರು ಮಹಾಪ್ರಸಿದ್ಧರಾದ ನವೀನಂ ವೇಂಕಟೇಶಶಾಸ್ತ್ರಿಗಳ ಬಳಿ ವೇದಾಂತವನ್ನು ಕಲಿತವರು. ವೇದ-ಪ್ರಯೋಗ-ವೇದಾಂತಾದಿಗಳನ್ನು ಕುರಿತು ಹತ್ತಾರು ಗ್ರಂಥಗಳನ್ನು ರಚಿಸಿದ್ದಲ್ಲದೆ ಅನೇಕರಿಗೆ ವೇದ-ಶಾಸ್ತ್ರಗಳನ್ನು ಕಲಿಸಿದವರು. ಸುರಸರಸ್ವತೀಸಭೆಯ ಸಂಸ್ಕೃತಪರೀಕ್ಷೆಗಳಿಗೆ ಒತ್ತಾಸೆಯಾಗಿ ದುಡಿದವರು ಕೂಡ.

ಉಳಿದಂತೆ ಶೇಷಣ್ಣನವರು ಸ್ವಯಮಾಚಾರ್ಯರಾಗಿ ರಾಮಾಯಣ-ಮಹಾಭಾರತಗಳನ್ನು, ವಿಷ್ಣು-ಸ್ಕಾಂದ -ಪಾದ್ಮ-ಭಾಗವತಗಳಂಥ ಪುರಾಣಗಳನ್ನು ಆದ್ಯಂತ ವ್ಯಾಸಂಗಮಾಡಿದರು. ಯಾವಾಗ ಅವರ ಮನಸ್ಸು ಪ್ರಯೋಗ ಮತ್ತು ಕರ್ಮಕಾಂಡಗಳ ಕಡೆ ತಿರುಗಿತೋ ಆಗಲೇ ಖಾದಿರ, ದ್ರಾಹ್ಯಾಯಣ, ಆಪಸ್ತಂಬ, ಆಶ್ವಲಾಯನ, ಬೋಧಾಯನ, ಗೌತಮ ಮುಂತಾದ ಮಹರ್ಷಿಗಳ ಧರ್ಮ-ಗೃಹ್ಯಸೂತ್ರಗಳನ್ನೂ ಮನ್ವಾದಿ ಸ್ಮೃತಿಗಳನ್ನೂ ಮತ್ತಿತರ ನಿಬಂಧಗ್ರಂಥಗಳನ್ನೂ ಓದಿಕೊಂಡರು. ಈ ಎಲ್ಲ ವ್ಯಾಸಂಗದ ಹಾದಿಯಲ್ಲಿ ಅವರಿಗೆ ಉತ್ತರಭಾರತದ ಅವೆಷ್ಟೋ ಹಿಂದೀಗ್ರಂಥಗಳು ನೆರವಿಗೆ ಬಂದವು. ತಮ್ಮದಾದ ಕೌಥುಮಶಾಖೆಯ ಸಾಮವೇದವು ತಮಿಳುನಾಡಿನಲ್ಲಿ ಹೆಚ್ಚಾಗಿ ವ್ಯಾಪ್ತವಾದ ಕಾರಣ ಅಲ್ಲಿಯ ವಿದ್ವಾಂಸರ ಗ್ರಂಥಗಳನ್ನು ಕಷ್ಟಪಟ್ಟು ತರಿಸಿಕೊಂಡು ಓದಿಕೊಂಡರು. ಇದಕ್ಕಾಗಿ ಅವರು ಗ್ರಂಥಲಿಪಿಯನ್ನೂ ಕಲಿತಂತೆ ನನ್ನ ನೆನಪು. ಆಧುನಿಕರಾದ ಆರ್ಯಸಮಾಜಿಗಳ ಅನೇಕಗ್ರಂಥಗಳನ್ನೂ ಅವರು ಚೆನ್ನಾಗಿ ಅಭ್ಯಾಸ ಮಾಡಿದ್ದರು. ಪುಣೆಯ ವೈದಿಕಸಂಶೋಧನಮಂಡಲದ ಕೃತಿಗಳ ಅರಿವು ಕೂಡ ಅವರಿಗಿತ್ತು. ವೇದಾರ್ಥವನ್ನು ಗ್ರಹಿಸುವಲ್ಲಿ ಯಾವುದೇ ಮತೀಯವಾದ ಆಗ್ರಹಗಳಿಲ್ಲದೆ, ಎಲ್ಲ ಬಗೆಯ ಒಳ್ಳೆಯ ವಿವರಣೆಗಳೂ ಉಪಾದೇಯವೆಂಬ ವಿವೇಕದ, ಔದಾರ್ಯದ ನಿಲವು ಅವರದಾಗಿತ್ತು. ಹೀಗೆ ಒಬ್ಬ ಸಾಮಾನ್ಯವ್ಯಕ್ತಿಯಾಗಿ, ಯಾವುದೇ ಶಿಕ್ಷಣಸಂಸ್ಥೆಗಳ, ಸಂಶೋಧನಕೇಂದ್ರಗಳ, ಮಠ-ಪಾಠಶಾಲೆಗಳ ನೆರವಿಲ್ಲದಿದ್ದರೂ ಸ್ವಪ್ರಯತ್ನದಿಂದಲೇ ವೇದವಿದ್ಯೆಯಲ್ಲಿ ನಿಷ್ಣಾತರಾಗಿದ್ದರು.

To be continued.

   Next>>

Author(s)

About:

Dr. Ganesh is a 'shatavadhani' and one of India’s foremost Sanskrit poets and scholars. He writes and lectures extensively on various subjects pertaining to India and Indian cultural heritage. He is a master of the ancient art of avadhana and is credited with reviving the art in Kannada. He is a recipient of the Badarayana-Vyasa Puraskar from the President of India for his contribution to the Sanskrit language.