ಮಹಾಭಾರತದ ನುಡಿಬೆಡಗು--ಉಪಸಂಹಾರ

This article is part 5 of 5 in the series Idioms in Mahabharata

೩. ವಿಶಿಷ್ಟಸಮಾಸಗಳು

ಭಾರತೀಯಭಾಷೆಗಳ ಬಲಗಳ ಪೈಕಿ ಒಂದು ಸಮಾಸಗುಂಫನಶಕ್ತಿ. ಸಂಸ್ಕೃತಕ್ಕಿದು ಸರ್ವೋಚ್ಚವಾಗಿದೆ. ಈ ಮೂಲಕ ನುಡಿಗೆ ಹೊಸತೊಂದು ಕಸುವನ್ನು ನೀಡುವುದಲ್ಲದೆ ಅಂದ-ಅಡಕಗಳನ್ನೂ ತರಬಹುದು. ಜೊತೆಗೆ, ರೂಪಕನಿರ್ಮಾಣದಲ್ಲಿ ಸಮಾಸವೇ ಸರ್ವಸಮರ್ಥ. ಲೋಕಪ್ರಸಿದ್ಧವಾದ ದ್ವಂದ್ವ, ತತ್ಪುರುಷ, ಬಹುವ್ರೀಹಿ, ಕರ್ಮಧಾರಯಗಳಂಥ ಸಮಾಸಗಳಲ್ಲದೆ ಪ್ರಾದಿ, ನಞ್, ಅಲುಕ್, ಉಪಪದ, ಅವ್ಯಯೀಭಾವಗಳಂಥ ಸಮಾಸಗಳಲ್ಲಿ ಹೆಚ್ಚಿನ ಪ್ರಯೋಗಗಳಿಗೆ ನುಡಿಗಟ್ಟುಗಳಾಗುವ ಅವಕಾಶವಿರುತ್ತದೆ. ಇಂಥ ಕೆಲವು ಮಾದರಿಗಳನ್ನು ಪರಿಶೀಲಿಸೋಣ.

ಗರುಡನ ಅಮೃತಹರಣದ ಕಥೆಯನ್ನು ವಿಸ್ತರಿಸುವಾಗ ಅವನ ತಾಯಿ ವಿನತೆ ಸಮುದ್ರತೀರದಲ್ಲಿ ವಿಹರಿಸುತ್ತಿದ್ದ ಪ್ರಸ್ತಾವ ಬರುತ್ತದೆ. ಆಗ ತೀರದಿಂದ ಬೀಸುವ ಗಾಳಿಯಲ್ಲಿ ಹೊಯ್ದಾಡುವ ಕಡಲ ಅಲೆಗಳ ವರ್ಣನೆಯಿದೆ. ವ್ಯಾಸರು ದಡದಿಂದ ಬೀಸುವ ಗಾಳಿ ಅಲೆಗಳನ್ನು ಉಯ್ಯಾಲೆಯಾಡಿಸುತ್ತಿತ್ತೆಂಬ ಅರ್ಥ ಬರುವಂತೆ “ವೇಲಾದೋಲಾನಿಲಚಲ” ಎಂಬ ಸಮಾಸವನ್ನು ಹೆಣೆದಿರುವುದು ಸ್ಪೃಹಣೀಯ. 

ವೇಲಾದೋಲಾನಿಲಚಲಂ ಕ್ಷೋಭೋದ್ವೇಗಸಮುತ್ಥಿತಮ್ (೧.೧೯.೯)

ತಪಸ್ವಿಗಳು ಶಾಪಾಯುಧರು. ಹೀಗಾಗಿ ಅವರನ್ನು ಅಪಮಾನಿಸಬಾರದು. ಅವರನ್ನು “ವಾಗ್ವಿಷ”ರೆಂದು (ನಂಜಿನ ಮಾತಿನವರು) ಕರೆಯುವ ಮೂಲಕ ಹೊಸತೊಂದು ಶಬ್ದವನ್ನೇ ವ್ಯಾಸರು ಸೃಜಿಸಿದ್ದಾರೆ. 

ನ ಚಾವಮಾನ್ಯಾ ದರ್ಪಾತ್ತೇ ವಾಗ್ವಿಷಾ ಭೃಶಕೋಪನಾಃ (೧.೨೭.೩೨)

ವಿರುದ್ಧಾರ್ಥಕಪದಗಳನ್ನು ಒಟ್ಟಿಗೆ ಬೆಸೆದಾಗ ಹುಟ್ಟುವ ಪದದ ಸೊಗಸು ಅನೂಹ್ಯ. ಇಂಥ ಶಬ್ದಗಳ ನಿರ್ಮಾಣಕ್ಕೆ ಹೆಚ್ಚಿನ ಪ್ರತಿಭೆ ಅವಶ್ಯ. ಅಂಥ ಒಂದು ಪ್ರಾಚೀನನಿದರ್ಶನ ಮಹಾಭಾರತದಲ್ಲಿದೆ. ರಮ್ಯವೂ ದಾರುಣವೂ ಆದದ್ದು “ರಮ್ಯದಾರುಣ;” ಸಿಹಿ-ಕಹಿಗಳ ಸಮ್ಮಿಶ್ರಪಾಕ. ಸಮಾಸಭೇದಾನುಸಾರವಾಗಿ ಇಂಥ ರೂಪಗಳ ಅರ್ಥಚ್ಛಾಯೆಗಳು ಸಂಧ್ಯಾಕಾಲದ ಆಗಸದಂತೆ ಬಣ್ಣಗಳನ್ನು ಅವಲೀಲೆಯಿಂದ ಬದಲಿಸುತ್ತವೆ. ಇಲ್ಲಿಯೇ ಗಮನಿಸುವುದಾದರೆ, “ರಮ್ಯವೇ ದಾರುಣ”ವೆಂಬ ಅರ್ಥಾಂತರ ಸ್ಫುರಿಸುತ್ತದೆ. ಹೀಗೆ ವಿಶಿಷ್ಟಸಮಾಸಗಳನ್ನು ಹೆಣೆಯುವುದರಲ್ಲಿ ಕುವೆಂಪು ಅವರು ಅಸಮಾನರು. ಉದಾಹರಣೆಗೆ: ಅವರ “ರುದ್ರರಮಣೀಯ,” “ಸಂಸ್ಕಾರಸರ್ಪ,” “ಅಗ್ನಿತೀರ್ಥ,” “ಅಗ್ನಿನಗ್ನತೆ” ಇತ್ಯಾದಿ ನೂರಾರು ಪದಗಳು ಸ್ಮರಣೀಯ. ಅವರಿಗೆ ಈ ನಿಟ್ಟಿನಲ್ಲಿ ಸ್ಫೂರ್ತಿಯಾದವರು ಬಾಣಭಟ್ಟ, ಅಲ್ಲಮಪ್ರಭು ಮತ್ತು ಕುಮಾರವ್ಯಾಸರಂಥವರು. 

ರಮ್ಯದಾರುಣಃ (೧.೪೩.೨೦) [ಮುಹೂರ್ತೇ ರಮ್ಯದಾರುಣೇ (೫.೧೦.೩೩)]

ಸ್ವಾಗತವೆಂಬ ಶಬ್ದದಲ್ಲಿಯೇ “ಸು” ಎಂಬ ಉಪಸರ್ಗವಿದೆ (ಸು+ಆಗತ). ಅಚ್ಚಗನ್ನಡದಲ್ಲಿ ಹೇಳುವುದಾದರೆ, ನಲ್ಬರವು. ಆದರೆ ಲೋಕರೂಢಿಯಲ್ಲಿ ಅದು ಹೇಗೋ ಮತ್ತೊಂದು “ಸು” ಇದಕ್ಕೆ ಸೇರಿಕೊಂಡಿತು. ವೈಯಾಕರಣರು ಇದೊಂದು ಅಪಶಬ್ದವೆಂದು ಅದೆಷ್ಟು ಕೋಲಾಹಲಿಸಿದರೂ ರೂಢಿಯು ಅದನ್ನು ಕಿವುಡುಗೇಳಿತು. ವ್ಯಾಸರಂಥ ಮಹಾಕವಿಗಳೇ “ಸುಸ್ವಾಗತ”ಕ್ಕೆ ಸ್ವಾಗತವಿತ್ತ ಬಳಿಕ ಮತ್ತೇನು ಮಾಡುವುದು?

ಸುಸ್ವಾಗತಮ್ (೧.೭೧.೧೯)

ಹುಟ್ಟುಗುರುಡನಾದ ಧೃತರಾಷ್ಟ್ರನನ್ನು ವ್ಯಾಸರು ಪಾಪ “ತಿಳಿವನ್ನೇ ಕಣ್ಣಾಗಿ ಉಳ್ಳವನು” ಎಂದು ಕರೆಯುವ ಮೂಲಕ “ನಯೋಕ್ತಿ”ಗೆ (Euphemism) ಮಣೆಹಾಕಿದ್ದಾರೆ. ಇಂದೂ ಈ ಪದ ಹೀಗೆಯೇ ಬಳಕೆಯಲ್ಲಿದೆ.

ಪ್ರಜ್ಞಾಚಕ್ಷುಃ (೧.೧೧೭.೧೩)

ದೇವತೆಗಳಿಗೆ ಆಹುತಿ ನೀಡುವಾಗ “ಸ್ವಾಹಾ” ಎನ್ನುತ್ತೇವೆ. ಪಿತೃಗಳ ಸಂದರ್ಭದಲ್ಲಿ “ಸ್ವಧಾ” ಎಂಬ ಅವ್ಯಯ ಬಳಕೆಯಲ್ಲಿದೆ. ಇಂಥ ಆಹುತಿಯನ್ನೇ ಅಮೃತಾಹಾರವಾಗಿ ಉಳ್ಳವರು ಪಿತೃದೇವತೆಗಳೆಂದು ತಿಳಿಸಲು ವ್ಯಾಸರು ಟಂಕಿಸಿದ ಸಮಾಸ “ಸ್ವಧಾಮೃತ.”

ಸ್ವಧಾಮೃತಮ್ (೧.೧೧೯.೧)

ಬರಿಗಣ್ಣಿಗೆ ಯಥಾರ್ಥ ಗೋಚರಿಸದೆ ಹೋಗಬಹುದು. ಹೀಗಾಗಿ ತರ್ಕಶುದ್ಧವಾದ ಬುದ್ಧಿಯಿಂದ ನಮ್ಮ ನೋಟವನ್ನು ಪರಿಷ್ಕರಿಸಿಕೊಳ್ಳಬೇಕು. ಹೀಗೆ ವಿಚಾರದಿಂದ ಪುಷ್ಟವಾದ ಕಾಣ್ಕೆಯೇ “ತರ್ಕಚಕ್ಷುಸ್.”

ತಮಹಂ ಫಲಾರ್ಥಿನಂ ಮನ್ಯೇ ಭ್ರಾತರಂ ತರ್ಕಚಕ್ಷುಷಾ (೧.೧೫೫.೧೯)

ಬುದ್ಧಿಜೀವಿಗಳ ಪ್ರಸ್ತಾವ ಈಗಿನಿದಲ್ಲ; ಮಹಾಭಾರತಕ್ಕೂ ಮೊದಲಿನದು! ಆದರೆ ಆ ಕಾಲದಲ್ಲಿ ಬುದ್ಧಿಜೀವಿಗಳು ದುರ್ಬುದ್ಧಿಜೀವಿಗಳಾಗಿರಲಿಲ್ಲ, ಸದ್ಬುದ್ಧಿಜೀವಿಗಳಾಗಿದ್ದರು. ಹೀಗಾಗಿ ವ್ಯಾಸರು ವಿದ್ವಾಂಸರನ್ನು ಬುದ್ಧಿಜೀವಿಗಳೆಂದಿದ್ದಾರೆ:

ಬುದ್ಧಿಜೀವಿನಃ (೧.೧೭೯.೩)

“ಉಪಪದಸಮಾಸ”ದ ಮೂಲಕ ನಿಷ್ಪನ್ನವಾಗುವ ಶಬ್ದಗಳು ಅವೆಷ್ಟೋ ಕ್ರಿಯಾವಿಷಯಗಳನ್ನು ಗರ್ಭೀಕರಿಸಿಕೊಂಡು ಮೈದಾಳುತ್ತವೆ. ಈ ಕಾರಣ ಇವುಗಳಿಗೆ ಬರುವ ಅಡಕವೂ ತನ್ಮೂಲಕ ಉಂಟಾಗುವ ವಾಚೋಯುಕ್ತಿತ್ವವೂ ಗಮನಾರ್ಹ. ಅಂಥ ಕೆಲವು ಉದಾಹರಣೆಗಳು ಮಹಾಭಾರತದಲ್ಲಿವೆ: ಕಿಂಕರಾಃ (೨.೪೩.೬) (ಸೇವಕ), ಕಿಂದಾನಮ್ (೩.೮೧.೬೫) (ದೇಯವಸ್ತುವು ಯಾವುದು?), ಕಿಂಜಪ್ಯಮ್ (೩.೮೧.೬೫) (ಯಾವುದನ್ನು ಕುರಿತು ಜಪಿಸಬೇಕು?), ಕಿಂದತ್ತಮ್ (೩.೮೧.೮೩) (ಕೊಟ್ಟಿದ್ದು ಯಾವುದು?). ಇವುಗಳ ವಿಗ್ರಹವಾಕ್ಯವೇ ನುಡಿಗಟ್ಟಿನ ಹಾಸು-ಹೊಕ್ಕನ್ನು ಬಿಡಿಸಿಡುತ್ತದೆ. ಉದಾಹರಣೆಗೆ: “ಕಿಂಚಿತ್ ಕರೋತೀತಿ” ಅಥವಾ “ಕಿಂ ಕರೋಮೀತಿ ಯೋ ಬ್ರೂತೇ ಸಃ” ಎಂಬುವು ಕಿಂಕರಶಬ್ದದ ವಿಗ್ರಹವಾಕ್ಯಗಳು. ಏನನ್ನಾದರೂ ಮಾಡುವವನು, ನಾನೇನು ಮಾಡಲಿ ಎಂದು ಮುಂದಾಗುವವನೇ ಕಿಂಕರ. ಇದೇ ರೀತಿ ಮಿಕ್ಕ ಪದಗಳೂ ಊಹನೀಯ.

ಸಂಸ್ಕೃತದಲ್ಲಿ ಮಕ್ಕಳನ್ನು ತಂದೆ ಮತ್ತು ತಾಯಂದಿರಿಬ್ಬರ ಮೂಲಗಳಿಂದಲೂ ಹೆಸರಿಸುವುದುಂಟು. ಈ ದೃಷ್ಟಿಯಿಂದ ಅದಕ್ಕೆ ಲಿಂಗವೈಷಮ್ಯದ ದೋಷವಿಲ್ಲ. “ಕುಂತಿಯು ಯಾರಿಗೆ ತಾಯಿಯೋ ಅವನು ಕುಂತೀಮಾತಃ”—“ಕುಂತೀ ಮಾತಾ ಯಸ್ಯ ಸಃ.” ಇದು ಎಲ್ಲರೂ ಬಲ್ಲಂತೆ ಬಹುವ್ರೀಹಿಸಮಾಸ. ಇದು ತನ್ನಂತೆಯೇ ನುಡಿಗಟ್ಟಾಗಿರುವುದು ಲೋಕಾದರಣೆಯ ಕಾರಣದಿಂದ. ಇಂಥ ಪ್ರಯೋಗಗಳು ಹೆಚ್ಚಾಗಿ ಪ್ರಾಚೀನಕವಿಗಳಲ್ಲಿಯೂ ತತ್ಪೂರ್ವದ ವೇದ-ಶಾಸ್ತ್ರಗಳಲ್ಲಿಯೂ ಪ್ರಚುರ.

ಕುಂತೀಮಾತಃ (೩.೧೭೭.೨)

ನಮ್ಮಲ್ಲಿ ಸಾಮಾನ್ಯವಾಗಿ “ಒಂದೇ ಸರತಿ,” “ಒಂದೇ ಏಟಿಗೆ,” “ಒಂದೇ ಉಸುರಿನಲ್ಲಿ” ಇತ್ಯಾದಿ ಪ್ರಯೋಗಗಳಿವೆ. ಇವೆಲ್ಲ ಕ್ರಿಯೆಯ ತ್ವರೆ-ತೀವ್ರತೆಗಳನ್ನು ಸೂಚಿಸುತ್ತವೆ. ಇಂಥ ಒಂದು ಪದ “ಏಕಪದಮ್.” ಇದು “ಒಂದೇ ಮಾತಿನಲ್ಲಿ” ಮತ್ತು “ಒಂದೇ ಹೆಜ್ಜೆಯಲ್ಲಿ” ಎಂಬ ವಾಚಿಕ-ಕಾಯಿಕರೂಪದ ಅರ್ಥಗಳನ್ನು ಧ್ವನಿಸುತ್ತದೆ.

ಏಕಪದಮ್ (೩.೨೯೭.೪೮)

“ಉದರ್ಕ”ಶಬ್ದವು ಉದಯಸೂರ್ಯವಾಚಿ. ಲಕ್ಷಣಾವೃತ್ತಿಯಿಂದ ಇದು ಅಭ್ಯುದಯವನ್ನು ಸೂಚಿಸುತ್ತದೆ. ಇದನ್ನು ಉತ್ತರಪದವನ್ನಾಗಿ ಉಳ್ಳ ಸಮಾಸವು ಆಯಾ ಪೂರ್ವಪದದ ಏಳಿಗೆಯನ್ನು ನುಡಿಗಟ್ಟೆಂಬಂತೆ ಸೂಚಿಸುತ್ತದೆ. “ಸುಖೋದರ್ಕ,” “ಶುಭೋದರ್ಕ,” “ಫಲೋದರ್ಕ” ಇತ್ಯಾದಿ ರೂಪಗಳು ಅಸಂಖ್ಯೇಯ. ಸಾಮಾನ್ಯವಾಗಿ ಒಳಿತಿನ ಅಭ್ಯುದಯಕ್ಕಾಗಿ ಬಳಕೆಯಾಗುವ ಈ ರೂಪವನ್ನು ಪಾಪದ ಉನ್ನತಿಯನ್ನು ಹೇಳಲು ಬಳಸಿಕೊಂಡಿರುವುದು ವ್ಯಾಸರ ವೈಶಿಷ್ಟ್ಯ.

ಪಾಪೋದರ್ಕಮ್ (೫.೩೨.೧೩)

[ಶಠೋದರ್ಕಮ್ (೫.೮೯.೧೨) ಎಂಬ ಮತ್ತೊಂದು ಪ್ರಯೋಗವೂ ಇದೇ ತೆರನಾದದ್ದು].

ಕಾಲದಿಂದ ಆವರಿಸಲ್ಪಟ್ಟ ಬುದ್ಧಿಯುಳ್ಳವನು “ಕಾಲಪರೀತಬುದ್ಧಿಃ” ಎಂಬುದು ಬಹುವ್ರೀಹಿಸಮಾಸದ ಮೂಲಕ ಸಿದ್ಧಿಸುವ ಅರ್ಥವಾದರೂ “ಕಾಲ”ಪದಕ್ಕಿರುವ ಶ್ಲೇಷ ಮತ್ತದು ಹುಟ್ಟಿಸುವ ಧ್ವನಿಗಳ ಮೂಲಕ “ಸಮಯದ ಸುಳಿಯಲ್ಲಿ ಸಿಲುಕಿದ ಬುದ್ಧಿಯುಳ್ಳವನು” ಹಾಗೂ “ಸಾವಿನ ದವಡೆಯಲ್ಲಿರುವವನು” ಎಂಬ ಎಷ್ಟೋ ಅರ್ಥಗಳಿಲ್ಲಿ ಸಂಗತವಾಗುತ್ತವೆ.

ಕಾಲಪರೀತಬುದ್ಧಿಃ (೫.೬೧.೭)

ಕಾಲಕ್ಕೆ ಸರಿಯಾಗಿ ಮಾಗಿದ ವಸ್ತು “ಕಾಲಪಕ್ವ”ವೆಂಬುದು ಅಭಿಧಾರ್ಥವಾದರೂ “ಮೃತ್ಯುವಿನ ತುತ್ತಾಗುವ ಸ್ಥಿತಿಯಲ್ಲಿರುವವರು” ಎಂಬ ಧ್ವನ್ಯರ್ಥ ಈ ಸಮಸ್ತಪದದಲ್ಲಿದೆ. ಕೃಷ್ಣನ ದೌತ್ಯವನ್ನು ಧಿಕ್ಕರಿಸಿ ದುರ್ಯೋಧನನು ಸಭಾತ್ಯಾಗ ಮಾಡಿದಾಗ, ಭೀಷ್ಮನು ಕೌರವರೂ ಸೇರಿದಂತೆ ಎಲ್ಲ ಕ್ಷತ್ರಿಯರ ನಾಶ ಅನಿವಾರ್ಯವೆಂದು ಕೃಷ್ಣನಿಗೆ ತಿಳಿಸುವಾಗ ಈ ಶಬ್ದದ ಬಳಕೆಯಾಗಿದೆ. ಸಾಮಾನ್ಯವಾಗಿ ಕುಯ್ಲಿಗೆ ಸಿದ್ಧವಾದ ಬೆಳೆಗೆ ಈ ಪದವನ್ನು ಅನ್ವಯಿಸುವುದುಂಟು. ಆದರೆ ಇಲ್ಲಿ ಕಾಲನ ಕುಯ್ಲಿಗೆ ಕೌರವರು ಸಜ್ಜಾಗುತ್ತಿದ್ದಾರೆಂಬ ಮಾರ್ಮಿಕಧ್ವನಿಯಿದೆ.

ಕಾಲಪಕ್ವಮ್ (೫.೧೨೬.೩೧)

ಭೀಷ್ಮನು ಸೆಣಸುವಾಗ ನಿರ್ವಿರಾಮವಾಗಿ ಬಾಣಗಳನ್ನು ಬಿಲ್ಲಿಗೆ ಹೂಡುತ್ತಿರುತ್ತಾನೆ. ಹೀಗಾಗಿ ಸೆಳೆಯಲ್ಪಟ್ಟ ಬಿಲ್ಲು ಮತ್ತಷ್ಟು ಬಾಗಿ ವರ್ತುಲಾಕಾರಕ್ಕೆ ಬಂದಂತೆ ತೋರುತ್ತದೆ. ಇದನ್ನೊಂದು ನುಡಿಗಟ್ಟಾಗಿ ಹೇಳುವಾಗ “ಎಂದೂ ಬಾಗಿದ ಬಿಲ್ಲುಳ್ಳವನು,” “ಆಕರ್ಣಾಂತವಾಗಿ ಹೆದೆಯನ್ನೆಳೆದು ಬಾಣ ಹೂಡಿದವನು,” “ಅಪ್ರತಿಮನಾದ ಬಿಲ್ಗಾರ” ಎಂಬೆಲ್ಲ ಧ್ವನಿಗಳು ಹೊರಡುತ್ತವೆ. ಮಹಾಭಾರತದ ಈ ಉಕ್ತಿವೈಚಿತ್ರ್ಯ ಮುಂದೆ ಎಷ್ಟೋ ಸಂಸ್ಕೃತಕವಿಗಳಿಗೆ ಉಪಾದೇಯವಾಯಿತು. “ಚಕ್ರೀಕೃತಚಾರುಚಾಪ” (ಕುಮಾರಸಂಭವ, ೩.೭೦), “ಕುಂಡಲೀಕೃತಧನು” (ಪ್ರಾಣಾಭರಣ, ೫೩) ಮುಂತಾದ ಕಾಳಿದಾಸ-ಜಗನ್ನಾಥಾದಿಗಳ ಮಾತುಗಳೇ ಇದಕ್ಕೆ ಸಾಕ್ಷಿ.

ನಿತ್ಯಂ ಮಂಡಲಕಾರ್ಮುಕಃ (೬.೪೫.೬೦)

ಕೃಪಾಚಾರ್ಯನು ಕರ್ಣನನ್ನು ಆಕ್ಷೇಪಿಸುವಾಗ, “ನಿನ್ನದೆಲ್ಲ ಕಲ್ಪಿಸಿಕೊಂಡ ಗೋಳಾಟ” ಎನ್ನುತ್ತಾನೆ. ಇಲ್ಲದ ಸಂಕಟವನ್ನು ಊಹಿಸಿಕೊಂಡು ಅದಕ್ಕಾಗಿ ಹಲಬುವುದಿಲ್ಲಿ ವಿವಕ್ಷಿತ. “ಮನೋರಥಪ್ರಲಾಪ” ಎಂಬ ಈ ಪದಪುಂಜದಲ್ಲಿ ಮನೋರಥ ಎನ್ನುವಾಗಲೇ ರೂಪಕವೊಂದರ ಕಲ್ಪನೆಯುಂಟು—ಮನಸ್ಸನ್ನೇ ರಥವನ್ನಾಗಿಸಿಕೊಂಡು ಎಲ್ಲೆಡೆ ದಾಪಿಡುವ ಚಿತ್ರವಿಲ್ಲಿ ಸ್ಫುರಿಸುತ್ತದೆ. ಹೀಗೆ ಉದ್ವಿಗ್ನವಾದ ಮನಸ್ಸಿನ ಹಲಬುವಿಕೆ ಈ ನುಡಿಗಟ್ಟಿನ ಇಂಗಿತ.

ಮನೋರಥಪ್ರಲಾಪಃ (೭.೧೩೩.೩೨)

ಭೀಷ್ಮನು ರಾಜನೀತಿಯನ್ನು ಉಪದೇಶಿಸುವಾಗ ಕರ್ತವ್ಯಚ್ಯುತನೂ ಪ್ರಜಾಪೀಡಕನೂ ಆದ ರಾಜ ದೊರೆಯೇ ಅಲ್ಲ, ಅವನೊಬ್ಬ ರಾಜವೇಷದಲ್ಲಿರುವ ಕಳ್ಳನೆಂಬ ಮಾತನ್ನಾಡುತ್ತಾನೆ. ಆಗ ಬಳಕೆಯಾದ “ಪಾರ್ಥಿವತಸ್ಕರ” ಎಂಬ ಶಬ್ದ ಕರ್ಮಧಾರಯಸಮಾಸಕ್ಕೆ ಸೇರುತ್ತದೆ. ಉಭಯಪದಪ್ರಧಾನವಾದ ಈ ಸಮಾಸದ ಶಕ್ತಿಯಿಂದ ರಾಜನು ಕಳ್ಳನಂತಲ್ಲ, ಕಳ್ಳನ ವೇಷವನ್ನೂ ಧರಿಸಿದವನಲ್ಲ, ಅವನು ಕಳ್ಳನೇ ಹೌದೆಂಬ ಅಭೇದಭಾವ ಸ್ಫುರಿಸುವ ಮೂಲಕ ಭ್ರಷ್ಟರಾಜನ ಪತನದ ತೀವ್ರತೆಯೂ ಮನಮುಟ್ಟುತ್ತದೆ. 

ಪಾರ್ಥಿವತಸ್ಕರಃ (೧೨.೧೩೭.೯೬)

೪. ವಿನೂತನವಿಶೇಷಣಗಳು

ವಿಶೇಷಣಗಳು ಯಾವುದೇ ನಾಮಪದಗಳಿಗಾಗಲಿ, ಕ್ರಿಯಾಪದಗಳಿಗಾಗಲಿ ಸಂದರ್ಭೋಚಿತವಾದ ಪರಿಪುಷ್ಟಿಯನ್ನು ತುಂಬಿಕೊಡುತ್ತವೆ. ಇವು ಸಮಸ್ತವಾಗಿಯೂ ಅಸಮಸ್ತವಾಗಿಯೂ ಬರಬಹುದು. ಇಂಥ ಕೆಲವೊಂದು ಸ್ವಾರಸ್ಯಗಳನ್ನು ನಾವೀಗ ಪರಿಶೀಲಿಸೋಣ.

ಇತಿಹಾಸಗಳ ಪೈಕಿ ಉತ್ತಮವೆನಿಸಿದ ಮಹಾಭಾರತದ ವ್ಯಾಸಂಗದಿಂದ ವಿದ್ವಾಂಸರು ಕಾವ್ಯಕೌಶಲವನ್ನು ಪಡೆಯುವರೆಂದು ವ್ಯಾಸರೇ ಈ ಕೃತಿಯ ಆದಿಯಲ್ಲಿ ಹೇಳುವಾಗ ಬಳಕೆಯಾದ “ಕವಿಬುದ್ಧಯಃ” ಎಂಬ ವಿಶೇಷಣ ಗಮನಾರ್ಹ.

ಇತಿಹಾಸೋತ್ತಮಾದಸ್ಮಾಜ್ಜಾಯಂತೇ ಕವಿಬುದ್ಧಯಃ (೧.೨.೨೩೭)

ಮಹಾಭಾರತವು ಅದೆಷ್ಟೋ ಸಂದರ್ಭಗಳಲ್ಲಿ ಒಂದೇ ಜಾತಿಗೆ ಸೇರಿದ ವಸ್ತುಗಳಲ್ಲಿ ತರ-ತಮಗಳನ್ನು ತಿಳಿಸುತ್ತದೆ. ಅಂಥ ಒಂದು ಸನ್ನಿವೇಶದಲ್ಲಿ ಸ್ಪರ್ಶದಿಂದ ಸುಖವೀಯುವ ವಸ್ತು-ವ್ಯಕ್ತಿಗಳ ಪೈಕಿ ಸಂತಾನವೇ ಮಿಗಿಲೆಂದು ತಿಳಿಸುವಾಗ “ಸ್ಪರ್ಶವತಾಂ” ಎಂಬ ವಿಶೇಷಣ ಮನೋಗ್ರಾಹಿ. ಜೀವಸ್ಪರ್ಶವೇ ನಮಗೆ ಸೌಖ್ಯದಾಯಕ. ಇಂತಿರುವಲ್ಲಿ ನಮ್ಮದೇ ರಕ್ತವನ್ನು ಹಂಚಿಕೊಂಡು, ನಮ್ಮದೇ ಆಶೋತ್ತರಗಳ ಪ್ರತಿನಿಧಿಯಾಗಿ ಜನಿಸಿದ ಮಗುವಿನ ಸ್ಪರ್ಶ ಅದೆಷ್ಟು ಹಿತವೆನಿಸಬೇಡ? ಜೊತೆಗೆ, ಯಾವುದೇ ಮಕ್ಕಳ ಕೋಮಲತನುವಿನ ಅಪ್ಪುಗೆ ಯಾರಿಗೂ ಮಧುರಾನುಭವವೆಂಬ ತಥ್ಯ ಕೂಡ ಇಲ್ಲಿದೆ.  

ಪುತ್ರಃ ಸ್ಪರ್ಶವತಾಂ ವರಃ (೧.೬೮.೫೬)

ಲೋಕದಲ್ಲಿ ಕಾತರ-ಉದ್ವೇಗಗಳಿಗೆ ಒಳಗಾದಾಗ ಗುರು-ಲಘುಗಳ ವಿವೇಕವಿಲ್ಲದೆ ಎಲ್ಲಿಯೂ ಪದಾಂತದಲ್ಲಿ ಪ್ಲುತವನ್ನು ಬಳಸುವುದು ಪರಿಪಾಟಿ. ಉದಾಹರಣೆಗೆ: “ನೀನದನ್ನು ಹಾಳುಮಾಡುऽऽऽ” ಎಂಬ ಕೋಪೋಕ್ತಿಯಲ್ಲಿ ಇದನ್ನೇ ಕಾಣಬಹುದು. ಇಂಥ ವಾಗ್ರೂಪವು ಮಹಾಭಾರತದಲ್ಲಿಯೇ ಬಂದಿರುವುದು ಸ್ವಾರಸ್ಯಕರ. ಇಲ್ಲಿ “ಸ್ವರೇಣ” ಎಂಬ ಪದಕ್ಕೆ “ಪ್ಲುತೇನ” ಎಂದು ವಿಶೇಷಣವನ್ನು ಹಾಕಿರುವುದು ನಾಟಕೀಕರಣವನ್ನು ಚೆನ್ನಾಗಿ ಪೋಷಿಸುವಂತಿದೆ.

ಧ್ವಂಸೇತ್ಯುಚ್ಚೈಸ್ತ್ರಿಃ ಪ್ಲುತೇನ ಸ್ವರೇಣ (೧.೮೪.೧೮)

ಇಂದಿಗೂ ಎಂದಿಗೂ ಪ್ರಣಯಸನ್ನಿವೇಶಗಳನ್ನು ಬಿಂಬಿಸುವಾಗ ಸ್ತ್ರೀಯರಿಗೆ ವಿರಳವೂ ಪಾರದರ್ಶಕವೂ ಆದ ವಸ್ತ್ರಗಳನ್ನು ಕಲ್ಪಿಸುವುದು ದೃಶ್ಯ-ಶ್ರವ್ಯಕಾವ್ಯಗಳ ನಿರ್ಮಾತೃಗಳಿಗೆ ಇಷ್ಟದ ಕೆಲಸ. ಇದಕ್ಕೆ ರಸಿಕರ ಒತ್ತಾಸೆಯೂ ಬಹಳಷ್ಟೆನ್ನಿ. ಇಂಥ ಸಂದರ್ಭವನ್ನು ಮಹಾಭಾರತವು “ಸೂಕ್ಷ್ಮಾಂಬರಧರಾಮ್” ಎಂಬ ವಿಶೇಷಣದ ಮೂಲಕ ಚಿತ್ರಿಸಿರುವುದು ರೋಚಕ.

ಸೂಕ್ಷ್ಮಾಂಬರಧರಾಮೇಕಾಂ ಪದ್ಮೋದರಸಮಪ್ರಭಾಮ್ (೧.೯೨.೨೭)

ಗೋಳಾಡುವವರು ತಮ್ಮ ಸಂಕಟದ ಎಲ್ಲೆ ಮೀರಿದಾಗ ನೆಲದಲ್ಲಿ ಬಿದ್ದು ಹೊರಳಾಡಿ ಮಂಡಿಯೂರಿ, ತಲೆಯನ್ನು ನೆಲಕ್ಕೆ ಘಟ್ಟಿಸಿಕೊಂಡು, ಕೈಕಾಲುಗಳನ್ನೆಲ್ಲ ನೆಲಕ್ಕುಜ್ಜುತ್ತ ಹಲುಬುವುದು ಈಗಲೂ ದೃಷ್ಟಚರ. ಇಂಥ ಸಂದರ್ಭವನ್ನು “ಘೃಷ್ಟಜಾನುಶಿರೋऽಕ್ಷಿಕಾನ್” ಎಂಬ ವಿಶೇಷಣದಿಂದ ವ್ಯಾಸರು ನಮ್ಮ ಕಣ್ಣಿಗೆ ಕಟ್ಟಿಸಿದ್ದಾರೆ.

ಚಕರ್ಷ ಕ್ರೋಶತೋ ಭೂಮೌ ಘೃಷ್ಟಜಾನುಶಿರೋಕ್ಷಿಕಾನ್ (೧.೧೧೯.೧೮)

ವಿಶೇಷಣಗಳು ಕೆಲವೊಮ್ಮೆ ವಿಶೇಷ್ಯಗಳಿಗೆ ವಿರುದ್ಧಪದಗಳೆಂಬಂತೆ ತೋರಿದರೂ ತಾತ್ಪರ್ಯದಲ್ಲಿ ಮತ್ತಷ್ಟು ಉತ್ಕರ್ಷವನ್ನೇ ತುಂಬುತ್ತವೆ. ತಾರುಣ್ಯದಲ್ಲಿದ್ದ ಧರ್ಮರಾಜನಿಗೆ ಅವನ ಪ್ರಜ್ಞಾವಂತಿಕೆಯ ಕಾರಣ “ವೃದ್ಧಶೀಲಿ” (ಹಿರಿಯರ ವರ್ತನೆಯನ್ನು ಮೈಗೂಡಿಸಿಕೊಂಡವನು) ಎಂಬ ವಿಶೇಷಣವಿತ್ತಿರುವುದು ಹೃದಯಂಗಮ.

ತರುಣಂ ವೃದ್ಧಶೀಲಿನಮ್ (೧.೧೨೯.೭)

ಭೀಮಸೇನನಿಗೆ “ವೃಕೋದರ” ಎಂಬ ವಿಶೇಷಣವೂ ಅನ್ವರ್ಥನಾಮ! ಇಂಥವನು ವೇಗದಲ್ಲಿ ಗಾಳಿಯಂತೆಂದು ವರ್ಣಿತವಾಗುವುದು ಅವನ ವಾಯುಪುತ್ರತ್ವಕ್ಕೆ ಯುಕ್ತವೂ ಹೌದು. ಇವೆರಡನ್ನೂ ವ್ಯಾಸರು ಒಟ್ಟಿಗೆ ಹೀಗೆ ಸಾಧಿಸಿದ್ದಾರೆ:

ವಾತರಂಹಾ ವೃಕೋದರಃ (೧.೧೩೬.೧೯)

ಅದೆಷ್ಟೋ ಬಾರಿ ದೊಡ್ಡ ಘಟನೆಗಳು ಚಿಕ್ಕ ಸಂದರ್ಭಗಳಿಂದ ಒಡಮೂಡುತ್ತವೆ; ಹಿರಿದಾದುದು ಕಿರಿದೊಂದರಿಂದ ಹುಟ್ಟುತ್ತದೆ. ಇದನ್ನು ಮಹಾಭಾರತ ಹೀಗೆ ಹರಳುಗಟ್ಟಿಸಿದೆ:

ಲಘುಮೂಲಾನ್ಮಹೋದಯಾನ್ (೨.೫.೨೦)

ಮಹಾಭಾರತವು ಅದೆಷ್ಟೋ ಬಾರಿ ಅನೇಕವಸ್ತುಗಳ ಮೂಲವನ್ನೂ ಫಲವನ್ನೂ ನಿರುಪಮವಾದ ರೀತಿಯಲ್ಲಿ ನಿರ್ವಚಿಸುತ್ತದೆ. ಉದಾಹರಣೆಗೆ: ಹಣದ ಪರಮಪ್ರಯೋಜನವೇ ತಾನುಂಡು ಮತ್ತಿತರರನ್ನೂ ತಣಿಸುವುದು. ಇದನ್ನು ಧನಕ್ಕೆ ವಿಶೇಷಣವಾಗಿ “ದತ್ತಭುಕ್ತಫಲಂ” ಎಂದು ಕಲ್ಪಿಸುವ ಮೂಲಕ ಅರುಹಿದ ಪರಿ ಅವಿಸ್ಮಾರ್ಯ.

ದತ್ತಭುಕ್ತಫಲಂ ಧನಮ್ (೨.೫.೧೦೧)

ಇದೇ ಜಾಡಿಗೆ ಬರುವಂಥದ್ದು ವಿದ್ಯೆಯ ಪರಿಣಾಮ ಸದಾಚಾರದಲ್ಲಿದೆಯೆಂದು ಹೇಳುವ “ಶೀಲವೃತ್ತಫಲಂ” ಎಂಬ ವಿಶೇಷಣ.

ಶೀಲವೃತ್ತಫಲಂ ಶ್ರುತಮ್ (೨.೫.೧೦೧)

ಸಂಸ್ಕೃತದಲ್ಲಿ ಬಂಧುವಾಚಕಶಬ್ದಗಳು ಸಮೃದ್ಧವಾಗಿವೆ. ಈ ತಥ್ಯ ಅದರ ಪ್ರಾಚೀನತೆಯನ್ನಷ್ಟೇ ಅಲ್ಲದೆ ಆ ಸಂಸ್ಕೃತಿಯು ಮೈಗೂಡಿಸಿಕೊಂಡ ಬಂಧುಪ್ರೀತಿಯನ್ನೂ ಧ್ವನಿಸುತ್ತದೆ. ಹಿರಿಯ ಹೆಂಡತಿಗೆ “ಜ್ಯೇಷ್ಠಿನೀ” ಎಂಬ ಅಭಿಧಾನವಿದೆ. ಅವಳ ಮಗನೇ “ಜ್ಯೈಷ್ಠಿನೇಯ.” ಪಾಂಡವರನ್ನು ಕಂಡು ಅಸೂಯಿಸುತ್ತಿದ್ದ ದುರ್ಯೋಧನನಿಗೆ ಧೃತರಾಷ್ಟ್ರ ಸಮಾಧಾನ ಹೇಳುತ್ತ, “ನೀನು ನನ್ನ ಮಕ್ಕಳಿಗೆಲ್ಲ ಹಿರಿಯನಷ್ಟೇ ಅಲ್ಲ, ಕುರುವಂಶದ ಹಿರಿಯ ಸೊಸೆಯ ಹಿರಿಯ ಮಗ ಕೂಡ” ಎನ್ನುತ್ತಾನೆ. ಇಲ್ಲಿ “ಜ್ಯೇಷ್ಠ”ಶಬ್ದಕ್ಕೆ ಸಾರ್ಥಕವಾಗಿ “ಜ್ಯೈಷ್ಠಿನೇಯ”ಪದವು ವಿಶೇಷಣವಾಗಿದೆ.

ಜ್ಯೇಷ್ಠೋ ಜ್ಯೈಷ್ಠಿನೇಯಃ (೨.೫೦.೧)

ದುರ್ಯೋಧನನ ಸ್ವಭಾವವನ್ನು ವರ್ಣಿಸುವ ಸಂದರ್ಭವೊಂದರಲ್ಲಿ ವ್ಯಾಸರು ಅವನು ಸ್ವಭಾವದಿಂದಲೇ ನಿರ್ದಯನೆಂದು ಹೇಳಿರುವುದು ಮಾರ್ಮಿಕವಾದ ವಿಮರ್ಶೆ. “ಪ್ರಕೃತಿನಿರ್ಘೃಣ” ಎಂಬ ವಿಶೇಷಣ ಇದನ್ನು ಅನ್ಯಾದೃಶವಾಗಿ ಸಾಧಿಸಿದೆ.

ದುರ್ಯೋಧನಃ ... ಪ್ರಕೃತಿನಿರ್ಘೃಣಃ (೩.೧.೧೪)

ತಮ್ಮ ನಾಯಕರನ್ನೂ ಮತ್ತಿತರ ಸಜ್ಜನರನ್ನೂ ವ್ಯಾಸ-ವಾಲ್ಮೀಕಿಗಳು ವರ್ಣಿಸುವಾಗ “ಅಕ್ಲಿಷ್ಟಕರ್ಮ”ರೆಂದು ಅವರನ್ನು ವಿಶೇಷಿಸುವುದೊಂದು ಅಪ್ಯಾಯನವಾದ ಪರಿಪಾಟಿ. ಕಷ್ಟವೆಂದು ಸ್ವಲ್ಪವೂ ತೋರಿಸಿಕೊಳ್ಳದೆ ನಿಯತವಾದ ಕೆಲಸವನ್ನು ಚೆನ್ನಾಗಿ ನಿರ್ವಹಿಸುವುದು ತನ್ನಂತೆಯೇ ಒಂದು ಮಹಾಗುಣ.   

ಅಕ್ಲಿಷ್ಟಕರ್ಮಣಾಂ (೩.೨.೧)

ತ್ರಿಗುಣಗಳು ಮನಸ್ಸನ್ನು ಪ್ರಭಾವಿಸುವುದು ಅನುಭವವೇದ್ಯ, ಶಾಸ್ತ್ರಪ್ರಸಿದ್ಧ. ರಜೋಗುಣದಿಂದ ರೂಷಿತವಾದ ಮನಸ್ಸನ್ನು ವರ್ಣಿಸುವಾಗ ವ್ಯಾಸರು “ರಜೋಮೂಢ”ವೆಂಬ ವಿಶೇಷಣವನ್ನು ಬಳಸಿದ್ದಾರೆ. ಇಲ್ಲಿಯ “ಮೂಢ”ವೆಂಬ ಕೃದಂತ ಸೂಚಿಸುವ ಅರ್ಥವು ತಮೋಗುಣದ ಪರಿಣಾಮವನ್ನೂ ಧ್ವನಿಸುತ್ತದೆಂಬುದನ್ನು ಬಲ್ಲವರಿಗೆ ಈ ವಿಶೇಷಣ ಮತ್ತೂ ಹೃದಯಹಾರಿ.

ರಜೋಮೂಢೇನ ಮನಸಾ (೩.೩೨.೧೪)

ಯುಧಿಷ್ಠಿರನ್ನು ಅಜ್ಞಾತವಾಸದಲ್ಲಿಯೂ ತನ್ನ ಹಳೆಯ ಚಟವನ್ನು ಬಿಡಲಿಲ್ಲ; ಅಷ್ಟೇಕೆ, ಅದನ್ನೇ ಬಾಳಿನ ಬಂಡವಾಳವಾಗಿ ಮಾಡಿಕೊಂಡ! ಪುಣ್ಯಕ್ಕೆ ವನವಾಸದಲ್ಲಿದ್ದಾಗ ರಾಜರ್ಷಿ ಬೃಹದಶ್ವನಿಂದ ಅಕ್ಷವಿದ್ಯೆಯನ್ನು ಕಲಿತ ಕಾರಣ ಸೋಲಿನ ಪಾಳಿ ಅವನದಾಗಿರಲಿಲ್ಲ. ಇದನ್ನು ವರ್ಣಿಸುವಾಗ ಕಂಕನೆಂಬ ಹೆಸರಿನ ಅವನಿಗೆ “ಮತಾಕ್ಷಃ” ಮತ್ತು “ಪ್ರಿಯದೇವಿತಾ” ಎಂಬ ಎರಡು ವಿಶೇಷಣಗಳನ್ನು ಕವಿಬ್ರಹ್ಮರು ಕೊಟ್ಟಿದ್ದಾರೆ. ಮೊದಲನೆಯದಕ್ಕೆ “ಅವನಿಚ್ಛಿಸಿದ ಗರವನ್ನು ದಾಳಗಳು ಬೀಳಿಸುತ್ತವೆ” ಎಂದು ಅರ್ಥವಾದರೆ, ಎರಡನೆಯದಕ್ಕೆ “ಜೂಜೇ ಜೀವವಾದವನು” ಎಂಬ ಧ್ವನಿಯುಂಟು.  

ಕಂಕೋ ನಾಮ ದ್ವಿಜೋ ಭೂತ್ವಾ ಮತಾಕ್ಷಃ ಪ್ರಿಯದೇವಿತಾ (೪.೧.೨೦)

ಲೋಕರೂಢಿಯಲ್ಲಿ “ದಿಕ್ಕು ತೋಚದೆ” ಎಂಬ ವಾಗ್ರೂಢಿಯುಂಟು. ಇದನ್ನು ವ್ಯಾಸರ ವಾಣಿ “ಕಾಂದಿಗ್ಭೂತಃ” (ದಿಕ್ಕು ತೋಚದವನು) ಎಂದು ವಿಶೇಷಣೀಕರಿಸಿದೆ.

ಕಾಂದಿಗ್ಭೂತಮ್ (೫.೪೭.೫೬)

೫. ಉಪಚಾರವಕ್ರತೆ

ಕಾಶ್ಮೀರದ ಆಲಂಕಾರಿಕರ ಪೈಕಿ ಎದ್ದುತೋರುವ ಕುಂತಕನು ತನ್ನ “ವಕ್ರೋಕ್ತಿಜೀವಿತ”ಗ್ರಂಥದಲ್ಲಿ “ಉಪಚಾರವಕ್ರತಾ” ಎಂಬ ಪರಿಕಲ್ಪನೆಯೊಂದನ್ನು ನಿರೂಪಿಸುತ್ತಾನೆ. ಈ ಪ್ರಕಾರ ಒಂದರ ಗುಣಗಳನ್ನು ಮತ್ತೊಂದರಲ್ಲಿ ಆರೋಪಿಸಿದಾಗ ಅದೊಂದು ಬಗೆಯ ಚೆಲುವು ತೋರುತ್ತದೆ. ಇದು ವಸ್ತುತಃ ಲಕ್ಷಣಾವೃತ್ತಿಯಿಂದ ಜನಿಸುವ ವಕ್ರತೆ. ಹೆಚ್ಚಾಗಿ ಅಚೇತನದಲ್ಲಿ ಚೇತನತ್ವವನ್ನು ಆರೋಪಿಸಿದಾಗ ಉಪಚಾರವಕ್ರತೆಯ ಸೊಗಸು ಎದ್ದುಕಾಣುತ್ತದೆ. ಇದು ಮಹಾಕವಿಗಳಿಗೆ ಬೇಗ ಒದಗಿಬರುವ ಸಮರ್ಥಸಾಧನ.

ರೋಮಾಂಚನವೆಂಬ ಸಾತ್ತ್ವಿಕವಿಕ್ರಿಯೆಯನ್ನು “ಮೈಗೂದಲು ಹರ್ಷಿಸಿತು” ಎಂದು ಹೇಳುವಾಗ ಹರ್ಷದಂಥ ಮಾನವಸ್ವಭಾವವನ್ನು ಕೂದಲಿಗೆ ಆರೋಪಿಸಿದ ಸೊಗಸಿದೆ.

ಸಂಪ್ರಹೃಷ್ಟತನೂರುಹಃ (೧.೯೪.೮೯)

ವೀರಯೋಧರ ಪರಸ್ಪರ ಮೂದಲಿಸಿಕೊಳ್ಳುವಾಗ ಮಾತು ಸಾಕೆನಿಸಿ ಬಾಣಗಳಿಂದಲೇ ಮಾತನಾಡಿಕೊಳ್ಳೋಣವೆಂದು ನಿಶ್ಚಯಿಸುತ್ತಾರೆ. ಅಂಥ ಒಂದು ಚಿತ್ರಣವಿಲ್ಲಿದೆ. ಬಾಣಗಳಂಥ ಜಡವಸ್ತುಗಳಿಂದ ಮಾತನಾಡಿಸುವ ಲಕ್ಷಣಾವ್ಯಾಪಾರವೇ ಇಲ್ಲಿಯ ಆಕರ್ಷಣೆ.

ಶರೈಃ ಕಥಯ ಭಾರತ (೧.೧೨೬.೨೦)

ಸಾಮಾನ್ಯವಾಗಿ ಸಿರಿಯನ್ನು ಲಕ್ಷ್ಮಿಯೆಂದೇ ವ್ಯವಹರಿಸುತ್ತೇವೆ. ಸಂಪತ್ತಿ ಶಾಶ್ವತವಲ್ಲವೆಂಬುದು ವಿವೇಕಿಗಳೆಲ್ಲ ಬಲ್ಲ ಸತ್ಯ. ಇದನ್ನು ಮತ್ತೂ ಪರಿಣಾಮಕಾರಿಯಾಗಿ ಅಚ್ಚಗನ್ನಡದಲ್ಲಿ ಹೇಳುವುದಾದರೆ, “ಸಿರಿವೆಣ್ಣು ಸೂಳೆಯಂತೆ.” ಆದರೆ ಇಲ್ಲಿ ವಾಚ್ಯತಾದೋಷ ಬಂದ ಕಾರಣ ಗ್ರಾಮ್ಯತ್ವ ತಲೆದೋರಿದೆ. ಅದನ್ನು “ಸಾಧಾರಣಾ” ಎಂಬ ನಯೋಕ್ತಿಯಿಂದ ವ್ಯಾಸರು ಮೀರುವ ಪರಿ ಮನೋಹರ. “ಲಕ್ಷ್ಮಿಯು ಸಾಧಾರಣೆ” ಎಂಬ ಅವರ ಮಾತಿನಲ್ಲಿ “ಸಿರಿಯು ಬೆಲೆವೆಣ್ಣಿನಂತೆ” ಎಂಬ ಒಂದೇ ಅರ್ಥವಲ್ಲದೆ “ಸಂಪತ್ತಿ ಎಲ್ಲರಿಗೂ ಬಂದು ಸೇರುವ ನಿರ್ವಿಶಿಷ್ಟವಾದ ವಸ್ತು” ಎಂಬ ಧ್ವನಿಯೂ ಉಂಟು.

ಲಕ್ಷ್ಮೀಃ ಸಾಧಾರಣಾ ವಿಭೋ (೨.೪೬.೨೦)

ಲೋಕದಲ್ಲಿ “ಅವರು ದುಡ್ಡನ್ನ ತಲೆ ಮೇಲೆ ಹೊತ್ತಿದ್ದಾರೆ,” “ಇವರು ಮಕ್ಕಳನ್ನ ತಲೆ ಮೇಲೆ ಹೊತ್ತುಕೊಂಡಿದ್ದಾರೆ” ಇತ್ಯಾದಿ ನುಡಿಗಟ್ಟುಗಳುಂಟು. ಇದಕ್ಕೆ ಹತ್ತಿರ ಬರುವ ಮಾತು “ನೀತಿಯು ತಲೆಯ ಮೇಲೇರಿದೆ.” ಸಜ್ಜನರೆಲ್ಲ ಈ ಭಾರವನ್ನು ತಮ್ಮದಾಗಿ ಹೊತ್ತವರೆಂಬುದು ವ್ಯಾಸರ ಅಭಿಪ್ರಾಯ.

ಏಷ ಭಾರಃ ಸತ್ತ್ವವತಾಂ ನಯಃ ಶಿರಸಿ ಧಿಷ್ಠಿತಃ (೨.೫೦.೨೫)

ಧರ್ಮರಾಜ ದ್ರೌಪದಿಯನ್ನು ಪಣವಿಟ್ಟು ಸೋತಾಗ ಭೀಮನು ಸಂಕಟಪಡುತ್ತ ಹೇಳುವ ಮಾತು: “ನಮ್ಮ ಬೆಳಕಿಂದು ಗಾಸಿಗೊಂಡಿತು.” ಮಡದಿ ಮನೆಯ ದೀಪವೆಂದು ಅವನು ಆ ಮೊದಲೇ ಹೇಳಿದ್ದ. ಇಂಥ ಮನೆಯ ದೀಪಕ್ಕೆ ಚಂಡಮಾರುತದ ಆಘಾತವಾಯಿತೆಂಬುದು ಅವನ ತಾತ್ಪರ್ಯ. ಇಲ್ಲಿ ಬೆಳಕಿನಂಥ ಅಮೂರ್ತವಸ್ತುವಿಗೆ ನೋವಾಯಿತೆಂಬ ಉಪಚಾರದ ಕಲ್ಪನೆ ವಾಗ್ವಕ್ರತೆಯ ಪರಾಕಾಷ್ಠೆ.   

ತನ್ನೋ ಜ್ಯೋತಿರಭಿಹತಮ್ (೨.೬೪.೭)

ಸಂಪದಕ್ಕೆ ಏಳು ಬಗೆಯ ಪೂರಕಸಾಮಗ್ರಿ ಸಮಿತ್ತಾಗುವುದೆಂಬ ವ್ಯಾಸರ ವಾಣಿಯಲ್ಲಿ ಸಂಪತ್ಸಂಪಾದನೆಯೂ ಒಂದು ಯಜ್ಞವೆಂಬ ಧ್ವನಿಯಿದೆ. ಜೊತೆಗೆ, ಸಿರಿಯಂಥ ಜಡವಸ್ತುವಿಗೆ ಪೂರಕವಾಗುವ ಸಾಮಗ್ರಿಗಳು ಸಮಿತ್ತುಗಳ ಹಾಗೆಂಬ ಆರೋಪಣೆಯೂ ಚೆಲುವನ್ನು ತುಂಬಿದೆ.

ಸಪ್ತೈತಾಃ ಸಮಿಧಃ ಶ್ರಿಯಃ (೫.೩೮.೩೫)

ಹೀಗೆ ವಟವೃಕ್ಷದಂತೆ ಶಾಖೋಪಶಾಖೆಯಾಗಿ ಬೆಳೆದ ಮಹಾಭಾರತದ ವಾಗ್ವಿಲಾಸ ಅಪಾರ, ಅನನ್ಯ. ಇದರ ಒಂದು ಏಕದೇಶೀಯಪರಿಚಯವೇ ಈ ಸಂಕ್ಷಿಪ್ತಲೇಖನ.

Concluded

Author(s)

About:

Dr. Ganesh is a 'shatavadhani' and one of India’s foremost Sanskrit poets and scholars. He writes and lectures extensively on various subjects pertaining to India and Indian cultural heritage. He is a master of the ancient art of avadhana and is credited with reviving the art in Kannada. He is a recipient of the Badarayana-Vyasa Puraskar from the President of India for his contribution to the Sanskrit language.