Author:hari

ಕಾಳಿದಾಸ ಅವರಿಗೆ ಪರಮಾರಾಧ್ಯನಾದ ಕವಿ. ಆತನ ರಘುವಂಶವನ್ನು ಸಾಂಗೋಪಾಂಗವಾಗಿ ಅವರು ಅನೇಕವರ್ಷಗಳ ಕಾಲ ಆಸಕ್ತರಿಗೆ ಪಾಠ ಹೇಳುತ್ತಿದ್ದರು. ಅವರು ಅಭಿಜ್ಞಾನಶಾಕುಂತಲವನ್ನು ಸಹಜವಾಗಿಯೇ ತುಂಬ ಮೆಚ್ಚಿಕೊಂಡಿದ್ದರು. ಇದನ್ನು ಕುರಿತು ಉಕ್ತಲೇಖನಕ್ರಮದಲ್ಲಿ ಒಂದು ಪ್ರಬಂಧವನ್ನು ತೆಲುಗಿನಲ್ಲಿ ಬರೆಸಿದ್ದರು. “ಅದ್ಭುತಶಿಲ್ಪಂಲೋ ಆರ್ಷಸಂದೇಶಂ” ಎಂಬ ಈ ಬರೆಹವನ್ನು ನಾನು ಹಸ್ತಪ್ರತಿಯಲ್ಲಿಯೇ ಓದಿದ್ದೆ. ಇದು ಕಾಳಿದಾಸನ ರೂಪಕದ ಹತ್ತಾರು ಸ್ವಾರಸ್ಯಗಳನ್ನು ಸೊಗಸಾಗಿ ವಿವರಿಸಿ ಅಲ್ಲಿಯ ಪುರುಷಾರ್ಥತತ್ತ್ವವನ್ನು ಹೃದ್ಯವಾಗಿ ನಿರೂಪಿಸಿತ್ತು. ಇದಕ್ಕೆ ಮುದ್ರಣಯೋಗ ಬರಲಿಲ್ಲ. ಈಗ ಎಲ್ಲಿದೆಯೋ ತಿಳಿಯದು. ಇದರ ನಷ್ಟ ಮಾತ್ರ ದೊಡ್ಡದೇ.

ಈ ಭಾರತಕಥಾನಕದಲ್ಲಿ ಮೂಡಿ ಬಂದಿರುವ ಸ್ನೇಹದ ಚಿತ್ರಣ ಅತ್ಯಂತ ಅಮೂಲ್ಯವಾದದ್ದು.  ಪರಸ್ಪರ ದ್ವೇಷ, ಅಸೂಯೆ, ಮತ್ಸರದ ಪ್ರಪಂಚದಲ್ಲಿಯೂ, ಸ್ನೇಹ, ಪ್ರೀತಿಗಳು ಮೊಳೆತು ಬೆಳೆಯುವ ಪ್ರಕ್ರಿಯೆ, ಒಳಿತುಕೆಡಕುಗಳ, ಸತ್ವ ರಜೋ ತಮೋಗುಣಗಳ ಸಮ್ಮಿಳನವಿಲ್ಲದೆ ಜೀವನವಿರದೆಂಬುದನ್ನು ಅಭಿವ್ಯಕ್ತಿಸುತ್ತದೆ.

ಈ ಎಲ್ಲ ಹಿನ್ನೆಲೆಯ ಕಾರಣ ಕೃಷ್ಣಮೂರ್ತಿಗಳು ಚಿಕ್ಕ ವಯಸ್ಸಿಗೇ ಕಾವ್ಯರಚನೆಗೆ ತೊಡಗಿದ್ದು ಸಹಜವಾದ ಬೆಳೆವಣಿಗೆ. “ದಾನಯಜ್ಞಮು” ಎಂಬ ಖಂಡಕಾವ್ಯವನ್ನೂ “ಶ್ರೀವಿಲಾಸಮು” ಎಂಬ ಶತಕವನ್ನೂ “ತ್ಯಾಗಶಿಲ್ಪಮು” ಎಂಬ ಮತ್ತೊಂದು ಖಂಡಕಾವ್ಯವನ್ನೂ ಅವರು ತೆಲುಗಿನಲ್ಲಿ ರಚಿಸಿದ್ದಾರೆ. ತಮ್ಮ ಸಂತೋಷಕ್ಕೆಂದೇ ಬರೆದುಕೊಂಡ ಕಾರಣ ಅನೇಕವರ್ಷಗಳ ಕಾಲ ಇವು ಪ್ರಕಟವಾಗಿರಲಿಲ್ಲ. ದಾನಯಜ್ಞವು ಮಹಾಭಾರತದ ಆಶ್ವಮೇಧಿಕಪರ್ವದಲ್ಲಿ ಬರುವ ನಕುಲೋಪಾಖ್ಯಾನವನ್ನು ಆಧರಿಸಿದೆ. ಶ್ರೀವಿಲಾಸವು ತನ್ನ ಹೆಸರಿನಿಂದಲೇ ತಿಳಿಯುವಂತೆ ಲಕ್ಷ್ಮಿಯ ಸ್ತುತಿ. ಇದು ಲಕ್ಷ್ಮಿಯನ್ನು ಕೇವಲ ಹಣಕಾಸುಗಳ ಮಟ್ಟಕ್ಕೆ ಸೀಮಿತಗೊಳಿಸದೆ ಸಾಧನ, ಸಂಪತ್ತಿ ಮತ್ತು ಸದ್ಗುಣಗಳ ಮಟ್ಟದಲ್ಲಿ ಸಾಕ್ಷಾತ್ಕರಿಸಿಕೊಳ್ಳುವ ಪ್ರಯತ್ನ. ಇಲ್ಲಿಯ ಒಂದೆರಡು ಪದ್ಯಗಳನ್ನು ಗಮನಿಸಬಹುದು: