ಸಂಸ್ಕೃತಕವಿಗಳ ಕಾವ್ಯಮೀಮಾಂಸೆ - 8
ಶೂದ್ರಕನು ನಾಯಕ-ನಾಯಿಕೆಯರನ್ನು ನಿರ್ದೇಶಿಸಿದ ಬಳಿಕ ತನ್ನ ರೂಪಕದ ವಸ್ತುವನ್ನು ಅದರ ಎಲ್ಲ ಸಂಕೀರ್ಣತೆಯೊಡನೆ ಸೂಚಿಸಿರುವುದು ಅನ್ಯಾದೃಶ. ಮೃಚ್ಛಕಟಿಕವೊಂದು ಪ್ರಕರಣವಾದ ಕಾರಣ ಇಲ್ಲಿ ವೀರರಸಕ್ಕೆ ಹೆಚ್ಚಿನ ಅವಕಾಶವಿಲ್ಲ. ಅದೇನಿದ್ದರೂ ನಾಟಕದ ದೈವ-ಮಾನುಷಭೂಮಿಕೆಗಳಿಗೆ ಸಹಜವೆನಿಸಬಲ್ಲ ರಸ. ಸಾಮಾನ್ಯರ ಬದುಕಿನಲ್ಲಿ ವೀರಾದ್ಭುತಗಳಿಗಿಂತ ಶೃಂಗಾರ-ಕರುಣ-ಹಾಸ್ಯಗಳೇ ಸಹಜ, ಸಮೃದ್ಧ. ಅದನ್ನೇ “ಸುರತೋತ್ಸವಾಶ್ರಯ” ಎಂಬ ಪದದ ಮೂಲಕ ಶೂದ್ರಕ ಅಭಿವ್ಯಂಜಿಸಿದ್ದಾನೆ. ಸಂಭೋಗಶೃಂಗಾರಕ್ಕೆ ಹಾಸ್ಯವು ಅಂಗವಾದರೆ ವಿಪ್ರಲಂಭಶೃಂಗಾರಕ್ಕೆ ಕರುಣವು ಅಂಗ. ಹೀಗೆ ಈ ಮೂರು ರಸಗಳ ಮೇಲಾಟವಿಲ್ಲಿರುವುದು ಸ್ವಯಂವೇದ್ಯ. ಪ್ರಣಯಿಗಳ ಪ್ರೀತಿಗೆ ಅಡ್ಡಿಯಾಗುವ ಅಂಶಗಳ “ಖಲಸ್ವಭಾವ” ಮತ್ತು “ವ್ಯವಹಾರದುಷ್ಟತೆ”ಗಳಲ್ಲಿ ತೋರುತ್ತವೆ.