ಸಂಸ್ಕೃತಕವಿಗಳ ಕಾವ್ಯಮೀಮಾಂಸೆ - 4
ಎಷ್ಟೋ ಬಾರಿ ನರಕವಿಗಳೂ ವರಕವಿಗಳೂ ತಮ್ಮ ಕಾವ್ಯಗಳ ಮಟ್ಟಿಗೆ ಮೌಲ್ಯನಿಷ್ಠರಾಗಿರುವರಲ್ಲದೆ ಅವುಗಳ ಆಚೆಗೆ ಸಾಮಾನ್ಯಮಾನವರಂತೆಯೇ ಮೌಲ್ಯವಿಕ್ಷೋಭೆಗಳೊಳಗೇ ಒದ್ದಾಡುತ್ತಿರುತ್ತಾರೆ. ಋಷಿಕವಿಗಳು ಮಾತ್ರ ತಮ್ಮ ಕೃತಿಯಿಂದಾಚೆಗೂ ಮೌಲ್ಯಬದ್ಧರಾಗಿರುತ್ತಾರೆ. ಈ ಕಾರಣದಿಂದಲೇ ಅವರ ಭಣಿತಿ ಮಾತ್ರವಲ್ಲದೆ ಬದುಕೂ ಕಾವ್ಯವೆನಿಸುತ್ತದೆ. ಇಂಥ ಒಂದು ಮಹತ್ತ್ವದ ಸಂಗತಿಯನ್ನು ಉತ್ತರಕಾಂಡದ ಕಡೆಯಲ್ಲಿ ಕಾಣಬಹುದು. ಪರಿತ್ಯಕ್ತಳಾದ ಸೀತೆಯನ್ನು ಮತ್ತೆ ರಾಮನು ಸ್ವೀಕರಿಸುವಂತೆ ಮಾಡುವಲ್ಲಿ ಆಸ್ಥೆಯುಳ್ಳ ವಾಲ್ಮೀಕಿಮುನಿಗಳು ಸೀತೆಯ ಚಾರಿತ್ರ್ಯಶುದ್ಧಿಯನ್ನು ಶಪಥಪೂರ್ವಕವಾಗಿ ಸಾರುತ್ತಾರೆ. ಆ ಸರ್ಗಕ್ಕೆ “ವಾಲ್ಮೀಕಿಪ್ರತ್ಯಯದಾನ”ವೆಂದೇ ಹೆಸರು (೭.೯೬).