August 2019

  ಯದ್ವಿಜ್ಞಾನಮಹಾವ್ಯೋಮ್ನಿ ಕ್ರಿಯತೇ ತಚ್ಚರಾಚರಮ್ | ತಸ್ಮೈ ಜ್ಞೇಯದರಿದ್ರಾಯ ನಮೋ ಭಾರತವೇಧಸೇ || (ವರದವಿದ್ವಾಂಸನ “ಜ್ಞಾನಪಂಜರ”ವ್ಯಾಖ್ಯಾನ) (ಯಾರ ಅನುಭವಜನ್ಯಜ್ಞಾನವೆಂಬ ಮಹಾಕಾಶದಲ್ಲಿ ಸಕಲಚರಾಚರಗಳೂ ರೂಪಿತವಾಗುವುವೋ ಅಂಥ ಭಾರತಬ್ರಹ್ಮನಿಗೆ ನಮಸ್ಕಾರ. ಆ ಕೃತಿಯೂ ಅದರ ಕರ್ತೃವೂ ನಮ್ಮ ಪಾಲಿಗೆ ತಿಳಿಯಲು ಮತ್ತಾವುದನ್ನೂ ಉಳಿಸಿಲ್ಲ.) ಭಗವಾನ್ ವೇದವ್ಯಾಸರ ಮಹಾಭಾರತ ಸಕಲಾರ್ಥಗಳಲ್ಲಿ ವಿಶ್ವಕೋಶ; ಕುಮಾರವ್ಯಾಸನು ಹೇಳುವಂತೆ “ಕಾವ್ಯಕೆ ಗುರು.” ಇದು ಕಾಮಧೇನುವಿನಂತೆ ಎಲ್ಲರ ಬಯಕೆಗಳನ್ನು ತೀರಿಸಬಲ್ಲ ತವನಿಧಿ. ಇತಿಹಾಸ, ಕಾವ್ಯ, ಕಥೆ, ಶಾಸ್ತ್ರ, ಪುರಾಣ...