ಡಿ.ವಿ.ಜಿ. ಅವರ "ಜೀವನಧರ್ಮಯೋಗ": ಸರ್ವಾನುಕೂಲ ಗೀತಾವಿವೃತಿ - 5
ಈ ಲೇಖನವನ್ನು ಸಮಾಪ್ತಿಗೊಳಿಸುವ ಮುನ್ನ ಪ್ರಕೃತ ಗ್ರಂಥದ ಕಡೆಗೆ ಬಂದಿರುವ ವರ್ಣ ಹಾಗೂ ಮತತ್ರಯಸಮನ್ವಯಗಳ ಬಗೆಗೆ ಒಂದೆರಡು ಮಾತು ಹೇಳಬೇಕು. ಡಿ.ವಿ.ಜಿ. ಅವರ ವಿಚಾರ ಇಲ್ಲಿ ಕೊಂಚ ಕುಂಠಿತವಾದಂತಿದೆ. ಜನ್ಮದಿಂದಲೇ ವರ್ಣವು ನಿರ್ಧಾರಿತವಾಗುತ್ತದೆ ಎಂಬುದು ಅವರ ನಿಲುಮೆ. ವರ್ಣನಿರ್ಣಯವು ಜನ್ಮದಿಂದಲೂ ಸಾಧ್ಯವೆಂದರೆ ಯಾವ ವಿಪ್ರತಿಪತ್ತಿಯೂ ಇಲ್ಲ; ಜನ್ಮದಿಂದ ಮಾತ್ರ ವರ್ಣನಿರ್ಣಯ ಸಾಧ್ಯವೆಂದು ಹೇಳುವುದು ಯುಕ್ತವಾಗಿ ತೋರದು. ಶ್ರೀಕೃಷ್ಣನೇ “ಚಾತುರ್ವರ್ಣ್ಯಂ ಮಯಾ ಸೃಷ್ಟಂ ಗುಣಕರ್ಮವಿಭಾಗಶಃ” (೪.೧೩) ಎಂದು ಹೇಳಿದ್ದಾನಷ್ಟೆ. ಜೊತೆಗೆ ‘ವರ್ಣ’ ಎಂಬ ಶಬ್ದದ ಧಾತುಮೂಲದ ಅರ್ಥವೇ ‘ಆಯ್ಕೆ’ಯ ಸ್ವಾತಂತ್ರ್ಯವನ್ನು ಸೂಚಿಸುತ್ತಿದೆ.