ನೋರಿ ನರಸಿಂಹಶಾಸ್ತ್ರಿಗಳ “ಕವಿಸಾರ್ವಭೌಮುಡು”: ಒಂದು ಪರಿಚಯ - 1

This article is part 1 of 3 in the series Kavisarvabhaumudu

ಈಚೆಗೆ ನಮ್ಮ ದೇಶದ ಒಳಗೂ ಹೊರಗೂ ಭಾರತೀಯಪರಂಪರೆಯನ್ನು ಕುರಿತು ಕುತೂಹಲ ಮತ್ತು ನವೋತ್ಸಾಹಗಳು ಹೊಮ್ಮಿದಂತೆ ತೋರುತ್ತದೆ. ಈ ಮಾರ್ಪಾಡು ಸ್ವಾಗತಾರ್ಹವೇನೋ ದಿಟ, ಆದರೆ ಅದೆಷ್ಟೋ ಬಾರಿ ಇಂಥ ಕುತೂಹಲ-ಉತ್ಸಾಹಗಳು ಅತಿರೇಕ-ಅವಿವೇಕಗಳಿಂದಲೂ ಅವ್ಯುತ್ಪತ್ತಿ-ಅಸಾಮರ್ಥ್ಯಗಳಿಂದಲೂ ಕೂಡಿರುವುದು ವಿಷಾದಕರ. ವಿಶೇಷತಃ ಪ್ರಾಚೀನಭಾರತೀಯಸಮಾಜ ಮತ್ತು ಇತಿಹಾಸ-ಪುರಾಣಗಳನ್ನು ಆಧರಿಸಿದ ಕಥೆ-ಕಾದಂಬರಿಗಳಂಥ ರಸಪ್ರಧಾನವಾದ ಕಾಲ್ಪನಿಕರಚನೆಗಳನ್ನು ವಿವಿಧಭಾರತೀಯಭಾಷೆಗಳಲ್ಲಿಯೂ — ಎಲ್ಲಕ್ಕಿಂತ ಮಿಗಿಲಾಗಿ ಇಂಗ್ಲಿಷ್ ನಲ್ಲಿಯೂ — ನಡಸುತ್ತಿರುವ ಹೊಸ ಪೀಳಿಗೆಯ ಬರೆಹಗಾರರ ಪೂರ್ವೋಕ್ತರೀತಿಯ ಕುಂದು-ಕೊರತೆಗಳನ್ನು ಕಂಡಾಗ ನನ್ನಂಥವರ ವ್ಯಥೆ ಮತ್ತೂ ಹೆಚ್ಚಾಗುತ್ತದೆ. ಇಂದೇನೋ ಮಾಹಿತಿಯ ಯುಗದ ಮಹಾಪೂರದಲ್ಲಿ, ತಂತ್ರಜ್ಞಾನದ ಮೇಲಾಟದಲ್ಲಿ, ವಿಷಯಸಂಗ್ರಹ ಮತ್ತು ಮುದ್ರಣ-ವಿತರಣಗಳಿಗೆ ಕಷ್ಟವಿಲ್ಲದಿದ್ದರೂ ಮೂಲಭೂತವಾದ ಪ್ರತಿಭೆ, ಪಾಂಡಿತ್ಯ ಮತ್ತು ಪರಿಶ್ರಮ ಅಥವಾ ಅಭ್ಯಾಸಗಳಿಗೇ ತೀರದ ಕೊರತೆಯಾಗಿದೆ. ಇದನ್ನು ತುಂಬಿಕೊಡಬಲ್ಲ ಯಾವುದೇ ಬಾಹ್ಯಾಲಂಬನವಿಲ್ಲವೆಂಬುದು ಕಠೋರವಾಸ್ತವ. ಹೀಗಾಗಿಯೇ ನಮ್ಮ ನಡುವೆ ದೇವದತ್ತ ಪಟ್ನಾಯಕರೂ ಅಮೀಶ್ ತ್ರಿಪಾಠಿಗಳೂ ಇವರದೇ ಪ್ರತಿಚ್ಛಾಯೆಗಳೆನ್ನಬಹುದಾದ ಮತ್ತಿತರರೂ ಉದ್ವೇಜಕರಾಗಿದ್ದಾರೆ. ಇಂಥ ಅವಸರ್ಪಿಣೀಕಾಲದಲ್ಲಿ ನಾವು ಕಳೆದ ಶತಮಾನದ ಪೂರ್ವಾರ್ಧದಲ್ಲಿ ನಡೆದ ಭಾರತೀಯಭಾಷಾ-ಸಾಹಿತ್ಯಗಳ ಪುನರುಜ್ಜೀವನಪ್ರಕಲ್ಪವು ಎಂಥ ಉಜ್ಜ್ವಲೋಜ್ಜ್ವಲಕೃತಿರತ್ನಗಳನ್ನೂ ರಸನಿರ್ಮಾತೃಗಳನ್ನೂ ಸೃಜಿಸಿತೆಂಬುದನ್ನು ನೆನೆದರೆ ವರ್ತಮಾನದ ಲೇಖಕರಿಗೆ ಭಾವಿಭವ್ಯತೆಯುಂಟಾದೀತೆಂಬುದು ನಮ್ಮ ಮನೀಷೆ. ಮುಖ್ಯವಾಗಿ ಆ ಕಾಲದ ಅತ್ಯುತ್ತಮ ಐತಿಹಾಸಿಕಕಾದಂಬರಿಗಳನ್ನು ಬರೆದ ಪಂಕ್ತಿಪಾವನರನ್ನು ಅವರ ಕೃತಿಪರಿಚಯಪುರಸ್ಸರವಾಗಿ ಪರ್ಯಾಲೋಚಿಸುವುದು ಸಮುಚಿತ. ಈ ನಿಟ್ಟಿನಲ್ಲಿ ತೆಲುಗಿನ ಅಸಾಮಾನ್ಯಲೇಖಕ ನೋರಿ ನರಸಿಂಹಶಾಸ್ತ್ರಿಗಳು ಅಗ್ರಸ್ಮರಣೀಯರು. ಇವರ ಮರೆಯಬಾರದ ರಚನೆಗಳಲ್ಲೊಂದು “ಕವಿಸಾರ್ವಭೌಮುಡು” ಕಾದಂಬರಿ. ಪ್ರಕೃತಲೇಖನವು ಇದರ ಸರಳಪರಿಚಯ.

ನೋರಿ ನರಸಿಂಹಶಾಸ್ತ್ರಿಗಳ ಕಾಲ ೧೯೦೦-೧೯೭೮. ಅವರು ಆಂಧ್ರದಲ್ಲಿ ಕೋನಸೀಮೆಯೆಂದು ಹೆಸರಾದ ಕರಾವಳಿಯವರು; ವೃತ್ತಿಯಿಂದ ವಕೀಲರು. ತಮ್ಮ ಕಡೆಗಾಲದವರೆಗೂ - ಎಂದರೆ ಸುಮಾರು ಅರವತ್ತು ವರ್ಷಗಳ ಕಾಲ - ಸಾಹಿತ್ಯಕೃಷಿಯನ್ನು ಗೈದವರು. ತಮ್ಮನ್ನು ಎಲ್ಲ ಸಾಹಿತ್ಯಪ್ರಕಾರಗಳಲ್ಲಿಯೂ ತೊಡಗಿಸಿಕೊಂಡವರು. ವಿಶೇಷತಃ ತಮ್ಮ ಕಾದಂಬರಿಗಳಿಂದ ಪ್ರಸಿದ್ಧರಾದ ಇವರು ಒಟ್ಟು ಏಳು ಕಾದಂಬರಿಗಳನ್ನು ರಚಿಸಿದ್ದಾರೆ. ಇವೆಲ್ಲ ಐತಿಹಾಸಿಕಗಳೇ ಆಗಿವೆಯೆಂಬುದು ಗಮನಾರ್ಹ. ಇದಲ್ಲದೆ ಪದ್ಯಕಾವ್ಯ, ಚಂಪೂಕಾವ್ಯ ನಾಟಕ, ವೈದುಷ್ಯಪೂರ್ಣಪ್ರಬಂಧಗಳನ್ನೂ ರಚಿಸಿದ್ದಾರೆ[1]. ತಂತ್ರ-ಜ್ಯೌತಿಷ-ಶ್ರೀವಿದ್ಯಾದಿಗಳಿಗೆ ಖ್ಯಾತರಾಗಿದ್ದ ಆಂಧ್ರದ ವಿಮಲಾನಂದಭಾರತೀ ಎಂಬ ಯತಿಗಳಿಂದ ನೋರಿಯವರು ಶ್ರೀವಿದ್ಯಾದೀಕ್ಷಿತರಾಗಿದ್ದರು. ಬಹುಶಃ ಹೀಗಾಗಿಯೇ ಇವರ ಕಾದಂಬರಿಗಳಲ್ಲಿ ಒಂದಿಲ್ಲೊಂದುಕಡೆ ಶ್ರೀಚಕ್ರಪೂಜೆಯ ಕಲಾಪವಿರುತ್ತದೆ. ಆದರೆ ಇದು ಕಥಾಸಂವಿಧಾನದಲ್ಲಿ ಪ್ರಶಸ್ತವಾಗಿ ಹೊಂದಿರುತ್ತದೆಂಬುದೂ ತಥ್ಯ. ಇವರು ವೃತ್ತಿಯಿಂದ ವಕೀಲರಾಗಿದ್ದರಿಂದ, ಇವರ ಸಂಶೋಧನದೃಷ್ಟಿಯು ಪ್ರಾಚೀನಭಾರತದ ಸಮಾಜವ್ಯವಸ್ಥೆ, ಕಾನೂನು, ಆಡಳಿತ ಇತ್ಯಾದಿಗಳನ್ನು ಒಳಗೊಂಡಿದೆ. ಈ ಕಾರಣದಿಂದಲೇ ಅವರ ಕಾದಂಬರಿಗಳಲ್ಲಿ ಈ ಪರಿಜ್ಞಾನದ ಸೊಗಸಾದ ಅನ್ವಯವನ್ನು ಕಾಣಬಹುದು.

ಇವರ ಮೊದಲ ಕಾದಂಬರಿ “ವಾಘಿರಾ” ಅಜಂತಾಗುಹೆಗಳ ಹಿನ್ನೆಲೆಯಲ್ಲಿ ರೂಪುಗೊಂಡಿದೆ. ವಾಘಿರಾ ಎಂಬುದು ಆ ಗುಹೆಗಳ ಬಳಿ ಹರಿಯುವ ಸಣ್ಣದೊಂದು ಝರಿ. ಇಮ್ಮಡಿಪುಲಕೇಶಿಯ ಕಾಲದಲ್ಲಿ ಆ ಗುಹೆಗಳೊಳಗೆ ಚಿತ್ರಣ-ಶಿಲ್ಪನಗಳು ನಡೆಯುತ್ತಿದ್ದವು. ಅಲ್ಲಿಯ ಚಿತ್ರಗಳನ್ನು ಆಧರಿಸಿ ನೋರಿಯವರೇ ಕಲ್ಪಿಸಿದ ಹೃದಯಭೇದಕವಾದ ಮಾರ್ಮಿಕಪ್ರೇಮಕಥಾನಕವಿದು[2]. ಇದಾದ ಬಳಿಕ ಇವರು ತೆಲುಗಿನ ಕವಿಗಳ ಬಗೆಗೆ ಕಾದಂಬರಿಗಳನ್ನು ಬರೆದರು. ಇವುಗಳ ಪೈಕಿ ಮೂರು ಆಂಧ್ರಮಹಾಭಾರತದ ರಚನೆಗೆ ಸಂಬಂಧಿಸಿದವು; ಇನ್ನು ಮೂರು ಇತರಕವಿಗಳನ್ನು ಕುರಿತಿವೆ.

ಮಹಾಭಾರತವನ್ನು ತೆಲುಗಿನಲ್ಲಿ ಮೂವರು ಕವಿಗಳು ಒಂದೊಂದು ಶತಮಾನಗಳ ಅಂತರದಲ್ಲಿ ಮೂಲಕ್ಕೆ ನಿಷ್ಠವಾಗಿ ಪುನಾರಚಿಸಿದರು: ಹನ್ನೊಂದನೆಯ ಶತಮಾನದಲ್ಲಿ ನನ್ನಯ್ಯಭಟ್ಟ, ಹದಿಮೂರನೆಯ ಶತಮಾನದಲ್ಲಿ ತಿಕ್ಕನಸೋಮಯಾಜಿ ಹಾಗೂ ಹದಿನಾಲ್ಕನೆಯ ಶತಮಾನದಲ್ಲಿ ಎರ್ರನ ಅಥವಾ ಎರ್ರಾ ಪ್ರೆಗ್ಗಡ. ನನ್ನಯ್ಯನು ಬರೆದದ್ದು ಎರಡೂಮುಕ್ಕಾಲು ಪರ್ವಗಳು ಮಾತ್ರ. ಅರಣ್ಯಪರ್ವವನ್ನು ಬರೆಯುತ್ತಿದ್ದಾಗ ಆತನು ಕೊನೆಯುಸಿರೆಳೆದ. ಅರಣ್ಯಪರ್ವದ ಉಳಿದ ಭಾಗವನ್ನೂ ಪರಿಶಿಷ್ಟಪ್ರಾಯವಾದ ಹರಿವಂಶವನ್ನೂ ಎರ್ರನನು ರಚಿಸಿದನು. ವಿರಾಟಪರ್ವದಿಂದ ಸ್ವರ್ಗಾರೋಹಣದವರೆಗೆ ಹದಿನೈದು ಪರ್ವಗಳನ್ನು ತಿಕ್ಕನಸೋಮಯಾಜಿಯು ನಿರ್ಮಿಸಿದನು. ನೋರಿ ನರಸಿಂಹಶಾಸ್ತ್ರಿಗಳು ಈ ಮೂರು ಕಾಲಘಟ್ಟಗಳನ್ನೂ ಆಶ್ರಯಿಸಿ ತಮ್ಮ ಕಾದಂಬರಿಗಳನ್ನು ರೂಪಿಸಿದರು – ನನ್ನಯ್ಯನ ಕಾಲವನ್ನು ಕುರಿತದ್ದು “ನಾರಾಯಣಭಟ್ಟು”, ತಿಕ್ಕನಸೋಮಯಾಜಿಯ ಕಾಲವನ್ನು ಕುರಿತದ್ದು “ರುದ್ರಮದೇವಿ” ಮತ್ತು ಎರ್ರನನ ಕಾಲವನ್ನು ಕುರಿತದ್ದು “ಮಲ್ಲಾರೆಡ್ಡಿ”. ಈ ಕಾದಂಬರಿಗಳಲ್ಲಿ ಆಯಾ ಕವಿಗಳು ಮುಖ್ಯಪಾತ್ರಗಳಾಗಿ ಕಾಣಿಸಿಕೊಳ್ಳುತ್ತಾರಾದರೂ ಇತಿವೃತ್ತದ ವಿಪುಲಘಟನೆಗಳ ನಡುವೆ ಯಾವ ಸಕ್ರಿಯಪಾತ್ರವೂ ಅವರಿಗಿಲ್ಲ. ಹಾಗಾಗಿ ಆಯಾ ಕವಿಗಳ ಹೆಸರುಗಳು ಕಾದಂಬರಿಗಳ ಶೀರ್ಷಿಕೆಯಲ್ಲಿಲ್ಲವೆಂಬುದು ಔಚಿತ್ಯಪೂರ್ಣವೇ ಆಗಿದೆ. ಅಲ್ಲದೆ, ಕವಿಯೊಬ್ಬ ಕ್ರಾಂತಿಕಾರಿಯೂ ಸಮಾಜನಾಯಕನೂ ರಾಜ್ಯತಂತ್ರಧುರಂಧರನೂ ಆಗಿ ಜನತೆಯನ್ನು ಮುನ್ನಡೆಸುವ ಇಲ್ಲವೆ ತನ್ನ ಕಾಲದ ಎಲ್ಲ ಆಗು-ಹೋಗುಗಳ ಮೇಲೆ ನಿರ್ಣಯಾತ್ಮಕವಾದ ಪ್ರಭಾವವನ್ನು ಬೀರುವ ದಾಯಿತ್ವವನ್ನು ಹೊಂದಿರಲೇಬೇಕೆಂಬ ನಿಯಮವಾವುದೂ ಇಲ್ಲ. ಜೊತೆಗೆ, ಇಂಥ ಸಕ್ರಿಯ-ಸಾರ್ವಜನಿಕಮನಸ್ಸು ಕಲ್ಪನಶೀಲಕಾವ್ಯನಿರ್ಮಾಣಕ್ಕೆ ಸಮರ್ಥವಾಗಿರುತ್ತದೆಂಬುದೂ ಸಂದೇಹಾಸ್ಪದ.

ಯಾವಾಗೆಲೆಲ್ಲ ಸನಾತನಧರ್ಮಕ್ಕೆ ಧಕ್ಕೆಯೊದಗಿತೋ – ವಿಶೇಷತಃ ಆಂಧ್ರದಲ್ಲಿ – ಆಗೆಲ್ಲ ಮಹಾಭಾರತವನ್ನು ಮತ್ತೆ ಮರುಕಳಿಸಿಕೊಳ್ಳಬೇಕೆಂಬುದು ಜನಜೀವನಸಮಷ್ಟಿಯ ಸುಪ್ತಮನೀಷೆಯಾಗಿತ್ತೆಂದು ನೋರಿಯವರ ದರ್ಶನ. ಹೀಗಾಗಿ ಸನಾತನಧರ್ಮದ ಪುನರುತ್ಥಾನಕ್ಕಾಗಿ ಆಯಾ ಕಾಲದ ಕವಿಗಳಿಗೆ ಮಹಾಭಾರತವು ಒದಗಿಬಂದಿತು. ನನ್ನಯ್ಯನ ಕಾಲದಲ್ಲಿ ಬೌದ್ಧರ, ತಿಕ್ಕನನ ಕಾಲದಲ್ಲಿ ಜೈನರ ಹಾಗೂ ಎರ್ರನನ ಕಾಲದಲ್ಲಿ ಮುಸಲ್ಮಾನರ ಮೂಲಕ ಉಪಪ್ಲವವುಂಟಾಯಿತು. ಅದೊಂದು ಸಂಕ್ಷೋಭಯುಗ. ಆಗೆಲ್ಲ ಮಹಾಭಾರತಸ್ಫೂರ್ತಿಯು ಅವಶ್ಯವೆನಿಸಿ ಈ ಕವಿಗಳು ಆಂಧ್ರಭಾರತದ ರಚನೆ-ಪೂರಣಗಳಲ್ಲಿ ತೊಡಗಿಕೊಂಡರು. ಇವರನ್ನು ತೆಲುಗಿನಲ್ಲಿ “ಕವಿತ್ರಯಮು” ಎನ್ನುವುದು ವಾಡಿಕೆ. ಇವರ ಭಾಷೆಯೇ ತೆಲುಗಿಗೆ ಪ್ರಮಾಣ. ಹಳೆಯ ತೆಲುಗುನುಡಿಯ ವ್ಯಾಕರಣಕ್ಕಾಗಲಿ, ಅಭಿಜಾತಕಾವ್ಯರಚನಾಪದ್ಧತಿಗಾಗಲಿ ಇವರನ್ನೇ ನಚ್ಚತಕ್ಕದ್ದು; ಮುಂದಿನ ಕವಿಗಳಿಗೆಲ್ಲ ಇವರೇ ಮಾರ್ಗದರ್ಶನ — ಎಂಬಷ್ಟರ ಮಟ್ಟಿಗೆ ಇವರ ಪ್ರಭಾವ.

ಉಳಿದ ಕವಿಗಳ ಪೈಕಿ ಹದಿನೈದನೆಯ ಶತಮಾನದಲ್ಲಿದ್ದ ಶ್ರೀನಾಥ ಮತ್ತು ಪೋತನರ ಬಗೆಗೂ ನೋರಿಯವರು ಕಾದಂಬರಿಗಳನ್ನು ಬರೆದರು. ತೆಲುಗಿನಲ್ಲಿ ಕಾವ್ಯರಚನೆಯು ನಿರಾಡಂಬರವಾದ ಆರ್ಷಕಥಾನಕದ ರೂಪದಿಂದ ಸಾಲಂಕೃತವಾದ ಕಲಾಕೌಶಲವುಳ್ಳ ಮಹಾಕಾವ್ಯಪ್ರಕಾರಕ್ಕೆ ಹೊರಳಿದ್ದು ಶ್ರೀನಾಥನಿಂದ. ಇವನಿಗೆ ಒಂದು ತಲೆಮಾರು ಹಿಂದಿನವನಾದ ನಾಚನ ಸೋಮನನೆಂಬುವವನು ಈ ದಾರಿಯಲ್ಲಿ ಮೊದಲಿಗನೆಂದು ಕೆಲವರು ಹೇಳುವರಾದರೂ ಶ್ರೀನಾಥನ ಪಥಪ್ರದರ್ಶಕತೆಯ ಮಹತ್ತ್ವಕ್ಕೆ ಕುಂದೇನಿಲ್ಲ. ಸಾಮಾನ್ಯವಾಗಿ ಕವಿಗಳು ಯಾವುದೋ ಒಬ್ಬ ರಾಜನ ಅಸ್ಥಾನದಲ್ಲಿ ಸ್ಥಾಪಿತರಾಗಿರುತ್ತಿದ್ದರು ಇಲ್ಲವೆ ತಮ್ಮ ಪಾಡಿಗೆ ತಮ್ಮ ಸ್ಥಳದಲ್ಲಿರುತ್ತಿದ್ದರು. ಆದರೆ ಶ್ರೀನಾಥನು ಅನೇಕ ರಾಜರುಗಳ ಆಸ್ಥಾನಗಳಿಗೆ ಭೇಟಿಯಿತ್ತ, ದೇಶವನ್ನೆಲ್ಲ ಸುತ್ತಿದ, ಪರಸ್ಥಳಗಳಲ್ಲೆಲ್ಲ ಓಡಾಡಿದ. ಇವನು ಚಮತ್ಕಾರಭರಿತವಾದ ಕಾವ್ಯಸಾಮಾನ್ಯವನ್ನು ಪಂಡಿತ-ಪಾಮರನಿರಪೇಕ್ಷವಾಗಿ ಲೋಕಪ್ರಸಿದ್ಧವಾಗಿಸಿದನು ಹಾಗೂ ಇಂಥ ಕಾವ್ಯರಚನೆಯನ್ನು ಲಾಭದಾಯಕವಾದ ಉದ್ಯಮವೆಂಬಂತೆ ಸ್ಥಾಪಿಸಿದನು. ಅನ್ಯಭಾಷೆಗಳಲ್ಲಿಯೂ ಒಬ್ಬಿಬ್ಬರು ಇಂಥವರು ಇದ್ದಿರಬಹುದಾದರೂ ತೆಲುಗಿನಲ್ಲಿ ಇದನ್ನು ಅದ್ವಿತೀಯವಾಗಿ ಸಾಧಿಸಿದವನು ಶ್ರೀನಾಥ. ಇವನೊಬ್ಬ ಆಗರ್ಭಪಂಡಿತ, ಬಹುಶಾಸ್ತ್ರ-ಭಾಷಾಪರಿಣತ ಹಾಗೂ ಸಂದರ್ಭಶುದ್ಧಿಯಿಂದ ಉದ್ದಂಡಪ್ರೌಢಕವಿತೆಯನ್ನು ಸೊಗಸಾದ ನುಡಿಕಾರ-ಚಮತ್ಕಾರಗಳ ಮೂಲಕ ಆಶುಧಾರೆಯಾಗಿ ಹೇಳಬಲ್ಲ ಆತ್ಮವಿಶ್ವಾಸಿ. ಮಾತ್ರವಲ್ಲ, ತನ್ನ ಕವಿರಾಜಸತ್ವಕ್ಕೆ ಹೆಗಲೆಣೆಯಾಗಬಲ್ಲ ರಾಸಿಕ್ಯದಿಂದ ತನ್ನ ಕಾಲದಲ್ಲಿಯೇ ದಂತಕಥೆಯಾಗಿಹೋದ ವಿಶಿಷ್ಟವ್ಯಕ್ತಿ. ಈತನ ಅಜ್ಜ ಕಮಲನಾಭಾಮಾತ್ಯನು ವ್ಯವಹಾರನಿಸ್ಸೀಮ, ಮಂತ್ರಿಪದವಿಯಲ್ಲಿದ್ದವನು. ಈತನ ತಂದೆ ಮಾರನನೂ ಬಹುಶಃ ಆರ್ಥಿಕವಾಗಿ ಅನುಕೂಲಸ್ಥನಾಗಿದ್ದವನು. ಹೀಗಾಗಿ ಶ್ರೀನಾಥನು ನಿಸ್ಸೀಮನಾಗರಕನೆನಿಸಿದ್ದ. ಈ ಕಾರಣದಿಂದಲೇ ಈತನು ಮಹಾಶಿವಭಕ್ತನಾಗಿದ್ದರೂ ಭೋಗಜೀವಿ.

ಶ್ರೀನಾಥನ ಕಿರಿಯ ಸಮಕಾಲೀನನೇ ಬಮ್ಮೆರ ಪೋತನ. ಈತನು ಸರಳಜೀವಿ, ಭಕ್ತಕವಿ. ಜನಮಾನಸದಲ್ಲಿ ಉಳಿಯುವಂತೆ ಇಂಪಾದ ಪದಪದ್ಧತಿಯಿಂದ ಪೋತನನು ಶ್ರೀಮನ್ಮಹಾಭಾಗವತವನ್ನು ರಚಿಸಿದ. ಆಂಧ್ರದ ಬಹುಜನಾರಾಧ್ಯನಾದ ಕವಿಯೆಂದರೆ ಪೋತನನೊಬ್ಬನೇ. ನೋರಿಯವರು ಇವರಿಬ್ಬರನ್ನೂ ಒಟ್ಟಿಗೆ “ಕವಿದ್ವಯಮು” ಎಂದು ಕರೆದಿದ್ದಾರೆ. ಶ್ರೀನಾಥನ ಬಗೆಗೆ “ಕವಿಸಾರ್ವಭೌಮುಡು[3]” ಹಾಗೂ ಪೋತನನ ಬಗೆಗೆ “ಸಹಜಪಾಂಡಿತ್ಯುಡು” ಕಾದಂಬರಿಗಳನ್ನು ರಚಿಸಬೇಕೆಂದು ಸಂಕಲ್ಪಿಸಿದ್ದ ಶಾಸ್ತ್ರಿಗಳು, ಆ ಬಳಿಕ “ಸಹಜಪಾಂಡಿತ್ಯುಡು” ಎಂಬ  ಕಾದಂಬರಿಗೆ ಬದಲಾಗಿ “ಕವಿದ್ವಯಮು” ಎಂಬ ಕೃತಿಯನ್ನು ರಚಿಸಿದರು. ಪೋತನನ ಬಗೆಗೆ ಸ್ವತಂತ್ರವಾಗಿ “ಸಹಜಪಾಂಡಿತ್ಯುಡು” ಎಂಬ ಕಾದಂಬರಿಯನ್ನು ಬರೆಯಲು ತುಸುಮಟ್ಟಿಗೆ ತೊಡಕೆನಿಸುವಂತೆ  ಶ್ರೀನಾಥನ ಪಾತ್ರವು ವ್ಯಾಪಿಸಿಕೊಂಡಿದ್ದುದರಿಂದ “ಕವಿಸಾರ್ವಭೌಮುಡು” ಕೃತಿಯ ಮುಂದಿನ ಭಾಗವೆಂಬಂತೆ “ಕವಿದ್ವಯಮು” ಗ್ರಂಥವನ್ನು ರಚಿಸಿದರು. ಕಟ್ಟಕಡೆಗೆ ಅವರು ಬರೆದದ್ದು ಹದಿನಾರನೆಯ ಶತಮಾನದಲ್ಲಿ ಕೃಷ್ಣದೇವರಾಯನ ಆಸ್ಥಾನದಲ್ಲಿದ್ದು, ಕಡೆಗೆ ವಿರಕ್ತನಾಗಿ ಅದನ್ನು ತ್ಯಜಿಸಿದ ಉತ್ಕಟಭಕ್ತಿ-ರಕ್ತಿಗಳ ಕವಿಯೊಬ್ಬನ ಜೀವನವನ್ನು ಆಧರಿಸಿದ ಕಾದಂಬರಿ - “ಧೂರ್ಜಟಿ”.

NORI NARASIMHA SASTRY

ನೋರಿಯವರು ಈ ಏಳು ಕಾದಂಬರಿಗಳನ್ನಲ್ಲದೆ ಕೆಲವು ಗೀತನಾಟಕಗಳನ್ನೂ ಪದ್ಯನಾಟಕಗಳನ್ನೂ ಖಂಡಕಾವ್ಯಗಳನ್ನೂ ರಚಿಸಿದರು. ದೇವೀಭಾಗವತವನ್ನು ಪ್ರೌಢವಾಗಿ ಚಂಪೂಶೈಲಿಯಲ್ಲಿ ತೆಲುಗಿಗೆ ಅನೂದಿಸಿದರು. ತೆಲುಗಲ್ಲದೆ ಇವರಿಗೆ ಕನ್ನಡ[4], ಸಂಸ್ಕೃತ, ಪ್ರಾಕೃತ, ಹಿಂದಿ, ಆಂಗ್ಲಭಾಷೆಗಳಲ್ಲಿ ಒಳ್ಳೆಯ ತಿಳಿವಳಿಕೆಯಿದ್ದಿತು. ಕೋನಸೀಮೆಯ ರೇಪಲ್ಲೆ ಎಂಬ ಊರಿನಲ್ಲಿ ವಕೀಲವೃತ್ತಿ ಮಾಡುತ್ತಿದ್ದ ಇವರು ಅಪ್ಪಟ ಸಂಪ್ರದಾಯಸ್ಥರು; ಸನಾತನಧರ್ಮದಲ್ಲಿ ಎಣೆಯಿಲ್ಲದ ಅಭಿಮಾನ-ಆರಾಧನೆಗಳನ್ನು ತಳೆದಿದ್ದರು.  ಇವರು ಖ್ಯಾತರಾದದ್ದು ಕಾದಂಬರಿಗಳಿಂದಲೇ ಆದರೂ ಜನರು ಇವರನ್ನು “ಕವಿಸಮ್ರಾಟ್” ಎನ್ನುತ್ತಿದ್ದರು. ಇದಕ್ಕೆ ಕಾರಣ ಅವರ ಕಾದಂಬರಿಗಳೆಲ್ಲ ಗದ್ಯಕಾವ್ಯವೆಂಬ ಗೌರವಕ್ಕೆ ಪಾತ್ರವಾಗುವಂಥ ಭಾಷೆ, ರೀತಿ, ಉಕ್ತಿವೈಚಿತ್ರ್ಯ ಮತ್ತು ಇತಿವೃತ್ತನಿರ್ಮಾಣಗಳನ್ನು ಹೊಂದಿರುವುದೇ ಆಗಿದೆ. ಅಭಿಜಾತಕೃತಿಗಳ ಜೊತೆಗೆ ಇಂದಿಗೂ ಇಡಿಯ ಆಂಧ್ರದಲ್ಲಿ ಇವರ ಕಾದಂಬರಿಗಳೇ ಪ್ರಚುರವಾಗಿರುವುದು ಇದಕ್ಕೊಂದು ಸುಂದರಸಮರ್ಥನೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಪುರಸ್ಕಾರವೂ ಇವರಿಗೆ ಸಾರ್ಥಕವಾಗಿ ಸಂದಿದೆ. ಐತಿಹಾಸಿಕಕಾದಂಬರಿಗಳ ರಚನೆಗೆ ಅನಿವಾರ್ಯವಾದ ವಿದ್ವದ್ವ್ಯವಸ್ಥೆಗಳೆನ್ನಬಹುದಾದ ಆಕರಸಾಮಗ್ರಿ, ಗ್ರಂಥಾಲಯಸೌಲಭ್ಯ, ತಜ್ಞರ ನೆರವು, ಮಾಹಿತಿಯ ಸಮೃದ್ಧಿ ಹಾಗೂ ಕ್ಷೇತ್ರಕಾರ್ಯಾನುಕೂಲತೆಗಳು ದುರ್ಮಿಳವೂ ದುಶ್ಶಕವೂ ಆಗಿದ್ದ ಆ ಕಾಲದಲ್ಲಿಯೂ ಇವರ ರಚನೆಗಳೆಲ್ಲ ಪ್ರಬುದ್ಧಸಂಶೋಧನೆ, ಸಮರ್ಥಸಾಕ್ಷ್ಯಸಮೃದ್ಧಿ ಹಾಗೂ ವಿಪುಲ ಆಕರಸಾಮಗ್ರಿಗಳಿಂದ ಕೂಡಿರುವುದು ದಿಟವಾಗಿ ಪ್ರಶಂಸನೀಯವಿಸ್ಮಯ. ವಿಶೇಷತಃ ಆ ಕಾಲದ ಸಾಂಸ್ಕೃತಿಕ-ರಾಜಕೀಯ-ಮತೀಯಜೀವನಚಿತ್ರಣವು ನೋರಿಯವರಿಂದ ಸಾಗಿದಂತೆ ಬೆರಳೆಣಿಕೆಯ ಭಾರತೀಯಲೇಖಕರಿಂದಲೂ ಆಗಿಲ್ಲವೆಂಬುದು ಅವರ ಮಹತ್ತ್ವಕ್ಕೆ ಸೂರ್ಯಸಾಕ್ಷಿ.

ಈ ಮಟ್ಟದ ಸಮಗ್ರವೈದುಷ್ಯವು ಇನ್ನಿತರ ದೇಶಭಾಷೆಗಳ ಅನೇಕಕಾದಂಬರಿಗಳಲ್ಲಿ ಕಾಣಸಿಗವು. ಇವರಿಗೆ ಕೆಲಮಟ್ಟಿಗೆ ಹೋಲಿಕೆಯಾಗಬಲ್ಲವರೆಂದರೆ ಹಿಂದಿಯ ರಾಹುಲ ಸಾಂಕೃತ್ಯಾಯನರು. ಆದರೆ ಇವರ ಕಥೆ-ಕಾದಂಬರಿಗಳ ಜಾಡೇ ಬೇರೆಯ ತೆರನಾದುದು. ಮುಖ್ಯವಾಗಿ ಕಟ್ಟಾ ಕಮ್ಯೂನಿಸ್ಟ್ ಆದ ರಾಹುಲರು ಆ ಬಣ್ಣದ ಗಾಜಿನಿಂದಲೇ ಭಾರತೀಯೇತಿಹಾಸ ಮತ್ತು ಸಂಸ್ಕೃತಿಗಳನ್ನು ನೋಡುವ ಕಾರಣ ಸತ್ಯವನ್ನು ತಿರುಚುವ ಹಾಗೂ ವಿಕೃತನಿಗಮನಗಳನ್ನೇ ಮಾಡುವ ಚಾಳಿಯನ್ನು ತಮ್ಮ ಯಾವ ಕೃತಿಯಲ್ಲಿಯೂ ಬಿಡಲಾರರು. ಹೀಗಾಗಿ ಅವರ ವಿದ್ವತ್ತೆಯಾಗಲಿ, ಭಾಷೆ ಮತ್ತು ಕಥನತಂತ್ರಗಳಾಗಲಿ ಅವೆಷ್ಟು ಉನ್ನತವಾಗಿದ್ದರೂ ಸತ್ಯಾನ್ವೇಷಿಗಳಾದ ಸಹೃದಯರಿಗೆ ಸಂತೋಷವನ್ನೀಯವು. ದೇವುಡು ನರಸಿಂಹಶಾಸ್ತ್ರಿಗಳು ಪೌರಾಣಿಕಕಾದಂಬರಿಗಳಿಗೆ ಪರಮಾದರ್ಶರಿದ್ದಂತೆ ಐತಿಹಾಸಿಕಕಾದಂಬರಿಗಳಿಗೆ ನೋರಿಯವರು ಪರಮಾದರ್ಶರೆನ್ನಬಹುದು. ನೋರಿಯವರ ಕಾದಂಬರಿಗಳಲ್ಲಿನ ಎಲ್ಲ ಪಾತ್ರಗಳೂ ಪ್ರಾಯಿಕವಾಗಿ ಶಿಷ್ಟ, ದುಷ್ಟ, ವಿಶಿಷ್ಟ, ಸಾಮಾನ್ಯ ಮೊದಲಾದ ನಿರ್ದಿಷ್ಟಗುಣೈಕವರ್ಗದವು. ಹೀಗಾಗಿ ಇವುಗಳಲ್ಲಿ ಆತ್ಮವಿಶ್ಲೇಷಣೆಯಿರದು (Introspection). ತನ್ನ ಪಾತ್ರಗಳೊಳಗೆ ಇಂಥ ಆತ್ಮವಿಶ್ಲೇಷಣೆಯನ್ನುಳ್ಳ ಸಾಹಿತ್ಯಕೃತಿಯು ಕೆಲವೇ ಭಾಗಗಳಲ್ಲಿ, ಕೆಲವೇ ಪಾತ್ರಗಳಲ್ಲಿ ಮಾತ್ರ ನಮ್ಮ ಅಭಿನಿವೇಶವು ನೆಲೆಯಾಗುವುದನ್ನು ನಿವಾರಿಸುತ್ತದೆ. ವಾಲ್ಟರ್ ಸ್ಕಾಟ್, ಅಲೆಕ್ಸಾಂಡರ್ ಡ್ಯೂಮಾ, ಲ್ಯೂ ವಾಲೇಸ್ ಮುಂತಾದ ಹದಿನೆಂಟು-ಹತ್ತೊಂಬತ್ತನೆಯ ಶತಮಾನದ ಅನೇಕಪಾಶ್ಚಾತ್ಯಕಾದಂಬರಿಕಾರರದು ಇದೇ ರೀತಿ. ಸ್ವಾತಂತ್ರ್ಯಕ್ಕಾಗಿ ಹೋರಾಟ, ದೇಶಭಕ್ತಿ ಮತ್ತಿತರ ಮಹಾಮೌಲ್ಯಗಳಲ್ಲಿ ಶ್ರದ್ಧೆ-ಗೌರವಗಳಂಥ ವಸ್ತುಗಳನ್ನುಳ್ಳ ಬಂಕಿಮಚಂದ್ರರ ಅನೇಕಕಾದಂಬರಿಗಳದೂ ಇದೇ ಜಾಡು. ಎಸ್. ಎಲ್. ಭೈರಪ್ಪನಂಥವರ ಕಾದಂಬರಿಗಳಲ್ಲಾದರೋ ಪಾತ್ರಗಳ ಆತ್ಮವಿಶ್ಲೇಷಣೆಯೇ ಜೀವಾಳ. ಈ ಎರಡು ವಿಧಗಳಲ್ಲಿಯೂ ಸ್ವಾರಸ್ಯವುಂಟಾದರೂ ಆತ್ಮವಿಶ್ಲೇಷಣೆಯುಳ್ಳ ಕೃತಿಯಿಂದ ಉಂಟಾಗುವ ರಸಾನುಭವವು ಗಾಢವಾಗಿರುತ್ತದೆ.

ಕನ್ನಡದಲ್ಲಿ ಐತಿಹಾಸಿಕಕಾದಂಬರಿಗಳನ್ನು ಬರೆದ ಅ. ನ. ಕೃಷ್ಣರಾಯರು (ವಿಜಯನಗರದ ಕಾದಂಬರಿಗಳು), ತ. ರಾ. ಸು. (ಚಿತ್ರದುರ್ಗದ ಕಾದಂಬರಿಗಳು), ಕೊರಟಿ ಶ್ರೀನಿವಾಸರಾಯರು (ವಿಜಯನಗರದ ಕಾದಂಬರಿಗಳು) ಮುಂತಾದವರಾರೂ[5] ನೋರಿಯವರಷ್ಟು ಚೆನ್ನಾಗಿ ಸಂಶೋಧನಾಧ್ಯಯನಗಳನ್ನು ಕೈಗೊಂಡಿಲ್ಲ. ಇತಿವೃತ್ತದಲ್ಲಿ ನಾಟಕೀಯತೆಯನ್ನು ಚೆನ್ನಾಗಿ ಸಾಧಿಸಿರುವರಾದರೂ ಆಯಾ ಕಾಲದ ಪರಿಪೂರ್ಣಸಂಸ್ಕೃತಿಯನ್ನು ಸಮರ್ಥವಾಗಿ ಬಿಂಬಿಸಿಲ್ಲ. ವಿಜಯನಗರಸಾಮ್ರಾಜ್ಯದ ಸರ್ವಾಂಗೀಣವೈಭವೋನ್ನತಿಯನ್ನು ಅ. ನ. ಕೃ. ಅವರು ಸಮರ್ಥವಾಗಿ, ಸಮರ್ಪಕವಾಗಿ ಚಿತ್ರಿಸಿಯೇ ಇಲ್ಲ. ಕೊರಟಿಯವರದೂ ಇದೇ ಪಾಡಾಗಿದೆಯೆನ್ನಬೇಕು. ತ. ರಾ. ಸು. ಅವರು ಇದನ್ನು ಸ್ವಲ್ಪ ಮಟ್ಟಿಗೆ ಸಾಧಿಸಿರುವರಾದರೂ ಅವರ ಆ ಎಲ್ಲ ಕೃತಿಗಳು ಚಿತ್ರಿಸುವ ಕಾಲ ಈಚಿನದು. ಅಲ್ಲಿ ಅಭಿಜಾತಯುಗದ ವೈಭವ-ವೈದುಷ್ಯಗಳನ್ನು ಕಲ್ಪಿಸಲು ಅವಕಾಶವಿಲ್ಲ. ಪ್ರಾಚೀನಭಾರತದ ವಿದ್ಯಮಾನಗಳು ಹೇಗಿದ್ದವೆಂದು ತಿಳಿಸುವಲ್ಲಿ ಬಹುಮುಖ್ಯವಾದ ಕಾವ್ಯ-ಶಾಸ್ತ್ರಗ್ರಂಥಗಳ ಮೂಲಾಧ್ಯಯನವನ್ನು ಇವರುಗಳು ಮಾಡಿಲ್ಲ. ದೇವುಡು ಅವರು ಮಹಾಬ್ರಾಹ್ಮಣ, ಮಹಾಕ್ಷತ್ರಿಯ, ಮಹಾದರ್ಶನಗಳನ್ನು ಬರೆದಂತೆ ತ.ರಾ.ಸು. ನಚಿಕೇತನ ಬಗೆಗೆ “ಬೆಳಕು ತಂದ ಬಾಲಕ” ಹಾಗೂ ಸತ್ಯಕಾಮನ ಬಗೆಗೆ “೪x೪=೧” ಎಂಬ ಕಾದಂಬರಿಗಳನ್ನು ರಚಿಸಿದ್ದಾರೆ[6]. ಅದರೆ ಈ ಕೃತಿನಿರ್ಮಾಣಕ್ಕೆ ಬೇಕೆನಿಸಿದಷ್ಟೆಂದು ತಾವು ಭಾವಿಸಿದ್ದನ್ನು ಮಾತ್ರ ಸಂಶೋಧಿಸಿದ್ದಾರೆ. ಭೈರಪ್ಪನವರಿಗೂ ತ.ರಾ.ಸು. ಅವರಂತೆಯೇ ಪ್ರಾಚ್ಯಭಾರತದ ಕಾವ್ಯ-ಶಾಸ್ತ್ರಸಂಬಂಧಿಯಾದ ಮಾಹಿತಿಯನ್ನು ನಿಷ್ಪಾದಿಸುವಲ್ಲಿ ಹಲವು ಮಿತಿಗಳಿವೆಯಾದರೂ ಮಾನವಭಾವ-ಸ್ವಭಾವಗಳ ಸಮರ್ಥಚಿತ್ರಣದಿಂದಾಗಿ ಅವರು ಅಪ್ರತಿಮರೆನಿಸುತ್ತಾರೆ. ಆಲಂಕಾರಿಕನಾದ ಆನಂದವರ್ಧನನು ಹೇಳಿದಂತೆ “ಅವ್ಯುತ್ಪತ್ತಿಕೃತೋ ದೋಷಃ ಶಕ್ತ್ಯಾ ಸಂವ್ರಿಯತೇ ಕವೇಃ ಕಿನ್ತ್ವಶಕ್ತಿಕೃತೋ ದೋಷಃ  ಝಟಿತ್ಯೇವಾವಭಾಸತೇ” (ವ್ಯುತ್ಪತ್ತಿನ್ಯೂನತೆಯನ್ನು ಪ್ರತಿಭೆಯು ತುಂಬಿಕೊಡುತ್ತದೆ, ಅದರೆ ಪ್ರತಿಭಾನ್ಯೂನತೆಯನ್ನು ವ್ಯುತ್ಪತ್ತಿಯು ತುಂಬಿಕೊಡಲಾರದು). ಮಾನವಹೃದಯವನ್ನು ಚೆನ್ನಾಗಿ ತಿಳಿದುಕೊಂಡಿರುವುದರಿಂದ ಭೈರಪ್ಪನವರು ಯಾವುದೋ ಸುದೂರದ ದೇಶ-ಕಾಲಗಳಿಗೆ ಸೇರಿದ ಪರ್ವ-ಸಾರ್ಥ-ಆವರಣಗಳಂಥ ಕೃತಿಗಳ ವಸ್ತುಗಳನ್ನೂ  ಸಮಕಾಲೀನಸಾಮಾಜಿಕಕಾದಂಬರಿಗಳಂತೆ ರೂಪಿಸಬಲ್ಲರು. ಈ ನಿಟ್ಟಿನಲ್ಲಿ ಭೈರಪ್ಪನವರ ಅಪರ್ಯಾಪ್ತಿಯೇನೆಂಬುದು ಅವರನ್ನು ದೇವುಡು ಮತ್ತು ನೋರಿಯವರಿಗೆ ಹೋಲಿಸಿದಾಗ ವೇದ್ಯವಾಗುತ್ತದೆ. ಅಂತೆಯೇ ಭೈರಪ್ಪನವರೊಂದಿಗೆ ಹೋಲಿಸಿದರೆ ದೇವುಡು ಹಾಗೂ ನೋರಿಯವರ ಅಪರ್ಯಾಪ್ತಿಯೇನೆಂಬುದೂ ತಿಳಿಯುತ್ತದೆ. ಈ ಎರಡರಲ್ಲಿಯೂ ಪರಿಪೂರ್ಣರಾದವರು ಯಾರೋ!

ನೋರಿಯವರ ಪ್ರಬಂಧಗಳನ್ನು ಗಮನಿಸಿದಾಗ ಅವರಿಗೆ ಸಂಗೀತ, ನೃತ್ಯ, ಶಿಲ್ಪ, ಚಿತ್ರ ಇತ್ಯಾದಿ ಹಲವಾರು ವಿಷಯಗಳಲ್ಲಿ ಪರಿಚಯವಿತ್ತೆಂದು ತಿಳಿದುಬರುತ್ತದೆ. ಇವರ ಕಾದಂಬರಿಗಳಲ್ಲಿ ಬರುವ ಹೆಚ್ಚಿನ ಪಾತ್ರಗಳೆಲ್ಲ ಮುಖ್ಯಾಮುಖ್ಯವಿವಕ್ಷೆಯಿಲ್ಲದೆ ಐತಿಹಾಸಿಕವಾಗಿಯೇ ಇರುವುದೊಂದು ವಿಶೇಷ. ಇದು ಅವರ ಕೂಲಂಕಷವಾದ ಇತಿಹಾಸಸಂಶೋಧನೆಗೆ ನಿದರ್ಶನ. ಅವರ ಕಾಲದಲ್ಲಿ (ಇಂದಿಗೆ ಅರವತ್ತು ವರ್ಷಗಳಷ್ಟು ಹಿಂದೆ) ಈಗಿನಷ್ಟು ಮಾಹಿತಿಬಾಹುಳ್ಯ-ಲಭ್ಯತೆಗಳಿರಲಿಲ್ಲ. ಚಿಕ್ಕ ಊರಾದ ರೇಪಲ್ಲೆಯಲ್ಲಿದ್ದುಕೊಂಡು ಅಷ್ಟು ಸಮೃದ್ಧವಾದ ವಿದ್ವತ್ತೆಯ ಪೂರ್ವಸಿದ್ಧತೆಯನ್ನು ಅದು ಹೇಗೆ ಸಾಧಿಸಿದರೆಂಬುದು ವಿಸ್ಮಯಾವಹವೇ ಆಗಿದೆ.

[1] ಈಚೆಗೆ ಇವರ ಸಮಗ್ರಸಾಹಿತ್ಯವು ಪ್ರಕಾಶಿತವಾಗಿದೆ.

[2] ಬಹಳ ಹಿಂದೆ “ಕಸ್ತೂರಿ”ಮಾಸಪತ್ರಿಕೆಯಲ್ಲಿ ಇದರ ಸಂಗ್ರಹ ಪ್ರಕಟವಾಗಿತ್ತು.

[3] ಇದನ್ನೇ ಆಧರಿಸಿ ನಿರ್ಮಿಸಲಾಗಿರುವ ಚಲಚ್ಚಿತ್ರವು ಅಸಮರ್ಪಕವೂ ಪೇಲವವೂ ಆಗಿದೆಯೆಂಬುದು ನಿಜಕ್ಕೂ ಶೋಚನೀಯ.

[4] ಇವರ ಶ್ರೀಮತಿಯವರು ಕರ್ಣಾಟಕದವರಾಗಿದ್ದ ಕಾರಣ ಇವರಿಗೆ ಕನ್ನಡವು ಒದಗಿಬಂದಿತೆಂದು ಬಲ್ಲವರು ಹೇಳುತ್ತಾರೆ.

[5] ಇವರುಗಳಾರೂ ಸಂಸ್ಕೃತಭಾಷೆಯನ್ನು ಅರಿಯರು. ಇದೊಂದು ದೊಡ್ಡ ಕೊರತೆ.

[6] ದೇವುಡುರವರ ಪೌರಾಣಿಕಕಾದಂಬರಿಗಳನ್ನು ಅನುಸರಿಸಿ ತಾವು ಐತಿಹಾಸಿಕಕಾದಂಬರಿಗಳನ್ನು ರಚಿಸಿರುವುದಾಗಿ ತ.ರಾ.ಸು. ಅವರೇ ಹೇಳಿಕೊಂಡ ಕಾರಣ ನಾವು ಆಕ್ಷೇಪಿಸುವಂತಿಲ್ಲವಾದರೂ  ತೌಲನಿಕವಾಗಿ ನೋಡಿ ತೀರ್ಮಾನಿಸಬೇಕಾಗುತ್ತದೆ.

ಪ್ರಕೃತಪ್ರಬಂಧವು ಲೇಖಕರು ಮಾಡಿದ ಅನೌಪಚಾರಿಕಭಾಷಣವೊಂದರ ಪರಿವರ್ಧಿತಲಿಖಿತರೂಪ.

Transcribed by Sri. Ranganath Prasad.

To be continued.

   Next>>

Author(s)

About:

Dr. Ganesh is a 'shatavadhani' and one of India’s foremost Sanskrit poets and scholars. He writes and lectures extensively on various subjects pertaining to India and Indian cultural heritage. He is a master of the ancient art of avadhana and is credited with reviving the art in Kannada. He is a recipient of the Badarayana-Vyasa Puraskar from the President of India for his contribution to the Sanskrit language.