ಸಾಕ್ಷಿ – ಇರುವು; ಅರಿವು; ಹರವು – 2

ಮಂಜಯ್ಯ:

ಹೆಣ್ಗಳ ಕಣ್ಣಿನಲ್ಲಿ ಮನ್ಮಥನು ಮನುಷ್ಯರೂಪವನ್ನು ತಾಳಲು ಯೋಚಿಸಿದರೆ ಯಾವ ರೂಪವನ್ನು ತಾಳಬಹುದೋ ಅದೇ ಮಂಜಯ್ಯ.  ಆದರೆ ಇವನದ್ದು ಶೃಂಗಾರದ ಮುಸುಕಿನಲ್ಲಿರುವ ವೀರ ಮತ್ತು ಅದರ ಮದ .  ಇವನಿಗೆ ಮುಪ್ಪಿಲ್ಲ. ಇವನಿಗೆ ಸೋಲದ  ಹೆಣ್ಣುಗಳಿಲ್ಲ. ಆದರೆ ಪ್ರತಿಯೊಂದು  ಹೆಣ್ಣಿನ ಸಂಗದಲ್ಲಿಯೂ ಇವನು ಬಯಸುತ್ತಿರುವುದು ದೇಹಪ್ರಕೃತಿಯ, ಕಾಮದ ಚೋದನೆಯ ಈಡೇರಿಕೆಯಲ್ಲ; ತನ್ನ ಅಹಂಕಾರದ ಮೆರವಣಿಗೆ. ಹೆಣ್ಣನ್ನು ಗೆದ್ದೆನೆಂಬ ಹೆಮ್ಮೆಯ ಅನುಭವ. ಇವನ ಹೆಣ್ಣುಬಾಕತನದ ಹಿಂದಿರುವುದು ತೀವ್ರವಾದ ಕಾಮವಲ್ಲ, ಅಹಂಕಾರ.   ಹಾಗಾಗಿಯೇ ಇವನ ಈ ದಾಹವು, ಅವನನ್ನು ವಿಕೃತಕಾಮಿಯನ್ನಾಗಿಸಿ, ಮೌಲ್ಯಭ್ರಷ್ಟನನ್ನಾಗಿಸಿ ಸಮಾಜದ ಸ್ಥಾಪಿತಮೌಲ್ಯಪ್ರತಿಮೆಗಳನ್ನು ಲೆಕ್ಕಕ್ಕಿಡದೆ ಒಡೆದುಹಾಕುವಂತೆ ಮಾಡುವುದು.

ಹೆಂಡತಿಯೇ ನಿರಾಕರಿಸಿ ತನ್ನನ್ನು  ಬಿಟ್ಟುಹೋದರೂ ಇವನಿಗೆ ಅವಮಾನವಾಗಲಿಲ್ಲ. ಆದರೆ ಸರೋಜಾಕ್ಷಿಯು ತನ್ನ ವಶವಾಗಲಿಲ್ಲ ಮತ್ತು ಅವಳು ಇವನನ್ನು ಇಷ್ಟಪಟ್ಟರೂ ತನ್ನ ಘನತೆಯನ್ನು ಬಿಡದೆಯೇ ಇವನಿಂದ ತನ್ನ ಸಂಸಾರಕ್ಕಾದ ತೊಂದರೆಯನ್ನು ನಿವಾರಿಸಿಕೊಂಡದ್ದು, ಏನೆಲ್ಲ ಮನಸ್ತಾಪಗಳು ಬಂದರೂ ಪುನಃ ಇವನನ್ನು ಪ್ರೀತಿಸುವುದು ಆದರೆ ತನ್ನ ಗೌರವಕ್ಕೆ ಚ್ಯುತಿಬರದಂತೆ ನೋಡಿಕೊಳ್ಳುವುದು, ಇವನ ಅಹಂಕಾರಕ್ಕೆ ದೊಡ್ಡ ಏಟನ್ನು ನೀಡಿತು. ಹೆಣ್ಣೆಂದರೆ ಭೋಗ್ಯವಸ್ತು; ಗಂಡಿಗೆ ಸದಾ ಶರಣಾಗಿರಬೇಕೆಂಬ ಇವನ ಧೋರಣೆಗೆ ಬಲವಾದ ಪೆಟ್ಟನ್ನು ಕೊಡುವುದು ಸರೋಜಾಕ್ಷಿಯೇ. ಚಿತ್ರಗುಪ್ತನು  ಹೇಳುವ ಮಾತು ಮಂಜಯ್ಯನ ಅಹಂಕಾರದ ನೆಲೆ ಮತ್ತು ಸೋಲನ್ನು ಗುರುತಿಸುತ್ತದೆ. ಅವನ ಸಾವು ಲಕ್ಕುವಿನಿಂದಾದರೂ  ಸರೋಜಾಕ್ಷಿಯೊಡನೆ ತನಗಾದ ಅವಮಾನದಿಂದಲೇ ಅವನು ಜೀವಚ್ಛವವಾಗಿದ್ದನೆಂಬುದು ಇವನ ಅಹಂಕಾರದ ಮೂಲಸ್ಥಾನವು ಹೆಣ್ಣನ್ನು ಆಳುವುದರಲ್ಲಿ ಮತ್ತು  ಕಾಮದಿಂದ ಗೆಲ್ಲುವುದರಲ್ಲಿಯೇ ಇರುವುದನ್ನು ತೋರಿಸುತ್ತದೆ.

 

ಮಂಜಯ್ಯನು ಮುಖ್ಯವಾಗಿ ತೋರಿಕೊಳ್ಳುವುದು ಅತಿಕಾಮಿಯಂತಾದರೂ ಅವನದ್ದು  ಅತಿವಿಸ್ತಾರವಾದ ಮತ್ತು ವಿಭಿನ್ನವಾದ ವ್ಯಕ್ತಿತ್ವ. ಇವನ ಶಕ್ತಿಯಿರುವುದು ಕೇವಲ ಹೆಣ್ಣನ್ನು ಕಾಮದಲ್ಲಿ ಗೆಲ್ಲುವುದರಲ್ಲಷ್ಟೇ ಅಲ್ಲ. ಪ್ರತಿಯೊಬ್ಬರ ದುರ್ಬಲಸ್ಥಾನವನ್ನೂ  ಅರಿತು, ಅವರನ್ನು ತನ್ನ ಅಗತ್ಯಕ್ಕೆ ತಕ್ಕಂತೆ ಆಡಿಸುವುದು. ಪರಮೇಶ್ವರಯ್ಯ, ರಾಮಕೃಷ್ಣರಿರಬಹುದು, ಸತ್ಯಪ್ಪ, ಅಪ್ಪಾಜಪ್ಪರಿರಬಹುದು ಅಥವಾ ಅವನಿಗೆ ಸೋತ ಅಸಂಖ್ಯ ಹೆಂಗಸರಿರಬಹುದು. ಇವನು ಬೀಸುವ ಬಲೆಗೆ ಬೀಳದವರಿಲ್ಲ. ಮಂಜಯ್ಯನಿಗೆ ತನ್ನ ಈ ಶಕ್ತಿಯ ಮೇಲೆ ಅತಿಯಾದ ಆತ್ಮವಿಶ್ವಾಸ ಮತ್ತು ದುರಹಂಕಾರ. ಇದಕ್ಕೆ ಬಲಿ ಬೀಳದವರೆಂದರೆ ಒಬ್ಬ ನಾಗಪ್ಪ ಮತ್ತೊಬ್ಬಳು ಸರೋಜಾಕ್ಷಿ. ನಾಗಪ್ಪ ತಪ್ಪಿಸಿಕೊಡರೆ, ಸರೋಜಾಕ್ಷಿ ಇವನನ್ನೇ ಬಲೆಗೆ ಬೀಳಿಸುತ್ತಾಳೆ. ಇವನ ಆತ್ಮವಿಶ್ವಾಸದ ಅಹಂಕಾರ ಒಡೆದು, ಕಡೆಗೆ ಜೀವಚ್ಛವವಾಗುತ್ತಾನೆ. ಸರೋಜಾಕ್ಷಿ ಕೊಟ್ಟ ಪೆಟ್ಟು ಇಷ್ಟು ತೀವ್ರವೆಂದು ಅವಳಿಗೇ ತಿಳಿದಿಲ್ಲ. ಆದರೆ, ಸರೋಜಾಕ್ಷಿಗಿಂತ ಹೆಚ್ಚು ಮಂಜಯ್ಯನನ್ನು ಬಲ್ಲ ಓದುಗರಿಗೆ ಅವನಿಗಾದ ಈ ಅಘಾತ ಎಷ್ಟು  ಔಚಿತ್ಯವೆಂದು ತಿಳಿಯುತ್ತದೆ. ಪ್ರತಿಯೊಂದು ಸಂಚಿನಲ್ಲೂ ಗೆಲ್ಲುತ್ತ ಹೋಗುವ ಮಂಜಯ್ಯ ಆತ್ಮರತಿಯ ಪರಾಕಾಷ್ಠೆನ್ನು ತಲುಪಿರುತ್ತಾನೆ. ನಾಗಪ್ಪನು ಇವನು ಹೂಡಿದ  ಮಂಡಿಯ ಪಾಲುದಾರಿಕೆಯ ಸಂಚಿಗೆ ಬೀಳದೆ ನಯವಾಗಿ ತಿರಸ್ಕರಿಸುತ್ತಾನೆ. ಆದರೆ, ಮಂಜಯ್ಯನ ಅಹಂಕಾರದ ತಾಯಿಬೇರು ಅಂಟಿರುವುದು ಹೆಣ್ಣನ್ನು ಗೆಲ್ಲುವುದರಲ್ಲಿ, ವ್ಯವಹಾರದಲ್ಲಲ್ಲ. ಗಂಡಸು ಎಂದರೆ ಮಂಜಯ್ಯ ಎಂದು ಊರಿನವರೆಲ್ಲ, - ಅದರಲ್ಲೂ ಹೆಂಗಸರೆಲ್ಲ  - ಅಂದುಕೊಳ್ಳುವುದರಲ್ಲೇ ಅವನಿಗೆ ತೃಪ್ತಿ.  ಹಾಗಾಗಿ, ನಾಗಪ್ಪನೊಡನಾದ ಸೋಲು ಅವನನ್ನು ಅಷ್ಟು ಬಾಧಿಸಲಿಲ್ಲ. ಆದರೆ ಸರೋಜಾಕ್ಷಿಯ ಏಟು ಇವನ ಅಹಂಕಾರದ ಮೂಲಸ್ಥಾನವನ್ನೇ ಅಲ್ಲಾಡಿಸಿದ್ದರಿಂದ ಮತ್ತು ಇವನ ಪ್ರತಿತಂತ್ರಗಳೂ ಮತ್ತು ಅವಳ ನಡೆಯ ಲೆಕ್ಕಾಚಾರಗಳೂ  ಸಂಪೂರ್ಣ ತಲೆಕೆಳಗಾದ್ದರಿಂದ ಮಂಜಯ್ಯನ ಅಹಂಕಾರವು ಮೇಲೇಳಲಾರದಷ್ಟು ಕುಸಿಯುತ್ತದೆ. ತನ್ನಮೇಲಿದ್ದ ಆತ್ಮವಿಶ್ವಾಸ ಒಮ್ಮೆಲೇ ಸೊನ್ನೆಯಾಗಿದ್ದನ್ನು ತಡೆದುಕೊಳ್ಳಲು ಅವನಿಂದ ಸಾಧ್ಯವಾಗಲಿಲ್ಲ. ಅವನ ಈ ಸೋಲಿಗೆ ಉದ್ದೀಪನವಾಗಿ ಊರ ಕೆಲವು ಹೆಂಗಸರ ಮಾತೂ ಬರುತ್ತವೆ - ಏನು ಮಂಜಯ್ಯಾರು ಕಾವಿ ಶಾಟಿ  ಹೊಲ್ಯಕ್ಕೆ ಹಾಕವ್ರಂತೆ -  ಎಂದು ಚೆನ್ನಮ್ಮ  ಹೇಳುವುದರ ಔಚಿತ್ಯವನ್ನು  ಮತ್ತು ಅದರಿಂದ ಮಂಜಯ್ಯನಿಗಾಗುವ ಅವಮಾನವನ್ನು ಓದುಗರು ಗಮನಿಸಬೇಕು.

ಅರಣ್ಯ ಇಲಾಖೆಯ ಕಾಂಟ್ರ್ಯಾಕ್ಟರ್ ಕೆಲಸದಲ್ಲೂ  ಕೋರ್ಟಿನ ಕೆಲಸದ ನಿಮಿತ್ತ ವಕೀಲರನ್ನು ಭೇಟಿಮಾಡುವುದರಲ್ಲೂ ಅವನ ಉತ್ಸಾಹವಿರುವುದು ಸಮಾಜ ತನ್ನನ್ನು ದೊಡ್ಡ ಗಂಡಸೆಂದು ತಿಳಿದುಕೊಳ್ಳಲಿ ಎಂದೇ. ಅದಕ್ಕಾಗಿಯೇ ಅವನು ಅರಣ್ಯ ಇಲಾಕೆಯ ಕೆಲಸಕ್ಕೆಂದು ಖಾಕಿ ಕೋಟನ್ನೂ ವಕೀಲರನ್ನು ಭೇಟಿಮಾಡುವಾಗ ಕರಿ ಕೋಟನ್ನೂ ಬಳಸುವುದು. ಈ ಮೇಲರಿಮೆಯ ಕವಚದದೊಳಗಿರುವ ಕೀಳರಿಮೆಯನ್ನು ಚಿತ್ರಿಸುವಲ್ಲಿ ಮಂಜಯ್ಯನ ವ್ಯಕ್ತಿತ್ವಕ್ಕೆ ಔಚಿತ್ಯವಾದ ಅಭಿವ್ಯಕ್ತಿಯನ್ನು ಲೇಖಕರು ನೀಡಿರುವುದನ್ನು ಓದುಗರು ಪ್ರಶಂಸಿಸಬೇಕು.

ಇನ್ನು ಕಂಚಿಯ ವಿಚಾರಕ್ಕೆ ಬಂದರೆ, ಅವನು ಕಂಚಿಯ ಕಾಲನ್ನು ಮುರಿದು ತಾನು ಬಿಳಿಕೆರೆಗೆಲ್ಲ  ದೊಡ್ಡ ಗಂಡಸು ಎಂದು ತೋರಿಸಿಕೊಳ್ಳಬಹುದಿತ್ತು ಆದರೆ ಮಂಜಯ್ಯ ಹೊಡೆದದ್ದು ಅವನ ತಲೆಗೇ. ಅದಕ್ಕೆ ಕಾರಣ ತಾನು ದೊಡ್ಡ ಗಂಡು ಎಂದೆನಿಸಿಕೊಳ್ಳುವುದರ ಜೊತೆಗೆ ಲಕ್ಕುವನ್ನು ಅನುಭವಿಸಿ ಗೆಲ್ಲಬೇಕೆಂಬ ಅವನ ಹೆಣ್ಣುಬಾಕತನ ಹೊಂಚುಹಾಕುತ್ತಲಿದ್ದದ್ದು . ಈ ಸೂಕ್ಷ್ಮವು ಕಾದಂಬರಿಯಲ್ಲಿ ಗ್ರಾಮ್ಯದ ಸೊಗಡಿನೊಂದಿಗೆ ಮೇಳೈಸಿ ಅನನ್ಯವಾಗಿ ಮೂಡಿಬಂದಿದೆ.

ಸರೋಜಾಕ್ಷಿಯೆದುರಿಗೆ ಸೋತಾಗ ತನ್ನ ತಪ್ಪನ್ನು ತನ್ನಷ್ಟಕ್ಕೂ ತಾನು ಒಪ್ಪದೆ, ಅದಕ್ಕೆ ಸೇಡು ತೀರಿಸಿಕೊಳ್ಳಲು ಅತಿಯೆನ್ನುವಷ್ಟು ಬುದ್ಧಿವಂತಿಕೆಯನ್ನು ತೋರುತ್ತಾನೆ. ಒಂದು ಹಂತದಲ್ಲಿ ಯಶಸ್ವಿಯೂ ಆಗುತ್ತಾನೆ. ಆ ತಾತ್ಕಾಲಿಕ ಯಶಸ್ಸಿಗೆ ಬೀಗುವಷ್ಟರಲ್ಲೇ ಅವನ ಬುದ್ಧಿವಂತಿಕೆ ಖರ್ಚಾಗುತ್ತದೆ. ಸುಬ್ಬಯ್ಯನಂತಹ ಅಧಿಕಾರಿಯ  ಮತ್ತು ಸರೋಜಾಕ್ಷಿಯ ಸಾಮಾನ್ಯಜ್ಞಾನವಷ್ಟೇ ಸಾಕಾಗುತ್ತದೆ ಇವನನ್ನು ಸೋಲಿಸಲು. ದುರಹಂಕಾರಿಗೆ, ಸೋಲುವುದಕ್ಕಿಂತ ಒಮ್ಮೆ ಗೆದ್ದು ನಂತರ ಸೋಲುವುದು ಮತ್ತೂ ಅಘಾತಕಾರಿಯಾಗಿರುತ್ತದೆ.  ಈ ಘಟನೆಗಳ ನಡುವೆ, ಸೋತು ವ್ಯಗ್ರನಾಗಿದ್ದ ಮಂಜಯ್ಯ, ತನ್ನ ಅಹಂಕಾರವನ್ನು ತೃಪ್ತಿಗೊಳಿಸಲು ವೇಶ್ಯೆಯ ಬಳಿಗೆ  ಹೋಗುವುದು, ಅಲ್ಲಿಯೂ ಸಮಾಧಾನವಾಗದಿದ್ದಾಗ  ಸಾವಿತ್ರಿಯನ್ನು ಬಲಾತ್ಕರಿಸುವುದು ಆತನ ಮಾನಸಿಕತೆಗೆ ಉಚಿತವಾದದ್ದೇ ಹೌದು. ಪೆಟ್ಟುತಿಂದ ಅವನ ಅಹಂಕಾರವು ತಾತ್ಕಾಲಿಕ ಉಪಶಮನವನ್ನು ಬಯಸುವುದು ತನ್ನನ್ನು ತಿರಸ್ಕರಿಸಿದ್ದ ಹೆಂಡತಿಯನ್ನು ಬಲಾತ್ಕರಿಸುವುದರ ಮೂಲಕ. ಇದು ವಿಕೃತ ಕಾಮ. ವ್ಯಗ್ರಗೊಂಡ  ದುರಹಂಕಾರಿಗೆ ಅನಿವಾರ್ಯವಾದ  ಹುಸಿಗೆಲುವಿನ ಊರುಗೋಲು. ಮತ್ತೆ ಲೇಖಕರ ಪಾತ್ರ ಚಿತ್ರಣದ ಔಚಿತ್ಯವನ್ನಿಲ್ಲಿ ಓದುಗರು  ಗಮನಿಸಬೇಕು.

ಇನ್ನು ಮಂಜಯ್ಯನ ನಯಗಾರಿಕೆ ಅಥವಾ ಮಾತಿನ ಪಟ್ಟುಗಳಂತೂ ಅಸದಳವಾದದ್ದು. ಕಂಚಿಯನ್ನು ರಾತ್ರಿ ತನ್ನ ತೋಟಕ್ಕೇ ಕಳುಹಿಸುವಂತೆ ಸೂಚ್ಯವಾಗಿ ಲಕ್ಕುವಿಗೆ ಹಾಕುವ ಸವಾಲಿರಬಹುದು; ಕಳ್ಳ  ಕಂಚಿಯನ್ನು ಕರೆದು ಎಂದಾದರೂ ಬುದ್ಧಿ ಹೇಳಿದ್ದರೆ, ತಾನು ಅವನನ್ನು ಸಾಯಿಸುವ ಪ್ರಮೇಯ ಬರುತ್ತಿರಲಿಲ್ಲ ತನ್ಮೂಲಕ, ನಿಮ್ಮ ಧರ್ಮವಿಹಿತತೆಯೇ ಕಂಚಿಯ ಸಾವಿಗೆ ಕಾರಣ ಎಂಬ ಸೂಚನೆಯನ್ನು ಪರಮೇಶ್ವರಯ್ಯನವರಿಗೆ ಕೊಟ್ಟದ್ದಲ್ಲದೆ  ಮಗಳ ಸಂಸಾರವನ್ನು ಸರಿಪಡಿಸುವ ಆಸೆಯನ್ನೂ ತೋರಿ, ಅವನ ದುರ್ಬಲ ತಂತಿಯನ್ನು ಮೀಟುವುದು; ಗಾಂಧಿಯನ್ನು ಹೊಗಳುತ್ತಾ ಸತ್ಯಪ್ಪನನ್ನು ಮರಳುಮಾಡಿ, ಅವನ ಕಾಮಪ್ರವೃತ್ತಿಯನ್ನು ಬಡಿದೆಬ್ಬಿಸಿ ಸಂದಿಗ್ಧತೆಗೆ ತಳ್ಳಿ ವಿಕೃತಸಂತೋಷವನ್ನು ಅನುಭವಿಸುವುದು. ಸಾವಿತ್ರಿಯ ಜೊತೆಗೆ ಸಂಸಾರ ಹೂಡಿದ ಹೊಸದರಲ್ಲಿ ಅವಳನ್ನು ಮಾತಿನಲ್ಲಿ ಗೆಲ್ಲುವುದು, ಹಳ್ಳಿಗರನ್ನು ಅಪ್ಪಾಜಪ್ಪನ ಮೇಲೆ ಎತ್ತಿಕಟ್ಟುವುದು . ಇಂತಹವು ಒಂದೇ ಎರಡೇ? ಇವೆಲ್ಲವೂ ಮಂಜಯ್ಯನಂತಹ ದುರಹಂಕಾರಿಯ ಪಾತ್ರದ ಬೆಳವಣಿಗೆಗೆ ಪೂರಕವೇ ಆಗಿದೆ.

ಮನುಷ್ಯನ ಸ್ವಭಾವಗಳ, ಮನಸ್ಸಿನ ಆಳವಾದ ಪರಿಚಯವಿಲ್ಲದ ಲೇಖಕರಿಗೆ ಈ ರೀತಿಯ ಪಾತ್ರಚಿತ್ರಣ ಅಸಾಧ್ಯ. ಇವನ್ನೆಲ್ಲ ತಳಮಟ್ಟದಲ್ಲಿ ಶೋಧಿಸಿದ ಮನಃ ಶಾಸ್ತ್ರಜ್ಞನಿಗೆ ಕಾವ್ಯಾಭಿವ್ಯಕ್ತಿ ಸಾಧ್ಯವಾಗುವುದಿಲ್ಲ. ಹಾಗಾಗಿ ಕವಿತ್ತ್ವ ಮತ್ತು ಮನಃಶಾಸ್ತ್ರಜ್ಞನ ವ್ಯುತ್ಪತ್ತಿಯ ಮೇಳೈಸುವಿಕೆಯೇ ಮಂಜಯ್ಯನ ಪಾತ್ರದ ರೂಪಣದಲ್ಲಿ ದುಡಿದ ಮಹಾಪ್ರತಿಭೆ; ಅದರ ಪರಿಪಾಕವೇ “ಸಾಕ್ಷಿ" ಕಾದಂಬರಿಯಾಗಿದೆ.

ಸಾವಿತ್ರಿ :

ಸಾಕ್ಷಿಯ ಮಿಕ್ಕಪಾತ್ರಗಳು ತಾವು ಇಷ್ಟಪಟ್ಟ ತತ್ತ್ವ, ಹವ್ಯಾಸ  ಅಥವಾ  ಗೀಳಿನ ಮುಖಾಂತರ ಪ್ರಕಾಶಗೊಂಡರೆ, ಸಾವಿತ್ರಿಯ ಪಾತ್ರ ತನ್ನ ಹಟದಲ್ಲೇ ಅಭಿವ್ಯಕ್ತವಾಗುತ್ತದೆ.

ಕಚ್ಚೆಹರುಕ ಮಂಜಯ್ಯನ ಗುಣ ಊರಿಗೆಲ್ಲ ತಿಳಿದಿದ್ದರೂ, ತನಗೆ ಅವನ ಮೇಲೆ ಮನಸ್ಸಾಗಿದೆ ಎಂಬ ಒಂದೇ ಕಾರಣಕ್ಕೆ – ಅಣ್ಣನು ಬಲವಾಗಿ ಆಕ್ಷೇಪಿಸಿದರೂ ಎಂದೂ ಜೋರಾಗಿ ಮಾತನ್ನೇ ಆಡದ ತಂದೆ ತನ್ನನ್ನು ಹೊಡೆದರೂ ಲೆಕ್ಕಿಸದೆ - ಹಟಹಿಡಿದು ಅವನನ್ನೇ ಮದುವೆಯಾಗುತ್ತಾಳೆ. ತನ್ನ ಎಣಿಕೆಯೆಲ್ಲ ತಲೆಕೆಳಗಾಗಿ, ಕಡೆಗೆ ಮಂಜಯ್ಯನ ಜೊತೆ ಸಂಸಾರ ಸಾಧ್ಯವಿಲ್ಲವೆಂದಾಗ, ಅವನನ್ನು  ಬಿಟ್ಟು ಬಂದು ಅದೇ ಹಟದಲ್ಲಿ ಒಂಟಿಯಾಗಿ ತನ್ನ ಅನ್ನವನ್ನು ತಾನು ದುಡಿದುಕೊಂಡು ಬದುಕುತ್ತಾಳೆ. ಅತಿ ಹಠಮಾರಿಗಳಿಗೆ ಜೀವನದ ಚೋದನೆಗಳು, ಮಾನವಪ್ರಕೃತಿಗಳು ಹೇಗೆ ಎದುರಾಗುತ್ತವೆ ಮತ್ತು ಸೋಲಿಸಿಬಿಡುತ್ತವೆ ಎನ್ನುವುದಕ್ಕೆ "ಸಾಕ್ಷಿ"ಯ ಸಾವಿತ್ರಿಯೇ ಸಾಕ್ಷಿ.

ಮಂಜಯ್ಯನಿಂದ ಬಲಾತ್ಕಾರಗೊಂಡಾಗಲೂ ತನ್ನನ್ನು ತಾನು ವಿಮರ್ಶಿಸಿಕೊಳ್ಳುವ ಸಾವಿತ್ರಿ, ತಾನು ಅವನಿಗೆ ಸಂಪೂರ್ಣ ವಿರೋಧವನ್ನು ತೋರಲಿಲ್ಲ ಎಂಬುದನ್ನು ಜ್ಞಾಪಿಸಿಕೊಂಡು ದು:ಖಿಸುವುದರಲ್ಲಿ ಅವಳ ಅಶಕ್ತಿಯನ್ನು ಕಂಡುಕೊಳ್ಳುತ್ತಾಳೆ. ಅಂತೆಯೇ ತನ್ನ ಸಂಸಾರ ಸರಿಹೋಗಬಹುದೆಂಬ ಎಣಿಕೆಯಲ್ಲಿ ಎಂದೂ ಸುಳ್ಳುಹೇಳದ ಅಪ್ಪ ಸುಳ್ಳುಸಾಕ್ಷಿ ಹೇಳಲು ಮುಂದಾದಾಗ, ಮೌನವಾಗಿ ಸಮ್ಮತಿಸುತ್ತಾಳೆ. ಮಂಜಯ್ಯನೆಡಗಿನ ಆಕರ್ಷಣೆ ಮತ್ತದಕ್ಕೆ ಕಾರಣವಾದ ಕಾಮ ಹಾಗೂ  ಅದನ್ನು ತಡೆದುಕೊಳ್ಳಲಾಗದ ಅಶಕ್ತಿ ಅವಳನ್ನು ಆಟವಾಡಿಸುತ್ತದೆ. ಈ ದುಃಖ, ಗೊಂದಲಗಳು  ಕಾಮಪ್ರವೃತ್ತಿಯಿಂದಾದ್ದರಿಂದ, (ಅಹಂಕಾರವಲ್ಲದ್ದರಿಂದ) ಅದರಿಂದಾದ ತಪ್ಪನ್ನು ಒಪ್ಪಿಕೊಳ್ಳಲು ಮತ್ತು ಆದ ತಪ್ಪನ್ನು ಸರಿಪಡಿಸಿಕೊಳ್ಳುವ ಕಡೆಗೆ ಚಿಂತಿಸಲು ಅವಳಿಗೆ ಅಹಂಕಾರ ಅಡ್ಡಿಬರುವುದಿಲ್ಲ. ತನ್ನಲ್ಲೇ ಕಂಡುಕೊಂಡ ಮಹತ್ತರವಾದ ಮೌಲ್ಯಗಳೇನೂ ಇಲ್ಲದ ಸಾವಿತ್ರಿ ತನ್ನ ಭಾವನ ಸರಳಪ್ರಾಮಾಣಿಕಜೀವನದಿಂದ, ಜೊತೆಗೆ ತನ್ನಂತೆಯೇ ಅವರೂ ಅವಮಾನ ಹಾಗೂ ದುಃಖಗಳನ್ನು ಅನುಭವಿಸಿದವರಾದ್ದರಿಂದ ಅವರಿಂದ ಪ್ರಭಾವಿತಳಾಗುವುದೂ ಉಚಿತವಾಗಿದೆ.

ತನ್ನ ತಾಯಿ, ತಂದೆಯರ ಸಾವು, ಮಂಜಯ್ಯನ ಜೊತೆಗಿನ ಭ್ರಮನಿರಸನ, ಭಾವ ಸತ್ಯಪ್ಪನಿಗಾಗುವ ಅವಮಾನ, ಅತ್ತಿಗೆ ಅಳಿಯರ ಅಧ:ಪತನ ಇವೆಲ್ಲದಕ್ಕೂ ಹಿರಿದಾದ ತನ್ನ ಗಂಡ ಮತ್ತು ತಾಯಿಯ ಅನೈತಿಕ ಸಂಬಂಧದ ವಿಷಯ ತಿಳಿದು ಆಗುವ ಆಘಾತಗಳನ್ನು ಎದುರಿಸಲಾಗದೇ ಕುಗ್ಗಿಹೋಗುವ ಸಾವಿತ್ರಿಯ ಪಾತ್ರ, ವ್ಯಕ್ತಿಯ ಅಹಂಕಾರದ ಸಾಮರ್ಥ್ಯವನ್ನು ಚಿತ್ರಿಸುವ ಬಗೆಯು  ಸಾಕ್ಷಿಯ ಕಥೆಯ ಹಿನ್ನಲೆಯಲ್ಲಿ ಒಂದು ಮುಖ್ಯವಾದ ಆಯಾಮವನ್ನೇ ತೋರಿಸಿದೆ.

ಮೌಲ್ಯಭ್ರಷ್ಟತೆ ಹಾಗೂ  ಅಹಂಕಾರಗಳು  ಮಂಜಯ್ಯನದ್ದಾದರೆ, ಸಾಧಾರಣ ಮೌಲ್ಯಯುತ ವ್ಯಕ್ತಿತ್ವದ ಜೊತೆಗೆ ದೇಹಪ್ರವೃತ್ತಿಗಳನ್ನು ಮೀರಲಾಗದ ಮತ್ತು  ತೀವ್ರವಾದ ಅಹಂಕಾರವನ್ನು ಪ್ರತಿನಿಧಿಸುವ ಪಾತ್ರ ಸಾವಿತ್ರಿ. ತನ್ನ ವಯ: ಸಹಜ  ಚೋದನೆಯಿಂದ( instinct) ಪ್ರಭಾವಿತಳಾಗಿ, ಅದನ್ನೇ ಹಟವಾಗಿಸಿಕೊಂಡು  ಮಂಜಯ್ಯನನ್ನು ವರಿಸಿದುದರಿಂದ  ತೊಂದರೆಯಾಗುವುದು ಬಿಟ್ಟರೆ  ಈ ಪಾತ್ರದಲ್ಲಿ ಮೌಲ್ಯಭ್ರಷ್ಟತೆಯ ಸುಳಿವಿಲ್ಲ. ಆದರೆ ತನ್ನ ಅಹಂಕಾರಕ್ಕೆ ಅಧಾರಸ್ತಂಭವೂ ಇಲ್ಲ. ಹಾಗಾಗಿ ವಿಧಿಯ ದುರ್ಭರತೆ ಮತ್ತು ತನ್ನ ತಪ್ಪುಗಳಿಂದಾಗುವ ಅವಮಾನ ಮತ್ತು ಮಾನಸಿಕ ಅಘಾತಗಳನ್ನು ಎದುರಿಸುವ ಶಕ್ತಿಯಿಲ್ಲದೆ ಈ ಪಾತ್ರ ನಲುಗಿಹೋಗುವುದನ್ನು ನಾವು ಕಾಣಬಹುದು. ಅಂತೆಯೇ ಕಡೆಗೆ, ಯೌವನದ ಆಕರ್ಷಣೆಯಿಂದಾದ ತಪ್ಪನ್ನು, ತನ್ನ ಅಹಂಕಾರದಿಂದ ಬೇರ್ಪಡಿಸಿ ನೋಡಿಕೊಳ್ಳಲೂ ಅವಳಿಗೆ ಸಾಧ್ಯವಾಗಿ, ತನ್ನ ಜೀವನದ ಬದಲಾವಣೆಯ ಜವಾಬ್ದಾರಿಯನ್ನು ತಾನೇ ಹೊರುವುದು ಹಾಗೂ ಭಾವನ ಮಾತುಗಳನ್ನು ಕೇಳಿ ತನ್ನ ಘಾಸಿಗೊಂಡ ಮನಸ್ಸಿನ ನಿರ್ಧಾರಗಳನ್ನು ಬದಲಿಸಿಕೊಳ್ಳುವುದು ಕಥಾತಂತುವಿನ ಯುಕ್ತವಿಸ್ತರಣವೇ ಆಗಿದೆ.

Author(s)

About:

Shreesha is a software engineer with a passion for poetry, poetics, Indian philosophy, religion, and politics. He holds a master's degree in Kannada literature.

Prekshaa Publications

Prekṣaṇīyam is an anthology of essays on Indian classical dance and theatre authored by multifaceted scholar and creative genius, Śatāvadhāni Dr. R Ganesh. As a master of śāstra, a performing artiste (of the ancient art of Avadhānam), and a cultured rasika, he brings a unique, holistic perspective...

Yaugandharam

इदं किञ्चिद्यामलं काव्यं द्वयोः खण्डकाव्ययोः सङ्कलनरूपम्। रामानुरागानलं हि सीतापरित्यागाल्लक्ष्मणवियोगाच्च श्रीरामेणानुभूतं हृदयसङ्क्षोभं वर्णयति । वात्सल्यगोपालकं तु कदाचिद्भानूपरागसमये घटितं यशोदाश्रीकृष्णयोर्मेलनं वर्णयति । इदम्प्रथमतया संस्कृतसाहित्ये सम्पूर्णं काव्यं...

Vanitakavitotsavah

इदं खण्डकाव्यमान्तं मालिनीछन्दसोपनिबद्धं विलसति। मेनकाविश्वामित्रयोः समागमः, तत्फलतया शकुन्तलाया जननम्, मातापितृभ्यां त्यक्तस्य शिशोः कण्वमहर्षिणा परिपालनं चेति काव्यस्यास्येतिवृत्तसङ्क्षेपः।

Vaiphalyaphalam

इदं खण्डकाव्यमान्तं मालिनीछन्दसोपनिबद्धं विलसति। मेनकाविश्वामित्रयोः समागमः, तत्फलतया शकुन्तलाया जननम्, मातापितृभ्यां त्यक्तस्य शिशोः कण्वमहर्षिणा परिपालनं चेति काव्यस्यास्येतिवृत्तसङ्क्षेपः।

Nipunapraghunakam

इयं रचना दशसु रूपकेष्वन्यतमस्य भाणस्य निदर्शनतामुपैति। एकाङ्करूपकेऽस्मिन् शेखरकनामा चित्रोद्यमलेखकः केनापि हेतुना वियोगम् अनुभवतोश्चित्रलेखामिलिन्दकयोः समागमं सिसाधयिषुः कथामाकाशभाषणरूपेण निर्वहति।

Bharavatarastavah

अस्मिन् स्तोत्रकाव्ये भगवन्तं शिवं कविरभिष्टौति। वसन्ततिलकयोपनिबद्धस्य काव्यस्यास्य कविकृतम् उल्लाघनाभिधं व्याख्यानं च वर्तते।

Karnataka’s celebrated polymath, D V Gundappa brings together in the third volume, some character sketches of great literary savants responsible for Kannada renaissance during the first half of the twentieth century. These remarkable...

Karnataka’s celebrated polymath, D V Gundappa brings together in the second volume, episodes from the lives of remarkable exponents of classical music and dance, traditional storytellers, thespians, and connoisseurs; as well as his...

Karnataka’s celebrated polymath, D V Gundappa brings together in the first volume, episodes from the lives of great writers, poets, literary aficionados, exemplars of public life, literary scholars, noble-hearted common folk, advocates...

Evolution of Mahabharata and Other Writings on the Epic is the English translation of S R Ramaswamy's 1972 Kannada classic 'Mahabharatada Belavanige' along with seven of his essays on the great epic. It tells the riveting...

Shiva-Rama-Krishna is an English adaptation of Śatāvadhāni Dr. R Ganesh's popular lecture series on the three great...

Bharatilochana

ಮಹಾಮಾಹೇಶ್ವರ ಅಭಿನವಗುಪ್ತ ಜಗತ್ತಿನ ವಿದ್ಯಾವಲಯದಲ್ಲಿ ಮರೆಯಲಾಗದ ಹೆಸರು. ಮುಖ್ಯವಾಗಿ ಶೈವದರ್ಶನ ಮತ್ತು ಸೌಂದರ್ಯಮೀಮಾಂಸೆಗಳ ಪರಮಾಚಾರ್ಯನಾಗಿ  ಸಾವಿರ ವರ್ಷಗಳಿಂದ ಇವನು ಜ್ಞಾನಪ್ರಪಂಚವನ್ನು ಪ್ರಭಾವಿಸುತ್ತಲೇ ಇದ್ದಾನೆ. ಭರತಮುನಿಯ ನಾಟ್ಯಶಾಸ್ತ್ರವನ್ನು ಅರ್ಥಮಾಡಿಕೊಳ್ಳಲು ಇವನೊಬ್ಬನೇ ನಮಗಿರುವ ಆಲಂಬನ. ಇದೇ ರೀತಿ ರಸಧ್ವನಿಸಿದ್ಧಾಂತವನ್ನು...

Vagarthavismayasvadah

“वागर्थविस्मयास्वादः” प्रमुखतया साहित्यशास्त्रतत्त्वानि विमृशति । अत्र सौन्दर्यर्यशास्त्रीयमूलतत्त्वानि यथा रस-ध्वनि-वक्रता-औचित्यादीनि सुनिपुणं परामृष्टानि प्रतिनवे चिकित्सकप्रज्ञाप्रकाशे। तदन्तर एव संस्कृतवाङ्मयस्य सामर्थ्यसमाविष्कारोऽपि विहितः। क्वचिदिव च्छन्दोमीमांसा च...

The Best of Hiriyanna

The Best of Hiriyanna is a collection of forty-eight essays by Prof. M. Hiriyanna that sheds new light on Sanskrit Literature, Indian...

Stories Behind Verses

Stories Behind Verses is a remarkable collection of over a hundred anecdotes, each of which captures a story behind the composition of a Sanskrit verse. Collected over several years from...