ಅಭಿಜಾತ-ನೃತ್ಯ-ನಾಟ್ಯಗಳಿಗೆ ಸಂಗೀತಸಂಯೋಜನೆ ಹಾಗೂ ಸಂಗೀತದಲ್ಲಿ ನಾಟ್ಯಾಯಮಾನತೆ - ಭಾಗ - ೧
ಭಾರತದ ಅಭಿಜಾತ-ನೃತ್ಯ ಮತ್ತು ನಾಟ್ಯ ಕಲೆಗಳಿಗೆ ಗೀತ-ವಾದ್ಯಗಳು ಅತ್ಯಮೂಲ್ಯವೂ ಅತ್ಯಾವಶ್ಯಕವೂ ಆದ ಆಲಂಬನಗಳಾಗಿವೆ[1]. ಕರ್ಣರಂಜಕವಾದ ಗಾನವಾದನಗಳೊಂದಿಗೆ ಮೂಡಿಬರುವಂತಹ ನೃತ್ಯ-ನಾಟ್ಯಗಳು ಮಾತ್ರವೇ ಮನೋರಂಜಕವಾದವು. ಗೀತವಾದ್ಯವಿಹೀನವಾದ ಕೇವಲದೈಹಿಕಚಲನೆಯು ಹಾಸ್ಯಾಸ್ಪದವಾದೀತು, ಅಥವಾ ಕಿವುಡರಿಗೆ ಒಂದಾನೊಂದು ಸಂದೇಶವನ್ನು ನೀಡುವ ಮಾಧ್ಯಮವಾದೀತು. ಹಾಗಾಗಿ ಚಲನಶೀಲವಾದ ದೃಶ್ಯಮಾಧ್ಯಮದ ಕಲೆಗೆ ಅಷ್ಟೇ ಚಲನಶೀಲವೂ ಸುಂದರವೂ ಆದ ಸಂಗೀತವು ಅನಿವಾರ್ಯವಾದುದು. ಹೀಗಿದ್ದಲ್ಲಿಯೂ ಸ್ಥಿರದೃಶ್ಯಕಲೆಗಳಾದ ಚಿತ್ರ-ಶಿಲ್ಪಗಳು ಸ್ವತಂತ್ರವಾಗಿ, ವಾಚಿಕನಿರಪೇಕ್ಷವಾಗಿ ನಿಲ್ಲಬಲ್ಲವು ಎಂಬುದು ಗಮನಾರ್ಹ.
