ಕಲ್ಹಣ
“ರಾಜತರಂಗಿಣಿ”ಯ ಕರ್ತನಾಗಿ ಈ ಮಹಾಕವಿಯು ಸಮಾರ್ಜಿಸಿದ ಯಶಸ್ಸು ನಿರುಪಮಾನ. ಸಂಸ್ಕೃತದಲ್ಲಿ ಇತಿಹಾಸದ ಬಲವುಳ್ಳ ಕೃತಿಗಳಿಗಾಗಲಿ, ಚರಿತ್ರಪ್ರಧಾನವಾದ ಕಾವ್ಯಗಳಿಗಾಗಲಿ ಕೊರತೆಯಿಲ್ಲ. ಇಂತಿದ್ದರೂ ಕಲ್ಪನಾಂಶಕ್ಕಿಂತ ವಾಸ್ತವಾಂಶವನ್ನೇ ಹೆಚ್ಚಾಗಿ ಉಳ್ಳ ರಾಜತರಂಗಿಣಿಯು ಕಾವ್ಯಾರ್ಹತೆಯನ್ನು ಗಳಿಸಿದುದು ಮಹತ್ತ್ವದ ಸಂಗತಿ. ಇದು ಸಾಧ್ಯವಾದದ್ದು ಕಲ್ಹಣನ ವ್ಯಕ್ತಿತ್ವಘನತೆ ಮತ್ತು ಮಾನವಸ್ವಭಾವಪರಿಜ್ಞಾನಗಳಿಂದ. ಹೀಗಾಗಿ ಇವನ ಕೃತಿಯ ಒಂದೆರಡು ಮಾತುಗಳು ಕಾವ್ಯಮೀಮಾಂಸೆಗೆ ಮುಖ್ಯವೆನಿಸಿವೆ:
ಶ್ಲಾಘ್ಯಃ ಸ ಏವ ಗುಣವಾನ್ ರಾಗದ್ವೇಷಬಹಿಷ್ಕೃತಾ |
ಭೂತಾರ್ಥಕಥನೇ ಯಸ್ಯ ಸ್ಥೇಯಸ್ಯೇವ ಸರಸ್ವತೀ || (೧.೭)
ಯಾವ ಗುಣವಂತನ ವಾಣಿಯು ನಡೆದುಹೋದ ಘಟನೆಗಳನ್ನು ನಿರೂಪಿಸುವಾಗ ರಾಗ-ದ್ವೇಷಗಳಿಂದ ಮುಕ್ತವಾಗಿ ದೃಢವಾಗಿ ನಿಲ್ಲುವುದೋ ಅಂಥವನೇ ಪ್ರಶಂಸನೀಯ.
ಸಾಮಾನ್ಯವಾಗಿ ಕವಿಗಳಿಗೆ ಭಾವನಾಬಲ ಹೆಚ್ಚಾದ ಕಾರಣ ಅದಕ್ಕಂಟಿ ಬರುವ ರಾಗ-ದ್ವೇಷಗಳೂ ತೀವ್ರವೆಂದು ಲೋಕಾಭಿಮತ. ಇದು ಅಲ್ಪಕವಿಗಳಿಗೆ ಅನ್ವಯಿಸುವ ಮಾತು. ಮಹಾಕವಿಯಾದರೋ ಬರಿಯ ವರ್ಣನಾನಿಪುಣನಲ್ಲ; ಅವನು ಇತಿವೃತ್ತ ಮತ್ತು ಪಾತ್ರಗಳೆರಡನ್ನೂ ಸಮರ್ಥವಾಗಿ ಚಿತ್ರಿಸಬಲ್ಲ ದ್ರಷ್ಟಾರ. ಈ ಕಾರಣದಿಂದಲೇ ರಾಗ-ದ್ವೇಷಗಳಿಲ್ಲದ ಮೌಲ್ಯನಿಷ್ಠವಾದ ಸಹಾನುಭೂತಿ ಅವನ ಮೂಲಕ ಸರ್ವತ್ರ ಸಲ್ಲುತ್ತದೆ. ಇದು ವ್ಯಾಸ, ವಾಲ್ಮೀಕಿ, ಕಾಳಿದಾಸರೇ ಮೊದಲಾದ ಪ್ರಬಂಧಕವಿಗಳಿಗೆ ವಿಶೇಷವಾಗಿ ಅನ್ವಯಿಸುವ ಮಾತು. ಈ ಗುಣವಿದ್ದ ಇತಿಹಾಸಕಾರನು ಘಟನೆಗಳನ್ನು ಚಿತ್ರಿಸುವಾಗಲೂ ಅವುಗಳ ಹಿಂದೆ ಮಸೆಯುವ ಚಿತ್ತವೃತ್ತಿಗಳ ಬಗೆಯನ್ನು ಚೆನ್ನಾಗಿ ಗ್ರಹಿಸಿ ನಿರೂಪಿಸುತ್ತಾನೆ. ಇಂಥ ಗುಣವೇ ಕಲ್ಹಣನ ರಾಜತರಂಗಿಣಿಯನ್ನು ಕಾವ್ಯವಾಗಿಸಿದೆ. ಹೀಗಾಗಿಯೇ ಇಲ್ಲಿ ಶಾಂತರಸದ ಪಾರಮ್ಯವಿರುವುದು ಸಹಜ:
ಕ್ಷಣಭಂಗಿನಿ ಜಂತೂನಾಂ ಸ್ಫುರಿತೇ ಪರಿಚಿಂತಿತೇ |
ಮೂರ್ಧಾಭಿಷೇಕಃ ಶಾಂತಸ್ಯ ರಸಸ್ಯಾತ್ರ ವಿಚಾರ್ಯತಾಮ್ || (೧.೨೩)
ಜೀವರಾಶಿಗಳ ಕ್ಷಣಭಂಗುರವಾದ ಬದುಕಿನ ಬೆಳಕನ್ನು ಕುರಿತು ಆಲೋಚಿಸಿದಂತೆಲ್ಲ ಈ ಕೃತಿಯಲ್ಲಿ ಶಾಂತರಸದ ಪಾರಮ್ಯವನ್ನೇ ಮನಗಾಣಬಹುದು.
ಇತಿಹಾಸವನ್ನು ಕೇವಲಪಂಡಿತನು ಬರೆದಾಗ ಅದು ಘಟನೆಗಳ ಮಾಲಿಕೆಯಾಗುತ್ತದೆ. ಅದನ್ನೇ ಒಬ್ಬ ತತ್ತ್ವಜ್ಞಾನಿ ಪರಿಭಾವಿಸಿದರೆ ನಿರ್ವೇದದ ನಿರೂಪಣೆಯಾಗುತ್ತದೆ. ಇವೆರಡು ಗುಣಗಳನ್ನೂ ಕವಿಯೊಬ್ಬನು ಮೈಗೂಡಿಸಿಕೊಂಡಾಗ ಅವನ ಸೃಷ್ಟಿ ಶಾಂತರಸದಲ್ಲಿ ಪರ್ಯವಸಿಸುತ್ತದೆ. ಇದನ್ನೇ ಕಲ್ಹಣನು ಸಾಧಿಸಿರುವುದು. ಆಧುನಿಕವಿದ್ವಾಂಸರು ಲಕ್ಷಣೀಕರಿಸುವಂಥ ಇತಿಹಾಸವು ಕಾವ್ಯವಾಗಬಲ್ಲುದೆಂಬ ಅಂಶವನ್ನು ನಮ್ಮ ಆಲಂಕಾರಿಕರು ಮನಗಂಡಂತೆ ತೋರದು. ಆದರೆ ಕಲ್ಹಣನ ಈ ಮಾತುಗಳಲ್ಲಿ ಇತಿಹಾಸದ ಕಾವ್ಯತ್ವ ಸ್ಫುರಿಸುತ್ತದೆ.
ಬಾಣ, ಬಿಲ್ಹಣ, ಪರಿಮಳಗುಪ್ತ, ಗಂಗಾದೇವಿ ಮುಂತಾದ ಅನೇಕ ಕವಿಗಳು ಇತಿಹಾಸದ ವ್ಯಕ್ತಿಗಳನ್ನೂ ಘಟನೆಗಳನ್ನೂ ತಮ್ಮ ಕಾವ್ಯಗಳಲ್ಲಿ ಪಾತ್ರ-ಇತಿವೃತ್ತಗಳಾಗಿ ಬಳಸಿಕೊಂಡಿದ್ದರೂ ಅವರೊಬ್ಬರಲ್ಲಿಯೂ ಶಾಂತರಸದ ಪಾರಮ್ಯವಿಲ್ಲ. ಅವರ ಕೃತಿಗಳೆಲ್ಲ ವೀರ-ಶೃಂಗಾರಗಳ ಚೌಕಟ್ಟಿನಲ್ಲಿ ಮುಗಿದುಹೋಗುತ್ತವೆ. ಹೀಗಲ್ಲದೆ ಕೇವಲ ವಸ್ತುನಿಷ್ಠವಾದ ಘಟನೆಗಳ ದಾಖಲೆಗಳೆನ್ನಬಹುದಾದ ಎಷ್ಟೋ ಶಾಸನಗಳು ಪ್ರಬಂಧಕಾವ್ಯಗಳಾಗಿಲ್ಲ. ಆದರೆ ಕಲ್ಹಣನು ಶಾಂತರಸವನ್ನು ಧ್ವನಿಸುವ ಮೂಲಕ ತನ್ನ ಕೃತಿಗೆ ಏಕಕಾಲದಲ್ಲಿ ಇತಿಹಾಸತ್ವ ಮತ್ತು ಕಾವ್ಯತ್ವಗಳನ್ನು ತಂದುಕೊಂಡಿದ್ದಾನೆ. ಸಾವಿರಾರು ವರ್ಷಗಳಷ್ಟು ವಿಸ್ತೃತವಾದ ಕಾಶ್ಮೀರದ ಚರಿತ್ರೆಯಲ್ಲಿ ಆಗಿಹೋದ ರಾಜ-ಮಹಾರಾಜರ, ಮಂತ್ರಿ-ಸಾಮಂತರ, ಪ್ರಜಾನೀಕದ ವೈವಿಧ್ಯ-ವೈಪುಲ್ಯಗಳು ಅಪಾರ. ಇವಕ್ಕೆಲ್ಲ ಏಕಸೂತ್ರತೆಯನ್ನು ಶಾಂತರಸವಲ್ಲದೆ ಮತ್ತಾವುದೂ ತಂದುಕೊಡಲಾರದು.
ಕಲ್ಹಣನು ತನ್ನ ಇತಿಹಾಸದರ್ಶನಕ್ಕೆ ಯುಕ್ತವೆನಿಸುವ ರೀತಿಯಲ್ಲಿ ಕವಿಕರ್ಮದ ಮಹಿಮೆಯನ್ನು ಕೊಂಡಾಡುವ ಪರಿ ಹೀಗಿದೆ:
ಯೇऽಪ್ಯಾಸನ್ನಿಭಕುಂಭಶಾಯಿತಪದಾ ಯೇऽಪಿ ಶ್ರಿಯಂ ಲೇಭಿರೇ
ಯೇಷಾಮಪ್ಯವಸನ್ ಪುರಾ ಯುವತಯೋ ಗೇಹೇಷ್ವಹಶ್ಚಂದ್ರಿಕಾಃ |
ತಾಂಲ್ಲೋಕೋऽಯಮವೈತಿ ಲೋಕತಿಲಕಾನ್ ಸ್ವಪ್ನೇऽಪ್ಯಜಾತಾನಿವ
ಭ್ರಾತಃ ಸತ್ಕವಿಕೃತ್ಯ ಕಿಂ ಸ್ತುತಿಶತೈರಂಧಂ ಜಗತ್ತ್ವಾಂ ವಿನಾ || (೧.೪೭)
ಅಣ್ಣಾ ಸತ್ಕಾವ್ಯ! ಯಾರು ಮದಕರಿಗಳ ಕುಂಭಗಳನ್ನು ಮೆಟ್ಟಿದರೋ ಯಾರು ಐಸಿರಿಗಳನ್ನು ಹೊಂದಿದರೋ ಯಾರ ಅರಮನೆಗಳಲ್ಲಿ ಬಿಸಿಲ ಬೆಳದಿಂಗಳಂಥ ಸುಂದರಿಯರು ಮೆರೆದರೋ ಅಂಥ ಜಗನ್ನಾಯಕರನ್ನು ಈ ಜಗತ್ತು ಕನಸಿನಲ್ಲಿ ಕೂಡ ಕಂಡಿಲ್ಲದಿದ್ದರೂ ನಿನ್ನ ಮೂಲಕವಾಗಿ ಕಾಣುವುದು. ಹೆಚ್ಚು ಹೊಗಳಲೇಕೆ, ನೀನಿಲ್ಲದೆ ಜಗತ್ತೇ ಕುರುಡು.
ಕಲ್ಪನೆಯೇ ಜೀವಾಳವಾದ ಕಾವ್ಯವಂತಿರಲಿ; ವಾಸ್ತವವೇ ಆದ ಚರಿತ್ರೆ ಕೂಡ ಉಳಿದುಬರುವುದು ನುಡಿಯೋಜರ ಬರೆಹಗಳಿಂದ. ಹೀಗಾಗಿ ವಶ್ಯವಾಕ್ಕುಗಳ ಮಾತಿಗೆ ಅಷ್ಟಿಷ್ಟು ಬೆಲೆಯೆಂದು ಹೇಳಲಾಗದು. ಮಾತ್ರವಲ್ಲ, ಲೋಕದ ಕಲ್ಪನೆಗೂ ಎಟುಕದ ಸಂಗತಿಗಳು ಕವಿ-ಪಂಡಿತರ ಸೃಷ್ಟಿಯಲ್ಲಿ ದಾಖಲಾಗಿರುತ್ತವೆ. ಇವೆಲ್ಲ ಮಾತಿನ ಮೈಯನ್ನು ತಾಳದೆ ನಮಗೆ ದಕ್ಕುವುದಾದರೂ ಹೇಗೆ? ಇಂಥ ಗಂಭೀರವಿಷಯವನ್ನು ಕಲ್ಹಣನಂಥ ಮಹಾಕವಿಯಲ್ಲದೆ ಮತ್ತಾರು ತಾನೆ ಮುಂದಿರಿಸಿಯಾರು?
ಒಟ್ಟಿನಲ್ಲಿ ಕಲ್ಹಣನ ಕಾವ್ಯಮೀಮಾಂಸಾದೃಷ್ಟಿ ನಮ್ಮ ಆಲಂಕಾರಿಕರಿಗೆ ಒದಗಿಸಿದ ವಿಸ್ತರಣವೆನಿಸಿದೆ.
ಕವಿರಾಜ
ಕನ್ನಡಿಗನಾದ ಕವಿರಾಜನ ಅಸಾಧಾರಣಕೃತಿ “ರಾಘವಪಾಂಡವೀಯ”ವೆಂಬ ಧ್ವಿಸಂಧಾನಕಾವ್ಯ. ಇಂಥ ಶ್ಲೇಷಕಾವ್ಯಗಳನ್ನು ರಚಿಸಿದ ಮೊದಲಿಗರ ಪೈಕಿ ಇವನ ಸಾಧನೆ ಮಿಗಿಲು. ಈ ಕವಿಯು ತನ್ನ ಕಾವ್ಯರಚನೆಯ ಮಾರ್ಗವನ್ನು ಹೀಗೆ ಹೇಳಿಕೊಂಡಿದ್ದಾನೆ:
ಪ್ರಾಯಃ ಪ್ರಕರಣೈಕ್ಯೇನ ವಿಶೇಷಣವಿಶೇಷ್ಯಯೋಃ |
ಪರಿವೃತ್ತ್ಯಾ ಕ್ವಚಿತ್ತದ್ವದುಪಮಾನೋಪಮೇಯಯೋಃ ||
ಕ್ವಚಿತ್ ಪದೈಶ್ಚ ನಾನಾರ್ಥೈಃ ಕ್ವಚಿದ್ವಕ್ರೋಕ್ತಿಭಂಗಿಭಿಃ |
ವಿಧಾಸ್ಯತೇ ಮಯಾ ಕಾವ್ಯಂ ಶ್ರೀರಾಮಾಯಣಭಾರತಮ್ || (೧.೩೭,೩೮)
ಕೆಲವೆಡೆ ಸಮಾನವಾಗಿ ಬರುವ ಸಂದರ್ಭಗಳನ್ನು ಹೊಂದಿಸುವ ಮೂಲಕ, ಮತ್ತೆ ಕೆಲವೆಡೆ ವಿಶೇಷಣ ಮತ್ತು ವಿಶೇಷ್ಯಗಳನ್ನು ಉಭಯಕಥೆಗಳಲ್ಲಿ ಪರಸ್ಪರ ಪರಿವರ್ತಿಸಿಕೊಳ್ಳುವ ಮೂಲಕ, ಮತ್ತೆ ಕೆಲವೆಡೆ ಒಂದು ಕಥೆಯ ಎಳೆಗಳನ್ನು ಮತ್ತೊಂದು ಕಥೆಯಲ್ಲಿ ಹೋಲಿಕೆಗಳಾಗಿ ತರುವ ಮೂಲಕ, ಇನ್ನು ಹಲವೆಡೆ ನಾನಾರ್ಥಕವಾದ ಪದಗಳನ್ನು ಬಳಸುವ ಮೂಲಕ, ಮತ್ತೆ ಉಳಿದೆಡೆ ಅಲಂಕಾರಗಳ ಬಗೆಬಗೆಯ ಚಮತ್ಕಾರಗಳನ್ನು ಮಾಡುವ ಮೂಲಕ ಒಟ್ಟಾರೆ ನಾನಿಲ್ಲಿ ರಾಮಾಯಣ-ಮಹಾಭಾರತಗಳ ಸಮನ್ವಿತರಚನೆಯನ್ನು ಸಾಧಿಸಿದ್ದೇನೆ.
ನಮ್ಮ ಆಲಂಕಾರಿಕರು ಕಾವ್ಯಪ್ರಭೇದಗಳನ್ನು ಹೆಸರಿಸಿ ಲಕ್ಷಣೀಕರಿಸುವಾಗ ಸಂಧಾನಕಾವ್ಯಗಳನ್ನು ಲೆಕ್ಕಿಸಿದಂತೆ ತೋರದು. ಆ ಕೊರತೆಯನ್ನು ಕವಿಯೇ ಇಲ್ಲಿ ತೀರಿಸಿದ್ದಾನೆ. ಮಾತ್ರವಲ್ಲ, ಈತ ಕೇವಲ ಲಕ್ಷಣಕ್ಕೆ ಸೀಮಿತವಾಗದೆ ರಚನಾಪದ್ಧತಿಯನ್ನೂ ವಿವರಿಸಿದ್ದಾನೆಂಬುದು ಹೆಚ್ಚಿನ ಸ್ವಾರಸ್ಯದ ಸಂಗತಿ. ಕವಿಗಳು ಕಾವ್ಯಕಲೆಯ ವಿವರಗಳನ್ನು ಕೊಡುವಾಗ ಇಂಥ ಒಳಹೊಳಹುಗಳು ಚಿಮ್ಮಿಬರುವುದು ಸಹಜ.
ಈ ಲಾಕ್ಷಣಿಕತತ್ತ್ವವನ್ನೇ ಮುಂದೆ ಮತ್ತಷ್ಟು ಘನಿಷ್ಠವಾಗಿ ಕವಿತಾಮಯವಾಗಿಸಿದ್ದಾನೆ:
ಏಕತ್ರ ಚಂದ್ರಾತಪಸುಂದರಸ್ಯ
ಪಾರ್ಶ್ವೇऽಪರಸ್ಮಿನ್ ಸ್ಫುರದುಷ್ಣಭಾಸಃ |
ಅಯಂ ಸುಮೇರೋರನುಯಾತಿ ಲೀಲಾಂ
ಕಥಾದ್ವಯಾಶ್ಚರ್ಯಮಯಃ ಪ್ರಬಂಧಃ || (೧.೪೩)
ಒಂದೆಡೆ ತುಂಬ ತಿಂಗಳಿನ ಸೊಗಸು ಮತ್ತೊಂದೆಡೆ ಕಣ್ಣು ಕೋರೈಸುವ ನೇಸರಿನ ಹೊಗರು ಕೂಡಿಕೊಂಡ ಮೇರುಪರ್ವತದ ಮಾಹಾತ್ಮ್ಯವನ್ನು ಎರಡು ಕಥೆಗಳ ಕೂಡಿಕೆಯಾದ ಈ ಕಾವ್ಯವು ಧ್ವನಿಸುತ್ತಿದೆ.
ಇಲ್ಲಿ ಕವಿಪ್ರತಿಭೆಯೇ ಮೇರುಸದೃಶವಾಗಿ ಮೆರೆದಾಗ ಅದರ ಇರ್ಕೆಲಗಳಲ್ಲಿ ಒಂದೇ ಕಾಲವನ್ನು ಎರಡು ಅವಧಿಗಳೆಂಬಂತೆ ಬಿಂಬಿಸುವ ಸೂರ್ಯ-ಚಂದ್ರರ ಕಾಂತಿ ವ್ಯಾಸ-ವಾಲ್ಮೀಕಿಗಳ ಮನೋಧರ್ಮಗಳಿಗೆ ಸಂವಾದಿಯಾದ ಸೂಚನೆಯುಂಟು. ರಾಮಾಯಣದ ಸೌಕುಮಾರ್ಯ ಚಂದ್ರಕಾಂತಿಯಿಂದಲೂ ಮಹಾಭಾರತದ ಓಜಸ್ಸು ಸೂರ್ಯತೇಜಸ್ಸಿನಿಂದಲೂ ಧ್ವನಿತವಾಗುತ್ತಿರುವುದು ಅನ್ಯಾದೃಶ. ಈ ಮೂಲಕ ಸದ್ಯದ ವಿದ್ವತ್ಕವಿತೆಯು ಮಹರ್ಷಿಗಳಿಬ್ಬರ ಮನೋಧರ್ಮಗಳಿಗೆ ನ್ಯಾಯವನ್ನೊದಗಿಸುವ ಸಾಧ್ಯತೆಯೂ ಸೂಚಿತವಾಗಿದೆ.
ಗೋವರ್ಧನ
ತನ್ನ ಏಕೈಕರಚನೆಯಾದ “ಆರ್ಯಾಸಪ್ತಶತಿ”ಯ ಮೂಲಕ ಸಂಸ್ಕೃತಸಾಹಿತ್ಯದಲ್ಲಿ ವಿಶಿಷ್ಟಸ್ಥಾನವನ್ನು ಗಳಿಸಿದವನು ಗೋವರ್ಧನ. ಹಾಲ ಸಾತವಾಹನ ಮಾಡಿದ ಗಾಹೆಗಳ ಸಂಗ್ರಹ “ಗಾಹಾಕೋಸ” ಅಥವಾ “ಗಾಹಾಸತ್ತಸಈ” ಗ್ರಂಥದ ಮೇಲ್ಪಂಕ್ತಿಯಲ್ಲಿ ಸಾಗಿದ ಆರ್ಯಾಸಪ್ತಶತೀ ಪ್ರಾಕೃತಕಾವ್ಯದ ಸ್ವಾರಸ್ಯವನ್ನು ಸಂಸ್ಕೃತಭಾಷೆಗೆ ತಂದುಕೊಳ್ಳುವ ಹವಣಿನನದು. ಇಂಥ ಪ್ರಕಲ್ಪದ ಕಷ್ಟವನ್ನು ಕವಿ ಹೀಗೆ ಹೇಳುತ್ತಾನೆ:
ವಾಣೀ ಪ್ರಾಕೃತಸಮುಚಿತರಸಾ ಬಲೇನೈವ ಸಂಸ್ಕೃತಂ ನೀತಾ |
ನಿಮ್ನಾನುರೂಪನೀರಾ ಕಲಿಂದಕನ್ಯೇವ ಗಗನತಲಮ್ || (೧.೫೨)
ಪ್ರಾಕೃತಕಾವ್ಯಕ್ಕೇ ವಿಶಿಷ್ಟವಾದ ಸ್ವಾರಸ್ಯವನ್ನು ಸಂಸ್ಕೃತದಲ್ಲಿ ಪ್ರಯತ್ನಪೂರ್ವಕವಾಗಿ ತರುವುದೆಂದರೆ ಅದು ತಗ್ಗಿನಲ್ಲಿ ಹರಿಯುವ ಯಮುನೆಯನ್ನು ಬಲರಾಮನು ಒತ್ತಾಯದಿಂದ ಮೇಲಕ್ಕೆಳೆದು ತಂದಂತೆಯೇ ಸರಿ.
ಗೋವರ್ಧನನು ತನ್ನೀ ಕೃತಿಯಲ್ಲಿ ಕಾವ್ಯರಚನೆಯನ್ನು ಕುರಿತು ಹಲಕೆಲವು ಪದ್ಯಗಳನ್ನು ಬರೆದಿದ್ದರೂ ಇದೊಂದು ಪದ್ಯವನ್ನುಳಿದು ಮಿಕ್ಕೆಲ್ಲವೂ ಚರ್ವಿತಚರ್ವಣವೆಂಬಂತೆ ತೋರುತ್ತದೆ. ಆದರೆ ಈ ಒಂದು ಪದ್ಯದ ಮೂಲಕವೇ ಅವನು ಸಾಹಿತ್ಯಮೀಮಾಂಸೆಗೆ ನೀಡಿದ ಒಳನೋಟ ಗಣನೀಯ. ಇದು ಸಂಸ್ಕೃತದ ಆಡುನುಡಿಯ ರೂಪವಾಗಿ ಇದ್ದರೂ ತನ್ನದೇ ಆದ ವಿಭಿನ್ನತೆಯನ್ನು ಹೊಂದಿದ ಪ್ರಾಕೃತವಾಣಿಯ ನಯ-ನವುರುಗಳನ್ನು ಅಭಿಜಾತಸಂಸ್ಕೃತಕ್ಕೆ ತರುವುದರಲ್ಲಿರುವ ತೊಂದರೆಗಳನ್ನು ಮಾರ್ಮಿಕವಾಗಿ ತೆರೆದಿಟ್ಟಿದೆ. ವಸ್ತುತಃ ಇದು ಅತ್ಯಂತ ನಿಕಟವಾದ ಎರಡು ವಾಗ್ರೂಪಗಳ ನಡುವಣ ಅನುವಾದಪ್ರಕ್ರಮಕ್ಕೆ ಎದುರಾಗುವ ಕ್ಲೇಶಗಳನ್ನು ಸೂಕ್ಷ್ಮವಾಗಿ ಗಮನಿಸುವ ಮೂಲಕ ಅತ್ಯಂತ ವಿಭಿನ್ನವಾದ ಎರಡು ಭಾಷೆಗಳ ನಡುವಣ ಅನುವಾದೋದ್ಯಮ ಅದೆಂಥ ಸಾಹಸವಾಗುವುದೆಂಬುದನ್ನು ಧ್ವನಿಸಿದೆ. ಸಂಸ್ಕೃತ ತನಗಿರುವ ಭಾಷಿಕಪ್ರೌಢಿಮೆಯ ಮೂಲಕ ಎಷ್ಟೋ ಬಗೆಯ ಶಬ್ದಾರ್ಥಗತ ಚಮತ್ಕಾರಗಳಿಗೆ ಅವಕಾಶವನ್ನಿತ್ತಿದೆ. ಆದರೆ ಇಷ್ಟೆಲ್ಲ ಸಾಧ್ಯತೆಗಳಿದ್ದರೂ ಅದು ವ್ಯಾಕರಣದೃಷ್ಟ್ಯಾ ತುಂಬ ಬಿಗಿಯಾಗಿರುವ ಕಾರಣ ಪ್ರಾಕೃತಗಳಂತೆ ನಿಯಮಗೊಳಡನೆ ಹೆಚ್ಚಿನ ಸಲುಗೆಯನ್ನು ತೆಗೆದುಕೊಳ್ಳಲಾಗುವುದಿಲ್ಲ. ಪ್ರಾಕೃತಗಳಲ್ಲಾದರೋ ಒಂದೇ ಶಬ್ದಕ್ಕೆ ಹಲವು ಬಗೆಯ ಸಂಸ್ಕೃತಚ್ಛಾಯೆಗಳು ಸಾಧ್ಯ. ಉದಾಹರಣೆಗೆ: “ವಣ್ಣ” ಎಂಬ ಒಂದು ಪದವು ವರ್ಣ, ವಣ್ಯ ಮತ್ತು ವರ್ಣ್ಯಗಳೆಂಬ ಮೂರು ಬಗೆಯ ಸಂಸ್ಕೃತರೂಪಗಳನ್ನು ಪಡೆಯಲು ಸಾಧ್ಯ. ಆದುದರಿಂದಲೇ “ಸಉಂದಲಾವಣ್ಣ” ಎಂಬ ಮಾತಿಗೆ ಶಕುಂತಲಾವಣ್ಯ (ಹಕ್ಕಿಯ ಲಾವಣ್ಯ) ಮತ್ತು ಶಕುಂತಲಾವರ್ಣ (ಶಕುಂತಲೆಯ ಬಣ್ಣ, ಶಕುಂತಲೆಯ ಹಾಡು) ಎಂದೆಲ್ಲ ಸಂಸ್ಕೃತರೂಪಗಳಿವೆ. ಆದರೆ ಸಂಸ್ಕೃತದಲ್ಲಿ ಇವುಗಳಲ್ಲೊಂದು ಪದವನ್ನು ಆಯ್ದುಕೊಂಡರೆ ಮತ್ತೊಂದು ಪದದಿಂದ ಉನ್ಮೀಲಿಸುವ ಅರ್ಥ ದಕ್ಕದಾಗುತ್ತದೆ. ಈ ಕಾರಣದಿಂದಲೇ ಕಾಳಿದಾಸ ತನ್ನ “ಅಭಿಜ್ಞಾನಶಾಕುಂತಲ”ದ ನಿರ್ಣಾಯಕಘಟ್ಟವೊಂದರಲ್ಲಿ ತುಂಬ ಜಾಣ್ಮೆಯಿಂದ ಪ್ರಾಕೃತವನ್ನು ಬಳಸುವ ಮೂಲಕ ಉದ್ದಿಷ್ಟಾರ್ಥವನ್ನು ಸಾಧಿಸಿದ್ದಾನೆ. ಸಂಸ್ಕೃತದಲ್ಲಿ ವಿಜಾತೀಯವಾಗಿ ನಿಲ್ಲುವ ಸಂಯುಕ್ತಾಕ್ಷರಗಳು ಪ್ರಾಕೃತದಲ್ಲಿ ಸಜಾತೀಯವಾಗುವುದರಿಂದ—ಅರ್ಥಾತ್, ಏಕರೂಪತೆಯನ್ನು ಗಳಿಸುವುದರಿಂದ—ಇಂಥ ಶ್ಲೇಷಗಳು ಬಲುಮಟ್ಟಿಗೆ ಸಾಧ್ಯವಾಗಿವೆ. ಪ್ರಾಕೃತಕವಿಗಳು ತಮ್ಮ ಭಾಷೆಯ ಈ ಶಕ್ತಿಯನ್ನು ವಿಪುಲವಾಗಿ ಬಳಸಿಕೊಂಡಿದ್ದಾರೆ. ವಿಶೇಷತಃ ಶೃಂಗಾರಪ್ರಧಾನವಾದ ರಚನೆಗಳಲ್ಲಿ ಇಂಥ ನಾನಾರ್ಥಕಚ್ಛಾಯೆಗಳ ಮೇಲಾಟ ದೃಷ್ಟಚರ. ಇದು ಶೃಂಗಾರದಲ್ಲಿಯೇ ಹೆಚ್ಚಾಗಿರುವುದಕ್ಕೆ ಕಾರಣವೂ ಉಂಟು. ಮಿಕ್ಕೆಲ್ಲ ರಸಗಳಿಗಿಂತ ಶೃಂಗಾರವು ಅನೌಚಿತ್ಯಕ್ಕೆ ಜಾರುವ ಸಾಧ್ಯತೆ ಹೆಚ್ಚು. ಇದು ಬಹುಶಃ ವಾಚ್ಯತಾದೋಷದ ಪರಿಣಾಮ. ಈ ತೊಡಕನ್ನು ಶ್ಲೇಷದ ಮೂಲಕ ಕೆಲಮಟ್ಟಿಗೆ ದಾಟಿಕೊಳ್ಳಬಹುದು. ಅಲ್ಲದೆ ಇಂಥ ಸಾಧ್ಯತೆಯಿಂದ ಚಮತ್ಕಾರವೂ ಹೆಚ್ಚು. ಶಬ್ದಶಕ್ತಿಮೂಲದ ಧ್ವನಿಗಳಿಗೆ ಇಲ್ಲಿ ವಿಪುಲಾವಕಾಶವಿದೆ. ಅದರಲ್ಲಿಯೂ ವಸ್ತುಧ್ವನಿ-ಅಲಂಕಾರಧ್ವನಿಗಳಿಗೆ ಆಸ್ಪದ ಮಿಗಿಲು. ಬಹುಶಃ ಈ ಕಾರಣದಿಂದಲೇ ಆಲಂಕಾರಿಕರು ಧ್ವನಿಪ್ರಭೇದಗಳ ನಿರೂಪಣೆಗೆ ಪ್ರಾಕೃತಗಾಥೆಗಳನ್ನೇ ಹೆಚ್ಚಾಗಿ ಬಳಸಿದ್ದಾರೆ. ಧ್ವನಿಯೇ ಕಾವ್ಯದ ಜೀವಾಳವೆಂಬ ನಿಲವು ಬಲಿತಂತೆಲ್ಲ ಪ್ರಾಕೃತಕಾವ್ಯಗಳ ಇಂಥ ಸಾಧ್ಯತೆಯನ್ನು ಸಂಸ್ಕೃತದಲ್ಲಿ ಕೂಡ ಹುಡುಕಿಕೊಳ್ಳುವ ಹಂಬಲ ಹೆಚ್ಚಾಗಿ ಪ್ರಕೃತದ ಆರ್ಯಾಸಪ್ತಶತಿಯಂಥ ರಚನೆಗಳು ಹುಟ್ಟಿರಬಹುದು.
ಈ ಬಗೆಯ ಪ್ರಕಲ್ಪಗಳೇ ಪ್ರಾಕೃತವು ಸಂಸ್ಕೃತಕ್ಕಿಂತ ಮಿಗಿಲಾದ ನಮ್ಯಭಾಷೆ, ಕಾವ್ಯಭಾಷೆ, ರಸಾವಹಭಾಷೆ ಎಂಬೆಲ್ಲ ಅಭಿಪ್ರಾಯಗಳಿಗೆ ಮೂಲವಾದವು. ಗೋವರ್ಧನನು ಇದೇ ಮತವನ್ನು ಅಂಗೀಕರಿಸಿದಂತೆ ತೋರುತ್ತದೆ. ಈಚಿನ ಹಲಕೆಲವರು ವಿದ್ವಾಂಸರೂ ಇದನ್ನು ಎತ್ತಿಹಿಡಿದಿದ್ದಾರೆ. ಆದರೆ ಇಂಥ ಒಂದೇ ಇಕ್ಕಟ್ಟಾದ ಸಾಧ್ಯತೆಯನ್ನು ಗಮನಿಸಿಕೊಂಡು ಪ್ರಾಕೃತಕ್ಕೆ ಸಂಸ್ಕೃತಕ್ಕಿಂತ ಮಿಗಿಲಾದ ವಾಗ್ವೈದುಷ್ಯವನ್ನು ಆರೋಪಿಸುವುದು ಅವಿಚಾರಿತ. ಏಕೆಂದರೆ ಶೃಂಗಾರಕೇಂದ್ರಿತವಾದ, ಮುಕ್ತಕರೂಪದ ಪ್ರಾಕೃತಕಾವ್ಯಗಳ ಪರಂಪರೆಯಲ್ಲಿಯೇ ಗಾಹಾಕೋಸದ ಸ್ಥಾನ ಸರ್ವೋನ್ನತ; ಅಲ್ಲಿ ಈ ಬಗೆಯ ಶ್ಲೇಷಗಳು ಇಲ್ಲವೆಂಬಷ್ಟು ಕಡಮೆ. ಶ್ಲೇಷವಿರುವ ಹಲವು ಪದ್ಯಗಳೂ ಶ್ಲೇಷರಹಿತವಾದ ಪದ್ಯಗಳೆದುರು ಮಂಕಾಗಿವೆಯೆಂದರೆ ತಪ್ಪಲ್ಲ. ಏನಿದ್ದರೂ ಜಯವಲ್ಲಭನ “ವಜ್ಜಾಲಗ್ಗ”ದಿಂದ ಮೊದಲ್ಗೊಂಡು ಇಂಥ ಶ್ಲೇಷಾಧಿಕ್ಯದ ಚಮತ್ಕಾಗಳು ಮಿತಿಮೀರಿವೆ. ಈ ಜಾಡಿನಲ್ಲಿ ಸಾಗಿದ ಕಾವ್ಯಗಳೆಲ್ಲ ಸಹಜಸುಂದರವಾದ ರಸಮಯತೆಗೆ ಸಾಕಷ್ಟು ಎರವಾಗಿಯೂ ಇವೆ. ಅಷ್ಟೇಕೆ, ಪ್ರಾಕೃತಪದ್ಧತಿಯನ್ನು ಆಶ್ರಯಿಸದ ಶ್ಲೇಷಮಯವಾದ ಸಂಸ್ಕೃತಕಾವ್ಯಗಳಲ್ಲಿ ಕೂಡ ಸೊಗಸು ಮೃಗ್ಯವೆಂಬುದು ಸುಬಂಧು, ಧನಂಜಯ, ತ್ರಿವಿಕ್ರಮ, ಕವಿರಾಜ, ಚಿದಂಬರ ಮುಂತಾದ ಎಷ್ಟೋ ಕವಿಗಳ ಕೃತಿಗಳನ್ನು ಗಮನಿಸಿದಾಗ ಸ್ಪಷ್ಟವಾಗುತ್ತದೆ. ಮಾತ್ರವಲ್ಲ, ಮತ್ತೆಷ್ಟೋ ಜೈನಕವಿಗಳ ಶ್ಲಿಷ್ಟವಾದ ಸಂಸ್ಕೃತಕೃತಿಗಳಿಂದಲೂ ಇದೇ ನಿರ್ಣಯಕ್ಕೆ ಬರಬಹುದು. ಮೂಲತಃ ಕಾವ್ಯರಚನೆಗೆ ಶ್ಲೇಷವೊಂದು ಸಮರ್ಥಸಾಧನವಾದರೂ ಸಮಗ್ರಸಾಧನವಲ್ಲ. ಅದು ಸ್ವಲ್ಪ ಹೆಚ್ಚಾದರೂ ಸಹೃದಯರಿಗೆ ಹಿಂಸೆಯಾಗುತ್ತದೆ. ಈ ಕಾರಣದಿಂದಲೇ ಬಾಣಭಟ್ಟನು ಶ್ಲೇಷವು ಅಕ್ಲಿಷ್ಟವಾಗಿರಬೇಕೆಂದು ಒತ್ತಿ ಹೇಳಿದ್ದಾನೆ. ಈ ಬಗೆಯ ಅಕ್ಲಿಷ್ಟತೆಯು ಲೋಕರೂಢಿಯ ಕೆಲವು ಮಾತುಗಳಲ್ಲಿರುತ್ತದೆ, ಮತ್ತದು ಆಯಾ ಕಾಲಕ್ಕೆ ಮಾರ್ಪಡುತ್ತಿರುತ್ತದೆ. ಹೀಗಾಗಿಯೇ ಕಾಲಬಾಹ್ಯವಾದ ಲೋಕರೂಢಿ ಮುಂದಿನವರಿಗೆ ದುರ್ಬೋಧವೆನಿಸುತ್ತದೆ. ಲಕ್ಷಣಾವೃತ್ತಿಯ ಪಾಡೇ ಇಷ್ಟು. ಇದಕ್ಕೆ ಅಭಿಧಾಮೂಲದ ಶ್ಲೇಷವೂ ಸೇರಿಕೊಂಡರೆ ಮತ್ತೇನು ಹೇಳುವುದಿದೆ! ವಸ್ತುತಃ ಶ್ಲೇಷದಿಂದ ಸಾಧಿತವಾಗುವ ಉಭಯಶಕ್ತಿಮೂಲಧ್ವನಿಯೆಂಬುದೇ ಪ್ರಹೇಲಿಕಾಪ್ರಾಯ. ಹೀಗೆ ವ್ಯಂಜನೆಗೆ ಭಾವದೃಷ್ಟಿಯಿಂದ ಪೂರಕವಾಗದೆ ಬುದ್ಧಿಬಲದಿಂದ ಒತ್ತಾಸೆ ನೀಡಲು ಸಾಹಸಿಸುವ ಶ್ಲೇಷಗಳು ಕಾವ್ಯಾಭಾಸಕ್ಕೆ ತವರಾಗುವುದರಲ್ಲಿ ಅಚ್ಚರಿಯಿಲ್ಲ. ಈ ತಥ್ಯವನ್ನು ಗೋವರ್ಧನನ ಆರ್ಯಾಸಪ್ತಶತಿಯನ್ನು ಗಾಥಾಸಪ್ತಶತಿಯೊಡನೆ ಹೋಲಿಸುವ ಮೂಲಕವೇ ಮನಗಾಣಬಹುದು.
ಒಟ್ಟಿನಲ್ಲಿ ಗೋವರ್ಧನನು ದೊಡ್ಡ ಚರ್ಚೆಯನ್ನಂತೂ ಹುಟ್ಟುಹಾಕಿದ. ಆದರೆ ಅದು ಅವನಿಗೇ ಮುಳುವಾಗಿದೆ! ಹೀಗಿದ್ದಲ್ಲಿ ಪ್ರಾಕೃತದ ಕಾವ್ಯಪದ್ಧತಿಯ ಸ್ಫೂರ್ತಿಯನ್ನು ಸಂಸ್ಕೃತವು ರಚನಾತ್ಮಕವಾಗಿ ಹೇಗೆ ಮೈಗೂಡಿಸಿಕೊಳ್ಳಲು ಸಾಧ್ಯವೆಂಬ ಪ್ರಶ್ನೆ ಏಳುತ್ತದೆ. ಇದನ್ನು ಹೀಗೆ ಉತ್ತರಿಸಬಹುದು, ಅಗ್ರಾಮ್ಯವೂ ಸಹಜಸುಂದರವೂ ಆದ ವಾಗ್ರೂಢಿಗಳನ್ನು ಗಾಥಾಸಪ್ತಶತಿಯ ಬೆಳಕಿನಲ್ಲಿ ರೂಪಿಸಿಕೊಳ್ಳುವುದು; ತಾಲಬದ್ಧವಾದ ಮಾತ್ರಾಛಂದಸ್ಸುಗಳ ಗೇಯತೆಯನ್ನು ಮೈಗೂಡಿಸಿಕೊಳ್ಳುವುದು. ಇವೆರಡರ ಪರಾಕಾಷ್ಠೆಯನ್ನು ಕ್ರಮವಾಗಿ “ಅಮರುಕಶತಕ” ಮತ್ತು “ಗೀತಗೋವಿಂದ”ಗಳಲ್ಲಿ ಅಭಿಜ್ಞರು ಪರಿಶೀಲಿಸಿಕೊಳ್ಳಬಹುದು. ಇವುಗಳಲ್ಲಿಯಾದರೂ ಇರುವುದು ಶ್ಲೇಷದ ಹಾವಳಿ ಹೆಚ್ಚಿಲ್ಲದ ಸುಬೋಧಮಧುರವಾದ ಶಬ್ದಾರ್ಥಸೌಂದರ್ಯ.