ಜೀವರೇಖೆಗಳು – ಸಾ.ಕೃ.ರಾ. ಚಿತ್ರಿಸಿದ ಸತ್ತ್ವಮೂರ್ತಿಗಳು - 1
ಅಳಿಯದೆ ಉಳಿಯಬೇಕೆಂಬ ಬಯಕೆ ಒಂದಲ್ಲ ಒಂದು ರೂಪದಲ್ಲಿ ನಮ್ಮಲ್ಲೆಲ್ಲ ಇರುತ್ತದೆ. ಆದರೆ ಏನು ಮಾಡುವುದು, ಮಾನವರು ಮರ್ತ್ಯರು; ಶಾಶ್ವತತೆ ನಮ್ಮ ಹಣೆಯಲ್ಲಿ ಬರೆದಿಲ್ಲ. ಎಷ್ಟೋ ಬಾರಿ ವ್ಯಕ್ತಿಗಳು ಗತಿಸಿದರೂ ಬಯಕೆಗಳು ಮಾತ್ರ ಉಳಿದಿರುತ್ತವೆ. ಭರ್ತೃಹರಿ ಹೇಳಿಲ್ಲವೇ, “ತೃಷ್ಣಾ ನ ಜೀರ್ಣಾ ವಯಮೇವ ಜೀರ್ಣಾಃ”. ಈ ಬಗೆಯ ಬಯಕೆಯೇ ಧನಾತ್ಮಕವಾಗಿ ದುಡಿದು ಮಾನವರ ನೆನಪನ್ನು ಹಸನಾಗಿ ಉಳಿಸುವ ಹಲವಾರು ವಿಧಾನಗಳನ್ನು ಕಂಡುಕೊಂಡಿದೆ. ಅವುಗಳಲ್ಲಿ ಸಾಹಿತ್ಯ ಪ್ರಮುಖವಾದುದು, ಸುಂದರವಾದುದು. ಒರ್ವ ವ್ಯಕ್ತಿ ತನ್ನನ್ನು ಕುರಿತು ತಾನೇ ಬರೆದುಕೊಂಡರೆ ಅದು ಆತ್ಮಕಥೆ ಎನಿಸುತ್ತದೆ. ಹೀಗಲ್ಲದೆ ಬೇರೆಯವರು ಬರೆದರೆ ಅದು ವ್ಯಕ್ತಿವೃತ್ತ, ಸ್ಮೃತಿಚಿತ್ರ, ಜೀವನಚರಿತ್ರೆ ಮುಂತಾದ ರೂಪಗಳನ್ನು ಪಡೆಯುತ್ತದೆ.
