ಅಳಿಯದೆ ಉಳಿಯಬೇಕೆಂಬ ಬಯಕೆ ಒಂದಲ್ಲ ಒಂದು ರೂಪದಲ್ಲಿ ನಮ್ಮಲ್ಲೆಲ್ಲ ಇರುತ್ತದೆ. ಆದರೆ ಏನು ಮಾಡುವುದು, ಮಾನವರು ಮರ್ತ್ಯರು; ಶಾಶ್ವತತೆ ನಮ್ಮ ಹಣೆಯಲ್ಲಿ ಬರೆದಿಲ್ಲ. ಎಷ್ಟೋ ಬಾರಿ ವ್ಯಕ್ತಿಗಳು ಗತಿಸಿದರೂ ಬಯಕೆಗಳು ಮಾತ್ರ ಉಳಿದಿರುತ್ತವೆ. ಭರ್ತೃಹರಿ ಹೇಳಿಲ್ಲವೇ, “ತೃಷ್ಣಾ ನ ಜೀರ್ಣಾ ವಯಮೇವ ಜೀರ್ಣಾಃ”. ಈ ಬಗೆಯ ಬಯಕೆಯೇ ಧನಾತ್ಮಕವಾಗಿ ದುಡಿದು ಮಾನವರ ನೆನಪನ್ನು ಹಸನಾಗಿ ಉಳಿಸುವ ಹಲವಾರು ವಿಧಾನಗಳನ್ನು ಕಂಡುಕೊಂಡಿದೆ. ಅವುಗಳಲ್ಲಿ ಸಾಹಿತ್ಯ ಪ್ರಮುಖವಾದುದು, ಸುಂದರವಾದುದು. ಒರ್ವ ವ್ಯಕ್ತಿ ತನ್ನನ್ನು ಕುರಿತು ತಾನೇ ಬರೆದುಕೊಂಡರೆ ಅದು ಆತ್ಮಕಥೆ ಎನಿಸುತ್ತದೆ. ಹೀಗಲ್ಲದೆ ಬೇರೆಯವರು ಬರೆದರೆ ಅದು ವ್ಯಕ್ತಿವೃತ್ತ, ಸ್ಮೃತಿಚಿತ್ರ, ಜೀವನಚರಿತ್ರೆ ಮುಂತಾದ ರೂಪಗಳನ್ನು ಪಡೆಯುತ್ತದೆ. ಹೀಗೆ ಚಿತ್ರಿತರಾದ ವ್ಯಕ್ತಿಗಳ ಬಾಳು ಬೀಳಾಗಿರದೆ ಎತ್ತರದ ಆದರ್ಶಗಳಿಗೆ ಮುಡಿಪಾಗಿದ್ದರೆ ಅದನ್ನು ಕುರಿತ ಸಾಹಿತ್ಯ ನೂರು ಕಾಲ ನಿಲ್ಲುತ್ತದೆ; ಸಾರ್ಥಕವಾದ ಜೀವನವನ್ನು ಕಟ್ಟಿಕೊಳ್ಳಲು ಓದುಗರಿಗೆ ಮೇಲ್ಪಂಕ್ತಿಯನ್ನು ಹಾಕಿಕೊಡುತ್ತದೆ; ಸಮಾಜದ ಸ್ವಾಸ್ಥ್ಯವನ್ನು ಕಾಪಿಡುತ್ತದೆ.
ವಿದ್ಯಾಲಂಕಾರ ಸಾ. ಕೃ. ರಾಮಚಂದ್ರರಾಯರು ಸ್ವಯಂ ಉನ್ನತವಾದ ಬದುಕನ್ನು ನಡಸಿದವರು. ಹಲವರು ಹಿರಿಯರನ್ನು ಕುರಿತು ಬರೆಯಬೇಕೆಂಬ ಪ್ರವೃತ್ತಿ ಅವರಿಗೆ ಬಂದುದು ನಮ್ಮ ಭಾಗ್ಯ. ನಾವು ಉತ್ತಮವೆಂದು ಮೆಚ್ಚುವ ಬಾಳಿನ ಬಗೆಗಳಲ್ಲಿ ಅದೆಷ್ಟು ಪರಸ್ಪರ ಪೂರಕವಾದ ವ್ಯತ್ಯಾಸಗಳಿರುತ್ತವೆ, ಒಂದೇ ಗುರಿಯನ್ನು ಮುಟ್ಟಲು ಅದೆಷ್ಟು ಹಾದಿಗಳು ತೆರೆದಿರುತ್ತವೆ, ಸೊಗಸಿನಲ್ಲಿ ಅದೆಷ್ಟು ವಿಧಗಳಿವೆ, ಸತ್ಯಕ್ಕೆ ಎಷ್ಟೆಲ್ಲ ನೆಲೆಗಳಿವೆ, ಇವನ್ನೆಲ್ಲ ಚೆನ್ನಾಗಿ ಗ್ರಹಿಸಿ ರಸಮಯವೂ ಬೋಧಪ್ರದವೂ ಆದ ರಚನೆಯನ್ನು ಸಾಹಿತಿಯೊಬ್ಬ ಹೇಗೆ ಮಾಡಲು ಸಾಧ್ಯ - ಎಂಬುದನ್ನು ಈ ನಿಟ್ಟಿನ ಅವರ ಕೃತಿಗಳು ತೋರ್ಪಡಿಸಿವೆ. ಅಂಥ ಕೆಲವು ಕೃತಿಗಳನ್ನು ಪರಿಚಯಿಸಿಕೊಡುವುದೇ ಸದ್ಯದ ಉದ್ದೇಶ.
ಜೀವನಚರಿತ್ರೆಗಳನ್ನು ರಚಿಸಲು ರಾಮಚಂದ್ರರಾಯರು ಆಯ್ದುಕೊಂಡ ಮಹನೀಯರ ಪೈಕಿ ಯತಿಗಳು, ಯೋಗಿಗಳು, ದಾಸರು, ಅನುಭಾವಿಗಳು, ಅವಧೂತರು, ವಿದ್ವಾಂಸರು, ಕವಿಗಳು, ಕಲಾವಿದರು, ಬಹುಶ್ರುತರು, ಅಲ್ಪತೃಪ್ತರು - ಎಲ್ಲರೂ ಇದ್ದಾರೆ. ಇವರನ್ನು ಕುರಿತು ಮಕ್ಕಳಿಗಾಗಿಯೂ ದೊಡ್ಡವರಿಗಾಗಿಯೂ ಬರೆದಿದ್ದಾರೆ. ವಿಶೇಷವೆಂದರೆ ಮಕ್ಕಳ ಪುಸ್ತಕಗಳು ಪರಿಣತಪ್ರಜ್ಞರೂ ಓದಿ ಮೆಚ್ಚುವಂತಿವೆ; ದೊಡ್ಡವರಿಗಾಗಿ ಬರೆದವು ಮೊದಲ ಓದುಗರಿಗೂ ಆಪ್ತವೆನಿಸುವಂತಿವೆ. ಇದು ರಾಯರ ಸಿದ್ಧಿ. ಏನಿರಬಹುದು ಇದರ ರಹಸ್ಯ?
ಅಂತರಂಗ -ಅಭಿವ್ಯಕ್ತಿ
ರಾಯರ ಅರಿಮೆ ಅಸೀಮವಾದುದು. ಅವರು ಸರ್ವತಂತ್ರಸ್ವತಂತ್ರರು. ಸಾಂಪ್ರದಾಯಿಕ ಕುಟುಂಬದಲ್ಲಿ ಜನಿಸಿ ಶಿಷ್ಟ ಸಮಾಜದಲ್ಲಿ ಬೆಳೆದ ಸಂಸ್ಕಾರ, ಹಲವು ಹತ್ತು ಪ್ರಾಚೀನ ಹಾಗೂ ನವೀನ ವಿದ್ಯೆಗಳ ಅನುಸಂಧಾನದಿಂದ ಲಭಿಸಿದ ಬುದ್ಧಿಪರಿಷ್ಕಾರ, ಕಲೆ-ಸಾಹಿತ್ಯಗಳ ಅಭಿರುಚಿ-ವ್ಯವಸಾಯಗಳಿಂದ ಮೂಡಿದ ಭಾವಸಂವೇದನೆ ಎಲ್ಲವೂ ಸೇರಿ ಅವರ ವ್ಯಕ್ತಿತ್ವವನ್ನು ರೂಪಿಸಿದುವು. ಇವುಗಳ ಪೈಕಿ ವಿವಿಧ ದರ್ಶನಗಳ ಅಧ್ಯಯನವು ಮಾನವಜೀವನದ ಪರಮ ಗಂತವ್ಯದ ಹಾಗೂ ಆ ದಿಕ್ಕಿನಲ್ಲಿ ಸಾಗುವಾಗ ಎದುರಾಗುವ ಎಡರು-ತೊಡರುಗಳ ತಿಳಿವನ್ನು ಒದಗಿಸಿ, ತಮ್ಮ ಮಟ್ಟಿಗೆ ನೆಮ್ಮದಿಯನ್ನೂ ಲೋಕದ ಬಗೆಗೆ ಔದಾರ್ಯವನ್ನೂ ರಾಯರು ಪಡೆದುಕೊಳ್ಳುವಂತೆ ಮಾಡಿತು. ಅವರು ಇಷ್ಟಪಟ್ಟು ಓದಿದ ಆಯುರ್ವೇದ, ಮನಃಶಾಸ್ತ್ರ, ಸಮಾಜಶಾಸ್ತ್ರಗಳು ವ್ಯಕ್ತಿಯಿಂದ ಸಂಸ್ಕೃತಿಯವರೆಗೆ ವಿಸ್ತರಿಸಿಕೊಳ್ಳುವ ಮಾನುಷ ಜೀವನದ ಒಳ-ಹೊರಗುಗಳನ್ನು ಪರಿಚಯಿಸಿಕೊಟ್ಟವು. ಎಲ್ಲೆಡೆ ‘ಸ್ವಾಸ್ಥ್ಯಯ’ವನ್ನು ಅರಸುವಂತೆ, ಅದು ಕಂಡುಬರದಿದ್ದರೆ ಅದಕ್ಕೆ ಕಾರಣಗಳನ್ನು ಹುಡುಕಿ ಚಿಕಿತ್ಸೆ ನೀಡುವಂತೆ ಮಾಡಿದುವು. ಇನ್ನು ಚಿತ್ರ-ಶಿಲ್ಪ-ಸಂಗೀತಗಳ ಅಭ್ಯಾಸ ಚೆಲುವನ್ನು ಸೃಜಿಸುವ ಹಾಗೂ ಅದಕ್ಕೆ ಸಮುಚಿತವಾಗಿ ಸ್ಪಂದಿಸುವ ಶಕ್ತಿಯನ್ನು ದಕ್ಕಿಸಿಕೊಟ್ಟು ಸಿನಿಕತನ ಮೂಡದಂತೆ ಮಾಡಿತು.
ಈ ಬಗೆಯ ಅಂತರಂಗಪಾಕಕ್ಕೆ ಸರಿಮಿಗಿಲಾದ ಅಭಿವ್ಯಕ್ತಿಶಕ್ತಿಯನ್ನು ರಾಯರು ಸಂಪಾದಿಸಿಕೊಂಡಿದ್ದರು. ಎಲ್ಲ ಬಗೆಯ ನಿರೂಪಣೆಗೂ ಒದಗಿಬಂದು ಬುದ್ಧಿ-ಭಾವಗಳನ್ನು ಸಮನಾಗಿ ಬೆಳಗಬಲ್ಲ ಸರ್ವಾನುಕೂಲ ಶೈಲಿ ಅವರದು. ಅದು ಆಪ್ತ, ಅಕೃತಕ. ಅಲ್ಲಿ ಪರಿಷ್ಕಾರವಿದ್ದರೂ ಪೆಡಸುತನವಿಲ್ಲ, ಆಡುನುಡಿಯಿದ್ದರೂ ಅಗ್ಗತನವಿಲ್ಲ. ಗಾಂಭೀರ್ಯವನ್ನು ಬಲಿಗೊಡದ ಲವಲವಿಕೆ, ಅಧಿಕಾರಧ್ವನಿಗೆ ಭಂಗ ತಾರದ ಅನೌಪಚಾರಿಕತೆ ಅಲ್ಲಿಯ ಹೆಗ್ಗುರುತುಗಳು. ಆಲೋಚನೆ ಮತ್ತು ಅಭಿವ್ಯಕ್ತಿಗಳ ನಡುವೆ ಎಳ್ಳಷ್ಟೂ ಬಿರುಕಿಲ್ಲದ ಮಹಾತ್ಮರೊಬ್ಬರು ತಮ್ಮ ಓದುಗರನ್ನು ಸಂಪೂರ್ಣವಾಗಿ ವಿಶ್ವಾಸಕ್ಕೆ ತೆಗೆದುಕೊಂಡು ಸಲುಗೆಯಿಂದ, ನಯವಾಗಿ ವಿಷಯಗಳನ್ನು ವಿವರಿಸುವ ಕ್ರಮ ಅಲ್ಲಿ ಕಂಡುಬರುತ್ತದೆ. ಉದಾಹರಣೆಗಳು, ಉಪಕಥೆಗಳು, ಹಾಸ್ಯಕಣಿಕೆಗಳು, ಸಾಮತಿಗಳು, ಸಾರೋಕ್ತಿಗಳು, ಕಟಕಿ-ವಿನೋದಗಳು ನಡುನಡುವೆ ಬಂದು ಓದಿನ ಅನುಭವವನ್ನು ಉಲ್ಲಸಿತವಾಗಿಸುತ್ತವೆ. ರಾಯರ ಬರೆವಣಿಗೆ ಪಾಠವೆಂದರೆ ಪಾಠ, ಪ್ರವಚನವೆಂದರೆ ಪ್ರವಚನ. ನಮಗಂತೂ ಸ್ವಾಧ್ಯಾಯಕ್ಕೆ ಸಮಾನ!
‘ಚಿತ್ರಕ’ ಶೈಲಿ
ರಾಮಚಂದ್ರರಾಯರು ಮೂವತ್ತಕ್ಕಿಂತ ಹೆಚ್ಚಿನ ಸಂಖ್ಯೆಯ ವ್ಯಕ್ತಿಚಿತ್ರ ಮತ್ತು ಜೀವನಚರಿತ್ರೆಗಳನ್ನು ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ರಚಿಸಿದ್ದಾರೆ. ಇವುಗಳಲ್ಲಿ ಪ್ರಮುಖವಾದುವು: ಟಿಬೆಟ್ಟಿನ ಯೋಗಿ ಮಿಲರೇಪ, ಬುದ್ಧ, ವರ್ಧಮಾನ ಮಹಾವೀರ, ತ್ಯಾಗರಾಜ, ಪುರಂದರದಾಸರು, ಕನಕದಾಸರು, ಶ್ರೀಮಧ್ವಾಚಾರ್ಯರು, ಭದ್ರಬಾಹುಸ್ವಾಮಿ, ರಾಘವೇಂದ್ರ ಸ್ವಾಮಿಗಳು, ಮಹರ್ಷಿ ದೈವರಾತರು, ಶಾರದಾಪೀಠದ ಮಾಣಿಕ್ಯ, ಕಲಾತಪಸ್ವಿ ವೆಂಕಟಪ್ಪ, ಕಲಾತತ್ತ್ತ್ವವಮಹರ್ಷಿ ಆನಂದಕುಮಾರಸ್ವಾಮಿ, ಪುರುಷಸರಸ್ವತಿ ರಾಳ್ಳಪಲ್ಲಿ ಅನಂತಕೃಷ್ಣಶರ್ಮರು, ಹಿರಿಯ ಹೆಜ್ಜೆಗಳು, ಸಂಗೀತರತ್ನ ಮೈಸೂರು ಟಿ. ಚೌಡಯ್ಯ, ಅಭಿನವಗುಪ್ತ, ಸಂಗೀತಸಾಮ್ರಾಜ್ಞಿ ಎಂ. ಎಸ್. ಸುಬ್ಬುಲಕ್ಕ್ಷ್ಮಿ, ಶ್ರೀರಾಮಕೃಷ್ಣ ಪರಮಹಂಸರ ಮಾತುಕತೆಗಳು.
ರಾಯರು ತಾವು ಬರೆಯಬೇಕಾದ ವ್ಯಕ್ತಿಗಳನ್ನು ಕುರಿತು ಕ್ಷೇತ್ರಕಾರ್ಯ, ಸಂಬದ್ಧ ದಾಖಲೆಗಳ ಪರಾಮರ್ಶೆ, ಒಡನಾಡಿಗಳೊಂದಿಗೆ ಸಂವಾದ ಮುಂತಾದ ಬಗೆಗಳಿಂದ ಅಧ್ಯಯನ ನಡಸಿ ತಮ್ಮ ಮನಸ್ಸಿನಲ್ಲಿ ಸ್ಪಷ್ಟವಾದ ಚಿತ್ರವೊಂದನ್ನು ತಂದುಕೊಳ್ಳುವರು. ಆ ವ್ಯಕ್ತಿ ತಮಗೆ ತಿಳಿದವರೇ ಆದಲ್ಲಿ ತಮ್ಮ ಅನುಭವಗಳನ್ನೇ ಪ್ರಧಾನವಾಗಿ ನಚ್ಚಿ ಮುಂದುವರಿಯುವರು. ಹೀಗೆ ಕಥನದ ಒಳ-ಹೊರಗು ಸಿದ್ಧವಾದ ಬಳಿಕ ಅವರ ಮಾತಿನ ಮೋಡಿ ಕಾರ್ಯಪ್ರವೃತ್ತವಾಗುವುದು. ಎಂದೋ ನಡೆದುಹೋದ, ಮುಂದೆಂದೋ ನಡೆಯುವ, ಎಂದೂ ನಡೆಯದ ಘಟನೆಗಳನ್ನೂ ಕಣ್ಣಿಗೆ ಕಟ್ಟಿಸುವಂಥ ಅವರ ಚಿತ್ರಕ ನಿರೂಪಣೆ ಕಾದಂಬರಿಯಂತೆ ಓದಿಸಿಕೊಂಡುಹೋಗುವ ಗುಣವನ್ನು ಉಳ್ಳದ್ದು. ರಾಯರು ಬರೆವಣಿಗೆಗೆ ಆರಿಸಿಕೊಂಡ ವ್ಯಕ್ತಿಗಳನ್ನು ಕುರಿತು ಆ ಹಿಂದೆ ಅಥವಾ ಅನಂತರ ಹತ್ತಾರು ಪುಸ್ತಕಗಳು ಬಂದಿರಬಹುದು. ಆದರೂ ಇವರ ಬರೆಹ ಗತಾರ್ಥವೆನಿಸುವುದಿಲ್ಲ. ಇವರು ಮಾತ್ರ ಕಾಣಿಸಬಲ್ಲ ಒಳನೋಟಗಳು, ಒದಗಿಸಬಲ್ಲ ಪರಿಪ್ರೇಕ್ಷೆ, ದೊರಕಿಸಬಲ್ಲ ವಿವರಗಳು ಸಾಕಷ್ಟಿರುತ್ತವೆ. ‘ರಾಯರು ಬರೆಯದಿದ್ದರೆ ನಿಜಕ್ಕೂ ಕೊರತೆಯಾಗುತ್ತಿತ್ತು’ ಎಂಬ ಭಾವ ಓದುಗರಿಗೆ ಮೂಡುವುದು ಹುಸಿಯಲ್ಲ.
ರೇಖಾಚಿತ್ರಗಳು ಅವರ ಹೆಚ್ಚಿನ ಬರೆಹಗಳ ಅವಿಭಾಜ್ಯ ಅಂಗಗಳು, ಅಂದದ ಅಲಂಕೃತಿಗಳು. ಹಿಂದೆ ಹೇಳಿದ ‘ಚಿತ್ರಕ’ ಶೈಲಿಗೆ ಇವುಗಳ ಕೊಡುಗೆಯೂ ಇಲ್ಲದಿಲ್ಲ. ಇವನ್ನು ರಾಯರೇ ರಚಿಸುತ್ತಿದ್ದುದು ವಿಶೇಷ. ಈ ಮೂಲಕ ಒಂದು ಮಾಧ್ಯಮದಲ್ಲಿ ಮೂಡಿದ ವಿವರ ಮತ್ತೊಂದು ಮಾಧ್ಯಮದಲ್ಲಿ ಹೇಗೆ ತೋರುತ್ತದೆ ಎಂದು ತಾಳೆ ನೋಡಿ ತಿಳಿಯುವ ಅನನ್ಯ ಅವಕಾಶ ಓದುಗರಿಗೆ ದಕ್ಕುತ್ತದೆ. ಎರಡೂ ಭೂಮಿಕೆಗಳಲ್ಲಿ ರಾಯರ ಅಭಿವ್ಯಕ್ತಿ ಏಕಪ್ರಕಾರವಾದ ಸೌಂದರ್ಯ-ಸೌಷ್ಠವಗಳನ್ನು ಬಿಂಬಿಸಿರುವುದು ಒಡಕಿಲ್ಲದ ಅವರ ಅಂತರಂಗಕ್ಕೂ ಮೇರೆಯರಿಯದ ಅವರ ಕೌಶಲಕ್ಕೂ ದಿಕ್ಸೂಚಿ ಎನ್ನಬಹುದು. ಒಂದೆರಡು ಉದಾಹರಣೆಗಳನ್ನು ಗಮನಿಸಬಹುದು.
ಎಂ. ಎಸ್. ಸುಬ್ಬುಲಕ್ಷ್ಮಿ ಅವರ ವಿನೀತಪ್ರಶಾಂತ ಮುಖಮುದ್ರೆ ಭಕ್ತಿಭಾವವೇ ಮೈದಳೆದಂತೆ ತೋರುವುದು ದಿಟವಷ್ಟೆ. ಇದನ್ನು ರಾಯರು ಅಕ್ಷರ-ರೇಖೆಗಳಲ್ಲಿ ಬಣ್ಣಿಸುವ ಬಗೆ ಹೀಗಿದೆ:
“ಒಡಲಲ್ಲಿ ತುಂಬಿ ಬಂದ ಭಕ್ತಿಭಾವ, ಎಡೆಬಿಡದ ಸಾಧನೆಯಿಂದ ಒದಗಿಬಂದ ಸ್ವರಶುದ್ಧಿ, ಶ್ರುತಿಶುದ್ಧಿ, ಲಯಶುದ್ಧಿಗಳು, ಇವುಗಳೊಂದಿಗೆ ಹೃದಯದಲ್ಲಿ ಅರಳಿಕೊಂಡ ದೈವಶ್ರದ್ಧೆಯ ಬೆಳಕು ಅವರ ಮುಖಮಂಡಲವನ್ನೇ ಬೆಳಗುತ್ತಿದ್ದಿತು. ಆ ಸೌಮ್ಯ, ಸಾತ್ತ್ತ್ವಿಕ, ಶಾಂತ, ಮಂದಹಾಸದ ಮುಖಮುದ್ರೆ ಯಾರನ್ನಾದರೂ ಬೆರಗುಗೊಳಿಸುತ್ತಿದ್ದಿತು, ಸೆಳೆದುಕೊಳ್ಳುತ್ತಿದ್ದಿತು.” (‘ಸಂಗೀತ ಸಾಮ್ರಾಜ್ಞಿ ಎಂ. ಎಸ್. ಸುಬ್ಬುಲಕ್ಷ್ಮಿ’. ವಿ.ಸೀ. ಸಂಪದ, ಬೆಂಗಳೂರು, ೨೦೦೫, ಪು. ೬೭)‘ಕಲಾತಪಸ್ವಿ ವೆಂಕಟಪ್ಪ - ಜೀವನ, ವ್ಯಕ್ತಿ, ಕಲೆ’ (ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು, ೧೯೮೮) ಎಂಬ ಪುಸ್ತಕದ ಮೊದಲಿಗೇ ಬರುವ ವೆಂಕಟಪ್ಪನವರ ಆಕೃತಿಯ ಬಣ್ಣನೆಗೂ ಮುಖಪುಟದಲ್ಲಿ ರಾಯರೇ ರಚಿಸಿರುವ ಅವರ ರೇಖಾಚಿತ್ರಕ್ಕೂ ಪ್ರತ್ಯಂಶಸಾಮ್ಯವಿದೆ:
“ಮುಪ್ಪಡರಿದ್ದರೂ ಮುಖದ ಚೆಲುವು ಮರೆಯಾಗಿರಲಿಲ್ಲ. ಮುಖಮುದ್ರೆಯ ಗಾಂಭೀರ್ಯದೊಂದಿಗೆ ಮುಖದ ಒಂದೊಂದು ವಿವರವನ್ನೂ ಶಿಲ್ಪಿಯೇ ಕಂಡರಿಸಿ ಮಾಡಿದಂತೆ ತೋರುವರು. ಶಿಲ್ಪದಂತೆ ಅಂಗಪ್ರತ್ಯಂಗಗಳೆಲ್ಲ ಸ್ಫುಟವಾಗಿ, ನಾಜೂಕಾಗಿ ಸಿದ್ಧವಾಗಿವೆ. ಮುಖದ ಮೇಲೆ ಒಮ್ಮೆ ನೋಡಿದರೆ ಮತ್ತೊಮ್ಮೆ ನೋಡಬಯಸುವಂತೆ ಕಳೆ. ಹಣೆಯ ಹರವು, ಕಣ್ಣುಗಳ ಹೊಳಪು, ಮೂಗಿನ ಮಾಟ, ಬಿಳಿಮೀಸೆಗಳ ಸೊಗಸು, ತುಂಬಿಕೊಂಡ ಗದ್ದ, ತಲೆಯ ಮೇಲೆ ಜರಿಯಿಲ್ಲದ ಬಿಳಿ ರುಮಾಲು, ಮೈಮೇಲೆ ಹಳೆಯ ಕಾಲದ ಎದೆ ಮುಚ್ಚುವ ಕೋಟು ... ಅವರ ನೋಟದಲ್ಲಿ, ನಡಿಗೆಯಲ್ಲಿ, ಕೈಯಾಟದಲ್ಲಿ ಆತ್ಮವಿಶ್ವಾಸ ಎದ್ದುಕಾಣುವುದು. ಸಾಮಾನ್ಯವಾಗಿ ಕಣ್ಣಿಗೆ ಬೀಳುವ ವ್ಯಕ್ತಿಯಂತಲ್ಲ ಇವರು. ಯಾವುದೋ ಸಾಧನೆಯಲ್ಲಿ ತೊಡಗಿ ಏನೋ ಸಿದ್ಧಿಯನ್ನು ಪಡೆದುಕೊಂಡು ಕೃತಕೃತ್ಯರಾದಂತೆ ನಿಲುವು.” (ಪು. ೧)
ಈ ಬಗೆಯ ಚಿತ್ರಗಳನ್ನು ಮುಖ್ಯವಾಗಿ ಎಂ. ಎಸ್. ಸುಬ್ಬುಲಕ್ಷ್ಮಿ, ಅಭಿನವಗುಪ್ತ ಮತ್ತು ಶ್ರೀರಾಮಕೃಷ್ಣರನ್ನು ಕುರಿತ ಕೃತಿಗಳಲ್ಲಿ ಕಾಣಬಹುದು. ಮೊದಲನೆಯದರಲ್ಲಿ ಸುಬ್ಬುಲಕ್ಷ್ಮಿ ಮತ್ತು ಅವರ ಗಂಡ ಸದಾಶಿವಂ ಅವರ ಚಿತ್ರಗಳಲ್ಲದೆ ಅವರಿಗೆ ನೇರವಾಗಿಯೋ ಪರೋಕ್ಷವಾಗಿಯೋ ಮಾರ್ಗದರ್ಶನ ಮಾಡಿದ ಹಿರಿಯ ಸಂಗೀತಗಾರರ ಚಿತ್ರಗಳಿದ್ದರೆ, ಎರಡನೆಯದರಲ್ಲಿ ಅಭಿನವಗುಪ್ತನ ಪೂರ್ವಜರ ಆಕೃತಿಗಳೂ ವಿವಿಧ ಭಾವಗಳಲ್ಲಿ ತೋರಿರಬಹುದಾದ ಅವನವೇ ಭಂಗಿಗಳ ಕಲ್ಪಿತ ಚಿತ್ರಗಳೂ ಇವೆ. ಇನ್ನು ಮೂರನೆಯದರಲ್ಲಿ ಶ್ರೀರಾಮಕೃಷ್ಣರ ಶಿಷ್ಯರ ಹಾಗೂ ಅನುಯಾಯಿಗಳ ರೇಖಾಚಿತ್ರಗಳಿವೆ. ಇವಲ್ಲದೆ ‘ಹಿರಿಯ ಹೆಜ್ಜೆಗಳು’ ಎಂಬ ವಿನೂತನ ಕೃತಿಯಲ್ಲಿ ಸುಮಾರು ಅರುವತ್ತು ಮಂದಿ ಹಳೆಯ ಕಾಲದ ಸಾಂಪ್ರದಾಯಿಕ ಸಂಗೀತಜ್ಞರ ರೇಖಾಚಿತ್ರಗಳಿವೆ; ನಾಲ್ಕಾರು ವರ್ಣಚಿತ್ರಗಳೂ ಇವೆ. (ಇಲ್ಲಿಯ ಕೆಲವು ಚಿತ್ರಗಳು ಎಂ.ಎಸ್. ಬಗೆಗಿನ ಪುಸ್ತಕದಲ್ಲಿಯೂ ಸೇರಿವೆ.) ರಾಯರು ವ್ಯಕ್ತಿಗಳ ಚಿತ್ರಗಳನ್ನು ಮಾತ್ರವಲ್ಲದೆ ಆಯಾ ಕೃತಿಯ ಆವಶ್ಯಕತೆಗೆ ತಕ್ಕಂತೆ ಗುಡಿ-ಗೋಪುರಗಳ, ವಿಗ್ರಹ-ಪರಿಕರಗಳ ರೇಖಾಚಿತ್ರಗಳನ್ನೂ ರಚಿಸಿರುವುದುಂಟು. ಇವು ಓದಿನ ಏಕತಾನತೆಯನ್ನು ಮುರಿದು ಗ್ರಹಣೆಗೆ ಪುಷ್ಟಿಯನ್ನು ತುಂಬಲು ಸಹಕರಿಸುತ್ತವೆ.
ರತ್ನತ್ರಯ
ರಾಯರು ರಚಿಸಿರುವ ಜೀವನಚರಿತ್ರೆಗಳ ಪೈಕಿ ‘ರತ್ನತ್ರಯ’ ಎಂದು ಗುರುತಿಸಬಹುದಾದುವು ಶ್ರೀಚಂದ್ರಶೇಖರಭಾರತೀಸ್ವಾಮಿಗಳು, ರಾಳ್ಲಪಲ್ಲಿ ಅನಂತಕೃಷ್ಣಶರ್ಮರು ಮತ್ತು ಕೆ. ವೆಂಕಟಪ್ಪನವರನ್ನು ಕುರಿತ ಹೊತ್ತಿಗೆಗಳು.
ಈ ಮೂರು ಕೃತಿಗಳನ್ನು ರಾಯರು ಬೇರೆಬೇರೆಯ ನೆಲೆಗಳಿಂದ ರಚಿಸಿರುವಂತೆ ತೋರುತ್ತದೆ. ‘ಶಾರದಾಪೀಠದ ಮಾಣಿಕ್ಯ’ದಲ್ಲಿ ಆದ್ಯಂತವಾಗಿ ಪ್ರಶ್ರಯ ಮತ್ತು ಸಂಯಮಗಳು ಕಾಣಿಸುತ್ತವೆ. ಲೇಖಕರು ಮನಃಶಾಸ್ತ್ರದ ವಿದ್ವಾಂಸರೆಂದು ತಿಳಿಯಲು ಅಲ್ಲಲ್ಲಿ ಪುರಾವೆಗಳು ದೊರೆಯುವುವಾದರೂ ಅವರು ಸ್ವಾಮಿಗಳಿಗೆ ಸಮರ್ಪಿತಚಿತ್ತರಾದ ಮಾನಸಶಿಷ್ಯರೆಂದು ನಿಚ್ಚಳವಾಗುತ್ತದೆ. ಇನ್ನು ‘ಪುರುಷಸರಸ್ವತಿ’ಯಲ್ಲಿ ತಮ್ಮ ಗುರುಗಳ ಬಗೆಗಿನ ಪ್ರಾಂಜಲವಾದ ಗೌರವ ಎದ್ದುಕಾಣುತ್ತದೆ. ಪ್ರಶ್ನಾತೀತವಾದ ಅಂಗೀಕಾರವೇ ಇಲ್ಲಿಯ ಆಧಾರಶ್ರುತಿ ಎನ್ನಬಹುದು. ‘ಕಲಾತಪಸ್ವಿ ವೆಂಕಟಪ್ಪ’ ಕೃತಿಯಲ್ಲಾದರೋ ಆದರವು ಆರಾಧನೆಯಾಗದ ಹದವನ್ನು ಕಾಣುತ್ತೇವೆ. ವೆಂಕಟಪ್ಪನವರ ವಿಷಯದಲ್ಲಿ ಏಕವಚನ-ಬಹುವಚನಗಳೆರಡೂ ಬಳಕೆಯಾಗಿರುವುದು ಇದಕ್ಕೆ ಒಂದು ಮಾರ್ಮಿಕ ಸಾಕ್ಷಿ. ಅವರು ಎತ್ತಿಹಿಡಿದ ಮೌಲ್ಯಗಳನ್ನು, ಗಳಿಸಿದ ಕಲಾಸಿದ್ಧಿಯನ್ನು ರಾಯರು ಮೆಚ್ಚಿದರೂ ಅವರ ಕುಂದು-ಕೊರತೆಗಳಿಗೆ ಕುರುಡಾಗದೆ ಅವನ್ನು ಹೃದ್ಯವಾದ ಹಾಸ್ಯದ ಲೇಪದೊಡನೆ ಕಾಣಿಸಬಲ್ಲರು.
ರಾಯರು ಬರೆದ ಜೀವನಚರಿತ್ರೆಗಳ ಪ್ರತಿನಿಧಿಗಳಾಗಿ ಇವನ್ನು ಸ್ವೀಕರಿಸಿ ವಿಶದವಾಗಿ ವಿವೇಚಿಸೋಣ.
‘ಶಾರದಾಪೀಠದ ಮಾಣಿಕ್ಯ’ದ (ಅಭಿಜ್ಞಾನ, ಬೆಂಗಳೂರು, ೨೦೨೧) ‘ಮೊದಲ ಮಾತು’ ನಿಜವಾಗಿ ರಾಮಚಂದ್ರರಾಯರನ್ನು ಅರಿಯಬಯಸುವವರು ಓದಬೇಕಾದ ಮೊದಲ ಮಾತೂ ಹೌದು. ಏಕೆಂದರೆ ಇಲ್ಲಿ ಅವರು ತಮ್ಮ ಗುರುಗಳನ್ನು ಗುರುತಿಸಿಕೊಂಡ ಪ್ರಸ್ತಾವವಿದೆ. “ಅವರನ್ನು ನಾನು ಮೊದಲು ಕಂಡದ್ದು ಹದಿಮೂರು ವರ್ಷಗಳ ಹುಡುಗನಾಗಿದ್ದಾಗ. ಅಂದಿನಿಂದ ಇಂದಿನವರೆಗೂ ಅವರನ್ನು ನಾನು ನೆನೆಯದಿದ್ದ ದಿನವಿಲ್ಲ, ಅವರನ್ನು ಸ್ಮರಿಸದೆ ಆರಂಭಿಸಿದ ಅಧ್ಯಯನವಿಲ್ಲ, ಅವರ ನೆರವನ್ನು ಕೋರದೆ ಮೊದಲು ಮಾಡಿದ ಅನುಷ್ಠಾನವಿಲ್ಲ. ನನಗೆ ಅವರಲ್ಲಿ ಏಕನಿಷ್ಠೆ; ಬೇರೊಬ್ಬ ಗುರುವನ್ನು ಅರಸುವ ಅಗತ್ಯ ನನಗೆ ಈವರೆಗೆ ಬಂದುದಿಲ್ಲ!” (ಪು. ೧೮). ಅಷ್ಟು ಚಿಕ್ಕ ವಯಸ್ಸಿನಲ್ಲಿ ಇಷ್ಟು ದೊಡ್ಡ ಪ್ರಭಾವ ಆಗಬೇಕೆಂದರೆ ಸ್ವಾಮಿಗಳು ಎಷ್ಟು ಮಹಿಮಶಾಲಿಗಳಾಗಿರಬೇಕು, ರಾಯರು ಎಷ್ಟು ಸಂವೇದನಶೀಲರಾಗಿರಬೇಕು ಎಂಬುದು ತಾನಾಗಿಯೇ ತಿಳಿಯುತ್ತದೆ. ಇಲ್ಲಿ ಬಂದಿರುವ ಆ ಪ್ರಥಮ ದರ್ಶನದ ನಿರೂಪಣೆ ನಮ್ಮ ಸಾಮಾನ್ಯದ ಅಲ್ಪತೆಯನ್ನು ಅಡಗಿಸಿ ಯಾವುದೋ ದೊಡ್ಡ ಅನುಭವಕ್ಕೆ ನಮ್ಮನ್ನು ಒಪ್ಪಿಸುತ್ತದೆ.
ಈ ಕೃತಿಯಲ್ಲಿ ಸ್ವಾಮಿಗಳ ಪೂರ್ವಾಶ್ರಮದಿಂದ ಮೊದಲ್ಗೊಂಡು ಜೀವನ್ಮುಕ್ತರಾದ ಅವರು ವಿದೇಹಮುಕ್ತಿಯನ್ನು ಪಡೆಯುವವರೆಗಿನ ವಿವರಗಳು ಅಧಿಕೃತವಾಗಿ, ಆಕರ್ಷಕವಾಗಿ ಚಿತ್ರಿತವಾಗಿವೆ. ಜೊತೆಗೆ ‘ಶ್ರೀಗುರುಕೃತಿರತ್ನಮಾಲೆ’ ಎಂಬ ಹೆಸರಿನಲ್ಲಿ ಸ್ವಾಮಿಗಳು ರಚಿಸಿದ ಹತ್ತು ಸ್ತೋತ್ರಗಳ ಮೂಲಪಾಠ ಹಾಗೂ ಕನ್ನಡ ಅನುವಾದಗಳಿವೆ. ‘ಪರಿಶಿಷ್ಟ’ದಲ್ಲಿ ಸದಾಶಿವಬ್ರಹ್ಮೇಂದ್ರರ ಪರಿಚಯ, ಆತ್ಮವಿದ್ಯಾವಿಲಾಸದ ಅನುವಾದ (ಮೂಲಶ್ಲೋಕಗಳೊಡನೆ) ಹಾಗೂ ಅವಧೂತಸಂಪ್ರದಾಯದ ಸಂಕ್ಷಿಪ್ತ-ಸಮಗ್ರ ನಿರೂಪಣೆಯಿದೆ.
ಸ್ವಾಮಿಗಳ ಹಿರಿಮೆಯನ್ನು ಮನಗಾಣಿಸುವ ಅನೇಕ ಪ್ರಸಂಗಗಳು ಇಲ್ಲಿ ವಿವೃತವಾಗಿವೆ. ಕೆಲವನ್ನಾದರೂ ಮೆಲುಕುಹಾಕೋಣ. ಸಂನ್ಯಾಸದೀಕ್ಷೆಯ ಹಿಂದಿನ ದಿನ ಹಲವರು ಹಿರಿಯರು ಸಭೆ ಸೇರಿದ್ದರು. ನರಸಿಂಹ (ಸ್ವಾಮಿಗಳ ಪೂರ್ವಾಶ್ರಮದ ಹೆಸರು) ಬ್ರಹ್ಮಚಾರಿಯೂ ಇದ್ದನು. ಹಿರಿಯರ ನಡುವೆ ಬ್ರಹ್ಮಚಾರಿ ಕುಳಿತುಕೊಳ್ಳದೆ ನಿಂತೇ ಇದ್ದನು. ನಾಳೆ ಜಗದ್ಗುರುಗಳಾಗುವವರು ಹೀಗೆ ನಿಂತಿರಬಾರದೆಂದು ಯಾರೋ ಸೂಚಿಸಿದಾಗ ನರಸಿಂಹನಿಂದ ಬಂದ ಉತ್ತರ, “ಅದು ನಾಳೆ ತಾನೆ!” (ಪು. ೬೪). ಬ್ರಹ್ಮಜ್ಞಾನದ ಮೊದಲ ಮೆಟ್ಟಿಲು ವಿವೇಕ ಎಂಬುದನ್ನು ಈ ಪ್ರಸಂಗ ಸೊಗಸಾಗಿ ಅರಹುತ್ತದೆ. ಅದೊಮ್ಮೆ ಯಾತ್ರೆಯ ವೇಳೆ ಪರಿಚಾರಕನೊಬ್ಬ ಗಲಿಬಿಲಿಗೊಂಡು ಬಹಿರ್ವಾಸವನ್ನು ಹಿಂದುಮುಂದಾಗಿ ಅವರಿಗೆ ಹೊದೆಸಿಬಿಟ್ಟ. ಒಳಗಣ ದಾರಗಳು ಗೋಜುಗೋಜಾಗಿ ಹೊರಗೆ ಕಾಣುತ್ತಿದ್ದುವು. ಆ ದಿನವಿಡೀ ಸ್ವಾಮಿಗಳು ಹಾಗೆಯೇ ಸಂಚಾರ ಮಾಡಿದರು. ದಿನಾಂತ್ಯದಲ್ಲಿ ಪರಿಚಾರಕನಿಗೆ ತನ್ನ ತಪ್ಪಿನ ಅರಿವಾಗಿ ಕ್ಷಮೆ ಯಾಚಿಸಿದಾಗ ಸ್ವಾಮಿಗಳು, “ಏನಾಯಿತೀಗ? ಈ ದಿನ ಇದೊಂದು ವೇಷ!” ಎಂದರಂತೆ (ಪು. ೧೦೦). ‘ಕೌಪೀನವಂತಃ ಖಲು ಭಾಗ್ಯವಂತಃ’ ಎಂದು ನಂಬಿದ್ದವರಲ್ಲವೇ ಅವರು? ಇನ್ನೊಮ್ಮೆ ಸಕೇಶಿ ವಿಧವೆಯೊಬ್ಬರಿಗೆ ತೀರ್ಥ ಕೊಟ್ಟು ಸಾಂತ್ವನ ಹೇಳಿದ್ದು (ಪು. ೧೨೯), ಮಗದೊಮ್ಮೆ ಮಗಳ ಮದುವೆಗೆ ದುಡ್ಡಿಲ್ಲದ ಮುದುಕರಿಗೆ ತಮ್ಮ ಎದುರು ಹರಿವಾಣದಲ್ಲಿದ್ದ ಅಷ್ಟೂ ಬೆಳ್ಳಿಯ ನಾಣ್ಯಗಳನ್ನು ಕೊಟ್ಟಿದ್ದು (ಪು. ೧೩೦) ಯತಿವರೇಣ್ಯರೊಬ್ಬರ ಔದಾರ್ಯದ ದ್ಯೋತಕಗಳು. “ಅದ್ವೈತಾನುಭವವೆನ್ನುವುದು ಶಂಕರಾಚಾರ್ಯರ ಶಿಷ್ಯರ ಸ್ವತ್ತೋ? ಶೃಂಗೇರೀಮಠದ ಜಹಗೀರಿಯೋ?” (ಪು. ೧೩೪) ಎಂಬ ಮಾತು ನಿರುಪಾಧಿಕವಾದ ಅವರ ನೆಲೆಗೆ ತಕ್ಕುದಾದುದು. ಇಂಥ ಮಹಾತ್ಮರಿಗೆ ಚಿಕಿತ್ಸೆ ಮಾಡಲು ಬಂದ ಡಾ|| ಗೋವಿಂದಸ್ವಾಮಿ ಎಂಬ ವೈದ್ಯರು “ನಾನು ಸ್ವಾಮಿಗಳ ವ್ಯಾಧಿಯನ್ನು ಗುಣಪಡಿಸಲೆಂದು ಹೋದದ್ದು ನಿಜ; ಆದರೆ ನಡೆದದ್ದು, ನನ್ನ ವ್ಯಾಧಿ ಗುಣವಾಯಿತು!” (ಪು. ೧೦೮) ಎಂದು ಉದ್ಗರಿಸಿದ್ದರಲ್ಲಿ ಅಚ್ಚರಿ ಏನಿದೆ? ಹೀಗೆ ಚಾರಿತ್ರಸ್ಫೋರಕವಾದ ಘಟನೆಗಳನ್ನು ಮೊಗೆಮೊಗೆದು ಕೊಡುವ ರಾಯರು ಜೀವನಚರಿತ್ರೆಯ ಜೀವ ಇರುವುದು ಇವುಗಳಲ್ಲಿಯೇ ಎಂದು ಧ್ವನಿಸುತ್ತಾರೆ.
ಇನ್ನು ಸ್ವಾಮಿಗಳ ಪೂರ್ವಾಶ್ರಮದ ತಂದೆ-ತಾಯಿಯರಿಗೆ ಹುಟ್ಟಿದ ಹದಿಮೂರು ಮಕ್ಕಳು ಎಳವೆಯಲ್ಲಿಯೇ ಗತಿಸಿ ಹದಿನಾಲ್ಕನೆಯ ಗಂಡುಮಗು ಉಳಿದುಕೊಂಡಿಡ್ಡು, ಅದನ್ನೇ ತಮ್ಮ ಸರ್ವಸ್ವವಾಗಿ ಕಂಡ ಹೆತ್ತವರು ತಮ್ಮ ಆಶೋತ್ತರಗಳನ್ನೆಲ್ಲ ಅದರ ಮೇಲೆ ಹೇರಿದುದು, ಅವರ ಬಡತನ-ಬಡಿವಾರಗಳು, ಮಗನಿಗೆ ಆಂಗ್ಲ ವಿದ್ಯಾಭ್ಯಾಸ ಮಾಡಿಸಬೇಕೆಂದು ತಾವು ಕನಸು ಕಾಣುತ್ತಿದ್ದಾಗ ಮಠದ ಸಂಸ್ಕೃತಪಾಠಶಾಲೆಗೆ ಆತನನ್ನು ಸೇರಿಸಬೇಕಾಗಿ ಬಂದುದು, ಆಡಳಿತ ಅಧಿಕಾರಿಗಳ ದರ್ಪ-ಧೋರಣೆಗಳು, ಬಯಸಿ ಬಯಸಿ ಆದ ಮಗ ಸಂನ್ಯಾಸಿಯಾಗಬೇಕಾದ ಪರಿಸ್ಥಿತಿ ಎದುರಾದಾಗ ತಂದೆ-ತಾಯಂದಿರಿಗಾದ ತೊಳಲಾಟ, ವಿರಕ್ತಿಯನ್ನು ಆತ್ಮಸಾತ್ತಾಗಿ ಮಾಡಿಕೊಳ್ಳಲು ಯತ್ನಿಸುತ್ತಿದ್ದ ಸ್ವಾಮಿಗಳಿಗೆ ಮಠದ ಲೌಕಿಕ ವ್ಯವಹಾರಗಳನ್ನು ನೋಡಬೇಕಾಗಿ ಬಂದ ತೊಡಕು, ಮನೋವ್ಯಾಧಿಪೀಡಿತರೆಂದು ಕೆಲವರು ಆಡಿಕೊಳ್ಳುವ ಮಟ್ಟದಿಂದ ಅವಧೂತರಾದ ಜೀವನ್ಮುಕ್ತರೆಂದು ಇಡಿಯ ಜಗತ್ತೇ ಪೂಜಿಸುವ ಮಟ್ಟಕ್ಕೆ ಅವರ ವಿಕಾಸ - ಈ ಒಂದೊಂದು ವಿವರವೂ ಯಾವ ಶ್ರೇಷ್ಠ ಕಾವ್ಯಕ್ಕೂ ಕಡಮೆ ಇಲ್ಲ.
To be continued.