Footage of a rare interview of D V Gundappa (in Kannada) by G P Rajarathnam.
Here is the transcript:
ರಾಜರತ್ನಂ: ತಾವು ಬರೆಯುವುದಕ್ಕೆ ಶುರು ಮಾಡಿದ್ದು ಯಾಕೆ ಅಂತ?
ಡಿವಿಜಿ: ನನ್ನ ಮನಸ್ಸಿನಲ್ಲಿ ಆದ ಸಂತೋಷವನ್ನು ನನಗೆ ಬೇಕಾದವರ ಜೊತೆಯಲ್ಲಿ ಹಂಚಿಕೊಂಡರೆ ಆ ಸಂತೋಷ ಇಮ್ಮಡಿಯಾಗುತ್ತದೆ.
ರಾಜರತ್ನಂ: ನಮ್ಮ ಜನ ನೆಮ್ಮದಿಯಿಂದ ಸುಖವಾಗಿ ಬದುಕಬೇಕಾದರೆ ಏನು ಮಾಡಬೇಕು?
ಡಿವಿಜಿ: ಸುಖ ಎನ್ನುವುದು ಒಂದು ಕ್ಷಣದ ವಿಷಯವಲ್ಲ; ಒಂದು ಕಾಲವಿಸ್ತಾರದ ವಿಷಯ. ಅದು point of time ಅಲ್ಲ; period of time. ಖಂಡಿತವಾಗಿ ಪ್ರತಿ ಮನುಷ್ಯನೂ ಅದಕ್ಕೋಸ್ಕರ ಶ್ರಮ ಪಡಬೇಕು. ಈ ಶ್ರಮದಲ್ಲಿ ಒಂದು ನೀತಿ ಇಟ್ಟುಕೊಳ್ಳಬೇಕು. ಮೊದಲನೆಯದು - ಸತ್ಯ, ಶೋಧಿಸಿದ ಸತ್ಯ. ಎಷ್ಟೋ ವಿಷಯಗಳನ್ನು ನಮಗೆ ಸತ್ಯ ಎಂದು ಹೇಳುತ್ತಾರೆ. ನಾವು ಅದನ್ನು ಶೋಧಿಸಬೇಕು. ಎರಡನೆಯದು - ಸತ್ಯಪ್ರಯೋಗದಲ್ಲಿ ಯುಕ್ತಾಯುಕ್ತವಿವೇಕ. ಈ ಎರಡಕ್ಕೂ ಮೂಲವಾದದ್ದು ಸೌಜನ್ಯ. ಇವು ಮೂರನ್ನು ಹಿಡಿದುಕೊಂಡು ದೇಶದ ಕೆಲಸಗಳನ್ನು ನಡೆಸಿದರೆ ಸುಭಿಕ್ಷೆ ಉಂಟಾಗುತ್ತದೆ, ಸೌಖ್ಯ ಉಂಟಾಗುತ್ತದೆ, ಶಾಂತಿ ಉಂಟಾಗುತ್ತದೆ.
ರಾಜರತ್ನಂ: ನಮ್ಮ ದೇಶದ ಉದ್ಧಾರಕಾರ್ಯದಲ್ಲಿ ಯುವಕರ ಪಾತ್ರವೇನು ಸರ್?
ಡಿವಿಜಿ: ಯುವಕರದ್ದೇ ದೊಡ್ಡ ಪಾತ್ರ. ದಾದಾಭಾಯಿ ನವರೋಜಿಯವರ ಕಾಲದಿಂದ ಗಾಂಧಿಯವರ ವರೆಗೆ ಕೆಲವು ಉದ್ದೇಶಗಳನ್ನು, ಧ್ಯೇಯಗಳನ್ನು ಎತ್ತಿಹಿಡಿದಿದ್ದಾರೆ. ಅವುಗಳನ್ನು ಮುಂದಕ್ಕೆ ತೆಗೆದುಕೊಂಡು ಹೋಗುವ ಕೆಲಸ ಯುವಕರದ್ದು. ಗಾಂಧಿಯವರ ಕಾಲದಲ್ಲಿ ಸ್ವಾತಂತ್ರ್ಯ ಸಂಪಾದನೆಗೆ ಹೇಗೆ ಯುವಕರು ಸಾವಿರಸಾವಿರವಾಗಿ ಬಂದರೋ, ಆ ಸ್ವಾತಂತ್ರ್ಯವನ್ನು ಸಂರಕ್ಷಣೆ ಮಾಡಿ ಅದರಿಂದ ಪ್ರಯೋಜನ ಪಡೆಯುವ ಕೆಲಸಕ್ಕಾಗಿ ಹತ್ತುಸಾವಿರ-ಹತ್ತುಸಾವಿರವಾಗಿ ಯುವಕರು ಬರಬೇಕು. ಆದರೆ, ಸತ್ಯದಲ್ಲಿ ಪ್ರೀತಿ ಇರತಕ್ಕವರಾಗಬೇಕು, ವಿಚಾರದಲ್ಲಿ ಅಭ್ಯಾಸ ಇರತಕ್ಕವರಾಗಬೇಕು, ಸೌಜನ್ಯದಲ್ಲಿ ನಂಬಿಕೆ ಇರತಕ್ಕವರಾಗಬೇಕು. ಯುವಕರಲ್ಲಿ ಇದೇ ನನ್ನ ಪ್ರಾರ್ಥನೆ.
ಇನ್ನೇನಾದರೂ ಉಂಟೇ ರಾಜರತ್ನಂ?
ರಾಜರತ್ನಂ: ಇನ್ನೇನೂ ಕೇಳಬೇಕಾದುದು ಇಲ್ಲ ಸರ್. ನಿಮ್ಮ ಆಶೀರ್ವಾದ ನಮ್ಮ ಮೇಲೆ ಇರಬೇಕು.
ಡಿವಿಜಿ: ಸಂತೋಷ. ಸಕಲಂ ಭದ್ರಮಸ್ತು ನಃ
Transcribed by Shashi Kiran B N