
ನಮ್ಮ ಪರಂಪರೆಯಲ್ಲಿ ‘ಸಾರ್ವಪಾರ್ಷದ’ ಎಂಬ ಒಂದು ವಿಶಿಷ್ಟ ಪದವಿದೆ. ಇದು ಹೆಚ್ಚಾಗಿ ಶಾಸ್ತ್ರಚರ್ಚೆಗಳಲ್ಲಿ ಕಾಣಸಿಗುತ್ತದೆ. ‘ಪಾರ್ಷದ್’ ಎಂದರೆ ಪರಿಷತ್ತು ಎಂದರ್ಥ. ಹತ್ತು ಹಲವರು ಹಿರಿಯರು ಒಟ್ಟಿಗೆ ಒಂದೆಡೆ ಕುಳಿತು ಕಲೆಯುವುದನ್ನು ‘ಪರಿಷತ್’ ಎನ್ನುವರು. ಪರಿಷತ್ತಿಗೆ ‘ಸಭಾ’ ಪರ್ಯಾಯಪದ. ಸಭೆಗೆ ಬೆಳಕಿನಿಂದ ಕೂಡಿದ್ದು ಎಂಬ ಅರ್ಥವೂ ಇದೆ. ಹತ್ತು ಜನರ ನೆರವಿ ಒಂದೆಡೆ ಸುಮ್ಮನೆ ಸೇರಿ ಗೌಜೆಬ್ಬಿಸುವುದನ್ನು ಪರಿಷತ್ತೆಂದು ಕರೆಯುವುದಿಲ್ಲ. ಹೀಗೆ ಎಲ್ಲರೂ ಕಲೆತು ಕೋಲಾಹಲಿಸುವ ಗುಂಪಿಗೆ ‘ಪರಿಷೆ’ ಎಂಬ ಬೇರೊಂದು ಶಬ್ದವೇ ಇದೆ. ಇದು ಪರಿಷತ್ತಿನ ತದ್ಭವ ಎಂಬ...
