ನಮ್ಮ ಪರಂಪರೆಯಲ್ಲಿ ‘ಸಾರ್ವಪಾರ್ಷದ’ ಎಂಬ ಒಂದು ವಿಶಿಷ್ಟ ಪದವಿದೆ. ಇದು ಹೆಚ್ಚಾಗಿ ಶಾಸ್ತ್ರಚರ್ಚೆಗಳಲ್ಲಿ ಕಾಣಸಿಗುತ್ತದೆ. ‘ಪಾರ್ಷದ್’ ಎಂದರೆ ಪರಿಷತ್ತು ಎಂದರ್ಥ. ಹತ್ತು ಹಲವರು ಹಿರಿಯರು ಒಟ್ಟಿಗೆ ಒಂದೆಡೆ ಕುಳಿತು ಕಲೆಯುವುದನ್ನು ‘ಪರಿಷತ್’ ಎನ್ನುವರು. ಪರಿಷತ್ತಿಗೆ ‘ಸಭಾ’ ಪರ್ಯಾಯಪದ. ಸಭೆಗೆ ಬೆಳಕಿನಿಂದ ಕೂಡಿದ್ದು ಎಂಬ ಅರ್ಥವೂ ಇದೆ. ಹತ್ತು ಜನರ ನೆರವಿ ಒಂದೆಡೆ ಸುಮ್ಮನೆ ಸೇರಿ ಗೌಜೆಬ್ಬಿಸುವುದನ್ನು ಪರಿಷತ್ತೆಂದು ಕರೆಯುವುದಿಲ್ಲ. ಹೀಗೆ ಎಲ್ಲರೂ ಕಲೆತು ಕೋಲಾಹಲಿಸುವ ಗುಂಪಿಗೆ ‘ಪರಿಷೆ’ ಎಂಬ ಬೇರೊಂದು ಶಬ್ದವೇ ಇದೆ. ಇದು ಪರಿಷತ್ತಿನ ತದ್ಭವ ಎಂಬುದು ಸ್ವಾರಸ್ಯಕರ ಸಂಗತಿ! ಸಂಸ್ಕೃತವಾದುದು ಪರಿಷತ್ತು, ಪ್ರಾಕೃತವಾದುದು ಪರಿಷೆ. ಇವೆರಡಕ್ಕೂ ತಮ್ಮವೇ ಆದ ಮೌಲ್ಯ-ಮಹತ್ತ್ವಗಳಿವೆ. ಈ ಮುನ್ನ ಹೇಳಿದ ಪಾರ್ಷದ್ ಎಂಬ ಪರಿಷತ್ತಿಗೆ ಸದಸ್ಯನಾಗಬಲ್ಲ ಅರ್ಹತೆ ಉಳ್ಳವನೇ ಪಾರ್ಷದ. ಯಾರು ಒಂದು ಪರಿಷತ್ತಿಗಲ್ಲದೆ ಹತ್ತಾರು ಪರಿಷತ್ತುಗಳಿಗೆ ಸದಸ್ಯರಾಗಿ ಸೇರಬಲ್ಲರೋ, ಸೇರಿ ಅಲ್ಲಿಯವರನ್ನು ತಮ್ಮ ನಡೆ-ನುಡಿಗಳಿಂದ ಬೆಳಗಬಲ್ಲರೋ ಅವರು ಸಾರ್ವಪಾರ್ಷದರು. ಹೇಗೆ ವ್ಯಕ್ತಿಗಳು ತಮ್ಮ ಯೋಗ್ಯತೆಯಿಂದ ಸಾರ್ವಪಾರ್ಷದರಾಗಬಲ್ಲರೋ ಹಾಗೆಯೇ ವಿದ್ಯೆಗಳೂ ಆಗಬಲ್ಲುವು. ಒಟ್ಟಿನಲ್ಲಿ ಎಲ್ಲರಿಗೂ ಒದಗಿಬರಬಲ್ಲ ಮಹನೀಯರು ಸಾರ್ವಪಾರ್ಷದರು; ಅಂಥವರ ವಿದ್ಯೆ ಸಾರ್ವಪಾರ್ಷದ. ಭೋಜರಾಜನು ‘ಶೃಂಗಾರಪ್ರಕಾಶ’ ಎಂಬ ತನ್ನ ಉದ್ಗ್ರಂಥದಲ್ಲಿ ಸಾಹಿತ್ಯವನ್ನು ಸಾರ್ವಪಾರ್ಷದವೆಂದು ಆದರಿಸುವುದು ಈ ಬಗೆಯ ಪ್ರಾಚೀನ ಉಲ್ಲೇಖಗಳ ಪೈಕಿ ಸ್ಮರಣೀಯ.
ವಿದ್ಯಾಲಂಕಾರ, ಶಾಸ್ತ್ರಚೂಡಾಮಣಿ, ಸಂಗೀತಕಲಾರತ್ನ, ವಾಚಸ್ಪತಿ, ಆಚಾರ್ಯ ಸಾಲಿಗ್ರಾಮ ಕೃಷ್ಣ ರಾಮಚಂದ್ರರಾಯರು ನಮ್ಮ ಕಾಲದ ಸಾರ್ವಪಾರ್ಷದರು. ಇಂದು ಅವರು ಭೌತಿಕವಾಗಿ ನಮ್ಮೊಡನೆ ಇಲ್ಲದಿದ್ದರೂ ಅವರ ವ್ಯಕ್ತಿತ್ವ-ಕೃತಿತ್ವಗಳು ಸಾರ್ವಪಾರ್ಷದಗಳಾಗಿ ಸಲ್ಲುತ್ತಿವೆ.
ಇಪ್ಪತ್ತು ವರ್ಷಗಳಿಗೂ ಮುನ್ನ ರಾಯರನ್ನು ಕುರಿತು ಬರೆಯುವಾಗ ಅವರು ‘ಸರ್ವತಂತ್ರಸ್ವತಂತ್ರ’ರೆಂದು ಒಕ್ಕಣಿಸಿದ್ದೆ. ಈ ಶಬ್ದವೂ ಸಾರ್ವಪಾರ್ಷದದ ವರ್ಗಕ್ಕೆ ಸೇರುವಂಥದ್ದೇ. ತಂತ್ರ ಎಂದರೆ ಗುರಿ ಸೇರುವ ಕ್ರಮ ಎಂಬ ಅರ್ಥವುಂಟಷ್ಟೆ. ಇಡಿಯ ಜಗತ್ತಿಗಿರುವ ಹಿರಿಯ ಗುರಿಯೆಂದರೆ ನೆಮ್ಮದಿಯ ನೆಲೆ ತಾನೆ! ಅಂಥ ಗುರಿಗಿರುವ ಹತ್ತಾರು ಹಾದಿಗಳನ್ನು ಬಲ್ಲವರಾಗಿ, ಅವುಗಳಲ್ಲಿ ಲೀಲಾಜಾಲವಾಗಿ ಸಂಚರಿಸಬಲ್ಲವರು ಸರ್ವತಂತ್ರಸ್ವತಂತ್ರರು. ಪರಿಷತ್ತು ಕುಳಿತು ಮಾಡುವ ಸಮಾಲೋಚನೆಯ ಸಂಕೇತವಾದರೆ, ತಂತ್ರವು ನಡೆದು ನೋಡುವ ವಿಕಾಸದ ಸಂಕೇತ. ರಾಯರು ಇವೆರಡರಲ್ಲಿಯೂ ಪಳಗಿದವರು. ಅವರಲ್ಲಿ ಪ್ರಾಚೀನ-ನವೀನ, ಪೌರಸ್ತ್ಯ-ಪಾಶ್ಚಾತ್ತ್ಯ, ಉತ್ತರ-ದಕ್ಷಿಣ, ಕಲೆ-ಶಾಸ್ತ್ರ, ಮಾರ್ಗ-ದೇಶೀ, ವಿಚಾರ-ವಿನೋದ ಎಲ್ಲವೂ ಸಮರಸವಾಗಿ ಬೆರೆತಿದ್ದುವು. ಇವು ಬೆರೆತ ವ್ಯಕ್ತಿತ್ವಗಳು ತೀರ ವಿರಳವೇನಲ್ಲ. ಆದರೆ ಸಮರಸವಾಗಿ ಬೆರೆಯುವುದು ವಿಶೇಷ; ಅದು ಎಂದಿಗೂ ಅಪೂರ್ವವೇ. ಇದನ್ನೇ ಅಲ್ಲವೇ ‘ಭುವನದ ಭಾಗ್ಯ’ ಎನ್ನುವುದು!
ವಿದ್ಯೆ
ನಮ್ಮಲ್ಲಿ ವಿದ್ಯೆಗಳನ್ನು ಕುರಿತು ಬಹುಕಾಲದಿಂದ ಚಿಂತನೆ ಸಾಗಿದೆ. ಸನತ್ಕುಮಾರನ ಬಳಿ ತೆರಳಿದ ನಾರದ ತಾನರಿತ ಹತ್ತಾರು ವಿದ್ಯೆಗಳ ಪಟ್ಟಿ ಮಾಡಿ ಮುಂದಿಡುವ ಪ್ರಸ್ತಾವ ಛಾಂದೋಗ್ಯೋಪನಿಷತ್ತಿನಲ್ಲಿಯೇ ಬಂದಿದೆ. ಇಷ್ಟೆಲ್ಲ ವಿದ್ಯೆಗಳನ್ನು ತಿಳಿದಿದ್ದರೂ ತನಗೆ ಪರಮಾರ್ಥದ ಅರಿವಿಲ್ಲವೆಂಬ ಕೊರಗೂ ಅವನದಾಗಿ ಕಂಡುಬರುತ್ತದೆ. ಅಲ್ಲದೆ ಪರಮಾರ್ಥವನ್ನು ಅರಿಯುವ ಹವಣಿನಲ್ಲಿ ನೆರವಾಗುವ ಮೂವತ್ತೆರಡು ವಿದ್ಯೆಗಳು ಉಪನಿಷತ್ತುಗಳಲ್ಲಿ ಪ್ರಸಿದ್ಧವಾಗಿವೆ. ಮುಂಡಕಶ್ರುತಿಯು ವಿದ್ಯೆಗಳನ್ನು ಪರಾ ಮತ್ತು ಅಪರಾ ಎಂದು ವಿಶಾಲವಾಗಿ ವಿಂಗಡಿಸಿದೆ. ಈಶೋಪನಿಷತ್ತು ಹೇಳುವ ವಿದ್ಯೆ-ಅವಿದ್ಯೆಗಳು ಇಂಥವೇ ಆಗಿವೆ. ಒಂದನ್ನು ಅರಿಯುವ ಭರದಲ್ಲಿ ಮತ್ತೊಂದನ್ನು ಉಪೇಕ್ಷಿಸಿದರೆ ಅನರ್ಥವೆಂಬ ಎಚ್ಚರಿಕೆಯೂ ಅಲ್ಲಿದೆ. ಹೀಗೆ ಪರಾ ವಿದ್ಯೆಯನ್ನು ಅರಿಯುವಲ್ಲಿ ಅಪರಾ ವಿದ್ಯೆಯು ಸಾಧನವಾಗಿ ಒದಗಿಬರಬೇಕು.
ಭಗವಾನ್ ಕೌಟಿಲ್ಯನು ಅರ್ಥಶಾಸ್ತ್ರದಲ್ಲಿ ತ್ರಯೀ, ಆನ್ವೀಕ್ಷಿಕೀ, ವಾರ್ತಾ ಮತ್ತು ದಂಡನೀತಿಗಳೆಂಬ ನಾಲ್ಕು ಮೂಲಭೂತ ವಿದ್ಯೆಗಳನ್ನು ಹೆಸರಿಸಿ ವಿವರಿಸುತ್ತಾನೆ. ಕವಿ-ಪಂಡಿತ ರಾಜಶೇಖರನು ಈ ಸಾಲಿಗೆ ಸಾಹಿತ್ಯವಿದ್ಯೆಯನ್ನು ಐದನೆಯದಾಗಿ ಸೇರಿಸುತ್ತಾನೆ. ಈ ನಡುವಿನಲ್ಲಿ ಹದಿನಾಲ್ಕು ವಿದ್ಯಾಸ್ಥಾನಗಳ ಬೆಳೆವಣಿಗೆಯನ್ನು ನಾವು ಕಾಣುತ್ತೇವೆ. ಈ ಪಟ್ಟಿಯಲ್ಲಿ ನಾಲ್ಕು ವೇದಗಳು, ಆರು ವೇದಾಂಗಗಳು, ಇತಿಹಾಸ, ಮೀಮಾಂಸೆ, ಧರ್ಮಶಾಸ್ತ್ರ ಮತ್ತು ನ್ಯಾಯವಿಸ್ತರಗಳು ಸೇರುತ್ತವೆ. ಇವಕ್ಕೆ ನಾಲ್ಕು ಉಪವೇದಗಳನ್ನು ಸೇರಿಸಿ ಮಧುಸೂದನಸರಸ್ವತಿಗಳಂಥವರು ಹದಿನೆಂಟು ವಿದ್ಯಾಸ್ಥಾನಗಳನ್ನು ಆದರಿಸಿದ್ದಾರೆ. ಹೀಗೆಯೇ ಕಾಮಸೂತ್ರ, ಲಲಿತವಿಸ್ತರ, ಪ್ರಬಂಧಕೋಶ ಮುಂತಾದ ಗ್ರಂಥಗಳಲ್ಲಿ ಕ್ರಮವಾಗಿ ಅರವತ್ತನಾಲ್ಕು, ಎಂಬತ್ತಾರು ಮತ್ತು ಎಪ್ಪತ್ತೆರಡು ಕಲೆ ಅಥವಾ ವಿದ್ಯೆಗಳ ಪ್ರಸ್ತಾವವುಂಟು. ಇದನ್ನೆಲ್ಲ ಕಂಡಾಗ ಭಾರತೀಯ ವಿದ್ಯೆಗಳ ಹರಹು ಅದೆಷ್ಟು ಹಿರಿದೆಂಬ ಭಾವ ಬಾರದಿರದು. ಆಧುನಿಕ ಕಾಲದಲ್ಲಿ ಪಾಶ್ಚಾತ್ತ್ಯರ ಸಂಪರ್ಕದಿಂದ ನಮಗೆ ಬೇಕಾಗಿಬಂದ ವಿದ್ಯೆಗಳು ಮತ್ತೂ ನೂರಾರು. ಇವುಗಳನ್ನೆಲ್ಲ ತಳ ಮುಟ್ಟಿ ತಿಳಿದವರು, ದಡ ಹಾಯ್ದು ಕಂಡವರು ಇಲ್ಲವೆಂದರೆ ಅತಿಶಯವಲ್ಲ. ಇವುಗಳಲ್ಲಿ ಮೂಲಭೂತವಾದ, ಮಾರ್ಗದರ್ಶಕವಾದ, ಸಮನ್ವಯಸಹಕಾರಿಯಾದ ಕೆಲವೊಂದು ವಿದ್ಯೆಗಳು ತುಂಬ ಮುಖ್ಯವೆನಿಸಿವೆ. ಅವೇ ಸಾರ್ವಪಾರ್ಷದಗಳು. ಅಂಥವನ್ನು ಅರಿತು ಆಸಕ್ತರಿಗೆ ಅಚ್ಚುಕಟ್ಟಾಗಿ ಹೇಳಬಲ್ಲವರಲ್ಲಿ ಅಗ್ರಗಣ್ಯರು ರಾಮಚಂದ್ರರಾಯರು. ಹೀಗಾಗಿ ಅವರ ಅರಿವಿನ ಬೆಳೆವಣಿಗೆಯ ಬಗೆಯನ್ನು ತಿಳಿದರೆ ಅಂಥವರು ನಮ್ಮ ಸಮಾಜದಲ್ಲಿ ಮುಂದೆಯೂ ರೂಪುಗೊಳ್ಳಲು ಅನುವಾದೀತು.
ಭಾವ-ಬುದ್ಧಿ
ಯಾವ ವ್ಯಕ್ತಿಯ ವಿಕಾಸಕ್ಕೇ ಆಗಲಿ, ಭಾವನೆ ಮತ್ತು ಚಿಂತನೆಗಳು ಅನಿವಾರ್ಯ. ಭಾವನೆ ಹೃದಯಕಾರ್ಯವಾದರೆ ಚಿಂತನೆ ಬುದ್ಧಿಕಾರ್ಯ. ಇಂದ್ರಿಯಗಳ ಮೂಲಕ ದಕ್ಕುವ ವಿಷಯಗಳನ್ನು ನಾವು ನಮ್ಮೊಳಗೆ ತುಂಬಿಕೊಂಡು ಅವಕ್ಕೂ ನಮಗೂ ಬೇಧವಿಲ್ಲ ಎಂಬಷ್ಟರ ಮಟ್ಟಿಗೆ ಮಗ್ನತೆಯನ್ನು ಹೊಂದುವುದು ಭಾವನೆ. ಇವೇ ವಿಷಯಗಳನ್ನು ನಮ್ಮೊಳಗೆ ತುಂಬಿಕೊಂಡ ಬಳಿಕ ಅವುಗಳ ಆಚೆ ತಟಸ್ಥವಾಗಿ ನಿಂತು ಅಲ್ಲಿಯ ಒಂದೊಂದು ವಿವರವನ್ನೂ ಬಿಡಿಸಿ ನೋಡುವ ಬಗೆ ಚಿಂತನೆ. ಒಂದರ ಹಾದಿ ಸಂಯೋಜನೆ, ಮತ್ತೊಂದರದು ವಿವೇಚನೆ. ಇವನ್ನು ಮತ್ತಷ್ಟು ಮೂರ್ತವಾಗಿಸಿ, ಒಂದು ಕಲೆಯ ಮಾರ್ಗ ಮತ್ತೊಂದು ಶಾಸ್ತ್ರದ ಮಾರ್ಗ ಎಂದು ನಮ್ಮ ಪರಂಪರೆ ಗುರುತಿಸಿದೆ. ಭಟ್ಟತೌತನೆಂಬ ಆಲಂಕಾರಿಕನು ಈ ಸಂಗತಿಯನ್ನು ಹೀಗೆ ಸ್ಮರಣೀಯವಾಗಿಸಿದ್ದಾನೆ: “ದ್ವೇ ವರ್ತ್ಮನೀ ಗಿರೋದೇವ್ಯಾಃ ಶಾಸ್ತ್ರಂ ಚ ಕವಿಕರ್ಮ ಚ | ಪ್ರಜ್ಞೋಪಜ್ಞಂ ತಯೋರಾದ್ಯಂ ಪ್ರತಿಭೋದ್ಭಮಮಂತಿಮಮ್ ||” ಇಲ್ಲಿ ಶಾಸ್ತ್ರದ ಮೂಲ ಪ್ರಜ್ಞೆಯಲ್ಲಿದ್ದರೆ, ಕಲೆಯ ಮೂಲ ಪ್ರತಿಭೆಯಲ್ಲಿದೆ ಎಂಬ ಮಾತು ಬಂದಿದೆ. ವಸ್ತುತಃ ಶಾಸ್ತ್ರಕ್ಕೂ ಪ್ರತಿಭೆ ಬೇಕು, ಕಲೆಗೂ ಪ್ರಜ್ಞೆ ಬೇಕು. ನಿರೂಪಣೆಯ ಸೌಲಭ್ಯಕ್ಕಾಗಿ ಇವನ್ನು ಭಿನ್ನವೆಂಬಂತೆ ಬಿಂಬಿಸಲಾಗಿದೆ.
ರಾಮಚಂದ್ರರಾಯರು ಭಾವ-ಬುದ್ಧಿಗಳೆರಡರಲ್ಲಿಯೂ ಶ್ರೀಮಂತರು. ಅವರ ತಂದೆ ವೈಣಿಕರು; ಚಿತ್ರ-ಮೃಚ್ಛಿಲ್ಪಗಳನ್ನು ಬಲ್ಲವರು; ಆಯುರ್ವೇದವನ್ನು ಅನುಸಂಧಾನಿಸುತ್ತಿದ್ದವರು. ತಾಯಿ ಅಕ್ಕರೆಯ ಗೃಹಿಣಿ; ಸಂಪ್ರದಾಯದ ಹಾಡುಗಳನ್ನು ತಿಳಿದವರು. ರಾಯರು ಹುಟ್ಟಿನಿಂದಲೇ ಇವರಿಬ್ಬರ ಕೌಶಲಗಳನ್ನು ಮೈಗೂಡಿಸಿಕೊಂಡಿದ್ದರು. ಅನಂತರ ತಂದೆಯವರ ಶ್ರದ್ಧಾಸ್ಥಾನಗಳಾಗಿದ್ದ ರಾಮಾಯಣ ಮತ್ತು ಭಗವದ್ಗೀತೆಗಳು ಇವರಿಗೂ ಸಂಕ್ರಮಿಸಿದುವು. ಹೀಗೆ ಭಾವಾಂಶದ ಪಾರಮ್ಯ ಅವರಿಗೆ ಕೌಟುಂಬಿಕವಾಗಿಯೇ ಕೈಗೂಡಿತು. ಶಾಲೆಯ ಕಲಿಕೆಯ ಜೊತೆಗೆ ವೇದ, ತರ್ಕ, ಮೀಮಾಂಸೆ, ವೇದಾಂತಗಳಂಥ ಶಾಸ್ತ್ರಗಳ ಪರಿಚಯವೂ ಅವರಿಗೆ ಆಗತೊಡಗಿತು. ಕಾಲೇಜಿನ ಹಂತದಲ್ಲಿ ಮನೋವಿಜ್ಞಾನವನ್ನು ಕಲಿತದ್ದು ಹೊಸತೊಂದು ಶಾಸ್ತ್ರದ ಸಂಸ್ಕಾರವನ್ನು ಒದಗಿಸಿತು. ಇವೆಲ್ಲದರ ಹಿನ್ನೆಲೆಯಲ್ಲಿ ಅವರು ಹಲವು ಭಾಷೆಗಳನ್ನು ಕಲಿತರು, ಹಲವು ಆಗಮ-ದರ್ಶನಗಳನ್ನು ಅಭ್ಯಸಿಸಿದರು, ಕಲಾಭಿರುಚಿಯನ್ನು ತತ್ತ್ವ-ಪ್ರಯೋಗಗಳೆರಡರ ಹಂತಗಳಲ್ಲಿಯೂ ವಿಸ್ತರಿಸಿಕೊಂಡರು. ಇದನ್ನು ಕಂಡಾಗ ಸಾರ್ವಪಾರ್ಷದರಾಗಲು ಏನೆಲ್ಲ ಹಿನ್ನೆಲೆ ಬೇಕಾಗುವುದೆಂಬ ಅಂದಾಜು ನಮಗಾಗದಿರದು.
ಮೇಲ್ನೋಟಕ್ಕೇ ತಿಳಿಯುವಂತೆ ರಾಯರು ವೀಣೆ, ಚಿತ್ರ, ಶಿಲ್ಪ ಮುಂತಾದ ಕಲೆಗಳಲ್ಲಿಯೂ ಒಳ್ಳೆಯ ಸಾಹಿತ್ಯದ ರಚನೆಯಲ್ಲಿಯೂ ತೊಡಗಿಕೊಂಡದ್ದು ಅವರ ಭಾವಸಮೃದ್ಧಿಗೆ ಸಾಕ್ಷಿ. ವೇದ-ವೇದಾಂಗಗಳು, ಆಗಮ-ದರ್ಶನಗಳು, ಮನಃಶಾಸ್ತ್ರ, ಮಾನವಶಾಸ್ತ್ರ, ಸಮಾಜಶಾಸ್ತ್ರ ಮೊದಲಾದುವುಗಳ ಅಧ್ಯಯನ-ಅಧ್ಯವಸಾಯಗಳು ಅವರ ಬುದ್ಧಿಸಮೃದ್ಧಿಗೆ ನಿದರ್ಶನ. ಸಾರ್ಪಪಾರ್ಷದರಾಗಲು ಭಾವ-ಬುದ್ಧಿಗಳೆರಡನ್ನೂ ಪುಷ್ಟಿಗೊಳಿಸಿಕೊಳ್ಳುವುದು ಯಾರಿಗೂ ಅನಿವಾರ್ಯ. ಇಂಥ ಪುಷ್ಟಿಯನ್ನು ಅಡ್ಡಾದಿಡ್ಡಿಯಾಗಿ ಮಾಡಿಕೊಂಡರೆ ಉದ್ದಿಷ್ಟ ಫಲ ದಕ್ಕದು. ಒಳ್ಳೆಯ ದೇಹಶಿಲ್ಪವನ್ನು ಗಳಿಸಲು ವ್ಯಾಯಾಮದ ಹೆಸರಿನಲ್ಲಿ ಸುಮ್ಮನೆ ಬಳಲುವುದಾಗಲಿ, ಒಡಲಿಗೆ ಚೆನ್ನಾಗಿ ತೀನಿ ಬೇಕೆನ್ನುವ ನೆವದಲ್ಲಿ ಬೊಜ್ಜು ಬೆಳೆಸಿಕೊಳ್ಳುವುದಾಗಲಿ ಫಲಕಾರಿಯಾಗವಷ್ಟೆ. ವ್ಯಾಯಾಮವೊಂದು ಶಿಸ್ತು. ದೇಹದ ಒಂದೊಂದು ಅಂಗವೂ ಅದರ ಒಂದೊಂದು ಮಾಂಸಪೇಶಿಯೂ ವ್ಯವಸ್ಥಿತವಾಗಿ ಹುರಿಗೊಳ್ಳಬೇಕು. ಊಟವೂ ಹಾಗೆಯೇ. ನಮಗೆ ಸಂತುಲಿತವಾದ ಪೌಷ್ಟಿಕ ಆಹಾರ ಬೇಕು; ಅದು ರುಚಿಗೂ ಆರೋಗ್ಯಕ್ಕೂ ಒದಗಿಬರಬೇಕು - ರಾಯರ ಕಲೆ-ಶಾಸ್ತ್ರಗಳ ಕಲಿಕೆ ಈ ತೆರನಾದದ್ದು.
ಅಪಾರವಾದ ಜ್ಞಾನಸಾಗರವನ್ನು ಇಡಿಯಾಗಿ ಆಪೋಶನ ತೆಗೆದುಕೊಳ್ಳುವುದು ಎಂಥ ಅಗಸ್ತ್ಯಪ್ರತಿಭೆಗೂ ಕಷ್ಟ. ಆದರೆ ದಿಗ್ದರ್ಶಕವಾಗಿ ಕೆಲವೊಂದು ವಿದ್ಯೆಗಳ ಒಳ-ಹೊರಗನ್ನು ಅರಿತರೆ ಈ ಮಹಾಸಾಗರದ ಅಧಿಕೃತ ಪರಿಚಯ ಆದೀತು. ವಸ್ತುನಿಷ್ಠವಾದ, ತರ್ಕಪ್ರಧಾನವಾದ ಆಧುನಿಕ ವಿಜ್ಞಾನ-ತಂತ್ರಜ್ಞಾನಗಳಂಥ ಯಾವುದಾದರೂ ಒಂದು ವಿದ್ಯೆಯನ್ನು ಮೊದಲ ಹಂತವಾಗಿ ಕಲಿಯುವುದೊಳಿತು. ಇದರೊಟ್ಟಿಗೆ ಮಾನವರೇ ರೂಪಿಸಿಕೊಂಡ ನೀತಿಪ್ರಧಾನವಾದ ಕಾನೂನು, ಸಮಾಜಶಾಸ್ತ್ರ ಮುಂತಾದ ಮತ್ತೊಂದು ವಿದ್ಯೆಯನ್ನು ಮೈಗೂಡಿಸಿಕೊಂಡರೆ ಒಳ್ಳೆಯದು. ಇವೆರಡಕ್ಕಿಂತಲೂ ವಿಭಿನ್ನವಾದ, ಭಾವೈಕಪ್ರವಣವಾದ ಕಲೆಯೊಂದರ ಆಳವಾದ ಪರಿಚಯ ಮಾಡಿಕೊಂಡರೆ ಈ ಮುನ್ನ ಪಡೆದ ಬುದ್ಧಿವಿಕಾಸಕ್ಕೆ ಒಳ್ಳೆಯ ಸಂವಾದಿಯಾಗಬಲ್ಲ ಹೃದಯಸಮೃದ್ಧಿ ಒದಗುತ್ತದೆ. ಕಲೆಯೆಂದರೆ ಸಾಹಿತ್ಯವೂ ಸೇರಿದಂತೆ ಯಾವುದೂ ಆಗಬಹುದು. ಆದರೆ ಅಭಿಜಾತ ಕಲೆಯಾದಲ್ಲಿ ಹೆಚ್ಚಿನ ಅನುಕೂಲತೆ ಉಂಟು. ಹೀಗೆ ಪಡೆದ ಬುದ್ಧಿ-ಭಾವಗಳ ಶ್ರೀಮಂತಿಕೆಯನ್ನು ತತ್ತ್ವಜ್ಞಾನದಿಂದ ಪರಿಪಾಕಕ್ಕೆ ತಂದುಕೊಳ್ಳಬೇಕು. ಇದಕ್ಕಾಗಿಯೇ ದರ್ಶನಶಾಸ್ತ್ರಗಳಿರುವುದು. ಇವುಗಳಲ್ಲಿ ವೇದಾಂತ ಅಗ್ರಗಣ್ಯ. ಅದು ಸರ್ವಾತ್ಮನಾ ಸಾರ್ವಪಾರ್ಷದ. ರಾಯರಲ್ಲಿ ಈ ನಾಲ್ಕು ಬಗೆಯ ಕಲಿಕೆಗಳೂ ಅಚ್ಚುಕಟ್ಟಾಗಿ ಕಲೆತಿದ್ದುವು. ಅವರು ಕಾಲೇಜಿನಲ್ಲಿ ಕಲಿತ ಮನಃಶಾಸ್ತ್ರ-ಸಮಾಜಶಾಸ್ತ್ರಗಳು ಮೊದಲೆರಡು ವಿದ್ಯೆಗಳ ಪ್ರತಿನಿಧಿಗಳಾದರೆ, ಮನೆಯಿಂದ ಬಂದು ತಾವೂ ಒಲಿದು ಕೈಗೊಂಡ ಸಂಗೀತ-ಸಾಹಿತ್ಯ-ಚಿತ್ರ-ಶಿಲ್ಪಗಳು ಮೂರನೆಯ ವಿದ್ಯೆಯ ಸಂಕೇತಗಳು. ಇನ್ನು ಅವರ ಸ್ವಭಾವದಲ್ಲಿಯೇ ಇದ್ದ ತಾತ್ತ್ವಿಕ ದೃಷ್ಟಿಗೆ ಶೃಂಗಗಿರಿಯ ಶ್ರೀಚಂದ್ರಶೇಖರಭಾರತೀಸ್ವಾಮಿಗಳ ಕರುಣೆ ಮತ್ತು ಮಹಾವಿದ್ವಾನ್ ಪಾಲಕ್ಕಾಡು ನಾರಾಯಣಶಾಸ್ತ್ರಿಗಳ ಬೋಧನೆಗಳು ಇಂಬಾಗಿ ಬಂದು ಕೈಗೂಡಿದ ವೇದಾಂತದ ತಿಳಿವು ನಾಲ್ಕನೆಯ ವಿದ್ಯೆಯ ಪ್ರತೀಕ.
ದಿಟವೇ, ಈ ವಿದ್ಯೆಗಳಷ್ಟೇ ಅಲ್ಲದೆ ರಾಯರಿಗೆ ವೇದಗಳು, ನ್ಯಾಯ-ಮೀಮಾಂಸೆ, ಶೈವ-ವೈಷ್ಣವ ಆಗಮಗಳು, ಬೌದ್ಧ-ಜೈನ ದರ್ಶನಗಳು, ವಿವಿಧ ಸ್ವದೇಶೀ-ವಿದೇಶೀ ಭಾಷೆಗಳೇ ಮುಂತಾದ ಮತ್ತೆಷ್ಟೋ ವಿಷಯಗಳಲ್ಲಿ ಪರಿಚಿತಿ ಇದ್ದಿತು. ಇವನ್ನೆಲ್ಲ ಅಧಿಕೃತ ವಿದ್ವಾಂಸರಿಂದಲೇ ತಕ್ಕಮಟ್ಟಿಗೆ ಅರಿತಿದ್ದರು. ಹೀಗೆ ಅವರ ಕಲಿಕೆ ಸಮಗ್ರವಾಗಿತ್ತು. ಜೊತೆಗೆ ಎಂ. ಹಿರಿಯಣ್ಣ, ರಾಳ್ಲಪಲ್ಲಿ ಅನಂತಕೃಷ್ಣಶರ್ಮಾ, ರಾಹುಲ ಸಾಂಕೃತ್ಯಾಯನ ಮುಂತಾದ ಅನೇಕ ಮಹನೀಯರ ಸಾಕ್ಷಾತ್ ಪರಿಚಯವಿದ್ದಿತು; ಮತ್ತೆಷ್ಟೋ ಸಾಧಕರ, ಯೋಗಿಗಳ, ಅನುಭಾವಿಗಳ, ಕಲಾವಿದರ ಹೊಕ್ಕುಬಳಕೆಯೂ ಇದ್ದಿತು. ಇವೆಲ್ಲ ಅವರ ಅರಿವಿನ ಸೀಮೆಗಳನ್ನು ವಿಸ್ತರಿಸುವುದರೊಟ್ಟಿಗೆ ಅಂತರಂಗಪಾಕವನ್ನೂ ಹೆಚ್ಚಿಸಿದುವು. ಹೀಗಲ್ಲವಾದರೆ ಒಬ್ಬ ಸರ್ವತಂತ್ರಸ್ವತಂತ್ರ ರೂಪುಗೊಳ್ಳುವುದಾದರೂ ಹೇಗೆ!
To be continued.











































