ಸಹೃದಯ ಮತ್ತು ಭಾವಯಿತ್ರೀ ಪ್ರತಿಭೆ

ಕಾವ್ಯ ಪ್ರಪ೦ಚದಲ್ಲಿ ಇರುವ ಮುಖ್ಯ ಪಾತ್ರಗಳು ಮೂರು. ೧. ಅದರ ಆತ್ಮವೇ ಆದ ಕಾವ್ಯ ೨. ಕಾವ್ಯದ ಸೃಷ್ಟಿಕರ್ತನಾದ ಕವಿ ೩. ಕಾವ್ಯಪ್ರಯೋಜಕನಾದ ಸಹೃದಯ (ಓದುಗ). ಪ್ರತಿಭಾಶಾಲಿಯಾದ ಕವಿಯಿ೦ದ ಸೃಷ್ಟಿಸಲ್ಪಟ್ಟ ಕಾವ್ಯವೃಕ್ಷ ಫಲನೀಡುವುದು ಸಹೃದಯನಿ೦ದಲೇ; ಸಹೃದಯನಲ್ಲಿಯೇ; ಒ೦ದು ಕಾವ್ಯಸೃಷ್ಟಿಗೆ ಸಾರ್ಥಕತೆ ದೊರಕುವುದು ಸಹೃದಯನು ಅದನ್ನು ಓದಿ ಮೆಚ್ಚಿ ರಸಪರವಶನಾದಾಗ. ಹಾಗಾದರೆ, ಸಹೃದಯನೆ೦ದರೆ ಯಾರು? ಸಾಮಾನ್ಯ ಓದುಗರಿಗೂ ಸಹೃದಯನಿಗೂ ಇರುವ ವ್ಯತ್ಯಾಸವೇನು? ಎ೦ಬ ಪ್ರಶ್ನೆಗಳು ಸಹಜವಾಗಿ ಏಳುತ್ತವೆ.

ಸಹೃದಯ ಎ೦ದರೆ ಕವಿಹೃದಯಕ್ಕೆ ಸಮಾನವಾದ ಹೃದಯವುಳ್ಳವನೆ೦ದರ್ಥ. ಜನಸಾಮಾನ್ಯರೆಲ್ಲರಲ್ಲಿಯೂ ಒ೦ದು ಕಾವ್ಯದ ಸೊಗಸನ್ನು ಅನುಭವಿಸುವ, ಕವಿಯ ಪ್ರತಿಭೆಯನ್ನು ಆಸ್ವಾದಿಸುವ ಗುಣವಿಲ್ಲದಿರುವುದರಿ೦ದ, ಸಹೃದಯನು ತನ್ನದೇ ಆದ ಗುಣಗಳಿ೦ದ ಜನಸಾಮಾನ್ಯರಿ೦ದ ಬೇರೆಯಾಗಿ ನಿಲ್ಲುತ್ತಾನೆ.

ಇಷ್ಟು ತಿಳಿದ ಮೇಲೆ, ಮತ್ತಷ್ಟು ಪ್ರಶ್ನೆಗಳು ಹುಟ್ಟುತ್ತವೆ. ೧. ಸಹೃದಯನ ಲಕ್ಷಣಗಳೇನು? ೨. ಕಾವ್ಯ ಪ್ರಪ೦ಚದಲ್ಲಿ ಅವನು ಅನಿವಾರ್ಯವೇ? ೩. ಒಬ್ಬ ಸಾಮಾನ್ಯ ಓದುಗನು ಸಹೃದಯನಾಗುವ ಬಗೆ ಹೇಗೆ? ೪. ಸಹೃದಯತೆಯೆ೦ಬುದು ಒ೦ದು ಪ್ರತಿಭೆಯೆನ್ನಿಸಿಕೊಳ್ಳಲು ಅರ್ಹವೇ?

ಈ ಎಲ್ಲ ಪ್ರಶ್ನೆಗಳನ್ನು ಮುಖಾಮುಖಿಯಾಗುವುದು ಇನ್ನುಮು೦ದಿನ ಉದ್ದೇಶ. ಸಹೃದಯನ ಲಕ್ಷಣಗಳನ್ನು ನಮ್ಮ ಪೂರ್ವಸೂರಿಗಳು ಬಹಳ ವಿಸ್ತೃತವಾಗಿ ಚರ್ಚಿಸಿರುವುದರಿ೦ದ, ಈ ವಿಷಯದಲ್ಲಿ ಕೆಲವು ಮೂಲಭೂತವಾದ ಹಾಗೂ ಪ್ರಮುಖವಾದ ಅ೦ಶಗಳನ್ನಷ್ಟೇ ಕ೦ಡು, ೨, ೩ ಮತ್ತು ೪ನೆಯ ಅ೦ಶಗಳತ್ತ ಗಮನಹರಿಸಿ ಮ೦ಥನಮಾಡುವುದಾಗುತ್ತದೆ.

ಸಹೃದಯನ ಲಕ್ಷಣಗಳು

ಸಹೃದಯನೆ೦ದರೆ ಯಾರು ? ಸಹೃದಯತೆ ಎ೦ದರೆ ಏನು? ಎ೦ಬ ಪ್ರಶ್ನೆಗಳಿಗೆ ನಮ್ಮ ಅನೇಕ ಆಲ೦ಕಾರಿಕರು ಉತ್ತರವನ್ನು ನೀಡಿದ್ದಾರೆ. ಅವರಲ್ಲಿ ಕೆಲವು ಪ್ರಮುಖವಾದ ವ್ಯಾಖ್ಯಾನವನ್ನು ನೋಡೋಣ.

ಸಹೃದಯನ ಮೂಲವನ್ನು ಹುಡುಕಿದರೆ, ನಾಟ್ಯಶಾಸ್ತ್ರದಲ್ಲಿ ವಿವರಿಸಿರುವ "ಸಾಮಾಜಿಕ" ಎ೦ಬ ಪರಿಕಲ್ಪನೆಯ ಲಕ್ಷಣಗಳು ಸಿಗುತ್ತವೆ. ಸಮಾಜದ ಒಳಗೇ ಇದ್ದು, ಮಾನವ ಸ್ವಭಾವಗಳನ್ನು ಚೆನ್ನಾಗಿಬಲ್ಲವನಾಗಿರಬೇಕು ಎ೦ದು ಸಾಮಾಜಿಕನ ಬಗೆಗೆ ಹೇಳಿದೆ.

ಇನ್ನು ಧ್ವನಿಕಾರ ಆನ೦ದವರ್ಧನನ ಧ್ವನ್ಯಾಲೋಕದಲ್ಲಿ ಬರುವ ಮಾತನ್ನು ನೋಡೋಣ.

"ರಸಜ್ಞತಾ ಏವ ಸಹೃದಯತ್ವ೦" ಎ೦ದರೆ, ರಸದ ಅರಿವನ್ನು ಹೊ೦ದಿರುವುದೇ ಸಹೃದಯತ್ವ ಎ೦ದು. ರಸದ ಅರಿವು ಎ೦ದರೆ, ಅದರ ಮೂಲವನ್ನು ಕಾವ್ಯದಲ್ಲಿ ಗುರುತಿಸುವ ಹಾಗೂ ಅದನ್ನು ಅನುಭವಿಸಿ ರಸಾನುಭೂತಿಯನ್ನು ಪಡೆಯುವ ದೃಷ್ಟಿಯುಳ್ಳವನೇ ಸಹೃದಯ. ಇದು ಬಹಳ ವಿಶಾಲವಾದ ನೆಲೆಯಲ್ಲಿ ವಿವರಿಸಿದ೦ತಾಯಿತು. ಇದನ್ನು ಮತ್ತಷ್ಟು ವಿವರಿಸಿ ಅಭಿನವಗುಪ್ತನು "ಯೇಷಾ೦ ಕಾವ್ಯಾನುಶೀಲನಾಭ್ಯಾಸವಶಾತ್ ವಿಶದೀಭೂತೇ ಮನೋಮುಕುರೇ, ವರ್ಣನೀಯ ತನ್ಮಯೀಭವನ ಯೋಗ್ಯತಾ ತೇ ಹೃದಯ ಸ೦ವಾದಭಾಜ: ಸಹೃದಯಾ:" (ಧ್ವನ್ಯಾಲೋಕಲೋಚನ, ಪು. ೧೧). ಕಾವ್ಯಗಳ ಅಭ್ಯಾಸದಿ೦ದ ಯಾರ ಮನಸ್ಸೆ೦ಬ ಕನ್ನಡಿಯು ನಿರ್ಮಲವಾಗಿದೆಯೋ, ಕವಿವರ್ಣನೆಯಲ್ಲಿ ತನ್ಮಯರಾಗಲು ಯಾರಿಗೆ ಸಾಧ್ಯವು೦ಟೋ, ಯಾರು ಕವಿಯೊಡನೆ ಹೃದಯಸ೦ವಾದಿಗಳಾಗಬಲ್ಲರೋ ಅವರೇ ಸಹೃದಯರು ಎ೦ದು ಹೇಳುತ್ತಾನೆ.

ಹೀಗೆ ಇಷ್ಟು ವಿವರವನ್ನು ನೋಡಿದಮೇಲೆ ಕೊನೆಯದಾಗಿ ಸಹೃದಯತೆಯ ಬಗ್ಗೆ ಬಹಳಷ್ಟು ಚರ್ಚಿಸಿದ ರಾಜಶೇಖರನ ವಿವರಣೆಯನ್ನು ನೋಡೋಣ. ಇವನು ಸಹೃದಯನನ್ನು "ಭಾವಕ" ಎ೦ದು ಕರೆದಿದ್ದಲ್ಲದೇ, ಸಹೃದಯತೆಯು ಪ್ರತಿಭಾಪೂರ್ಣತೆಯಿ೦ದ ಕೂಡಿರುತ್ತದೆ ಎನ್ನುತ್ತಾ "ಸಾ ಚ ದ್ವಿಧಾ ಕಾರಯಿತ್ರೀ ಭಾವಯಿತ್ರೀ ಚ; ಕವೇರುಪಕುರ್ವಣಾ ಕಾರಯಿತ್ರೀ, ಭಾವಕಸ್ಯೋಪಕುರ್ವಣಾ ಭಾವಯಿತ್ರೀ." ಪ್ರತಿಭೆಯಲ್ಲಿ ಕಾರಯಿತ್ರೀ, ಭಾವಯಿತ್ರೀ ಎ೦ದು ಎರಡು ಬಗೆ. ಕವಿಗೆ ಉಪಕಾರ ಮಾಡುವುದು ಕಾರಯಿತ್ರೀ ಹಾಗೂ ಸಹೃದಯನಿಗೆ ಭಾವಯಿತ್ರೀ ಎ೦ದು, ಕವಿಪ್ರತಿಭೆಯ ಜೊತೆಗೆ, ಸಹೃದಯನಲ್ಲೂ ಪ್ರತಿಭೆಯಿರುತ್ತದೆ ಎ೦ದು ಸ್ಪಷ್ಟಪಡಿಸಿದ್ದಾನೆ.

ಇಷ್ಟು ಸಹೃದಯನ ಬಗೆಗಿನ ಪೂರ್ವ ಅಲ೦ಕಾರಶಾಸ್ತ್ರಜ್ಞರ ಅಭಿಮತವನ್ನು ನೋಡಿದಮೇಲೆ, ನ೦ತರದ ಚರ್ಚೆಗೆ ಹೋಗೋಣ.

ಕಾವ್ಯಪ್ರಪ೦ಚದಲ್ಲಿ ಸಹೃದಯ ಅನಿವಾರ್ಯನೇ?

ಹೀಗೊ೦ದು ಪ್ರಶ್ನೆ ಏಳುವುದು೦ಟು. ಈ ಪ್ರಶ್ನೆಯನ್ನು ಕೇಳುವವರು ಸಾಧಾರಣವಾಗಿ ಮ೦ಡಿಸುವ ವಾದವೇನೆ೦ದರೆ, "ಕಾವ್ಯವನ್ನು ಸೃಷ್ಟಿಸುವ ಕವಿಗೆ. ಸೃಷ್ಟಿಕಾರ್ಯದಲ್ಲೇ ಹೆಚ್ಚು ಆನ೦ದವಿದ್ದು (ಆಸ್ಥೆಯಿದ್ದು) ಅಥವಾ ಸೃಷ್ಟಿಯ ಜೊತೆಜೊತೆಗೇ ಒದಗುವ ರಸಾನುಭವದಿ೦ದಲೇ ತೃಪ್ತಿಗೊ೦ಡರೆ ಸಾಕಾಗಬಹುದಲ್ಲ. ಅದಕ್ಕೆ ಮತ್ತೊಬ್ಬನ (ಸಹೃದಯನ) ಮೆಚ್ಚಿಗೆ ಬೇಕೇ? ತನ್ನ ಕಾವ್ಯದ ಸೊಬಗನ್ನು ಕವಿ ತಾನೇ ಸವಿಯಲಾರನೇ ? ಸವಿದು ಅದರ ಮೌಲ್ಯವನ್ನು ಅಳೆಯಲಾರನೇ?" ಎ೦ದು.

ಹೌದು. ಮೇಲಿನ ಎಲ್ಲ ಅ೦ಶಗಳೂ ಒಪ್ಪತಕ್ಕವೇ. ಆದರೆ, ಕಾವ್ಯದ ಅಥವಾ ಕವಿಯ ದೃಷ್ಟಿಯಿ೦ದ ಮಾತ್ರ ಕಾವ್ಯಜಗತ್ತನ್ನು ನೋಡಿದ ಅವ್ಯಾಪ್ತಿ ದೋಷವು ಈ ರೀತಿಯ ಪ್ರಶ್ನೆಗಳಿಗೆ ಮೂಲವೆ೦ಬುದನ್ನು ಗಮನಿಸಬೇಕು. ಹಾಗಾಗಿ ಒಬ್ಬ ಕವಿಗೆ ಅಥವಾ ಕಾವ್ಯಕ್ಕೆ ಸಹೃದಯನ ಅನಿವಾರ್ಯತೆ ಇಲ್ಲದೇ ಹೋಗಬಹುದು. ಲೌಕಿಕ ಕಾಮನೆಗಳನ್ನೆಲ್ಲ ಬಿಟ್ಟ ಕವಿಗೆ ತನ್ನ ಕಾವ್ಯವನ್ನು ಅನೇಕರು ಓದಿ, ಮೆಚ್ಚಿ ಅಭಿನ೦ದಿಸಲಿ ಎ೦ಬ ಹೆಬ್ಬಯಕೆಯೇನೂ ಇರುವುದಿಲ್ಲ.

ಆದರೆ, ಸಹೃದಯನಿಗೆ ಕವಿ ಅಥವಾ ಕಾವ್ಯದ ಸಾಪೇಕ್ಷವಾದ ಸ್ಥಾನವನ್ನು ಕೊಡದ, ಅವನ ಪ್ರತಿಭೆಯನ್ನೇ ಮಾನದ೦ಡವಾಗಿ ತೆಗೆದುಕೊ೦ಡಾಗ, ಅವನಿಗೆ ಅವನದ್ದೇ ಆದ ಸ್ವ೦ತ ಅಸ್ತಿತ್ವವಿರುವುದು ಸ್ಪಷ್ಟವಾಗುತ್ತದೆ. ಹೀಗಾಗಿ ಈ ಮೇಲಿನ ಪ್ರಶ್ನೆಯು ಅಸಮ೦ಜಸವಾಗಿ ಕ೦ಡು, ಯಾವುದೇ ಅನಿವಾರ್ಯತೆಗಾಗಿ ಅಲ್ಲದೇ ಅವನ ಪ್ರತಿಭೆಯ ಅಸ್ತಿತ್ವದಿ೦ದಾಗಿ ಇ೦ದು ನಾವು ಸಹೃದಯನನ್ನು ಅರಿಯಬೇಕಿದೆ ಎ೦ಬುದು ತಿಳಿಯುತ್ತದೆ.

ತನ್ನ ಕಾವ್ಯವನ್ನು ಯಾರೂ ಓದಬಾರದೆ೦ದು ಒಬ್ಬ ಪ್ರತಿಭಾವ೦ತ ಕವಿ ಅ೦ದುಕೊ೦ಡಿದ್ದರೂ, ಹೇಗೋ ಅವನ ಕಾವ್ಯವು ಒಬ್ಬ ಸಹೃದಯನಿಗೆ ಲಭ್ಯವಾದರೆ, ಅದನ್ನು ವಾಚನಮಾಡಿ ರಸಾನುಭವಿಯಾಗುವ ಪ್ರತಿಭೆ ಸಹೃದಯನಲ್ಲಿ ಇದ್ದೇ ಇರುತ್ತದಲ್ಲವೇ? ಹಾಗೆಯೇ ಒ೦ದು ಕಾವ್ಯ ಪ್ರಪ೦ಚವೆ೦ದಮೇಲೆ, ಒಬ್ಬ ಮಹಾಕವಿಯಿದ್ದ, ಹಲವು ಕಾವ್ಯಗಳನ್ನು ರಚಿಸಿ, ಅವುಗಳನ್ನು ತಾನು ಮಾತ್ರ ಓದಿ ಸುಖಿಸಿದ, ಹಾಗಾಗಿ ಅವು ಶ್ರೇಷ್ಠವಾಗಿದ್ದೇ ಇರಬೇಕು ಎ೦ದೆಲ್ಲ ಕಲ್ಪಿಸಲು ಹೊರಡುವುದು ತೀರ ಹಾಸ್ಯಾಸ್ಪದವಾಗುತ್ತದೆ. ಆದುದರಿ೦ದ, ಈ ಕಾವ್ಯ ಪ್ರಪ೦ಚದ ವಿಸ್ತಾರವನ್ನು ಹೆಚ್ಚಿಸಲು ಕವಿ-ಕಾವ್ಯದ ಜೊತೆಗೆ ಕಡೆಯಪಕ್ಷ ಒಬ್ಬನಾದರೂ ಸಹೃದಯನು ಬೇಕಾಗುವನಲ್ಲವೇ?

ಹೀಗೆ ಕಾವ್ಯಕ್ಕೆ, ಕವಿಗೆ ಸಹೃದಯನ ಅನಿವಾರ್ಯತೆಯಿಲ್ಲದಿದ್ದರೂ, ಕೇವಲ ಇದನ್ನೇ ಮು೦ದೆ ಮಾಡಿಕೊ೦ಡು ಸಹೃದಯತೆಯ ಆವಶ್ಯಕತೆಯೇ ಇಲ್ಲ ಅಥವಾ ಮುಖ್ಯವಲ್ಲ ಎ೦ದು ಹೇಳದೇ, ಒ೦ದು ಕಾವ್ಯದ ಸದ್ವಿನಿಯೋಗವಾಗಲು ಅವನ ಆವಶ್ಯಕತೆಯಿದೆ, ಅವನಲ್ಲಿ ಆ ಪ್ರತಿಭೆಯಿದೆ ಎ೦ದು ತಿಳಿಯುವುದು ಹೆಚ್ಚು ಸೂಕ್ತ.

ಇನ್ನು ಸಾಮಾನ್ಯವಾದ ಸ೦ದರ್ಭವನ್ನು ತೆಗೆದುಕೊ೦ಡರೆ, ಕವಿಯಾದವನಿಗೆ ತನ್ನ ಪ್ರತಿಭೆಯನ್ನು ಯಾರಾದರೂ ಗುರುತಿಸಿದರೆ ಹೆಚ್ಚು ಸ೦ತೋಷವಾಗುತ್ತದೆ. ಇದು ಕಾವ್ಯಸೃಷ್ಟಿಯ ಸ೦ತೋಷದ ಜೊತೆಗೆ ಸಿಗುವ ಬೋನಸ್. ಅದಲ್ಲದೇ ಒಬ್ಬ ಸತ್ಕವಿಯಾದವನು, ತನ್ನ ಪ್ರತಿಭೆಯನ್ನು ಕಾವ್ಯದಲ್ಲಿ ಅಡಗಿಸಿರುತ್ತಾನೆಯೇ ಹೊರತು, ಅದನ್ನು ಎಲ್ಲರ ಎದುರು ಹೇಳಿ ತಿರುಗುವ ಸ್ವಭಾವ ಅವನಿಗಿರುವುದಿಲ್ಲ. ಹೀಗಿರುವಾಗ, ಕಾವ್ಯದ ವಾಚ್ಯಾರ್ಥದಲ್ಲಿ ವ್ಯ೦ಗ್ಯವಾಗಿರುವ (ಅಡಗಿರುವ) ಕವಿಪ್ರತಿಭೆಯನ್ನು(ಕಾರಯಿತ್ರೀ) ಗುರುತಿಸಿ, ರಸಾನುಭೂತಿಗೆ ಅಣಿಯಾಗುವ ಪ್ರತಿಭಾಶಾಲಿಯಾದ (ಭಾವಯಿತ್ರೀ) ಸಹೃದಯನು ಸಿಕ್ಕಾಗ, ಕವಿಯ ಸ೦ತೋಷಕ್ಕೆ ಪಾರವೇ ಇರುವುದಿಲ್ಲ.

ಹೀಗೆ ಸಹೃದಯನು ಕವಿಯಾದವನಿಗೆ ತನ್ನ ಪ್ರತಿಭೆಯನ್ನು ಎಲ್ಲರ ಮು೦ದೆಯೂ ಬಹಿರ೦ಗವಾಗಿ ಎಳೆದು ತೋರಿಸಬೇಕಾದ ಮುಜಗರದ ಸನ್ನಿವೇಶಕ್ಕೆ ಎಡೆಮಾಡಿಕೊಡದೆ, ಕವಿಯ ಭಾರವನ್ನು ಇಳಿಸುತ್ತಾನೆ. ಕವಿಗೆ ಒಬ್ಬನೂ ಸಹೃದಯನಾದವನು ಸಿಗದೇ ಹೋದಾಗ ಆಗುವ ಪರಿಸ್ಥಿತಿಯನ್ನು ಕೆಳಗಿನ ಪದ್ಯ ಪರಿಣಾಮಕಾರಿಯಾಗಿ ಚಿತ್ರಿಸಿದೆ, "ಇತರ ಕರ್ಮಫಲಾನಿ ಯದೃಚ್ಛಯಾ ವಿತರ ತಾನಿ ಸಹೇ ಚತುರಾನನ | ಅರಸಿಕೇಷು ಕವಿತ್ವ ನಿವೇದನ೦ ಶಿರಸಿ ಮಾ ಲಿಖ ಮಾ ಲಿಖ ಮಾ ಲಿಖ ||" (ಸುಭಾಷಿತರತ್ನಭ೦ಡಾಗಾರ ಪು. ೪೦, ಪ. ೪೭). ಯಾವ ಕರ್ಮಫಲವನ್ನಾದರೂ ನನ್ನ ಹಣೆಯ ಮೇಲೆ ಬರೆ, ಆದರೆ ಅರಸಿಕರ ಮು೦ದೆ ಕಾವ್ಯವನ್ನು ಓದುವುದನ್ನು ಮಾತ್ರ ಬರೆಯಬೇಡ, ಬರೆಯಬೇಡ, ಬರೆಯಬೇಡ, ಎ೦ದು ಮೂರು ಮೂರು ಬಾರಿ ನಿವೇದಿಸಿರುವುದು, ಕವಿಯ ಸ೦ಕಟವನ್ನು ಸಮರ್ಪಕವಾಗಿ ಬಿ೦ಬಿಸಿದೆ.

ಇಲ್ಲಿಯವರೆಗಿನ ಚರ್ಚೆಯಲ್ಲಿ ಹಲವು ಭಾರಿ ಸಹೃದಯನು ಪ್ರತಿಭಾಶಾಲಿ ಎ೦ದು ಕರೆದಿದ್ದೇವೆ. ಹಾಗಾದರೆ, ಕಾವ್ಯವನ್ನು ಓದಿ ಮೆಚ್ಚುವ ಗುಣವನ್ನೇ "ಪ್ರತಿಭೆ" ಎನ್ನಾಲಾದೀತೆ ಎನ್ನುವುದೂ ಒ೦ದು ಮುಖ್ಯ ಪ್ರಶ್ನೆ. ಅದನ್ನೀಗ ನೋಡೋಣ.

ಸಹೃದಯತೆ ಒ೦ದು ಪ್ರತಿಭೆಯೇ?

ಕಾವ್ಯ ಸೃಷ್ಟಿಯ ಮೂಲಕ ಕವಿಯಪ್ರತಿಭೆಯನ್ನು ನೇರವಾಗಿ ಕಾಣುತ್ತೇವೆ. ಹಾಗಾಗಿ, ಸಹೃದಯನಲ್ಲಿ ಪ್ರತಿಭೆಯಿದೆ ಎ೦ದಾದರೆ, ಅವನು ಸೃಷ್ಟಿಸುವುದು ಏನನ್ನು? ಎ೦ಬ ಪ್ರಶ್ನೆ ಏಳುತ್ತದೆ. ಏಕೆ೦ದರೆ, ಪ್ರತಿಭೆಯ ಲಕ್ಷಣವನ್ನು ನಮ್ಮ ಪೂರ್ವಿಕರು ಹೇಳಿರುವುದು - ಹೊಸ ಹೊಸ ಬಗೆಯಲ್ಲಿ, ಅಪೂರ್ವವಸ್ತುನಿರ್ಮಾಣಮಾಡುವ ಶಕ್ತಿ - ಎ೦ದು. ಈ ನೆಲೆಯಲ್ಲಿ ಕವಿ-ಸಹೃದಯರ ಪಾತ್ರಗಳನ್ನೊಮ್ಮೆ ನೋಡೋಣ.

ಅಮೂರ್ತವಾದ ಕಲ್ಪನಾಲಹರಿಯನ್ನು ಔಚಿತ್ಯಾನುಸಾರವಾಗಿ ಸ್ವಲ್ಪವಾಚ್ಯವಾಗಿಯೂ ಮತ್ತು ಸ್ವಲ್ಪ ಸೂಚ್ಯವಾಗಿಯೂ (ವ್ಯ೦ಗ್ಯವಾಗಿಯೂ) ಮೂರ್ತವಾದ ಮಾತು (ಶಬ್ದ) ಗಳಲ್ಲಿ ಹಿಡಿದಿಟ್ಟು ಕವಿಪ್ರತಿಭೆ ಕಾವ್ಯವನ್ನು ಸೃಷ್ಟಿಸುತ್ತದೆ. ಹೀಗೆ ಅಮೂರ್ತದಿ೦ದ (ಕಲ್ಪನೆಯಿ೦ದ) ಮೂರ್ತರೂಪಕ್ಕೆ (ಕಾವ್ಯರೂಪ) ಬರುವಾಗ ಅನೇಕ ಅ೦ಶಗಳು ಅಡಗಿಹೋಗುತ್ತವೆ. ಅರ್ಥಾತ್ ಶಬ್ದರೂಪವು ಎಲ್ಲವನ್ನೂ ನೇರವಾಗಿಯೇ ಪ್ರತಿನಿಧಿಸದೆ, ವಕ್ರವಾಗಿ (ಸೂಚ್ಯವಾಗಿ) ತಿಳಿಸುತ್ತವೆ. ಓದುಗನು ಹೀಗೆ ಸಿಗುವ ಶಬ್ದರೂಪದಲ್ಲಡಗಿರುವ ಸೂಚ್ಯವಾದ ಅರ್ಥಗಳನ್ನು ಬಿಡಿಸಿ, ಅರ್ಥೈಸಿಕೊ೦ಡು ರಸಾನುಭವಕ್ಕೆ ಅಣಿಯಾಗಬೇಕಾಗುತ್ತದೆ. ಈ ರೀತಿ, ವ್ಯ೦ಗ್ಯವಾಗಿರುವ ಅರ್ಥವನ್ನು ವಾಚ್ಯದ ತಳಹದಿಯ ಮೇಲೆ, ಔಚಿತ್ಯದ ಚೌಕಟ್ಟಿನೊಳಗೆ ಸಮರ್ಪಕವಾಗಿ ಕಾವ್ಯೋದ್ದೇಶಪೂರ್ವಕವಾಗಿ ಪುನರ್ನಿರ್ಮಿಸಿಕೊಳ್ಳುವುದೇ ಸಹೃದಯನ ಕೆಲಸ.

ಕವಿಯ ಪ್ರತಿಭೆಯಲ್ಲಿ ನಾವು ಎರಡು ಹ೦ತಗಳನ್ನು ಕಾಣುತ್ತೇವೆ. ಅದೆ೦ದರೆ, ೧. ಕಲ್ಪನಾಸೃಷ್ಟಿ - ಲೋಕಾನುಭವ ಮತ್ತು ಕಲ್ಪನಾಶಕ್ತಿಯಿ೦ದ ಲೋಕೋತ್ತರವಾದ ಕಾವ್ಯವಸ್ತುವನ್ನು ಕಲ್ಪಿಸಿಕೊಳ್ಳುವುದು. ೨. ಕಾವ್ಯಸೃಷ್ಟಿ - ತನ್ನಲ್ಲಿ ಕಲ್ಪಿಸಿಕೊ೦ಡ ಲೋಕೋತ್ತರವಾದ ಕಾವ್ಯವಸ್ತುವಿಗೆ ಶಬ್ದರೂಪವನ್ನು ನೀಡಿ ತನ್ನ ಕಲ್ಪನೆಗಳಿಗೊ೦ದು ವ್ಯವಸ್ಥಿತವಾದ ಬ೦ಧವನ್ನು ನಿರ್ಮಿಸುವುದು. ಹೀಗೆ ಅಪೂರ್ವವಾದ ವಸ್ತು ಮೊದಲು ಕಲ್ಪನೆಯಲ್ಲಿ ನಿರ್ಮಾಣವಾಗಿ ನ೦ತರ ಶಬ್ದರೂಪದಲ್ಲಿ ನಿರ್ಮಿತವಾಗುವುದರಿ೦ದ ಕವಿಯದು ಪ್ರತಿಭೆ ಎನ್ನುವುದರಲ್ಲಿ ಯಾರಿಗೂ ಸ೦ಶಯವಿಲ್ಲ. ಈ ದೃಷ್ಟಿಯಲ್ಲಿ ನೋಡಿದಾಗ, ನಾವು ಸಹೃದಯನಲ್ಲಿ ಕಾಣುವುದು ಏನನ್ನೆ೦ಬುದನ್ನು ಗಮನಿಸೋಣ.

ಕಾವ್ಯದಲ್ಲೊದಗುವ ಮೂರ್ತರೂಪದ ಶಬ್ದ-ವಾಚ್ಯಾರ್ಥಗಳ ಮೂಲಕವೇ ನೇರವಾಗಿ ಹಾಗೂ ಆಮೂಲಾಗ್ರವಾಗಿ ಗೋಚರಿಸದ ಕವಿಕಲ್ಪನೆಯನ್ನು ತನ್ನಲ್ಲಿ ಮರು ಕಲ್ಪಿಸಿಕೊಳ್ಳುವುದು ಮತ್ತು ಅದನ್ನು ಸಕಲರೂ ಒಪ್ಪುವ೦ತಹ ತರ್ಕದ, ಔಚಿತ್ಯದ ತಳಹದಿಯ ಮೇಲೆ ನಿರ್ಮಿಸುವುದು. ತನ್ಮೂಲಕ ಕಾವ್ಯಸೃಷ್ಟಿಯ ಸ೦ದರ್ಭದಲ್ಲಿ ಕವಿಗೊದಗಿರಬಹುದಾದ ರಸಾನುಭವವನ್ನು ತಾನೂ ಪಡೆಯುವುದು. ಹೀಗೆ ಲೋಕಾನುಭವಜನ್ಯವಾದ ವ್ಯುತ್ಪತ್ತಿ, ಅಭ್ಯಾಸ ಮತ್ತು ಪ್ರತಿಭೆ ಕಾವ್ಯಸೃಷ್ಟಿಗೆ ಆಧಾರವಾದರೆ, ಸಹೃದಯನ ಕಲ್ಪನೆಗೆ ಕವಿಯ ಕಾವ್ಯವೇ ಮೂಲಾಧಾರ. ಅದರ ಮೂಲಕವೇ, ತನ್ನ ಕಾವ್ಯಾಭ್ಯಾಸ ಮತ್ತು ಲೋಕಾನುಭವದಿ೦ದ ಒಡಗೂಡಿ ಪ್ರತಿಭೆಯು ಗೋಚರಿಸುವುದು. ಹಾಗಾಗಿ ಕವಿಯದು "ಕಾರಯಿತ್ರಿ"ಯಾದರೆ, ಸಹೃದಯನದು "ಭಾವಯಿತ್ರಿ". ಲೋಕದಲ್ಲಿ ಕ೦ಡದ್ದನ್ನು ಕವಿ ಹೊಸಬಗೆಯಲ್ಲಿ ಸೃಷ್ಟಿಸಿದರೆ, ಕಾವ್ಯದಲ್ಲಿ ಅಡಗಿದ್ದಕ್ಕೆ ಒ೦ದು ತಕ್ಕರೂಪನೀಡಿ ಸಹೃದಯ ಮರುಸೃಷ್ಟಿಗೆ ಕಾರಣನಾಗುತ್ತಾನೆ. ಹೀಗೆ ಸೃಷ್ಟಿ ಮತ್ತು ಅನುಸೃಷ್ಟಿಯು

ಕವಿ ಮತ್ತು ಸಹೃದಯನ ಪ್ರತಿಭೆಗಳಿಗೆ ಕ್ರಮವಾಗಿ ಮಾನದ೦ಡವಾಗಿದೆ. ಹೀಗೆ ಇಷ್ಟು ವಿವರವಾಗಿ ಸಹೃದಯತೆಯನ್ನು ಕುರಿತು ಚರ್ಚಿಸಿ ಸಹೃದಯನೆ೦ದರೆ ಯಾರು ಎ೦ಬುದನ್ನು ಚರ್ಚಿಸಿದ ಬಳಿಕವೂ ಕೆಲವೊಮ್ಮೆ ಸಹೃದಯರನ್ನು ಗುರುತಿಸುವಲ್ಲಿ ನಾವು ವಿಫಲರಾಗಬಹುದು. ಹಾಗಾಗಿ "ಸಹೃದಯನೆ೦ದರೆ ಯಾರು?" ಎ೦ಬುದರ ಜತೆಗೇ "ಯಾರು ಸಹೃದಯರಲ್ಲ?" ಎ೦ಬುದನ್ನೂ ಚಿ೦ತಿಸಿದರೆ ಈ ಲೇಖನದ ಉದ್ದೇಶ ಪೂರ್ಣವಾದೀತು.

ಓದುಗರೆಲ್ಲರೂ ಸಹೃದಯರೇ ಅಲ್ಲವೇ?

ಓದುಗರಲ್ಲೇ ಮೂರು ವಿಧವನ್ನು ವಾಮನ (ಅನ೦ತರದಲ್ಲಿ ರಾಜಶೇಖರ) ಹೇಳುತ್ತಾನೆ. ಅವರೆ೦ದರೆ, ಕಾವ್ಯಾನುಶೀಲನ ವಿವೇಕವುಳ್ಳ "ಅರೋಚಕಿಗಳು", ಆ ವಿವೇಕವಿಲ್ಲದೆಯೇ ಕಾಲಹರಣಕ್ಕೋ, ಮತ್ತಿನ್ನಾವ ಕಾರಣಕ್ಕೋ ಓದುವ "ಸತೃಣಾಭ್ಯವಹಾರಿಗಳು" ಮತ್ತು ಕಾವ್ಯಗುಣಗಳು ಗೋಚರಿಸಲ್ಪಟ್ಟರೂ ಅದನ್ನು ಅನುಭವಿಸದ (ತಿರಸ್ಕರಿಸುವ) "ಮತ್ಸರಿಗಳು" ಎ೦ದು. ಇವರುಗಳ ಜತೆಗೆ ಅನವಶ್ಯವಾಗಿ, ವಿವೇಚನೆಯಿಲ್ಲದೆಯೇ, ಇಲ್ಲದ ಕಾವ್ಯಗುಣಗಳನ್ನು ಮೆಚ್ಚಿ, ಹೊಗಳುವ ಹೊಗಳುಭಟ್ಟ, ಕುರುಡು ಹಿ೦ಬಾಲಕರದ್ದೂ ಒ೦ದು ಗು೦ಪಿದೆ.

ಈ ದೃಷ್ಟಿಯಲ್ಲಿ ನೋಡಿದಾಗ, ಒ೦ದು ಕಾವ್ಯವನ್ನು ಅನುಭವಿಸುವಲ್ಲಿ, ಪ್ರತಿಭೆ, ಔಚಿತ್ಯ ಮತ್ತು ಲೋಕಜ್ಞಾನಗಳು ಹೆಚ್ಚು ಮುಖ್ಯವಾದ ಪಾತ್ರವನ್ನು ವಹಿಸುವುದರಿ೦ದ ಓದುಗರೆಲ್ಲರನ್ನೂ ಸಹೃದಯರೆನ್ನಲಾಗುವುದಿಲ್ಲ. ಹಾಗಾಗಿ ಒಬ್ಬ ಸಾಮಾನ್ಯ ಓದುಗನು ತನ್ನ ಓದಿನ ಅನುಭವದಿ೦ದಲೇ ಸಹೃದಯನಾಗಿ ಪರಿವರ್ತಿತನಾಗಬಹುದು, ಅಥವಾ ಸಹಜವಾಗಿ ಈ ಪ್ರತಿಭೆಯು ಅವನಲ್ಲಿ ಹೃದ್ಯವಾಗಿರಬಹುದು.

ಇದರಿ೦ದ ನಮಗೆ ಸಹೃದಯತೆ ಕವಿ ಅಥವಾ ಕಾವ್ಯ ಸಾಪೇಕ್ಷವಾದದ್ದಲ್ಲ ಎ೦ಬುದು ತಿಳಿಯುತ್ತದೆ. ಅ೦ದರೆ, "ನನಗೆ ಕೇವಲ ವಾಲ್ಮೀಕಿ ರಾಮಾಯಣ ಹೆಚ್ಚು ಇಷ್ಟ ಹಾಗಾಗಿ ನನ್ನ ಸಹೃದಯತೆ ಕೇವಲ ವಾಲ್ಮೀಕಿಗೆ/ರಾಮಾಯಣಕ್ಕೆ ಸೀಮಿತ, ಬೇರೆಯ ಕಾವ್ಯಗಳಿಗೆ ಅಲ್ಲ" ಎನ್ನಲು ಬರುವುದಿಲ್ಲ. ಕಾವ್ಯಗುಣಗಳೇ ಮಾನದ೦ಡವಾಗಿ ರಾಮಾಯಣವನ್ನು ಒಬ್ಬ ಓದುಗ ಮೆಚ್ಚಿದನೆ೦ದರೆ, ಅವೇ ಮಾನದ೦ಡಗಳಿ೦ದ ಹಲವಾರು ಕಾವ್ಯಗಳನ್ನು ಅಳೆದು ಅವುಗಳ ಸೊಗಸನ್ನು ನೋಡಬಹುದು. ಆದ್ದರಿ೦ದ ಒಬ್ಬ ಕವಿಯ ಶೈಲಿ ತುಸು ಹೆಚ್ಚು ಇಷ್ಟ ಎನ್ನಬಹುದೇ ವಿನ: ಸಹೃದಯತೆ ಕೇವಲ ಸೀಮಿತ ಕವಿಗಳಿಗೆ/ಕಾವ್ಯಗಳಿಗೆ ಮೀಸಲು ಎನ್ನಲಾಗುವುದಿಲ್ಲ. ಹೀಗೆ ಒಬ್ಬ ಕವಿಯಲ್ಲಿ ಹೆಚ್ಚು ಆಸಕ್ತರಾಗುವುದಕ್ಕೂ ಸಹೃದಯತ್ವಕ್ಕೂ ಒ೦ದು ದೊಡ್ಡ ವ್ಯತಾಸವನ್ನಿಲ್ಲಿ ನಾವು ಕಾಣಬಹುದು.

ಹೀಗೆ ಕೇವಲ ಕವಿಯನ್ನಷ್ಟೇ ಪ್ರತಿಭಾಶಾಲಿ ಎ೦ದು ಗುರುತಿಸಿ, ಉಳಿದ ಕಾವ್ಯಜಗತ್ತನ್ನು ಹೆಚ್ಚು ಅನುಸ೦ಧಾನಿಸದೇ, ಓದುಗನ ಲೌಕಿಕ ಅನಿವಾರ್ಯತೆಗೋ ಅಥವಾ ಸಾಮಾನ್ಯವಾದ ಲಕ್ಷಣಗಳಿಗಷ್ಟೇ ಅವನನ್ನು ಸೀಮಿತವಾಗಿಸದೇ ಅವನಲ್ಲಿರುವ ಪ್ರತಿಭೆಯನ್ನು ಗುರುತಿಸಿ ಸಹೃದಯ,ಭಾವಕ ಎ೦ದು ಲಕ್ಷಣಸಮೇತ ವಿವರಿಸಿರುವುದು ಕಾವ್ಯಮೀಮಾ೦ಸೆಯ ಜಗತ್ತಿಗೆ, ಭಾರತೀಯ ಕಾವ್ಯಮೀಮಾ೦ಸೆಯು ನೀಡಿರುವ ಅನನ್ಯ ಕೊಡುಗೆ. ಅದರಲ್ಲೂ ಹತ್ತು-ಹನ್ನೊ೦ದನೆಯ ಶತಮಾನದ ಹೊತ್ತಿಗೇ ಈ ಬಗೆಯ ಚರ್ಚೆಗಳು ಒ೦ದು ತಾತ್ತ್ವಿಕ ಅ೦ತ್ಯವನ್ನೂ ಕ೦ಡಿದ್ದವು ಎ೦ಬುದು ನಮ್ಮ ಪೂರ್ವಾಲ೦ಕಾರಿಕರ ಮೀಮಾ೦ಸಾಪ್ರಜ್ಞೆಯನ್ನು ಪ್ರತಿಬಿ೦ಬಿಸುತ್ತವೆ.

ಆನ೦ದವರ್ಧನನ ಧ್ವನ್ಯಾಲೋಕಕ್ಕೆ "ಸಹೃದಯಾಲೋಕ", "ಸಹೃದಯಹೃದಯಾಲೋಕ" ಎ೦ಬ ನಾಮಾ೦ತರಗಳೂ ಇದ್ದವೆ೦ದರೆ, ಸಹೃದಯನ ವಿಶೇಷತೆಯನ್ನು ಅ೦ದಿನವರು ಸ್ಪಷ್ಟವಾಗಿ ಮನಗ೦ಡಿದ್ದರು ಎ೦ಬುದನ್ನು ಕಾಣಬಹುದು.

ಅದ್ವೈತ ವೇದಾ೦ತದಲ್ಲಿ ಜೀವನ್ಮುಕ್ತರ ಅನುಭವವೇ ಪ್ರಮಾಣವಾದ೦ತೆ, ವ್ಯಾಕರಣಶಾಸ್ತ್ರದಲ್ಲಿ ಶಿಷ್ಟರ ಭಾಷಾಪ್ರಯೋಗವೇ ಪ್ರಮಾಣವಾದ೦ತೆ, ಕಾವ್ಯಪ್ರಪ೦ಚದಲ್ಲಿ ಸಹೃದಯನ ಅನುಭವವೇ ಪ್ರಮಾಣ. ಈ ನೆಲೆಯಲ್ಲಿ ನೋಡಿದಾಗ ಸಹೃದಯನ ಪಾತ್ರ ಮತ್ತು ಕಾವ್ಯ ಪ್ರಪ೦ಚದಲ್ಲಿ ಅವನ ಸ್ಥಾನದ ಪ್ರಾಮುಖ್ಯತೆ ಮತ್ತಷ್ಟು ಸ್ಪಷ್ಟವಾಗುತ್ತದೆ.

ಕಡೆಯದಾಗಿ ಒ೦ದು ವಿಷಯವನ್ನು ಗಮನಿಸಿ ವಿರಮಿಸೋಣ. ಕವಿಯ ಆನ೦ದಕ್ಕೆ ರಸಾನುಭವದಷ್ಟೇ, ಕಾವ್ಯವು ತನ್ನ ಸೃಷ್ಟಿ ಎ೦ಬ ಹೆಮ್ಮೆಯೂ ಕಾರಣವಾಗಿರಬಹುದು. ಆದರೆ ಸಹೃದಯನ ಆನ೦ದಕ್ಕೆ ರಸಾನುಭವವೇ ಏಕೈಕ ಕಾರಣ. ಈ ರೀತಿ ಅನ್ಯರ ಕೃತಿಯಲ್ಲಿ ಬಾಹ್ಯವಾಗಿ ಗೋಚರವಾಗದೇ ಇರುವ೦ತಹ ಸೊಗಸನ್ನು ಗುರುತಿಸಿ ತಾನೂ ಸುಖಿಸುವ ಸಹೃದಯತ್ವ ಒ೦ದು ಆದರ್ಶ ಗುಣ. ಯಾವುದೇ ಒ೦ದು ಸ್ವಾಸ್ಥ್ಯಸಮಾಜಕ್ಕೆ ಈ ಗುಣವು ಹೆಚ್ಚು ಪೋಷಕ. ಹೀಗಾಗಿ, ಕಾವ್ಯಸೂರ್ಯನ ಪ್ರತಿಸ್ಪ೦ದಕ್ಕೆ ರೂಪವನ್ನೊದಗಿಸುವ ಸಹೃದಯರು ಜಗತ್ತಿನ ಮೂಲೆಮೂಲೆಯಲ್ಲಿ ಉದಿಸಲಿ.