ಭೈರಪ್ಪನವರ ಕಾದಂಬರಿ “ಸಾಕ್ಷಿ" ಯನ್ನು ಓದುವಾಗ, ಅದು ಚಿತ್ರಿಸುತ್ತಿರುವ ಕಥೆಯ ಬೆರಗು, ಮನುಷ್ಯನ ಧರ್ಮ, ಅರ್ಥ ಮತ್ತು ಕಾಮ, ಅಹಂಕಾರ ಮತ್ತು ಮೌಲ್ಯಗಳ ತಳಹದಿಯ ಪಾತ್ರ-ಪ್ರಸಂಗಗಳ ಚಿತ್ರಣದ ವಿವಿಧ ರೂಪಗಳ ಸೆಳೆತದಲ್ಲಿ, ಗ್ರಾಮೀಣ ಜನಜೀವನ ಮತ್ತು ಸಂಭಾಷಣೆಗಳಲ್ಲಿ ಓದುಗರ ಚಿತ್ತ ಕಳೆದುಹೋಗಿ, ಈ ಕಾದಂಬರಿಯು ಸೂಕ್ಷ್ಮವಾಗಿ, ಸೂಚಿಸುವ - ಪ್ರತಿಯೊಬ್ಬ ಜೀವಿಯಲ್ಲಿ ನಡೆಯುವ/ನಡೆಯಬೇಕಾದ/ನಡೆಯದ - ಮೌಲ್ಯವಿಶ್ಲೇಷಣೆಯನ್ನು, ಅದಕ್ಕೆ ಆಧಾರವಾದ ವಿವಿಧ ರೀತಿಯ ವ್ಯಕ್ತಿಗಳ ಅಹಂಕಾರ ಮತ್ತು ಆತ್ಮಸಾಕ್ಷಿಯ ಸ್ವರೂಪವನ್ನು ಗ್ರಹಿಸದೆ ಇದ್ದುಬಿಡುವ ಸಂಭವವಿದೆ. ಇದಕ್ಕೆ ಕಾರಣ ಕಾದಂಬರಿಯ ವಸ್ತುವಿನ ಆಕರ್ಷಣೆ ಒಂದೆಡೆಯಾದರೆ, ಅದನ್ನು ಅನನ್ಯ ರೀತಿಯಲ್ಲಿ ಪ್ರತಿನಿಧಿಸುವ ಪಾತ್ರಗಳು ಇನ್ನೊಂದೆಡೆ. ಅದು ಎಷ್ಟರ ಮಟ್ಟಿಗೆ ಎಂದರೆ, ಕಾದಂಬರಿಯಲ್ಲಿ ತನ್ನ ಸುತ್ತಲಿನ ವ್ಯಕ್ತಿಗಳನ್ನು ಪ್ರಚಂಡವಾಗಿ ಸೆಳೆಯುವ ಮಂಜಯ್ಯನಂತಹ ಖಳನಾಯಕ, ಓದುಗನ ಮನಸ್ಸನ್ನೂ ಆಕ್ರಮಿಸಿ ತನ್ನ ವಶವಾಗಿಸಿಕೊಳ್ಳುವ ಮಟ್ಟಿಗೆ. ಇಲ್ಲಿಯ ಪಾತ್ರಗಳ ಸೆಳೆತವನ್ನು ಮತ್ತು ಕಥನಶೈಲಿಯ ಆಕರ್ಷಣೆಯನ್ನು ಅನುಭವಿಸುತ್ತಲೇ, ಅವುಗಳು ಪ್ರತಿನಿಧಿಸುವ ಸೂಕ್ಷ್ಮತತ್ತ್ವಗಳನ್ನು ಗಮನಿಸಿದಲ್ಲಿ, ಪ್ರತಿಭೆಯ ಮಹಾದರ್ಶನ ನಮಗೆ ಕಾಣಸಿಗುತ್ತದೆ. ಈ ಒಂದು ಆಶ್ಚರ್ಯ, ಸಂತೋಷ ಮತ್ತು ಇಂತಹ ಚಿತ್ರಿಸಲಸಾಧ್ಯವಾದಂಥ ವಸ್ತು-ಪಾತ್ರ-ಪ್ರಕರಣಗಳ ರೂಪಣದ ಸಾಧ್ಯತೆಯನ್ನು ಲೇಖಕರು ತೋರಿಸಿಕೊಟ್ಟಿರುವುದೇ ಈ ಬರೆವಣಿಗೆಗೆ ಪ್ರೇರಣೆ.
ತನ್ನೊಳಗನ್ನು ತಾನು ನಿರ್ಮಮವಾಗಿ ನೋಡಿಕೊಳ್ಳುತ್ತಿರುವುದೇ ಸಾಕ್ಷಿ. ಸಾಕ್ಷಿಯು ಕೇವಲ ಸಾಕ್ಷಿಯಾಗಿರದೆ ಕರ್ತೃವನ್ನು ಆವರಿಸಿದರೆ ಅಥವಾ ಕರ್ತೃವು ಸಾಕ್ಷಿಯನ್ನು ಸಾಕ್ಷಿಯಾಗಿರಲೂ ಬಿಡದಿದ್ದರೆ ಏನೆಲ್ಲ ವೈಪರೀತ್ಯಗಳು ಸಂಭವಿಸುತ್ತವೆ ಮತ್ತು ಈ ವೈಪರೀತ್ಯಗಳ ನಡುವಿನ ಕರ್ತೃ ಮತ್ತು ಸಾಕ್ಷಿಗಳ ನಡುವಿನ ಸಂಬಂಧ, ಹೊಯ್ದಾಟಗಳು, ಮೌಲ್ಯ ಪ್ರಜ್ಞೆಯು ಸಾಕ್ಷಿಯ ಮುಖೇನ ಹೇಗೆ ವ್ಯಕ್ತಿಯನ್ನು ಪ್ರಭಾವಿಸುತ್ತದೆ ಮತ್ತು ಮಾನವ ಪ್ರವೃತ್ತಿಯು(instincts) ವ್ಯಕ್ತಿಯ ಮೌಲ್ಯ ಮತ್ತು ಸಾಕ್ಷಿ ಪ್ರಜ್ಞೆಯನ್ನು ಸಂಪೂರ್ಣವಾಗಿ ಆವರಿಸಿಬಿಡುತ್ತದೆ; ಇವೆಲ್ಲದರ ಪರಿಣಾಮದಿಂದ ಅಹಂಕಾರದ ಸ್ವರೂಪವು ಹೇಗೆ ಬದಲಾಗುತ್ತದೆ ಎಂಬುದರ ಅಡಿಪಾಯದಲ್ಲೇ ನೆಲೆನಿಂತ ಸಾಕ್ಷಿಯು, ಬೃಹದ್ ತತ್ತ್ವದ ಹೂರಣವನ್ನು ರಸದ ಕಣಕದಲ್ಲಿ ಸುತ್ತಿಕೊಟ್ಟ ಸಿಹಿತಿನಿಸಾಗಿದೆ. ಸಾಕ್ಷಿಗೆ ಗೋಚರಿಸುವ ಆದರ್ಶದ ನದಿಗೆ ಹಾರುವುದೋ? ಅಹಂಕಾರದ ಬೆಂಕಿಯಲ್ಲಿ ಬೇಯುವುದೋ? ಪ್ರಾಣಿಮಾತ್ರವಾದ ಚೋದನೆಗಳ ಕೊಚ್ಚೆಯಲ್ಲಿ ಮುಳುಗಿಬಿಡುವುದೋ? ಅಥವಾ ಹೊತ್ತಿ ಉರಿಯುವ ಬೆಂಕಿಗೆ ಆಗಾಗ ನೀರುಸುರಿಯುತ್ತಾ, ಇಷ್ಟಿಷ್ಟು ಕೊಚ್ಚೆಯಾದಾಗ ಅಷ್ಟಷ್ಟು ತೊಳೆದುಕೊಳ್ಳುತ್ತಾ ಸಾಗುತ್ತಿರುವುದೋ ಎಂಬ ನಿತ್ಯದ್ವಂದ್ವವನ್ನು ಔಚಿತ್ಯಪೂರ್ಣವಾದ ಪಾತ್ರವೈವಿಧ್ಯದ ಮೂಲಕ ಚಿತ್ರಿಸಿದ್ದಾರೆ ಲೇಖಕರು.
ಸಾಕ್ಷಿಯನ್ನು ಹೆಚ್ಚು ಅರ್ಥೈಸಿಕೊಳ್ಳಲು ಪ್ರಯತ್ನಿಸಿದಾಗ ಗೋಚರಿಸುವ ಅದರ ಆಯಾಮ ಮುಖ್ಯವಾಗಿ ಎರಡು ಸ್ತರದವು. ಒಂದು ಪಾಶ್ಚಾತ್ಯ ಮನ:ಶಾಸ್ತ್ರದ ಪರಿಧಿಯಲ್ಲಿ ಬರುವ ಈಗೊ-ಐಡಿ-ಸೂಪರ ಈಗೊ ಗಳನಡುವಿನ ತಿಕ್ಕಾಟದ ವಿವಿಧ ರೂಪಗಳಾದರೆ, ಭಾರತೀಯ ತತ್ವಶಾಸ್ತ್ರದಲ್ಲಿ ಹೇಳುವ ಪುರುಷಾರ್ಥಗಳ ನೆಲೆಯಲ್ಲಿ ಧರ್ಮ-ಅರ್ಥ-ಕಾಮಗಳ ನಡುವಿನ ದ್ವಂದ್ವವಾಗಿ ತೋರುತ್ತದೆ. ಈ ಎರಡು ಆಯಾಮದಲ್ಲಿಯೂ ಮುಖ್ಯವಾಗಿ ಕಾಣುವುದು ಮೌಲ್ಯಗಳ - ಪರಿಜ್ಞಾನ, ತಾರತಮ್ಯ , ವೈಪರೀತ್ಯ ಹಾಗೂ ಅನ್ವೇಷಣೆ ಅಥವಾ ರಾಹಿತ್ಯ . ಪಾತ್ರಗಳ ಮನಸ್ಸುಗಳಲ್ಲಾಗುವ ಮೌಲ್ಯ ಪ್ರಜ್ಞೆಯ, ಅಹಂಕಾರದ ಮತ್ತು ಚೋದನೆಗಳ(ಮಾನವ ಪ್ರಕೃತಿ ) ಹೊಯ್ದಾಟಗಳನ್ನು ಯಥಾವತ್ ಗ್ರಹಿಸಲು ಮನ:ಶಾಸ್ತ್ರದ ಮೊರೆ ಹೋಗಬೇಕಾದರೆ, ಜೀವನ ಮೌಲ್ಯಗಳ ದೃಷ್ಟಿಯಲ್ಲಿ ಸಾಕ್ಷಿಯು ಬಿಂಬಿಸುತ್ತಿರುವ ವಿಷಯಗಳನ್ನು ಗ್ರಹಿಸಲು ನಾವು ತತ್ತ್ವ ಶಾಸ್ತ್ರದ ಮೊರೆಹೋಗಬೇಕಾಗುತ್ತದೆ. ಈ ಎಲ್ಲ ಹಿನ್ನೆಲೆಯಲ್ಲೂ ನಾವು "ಸಾಕ್ಷಿ"ಯನ್ನು ಪ್ರವೇಶಿಸಬೇಕಾಗಿದೆ.
ಆತ್ಮಸಾಕ್ಷಿಯ ಮೂಲತತ್ತ್ವ ವ ಹಿಡಿದು:
ಸಾಕ್ಷಿಯ ಮೂಲ ಉದ್ದೇಶವನ್ನು ಅರಸುತ್ತಾ ಆಳಕ್ಕೆ ಹೋಗುವುದಾದರೆ, ಓದುಗರಿಗೆ ಕೆಲವು ಮುಖ್ಯ ಪಾತ್ರಗಳು ಒದಗಿಬರುತ್ತವೆ. ಆ ಪಾತ್ರಗಳು ಪ್ರತಿನಿಧಿಸುವ ಅಥವಾ ಬಿಂಬಿಸುವ ಸೂಕ್ಷ್ಮಗಳನ್ನು ಗಮನಿಸಿದಾಗ ಸಾಕ್ಷಿಯ ವಿಸ್ತಾರ ಸ್ಪಷ್ಟವಾಗುತ್ತದೆ, ಆದ್ದರಿಂದ ಮೊದಲಿಗೆ ಕಾದಂಬರಿಯಲ್ಲಿಯೇ ಬರುವ ಕೆಲವು ಸನ್ನಿವೇಶ ಮತ್ತು ಪಾತ್ರಗಳ ನಡೆ/ನುಡಿ ಯನ್ನು ಗಮನಿಸೋಣ.
೧. “ಗಂಧದ ಕಂಟ್ರಾಕ್ಟರ್ ಆದಮೇಲೆ ಯಾಕೋ ಹೆಂಗಸರ ಗೀಳು ಕಡಿಮೆಯಾಗಿಬಿಟ್ಟಿತು. ಅವಳನ್ನು ನೋಡಿದಮೇಲೆ ಹೀಗಾಯಿತು ಅನ್ನೂದು ನಿಜವಲ್ಲ. ಆದರೆ ಯಾಕೆ ಈ ಹೆಂಗಸರ ತಾವ ಮೊದಲಿದ್ದ ಉತ್ಕಟತೆ, ಹುಚ್ಚು ಏರೋದಿಲ್ಲ? ಈ ಸರೋಜಾಕ್ಷಿಯ ಕೈಲಿ ಮಾತನಾಡುವಾಗ ಮೊದಲು ಅರ್ಥ ಆಲೋಚಿಸಿ ಆಮೇಲೆ ಮಾತನ್ನು ಕೂಡಿಸುವ ಹಾಗಾಗುತ್ತಿತ್ತಲ್ಲ. ಇದೆಂಥ ಭಯ ಭಕ್ತಿ, ಯಾವ ಡಿ. ಸಿ. ಗೂ ತೋರಿಸದಿರುವಂಥದು. ಏನಿವಳ ಶಕ್ತಿ? ಅನ್ನದ ಮುಂದೆ ಕೂತಾಗ ಎದುರಿಗೆ ನಿಂತ ಅವಳನ್ನು ಕಣ್ಣೆತ್ತಿ ನೋಡಲಾಗದ ನಾಚಿಕೆ. ಅವಳಿಗೆ ಸುಳ್ಳು ಹೇಳಿದೆ ಎನ್ನುವ ಕಸಿವಿಸಿ. ಹಣೆಯ ಮೇಲೆ ಬೆವರು ಹನಿಗಟ್ಟಿತು ಮುಖ ಎತ್ತಿ ಅವಳ ಕಡೆಗೆ ನೋಡಿದರೆ ಎಲ್ಲಿ ಕಂಡು ಹಿಡೀತಾಳೋ ಎಂಬ ಭಯದಿಂದ ಕತ್ತು ಬಗ್ಗಿಸಿಯೇ ಸರಸರನೆ ಸುರುಕೊಳ್ಳಕ್ಕೆ ಶುರುಮಾಡಿದೆ.”
- ಇದು ಸಾಕ್ಷಿಯ ಮುಖ್ಯಪಾತ್ರ ಮಂಜಯ್ಯ ತುಂಬ ಅಪರೂಪಕ್ಕೆಂಬಂತೆ ತನ್ನನ್ನು ತಾನು ವಿಷ್ಲೇಶಿಸಿಕೊಳ್ಳುವುದು ಮತ್ತು ತನ್ನಲ್ಲೇನೋ ಸರಿಯಿಲ್ಲವೆಂಬ ಅನುಮಾನವನ್ನು ವ್ಯಕ್ತಪಡಿಸುವುದು. ಕಥೆಯ ಓಟದುದ್ದಕ್ಕೂ ಒಮ್ಮೆಯೂ ತಾನಿಟ್ಟ ಹೆಜ್ಜೆಯ ಬಗೆಗೆ ಮರುಯೋಚಿಸದ ಮಂಜಯ್ಯ, ತನ್ನನ್ನು ತಾನು ನೋಡಿಕೊಳ್ಳುವುದು ಕೇವಲ ತನ್ನ ಸಾಹಸದ ಮೆಲುಕುಗಳ ವಿಜೃಂಭಣೆಯಲ್ಲಿ. ಅಂತಹ ಮಂಜಯ್ಯನೂ ಒಳಗೊಳಗೇ ಯೋಚಿಸುವುದು, ತನ್ನ ವ್ಯಕ್ತಿತ್ವ ಸುಧಾರಣೆಗಲ್ಲ, ತನ್ನ ಅಹಂಕಾರಕ್ಕೆ ಪೆಟ್ಟುಬಿದ್ದದ್ದಕ್ಕಷ್ಟೆ. ಮತ್ತು ಈ ಸ್ವವಿಶ್ಲೇಷಣೆಯಿಂದ ಅವನೇನೂ ತನ್ನನ್ನು ಸರಿಪಡಿಸಿಕೊಳ್ಳುವ ಯೋಚನೆಯನ್ನು ಮಾಡುವುದಿಲ್ಲ, ಬದಲಾಗಿ ಅನ್ಯಮಾರ್ಗಗಳಿಂದ ಅಹಂಕಾರವನ್ನು ಹೇಗೆ ತೃಪ್ತಿಪಡಿಸಿಕೊಳ್ಳಲಿ ಎ೦ಬುದನ್ನಷ್ಟೇ ನೋಡುತ್ತಾನೆ. ಅವನ ದುಷ್ಕಾರ್ಯಗಳ ಬಗೆಗೆ ಕಡೆಯವರೆಗೂ ಅವನಿಗೆ ಕಿಂಚಿತ್ತೂ ಪಶ್ಚಾತಾಪವಾಗುವುದಿಲ್ಲ. ಇವನ ಅಹಂಕಾರದ ಪರಾಕಾಷ್ಠೆಯನ್ನು, ನರಕದಲ್ಲಿ ಚಿತ್ರಗುಪ್ತರನ್ನೂ ವಂಚಿಸಲು ಇವನು ಪ್ರಯತ್ನಿಸುವುದನ್ನು ಚಿತ್ರಿಸಿರುವುದರ ಮೂಲಕ ಸೂಚಿಸಿರುವುದು ಅದ್ಭುತವಾಗಿದೆ. ತನ್ನ ಸಾಕ್ಷಿಯ ಅಸ್ತಿತ್ವವನ್ನೇ ಅಲಕ್ಷಿಸಿದ, ನಿತ್ಯ ಕಾಮದಾಟವನ್ನೇ ತನ್ನ ಅಹಂಕಾರದ ವಿಜೃಂಭಣೆಯ ಮಾಧ್ಯಮವಾಗಿಸಿಕೊಂಡ ಮಂಜಯ್ಯ ಅನಂಗ ಮನ್ಮಥನಿಗೇ ಮೈಯಾಂತು ಪ್ರತಿ ಹೆಣ್ಣಿನಲ್ಲಿಯೂ ರತಿಯ ಹುಡುಕಿದವ.ಇವನಿಗೆ ಕಾಮಕೇಳಿಯು ದಾರಿ ಮತ್ತು ತನ್ನ ತನದ ಮೆರವಣಿಗೆಯೇ ಗುರಿ. ಆದರೆ ಆ ಗುರಿಗಾಗಿ ಈ ದಾರಿಯನ್ನು ಬದಲಿಸಲೇ ಇಲ್ಲ. ಊರಜನರು ಇವನ ಬಗೆಗೆ ಮಾತನಾಡಿಕೊಳ್ಳುವುದು, ಇವನನ್ನು ತುಚ್ಛವಾಗಿ ಕಾಣುವುದು, ಹೆಂಡತಿಯು ಬಿಟ್ಟು ಹೋಗುವುದೂ ಅವನಿಗೆ ಅವಮಾನವಾಗುವಿದಿಲ್ಲ. ಆದರೆ ತಾನು ನೆಚ್ಚಿದ ಹಾದಿ, ಗುರಿಯೆಡೆಗೆ ಕೊಂಡೊಯ್ಯದಿದ್ದಾಗ ಮಾತ್ರ ಇವನ ಪರಿತಾಪ. ಮೌಲ್ಯಪ್ರಜ್ಞೆ ಎಂದರೆ ಅದರ ಬಣ್ಣವೇನು ಎಂದು ಕೇಳುವ, ಹೆಣ್ಣಿನ ಭೋಗದಲ್ಲಿಯೇ ಅಹಂಕಾರವನ್ನು ಮೆರೆಸುವ ಮತ್ತು ತಾನೊಬ್ಬನೇ ಕೆಚ್ಚೆದೆಯ ಗಂಡು ಎಂದು ಬೀಗುವ ವ್ಯಕ್ತಿಯ ಅಹಂಕಾರದಿಂದಾಗುವ ವೈಪರೀತ್ಯದ ಪರಾಕಾಷ್ಠೆಯು, ಪಾತ್ರಚಿತ್ರಣ, ಅದರ ಸುತ್ತಲಿನ ಕಥೆಯ ಸೂಕ್ಷ್ಮವಾದ ಚೌಕಟ್ಟು ಮತ್ತು ಮಾತುಗಳ ಮೂಲಕ ವಿಸ್ಮಯಕಾರಿ ಮತ್ತು ಅಷ್ಟೇ ಪರಿಣಾಮಕಾರಿಯಾಗಿ ಮೂಡಿಬಂದಿವೆ.
೨. “ಅನ್ನದಾನ ಮಾಡಿದ ಮನೆತನದ ಹಿರೀಮಗ, ಈಗ ಯಜಮಾನ ಅನ್ನುವ ಅಹಂಕಾರದಿಂದ ತಾನು ಮಗನ ಅನ್ನದ ದುಡ್ಡನ್ನು ವಾಪಾಸು ಕೊಡೋಕೆ ಹೋಗುತ್ತಿಲ್ಲ ಎಂಬ ಮಾತನ್ನು ಮತ್ತೆ ಬಿಡಿಸಿ ನೋಡಿಕೊಂಡ. ದುಡ್ಡುಕೊಡಬೇಕೆಂಬ ತೀರ್ಮಾನ ತನ್ನ ಮನಸ್ಸಿನಲ್ಲಿ ಹುಟ್ಟಿದ ದಿನದಿಂದ ಇದುವರೆಗೆ ಎಂದಾದರೂ ತನ್ನಲ್ಲಿ ಅಹಂಕಾರದ ತುಲನೆ ಹುಟ್ಟಿದೆಯೇ? ಎಂದು ಜ್ಞಾಪಿಸಿಕೊಂಡ. ಇಲ್ಲವೆನಿಸಿತು. ಆದರೆ ಅಹಂಕಾರವೆನ್ನುವುದು ಯಾವ ಅವ್ಯಕ್ತರೂಪದಲ್ಲಿ ಕೆಲಸಮಾಡುತ್ತದೆಂಬುದನ್ನು ಅರ್ಥಮಾಡಿಕೊಳ್ಳುವುದೇ ಬಹುಕಷ್ಟದ ಕೆಲಸ ಎಂದು ವೇದಾಂತದ ಪುಸ್ತಕದಲ್ಲಿ ಓದಿದ ನೆನಪಾಯಿತು. ನೋವು ಕೂಡ ಅಹಂಭಾವದ ಆಧಾರವಿಲ್ಲದೆ ಹುಟ್ಟುವುದಿಲ್ಲ. ತಿರಸ್ಕಾರವಂತೂ ಸ್ವಯಂ ಔನ್ನತ್ಯಭಾವವಿಲ್ಲದೆ ಬರುವುದಿಲ್ಲ. ನಾಗಪ್ಪನವರ ವಿಷಯದಲ್ಲಿ ನನಗೆ ತಿರಸ್ಕಾರವಿದೆ ಎಂಬುದು ತನಗೇ ಗೊತ್ತಿದೆ. ಆದ್ದರಿಂದ ತಾನೀಗ ಹೋಗಿ ಅವರಿಗೆ ದುಡ್ಡುಕೊಡುವುದು ಸರಿಯೇ? ಎಂದು ಮತ್ತೆ ಕೇಳಿಕೊಂಡ”.
- ರಾಮಕೃಷ್ಣ, ತನ್ನ ಮಗನು ನಾಗಪ್ಪನ (ರಾಮಕೃಷ್ಣನ ಮಾವ) ಮನೆಯಲ್ಲಿದ್ದು ಓದಿದ ದಿನಗಳ ಖರ್ಚನ್ನು ನಾಗಪ್ಪ ನವರು ಬೇರೆಯವರಿಂದ ಇವನಿಗೆ ತಿಳಿಸಿದ್ದರಿಂದ, - ನಾಗಪ್ಪನವರಿಗೆ ಸಂದಾಯವಾಗಬೇಕಾಗಿದ್ದ ಹಣವನ್ನು ಕೊಡಲು ಹೊರಟಾಗ, ಹೆಂಡತಿಯ ವಿರೋಧವೊದಗಿದ ಹಿನ್ನೆಲೆಯಲ್ಲಿ, - ತನ್ನನ್ನು ತಾನು ವಿಷ್ಲೇಶಿಸಿಕೊಳ್ಳುವುದು ಹೀಗೆ. ವೇದಾಂತದ ಚಿಂತನೆಯಲ್ಲಿ ಒಲವಿರುವ , ಸಾಕಷ್ಟು ಗಂಭೀರಪಾತ್ರವಾದ ರಾಮಕೃಷ್ಣಯ್ಯ. ಇಂತಹ ವ್ಯಕ್ತಿಯ ಅಂತರಾಳವನ್ನು ವಿವರಿಸುವ ಪ್ರಯತ್ನ ಈ ಕಾದಂಬರಿಯಲ್ಲಿ ವಿಶೇಷವಾಗಿ ಮೂಡಿದೆ. ವಿಶೇಷವೇಕೆಂದರೆ, ಸಾಮಾನ್ಯವಾಗಿ ಹಲವು ಕೆಟ್ಟಪಾತ್ರಗಳ ನಡುವೆ ಬರುವ ಒಳ್ಳೆಯ ಪಾತ್ರಗಳು ತೀರ ಆದರ್ಶವನ್ನು ಬಿಂಬಿಸುವ ಗೊಂಬೆಗಳಾಗಿಬಿಡುವ ಅಪಾಯವೇ ಹೆಚ್ಚು. ಆದರೆ, ಮನಸ್ಸಾಕ್ಷಿಯ ಇರುವಿಕೆಯ ವಿವಿಧ ರೂಪಗಳನ್ನು ಶೋಧಿಸುವ ಈ ಕಾದಂಬರಿ, ಇಂತಹ ಒಬ್ಬ ವೇದಾಂತದ ಹಿನ್ನೆಲೆಯುಳ್ಳ ಪಾತ್ರದಲ್ಲೂ ಮನಸ್ಸಾಕ್ಷಿಯ ಗೊಂದಲವನ್ನು ಚಿತ್ರಿಸಿರುವುದು, ಸಾಕ್ಷಿಯ ವಿಷಯವನ್ನು ಎಲ್ಲ ಆಯಾಮಗಳಿಂದಲೂ ಶೋಧಿಸುವ ಪ್ರಯತ್ನಮಾಡಿದೆ ಮತ್ತು ಅನ್ಯ ಪಾತ್ರಗಳಿಗೆ ಹೋಲಿಸಿದರೆ ಈ ಪಾತ್ರವು ಕಾದಂಬರಿಯು ಬಿಂಬಿಸಲು ಹೊರಟಿರುವ ತತ್ತ್ವವನ್ನು ಹೆಚ್ಚು ನೇರವಾಗಿ ಪ್ರತಿನಿಧಿಸುವುದರಿಂದ, ಪಾತ್ರಚಿತ್ರಣವು ಮತ್ತಷ್ಟು ಗಟ್ಟಿಯಾಗಬಹುದಿತ್ತೇನೋ ಎಂದೆನಿಸುತ್ತದೆ.
೩. “ನಾನು ಯಾಕೆ ಪ್ರಾಣ ಕಳ್ಕಳಾಕೆ ಹೊರಟಿದೀನಿ? ಚಿಕಿತ್ಸೆಗೆ ದುಡ್ಡು ಹೊಂದಿಸುವುದಕ್ಕೆ ಸಾಧ್ಯವಾಗಲಿಲ್ಲ ಅಂತಲೇ? ಮನಸ್ಸು ಮಾಡಿದರೆ ದುಡ್ಡು ಹೊಂದಿಸೋದು ಕಷ್ಟವಿಲ್ಲ. ಸುಳ್ಳು ಹೇಳೋ ಅಗತ್ಯವಿಲ್ಲ. ನಾನು ಮಾಡಿಕೊಂಡ ಬ್ರಹ್ಮಚರ್ಯ ನಷ್ಟಕ್ಕೆ ಶಿಕ್ಷೆ ಅಂತ ಆತ್ಮಹತ್ಯೆಯಾ? ಮದುವೆ ಮಾಡಿಕೊಂಡು ಸಮಾಜದೆದುರು ಉದ್ಘೋಷಿಸಿ ಶರೀರ ಸಂಬಂಧ ಮಾಡಿದರೆ ನ್ಯಾಯ; ಇಲ್ಲದಿದ್ದರೆ ಅನ್ಯಾಯ ಅಂತ ಇದರ ಅರ್ಥ. ಇದಕ್ಕೆ ಆತ್ಮಹತ್ಯೆಯಂಥ ಅಂತಿಮ ಶಿಕ್ಷೆಯೇ?”
“ನನ್ನ ಸಾವಿಗೆ ಯಾರೂ ಜವಾಬ್ದಾರರಲ್ಲ, ಇದು ಸ್ವಯಿಚ್ಛೆಯಿಂದ ಮಾಡಿಕೊಂಡದ್ದು, ಎಂಬ ಒಂದು ಸಾಲು, ಆತ್ಮಹತ್ಯೆ ಮಾಡಿಕೊಳ್ಳುವವರೆಲ್ಲಾ ಸಾದಾರಣವಾಗಿ ಬರೆಯುವ ವಾಕ್ಯ. ನಾನು ಬೇರೆ, ಅಂದರೆ ನನ್ನ ಸಾವಿಗೆ ನಿಜವಾದ ಕಾರಣವನ್ನು ಬರೆಯಬೇಕು ಎನ್ನಿಸಿತು. ಮನುಷ್ಯ ಸಾಯುವಾಗ, ತನ್ನ ಸಾವನ್ನು ತಾನೇ ನಿರ್ಧರಿಸಿ ಕಾರ್ಯಗತಗೊಳಿಸಿಕೊಳ್ಳುವಾಗಲಾದರೂ ತಾನು ಏಕೆ ಸಾವನ್ನು ನಿಶ್ಚಯಿಸಿದೆ ಎಂಬುದಕ್ಕಾದರೂ ನಿಜ ಹೇಳಬೇಕು.... ಯಾರಿಗೂ ತೊಂದರೆಯಾಗದ ನಿಜವನ್ನಾದರೂ ಹೇಳಬೇಕು...”
“ಜನಕ್ಕೆ ಗೊತ್ತಾಗುತ್ತದೆ ಅನ್ನುವ ಭಯದಿಂದ ನಾನು ಈ ಹಗ್ಗ ತಗಂಡು ಈ ಕೊಂಬೆ ಹತ್ತಿ ಬರಲಿಲ್ಲ. ಆ ಭಯವಿದ್ದರೆ ನಾಲ್ಕುಜನ ಹಳೆಯ ಸ್ನೇಹಿತರ ಹತ್ತಿರ ಸಾಲಕೇಳಿ ಚಿಕಿತ್ಸೆ ಮಾಡಿಸಿಕೊಳ್ಳುತ್ತಿದ್ದೆ”
- ಹೀಗೆ ತನ್ನ ತಪ್ಪನ್ನು ವಿಶ್ಲೇಷಿಸುವ ಸತ್ಯಪ್ಪ ಆತ್ಮಹತ್ಯೆಯ ಕೊನೆಯ ಬಿಂದುವಿನವರೆಗೂ ಹೋಗಿ ತನ್ನ ನಿರ್ಧಾರವನ್ನು ಬದಲಿಸುವುದು, ತನ್ನ ಹಾದರಕ್ಕೆ ಪರಿತಪಿಸುವುದು, ಅದು ಅನ್ಯರಿಗೆ ತಿಳಿಯಬಾರದೆಂದು ಒದ್ದಾಡುವುದು ಮತ್ತು ಅದಕ್ಕಾಗಿ ಸುಳ್ಳುಹೇಳುವುದನ್ನು ಸಮರ್ಥಿಸಲಾಗದೆ ದ್ವಂದ್ವದಲ್ಲಿ ಸಿಲುಕುವುದು. ಕಡೆಗೂ ತನ್ನ ಪ್ರತಿಷ್ಟೆಗಿಂತ, ಅನ್ಯರಿಗೆ ತನ್ನ ಬಗೆಗಿರುವ ಅಭಿಪ್ರಾಯಕ್ಕಿಂತ ಜೀವನವನ್ನೇ ಆಯ್ದುಕೊಳ್ಳುವುದು. ಇಲ್ಲಿ ಸತ್ಯಪ್ಪ ತನ್ನ ಅಹಂಕಾರವನ್ನು ಮೆಟ್ಟಿ ಅದರಿಂದುಂಟಾಗುವ ತಾಪವನ್ನು ಮಗನಮೇಲೆ ತೀರಿಸಿ, ಕಡೆಗೂ ಬದುಕುವ ದಾರಿ ಹಿಡಿಯುತ್ತಾನೆ. ಇವೆಲ್ಲವೂ, ಹೆಚ್ಚು ವಿಚಾರವಂತನಲ್ಲದ ಆದರೆ, ಕ್ರಿಯಾಶೀಲನಾದವನ ಮತ್ತು ಉದಾರತೆಯುಳ್ಳವನ ಮನಸ್ಸಾಕ್ಷಿ ಹೇಗೆ ಕೆಲಸ ಮಾಡುತ್ತದೆ, ಅನ್ಯರನ್ನಲ್ಲದೇ ತನ್ನನ್ನೂ ಕ್ಷಮಿಸುತ್ತದೆ ಮತ್ತು ಕಡೆಗೆ ಸಾವಿಗಿಂತ, ಸಮಾಜದಲ್ಲಿನ ತನ್ನ ಸ್ಥಾನಮಾನಕ್ಕಿಂತ ಜೀವನವನ್ನೇ ಆಯ್ಕೆ ಮಾಡಿಕೊಳ್ಳುತ್ತದೆ ಎಂಬುದನ್ನು ಇಂತಹ ಒಂದು ಅದ್ಭುತಪಾತ್ರದಿಂದ ಭೈರಪ್ಪನವರು ತೋರಿಸಿದ್ದಾರೆ.
೪. “ಹಾಸನದಿಂದ ಬಂದ ಮರುದಿನ ತೋಟಕ್ಕೆ ಹೋಗುವಾಗ ಬೀದಿಯವರೆಲ್ಲ ದಾರಿಯ ಎರಡುಕಡೆಗೂ ಸಾಲುಗಟ್ಟಿ ನಿಂತು ಸುಳ್ಳ ಪರಮೇಶ್ವರಯ್ಯ, ಸುಳ್ಳು ಸಾಕ್ಷಿ ಪರಮೇಶ್ವರಯ್ಯ ಎಂದುಕೊಳ್ಳುತ್ತಿರುವಂತೆ ನನ್ನ ಕಿವಿಗೆ ಕೇಳುತ್ತಿತ್ತು. ನನ್ನ ಮನಸ್ಸಿನ ಭ್ರಮೆ ಎಂದುಕೊಂಡು ದೃಷ್ಟಿಯನ್ನು ದಾರಿಯ ಕಡೆಗೆ ತಿರುಗಿಸುತ್ತಿದ್ದೆ. ನಿಯಂತೃ, ಈ ಸಂದರ್ಭದಲ್ಲಿ ನನ್ನನ್ನು ನಾನು ಒಳತೆರೆದು, ನಾನು ಅಂಜಿರುವುದು ಪರಮೇಶ್ವರಯ್ಯ ಸುಳ್ಳುಹೇಳಿದ ಎಂಬ ಜನಾಭಿಪ್ರಾಯಕ್ಕೋ ಅಥವಾ ನನ್ನ ಅಂತಸ್ಸಾಕ್ಷ್ಹಿಗೋ ಎಂಬುದನ್ನು ಪರೀಕ್ಷಿಸಿಕೊಳ್ಳುತ್ತಿದ್ದೆ. ಜನಾಭಿಪ್ರಾಯದ ಅಂಜಿಕೆ ನನಗೆ ತುಸುವೂ ಇರಲಿಲ್ಲವೆಂದಲ್ಲ. ಮಗಳಿಗೋಸ್ಕರವಾಗಿ ಪಾಪ! ನಾಲಿಗೆಯಲ್ಲಿ ಸುಳ್ಳನ್ನೂ ಹೇಳಿದರು ಎಂದು ನನ್ನ ಬಗೆಗೆ ಅನುಕಂಪ ಪಡುವವರಿಗೇನೂ ಕಡಿಮೆ ಇರಲಿಲ್ಲ”
“ಆದರೆ ಜನರ ಅನುಮೋದನೆ ವಿಮೋದನೆಗಳ ಮೇಲೆ ನಮ್ಮ ಕೆಲಸಗಳ ಸರಿ ತಪ್ಪುಗಳನ್ನು ನಿರ್ಧರಿಸಲು ಸಾಧ್ಯವೇ? ನನಗೋ ಬೇಕಿದ್ದುದು ಬೇರಾರಿಂದಲೂ ಸಿಕ್ಕದ, ಬೇರಾರಿಗೂ ಒಪ್ಪಿಸಲಾಗದ, ನನ್ನೊಳಗಿನ ಬೆಳಕನ್ನು ಮಾತ್ರ ಒಪ್ಪಿಸಬೇಕಾದ ಸಮರ್ಥನೆ; ರಕ್ತದ ಮಟ್ಟದ ಪ್ರೇರಣೆಯಲ್ಲ. ಆದರೆ ಈಗ ನ್ಯಾಯಾಲಯಕ್ಕೆ ಹೋಗಿ ನಾನಾಗಿಯೇ ಈ ಸಮರ್ಥನೆಯನ್ನು ನಾಶಮಾಡಿಕೊಂಡುಬಂದಿದ್ದೇನೆ. ಇನ್ನು ಬದುಕಿರುವ ಅಗತ್ಯವೇನು? ಜೀವನವನ್ನು ಅಂತ್ಯಗೊಳಿಸಿಕೊಳ್ಳುವುದಕ್ಕಿಂತ ಹೆಚ್ಚಿನ ಔಚಿತ್ಯ ಕಾಣದಾಯಿತು”
- ಸತ್ಯಪ್ಪ ಒಬ್ಬ ಗಾಂಧಿಯ ಅನುಯಾಯಿ. ಸಾಮಾಜ ಸೇವೆಯ/ಉದ್ಧಾರದ ಕನಸನ್ನು ಹೊತ್ತ ಕ್ರಿಯಾಶೀಲ . ಆದರೆ ಪರಮೇಶ್ವರಯ್ಯ ತನ್ನ ವೈಯಕ್ತಿಕ ನೆಲೆಯಲ್ಲೇ, ತನ್ನ ಜೀವನದ ಅರ್ಥವನ್ನು ಕಂಡುಕೊಂಡವನು. ಅಂತರ್ಮುಖಿ. ಸತ್ಯಪ್ಪನ ಹೆಂಡತಿಯನ್ನು ವಿಧಿ ಕಸಿದುಕೊಂಡದ್ದು ಒಂದು ಬೇಸರವಾದರೆ, ಪರಮೇಶ್ವರಯ್ಯ ತನ್ನ ಹೆಂಡತಿಯ ಹಾದರವನ್ನೂ ಸಾವನ್ನೂ ಕಣ್ಣಾರೆ ಕಂಡು ಅಘಾತಕ್ಕೊಳಗಾದವ. ಇಂತಹ ಹಿನ್ನಲೆಯ ವ್ಯಕ್ತಿಯ ಮನದ ತಲ್ಲಣ ಅದರ ಆದರ್ಶ, ಅದರೊಂದಿಗೆ ತನ್ನ ನಡತೆಯ ತುಲನೆ ಮತ್ತು ಮೌಲ್ಯಮಾಪನ ವಿಚಿತ್ರವೆನಿಸುವಂಥದ್ದು. ಇಲ್ಲಿ ಪರಮೇಶ್ವರಯ್ಯನು ಯಮನಿಗೆ ಹೇಳುತ್ತಿರುವುದಾದರೂ ಚಿತ್ರಗುಪ್ತನ ಸಮ್ಮುಖದಲ್ಲಿ, ಭೂಲೋಕದಲ್ಲೇ ಸತ್ಯವಂತನೆನಿಸಿಕೊಂಡವ ಹೇಳುತ್ತಿರುವುದರಿಂದ, ಇದು ಆತ್ಮಸಾಕ್ಷಿಯೇ ಅಭಿವ್ಯಕ್ತಿಸಿದಂತೆ. ಸತ್ಯಪ್ಪನು ಲೋಕವು ತಪ್ಪೆನ್ನುವ ದೋಷವನ್ನೆಸಗಿ ಆತ್ಮಹತ್ಯೆಗೆ ಮುಂದಾದರೆ, ಪರಮೇಶ್ವರಯ್ಯನು ಲೋಕವು ಸಹಮತವಿತ್ತರೂ(ಮನ್ನಿಸಿದರೂ), ತಾನು ತನ ಆತ್ಮಸಾಕ್ಷಿಯೊಪ್ಪದ ತಪ್ಪನ್ನು ಮಾಡಿದ ಕಾರಣ ಆತ್ಮಹತ್ಯೆ ಮಾಡಿಕೊಳ್ಳುವನು. ಅವನ ಸಾಕ್ಷಿಗೆ, ಅವನನ್ನು ಕ್ಷಮಿಸಲು ಅಡ್ಡಿಬಂದದ್ದಾದರೂ ಯಾವುದು? ಅಥವಾ ಹೆಂಡತಿಯ ತಪ್ಪನ್ನು ಕ್ಷಮಿಸದವ, ತನ್ನ ತಪ್ಪನ್ನು ಅದರಂತೆಯೇ ಭಾವಿಸಿದನೇ? ಅನ್ಯರು ಸಹಿಸಿದರೂ ತಾನೇ ಸಹಿಸಲಾಗದ ತಪ್ಪಿಗೆ ಶಿಕ್ಷೆ ಆತ್ಮಹತ್ಯೆಯೊಂದೆಯೇ? ತನ್ನನ್ನು ತಾನು ಕ್ಷಮಿಸಿಕೊಳ್ಳುವುದು ಎಂದರೇನು? ಅಥವಾ ಶಿಕ್ಷಿಸಿಕೊಳ್ಳುವುದಾದರೂ ಹೇಗೆ? ಇದು ಸಾಕ್ಷಿಯು ತೆರೆದಿಡುವ ಅಹಂಕಾರದ ಅತಿ ಸಂದಿಗ್ಧವಾದ ಮತ್ತೊಂದು ಆಯಾಮ.
ಈ ಮೇಲಿನ ನಾಲ್ಕು ಪಾತ್ರ-ಸನ್ನಿವೇಶಗಳು ಈ ವಿಷಯಕ್ಕೆ ಸಂಬಂಧಿಸಿದಂತೆ, ಪ್ರಮುಖವಾದವು. ಕಥೆಯ ಗರ್ಭದಲ್ಲಿ ಇವುಗಳ ಸ್ವಗತವನ್ನು, ತಮ್ಮೊಳಗಿನ ಶೋಧನೆಯನ್ನು ಮತ್ತು ಮೌಲ್ಯ ಜಿಜ್ಞಾಸೆಯನ್ನು ನಾವು ನೋಡಿದಾಗ "ಸಾಕ್ಷಿ"ಯ ಉದ್ದೇಶ ಸ್ಪಷ್ಟವಾಗುತ್ತದೆ. ಮೇಲುನೋಟಕ್ಕೆ ಇದೊಂದು ಕೇವಲ ವಿಪರೀತ ವ್ಯಕ್ತಿತ್ವಗಳ ಕಥೆಯೆಂದೆನಿಸಿದರೆ, ಮೇಲೆ ಉದಾಹರಿಸಿದ ಸನ್ನಿವೇಶಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಲೇಖಕರು ಈ ರೀತಿಯ ವಿಲಕ್ಷಣಪಾತ್ರಗಳು ಮತ್ತು ವಿಪರೀತಸನ್ನಿವೇಶಗಳನ್ನು ಏಕೆ ಆಯ್ದುಕೊಂಡರು ಎಂಬುದು ತಿಳಿಯುತ್ತದಷ್ಟೆ. ಅಹಂಕಾರದ ಅಸಂಖ್ಯ ಸ್ವರೂಪಗಳನ್ನೂ ಕಾಲಕಾಲಕ್ಕೆ ಬದಲಾಗುವ ಅದರ ಗುಣವನ್ನೂ ಚಿತ್ರಿಸುವುದು ಅಸಾಧ್ಯ. ಆದರೆ, ಅದರ ವಿಸ್ತಾರದ ಪರಿಣಾಮವನ್ನು ಕೆಲವು ಪಾತ್ರಗಳ ಚಿತ್ರಣದ ಮೂಲಕ ಮೂಡಿಸಲು ಪ್ರಯತ್ನಿಸಿರುವುದೇ ಸಾಕ್ಷಿಯ ವೈಶಿಷ್ಟ್ಯ ಮತ್ತು ಸೊಬಗಾಗಿದೆ. .
ಉಳಿದ ಮುಖ್ಯಪಾತ್ರಗಳಾದ ಸಾವಿತ್ರಿ ಮತ್ತು ನಾಗಪ್ಪನವರ ಮನಸ್ಸಿನ ಒಳಗಿನ ವ್ಯವಹಾರವು ಕಥೆಯಿಂದ, ಅನ್ಯಪಾತ್ರಗಳ ಜೊತೆಗಿನ ಸಂಭಾಷಣೆಯಿಂದ ಮತ್ತು ಲೇಖಕರ ನಿರ್ದೇಶನದಿಂದ ತಿಳಿಯುತ್ತದೆ. ಸುಕನ್ಯ, ಗಣೇಶ, ಲಕ್ಕು ಮತ್ತು ಸರೋಜಾಕ್ಷಿಯರದ್ದು ಕಿರುಪಾತ್ರಗಳಾದರೂ ಅವು ಬೀರುವ ಪರಿಣಾಮ ಮತ್ತು ಕಥೆಗೆ ಅವುಗಳು ನೀಡುವ ಪುಷ್ಟಿಯ ಕಾರಣ ಅವಕ್ಕೆ ಹೆಚ್ಚು ಪ್ರಾಧಾನ್ಯವು ಬಂದಿದೆಯೆನ್ನಬೇಕು. ಪ್ರತಿ ಪಾತ್ರಗಳ ಹಿನ್ನಲೆ ಮತ್ತು ಕಾದಂಬರಿಯ ಉದ್ದೇಶಕ್ಕೆ ಅವುಗಳ ಚಿತ್ರಣದ ಔಚಿತ್ಯವನ್ನು ಮುಂದೆ ನೋಡೋಣ.
ಪಾತ್ರ ಮತ್ತು ಕಥೆಯ ಬೆಳೆವಣಿಗೆ:
ಕಾದಂಬರಿಗಳಲ್ಲಿ ಪಾತ್ರಗಳು ಹುಟ್ಟುವುದು, ಕಥೆಯು ಬೆಳೆದಂತೆಯೇ ತಮ್ಮದೊಂದು ವ್ಯಕ್ತಿತ್ವವನ್ನು ಪಡೆದುಕೊಳ್ಳುವುದು ಒಂದು ಸ್ವಾಭಾವಿಕ ಮತ್ತು ಅರ್ಥಪೂರ್ಣವಾದ ಪ್ರಕ್ರಿಯೆ. ಆದರೆ, ಈ ರೀತಿಯ ಬೆಳವಣಿಗೆಯನ್ನು ಎಲ್ಲ ಪಾತ್ರಗಳಿಗೂ ದೊರೆಕಿಸುವುದು ಹಲವು ಕಾರಣಗಳಿಂದ ಸಾಧ್ಯವಾಗುವುದಿಲ್ಲ. ಪಾತ್ರದ ಪ್ರಾಮುಖ್ಯದ ಆಧಾರದ ಮೇಲೆ, ಕಥೆಯ ಗಾತ್ರದ ದೃಷ್ಟಿಯಿಂದ ಕೆಲವು ಮುಖ್ಯವಲ್ಲದ ಪಾತ್ರಗಳ ಸಂಕ್ಷಿಪ್ತ ಪರಿಚಯವನ್ನು ಕರ್ತೃವೇ ನೇರವಾಗಿ ತಿಳಿಸಬಹುದು. ಆದರೆ ಹೆಚ್ಚಿನ ಪಕ್ಷದಲ್ಲಿ, ನಾವು ಪಾತ್ರಗಳ ಸ್ವಾಭಾವಿಕ ಬೆಳವಣಿಗೆಯ ಜೊತೆಗೆ ಕರ್ತೃವಿನಿಂದಾಗುವ ಕಿರುಪರಿಚಯವನ್ನೂ ಕಾಣುವುದರ ಮೂಲಕ ಅದೊಂದು ಬಗೆಯ ಮಿಶ್ರವಾದ ಬೆಳವಣಿಗೆಯನ್ನು ಗಮನಿಸಬಹುದು. ಹಾಗಾಗಿ, ಕೊನೆಯ ಎರಡು ಬಗೆಯ ಪಾತ್ರಗಳ ಸ್ವರೂಪ ಮತ್ತು ವಿವಿಧ ಸಂದರ್ಭಗಳಲ್ಲಿ ಅವುಗಳ ನಡತೆಯ ಔಚಿತ್ಯವನ್ನು/ಬದ್ಧತೆಯನ್ನು ತಿಳಿಯಲು, ಕಾದಂಬರಿಯಲ್ಲಿ ಅವುಬೆಳೆದು ಬಂದಂತಹ ಹಾದಿಯನ್ನು ಅನುಸರಿಸಲು ಸಾಧ್ಯವಿರುವುದಿಲ್ಲ(ಅಷ್ಟು ದೀರ್ಘವಾದ ಪೀಠಿಕೆಯೇ ಅವುಗಳಿಗೆ ಕಥೆಯಲ್ಲಿ ಸಿಗದೇ ಇರಬಹುದು) ಅಂಥ ಸಂದರ್ಭದಲ್ಲಿ ಲೋಕಾನುಭವವನ್ನು, ಸಾಮಾನ್ಯಜ್ಞಾನವನ್ನೂ ಮತ್ತು ಕರ್ತೃವಿನಿಂದಾದ ಪರಿಚಯವನ್ನೇ ಬಳಸಿ ಪಾತ್ರಗಳ ಚಿತ್ರಣದ ಔಚಿತ್ಯವನ್ನು ಅಳೆಯಬೇಕಾಗುತ್ತದಷ್ಟೆ. ವಿವರದಲ್ಲಿ ಪಾತ್ರಗಳ ಗುಣ, ಮಾತು ಮತ್ತು ನಡತೆಯ ಔಚಿತ್ಯವನ್ನು ನೋಡುವುದಾದರೆ, ಮೇಲ್ನೋಟದಲ್ಲಿ ಪಾತ್ರದ ಆಯ್ಕೆ, ಕಥೆಯ ಗುರಿಗೆ ಅದು ಒದಗುವ ಪರಿ ಮತ್ತು ಇತರ ಪಾತ್ರಗಳ ನಡುವಿನ ಅದರ ಸಂಬಂಧದ ಔಚಿತ್ಯವನ್ನು ಗಮನಿಸಬೇಕಾಗುತ್ತದೆ. ತನ್ಮೂಲಕ, ಪ್ರತಿಭೆಯು, ಪಾತ್ರವನ್ನು ಸೃಷ್ಟಿಸುವಲ್ಲಿ ಎಷ್ಟು ಸೂಕ್ಷ್ಮವಾಗಿ ಮತ್ತು ತೀಕ್ಷ್ಣವಾಗಿರುತ್ತದೆಂಬುದನ್ನೂ ನೋಡಬಹುದು. ಈ ಹಿನ್ನೆಲೆಯಲ್ಲಿ, ಕೆಲವು ಪ್ರಮುಖ ಪಾತ್ರಗಳನ್ನು ನೋಡೋಣ.
ರಾಮಕೃಷ್ಣ
ಲೋಕದಲ್ಲಿ ಕೆಲವು ತೆರನಾದ ವ್ಯಕ್ತಿಗಳಿರುತ್ತಾರೆ. ತಮ್ಮಪಾಡಿಗೆ ತಾವಿರುವಂಥವರು, ಮಿತ ಭಾಷಿಗಳು, ಪರೋಪಕಾರಿಗಳು. ಅವರನ್ನು ನೋಡಿದರೆ, ಎಂದೂ ಅವರಿಗೆ ಸಿಟ್ಟೇ ಬರುವುದಿಲ್ಲ, ಅಹಂಕಾರವೇ ಇಲ್ಲ ಎಂದು ಅನ್ನಿಸಿಬಿಡುತ್ತದೆ. ಆದರೆ ಅದು ಸತ್ಯವಲ್ಲ. ಅವರ ಅಹಂಕಾರದ ಮೂಲಕ್ಕೆ ಪೆಟ್ಟು ಬೀಳುವ ಸಂದರ್ಭಗಳು ವಿರಳ. ಹಾಗಾಗಿ ಕ್ಷುಲ್ಲಕಕಾರಣಗಳಿಗೆ ಅವರು ತಮ್ಮ ಅಹಂಕಾರವನ್ನು ಅಭಿವ್ಯಕ್ತಿಸುವುದಿಲ್ಲ. ವಿರಳವಾಗಿ ಅವರ ಅಹಂಕಾರಕ್ಕೆ ಪೆಟ್ಟು ಬಿದ್ದಾಗ ನೋಡಿದರೆ ಅದರ ನಿತ್ಯತೆಯ ಅರಿವಾಗುತ್ತದೆ. ಇಂತಹ ಒಂದು ಪಾತ್ರವೇ ರಾಮಕೃಷ್ಣ.
ಸಾವಿತ್ರಿಯು ಮಂಜಯ್ಯನನ್ನು ಮದುವೆಯಾಗುವುದಾಗಿ ಹಟಹಿಡಿದದ್ದಕ್ಕೆ ಅವಳನ್ನು ಹೊಡೆಯುವಾಗ(ಮಂಜಯ್ಯನ ನೀಚ ಗುಣಗಳನ್ನು ನೆನೆದು ಮನೆಯ ಘನತೆಗೊದಗುವ ದುಸ್ಸ್ಥಿತಿಯನ್ನು ಸಹಿಸಲಾರದೆ ) , ಮಂಜಯ್ಯನ ಪರವಾಗಿ ಅವನ ಅಪ್ಪನನ್ನು ಸುಳ್ಳು ಸಾಕ್ಷಿ ಹೇಳಲು ಸೂಚ್ಯವಾಗಿ ಹೇಳುವಾಗ(ತಂಗಿಯ ಬಗೆಗೆ ಮಮಕಾರ) , ಮಗನು ತನ್ನ ಮಾವನ ಮನೆಯಲ್ಲಿ ಇದ್ದಿದ್ದರ ಖರ್ಚನ್ನು ಮಾವನಿಗೆ ಕೊಡುವಾಗ(ಸ್ವಾಭಿಮಾನ ಮತ್ತು ಧರ್ಮಸೂಕ್ಷ್ಮ) , ಮಾವ ಸತ್ತಾಗ ಅವನ ಹಣವನ್ನು ಸುಡುವಾಗ, ಸುಕನ್ಯಳ ಕೆನ್ನೆಗೆ ಹೊಡೆಯುವಾಗ(ಪರರ - ಹೆಂಡತಿ, ಮಗನ - ದುರಾಶೆಯ ಬಗೆಗಿನ ಅಸಮಾಧಾನ ) ಇಲ್ಲೆಲ್ಲ ರಾಮಕೃಷ್ಣನ ಅಹಂಕಾರ ಮತ್ತು ಸಾಕ್ಷಿಗಳು ಅವನನ್ನು ಪ್ರಭಾವಿಸುತ್ತಲೇ ಇರುತ್ತವೆ.
ಪರಮೇಶ್ವರಯ್ಯನಂತಹ ಸತ್ಯಸಂಧನ, ಅನ್ನದಾನಿಯ ಮಗನಾಗಿ, ವೇದಾಂತವಿಚಾರಗಳಲ್ಲೂ ಆಸಕ್ತಿಯುಳ್ಳವನಾಗಿ, ಹೊಳೆನರಸೀಪುರದ ಸ್ವಾಮಿಗಳ ವೇದಾಂತಕೃತಿಗಳಲ್ಲಿ ಪ್ರವೇಶವಿದ್ದವನಿಗೂ ಅಹಂಕಾರ, ಸಿಟ್ಟು ಪ್ರಭಾವಿಸದೆ ಬಿಡುವುದಿಲ್ಲ ಮತ್ತು ಅವನ ಸಾಕ್ಷಿ ಅವನನ್ನು ಸದಾ ಧರ್ಮಸೂಕ್ಷ್ಮಗಳಿಂದ ಅವನನ್ನು ಅಳೆಯದೆ ಬಿಡುವುದಿಲ್ಲ ಎಂಬುದನ್ನು ತೋರಿಸುವಲ್ಲಿ ಈ ಪಾತ್ರ ಯಶಸ್ವಿಯಾಗಿದೆ. ಈ ರೀತಿಯ ಪಾತ್ರದ ಗಾಂಭೀರ್ಯಕ್ಕೆ, ವ್ಯಕ್ತಿತ್ವದ ತೂಕ ಮತ್ತು ಆಳಕ್ಕೆ ಹಾಗೂ ವೇದಾಂತದ ತಿಳುವಳಿಕೆಯು ಕೇವಲ ಪುಸ್ತಕದ ಓದಿನ ತಳಹದಿಯೊಂದನ್ನೇ ಆಶ್ರಯಿಸಿದಂತೆ ಚಿತ್ರಿಸದೆ ಮತ್ತಷ್ಟು ಭದ್ರವಾದ ಬುನಾದಿಯನ್ನು ಹಾಕಿದ್ದಿದ್ದರೆ ಪಾತ್ರದ ಬಡತನ ಕಡಿಮೆಯಾಗುತ್ತಿತ್ತು ಮತ್ತು ಚಿತ್ರಣದ ಔಚಿತ್ಯ ಹೆಚ್ಚುತ್ತಿತ್ತು ಎಂದೆನ್ನಿಸುತ್ತದೆ.
ಹೇಗೆ ಪರಮೇಶ್ವರಯ್ಯ ಸತ್ಯಕಾಮಿಯಾಗಿ, ಸತ್ಯವನ್ನು ಜೀವನಕ್ಕಿಂತ ಮಹತ್ತರ ಸ್ಥಾನದಲ್ಲಿಟ್ಟು ತನ್ನ ಜೀವನವನ್ನೇ ಕಳೆದುಕೊಳ್ಳುವ ಮಟ್ಟಕ್ಕೆ ಹೋದನೋ, ಅವನ ಮಗನದ್ದು ಧರ್ಮಸೂಕ್ಷ್ಮದಲ್ಲಿ ಅಪ್ಪನದ್ದೇ ಮಟ್ಟ. ಹಾಗಾಗಿಯೇ, ಧರ್ಮಯುತವಾಗಿ ಕಂಡರೂ ವ್ಯಾವಹಾರಿಕವಲ್ಲದ - ಮಾವನ ಹಣವನ್ನು ಸುಡುವ - ಅತಿರೇಕಕ್ಕೂ ಮುಂದಾಗುವುದು.
ಇದ್ದ ಮಾವನ ಹಣವನ್ನು ಸುಟ್ಟು, ಮಾವನ ಅಪರಕರ್ಮಗಳನ್ನು ಮಾಡುವುದಕ್ಕೆ ತನ್ನ ಹೊಲವನ್ನು ಮಾರುವುದು, ಅತಿಯಾದ ಸ್ವಾಭಿಮಾನ ಮತ್ತು ಧರ್ಮಪಕ್ಷಪಾತವನ್ನು ತೋರಿಸುತ್ತದೆ. ಈ ಧರ್ಮಸೂಕ್ಷ್ಮಗಳ ಪಾಲನೆಯಿಂದ ವ್ಯವಹಾರಿಕವಾಗಿ ತನಗೆ ಮತ್ತು ಕುಟುಂಬದವರಿಗೆ ಆಗುವ ತೊಂದರೆಗಳೇನು, ಅದರಿಂದ ಲೋಕಕ್ಕಾದ ಒಳಿತೇನು ಎಂದು ಯೋಚಿಸದೆ ಎಸಗುವ ಕಾರ್ಯಗಳು ಧರ್ಮೋದ್ವೇಗಗಳನ್ನು ತೋರಿಸುತ್ತದೆ. ಸಾವಿತ್ರಿಯು ಇವನನ್ನು ಮಾವನ ಹಣವನ್ನು ಏಕೆ ಸುಟ್ಟೆ? ಅವರಮೇಲೆ ಕೋಪವಿತ್ತೆ ಎಂದು ಕೇಳಿದಾಗ, ಕೋಪವಿದ್ದಿದ್ದರೆ ಹಾಗೆ ಮಾಡುತ್ತಲೇ ಇರಲಿಲ್ಲ ಎಂದು ಉತ್ತರಿಸುತ್ತಾನೆ. ಹಾಗಂದ ಮಾತ್ರಕ್ಕೆ ಅವನಿಗೆ ಅಹಂಕಾರವಿರಲಿಲ್ಲವೆಂದಲ್ಲ. ನಾಗಪ್ಪಯ್ಯನ ಮೇಲೆ ಕೋಪವಿಲ್ಲದಿದ್ದರೂ, ಅವನ ಧರ್ಮದೃಷ್ಟಿಗೆ ವಿರುದ್ಧವಾಗಿರುವ ಹೆಂಡತಿ ಮತ್ತು ಮಗನ ಮೇಲೆ ಕೋಪವು ಅಭಿವ್ಯಕ್ತವಾಗುತ್ತದೆ. ಹಾಗಾಗಿ, ಧರ್ಮಭ್ರಷ್ಟತೆಯನ್ನು - ಅದೇಷ್ಟೇ ಅನಿವಾರ್ಯವಾಗಿದ್ದರೂ - ಸಹಿಸದ ಪಾತ್ರವಾಗಿ ಧರ್ಮಸೂಕ್ಷ್ಮ ಸಂವೇದನೆಯನ್ನೂ(ಮಂಜಯ್ಯ, ನಾಗಪ್ಪರ ಅಪರಕರ್ಮದಲ್ಲಿ) , ಧರ್ಮಕಠೋರತೆಯನ್ನೂ(ಹೆಂಡತಿ ಮಗ ಧರ್ಮವಿಮುಖರಾಗುವ ಸಂದರ್ಭದಲ್ಲಿ) ಒಬ್ಬನಲ್ಲೇ ಕಾಣುತ್ತೇವೆ.
ಪರಮೇಶ್ವರಯ್ಯ : ಇದು ಒಬ್ಬ ಸತ್ಯಕಾಮಿಯ ಪಾತ್ರ. ದಿನನಿತ್ಯ ದಾರಿಯಲ್ಲಿ ಹೋಗುವವರನ್ನು ಮನೆಗೆ ಕರೆದು ಊಟವಿಕ್ಕುವುದು, ಊರಿನಲ್ಲೆಲ್ಲ ಸತ್ಯವಂತನೆನಿಸಿಕೊಂಡಿರುವುದು, ತನ್ನೊಳಗೆ ತಾನೇ ಮೌನಿಯಾಗಿ ಗಂಭೀರವಾಗಿ ಅನ್ಯರೊಂದಿಗೆ(ಮನೆಯವರೊಂದಿಗೂ ಇಲ್ಲವೆನಿಸುವಷ್ಟು) ಹೆಚ್ಚು ಮಾತನಾಡದ, ಹೆಂಡತಿಯು ಸತ್ತನಂತರ ಏಕನಿಷ್ಠನಂತೆ ಬದುಕುತ್ತಿರುವ ಪರಮೇಶ್ವರಯ್ಯನದು ನಿರ್ದಿಷ್ಟವಾದ ಪಾತ್ರ. ಗುಣ-ನಡತೆಗಳಲ್ಲಿ ಹಲವು ಆಯಾಮಗಳು ಗೋಚರವಾಗುವಂತಹ ವರ್ಣಮಯವ್ಯಕ್ತಿಯಲ್ಲದಿದ್ದರೂ, ಸತ್ಯ, ಧರ್ಮಾಚರಣೆಗಳೇ ಮೈವೆತ್ತಂತೆ , ಅವುಗಳನ್ನೇ ತನ್ನ ಜೀವನಧ್ಯೇಯವಾಗಿಸಿಕೊಂಡು ಕಡೆಗೆ ಸತ್ಯಧರ್ಮಕ್ಕಾಗಿಯೇ ಆತ್ಮಹತ್ಯೆಗೈದುಕೊಳ್ಳುವಂತ ತೀವ್ರವಾದ ಪಾತ್ರ. ನೋಡಲಿಕ್ಕೆ ನಮ್ಮನಡುವೆ ಈ ರೀತಿಯ ಪಾತ್ರಗಳು ವಿರಳವಿದ್ದರೂ, ಕಥೆಯ ದೃಷ್ಟಿಯಲ್ಲಿ ಒಂದು ಔಚಿತ್ಯವಾದ ಪಾತ್ರವಾಗಿದೆ. ಒಂದೇ ಆಯಾಮದಲ್ಲಿಯೇ ಹೆಚ್ಚು ಬೆಳೆಯುವ ಈ ಪಾತ್ರದ ಸೊಗಸಿರುವುದು, ಸುಳ್ಳುಸಾಕ್ಷಿಹೇಳಿ ಆತ್ಮಹತ್ಯೆ ಮಾಡಿಕೊಳ್ಳುವವರೆಗಿನ ನಡುವಿನ ತನ್ನ ಮನದ ಹೊಯ್ದಾಟದಲ್ಲಿ ತನ್ನನ್ನು ತಾನು ತೋರ್ಪಡಿಸಿಕೊಳ್ಳುವ ಬಗೆಯಲ್ಲಿ ಮತ್ತು ಚಿತ್ರಗುಪ್ತನೊಡನೆ ತಾನು ನಡೆಸುವ ಸಂವಾದದಲ್ಲಿ. ಪರಮೇಶ್ವರಯ್ಯನು, ಅಂತಹ ಸತ್ಯಸಂಧನೆನಿಸಿಕೊಂಡಿದ್ದರೂ ಮಂಜಯ್ಯನ ಮೋಸದ ಮಾತಿನ ಬಲೆಗೆ ಹೇಗೆ ಬೀಳುತ್ತಾನೆ ಎನ್ನುವುದು ಒಂದು ಸ್ವಾರಸ್ಯವಾದರೆ, ಮಂಜಯ್ಯನ ಪೂರ್ಣಜಾತಕ ತಿಳಿದಿದ್ದೂ ಅವನೊಂದಿಗೆ ತನ್ನ ಮಗಳು ಮತ್ತೆ ಸೇರಿ ಬದುಕಬಹುದೆಂದು ಯೋಚಿಸುವ ಕರುಳನ್ನು ಕಠೋರ ಸತ್ಯನಿಷ್ಠನೊಳಗೆ ರಕ್ಷಿಸಿಕೊಂಡಿರುವುದು ಮತ್ತೊಂದು ಸೊಗಸು. ಇಂತಹ ಗಂಭೀರವ್ಯಕ್ತಿಗಳ ಮನದ ಒಳಸುಳಿಗಳನ್ನು ಪರಿಚಯಿಸಿರುವುದು ಈ ಪಾತ್ರದ ಮೂಲಕ ಯಶಸ್ವಿಯಾಗಿದೆಯೆಂದೇ ಹೇಳಬೇಕು.
ಸತ್ಯ ಮತ್ತು ಧರ್ಮದ ವ್ಯತ್ಯಾಸವನ್ನು ಅರಿಯದೆ, ಸತ್ಯವ್ರತವನ್ನೇ ಜೀವನಧ್ಯೇಯವಾಗಿಸಿಕೊಂಡದ್ದೊಂದು ಧರ್ಮಾಭಾಸ ಅಥವಾ ಮೌಲ್ಯತಾರತಮ್ಯದ ಅಜ್ಞಾನ. ತನ್ನ ಜೀವನದ ಅಡಿಪಾಯವಾಗಿದ್ದ ಈ ಸತ್ಯವ್ರತವೇ ಕುಸಿದು ಕಡೆಗೆ ಆತ್ಮಹತ್ಯೆಯ ಹಾದಿಯನ್ನು ಹಿಡಿಯುವಂತಾದದ್ದು ಒಂದು ಪ್ರಗಲ್ಭ ವಿಪರ್ಯಾಸ. ಮೌಲ್ಯಗಳ ನಡುವಿನ ಗೊಂದಲ ಮತ್ತು ಪುರುಷಾರ್ಥಗಳ ಅಸಮತೋಲನದ ಚಿತ್ರಣವನ್ನೇ ತಳಹದಿಯಾಗುಳ್ಳ ಸಾಕ್ಷಿಯಲ್ಲಿ, ಸತ್ಯವೇ ಧರ್ಮವೆಂದು ಬದುಕುವ ಪರಮೇಶ್ವರಯ್ಯನ ದುರಂತಕಥೆಯ ಆವಶ್ಯಕತೆ ಮತ್ತು ಪ್ರಾಮುಖ್ಯ ಪ್ರಶ್ನಾತೀತ. ಇದು ವ್ಯಕ್ತಿ ಪ್ರತಿಷ್ಠೆಯ ಹಿನ್ನೆಲೆಯಲ್ಲಿ ನೋಡಿದಾಗ ಸ್ಪಷ್ಟವಾಗುವುದು. ತಾನು ಎಷ್ಟು ಸತ್ಯನಿಷ್ಠನಾದರೂ ಮಮಕಾರಕ್ಕೆ ಸೋತು ಸುಳ್ಳುಹೇಳುವುದು ಮತ್ತು ಅದರಿಂದ ಅಹಂಕಾರಕ್ಕೆ ಬಿದ್ದ ಪೆಟ್ಟನ್ನು ಜೀರ್ಣಿಸಿಕೊಳ್ಳಲಾಗದೆ ತನ್ನ ಪ್ರತಿಷ್ಠೆಯನ್ನು ಎತ್ತಿಹಿಡಿಯಲು ಆತ್ಮಹತ್ಯೆಗೈದುಕೊಳ್ಳುವುದು ಮತ್ತು ಯಮನ ಬಳಿ ಹೋಗಿ ಅಲ್ಲಿ ಕೇವಲ ಸಾಕ್ಷಿಭಾವವಾಗಿ ತನ್ನ ಬಂಧುಗಳ ಮನಸ್ಸನ್ನರಿಯುವಾಗಲೂ ಜೀವನದ ಬಂಧನವನ್ನು ಕಳಚಿಕೊಳ್ಳಲಾಗದ್ದು ಕಲಾದೃಷ್ಟಿಯಿಂದ ಅತಿಶಯ ಮತ್ತು ಔಚಿತ್ಯಪೂರ್ಣವಾಗಿದೆ. ಅಹಂಕಾರವು ಯಾವ ಯಾವ ರೀತಿಯ ಪಾತ್ರಗಳಲ್ಲಿ ಯಾವ ರೂಪವನ್ನು ತಾಳಿ ತನ್ನನ್ನು ತಾನು ಮುನ್ನಡೆಸಿಕೊಳ್ಳುತ್ತದೆ ಎಂಬುದನ್ನು ತೋರಿಸುವಲ್ಲಿ ಪರಮೇಶ್ವರಯ್ಯನವರ ಪಾತ್ರ ವಿಶೇಷವಾಗಿ ಗಮನಿಸಬೇಕಾಗಿದ್ದದ್ದು(ಮುಖ್ಯವಾಗಿ ಮನೋವೈಜ್ಞಾನಿಕ ಅಧ್ಯಯನಕ್ಕೆ ಬಳಸಿಕೊಳ್ಳಲು ಯೋಗ್ಯ). ಪರರೊಡನೆ ತನ್ನ ಅಹಂಕಾರವನ್ನು ಮೆರೆಯದ, ಲೌಕಿಕವೆಂದೆನಿಸಿಕೊಳ್ಳುವ ಅಪೇಕ್ಷೆಗಳ ಹಿಂದೆ ಬೀಳದ, ಮಾನವ ಪ್ರವೃತ್ತಿಗಳಿಂದಲೂ ಹೆಚ್ಚು ಭಾದಿತವಾಗದ ವ್ಯಕ್ತಿತ್ವ ತನ್ನ ಮಗಳ ಜೀವನ ಸರಿಹೋಗಿಬಿಡಬಹುದೇನೋ ಎಂದು ಒಮ್ಮೆ ಯೋಚಿಸುವುದು ಮತ್ತು ಅದರಿಂದಾಗಿಯೇ ತಾನು ನೆಚ್ಚಿದ ಮೌಲ್ಯದ ವಿರುದ್ಧ ಹೋಗುವುದನ್ನು ನೋಡಿದರೆ, ಮಮಕಾರವು ನಮ್ಮಲ್ಲಿಯ ದುರ್ಬಲತೆಯನ್ನು ಹೇಗೆ ಉಪಯೋಗಿಸಿಕೊಳ್ಳುತ್ತದೆ ಎಂಬುದು ಗೊತ್ತಾಗುತ್ತದೆ.
ನಾಗಪ್ಪ :
ನಾಗಪ್ಪಯ್ಯ ಅ೦ದರೆ ನಾಲ್ಕು ಜೇಬಿನ ನಾಗಪ್ಪಯ್ಯ ಎ೦ದೇ ಸ್ಮೃತಿಗೆ ಬರುವಷ್ಟು ತೀವ್ರವಾಗಿ ಈ ಪಾತ್ರವನ್ನು ಭೈರಪ್ಪನವರು ಚಿತ್ರಿಸಿದ್ದಾರೆ. ನಾಗಪ್ಪ ಒಬ್ಬ ಅರ್ಥಕಾಮಿ, ಜಿಪುಣ . ಹಣವನ್ನು ಪೇರಿಸಿಡುವುದೊ೦ದೇ ಜೀವನದ ಧ್ಯೇಯ . ಬೀಗರ ತಿಥಿಗೆ ಬ೦ದಾಗಲೂ ವ್ಯವಹಾರದ ಕೆಲಸಗಳನ್ನು ಮುಗಿಸಿಕೊಳ್ಳುವ, ಸ್ವ೦ತ ಮೊಮ್ಮಗನಿಗೆ ಹಾಕಿದ ಊಟಕ್ಕೇ ಲೆಕ್ಕವಿಡುವ, ಅಳಿಯ ಕೊಡುವ ಹಣದಲ್ಲೇ ಖೋಟಾ ನೋಟುಗಳನ್ನು ಪರೀಕ್ಷಿಸಿ ತೆಗೆದುಕೊಳ್ಳುವ, ತನ್ನ ಖಾಯಿಲೆಗೂ ಚಿಕಿತ್ಸೆ ಮಾಡಿಸಲು ಹಣ ವ್ಯಯವಾಗುತ್ತದೆ೦ದು ಸುಮ್ಮನಿದ್ದು ಕಡೆಗೆ ಅದೇ ಉಲ್ಬಣಗೊ೦ಡು ಸಾಯುವ, ಸತ್ತರೂ ತನ್ನ ಕೈಯಲ್ಲಿದ್ದ ಬೀಗದ ಕೈಯನ್ನು ಗಟ್ಟಿಯಾಗಿ ಹಿಡಿದುಕೊ೦ಡೇ ಇರುವ ನಾಗಪ್ಪಯ್ಯ ಮತ್ತು ಎಲ್ಲೂ ತನ್ನ ನಿರ್ಧಾರಗಳ ಬಗೆಗೆ ಎರಡನೆಯ ಯೋಚನೆಯನ್ನು ಮಾಡದ, ಅ೦ತಸ್ಸಾಕ್ಷಿಯಲ್ಲಿಯೂ ವ್ಯವಹಾರದಲ್ಲಿಯೂ ಧನಸ೦ಪಾದನೆಯ ಒ೦ದೇ ಗುರಿಯನ್ನು ಹೊ೦ದಿದ ವಿಶೇಷವಾದ ಪಾತ್ರ. ವ್ಯಕ್ತಿಯ ಮೌಲ್ಯರಾಹಿತ್ಯ ಜೀವನ ಮತ್ತು ಪುರುಷಾರ್ಥಗಳ ವಿಭಾಗಪರಿಜ್ಞಾನವಿಲ್ಲದೇ ಇರುವ ಕೇವಲ ಅರ್ಥಪಕ್ಷಪಾತಿಗಳು ನಮ್ಮಲ್ಲಿ ಅನೇಕರಿದ್ದಾರಾದರೂ, ಅವರೆಲ್ಲರಿಗೆ ಶಿಖರಪ್ರಾಯವಾಗಿ ನಿಲ್ಲುವುದು ನಾಗಪ್ಪಯ್ಯನ ಪಾತ್ರ. ಜೀವನದ ಧ್ಯೇಯ, ಮೌಲ್ಯ ಮತ್ತು ಪಥ ಎಲ್ಲವೂ ಹಣಗಳಿಕೆಯೇ ಆಗಿ, ಯಾವುದು ಮೆಟ್ಟಿಲಾಗಬೇಕಾಗಿದ್ದಿತೋ ಅದೇ ಗುರಿಯಾದರೆ ಏನೇನು ವೈಪರೀತ್ಯಗಳಾಗಬಹುದು; ಅದಕ್ಕಿ೦ತ ಹೆಚ್ಚಾಗಿ ಇ೦ತಹ ಮನಸ್ಸ್ಥಿತಿಯ ವ್ಯಕ್ತಿಗಳ ಗುಣಗಳೇನು ಎ೦ಬುದನ್ನು ಚಿತ್ರಿಸುವಲ್ಲಿ ಈ ಪಾತ್ರದ ಮೂಲಕ ಭೈರಪ್ಪನವರು ಯಶಸ್ವಿಯಾಗಿದ್ದಾರೆ. ಈ ಪಾತ್ರಚಿತ್ರಣದಲ್ಲೂ ಲೇಖಕರು ತೋರಿಸಿರುವ ನೈಜತೆ ಮೆಚ್ಚುವಂತಹದ್ದು. ಇವನು ಜಿಪುಣ, ಧನಸಂಚಯದ ಚಟವೊಂದುಬಿಟ್ಟರೆ ದುರ್ಬುದ್ಧಿಯಿಲ್ಲ. ವ್ಯವಹಾರದಲ್ಲೂ ಅಷ್ಟೆ. ಲೆಕ್ಕ ತೂಕಗಳಲ್ಲಿ ಚೊಕ್ಕ ಮತ್ತು ಸಾಲದ ಬಡ್ಡಿಯ ದರ ಒಂದೇ ಸಮ.
ಈ ಪಾತ್ರವು ಅಭಿವ್ಯಕ್ತಿಸಬೇಕಾದ ಅಥವಾ ಪ್ರತಿನಿಧಿಸಬೇಕಾದ ಉದ್ದೇಶವನ್ನು ತಲುಪುವುದು ಸತ್ತ ನಂತರ, ಯಾರಿ೦ದಲೂ ಶವದ ಕೈಯಿ೦ದ ಬೀಗದ ಕೀಯನ್ನು ಬಿಡಿಸಿಕೊಳ್ಳಲಾಗದ ಮತ್ತು ನಾಗಪ್ಪಯ್ಯ ಕೂಡಿಟ್ಟ ಹಣವು ಅವನ ಚಿತೆಯಲ್ಲೇ ಸುಟ್ಟು ಭಸ್ಮವಾಗುವ ಅದ್ಭುತವಾದ ಚಿತ್ರಣದಿ೦ದ. ಕೂಡಿಡುವುದೇ ಗುರಿ, ಖಜಾನೆಯನ್ನು ಹೆಚ್ಚು ಹೆಚ್ಚು ತು೦ಬಿಸುವುದರಲ್ಲೇ ನಿತ್ಯಸ೦ತೋಷ. ಆದರೆ ಯಾವ ಪುರುಷಾರ್ಥಕ್ಕಾಗಿ? ಅರ್ಥಸ೦ಚಯವು, ಧರ್ಮಯುತವಾಗಿ ಕಾಮವನ್ನು ಈಡೇರಿಸಿಕೊಳ್ಳುವುದಕ್ಕೆಂಬುದನ್ನು ತಿಳಿಯದೆ ಸ೦ಗ್ರಹದಲ್ಲೇ ಜೀವನ ಕಳೆದರೆ, "ಆ ಸ೦ಗ್ರಹವು ಶವಕ್ಕೆ ಸಮಾನವಲ್ಲವೇ" ಎ೦ದು ರಾಮಕೃಷ್ಣ ಯೋಚಿಸಿ, ಹೆಣದೊ೦ದಿಗೆ ಸುಟ್ಟದ್ದು, ಅತ್ಯ೦ತ ಗಾಢವಾದ ತತ್ತ್ವವನ್ನು ಬಿ೦ಬಿಸುತ್ತದೆ.
ಸತ್ಯಪ್ಪ:
ಸತ್ಯ, ಕಾಮ ಮತ್ತು ಅರ್ಥ ಇಂತಹ ಮೂಲಭೂತ ತತ್ತ್ವಗಳನ್ನು ಅತಿಯಾಗಿ ಹಚ್ಚಿಕೊಂಡ ಪಾತ್ರಗಳ ನಡುವೆ, ಆನ್ವಯಿಕ ತತ್ತ್ವವೆನ್ನಬಹುದಾದ ಸಮಾಜೋದ್ಧಾರದ ಮತ್ತು ಎಡಬಿಡಂಗಿಯಾದ ಗಾಂಧಿತತ್ತ್ವವನ್ನು ಶಿರಸಾ ವಹಿಸಿ ನಡೆಯುವ ಪಾತ್ರವೇ ಸತ್ಯಪ್ಪನದು. ಹೇಗೆ ಕೇವಲ ಸತ್ಯವನ್ನು ನುಡಿಯುವುದೇ ಒಂದು ನಿರಪೇಕ್ಷಮೌಲ್ಯವಾಗಲಾರದೋ ಹಾಗೆಯೇ ಗಾಂಧಿಯ ಅಹಿಂಸೆಯು ಕೂಡ. ಈ ಪಾತ್ರಕ್ಕೆ ವೈಚಾರಿಕ ನ್ಯೂನತೆಯಿದೆ. ಹಾಗೂ ತನ್ನ ಅಹಂಕಾರವು ದೊಡ್ಡ ವ್ಯಕ್ತಿತ್ವಗಳೆನಿಸಿಕೊಂಡವರಿಗೆ ಮಾರುಹೋದರೆ, ದೀನದಲಿತರ ಉದ್ಧಾರದ ಕನಸಿನಲ್ಲಿ ಮತ್ತೆ ವಿಜೃಂಭಿಸುತ್ತದೆ. ಇಲ್ಲಿ ತಾನು ನಚ್ಚಿದ ತತ್ತ್ವಾಭಾಸಗಳನ್ನು ಪಾಲಿಸಲು ಯಾವುದೇ ಕಪಟಮಾರ್ಗದ ಅನುಕರಣೆಯಿಲ್ಲ. ಅಷ್ಟು ಪ್ರಾಮಾಣಿಕ ಪಾತ್ರವಿದು. ಹಾಗೆಯೇ ತನ್ನೊಳಗೆ ತಾನು ಆಳವಾಗಿ ಚಿಂತಿಸುವ ಪಾತ್ರವೂ ಅಲ್ಲ. ನಾಲ್ಕು ಜನರೊಂದಿಗೆ ಮಾತನಾಡಿಕೊಂಡು ಸಮಾಜಮುಖಿಯಾಗಿ ಬದುಕುವ ಪಾತ್ರ. ಈ ವ್ಯಕ್ತಿತ್ವವೇ ಸತ್ಯಪ್ಪನನ್ನು ಆತ್ಮಹತ್ಯೆಯ ಕೊನೆಯ ಹಂತದಿಂದ ಹಿಂದಕ್ಕೆ ಕರೆತಂದದ್ದು ಮತ್ತು ಅದರ ನ್ಯೂನತೆಯೇ ಪರಮೇಶ್ವರಯ್ಯನನ್ನು ಕರೆತರಲಾಗದಿದ್ದದ್ದು.
ಸಮಾಜದಲ್ಲಿ ನಡೆಯುತ್ತಿರುವ ಮೋಸ, ವಂಚನೆಗಳನ್ನು ಕಂಡಾಗಲೆಲ್ಲ ಸತ್ಯಪ್ಪನಿಗೆ ಸಿಟ್ಟು ಬರುತ್ತದೆ. ಆ ಸಿಟ್ಟು ಅವನನ್ನು, ಜನರ ಉದ್ಧಾರಕ್ಕಾಗಿ ಪ್ರೇರಿಸುತ್ತದೆ. ತನ್ನ ಸಮಾಜೋದ್ಢಾರಕಾರ್ಯಗಳೆಲ್ಲ ವಿಫಲವಾದಾಗ ಅವನಿಗೆ ಅದು ತಾನು ನೆಚ್ಚಿದ ಮೌಲ್ಯದ ಸೋಲೆಂದು ಭಾಸವಾಗುವುದಿಲ್ಲ; ಬದಲಾಗಿ ತನ್ನ ಅಶಕ್ತಿಯೆಂದೇ ಎನ್ನಿಸುತ್ತದೆ. ಅಷ್ಟರ ಮಟ್ಟಿಗೆ ಸ್ವವಿಮರ್ಶಕ ಸತ್ಯಪ್ಪ. ಮಂಜಯ್ಯನಿಂದ ಉದ್ದೀಪಿತನಾಗಿ, ಸಮಸ್ಯೆಗೆ ಸಿಲುಕಿಕೊಂಡಾಗಲೂ ಅವನು ಮಂಜಯ್ಯನನ್ನು ದೂರುವುದಿಲ್ಲ, ಊರಿನಲ್ಲಿ ತೋಟದ ಕಳ್ಳರು ಹೆಚ್ಚಾದಾಗಲೂ ಅವನು ಗಾಂಧಿಯ ಗ್ರಾಮೋದ್ಧಾರದ ಕನಸಿನ ವೈಫಲ್ಯವನ್ನು ಒಪ್ಪುವುದಿಲ್ಲ, ಬದಲಾಗಿ ತನ್ನನ್ನೇ, ಸಮಾಜವನ್ನೇ ತಾನು ಹಳಿದುಕೊಳ್ಳುತ್ತಾನೆ. ಇಂತಹ ಪಾತ್ರದಲ್ಲಿಯೂ ಸುಪ್ತವಾಗಿರುವ ಅಹಂಕಾರ ಮತ್ತು ಸಮಾಜಪ್ರಜ್ಞೆಗಳು ಅವನನ್ನು ಹೇಗೆ ಪ್ರಭಾವಿಸುತ್ತದೆ; ಪ್ರವೃತ್ತಿಗೆ ಸಿಲುಕಿ ಒದ್ದಾಡುತ್ತದೆ; ತನ್ನ ಅನೈತಿಕ ಸಂಬಂಧದಿಂದ ಅದೆಷ್ಟು ನೊಂದುಕೊಂಡು ಆತ್ಮಹತ್ಯೆಯ ಅಂಚಿನವರೆಗೂ ಹೋಗುವಂತೆ ಮಾಡುತ್ತದೆ ಮತ್ತು ತನ್ನ ತಪ್ಪನ್ನು ಒಪ್ಪಿಕೊಳ್ಳುತ್ತದೆ ಎಂಬುದನ್ನು ಗಮನಿಸಿದರೆ, ಸತ್ಯಪ್ಪನ ಪಾತ್ರದ ಬಗೆ ಮತ್ತು ಔಚಿತ್ಯ ಸ್ಪಷ್ಟವಾಗುತ್ತದೆ