ಆರ್ಷಗ್ರಂಥಗಳಲ್ಲಿ ವಿಶಿಷ್ಟ ಪಾತ್ರವನ್ನು ವಹಿಸುವ ಮಹಾವೃಕ್ಷಗಳನ್ನು ಬೀಳ್ಗೊಂಡು ಅಭಿಜಾತ ಸಾಹಿತ್ಯಯುಗದ ವರಕವಿಗಳತ್ತ ಬಂದರೆ ನಮಗೆ ಕಾಣುವ ಮೊದಲ ತಾರೆ ಕಾಳಿದಾಸ. ಇವನು ಸಂಸ್ಕೃತಸಾಹಿತ್ಯಾಕಾಶದ ಧ್ರುವತಾರೆಯೂ ಹೌದು. ದಿಟವೇ, ಇವನಿಗಿಂತ ಮುನ್ನ ಅಶ್ವಘೋಷನಿದ್ದ. ಅವನಿಗೆ ತನ್ನ ‘ಬುದ್ಧಚರಿತ’ ಮಹಾಕಾವ್ಯದಲ್ಲಿ ಸಿದ್ಧಾರ್ಥನು ಸಂಬೋಧಿಯನ್ನು ಪಡೆಯುವಾಗ ಆಶ್ರಯಿಸಿದ ಬೋಧಿವೃಕ್ಷ ಅಥವಾ ಅಶ್ವತ್ಥವನ್ನು ಹೃದಯಂಗಮವಾಗಿ ಬಣ್ಣಿಸುವ ಪುಣ್ಯಾವಕಾಶವಿದ್ದಿತಾದರೂ ಅದೇಕೋ ಅವನು ಈ ಸುಸಂದರ್ಭವನ್ನು ಬಳಸಿಕೊಳ್ಳಲೇ ಇಲ್ಲ. ಹದಿನಾಲ್ಕನೆಯ ಸರ್ಗದಲ್ಲಿ ಒಂದೆಂದರೆ ಒಂದೇ ಮಾತಿನಿಂದ ಈ ಮಹಾವೃಕ್ಷವನ್ನು ಯಾಂತ್ರಿಕವಾಗಿ ಹೆಸರಿಸಿ ಮುಂದಿನ ಕಥೆಗೆ ದಾಪಿಡುತ್ತಾನೆ. ಬೌದ್ಧಗ್ರಂಥಗಳ ಪ್ರಕಾರ ಬುದ್ಧಭಗವಂತನು ಸಂಬೋಧಿಯ ಬಳಿಕ ಒಂದು ವಾರ ಆ ಅಶ್ವತ್ಥವೃಕ್ಷದ ಬುಡದಲ್ಲಿಯೇ ಕುಳಿತು ತನಗಾದ ಸಾಕ್ಷಾತ್ಕಾರದ ಆನಂದವನ್ನು ಮೆಲುಕುಹಾಕುತ್ತಿದ್ದನಂತೆ. ಅನಂತರ ಮತ್ತೊಂದು ವಾರ ಅಜಪಾಲವೃಕ್ಷವೆಂಬ ಹತ್ತಿರದ ಆಲದ ಮರದ ಕೆಳಗೆ ಕುಳಿತಿದ್ದನಂತೆ. ಬಳಿಕ ಮತ್ತೆರಡು ವಾರಗಳನ್ನು ಕ್ರಮವಾಗಿ ಮುಚಲಿಂದ ಮತ್ತು ರಾಜಾಯತನ ಎಂಬ ಅರಳಿಯ ಮರಗಳ ಬುಡದಲ್ಲಿ ಕುಳಿತು ಕಳೆದನಂತೆ. ಈ ಎಲ್ಲ ಮರಗಳ ನೆಳಲಿನಲ್ಲಿರುವಾಗಲೂ ಅವನು ತನಗಾದ ದಿವ್ಯಾನುಭವದ ಆನಂದವನ್ನೇ ಪರಿಭಾವಿಸುತ್ತಿದ್ದನೆಂದು ತಿಳಿಯುತ್ತದೆ. ಇಂಥ ಮಧುರ ಸಂದರ್ಭಗಳನ್ನು ಅಶ್ವಘೋಷನು ಗಮನಿಸದೆಹೋದದ್ದು ನಮಗಾದ ರಸನಷ್ಟ. ಹೀಗಾಗಿ ನಮಗೆ ಅಭಿಜಾತಕವಿಗಳ ಪೈಕಿ ಕಾಳಿದಾಸನಿಂದಲೇ ಆರಂಭಿಸುವ ಅನಿವಾರ್ಯತೆ ಬಂದಿದೆ.
ಖಂಡಕಾವ್ಯಗಳ ಪೈಕಿ ‘ಮೇಘದೂತ’ದಲ್ಲಿ ಕಾಳಿದಾಸನು ಕೆಲವೊಂದು ಮರ-ಗಿಡಗಳಿಗೆ ಮಾನವಸ್ಪರ್ಶವನ್ನು ನೀಡಿದ್ದಾನೆ. ವಿಶೇಷತಃ ಉತ್ತರಮೇಘದಲ್ಲಿ ಈ ಭಾವಗಳನ್ನು ಕಾಣಬಹುದು. ಯಕ್ಷಿಯ ಪ್ರಸ್ತಾವ ಬರುವ ಈ ಭಾಗದಲ್ಲಿಯೇ ಇಂಥ ಕಲ್ಪನೆಗಳಿರುವುದು ಧ್ವನಿಪೂರ್ಣವೆನ್ನಬಹುದು. ಅಲಕಾನಗರಿಯಲ್ಲಿ ಕುಬೇರನ ಪ್ರಾಸಾದದ ಬಳಿಯಲ್ಲಿಯೇ ಯಕ್ಷನ ಮನೆ. ಅದರ ಬಾಗಿಲಲ್ಲಿಯೇ ಅವನ ಪತ್ನಿ ಯಕ್ಷಿ ಎಳೆಯ ಮಂದಾರವೃಕ್ಷವೊಂದನ್ನು ತನ್ನ ಮಗನೆಂಬಂತೆ ಬೆಳಸಿಕೊಂಡಿದ್ದಾಳೆ. ಅದರ ಹೂಗಳು ಕೈಯಳತೆಗೇ ಎಟುಕುವಂತಿವೆ. ಈ ಮೂಲಕ ಆಕೆಯ ಪುತ್ರವಾತ್ಸಲ್ಯವಲ್ಲದೆ ಆ ದಂಪತಿಗಳಿಗೆ ಇಂಥ ಗಿಡ-ಮರ-ಮೃಗ-ಪಕ್ಷಿಗಳಲ್ಲದೆ ಬೇರೆಯ ಸಂತಾನವಿರಲಿಲ್ಲವೆಂಬ ಅಂಶವೂ ಸೂಚಿತವಾಗುತ್ತಿರುವುದು ಕವಿಯ ಕಾವ್ಯಕೌಶಲಕ್ಕೆ ಒಳ್ಳೆಯ ನಿದರ್ಶನ. ಯಕ್ಷ-ಯಕ್ಷಿಯರ ಮನೆಯ ಕೈತೋಟದಲ್ಲಿ ರಕ್ತಾಶೋಕ, ಬಕುಲ, ಕುರವಕ, ಮಾಧವಿ ಮುಂತಾದ ಮರ-ಗಿಡ-ಬಳ್ಳಿಗಳಿವೆ. ಅಶೋಕ-ಬಕುಲಗಳು ಯಕ್ಷಿಯಿಂದ ದೋಹದವನ್ನು ಬಯಸಿದರೆ ಕುರವಕ ಮತ್ತು ಮಾಧವಿಗಳು ಬೇಲಿಗೂ ಮಂಟಪಕ್ಕೂ ಒದಗಿಬಂದಿವೆ. ಆದರೆ ಕವಿಯು ಈ ಸಸ್ಯಬಂಧುಗಳೊಂದಕ್ಕೂ ತನ್ನದಾದ ಮುದ್ದಿನ ಹೆಸರನ್ನು ಕೊಡದಿರುವುದೊಂದು ಕೊರತೆಯೆನ್ನಬೇಕು.
ಯಸ್ಯೋಪಾಂತೇ ಕೃತಕತನಯಃ ಕಾಂತಯಾ ವರ್ಧಿತೋ ಮೇ
ಹಸ್ತಪ್ರಾಪ್ಯಸ್ತಬಕನಮಿತೋ ಬಾಲಮಂದಾರವೃಕ್ಷಃ |
ರಕ್ತಾಶೋಕಶ್ಚಲಕಿಸಲಯಃ ಕೇಸರಶ್ಚಾತ್ರ ಕಾಂತಃ
ಪ್ರತ್ಯಾಸನ್ನೌ ಕುರವಕವೃತೇರ್ಮಾಧವೀಮಂಡಪಸ್ಯ || (ಮೇಘದೂತ, ಉತ್ತರಮೇಘ, ೧೨, ೧೪)
ಇನ್ನು ನಾಟಕಗಳತ್ತ ಬರುವುದಾದರೆ ಮೊದಲನೆಯದಾದ ‘ಮಾಲವಿಕಾಗ್ನಿಮಿತ್ರ’ದಲ್ಲಿಯೇ ಅಶೋಕತರುವು ಕಥಾನಾಯಿಕೆ ಮಾಲವಿಕೆಯ ಬಾಳಿನಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುವ ಸಂಗತಿ ಎಲ್ಲರಿಗೂ ತಿಳಿದದ್ದೇ. ಆದರೆ ಕವಿಯು ಇಡಿಯ ಈ ರೂಪಕದಲ್ಲಿ ಎಲ್ಲಿಯೂ ಇದನ್ನು ಕುರಿತು ಭಾವಾರ್ದ್ರವಾದ ಮಾತುಗಳನ್ನು ಯಾವೊಂದು ಪಾತ್ರದ ಮೂಲಕವೂ ಹೇಳಿಸದಿರುವುದು ಸಖೇದಾಶ್ಚರ್ಯ. ಚರ್ಮಕಾಮದ ಹಂತದಲ್ಲಿಯೇ ಇರುವ ನಾಯಕ-ನಾಯಿಕೆಯರ ಪ್ರಣಯವನ್ನು ಕೇಂದ್ರೀಕರಿಸಿರುವ ಈ ಕೃತಿಗೆ ಇಷ್ಟರಮಟ್ಟದ ಭಾವಗಳೇ ಸಾಕೆಂಬುದು ಆ ನಿರ್ಮಮ ಕವಿಯ ರಸನಿಶ್ಚಯವೇನೋ.
‘ವಿಕ್ರಮೋರ್ವಶೀಯ’ದಲ್ಲಿಯೂ ಮರ-ಗಿಡಗಳನ್ನು ಕುರಿತ ಜೀವಭಾವನೆಗಳ ಮೇಲಾಟ ‘ಮಾಲವಿಕಾಗ್ನಿಮಿತ್ರ’ಕ್ಕಿಂತ ತುಂಬ ಮಿಗಿಲಲ್ಲ. ಆದರೂ ಕೆಲವಂಶಗಳಲ್ಲಿ ಅದಕ್ಕಿಂತ ಸಮಾರ್ದ್ರವಾಗಿದೆ, ಸಂವೇದನಶೀಲವಾಗಿದೆ ಎಂಬುದರಲ್ಲಿ ಸಂದೇಹವಿಲ್ಲ. ವಿಶೇಷತಃ ಸುತ್ತಣ ಪ್ರಕೃತಿಯತ್ತ ಪುರೂರವನ ಗಮನ ಹರಿಯುವುದು ಅವನು ಉರ್ವಶಿಯ ಪ್ರಣಯದಿಂದ ಉನ್ಮತ್ತನಾದ ಬಳಿಕ – ಮತ್ತೂ ಸ್ಪಷ್ಟವಾಗಿ ಹೇಳಬೇಕೆಂದರೆ ಆಕೆಯನ್ನು ಕಳೆದುಕೊಂಡ ಬಳಿಕ! ಇದು ಕಾಳಿದಾಸ ಮಹಾಕವಿಯು ನಮಗೆ ನೀಡಿರುವ ಧ್ವನಿಪೂರ್ಣ ಸಂದೇಶ. ನಾವೆಲ್ಲ ‘ನಮ್ಮ ಬುದ್ಧಿಗಳನ್ನು ನಮ್ಮ ಕೈಯಲ್ಲಿರಿಸಿಕೊಂಡು’ ಲೋಕವ್ಯವಹಾರಗಳನ್ನು ನಡಸುವಾಗ, ನಮ್ಮ ಅರ್ಥ-ಕಾಮಗಳೆಲ್ಲ ಅಚ್ಚುಕಟ್ಟಾಗಿ ನೆರವೇರುತ್ತಿರುವಾಗ ಜಗತ್ತಿನ ಚೇತನಾಚೇತನಗಳ ವಿಷಯದಲ್ಲಿ ಆಸ್ಥೆಯನ್ನೂ ವಹಿಸುವುದಿಲ್ಲ, ಅಕ್ಕರೆಯನ್ನೂ ತೋರುವುದಿಲ್ಲ. ಏನಿದ್ದರೂ ನಮಗೆ ‘ಬುದ್ಧಿ ಕೆಟ್ಟಾಗ’, ಅರ್ಥ-ಕಾಮಗಳಿಗೆ ಅನರ್ಥ ಒದಗಿದಾಗ ಮಾತ್ರ ಇಂಥ ಪರಿವೆ ಮೂಡುತ್ತದೆ. ಆಗಲೂ ಅದು ಸ್ವಾರ್ಥಕೇಂದ್ರಿತವಾಗಿಯೇ ಇರುವುದಲ್ಲದೆ ನಿರ್ಮಲ ಪ್ರೀತಿಯ ಹೊನಲಾಗಿ ಹರಿಯುವುದಿಲ್ಲ. ಇಂತಿದ್ದರೂ ಪುರೂರವನು ಭಾವೋತ್ಕಟ ವ್ಯಕ್ತಿಯಾದ ಕಾರಣ ಅವನಲ್ಲಿ ನಿಸರ್ಗದ ಪ್ರೇಮ ಸವ್ಯಾಜವಾಗಿದ್ದರೂ ಸಹಜವಾಗಿದೆ. ‘ಮೇಘದೂತ’ದ ಯಕ್ಷನಂತೆಯೇ (ಉತ್ತರಮೇಘ, ೪೧) ಇವನು ಕೂಡ ಇಡಿಯ ಪ್ರಕೃತಿಯಲ್ಲಿ ತನ್ನ ನಲ್ಲೆಯನ್ನೇ ಕಾಣಲೆಳಸುತ್ತಾನೆ; ಆದರೆ ಸಾಫಲ್ಯವಿಲ್ಲದೆ ಸೋಲುತ್ತಾನೆ. ಈ ನಾಟಕದ ಇಡಿಯ ನಾಲ್ಕನೆಯ ಅಂಕ ಇಂಥ ಭ್ರಾಂತಿ-ಅಶಾಂತಿಗಳ ಸಾಕಾರ. ಲತೆಯ ರೂಪದಲ್ಲಿದ್ದ ಉರ್ವಶಿಯನ್ನು ಕಟ್ಟಕಡೆಗೆ ಸಂಗಮನೀಯಮಣಿಯ ಪ್ರಭಾವದಿಂದ ಪೂರ್ವಾಕೃತಿಗೆ ಮಾರ್ಪಡಿಸಿಕೊಳ್ಳುವ ಮುನ್ನವೂ ಬಳ್ಳಿಯಲ್ಲಿ ನಲ್ಲೆಯನ್ನು ಕಾಣುತ್ತಿರುವನಲ್ಲದೆ ಬಳ್ಳಿಯನ್ನು ಬಳ್ಳಿಯಾಗಿಯೇ ನೋಡುವ ಸ್ಥಿತಿ ಅವನಿಗಿಲ್ಲ (ವಿಕ್ರಮೋರ್ವಶಿಯ, ೪.೩೯).
ಇಂಥ ಎಲ್ಲ ಅರಕೆಗಳನ್ನೂ ಮೀರಿದ ರೂಪಕ ‘ಅಭಿಜ್ಞಾನಶಾಕುಂತಲ’. ಇಲ್ಲಿ ಶಕುಂತಲೆ ಮತ್ತವಳ ಸಖಿಯರಿಗಿರಲಿ, ಇಡಿಯ ಆಶ್ರಮವಾಸಿಗಳಿಗೂ ತಮ್ಮ ಸುತ್ತಣ ನಿಸರ್ಗದ ವಿಷಯದಲ್ಲಿ ರಕ್ತಸಂಬಂಧಕ್ಕಿಂತ ಮಿಗಿಲಾದ ಬಾಂಧವ್ಯವಿರುತ್ತದೆ. ಮೊದಲ ಅಂಕದ ಆದಿಯಲ್ಲಿಯೇ ಬರುವ ವೈಖಾನಸರು ಆಶ್ರಮದ ಜಿಂಕೆಯನ್ನು ಬೇಟೆಯಾಡಲಿದ್ದ ದುಷ್ಯಂತನನ್ನು ತಡೆಯುತ್ತಾರೆ. ಅವನಿಗೆ ಶಕುಂತಲೆ ಮೊದಲ ಬಾರಿಗೆ ಕಾಣಿಸಿಕೊಳ್ಳುವುದಾದರೂ ಅವಳು ಗಿಡ-ಮರಗಳಿಗೆ ನೀರೆಯುವಾಗಲೇ. ಅವಳಿಗೆ ಇದು ತನ್ನ ಸಾಕುತಂದೆ ಕಣ್ವಮಹರ್ಷಿ ವಿಧಿಸಿದ್ದ ‘ಕೆಲಸ’ವಲ್ಲ, ಸೋದರಸ್ನೇಹದಿಂದ ಮಾಡುವ ಸತ್ಕಾರ: “ನ ಕೇವಲಂ ತಾತನಿಯೋಗ ಏವ, ಅಸ್ತಿ ಮೇ ಸೋದರಸ್ನೇಹ ಏತೇಷು” (ಪು. ೪೩೪). ಇದು ಬರಿಯ ಹೇಳಿಕೆಯಲ್ಲವೆಂಬುದಕ್ಕೆ ಸಾಕ್ಷಿಯಾಗಿ ಆಕೆಯ ಮತ್ತೊಂದು ಮಾತನ್ನೇ ಗಮನಿಸಬಹುದು: “ಏಷ ವಾತೇರಿತಪಲ್ಲವಾಂಗುಲೀಭಿಃ ತ್ವರಯತೀವ ಮಾಂ ಕೇಸರವೃಕ್ಷಕಃ. ಯಾವದೇನಂ ಸಂಭಾವಯಾಮಿ” (ಪು. ೪೩೫). ಗಾಳಿಗೆ ಹೊಯ್ದಾಡುತ್ತಿರುವ ಕೇಸರತರುವಿನ ಚಿಗುರುಗಳು ತಮಗೆ ನೀರೆರೆಯಬೇಕೆಂದು ಅವಳನ್ನು ತ್ವರೆಗೊಳಿಸುವಂತಿವೆಯಂತೆ! ಹೀಗಾಗಿ ಅವಳು ಈ ಮರವನ್ನು ಬಲುಬೇಗನೆ ಆದರಿಸಬೇಕು. ಶಕುಂತಲೆ ಇಂಥವಳಾದ ಕಾರಣದಿಂದಲೇ ಆಕೆಯನ್ನು ಗಂಡನೆಡೆಗೆ ಕಳುಹಿಸಿಕೊಡುವಾಗ ಕಣ್ವಮಹರ್ಷಿಗಳು ಆಶ್ರಮದ ಮರ-ಗಿಡಗಳಿಂದ ಮೊತ್ತಮೊದಲು ಅಪ್ಪಣೆಯನ್ನು ಬೇಡುತ್ತಾರೆ. ತಾನು ಗಿಡ-ಮರಗಳಿಗೆ ನೀರೆರೆದಲ್ಲದೆ ತನ್ನ ನೀರಡಿಕೆಯನ್ನು ಹಿಂಗಿಸಿಕೊಳ್ಳುತ್ತಿರಲಿಲ್ಲ; ಸಿಂಗರದ ಬಯಕೆ ಅದೆಷ್ಟಿದ್ದರೂ ತರು-ಲತೆಗಳಿಗೆ ನೋವಾದೀತೆಂದು ತಾನು ಒಂದೇ ಒಂದು ಗಿಡದ ಚಿಗುರನ್ನೂ ಮುರಿದು ಮುಡಿದುಕೊಳ್ಳುತ್ತಿರಲಿಲ್ಲ; ಆಶ್ರಮದ ಈ ಸಸ್ಯಲೋಕ ಚಿಗುರಿದಾಗ, ಮಲರಿದಾಗ, ಹಣ್ಣುಗಳನ್ನು ತಳೆದಾಗ ತನಗೊಂದು ಉತ್ಸವವೇ ಆದಂತೆ ಹಿಗ್ಗುತ್ತಿದ್ದಳು. ಇಂಥ ಶಕುಂತಲೆ ಕಾಡನ್ನು ಬಿಟ್ಟು ನಾಡಿಗೆ ತೆರಳುವಾಗ ವನವಾಸಿಗಳೆಲ್ಲವುಗಳ ಅನುಜ್ಞೆಯಿಲ್ಲದಿದ್ದರೆ ಹೋಗುವುದಾದಾರೂ ಹೇಗೆ?
ಪಾತುಂ ನ ಪ್ರಥಮಂ ವ್ಯವಸ್ಯತಿ ಜಲಂ ಯುಷ್ಮಾಸ್ವಪೀತೇಷು ಯಾ
ನಾದತ್ತೇ ಪ್ರಿಯಮಂಡನಾಪಿ ಭವತಃ ಸ್ನೇಹೇನ ಯಾ ಪಲ್ಲವಮ್ |
ಆದ್ಯೇ ವಃ ಕುಸುಮಪ್ರಸೂತಿಸಮಯೇ ಯಸ್ಯಾ ಭವತ್ಯುತ್ಸವಃ
ಸೇಯಂ ಯಾತಿ ಶಕುಂತಲಾ ಪತಿಗೃಹಂ ಸರ್ವೈರನುಜ್ಞಾಯತಾಮ್ || (೪.೯)
ಇದಕ್ಕೆ ಮೂಕ ಸಸ್ಯಸಂಕುಲ ವ್ಯಕ್ತವಾಗಿ ಉತ್ತರವನ್ನು ನೀಡುವುದಾದರೂ ಹೇಗೆ? ಅದಕ್ಕಾಗಿಯೇ ಅವು ತಮ್ಮ ಚಿಗುರುಗಳನ್ನು ಮೆದ್ದು ಮಕರಂದವನ್ನು ಸವಿದು ಸೊಕ್ಕಿದ ಕೋಗಿಲೆಯ ಕುಕಿಲನ್ನು ತಮ್ಮ ಅನುಮತಿಯ ದನಿಯನ್ನಾಗಿ ಮಾಡಿಕೊಂಡುವಂತೆ:
ಅನುಮಾತಗಮನಾ ಶಕುಂತಲಾ
ತರುಭಿರಿಯಂ ವನವಾಸಬಂಧುಭಿಃ |
ಪರಭೃತವಿರುತಂ ಕಲಂ ಯಥಾ
ಪ್ರತಿವಚನೀಕೃತಮೇಭಿರೀದೃಶಮ್ || (೪.೧೦)
ಇದೂ ಸಾಲದೆಂದು ಭಾವಿಸಿದ ವನದೇವತೆಗಳು ಶಕುಂತಲೆಯ ಹಾದಿ ಕೆಂದಾವರೆಗಳ ಕೊಳಗಳಿಂದ, ತಣ್ನೆಳಲಿನ ಮರಗಳಿಂದ, ತಂಬೆಲರಿನ ಸುಳಿವಿನಿಂದ, ಹೂದೂಳಿನ ಹಾಸಿನಿಂದ ಸೊಗಸಾಗಲೆಂದು ಅಶರೀರವಾಣಿಯ ಮೂಲಕ ಹಾರೈಸಿದುವಂತೆ!
ರಮ್ಯಾಂತರಃ ಕಮಲಿನೀಹರಿತೈಃ ಸರೋಭಿ-
ಶ್ಛಾಯಾದ್ರುಮೈರ್ನಿಯಮಿತಾರ್ಕಮಯೂಖತಾಪಃ |
ಭೂಯಾತ್ಕುಶೇಶಯರಜೋಮೃದುರೇಣುರಸ್ಯಾಃ
ಶಾಂತಾನುಕೂಲಪವನಶ್ಚ ಶಿವಶ್ಚ ಪಂಥಾಃ || (೪.೧೧)
ಇದನ್ನು ಆಲಿಸಿದ ವೃದ್ಧತಾಪಸಿ ಗೌತಮಿಯು ಈ ಅಶರೀರವಾಣಿಯು ಅಕ್ಕರೆಯ ಮನೆಯ ಹಿರಿಯರಂತಿರುವ ತಪೋವನದ ದೇವತೆಗಳ ಅನುಮತಿಯೆಂದೇ ಸಾರುತ್ತಾಳೆ: “ಜ್ಞಾತಿಜನಸ್ನಿಗ್ಧಾಭಿರನುಜ್ಞಾತಾಸಿ ತಪೋವನದೇವತಾಭಿಃ” (ಶಾಕುಂತಲ, ಪು. ೪೮೭). ಹೀಗೆ ಹೊರಟ ಶಕುಂತಲೆಯ ವಿಯೋಗದುಃಖವನ್ನು ತಾಳಲಾಗದ ತರು-ಲತೆಗಳು ಕಂಬನಿ ಮಿಡಿಯುವಂತೆ ಹಣ್ಣೆಲೆಗಳನ್ನು ಉದುರಿಸಿದವೆಂದು ಪ್ರಿಯಂವದೆ ಹೇಳುತ್ತಾಳೆ:
ಅಪಸೃತಪಾಂಡುಪತ್ರಾ ಮುಂಚಂತ್ಯಶ್ರೂಣೀವ ಲತಾಃ | (೪.೧೨)
ಇದಕ್ಕೆ ಸಂವಾದಿಯಾದ ಚಿತ್ರಣವನ್ನು ರಘುವಂಶದ ಸೀತಾಪರಿತ್ಯಾಗಪ್ರಸಂಗದಲ್ಲಿಯೂ ಕಾಣಬಹುದು. ಕಾಡುಪಾಲಾದ ಸೀತೆಯನ್ನು ಕಂಡು ಹೂಗಳನ್ನು ಸುರಿಸುವ ಮೂಲಕ ಮರಗಳೂ ಸಹಾನುಭೂತಿಯನ್ನು ಸೂಚಿಸಿದುವಂತೆ: “ಕುಸುಮಾನಿ ವೃಕ್ಷಾಃ ... ವಿಜಹುಃ” (೧೪.೬೯).
ತಾನು ನಿಡುಗಾಲದಿಂದಲೂ ಒಡಹುಟ್ಟಿದ ಅಕ್ಕನಂತೆ ಅಕ್ಕರೆಯಿಂದ ಬೆಳಸಿದ ಮಲ್ಲಿಗೆಯ ಬಳ್ಳಿ ‘ವನಜ್ಯೋತ್ಸ್ನೆ’ಗೆ ವಿದಾಯ ಹೇಳಲು ಶಕುಂತಲೆ ಹೋಗುತ್ತಾಳೆ: “ಲತಾಭಗಿನೀಂ ವನಜ್ಯೋತ್ಸ್ನಾಂ ತಾವದಾಮಂತ್ರಯಿಷ್ಯೇ” (ಪು. ೪೮೮). ಇದನ್ನು ಕಣ್ವರು ಚೆನ್ನಾಗಿ ಬಲ್ಲರು: “ಅವೈಮಿ ತೇ ತಸ್ಯಾಃ ಸೋದರಸ್ನೇಹಮ್” ಎಂದು ಒಕ್ಕಣಿಸುತ್ತಾರೆ (ಪು. ೪೮೮).
ವಸ್ತುತಃ ಶಕುಂತಲೆ ಈ ಮಲ್ಲಿಗೆಯ ಬಳ್ಳಿಗೆ ‘ವನಜ್ಯೋತ್ಸ್ನೆ’ (ಬನದ ಬೆಳ್ದಿಂಗಳು) ಎಂಬ ಹೆಸರನ್ನು ತಾನೇ ಇಟ್ಟದ್ದಲ್ಲದೆ ಅದಕ್ಕೆ ಹತ್ತಿರದಲ್ಲಿಯೇ ಇರುವ ಮಾವಿನ ಮರದೊಡನೆ ಮದುವೆಯನ್ನೂ ಮಾಡಿ ನಲಿದಿರುತ್ತಾಳೆ. ಹೀಗೆ ಮರ-ಗಿಡಗಳಿಗೂ ಮುಂಜಿ-ಮದುವೆ-ನಾಮಕರಣಗಳಂಥ ಸಂಸ್ಕಾರಗಳನ್ನು ಮಾಡುವ ಸಂಸ್ಕೃತಿ ಸನಾತನಧರ್ಮಕ್ಕೇ ವಿಶಿಷ್ಟವಾದುದುದು. ನಮ್ಮ ಪರಂಪರೆಯಲ್ಲಿರುವ ಬೇವು-ಅರಳಿಮರಗಳ ಮದುವೆ, ಅಶ್ವತ್ಥಕ್ಕೆ ಉಪನಯನ, ತುಳಸೀ-ಧಾತ್ರಿಯರ ವಿವಾಹ ಮುಂತಾದ ಹತ್ತಾರು ಆಚರಣೆಗಳನ್ನು ನಾವಿಲ್ಲಿ ನೆನೆಯಬಹುದು.
ಮಾವಿನ ಮರಕ್ಕೆ ಸುತ್ತಿಕೊಂಡು ಬೆಳೆದ ಮಲ್ಲಿಗೆಯ ಬಳ್ಳಿ ನಲ್ಲನನ್ನು ಅಪ್ಪಿದ ನಲ್ಲೆಯಂತೆ ಶಕುಂತಲೆಗೆ ತೋರುತ್ತದೆ. ಅದನ್ನು ತಾನೂ ಅಪ್ಪಿಕೊಂಡು ಅದರ ಎಳೆಯ ಕುಡಿಗಳ ಆಲಿಂಗನವನ್ನೂ ಅನುಭವಿಸಿದ ಆಕೆ ಅಶ್ರುಮುಖಿಯಾಗಿ ವಿದಾಯ ಹೇಳುತ್ತಾಳೆ: “ವನಜ್ಯೋತ್ಸ್ನೇ, ಚೂತಸಂಗತಾಪಿ ಮಾಂ ಪ್ರತ್ಯಾಲಿಂಗ ಇತೋಗತಾಭಿಃ ಶಾಖಾಬಾಹಾಭಿಃ. ಅದ್ಯಪ್ರಭೃತಿ ದೂರವರ್ತಿನೀ ಭವಿಷ್ಯಾಮಿ.” (ಪು. ೪೮೮)
ಇದನ್ನು ಗಮನಿಸಿದ ಕಣ್ವರು ಹೇಗೆ ಆ ಮಲ್ಲಿಗೆಯ ಬಳ್ಳಿ ತನಗೆ ಅನುರೂಪವಾದ ಮಾವಿನ ಮರಕ್ಕೆ ಹಬ್ಬಿಕೊಂಡು ಒಳ್ಳೆಯ ದಾಂಪತ್ಯವನ್ನು ಗಳಿಸಿತೋ ಹಾಗೆಯೇ ಶಕುಂತಲೆ ಕೂಡ ಇದೀಗ ದುಷ್ಯಂತನನ್ನು ವರಿಸಿ ತನಗೆ ನೆಮ್ಮದಿ ತಂದಳೆಂದು ನುಡಿಯುತ್ತಾರೆ. ಆಶ್ರಮವಾಸಿಗಳೆಲ್ಲ ಪ್ರಕೃತಿಯನ್ನೂ ಅಲ್ಲಿಯ ಎಲ್ಲ ಜೀವಿಗಳನ್ನೂ ತಮ್ಮ ಬಾಳಿನ ಅವಿಭಾಜ್ಯ ಅಂಗಗಳೆಂದು ಭಾವಿಸಿರುವುದಲ್ಲದೆ ಅವುಗಳ ಬದುಕಿನ ಆಗುಹೋಗುಗಳೆಲ್ಲ ತಮ್ಮ ಜೀವನಕ್ಕೂ ಸಂವಾದಿಯೆಂದು ಅರಿತು ಅನುಭವಿಸಿದ ದಿವ್ಯಧ್ವನಿ ಇಲ್ಲಿದೆ. ಇದು ಕಾಳಿದಾಸನ ದರ್ಶನವಷ್ಟೇ ಅಲ್ಲ, ಆರ್ಷಸಂಸ್ಕೃತಿಯ ಸಾರವೂ ಹೌದು:
ಸಂಕಲ್ಪಿತಂ ಪ್ರಥಮಮೇವ ಮಯಾ ತ್ವದರ್ಥೇ
ಭರ್ತಾರಮಾತ್ಮಸದೃಶಂ ಸುಕೃತೈರ್ಗತಾ ತ್ವಮ್ |
ಚೂತೇನ ಸಂಶ್ರಿತವತೀ ನವಮಾಲಿಕೇಯ-
ಮಸ್ಯಾಮಹಂ ತ್ವಯಿ ಚ ಸಂಪ್ರತಿ ವೀತಚಿಂತಃ || (೪.೧೩)
ಹೀಗೆ ತಮ್ಮೆಲ್ಲರ ಪ್ರೀತಿಗೆ ಪಾತ್ರಳಾದ ಶಕುಂತಲೆ ತನ್ನ ಗಂಡನ ಮನೆಗೆ ನಿರಾಭರಣಸುಂದರಿಯಾಗಿ ಹೋಗುವುದನ್ನು ಆ ಗಿಡ-ಮರಗಳು ಒಪ್ಪದೆ ಅವಳಿಗಾಗಿ ಎಲ್ಲ ಬಗೆಯ ಉಡುಗೆ-ತೊಡುಗೆಗಳನ್ನೂ ಅಂಗರಾಗ-ಆಲಕ್ತಕಗಳನ್ನೂ ತಮ್ಮ ತಮ್ಮ ಕೊಂಬೆಗೈಗಳಿಂದ ಎತ್ತೆತ್ತಿ ಕೊಟ್ಟುವೆಂಬ ಮಾತನ್ನೂ ಕವಿಕುಲಗುರು ಆಡಿದ್ದಾನೆ:
ಕ್ಷೌಮಂ ಕೇನಚಿದಿಂದುಪಾಂಡು ತರುಣಾ ಮಾಂಗಲ್ಯಮಾವಿಷ್ಕೃತಂ
ನಿಷ್ಠ್ಯೂತಶ್ಚರಣೋಪಭೋಗಸುಲಭೋ ಲಾಕ್ಷಾರಸಃ ಕೇನಚಿತ್ |
ಅನ್ಯೇಭ್ಯೋ ವನದೇವತಾಕರತಲೈರಾಪರ್ವಭಾಗೋತ್ಥಿತೈ-
ರ್ದತ್ತಾನ್ಯಾಭರಣಾನಿ ತತ್ಕಿಸಲಯೋದ್ಭೇದಪ್ರತಿದ್ವಂದ್ವಿಭಿಃ || (೪.೫)
ಹೀಗೆ ಪತಿಗೃಹಕ್ಕೆ ತೆರಳಿದ ಶಕುಂತಲೆ ದೈವದುರ್ವಿಪಾಕದ ಫಲವಾಗಿ ದುಷ್ಯಂತನಿಂದ ನಿರಾಕೃತೆಯಾಗುತ್ತಾಳೆ; ಅಭಿಜ್ಞಾನದ ಉಂಗುರ ಸಿಕ್ಕ ಬಳಿಕ ಅವನು ತನ್ನ ಅವಿವೇಕಕ್ಕಾಗಿ ಹಳಹಳಿಸಿಕೊಳ್ಳುತ್ತಾನೆ; ತನ್ನ ಅರಮನೆಯಲ್ಲಿ ವಸಂತೋತ್ಸವವನ್ನೂ ಪ್ರತಿಷೇಧಿಸುತ್ತಾನೆ. ಅದನ್ನು ಕುರಿತು ಅವನ ಅಂತಃಪುರದ ಮೇಲ್ವಿಚಾರಕ ವೃದ್ಧ ಕಂಚುಕಿಯು ವನಪಾಲಿಕೆಯರಿಗೆ ವಿವರಿಸುತ್ತ ದುಷ್ಯಂತನಂಥ ಧಾರ್ಮಿಕ ಪ್ರಭುವಿನ ಆಜ್ಞೆ ಎಂಥದ್ದೆಂದರೆ ವಸಂತರ್ತುವು ಇದೀಗ ಧರೆಗಿಳಿದಿದ್ದರೂ ಇಲ್ಲಿಯ ಮಾವಿನ ಮರಗಳು ಚಿಗುರು-ಮಲರುಗಳನ್ನು ತಳೆದಿದ್ದರೂ ಅರಳಿ ಪರಾಗಧೂಳಿಯನ್ನು ಸೂಸುತ್ತಿಲ್ಲ; ಗೊರಟಿಗೆಯ ಗಿಡಗಳು ತಮ್ಮ ಮೊಗ್ಗುಗಳನ್ನಿನ್ನೂ ಮಲರಲು ಬಿಟ್ಟಿಲ್ಲ ಎಂದು ಅತಿಶಯಿಸುತ್ತಾನೆ:
ಚೂತಾನಾಂ ಚಿರನಿರ್ಗತಾಪಿ ಕಲಿಕಾ ಬಧ್ನಾತಿ ನ ಸ್ವಂ ರಜಃ
ಸನ್ನದ್ಧಂ ಯದಪಿ ಸ್ಥಿತಂ ಕುರವಕಂ ತತ್ಕೋರಕಾವಸ್ಥಯಾ | (೬.೪)
ಹೀಗೆ ‘ಅಭಿಜ್ಞಾನಶಾಕುಂತಲ’ದಲ್ಲಿ ಕಾಳಿದಾಸನ ಸಸ್ಯಪ್ರೀತಿ ವಾಸ್ತವ ಮತ್ತು ಕಲ್ಪನೆಗಳ ಎರಡು ಲೋಕಗಳನ್ನೂ ಅಂದವಾಗಿ, ಅರ್ಥಪೂರ್ಣವಾಗಿ ಬೆಸೆದಿದೆ. ಇಲ್ಲಿ ಆಚರಣೆಗಳು, ಸಂಪ್ರದಾಯಗಳು, ಜನಪದವಿಶ್ವಾಸಗಳು ಹಾಗೂ ಭಾವನಿರ್ಭರತೆಗಳೆಲ್ಲ ಸಮರಸವಾಗಿ ಸಾಹಿತ್ಯರೂಪವನ್ನು ತಾಳಿವೆ.
To be continued.