ಬಹುಮುಖತೆ
ಇನ್ನು ರಾಯರ ಕಲಾಕೌಶಲವನ್ನು ಕುರಿತು ಸ್ವಲ್ಪ ಚಿಂತಿಸಬಹುದು. ಅವರು ತಮ್ಮ ಅನೇಕ ಪುಸ್ತಕಗಳಿಗೆ ಮೂರ್ತಿಶಿಲ್ಪಗಳ ಚಿತ್ರಗಳನ್ನೂ ಕಲ್ಪಿತ ಹಾಗೂ ವಾಸ್ತವ ವ್ಯಕ್ತಿಗಳ ರೂಪಚಿತ್ರ ಮತ್ತು ಭಾವಚಿತ್ರಗಳನ್ನೂ ಬರೆದಿದ್ದಾರೆ; ವಿವಿಧ ಮಾಧ್ಯಮಗಳಲ್ಲಿ ಹಲಕೆಲವು ಶಿಲ್ಪಗಳನ್ನೂ ರೂಪಿಸಿದ್ದಾರೆ. ಎರಡು ಬಾರಿ ತಮ್ಮ ಕಲಾಕೃತಿಗಳ ಪ್ರದರ್ಶನವನ್ನೂ ಏರ್ಪಡಿಸಿದ್ದರು. ಆತ್ಮೀಯರ ಒತ್ತಾಯಕ್ಕೆ ಮಣಿದು, ಸಾಂದರ್ಭಿಕ ಒತ್ತಡಕ್ಕೆ ಓಗೊಟ್ಟು ಒಂದೆರಡು ರಂಗಪ್ರಯೋಗಗಳಿಗೆ ಹಿತಮಿತವಾದ ವೀಣಾವಾದನದ ಬೆಂಬಲವನ್ನೂ ನೀಡಿದ್ದರು.
ರಾಮಚಂದ್ರರಾಯರು ಉದ್ಯೋಗದಿಂದ ನಿಮ್ಹಾನ್ಸ್ ಸಂಸ್ಥೆಯ ಕ್ಲಿನಿಕಲ್ ಸೈಕಾಲಜಿ ವಿಭಾಗದ ಮುಖ್ಯಸ್ಥರಾಗಿ ಕೆಲವು ಕಾಲ ದುಡಿದದ್ದಲ್ಲದೆ ಹಲವು ವಿದ್ಯಾಕೇಂದ್ರಗಳಲ್ಲಿ ಮನಃಶಾಸ್ತ್ರ, ಭಾರತೀಯ ಸಂಸ್ಕೃತಿ, ದರ್ಶನಗಳು, ತೌಲನಿಕ ಮತಾಧ್ಯಯನ ಮುಂತಾದ ವಿಷಯಗಳನ್ನು ಬೋಧಿಸಿದ್ದರು. ಐ.ಐ.ಎಮ್., ನಿಯಾಸ್, ಮೈಸೂರು ವಿಶ್ವವಿದ್ಯಾನಿಲಯ ಮುಂತಾದ ಪ್ರತಿಷ್ಠಿತ ಸಂಸ್ಥೆಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿ ಅವುಗಳಿಗೆ ಬೇಕಾದ ವಿಷಯಗಳ ಮೇಲೆ ನಿಯತವಾಗಿ ಪ್ರವಚನಗಳನ್ನು ನಡಸಿ ಬರೆವಣಿಗೆಯನ್ನೂ ಮಾಡಿದ್ದರು. ಇವೆಲ್ಲ ಅವರ ಸರ್ವತೋಮುಖ ಪ್ರಜ್ಞಾವಂತಿಕೆಗೆ ಮೂರ್ತವಾದ ನಿದರ್ಶನಗಳು.
ವಿವಿಧ ಅಕಾಡೆಮಿಗಳಿಗೆ ಸದಸ್ಯರಾಗಿ, ಹಲವು ನಿಯೋಗಗಳ ಪ್ರತಿನಿಧಿಗಳಾಗಿ, ಹತ್ತಾರು ಸಾಂಸ್ಕೃತಿಕ ಮತ್ತು ಸಾಹಿತ್ಯಕ ಸಂಘಗಳಿಗೆ ಸೇರಿದವರಾಗಿ, ಅನೇಕ ರೀತಿಯ ವಿದ್ವತ್ತಾಕಾರ್ಯಗಳನ್ನು ನಿರ್ವಹಿಸಿದ ರಾಯರು ಭಾರತೀಯ ವಿದ್ಯಾಭವನ, ರಾಷ್ಟ್ರೋತ್ಥಾನ ಸಾಹಿತ್ಯ, ಇಂಡಿಯಾ ಬುಕ್ ಹೌಸ್, ಕಲ್ಪತರು ಸಂಶೋಧನ ಪ್ರತಿಷ್ಠಾನ ಮುಂತಾದ ಪ್ರಕಟನಸಂಸ್ಥೆಗಳಿಗೂ ನಾಡಿನ ವಿವಿಧ ವಿಶ್ವವಿದ್ಯಾಲಯಗಳಿಗೂ ಬರೆದುಕೊಟ್ಟ ಪುಸ್ತಕಗಳು ನೂರಾರು. ಇವಲ್ಲದೆ ಮತ್ತೆಷ್ಟೋ ಪ್ರಕಾಶಕರಿಂದ ಪ್ರಕಟಗೊಂಡ ಗ್ರಂಥಗಳು ಅನೇಕ. ಕನ್ನಡವಿಶ್ವಕೋಶವೂ ಸೇರಿದಂತೆ ಹಲವು ಆಕರಗ್ರಂಥಗಳಿಗೆ ರಾಯರು ಅಸಂಖ್ಯ ಲೇಖನಗಳನ್ನು ರಚಿಸಿದ್ದಾರೆ. ಇದನ್ನೆಲ್ಲ ಗಣಿಸಿದಾಗ ಗುಣ-ಗಾತ್ರಗಳಲ್ಲಿ, ವಿಷಯವೈವಿಧ್ಯ ಮತ್ತು ವಿಚಾರವೈಪುಲ್ಯಗಳಲ್ಲಿ ಅವರ ಸಾರಸ್ವತ ಪರಿಶ್ರಮ ಅದೆಷ್ಟು ಹುಲುಸಾಗಿ ಫಸಲನ್ನು ಕೊಟ್ಟಿದೆಯೆಂದು ವಿಸ್ಮಯವಾಗದಿರದು.
ವ್ಯಕ್ತಿಮಾಹಾತ್ಮ್ಯ
ರಾಮಚಂದ್ರರಾಯರೇನೋ ಕೃತಾತ್ಮರು, ಸುಕೃತಾತ್ಮರು. ದೊಡ್ಡದೊಂದು ವಿಶ್ವವಿದ್ಯಾಲಯ ಮಾಡಬಲ್ಲಷ್ಟು ಕೆಲಸಗಳನ್ನು ತಾವೊಬ್ಬರೇ ಮಾಡಿ ಮುಗಿಸಿದರು. ಹಾಗೆ ನೋಡಿದರೆ ವಿಶ್ವವಿದ್ಯಾಲಯಗಳಂಥ ಸಂಸ್ಥೆಗಳಿಂದ ಇಂಥ ಏಕನಿಷ್ಠೆಯ ತತ್ತ್ವಸ್ಪೃಕ್ಕಾದ ಕೆಲಸ ಆಗುವುದು ಕಷ್ಟ. ಇಂಥ ಸಂಸ್ಥೆಗಳಲ್ಲಿ ಅನೈಕಾಂತಿಕವಾದ ಎಷ್ಟೋ ನಿರ್ಬಂಧಗಳಿರುತ್ತವೆ. ದೂರದೃಷ್ಟಿಯೂ ಸ್ವೋಪಜ್ಞತೆಯೂ ಉಳ್ಳ ಕಾರ್ಯದಕ್ಷರಿಗೆ ಹೆಜ್ಜೆಹೆಜ್ಜೆಗೂ ಎಡರು-ತೊಡರುಗಳು ಅಲ್ಲಿ ಎದುರಾಗುತ್ತವೆ. ಹೀಗಾಗಿ ಒಳ್ಳೆಯ ಕೆಲಸಗಳು ವ್ಯಕ್ತಿಮಾಹಾತ್ಮ್ಯದಿಂದಲೇ ನಡೆಯಬೇಕು. ಇದಕ್ಕೆ ಗಂಗಾನಾಥ ಝಾ, ಪಿ. ವಿ. ಕಾಣೆ, ಶ್ರೀಪಾದ ದಾಮೋದರ ಸಾತವಲೇಕರ್, ವಾಸುದೇವಶರಣ ಅಗ್ರವಾಲ, ಪಿ. ಕೆ. ಗೋಡೆ, ವಿ. ರಾಘವನ್, ಪುಲ್ಲೆಲ ಶ್ರೀರಾಮಚಂದ್ರುಡು ಮುಂತಾದ ನೂರಾರು ಮಂದಿ ಮಹನೀಯರ ಉದಾಹರಣೆಗಳುಂಟು. ಇವರ ಸಾಲಿಗೆ ರಾಯರು ಸೇರುತ್ತಾರೆ.
ಈಗ ನಮ್ಮೆದುರು ಇರುವ ಪ್ರಶ್ನೆ, ಇಂಥ ಸಾರಸ್ವತ ಮೂರ್ತಿಗಳು ರೂಪಿತವಾಗಲು ಎಂಥ ಹಿನ್ನೆಲೆ ಬೇಕು, ಯಾವೆಲ್ಲ ಗುಣಗಳು ಒಟ್ಟುಗೂಡಿದರೆ ಈ ಬಗೆಯ ವಿದ್ವದವತಂಸರು ಒಡಮೂಡಿಯಾರು ಎಂಬುದು. ನಿಯತಿವಾದಿಗಳು ಹೇಳಿಯಾರು - ‘ಇಂಥ ಪುಣ್ಯಾತ್ಮರು ಉದಿಸುವುದು ಭುವನದ ಭಾಗ್ಯದಿಂದಲೇ. ಅದ್ಭುತಗಳು ಅನುದಿನವೂ ಘಟಿಸುವುದಿಲ್ಲ. ಮಾನುಷ ಯತ್ನದಿಂದ ವಿಶ್ವಾದ್ಭುತಗಳು ಮೈದಳೆಯುವುದಿಲ್ಲ. ಎಷ್ಟೇ ಆಗಲಿ, ಲೋಕವು ಅತಿಲೋಕವನ್ನು ಸೃಜಿಸಲಾಗುವುದಿಲ್ಲ’ ಎಂದು. ನಮ್ಮ ಪ್ರಯತ್ನಗಳೆಲ್ಲ ಮುಗಿದು ನಾವು ಕೈಚೆಲ್ಲಿ ಕುಳಿತಾಗ ಮಾತ್ರ ಇಂಥ ನಿಲವಿಗೆ ಬರಬಹುದು. ಅದಕ್ಕೂ ಮುನ್ನ ಹೀಗೆ ಹಳಹಳಿಸುವುದು ಸನಾತನಧರ್ಮದ ಜೀವನಾಡಿಯಾದ ಕರ್ಮಯೋಗಕ್ಕೆ ಒಗ್ಗುವುದಿಲ್ಲ.
ನಮ್ಮಲ್ಲಿ ಸಾರ್ವಪಾರ್ಷದರೂ ಸರ್ವತಂತ್ರಸ್ವತಂತ್ರರೂ ಇರುವಂತೆ ಪಾಶ್ಚಾತ್ತ್ಯ ಜಗತ್ತಿನಲ್ಲಿ ‘ರಿನೈಸಾನ್ಸ್ ಮ್ಯಾನ್’ ಎಂಬ ಪರಿಕಲ್ಪನೆ ಉಂಟು. ದೈವವಾದದ ಕುರುಡುನಂಬಿಕೆಯ ಸಂಕಲೆಗಳನ್ನು ಕಳಚಿಕೊಂಡು ಇಡಿಯ ಯೂರೋಪ್ ಪೌರುಷಪಾರಮ್ಯದ ಹೊಸ ಹುರುಪನ್ನು ಮೈದಳೆದಾಗ ಉದಿಸಿದ್ದು ಪುನರುತ್ಥಾನಯುಗ. ಇದೇ ರಿನೈಸಾನ್ಸ್. ಜ್ಞಾನ-ವಿಜ್ಞಾನಗಳ, ಕಲೆ-ಸಾಹಿತ್ಯಗಳ ಎಲ್ಲ ಮುಖಗಳೂ ಕಳೆಗೊಂಡು ಹೊಸ ಬೆಳಕನ್ನು ಕಂಡ ಈ ಹೊತ್ತಿನಲ್ಲಿ ಇದಕ್ಕೆ ಕಾರಣರಾದ ಹಲಕೆಲವು ಮಹನೀಯರ ವ್ಯಕ್ತಿತ್ವವನ್ನು ಈ ಯುಗದ ವಾಚಕದಿಂದಲೇ ಗುರುತಿಸಿ ಆದರಿಸಿದ್ದಾರೆ. ಆ ಕಾಲದ ಲಿಯಾನ್ ಬತಿಸ್ತ ಆಲ್‌ಬರ್ತಿ, ಲಿಯೊನಾರ್ದೊ ದ ವಿಂಚಿ, ನಿಕೊಲೊ ಮ್ಯಾಕಿಯವೆಲ್ಲಿ ಮುಂತಾದವರು ಏಕಕಾಲದಲ್ಲಿ ಕವಿಗಳಾಗಿ, ಕಲಾವಿದರಾಗಿ, ವ್ಯಾಕರಣ, ರಾಜನೀತಿ, ಯಂತ್ರಶಿಲ್ಪ, ಜೀವಶಾಸ್ತ್ರ ಮುಂತಾದ ವಿದ್ಯೆಗಳಲ್ಲಿ ಕೋವಿದರಾಗಿ ಅನುಪಮ ಕಲಾಕೃತಿಗಳನ್ನು ನೀಡಿದರೆಂದೂ ಮಾರ್ಗದರ್ಶಿಯಾದ ಸಂಶೋಧನೆಗಳನ್ನು ಮಾಡಿದರೆಂದೂ ಇತಿಹಾಸ ಹೇಳುತ್ತಿದೆ. ಇಂಥ ಮಹಾಸಾಧಕರು ಕಾಲಕಾಲಕ್ಕೆ ಆವಿರ್ಭವಿಸದಿದ್ದರೆ ಜಗತ್ತಿಗಾದರೂ ಬಾಳುವೆ ಹೇಗೆ? ಈ ಪ್ರಶ್ನೆಯನ್ನು ಚರ್ಚಿಸಿದರೆ ಗಟ್ಟಿಯಾದ ಪರಿಹಾರ ಸಿಕ್ಕದಿದ್ದರೂ ನಿಸ್ತಾರದ ಕಾಲುದಾರಿಯಾದರೂ ಕಂಡೀತು.
ಗುಣ-ಧರ್ಮಗಳು
ಈ ಎಲ್ಲ ಮಹನೀಯರಲ್ಲಿ ಎದ್ದುಕಾಣುವ ಅಂಶವೆಂದರೆ ಪ್ರತಿಭೆ. ಇದು ನಿಜಕ್ಕೂ ಅಚಿಂತ್ಯ, ಅತಿಮಾನುಷ. ಪ್ರತಿಭೆಯನ್ನು ಯಾರೂ ಯಾರಲ್ಲಿಯೂ ತುಂಬಿಕೊಡಲಾರರು. ಆದರೆ ಇರುವ ಪ್ರತಿಭೆಯನ್ನು ಬೆಳೆಸುವ, ಬೆಳಗಿಸುವ, ವ್ಯವಸ್ಥಾಪಿಸುವ ಪ್ರಕಲ್ಪಗಳನ್ನು ಸರ್ವಥಾ ಕೈಗೊಳ್ಳಬಹುದು. ಈ ನಿಟ್ಟಿನಲ್ಲಿ ಕಲಿಕೆ ಮತ್ತು ಅಭ್ಯಾಸಗಳಿಗೆ ಎಲ್ಲಿಲ್ಲದ ಬೆಲೆಯುಂಟು. ನಮ್ಮ ಆಲಂಕಾರಿಕರೆಲ್ಲ ಪ್ರತಿಭೆಗೆ ಪೂರಕವಾಗಿ ಮೇಲಿನ ಎರಡು ಅಂಶಗಳನ್ನೇ ಒಕ್ಕಣಿಸಿದ್ದಾರೆ. ಇವುಗಳೊಟ್ಟಿಗೆ ಜಗಜ್ಜೀವನದಲ್ಲಿ ಗಾಢವಾಗಿ ಮುಳುಗುವ, ಹಾಗೆ ಮುಳುಗಿದರೂ ಮಿಂಚುಳ್ಳಿಯಂತೆ ಮೇಲೆದ್ದು ನೆಗೆಯುವ ಸತ್ತ್ವ ಅವರಲ್ಲಿರುತ್ತದೆ. ಇವನ್ನು ನಮ್ಮ ಕವಿವರ್ಯ ಪು.ತಿ.ನ. ಅವರ ಮಾತಿನಲ್ಲಿ ‘ಭವನಿಮಜ್ಜನಚಾತುರ್ಯ’ ಮತ್ತು ‘ಲಘಿಮಕೌಶಲ’ ಎನ್ನಬಹುದು. ಇವು ಜಡ-ಜೀವಗಳೆಂಬ ಭೇದವಿರದೆ ಸಮಗ್ರ ಪ್ರಕೃತಿಯನ್ನು ಸಂಯಮ-ಸಹಾನುಭೂತಿಗಳಿಂದ ನೋಡುವ ಶಕ್ತಿಯನ್ನು ತುಂಬಿಕೊಡುತ್ತವೆ. ಈ ಸಂಸ್ಕಾರ ಸಹಜವಾಗಿಯೇ ನಮ್ಮನ್ನು ನಮ್ಮೊಳಗೆ ಸರಿಯುವಂತೆ ಮಾಡುತ್ತದೆ. ಇದೇ ತತ್ತ್ವಚಿಂತನೆಗೆ ಬೇಕಿರುವ ಪ್ರಮುಖ ಸಾಧನ. ಈ ಏಣಿಯನ್ನು ಹಿಡಿದು ಹತ್ತಿದರೆ ದರ್ಶನಶಾಸ್ತçಗಳ ಬೇರೆ ಬೇರೆ ಅಂತಸ್ತುಗಳು ನಮ್ಮ ಕೈಗೆಟುಕುತ್ತವೆ. ಒಳನಡೆ-ಮೇಲ್ನಡೆಗಳ ಈ ಪಯಣ ವಿಶಾಲ ವಿಶ್ವದ ನೇಪಥ್ಯದಲ್ಲಿ, ಸಹಜೀವಿಗಳ ಒಡನಾಟದಲ್ಲಿ ನಮ್ಮ ಒಳ-ಹೊರಗುಗಳನ್ನು ನಿಚ್ಚಳವಾಗಿ ನೋಡುವಂತೆ ಮಾಡುತ್ತದೆ. ಒಳಗೆ ಬಂದರೆ ಜ್ಞಾನ, ಹೊರಗೆ ಹೋದರೆ ವಿಜ್ಞಾನ. ವಿಶಿಷ್ಟವಾದ ಎಲ್ಲ ಬಗೆಯ ಜ್ಞಾನವೂ ವಿಜ್ಞಾನ ತಾನೆ? ವಿಜ್ಞಾನ ಪ್ರತ್ಯಕ್ಷಪ್ರಮಾಣದ ಮೇಲೆ ನಿಂತರೆ ಜ್ಞಾನ ಅಪರೋಕ್ಷಪ್ರಮಾಣದ ಮೇಲೆ ನಿಲ್ಲುತ್ತದೆ. ಈ ಅಪರೋಕ್ಷಪ್ರಮಾಣದ ಪರಮಲಕ್ಷ್ಯವೇ ಆತ್ಮಜ್ಞಾನ. ಈ ನಿಟ್ಟಿನ ಒಂದು ಗಣ್ಯವಾದ ಮಜಲೇ ಕಲೆ-ಸಾಹಿತ್ಯಗಳು.
ಮೇಲೆ ಕಾಣಿಸಿದ ವಿಕಾಸಕ್ಕೆ ಅಣಿಯಾಗಲು ನಾವು ನಮ್ಮ ಸ್ವಧರ್ಮವನ್ನು ಕಂಡುಕೊಳ್ಳಬೇಕು. ಇದು ನಮ್ಮ ಕೆಲಸಗಳಲ್ಲಿ ಶ್ರಮ ಕಾಣದಂತೆ ಮಾಡುತ್ತದೆ. ಈ ಅನುಕೂಲತೆ ಸಹಜವಾಗಿಯೇ ಕಾರ್ಯಸಮೃದ್ಧಿ ಮತ್ತು ಕರ್ಮಕೌಶಲಗಳನ್ನು ಒದಗಿಸುತ್ತದೆ. ಇಂಥ ದುಡಿಮೆ ಎಲ್ಲಿಯೂ ಆಯಾ ವಿದ್ಯೆಗಳ ತಿರುಳನ್ನು ತತ್‌ಕ್ಷಣ ಕಾಣುವಂತೆ ಮಾಡುತ್ತದೆ. ಇದೇ ಶಾಸ್ತ್ರಸದ್ಭಾವದ ಅರಿವು. ಈ ತಿಳಿವನ್ನು ಗಳಿಸಿದಾತ ತನ್ನ ನಡೆ-ನುಡಿಗಳಲ್ಲಿ ಒಪ್ಪ-ಓರಣಗಳನ್ನು ಗಳಿಸಿಕೊಳ್ಳುತ್ತಾನೆ; ಹದ-ಹಾಳತಗಳನ್ನು ಪಾಲಿಸುತ್ತಾನೆ. ಹೀಗೆ ಪಕ್ವಗೊಂಡವರು ಜ್ಞಾನದ ಮೇಲಣ ಆದರದಿಂದ, ಸುತ್ತಣ ಜಗತ್ತಿನ ಮೇಲಣ ಅಕ್ಕರೆಯಿಂದ ದುಡಿಯುವರಲ್ಲದೆ ತಮ್ಮ ಸ್ವಾರ್ಥಕ್ಕಾಗಿ ಹೆಣಗುವ ಹಂತಕ್ಕೆ ಇಳಿಯುವುದಿಲ್ಲ.
ಯಾವುದೇ ಸಮಾಜದ ಹಿರಿಮೆ-ಗರಿಮೆಗಳು ಸಿದ್ಧಿಸುವುದು ರಾಮಚಂದ್ರರಾಯರಂಥ ಸಾರ್ವಪಾರ್ಷದರಿಂದಲೇ ಹೊರತು ಔಪಭೋಗಿಕ ಸಮೃದ್ಧಿಯಿಂದ ಅಲ್ಲ.
ಪ್ರಯೋಜನ, ಉಪಕಾರ
ಲೋಕ ಬಲುಮಟ್ಟಿಗೆ ಸಾಗುವುದು ಗತಾನುಗತಿಕವಾಗಿ. ಭೌತಶಾಸ್ತ್ರದ ಪರಿಭಾಷೆಯಲ್ಲಿ ಹೇಳುವುದಾದರೆ, ಅದರ ನಡಿಗೆ ಒಂದು ‘ಸ್ಕೇಲರ್ ಕ್ವಾಂಟಿಟಿ.’ ಅಂದರೆ, ದಿಕ್ಕಿಲ್ಲದ ಗತಿ. ಸಾರ್ವಪಾರ್ಷದರು ಇದಕ್ಕೆ ಗೊತ್ತು-ಗುರಿಗಳನ್ನು, ನೆಲೆ-ಬೆಲೆಗಳನ್ನು ಹವಣಿಸಿಕೊಡುತ್ತಾರೆ. ಆ ಮೂಲಕ ಜಗದ ಗತಿ ಒಂದು ‘ವೆಕ್ಟರ್ ಕ್ವಾಂಟಿಟಿ’ ಆಗುತ್ತದೆ. ಗತಿಯನ್ನು ಪ್ರಗತಿಯನ್ನಾಗಿಸಿ, ಪ್ರಗತಿಯನ್ನು ಪರಿಪಾಕವನ್ನಾಗಿಸುವ ಕ್ರಮವೇ ಇದು. ಒಂದು ಮಾತಿನಲ್ಲಿ ಹೇಳುವುದಾದರೆ, ತಥ್ಯಗಳಲ್ಲಿ ತೊಳಲುವ ಜೀವ ಮೌಲ್ಯಗಳಲ್ಲಿ ನೆಮ್ಮದಿ ಕಾಣುವಂತೆ ಆಗುತ್ತದೆ. ಇದು ವಿಶಾಲವಾದ ನೆಲೆಯ ಚಿತ್ರ.
ಅನುದಿನದ ಬದುಕಿನಲ್ಲಿ ಕೂಡ ಸಾರ್ವಪಾರ್ಷದರ ಉಪಕಾರ ದೊಡ್ಡದು. ಅವರು ಸಮಾಜದ ಆಗು-ಹೋಗುಗಳಲ್ಲಿ ತಲೆದೋರುವ ಏರಿಳಿತಗಳನ್ನು ಗಮನಿಸಿ ದೀನರಿಗೆ ಸಾಂತ್ವನ ಹೇಳುತ್ತಾರೆ, ದುಷ್ಟರಿಗೆ ಎಚ್ಚರಿಕೆ ನೀಡುತ್ತಾರೆ, ಉತ್ಸಾಹಿಗಳಿಗೆ ರಚನಾತ್ಮಕ ಮಾರ್ಗವನ್ನು ಕಾಣಿಸುತ್ತಾರೆ. ತೈತ್ತಿರೀಯೋಪನಿಷತ್ತು ಇಂಥವರನ್ನೇ ‘ಯುಕ್ತ’ರೆಂದು ಹೇಳಿದೆ. ಪತಂಜಲಿ ಮುನಿಗಳ ಮಹಾಭಾಷ್ಯ ‘ಶಿಷ್ಟ’ರೆಂದು ಗುರುತಿಸಿರುವುದು ಇವರನ್ನೇ. ಹೂರಣಕ್ಕಿಂತ ತೋರಣವೇ ಹೆಚ್ಚಾದ ಮಂದಿಯಿಂದ ಜನಸಾಮಾನ್ಯರು ಭ್ರಮೆಗೊಂಡಾಗ ದಿಟದ ನೆಲೆ ಯಾವುದೆಂದು ಅತ್ತ ನಡೆದು ತೋರಿಸುವವರು ಸಾರ್ವಪಾರ್ಷದರು.
ಎಂದೇ ಆಗಿರಲಿ, ಎಲ್ಲಿಯೇ ಆಗಿರಲಿ, ಜನಸಾಮಾನ್ಯರಿಗೆ ಎಲ್ಲ ವಿಷಯಗಳ ಎಲ್ಲ ವಿವರಗಳೂ ಬೇಕಾಗುವುದಿಲ್ಲ. ಇವನ್ನು ತಿಳಿದುಕೊಳ್ಳುವ ಶಕ್ತಿಯಾಗಲಿ, ಸಾಮರ್ಥ್ಯವಾಗಲಿ ಅವರಿಗೆ ಕಡಮೆ ಕೂಡ. ಅಷ್ಟೇಕೆ, ಇಂಥ ಹೆಚ್ಚಿನ ವಿವರಗಳನ್ನು ತಿಳಿದರೆ ಅವರಿಗೆ ಉಪಕಾರಕ್ಕಿಂತ ಅಪಕಾರವೇ ಹೆಚ್ಚು! ಈ ವಿವೇಕ ನಮ್ಮ ಹಿಂದಿನವರಿಗಿದ್ದಿತು. ಆಗಿನ ಕಾಲವೂ ಇದಕ್ಕೆ ಅನುಕೂಲವಾಗಿತ್ತು. ಆದರೆ ಈಗ ಹಾಗಲ್ಲ. ವಿಜ್ಞಾನ-ತಂತ್ರಜ್ಞಾನಗಳ ಮೂಲಕ ದೇಶ-ಕಾಲಗಳ ಅಡೆ-ತಡೆಗಳು ಇಲ್ಲವಾಗುತ್ತಿವೆ; ಈ ಮೂಲಕ ಜಗತ್ತು ಕಿರಿದಾಗುತ್ತಿದೆ. ಜೊತೆಗೆ ಸಮಾನತೆ, ಹೇತುವಾದ, ಪ್ರಜಾಪ್ರಭುತ್ವ ಮುಂತಾದ ಮೌಲ್ಯಗಳ ಕಾರಣ ಎಲ್ಲರೂ ಎಲ್ಲವನ್ನೂ ತಿಳಿದುಕೊಳ್ಳಬೇಕೆಂಬ ಒತ್ತಡ ಹೆಚ್ಚಾಗುತ್ತಿದೆ. ಆದರೆ ಮನುಷ್ಯ ಮೂಲತಃ ಇರುವುದು ಎಂದಿನಿಂದಲೂ ಒಂದೇ ರೀತಿ: ‘ಇದ್ದಿದ್ರಲ್ ಹಾಯಾಗಿ, ನಮ್ಮಷ್ಟಕ್ ನಾವಾಗಿ!’ ಇಂಥ ಸಹಜ ಸ್ಥಿತಿಗೆ ಈ ಹೊತ್ತಿನ ಒತ್ತಡಗಳು ತಮ್ಮ ಉಪಯೋಗಗಳ ನಡುವೆಯೂ ತೊಂದರೆಗಳನ್ನು ಹೆಚ್ಚಾಗಿ ತರುತ್ತಿವೆ. ಇವನ್ನು ಕೆಲಮಟ್ಟಿಗಾದರೂ ಪರಿಹರಿಸಬಲ್ಲವರು ಸಾರ್ವಪಾರ್ಷದರು. ಅವರು ‘ಸ್ಪೆಷಲಿಸ್ಟ್ಸ್’ ಎಂದು ಹೆಸರಾದ ಆಯಾ ವಿಷಯಗಳ ತಜ್ಞರಿಗೂ ‘ಮಾಸಸ್’ ಎಂದು ಗುರುತಿಸಲ್ಪಟ್ಟ ಸಾಮಾನ್ಯರಿಗೂ ಸೇತುವೆಯಾಗಿ ನಿಲ್ಲುತ್ತಾರೆ. ವಿವಿಧ ವಿಷಯಗಳ ತಜ್ಞರು ಏಕದೇಶೀಯವಾಗಿ ನಡಸಿದ ಚಿಂತನೆ-ಪ್ರಯೋಗಗಳ ಸಾರಾಸಾರಗಳನ್ನು ಮಥಿಸಿ ನವನೀತವನ್ನು ತಿಳಿಯಾದ ನುಡಿಯಲ್ಲಿ, ಅಡಕವಾದ ರೀತಿಯಲ್ಲಿ ಆಸ್ಥೆ-ಅನುನಯಗಳಿಂದ ಜಗತ್ತಿಗೆ ತಿಳಿಸುತ್ತಾರೆ. ಜೊತೆಗೆ ಬಹುಸಂಖ್ಯೆಯ ಸಾಮಾನ್ಯರ ಅಂತರಂಗದಲ್ಲಿ ಇರುವ ತೊಡಕು-ತೋಟಿಗಳನ್ನೂ ಶಾಂತಿ-ಸಮಾಧಾನಗಳನ್ನೂ ವಿಷಯತಜ್ಞರಿಗೆ, ಲೋಕಪ್ರಮುಖರಿಗೆ ಶಾಸ್ತ್ರಶುದ್ಧವಾದ ರೀತಿಯಲ್ಲಿ ಸ್ಪಷ್ಟಪಡಿಸುತ್ತಾರೆ. ಹೀಗೆ ಒಂದೆಡೆ ಸಾಮಾನ್ಯರಿಗೂ ಮತ್ತೊಂದೆಡೆ ವಿಶಿಷ್ಟರಿಗೂ ಮೌಲ್ಯಗಳನ್ನು ಮನವರಿಕೆ ಮಾಡಿಕೊಡುತ್ತಾರೆ. ಇದಕ್ಕೆ ಬೇಕಾದ ಧರ್ಮದೃಷ್ಟಿ ರಾಯರಂಥ ಸಾರ್ವಪಾರ್ಷದರ ಸೊತ್ತು. ಅದು ಘನವಾದ ತತ್ತ್ವಾನುಭವದಿಂದ ಸುಪುಷ್ಟವಾಗಿರುತ್ತದೆ.
ಗೀತ-ನೃತ್ಯಗಳ ಕಲಾವಿದರಾಗಲಿ, ವಿವಿಧ ಶಾಸ್ತ್ರ-ಸಾಹಿತ್ಯಗಳ ಕೋವಿದರಾಗಲಿ, ಸಮಾಜ-ಸಂಸ್ಕೃತಿಗಳ ಹಿತಚಿಂತಕರಾಗಲಿ ಮತ್ತೆ ಮತ್ತೆ ರಾಮಚಂದ್ರರಾಯರನ್ನು ಸಲಹೆ-ಸೂಚನೆಗಳಿಗಾಗಿಯೋ ಬರೆಹ-ಭಾಷಣಗಳಿಗಾಗಿಯೋ ಪಾಠ-ಪ್ರವಚನಗಳಿಗಾಗಿಯೋ ಆಶ್ರಯಿಸುತ್ತಿದ್ದುದರ ರಹಸ್ಯ ಇಲ್ಲಿದೆ. ಅವರು ಆಯಾ ವಿಷಯಗಳ ತಜ್ಞರಿಗಿಂತ ಸುಲಭವಾಗಿ ವಿಚಾರಗಳನ್ನು ತಿಳಿಸುತ್ತಿದ್ದುದಲ್ಲದೆ, ಅಂಥವರಿಗೂ ಕಾಣಲಾಗದ ಎತ್ತರ-ಬಿತ್ತರಗಳನ್ನು ಬೆರಳಿಟ್ಟು ತೋರಿಸುತ್ತಿದ್ದರು. ಇದನ್ನು ಸಾಮಾನ್ಯರಿರಲಿ, ವಿದ್ವಾಂಸರೂ ಪ್ರಜ್ಞಾಪೂರ್ವಕವಾಗಿ ಗುರುತಿಸಿಕೊಳ್ಳುವುದು ಕಷ್ಟವಾಗುತ್ತಿತ್ತು. ಆದರೆ ಅವರಿಗೆ ದಕ್ಕುತ್ತಿದ್ದ ಸ್ಪಷ್ಟತೆ-ಸಮಾಧಾನಗಳಲ್ಲಿ ಮಾತ್ರ ಸ್ವಲ್ಪವೂ ಕೊರತೆ ಇರುತ್ತಿರಲಿಲ್ಲ.
ಒಟ್ಟಿನಲ್ಲಿ ಸಮಾಜಪುರುಷನ ರಕ್ತಶುದ್ಧಿಗೆ ಶ್ವಾಸಕೋಶಗಳಂತೆ ಒದಗಿಬರಬಲ್ಲವರು ರಾಯರಂಥ ಸಾರ್ವಪಾರ್ಷದರು. ವಿಶೇಷವೇನೆಂದರೆ, ಇಂಥವರ ಸಾಧನೆ-ಸಿದ್ಧಿಗಳ ಅರಿವಿಲ್ಲದ ಸಾಮಾನ್ಯರಿಗೂ ಇವರ ಸಾನ್ನಿಧ್ಯ ತಂಪೆರೆಯುತ್ತದೆ. ನಾವು ನೆಳಲಿಗಾಗಿ ನಿಂತ ಮರದ ಹೆಸರು ತಿಳಿಯದಿದ್ದರೂ ಅದರ ತಂಪು ಇಲ್ಲವಾಗುವುದಿಲ್ಲ ತಾನೆ! ಈ ಬಗೆಯ ಸಾರ್ವಪಾರ್ಷದರ ಅತ್ಯುನ್ನತ ಹಂತ ಜೀವನ್ಮುಕ್ತಿ.
ಈ ನಿಟ್ಟಿನಲ್ಲಿ ತಾವೂ ಸಾಗಿ ಮಿಕ್ಕವರನ್ನೂ ಕರೆದೊಯ್ದ ಜೀವನರಸಿಕರ ಸಾಲಿನಲ್ಲಿ ರಾಮಚಂದ್ರರಾಯರ ಹೆಸರು ನಮ್ಮ ಪಾಲಿಗೆ ಎಂದಿಗೂ ಹಸುರಾಗಿರುತ್ತದೆ.
ಬಾಳ ಸಿರಿ ಸೊಗಸುಗಳ ಪೆರ್ಚಿಪನು ಖೇಲಕನು
ಕೀಳದೆನಿಪವನೊರಟ, ಮಂಕ, ಕಲ್ಲೆದೆಗ |
ತೋಳಿಂದೆ ತಿಳಿವಿಂದೆ ನುಡಿಯಿಂದೆ ಜಗದಿರವ
ಮೇಲೆನಿಪವನೆ ರಸಿಕ - ಮಂಕುತಿಮ್ಮ || (೨೬೫)
Concluded.











































