“ಅಭಿನವಭಾರತಿ”ಯ ಕೆಲವೊಂದು ವೈಶಿಷ್ಟ್ಯಗಳು — ಕಲಾಸ್ವಾದದಲ್ಲಿ ರಸ-ಭಾವನೈರಂತರ್ಯ

This article is part 7 of 19 in the series Abhinavabharati

ಕಲಾಸ್ವಾದದಲ್ಲಿ ರಸ-ಭಾವನೈರಂತರ್ಯ: ಒಂದು ಜಿಜ್ಞಾಸೆ

ಭರತನು “ರಸಾಧ್ಯಾಯ”ದಲ್ಲೊಂದೆಡೆ:

“ನ ಭಾವಹೀನೋऽಸ್ತಿ ರಸೋ ನ ಭಾವೋ ರಸವರ್ಜಿತಃ | ಪರಸ್ಪರಕೃತಾ ಸಿದ್ಧಿರನಯೋರಭಿನಯೇ ಭವೇತ್ ||” (೬.೩೬)

ಎಂದು ಒಕ್ಕಣಿಸಿದ್ದಾನೆ. ಇದನ್ನು ವಿವರಿಸುತ್ತ ಅಭಿನವಗುಪ್ತನು ಲೋಕದಲ್ಲೆಲ್ಲಿಯೂ ವಿಭಾವಾದಿವ್ಯವಹಾರಗಳಿರುವುದಿಲ್ಲ, ಅಲ್ಲಿರುವುದೆಲ್ಲ ಕಾರ್ಯ-ಕಾರಣಸಂಬಂಧವೇ; ಹೀಗಾಗಿ ಕಲೆಯಲ್ಲಿ ಮಾತ್ರ ಭಾವಗಳ ಮತ್ತು ರಸಗಳ ಪ್ರಸ್ತಾವವಿರುತ್ತದೆಂದು ಹೇಳುತ್ತಾನೆ.  ಮತ್ತೆ ಹಲವೆಡೆ ಭಾವ ಮತ್ತು ಭಾವನೆಗಳನ್ನು ವ್ಯಾಪ್ತ್ಯರ್ಥದಲ್ಲಿಯೂ ಆಸ್ವಾದಾರ್ಥದಲ್ಲಿಯೂ ಸ್ವೀಕರಿಸಿ ರಸ-ಭಾವಗಳ ನೈರಂತರ್ಯವನ್ನು ಕೇವಲ ರಸವ್ಯಾಪನ ಮತ್ತು ತದಾಸ್ವಾದನಗಳೆನ್ನುವ ಮೂಲಕ ಅದೊಂದು ಬಗೆಯ ಯುಕ್ತಿಯುಕ್ತಸಮಾಧಾನವನ್ನೂ ಹೇಳಿದ್ದಾನೆನ್ನಬಹುದು. ಇವೆಲ್ಲಕ್ಕಿಂತ ಮಿಗಿಲಾಗಿ ಭಾವಗಳಿಗೆ ರಸಗಳ ಲಕ್ಷಣದಲ್ಲಿಯೇ ವ್ಯಾಪ್ತಿಯುಂಟೆಂದು ಕೂಡ ಹೇಳಿ ಅದೊಂದು ಬಗೆಯ ಗೊಂದಲವನ್ನೂ ಉಂಟುಮಾಡಿದ್ದಾನೆ:

“ಲೋಕೇ ಹಿ ನ ಕಶ್ಚಿದ್ವಿಭಾವಾದಿವ್ಯವಹಾರ ಇತಿ ಭಾವಾಃ ... ಅಭಿನಯೇ ಸಾಕ್ಷಾತ್ಕಾರೇ ಸಂಪನ್ನೇ ತದುಪಯೋಗಿತಯಾ ವಿಭಾವಾದಿವ್ಯಪದೇಶ ಇತ್ಯತೋ ಯಾ ಪರಸ್ಪರಕೃತಾ ಸಿದ್ಧಿಃ ಸಾ ಭದ್ರಂ ಭವೇದಿತಿ ಸಂಭಾವ್ಯತೇ | ಏವಂಭೂತಮಿತರೇತರಾಶ್ರಯಜಂ ನ ದೂಷಣಮಿತ್ಯರ್ಥಃ” (ಸಂ.೧, ಪು. ೨೯೧).

“ಭಾವಯಂತಿ, ಆಸ್ವಾದನಂ ಕುರ್ವಂತಿ; ಹೃದಯಂ ವ್ಯಾಪ್ನುವಂತೀತಿ ... ಆಸ್ವಾದ್ಯಂ ಕುರ್ವಂತಿ ... ವ್ಯಾಪ್ತಮಿತ್ಯಪಿ” (ಸಂ. ೧, ಪು.೩೩೮-೩೩೯)

“ಭಾವಾನಾಮಪಿ ಲಕ್ಷಣಂ ರಸಲಕ್ಷಣಮೇವ ಪೂರಯತಿ | ವಿಭಾವವ್ಯಭಿಚಾರ್ಯನುಭಾವಲಕ್ಷಣೇನ ರಸಲಕ್ಷಣಮೇವ ಪೂರ್ಯತೇ ... ಭಾವಾನಾಂ ರಸಲಕ್ಷಣಮೇವ” (ಸಂ. ೧, ಪು. ೩೩೩, ೩೩೮)

ಇವಾವುವೂ ಸಹೇತುಕವಾಗಿಯೂ ತೃಪ್ತಿಕರವಾಗಿಯೂ ತೋರದು. ಏಕೆಂದರೆ ಇಲ್ಲಿ ರಸ-ಭಾವಗಳಿಗೆ ಭೇದ-ಅಭೇದ-ಭೇದಾಭೇದಗಳನ್ನೂ ಹದವಿಲ್ಲದೆ ಹೇಳಿದಂತೆ ತೋರುತ್ತದೆ. ಹೀಗಾಗಿ ನಾವಿದರ ಪುನರ್ವಿಮರ್ಶನಕ್ಕೆ ತೊಡಗದೆ ಗತ್ಯಂತರವಿಲ್ಲ. ಭರತನಂತೂ ರಸ-ಭಾವಗಳಿಗೆ ನಿರಂತರವೂ ಅವಿನಾಭಾವಸಂಬಂಧವಿದೆಯೆಂಬಂತೆ ಸ್ಪಷ್ಟವಾಗಿ ಹೇಳಿದ್ದಾನೆ. ಅಲ್ಲದೆ, ದಂಡಿಯಂಥ ಪ್ರಾಚೀನಾಲಂಕಾರಿಕನು ಮಹಾಕಾವ್ಯಾದಿಗಳ ಲಕ್ಷಣವನ್ನು ವಿವರಿಸುತ್ತಾ “ರಸ-ಭಾವನಿರಂತರಮ್” (ಕಾವ್ಯಾದರ್ಶ, ೧.೧೮) ಎಂದೇ ಸಾರಿದ್ದಾನೆ. ಆ ಬಳಿಕ ತೀರ ಈಚಿನವನೆನ್ನಬಹುದಾದ ಅಮೃತಾನಂದಯೋಗಿಯಂಥವನೂ ಈ ಮಾತನ್ನು ಮರುದನಿಸಿದ್ದಾನೆ (ಅಲಂಕಾರಸಂಗ್ರಹ, ೧.೧೯). ಎಲ್ಲಕ್ಕಿಂತ ಮಿಗಿಲಾಗಿ ಭರತನು ಪ್ರಥಮಾಧ್ಯಾಯದಲ್ಲಿಯೇ ನಾಟ್ಯವು ಬೇರೆ ಬೇರೆಯ ಜನರಿಗೆ ಬೇರೆ ಬೇರೆಯ ಭಾವಗಳನ್ನುಂಟುಮಾಡುತ್ತವೆಂದು ಹೇಳುವಾಗ ಈ ಅಂಶವನ್ನು ವಿಸ್ತರಿಸಿ ಆಸ್ವಾದಕರಲ್ಲಿ ಮೂಡುವ ವಿರುದ್ಧಾನುಭವಗಳ ಸಾಧ್ಯತೆಯನ್ನು ಪ್ರಸ್ತಾವಿಸಿದ್ದಾನೆ (೧.೧೦೮-೧೧೭). ಈ ಮಾತುಗಳನ್ನು ಸಾಮಾನ್ಯವಾದ ನಾಟ್ಯಕಲಾಪ್ರಶಂಸೆಯೆಂದೂ ಅದರ ಒಂದೊಂದು ಸೊಲ್ಲಿಗೂ ಎಣೆಮೀರಿದ ಬೆಲೆ ನೀಡಬಾರದೆಂದೂ ಹೇಳಿ ಪ್ರಕೃತಚರ್ಚೆಯ ಗಾಂಭೀರ್ಯವನ್ನು ಉಪೇಕ್ಷಿಸಲಾಗದು. ಅಷ್ಟೇಕೆ, ನಮ್ಮೆಲ್ಲರ ಅನುಭವವನ್ನೇ ಪರಿಶೀಲಿಸಿಕೊಂಡರೆ ಈ ನಿಟ್ಟಿನಲ್ಲಿ ಮತ್ತೂ ಒಳಿತು. ಸಾಮಾನ್ಯ ಮಟ್ಟದ ಕಲಾರಸಿಕನಾರೇ ಆಗಲಿ, ಕಲಾಸ್ವಾದನಕಾಲದಲ್ಲಿ ಸರ್ವದಾ ರಸಾನುಭವದ ಸಹಾನುಭೂತಿಮಯತಾಟಸ್ಥ್ಯದಲ್ಲಿ ನಿಂತು ಆನಂದವನ್ನು ಅನುಭವಸುತ್ತಿರುವನೆಂದು ಹೇಳಲಾಗದು. ಕೆಲವೊಮ್ಮೆ ಎಂಥ ಸಹೃದಯನಿಗೂ ಉದ್ದಿಷ್ಟಕಲಾಪ್ರಯೋಗದಲ್ಲಿ ವೈಯಕ್ತಿಕವಾದ ಮಗ್ನತೆಯುಂಟಾಗದಿರದು. ಅಭಿನವಗುಪ್ತನೇನೋ ಇದನ್ನೊಂದು ರಸವಿಘ್ನವಾಗಿಯೇ ಗಣಿಸಿದ್ದಾನೆ. ಆದರೆ ಇದು ಸಂಪೂರ್ಣವಾಗಿ ಇಲ್ಲದ ಕ್ಷಣಗಳೂ ಇರುತ್ತವಲ್ಲ! ನಮ್ಮಲ್ಲಿ ಹಲವರಿಗೆ ಕಲಾಸ್ವಾದನಕಾಲದಲ್ಲಿ ವೈಯಕ್ತಿಕವಾದ ಭಾವೋದ್ರೇಕವಾಗುತ್ತಿರುತ್ತದೆ. ಆದರೆ ಇದು ರಸಚರ್ವಣೆಯನ್ನು ಭಂಜಿಸುವ ಮಟ್ಟದ್ದಾಗದೆ ಉದ್ದಿಷ್ಟಕಲೆಯಲ್ಲಿ ಅದೊಂದು ಬಗೆಯ ಆತ್ಮೀಯತೆಯನ್ನೇ ತರುತ್ತಿರುತ್ತದೆ. ಇದೇ ಕವಿ-ಕಲಾವಿದರ ಬಗೆಗಿನ ಪ್ರೀತಿಗೂ ಅವರನ್ನು ಅನುಕರಿಸುವುದಕ್ಕೂ ಆರಾಧಿಸುವುದಕ್ಕೂ ಕಾರಣವಾಗುವುದುಂಟು. ಒಟ್ಟಿನಲ್ಲಿ ರಸಾನುಭವವೆಂಬುದು ಸರ್ವದಾ ಒಂದು ಶಿಖರಾನುಭವವಲ್ಲ. ಅದು ಹಲವು ಶಿಖರಗಳನ್ನು ಏರಿಳಿಯುವ ಸಂಕೀರ್ಣಸಂವೇದನೆಯಾಗಿರುತ್ತದೆ. ಇವುಗಳನ್ನೆಲ್ಲ ಗಮನಿಸಿದಾಗ ರಸ-ಭಾವಗಳ ನೈರಂತರ್ಯದ ಒಂದಂಶವು ಕಲಾನುಭವಸಾಮಾನ್ಯದಲ್ಲಿ ಕಾಣದಿರದು. ಎಲ್ಲಕ್ಕಿಂತ ಮಿಗಿಲಾಗಿ ರಸ-ಭಾವನೈರಂತರ್ಯಕ್ಕೆ ಮತ್ತೂ ಒಂದು ಆಯಾಮವಿದೆ. ಅದು ರಸದಿಂದ ಭಾವ ಮತ್ತು ಭಾವದಿಂದ ರಸಗಳ ಸಮುತ್ಥಾನ. ಅನಾಸಕ್ತನ ಆಸ್ವಾದ ರಸಾನುಭವವಾದರೆ ಆಸಕ್ತನ ಆಸ್ವಾದ ಭಾವಾನುಭವ. ಹೀಗಾಗಿ ಭಾವಾನುಭವದಲ್ಲಿ ಕುತೂಹಲ ಮತ್ತು ಅದರ ನೇಪಥ್ಯದಲ್ಲಿರುವ ಇಷ್ಟಾನಿಷ್ಟಗಳ ಪಾತ್ರ ಒಂದಷ್ಟಿದೆ. ವಿಚಿತ್ರವೇನೆಂದರೆ ರಸಾಸ್ವಾದವನ್ನು ಚೆನ್ನಾಗಿ ಮಾಡಿದ ಆದರ್ಶಸಹೃದಯರಿಗೂ ತಮ್ಮ ತಮ್ಮ ಭಾವಗಳ ವಿಶ್ವರೂಪದರ್ಶನವು ಸಕೃತ್ತಾಗಿ ಸಿದ್ಧಿಸಿರಬಹುದು. ಎಷ್ಟೋ ಮಂದಿಗೆ ರಸಾನುಭವವನ್ನು ಜೀವನಾನುಭವವಾಗಿ ಮಾಡಿಕೊಳ್ಳುವ ಕೌಶಲ ಒಲಿದುಬಂದಿರುವುದಿಲ್ಲ. ಏಕೆಂದರೆ ನಾವೆಲ್ಲ ಭಾವೋದ್ರೇಕದ ಕೈಗೊಂಬೆಗಳಾದ ಕಾರಣ ನಮ್ಮನ್ನಾಡಿಸುವ ಭಾವಗಳ ದರ್ಶನ ದುಸ್ಸಾಧ್ಯ. ಜೊತೆಗೆ, ಬದುಕಿಗಂಟಿ ಬಂದ ರಾಗ-ದ್ವೇಷಗಳ, ಇಷ್ಟಾನಿಷ್ಟಗಳ ತಂಟೆ-ತಕರಾರುಗಳು ನಮ್ಮ ಅಸ್ತಿತ್ವವನ್ನು ಯಥಾರ್ಥವಾಗಿ ಕಾಣಲು ಅಡ್ಡಿಯಾಗಿರುತ್ತವೆ. ನಮ್ಮ ಅಸ್ತಿತ್ವವಾದರೂ ಎಂಥದ್ದು? ಭವಮಾತ್ರದ್ದು. ಇನ್ನು ಇದು ಆಡಿಸಿದಂತೆ ಆಡುವುದು ಭಾವ—“ಭವ ಇವ ಆಚರತೀತಿ ಭಾವಃ”. ಅಥವಾ “ಭವಸಂಬಂಧೀ ಅಯಂ ಭಾವಃ”. ಹೀಗಾಗಿ ನಮ್ಮ ಭಾವಗಳ ದರ್ಶನಕ್ಕೆ ನಮಗೆ ಮಿಗಿಲಾಗಿ ಒದಗಿಬರುವುದು ರಸ; ಅರ್ಥಾತ್ ರಸಾನುಭವ. ರಸಾಸ್ವಾದದ ಮೂಲಕ ಕಲೆಯ ವಲಯದ ವಿಭಾವಾನುಭಾವಾದಿಗಳ ಅರಿವಾಗಿ, ಅವುಗಳೇ ನಮ್ಮೊಳಗಿನ ಸ್ಥಾಯಿ-ವ್ಯಭಿಚಾರಿಗಳಿಗೂ ಇವನ್ನೆಲ್ಲ ಬೆಸೆದ ಲೌಕಿಕವಾದ ಅವಿದ್ಯಾ-ಕಾಮ-ಕರ್ಮಮೂಲದ ಕಾರ್ಯ-ಕಾರಣಸಂಬಂಧಪರಿಜ್ಞಾನಕ್ಕೂ ಹಾದಿಯಾಗುತ್ತದೆ. ಹೀಗೆ ಸಾಧಾರಣೀಕೃತವಾದ ಭಾವಗಳ ಮೂಲಕ ಆಸ್ವಾದಕ್ಕೆ ಬಂದ ರಸವು ತನ್ನ ಚರಮಚರ್ವಣಾಸ್ಥಿತಿಯಲ್ಲಿ ತನ್ನದೇ ಮೂಲವಾದ ಭಾವಸಮುಚ್ಚಯದ ಅರಿವಿಗೂ ಕಾರಣವಾಗುತ್ತದೆ. ಹೇಗೆ ಸ್ವಪ್ನಾನುಭವದ ದೃಷ್ಟಾಂತದಿಂದ ಜಾಗೃದನುಭವದ ಸಾಪೇಕ್ಷತೆಯು ಗಮನಕ್ಕೆ ಬರುತ್ತದೆಯೋ, ಸುಷುಪ್ತ್ಯನುಭವದ ಮೂಲಕ ಜೀವನ್ಮುಕ್ತಿಗೆ ಹಾದಿಯಾಗಬಲ್ಲ ತುರೀಯಕ್ಕೆ ಹೆದ್ದಾರಿಯಾಗುತ್ತದೆಯೋ, ಹಾಗೆಯೇ ಇದು ಪರಿಭಾವನೀಯ. ತಾತ್ಪರ್ಯತಃ ರಸವು ಆನಂದ; ಅದರ ಮೂಲದಲ್ಲಿರುವ ಭಾವವು ನಮ್ಮ ಬದುಕಿನ ಸತ್ಯ. ಇದರ ಅರಿವೇ ರಸ-ಭಾವನೈರಂತರ್ಯದ ಉಪನಿಷತ್ತು.

ರಸಾಭಾಸ

ರಸಾಭಾಸವೆಂಬುದನ್ನು ಭಾರತೀಯಕಾವ್ಯಮೀಮಾಂಸೆಯು ಸಾಕಷ್ಟು ಚರ್ಚಿಸಿದೆ. ಈ ಚರ್ಚೆಯಲ್ಲಿ ಅಭಿನವಗುಪ್ತನ ಪಾತ್ರ ದೊಡ್ಡದು. ರಸಾಭಾಸವೆಂದರೆ ಲೋಕಸಾಮಾನ್ಯಾರ್ಥದಲ್ಲಲ್ಲದೆ ರಸದ ತೋರಿಕೆಯೆಂದಷ್ಟೇ ತಾತ್ಪರ್ಯ. ಇದನ್ನು ಅಭಿನವಗುಪ್ತನು  ಪ್ರಧಾನವಾಗಿ ಶೃಂಗಾರರಸವನ್ನು ಅನುಲಕ್ಷಿಸಿ ಪ್ರತಿಪಾದಿಸಿದ್ದಾನೆ. ಅವನ ಪ್ರಕಾರ ಏಕಮುಖವಾದ ಶೃಂಗಾರವು ಶೃಂಗಾರರಸವೆನಿಸದೆ ಅದರ ಆಭಾಸಮಾತ್ರವಾಗುತ್ತದೆ. ಉದಾಹರಣೆಗೆ: ಸೀತೆಯಲ್ಲಿ ಅನುರಾಗವನ್ನು ತೋರಿದ ರಾವಣನ ವರ್ತನೆ. ಆದರೆ ಇದನ್ನು ಮಿಕ್ಕ ರಸಗಳಿಗೆ ಸರಿಯಾಗಿ ಅನ್ವಯಿಸುವ ಯತ್ನವನ್ನೇ ಅಭಿನವಗುಪ್ತನು ಮಾಡಿಲ್ಲ. ಮುಂದಿನವರಾದ ಭೋಜ, ಮಮ್ಮಟ, ವಿಶ್ವನಾಥ, ವಿದ್ಯಾನಾಥ, ಜಗನ್ನಾಥ, ಸಿಂಹಭೂಪಾಲ, ಶಾರದಾತನಯ ಮೊದಲಾದವರು ಕೂಡ ಈ ವಿಷಯದಲ್ಲಿ ಸರಿಯಾದ ಬೆಳಕನ್ನು ಚೆಲ್ಲಿಲ್ಲ. ವಸ್ತುತಃ ಕವಿಯ ಸಹಾನುಭೂತಿಯೇ ಪಾತ್ರವೊಂದರಲ್ಲಿ ರಸವನ್ನು ಉಕ್ಕಿಸಲು ಸಮರ್ಥವಾಗುವುದಲ್ಲದೆ ಇಂಥ ಸಿದ್ಧಾಂತಾಭಾಸಗಳಲ್ಲ. ಎಲ್ಲಿ ಕವಿಗೆ ಸಹಾನುಭೂತಿಯುಂಟೋ ಅಲ್ಲಿ ಆ ಪಾತ್ರವು ಉತ್ತಮವಾಗಲಿ, ಅಧಮವಾಗಲಿ, ಮುಖ್ಯವಾಗಲಿ, ಗೌಣವಾಗಲಿ, ಮಾನುಷವಾಗಲಿ, ಅತಿಮಾನುಷವಾಗಲಿ, ತಿರ್ಯಕ್ ಜಾತಿಯದೇ ಆಗಲಿ; ಅಷ್ಟೇಕೆ, ಸ್ಥಾವರ-ಜಂಗಮಪ್ರಪಂಚದ ಜೀವಾಜೀವವಸ್ತುವಾವುದೇ ಆಗಲಿ, ರಸವು ಹೊಮ್ಮದೆ ಇರದು. ಇದನ್ನು ಪ್ರಕೃತಲೇಖಕನು ವಿಸ್ತರಿಸಿ ಅನ್ಯತ್ರ (“ರಸಾಭಾಸೋ ನಿರಸ್ಯತೇ”, www.prekshaa.in) ಪ್ರತಿಪಾದಿಸಿರುವ ಕಾರಣ ಸದ್ಯಕ್ಕೆ ಹೆಚ್ಚಿನ ಚರ್ಚೆ ಬೇಕಿಲ್ಲ.

To be continued.

Author(s)

About:

Dr. Ganesh is a 'shatavadhani' and one of India’s foremost Sanskrit poets and scholars. He writes and lectures extensively on various subjects pertaining to India and Indian cultural heritage. He is a master of the ancient art of avadhana and is credited with reviving the art in Kannada. He is a recipient of the Badarayana-Vyasa Puraskar from the President of India for his contribution to the Sanskrit language.