ರಸವಿಘ್ನಗಳು
ಅಭಿನವಗುಪ್ತನು ಅದೆಷ್ಟೋ ಮೌಲಿಕಸಂಗತಿಗಳನ್ನು ಇದಂ ಪ್ರಥಮವೆಂಬಂತೆ ಅಭಿನವಭಾರತಿಯಲ್ಲಿ ಕ್ರೋಡೀಕರಿಸಿದ್ದಾನೆ. ಹಲವು ಕಡೆ ಇಂಥ ಹೊಸಹೊಳಹುಗಳು ಯಾವೆಲ್ಲ ಪೂರ್ವಾಚಾರ್ಯರಿಂದ ಪರಂಪರಾಪ್ರಾಪ್ತವಾಗಿವೆಯೆಂಬುದನ್ನು ಹೆಸರಿಸುವುದುಂಟಾದರೂ ಮತ್ತೆ ಹಲವು ಕಡೆ ಇಂಥ ಆನೃಣ್ಯದ ಸೂಚನೆ ಕಾಣದು. ಇವನ್ನೆಲ್ಲ ನಾವು ಬಲುಮಟ್ಟಿಗೆ ಅವನದೇ ಉಪಜ್ಞೆಯೆಂದು ತಿಳಿಯುವುದರಲ್ಲಿ ತಪ್ಪಿಲ್ಲ. ದಿಟವೇ, ಆತನ ನಾಟ್ಯಶಾಸ್ತ್ರಾಚಾರ್ಯ ಭಟ್ಟತೌತನ ಯೋಗದಾನವೂ ಪ್ರತ್ಯಕ್ಷ-ಪರೋಕ್ಷರೀತಿಗಳಲ್ಲಿ ಅನೇಕತ್ರ ಆವರಿಸಿಕೊಂಡಿದೆ. ಆದರೆ ಯಾವುದಕ್ಕೂ ಅಭಿನವಗುಪ್ತನಲ್ಲಿ ಕೃತಘ್ನತೆಯನ್ನು ಆಪಾದಿಸಲಾಗದು. ಮುಖ್ಯವಾಗಿ ಇಂಥ ಮಹಾವಿಷಯಗಳನ್ನು ನಮ್ಮ ಪಾಲಿಗೆ ಅವನು ಉಳಿಸಿಕೊಟ್ಟಿರುವುದಕ್ಕಾಗಿ ನಮ್ಮೆಲ್ಲರ ಪ್ರೀತಿ-ಗೌರವಗಳು ಅವನಿಗೆ ಸರ್ವದಾ ಸಲ್ಲುತ್ತವೆ. ಈ ವರ್ಗಕ್ಕೆ ಸೇರುವ ಮಹತ್ತ್ವದ ವಿಚಾರ ರಸವಿಘ್ನಮೀಮಾಂಸೆ. ಅಭಿನವಗುಪ್ತನು ಏಳು ಬಗೆಯ ರಸವಿಘ್ನಗಳನ್ನು ನಮೂದಿಸಿ ನಿರೂಪಿಸುತ್ತಾನೆ (ಸಂ.೧, ಪು.೨೭೯): ೧. ಸಂಭಾವನಾವಿರಹ—ಕವಿನಿರ್ಮಾಣದ ಇತಿವೃತ್ತ-ಸಂನಿವೇಶಗಳಲ್ಲಿ ಸಹೃದಯನಿಗೆ ಪಾತ್ರಗಳ ಮತ್ತು ಘಟನೆಗಳ ಸಂಭವನೀಯತೆಯು ಕಾಣದಿದ್ದಾಗ ಉಂಟಾಗುವ ತೊಡಕು. ೨. ದೇಶ-ಕಾಲವಿಶೇಷಾವೇಶ—ಸಹೃದಯರು ಕಲೆಯಲ್ಲಿ ತಮ್ಮ ವೈಯಕ್ತಿಕರಾಗ-ದ್ವೇಷಗಳನ್ನೋ ಅಥವಾ ಕಲಾಕೃತಿಯು ರೂಪಿಸಿದ ಸಂದರ್ಭಗಳ ದೇಶ-ಕಾಲಗಳಲ್ಲಿ ಹೆಚ್ಚಿನ ಅಭಿನಿವೇಶವನ್ನೋ ತಾಳಿದಾಗ ಉಂಟಾಗುವ ತೊಡಕು. ೩. ನಿಜಸುಖ-ದುಃಖವಿವಶೀಭಾವ—ಸಹೃದಯರು ಕಲಾಸ್ವಾದನಕಾಲದಲ್ಲಿ ತಮ್ಮವೇ ಸುಖ-ದುಃಖಗಳಲ್ಲಿ ಮುಳುಗಿ ರಸಚರ್ವಣೆಗೆ ಸಿದ್ಧವಾಗದಿದ್ದಾಗ ಒಡಮೂಡುವ ತೊಡಕು. ೪. ಪ್ರತೀತ್ಯುಪಾಯವೈಕಲ್ಯ—ವ್ಯುತ್ಪನ್ನನಾದ ಸಹೃದಯನಿಗೂ ಕಲಾಕೃತಿಯೊಂದರ ಇಂಗಿತವು ಸ್ಫುಟವಾಗದಿದ್ದಾಗ ಒದಗುವ ತೊಡಕು. ೫. ಅಪ್ರಧಾನತೆ—ಕಲಾಕೃತಿಯ ನಿರ್ಮಾಣದಲ್ಲಿ ಕವಿ-ಕಲಾವಿದರಿಂದ ವಿವಿಧಭಾವಗಳ ಮುಖ್ಯಾಮುಖ್ಯವಿವೇಕವು ಸರಿಯಾಗಿ ನಿರ್ವಾಹವಾಗದಿದ್ದಾಗ ಉಂಟಾಗುವ ತೊಡಕು. ೬. ಸ್ಫುಟತ್ವಾಭಾವ—ಕಾವ್ಯದ ಶಬ್ದಾರ್ಥಗಳ ತಿಳಿತನವು ಕೊರತೆಯಾದಾಗ ತಲೆದೋರುವ ತೊಡಕು. ೭. ಸಂಶಯಯೋಗ—ಕಲಾಕೃತಿಯು ವ್ಯಂಜಿಸುವ ಭಾವಗಳಲ್ಲಿ ಯಾವುದು ಏನೆಂಬ ಸ್ಪಷ್ಟತೆಯು ಸಹೃದಯರಿಗೆ ದಕ್ಕದಿದ್ದಾಗ ಒಡಮೂಡುವ ತೊಡಕು. ಈ ಏಳರಲ್ಲಿ ಕೆಲಮಟ್ಟಿಗೆ ಪುನರಕ್ತಿಯುಂಟೆಂಬುದು ಸ್ಪಷ್ಟ. ಮುಖ್ಯವಾಗಿ ಅಪ್ರಧಾನತೆ, ಸ್ಫುಟತ್ವಾಭಾವ ಮತ್ತು ಸಂಶಯಯೋಗಗಳೆಲ್ಲ ಪ್ರತೀತ್ಯುಪಾಯವೈಕಲ್ಯದಲ್ಲಿಯೇ ಅಡಗುತ್ತವೆನ್ನಬೇಕು. ಆದರೂ ಇಂಥ ಅನುಭವಗಮ್ಯವಾದ ಮೌಲಿಕಸಂಗತಿಗಳನ್ನು ಸೂಕ್ಷ್ಮತೆಯಿಂದ ಪ್ರಕಟಿಸಿದ ಅಭಿನವಗುಪ್ತ ಅಭಿನಂದನೀಯ. ಇಂದಿಗೂ ಎಂದಿಗೂ ಕಲಾಸ್ವಾದದಲ್ಲಿ ಮುಖ್ಯವಾಗಿ ಅಡ್ಡಿಯಾಗುವ ಅಂಶಗಳು ಇವೆಂಬುದರಲ್ಲಿ ಸಂದೇಹವಿಲ್ಲ. ಜೊತೆಗೆ ಇವು ಸಕಲಕಲೆಗಳಿಗೂ ದೇಶ-ಕಾಲನಿರಪೇಕ್ಷವಾಗಿ ಅನ್ವಯಿಸುತ್ತವೆಂಬುದು ಗಮನಾರ್ಹ. ವಿಶೇಷತಃ ನವ್ಯಕಾವ್ಯ, ನವ್ಯಚಿತ್ರ, ನವ್ಯನಾಟ್ಯಾದಿಗಳ ಪ್ರಹೇಲಿಕಾಪ್ರಾಯತ್ವವು “ಸಂಭಾವನಾವಿರಹ” ಮತ್ತು “ಪ್ರತೀತ್ಯುಪಾಯವೈಕಲ್ಯ”ಗಳಂಥ ರಸವಿಘ್ನಗಳಿಗೆ ಜನ್ಮಭೂಮಿಗಳು. ಹಸಿಹಸಿಯಾದ ವಾಣಿಜ್ಯಕಲೆಗಳ ಪೈಕಿ ಎದ್ದುತೋರುವ ಕಥೆ-ಕಾದಂಬರಿಗಳೂ ಚಲನಚಿತ್ರಾದಿಗಳೂ “ಸಂಭಾವನಾವಿರಹ” ಮತ್ತು “ದೇಶಕಾಲವಿಶೇಷಾವೇಶ”ಗಳಿಗೆ ಆಡುಂಬೊಲವಾಗುತ್ತವೆ. ಶುಷ್ಕಶಾಸ್ತ್ರೀಯಕಲೆಗಳಂತೂ “ಪ್ರತೀತ್ಯುಪಾಯವೈಕಲ್ಯ”ದ ಸಾಕಾರಗಳೇ ಆಗಿವೆ.
ರಸಾನುಭೂತಿಗೆ ಪ್ರಮಾಣಾಂತರ ಅನವಶ್ಯ
ಅಭಿನವಗುಪ್ತನು ರಸಶಬ್ದವನ್ನು ನಿರ್ವಚಿಸುವಾಗ ಲೋಕಸಾಮಾನ್ಯವಾದ “ರಸ್ಯಂತ ಇತಿ ರಸಾಃ” ಎಂಬ ನಿರುಕ್ತಿಗಿಂತ ಭಿನ್ನವಾಗಿ “ರಸನಂ ರಸಃ” ಎಂಬ ವಿವರಣೆಯನ್ನು ಗಚ್ಛದ್ವ್ಯಾಖ್ಯಾನರೂಪವಾಗಿ ಹೇಳುತ್ತಾನೆ (ಸಂ.೧, ಪು.೨೬೬). ಇದು ತುಂಬ ಮಹತ್ತ್ವದ ಸಂಗತಿ. ಏಕೆಂದರೆ ರಸದ ನಾನಾತ್ವವನ್ನೂ ಅದರ ಆಸ್ವಾದಕಾಲದ ತ್ರಿಪುಟೀರೂಪವನ್ನೂ (ರಸಿಕ-ರಸ-ರಸಚರ್ವಣ) ಗಮನದಲ್ಲಿರಿಸಿಕೊಂಡು, ಇದೆಲ್ಲ ದೇಶ-ಕಾಲ-ವಸ್ತುಪರಿಚ್ಛಿನ್ನವಾದ ದ್ವೈತಪ್ರಪಂಚವೆಂಬಂತೆ ಮೊದಲ ವಿವರಣೆ ಹೊರಟಿದೆ. ಇದು ಮುಖ್ಯವಾಗಿ ರಸನಿಷ್ಪತ್ತಿಯನ್ನು ವಾಸ್ತವದೃಷ್ಟಿಯಿಂದ ನಿರೂಪಿಸುವ ಉತ್ಪತ್ತಿವಾದಿಗಳಿಗೂ ಅನುಮಿತಿವಾದಿಗಳಿಗೂ ಅನುಕೂಲವಾದ ಪಕ್ಷ. ಆದರೆ ಆಸ್ವಾದವೇ ರಸವೆಂಬ ಎರಡನೆಯ ಪಕ್ಷದಲ್ಲಿ ರಸದ ಅಖಂಡತೆಯೂ ರಸಾಸ್ವಾದದ ಅನನ್ಯತೆಯೂ ಪ್ರಧಾನವಾಗಿವೆ. ತ್ರಿಪುಟೀವಿಲಯನವಿಲ್ಲದೆ ಸ್ವಸ್ವಂವೇದ್ಯವಾದ ಆನಂದ ಸಾಧ್ಯವಿಲ್ಲ. ರಸವು ಈ ಮಟ್ಟಕ್ಕೇರದೆ ಅದಕ್ಕೆ ಆದರ್ಶಸ್ವರೂಪದ ಸಿದ್ಧಿಯಿಲ್ಲ. ರಸಕ್ಕೆ ಪ್ರಮಾಣಗಳಿಲ್ಲದೆ ಅಸ್ತಿತ್ವಸಿದ್ಧಿಯಾಗದು. ಆದರೆ ಪ್ರತ್ಯಕ್ಷ, ಅನುಮಾನ, ಆಪ್ತವಾಕ್ಯ, ಉಪಮಾನ ಮುಂತಾದ ನೈಯಾಯಿಕಮತಪ್ರಥಿತವಾದ ಪ್ರಮಾಣಗಳು ಇದಕ್ಕಿಲ್ಲ. ಹೀಗೆಂದ ಮಾತ್ರಕ್ಕೆ ಅದು ಅಸ್ತಿತ್ವದಲ್ಲಿಯೇ ಇಲ್ಲವೆಂದು ಹೇಳಲಾಗದು. ಏಕೆಂದರೆ ಎಲ್ಲ ಸಹೃದಯರ ಅನುಭವಕ್ಕೂ ರಸವು ಸಂದಿದೆ. ಈ ಕಾರಣದಿಂದ ಅಭಿನವಗುಪ್ತನು ರಸಕ್ಕೆ ಸಮಸ್ತಸಹೃದಯರ ಅನುಭವಪ್ರಾಮಾಣ್ಯವೇ ಇರುವಾಗ ಪ್ರಮಾಣಾಂತರಗಳು ಅನವಶ್ಯವೆಂಬ ನಿಶ್ಚಯಕ್ಕೆ ಬರುತ್ತಾನೆ. ಇದು ಬ್ರಹ್ಮವಸ್ತುವನ್ನು ಕುರಿತು ವೇದಾಂತಿಗಳು ನೀಡುವ ಜೀವನ್ಮುಕ್ತಾನುಭವಪ್ರಾಮಾಣ್ಯಕ್ಕೆ ಸಂವಾದಿಯೆನ್ನಬಹುದು. ಲೋಕದ ಸಂಗತಿಗಳೆಲ್ಲ ಕಾರ್ಯ-ಕಾರಣಭಾವಘಟಿತವಾಗಿವೆ. ಹೀಗಾಗಿಯೇ ಅಲ್ಲಿ ಪ್ರತ್ಯಕ್ಷಾನುಮಾನಾದಿಗಳಂಥ ಪ್ರಮಾಣಗಳಿಗೆ ನೆಲೆಯೂ ಇದೆ, ಬೆಲೆಯೂ ಇದೆ. ಆದರೆ ರಸನಿಷ್ಪತ್ತಿಗೆ ಮೂಲವಾದ ವಿಭಾವಾನುಭಾವಗಳು ಹಾಗಲ್ಲ. ಈ ಕಾರಣದಿಂದಲೇ ಭರತಮುನಿಯು ರಸಸೂತ್ರದಲ್ಲಿ “ಕಾರ್ಯಕಾರಣಭಾವ”ವೆಂಬ ವಾಚಕಕ್ಕೆ ಬದಲಾಗಿ “ವಿಭಾವಾನುಭಾವ”ವೆಂಬ ವಾಚಕವನ್ನು ಬಳಸಿದ್ದಾನೆ. ಇದೇ ರಸದ ಅಲೌಕಿಕತೆಗೊಂದು ಹೆಗ್ಗುರುತು. ಅಲೌಕಿಕವೆಂದ ಮಾತ್ರಕ್ಕೆ ಅದು ಕೇವಲ ನಂಬಿಕೆಯ ವಿಷಯವೆಂದೋ ಯೋಗಿಪ್ರತ್ಯಕ್ಷವೆಂದು ಪರಿಗಣಿತವಾದ—ಯಾವ ಯಾವುದೋ ಮತಸಾಧಕರ—ವಿಶೇಷಾನುಭವಗಳ ಜಗತ್ತೆಂದೋ ಹೇಳಲಾಗದು. ರಾಗ-ದ್ವೇಷಮೂಲದಿಂದ ಹೊರಡುವ ಸುಖ-ದುಃಖಾತ್ಮಕವಾದ ಭಾವಗಳ ರಾಗ-ದ್ವೇಷರಹಿತವಾದ ಕೇವಲಾನಂದಾಸ್ವಾದವೇ ರಸವಾದ ಕಾರಣ ಇಲ್ಲಿ ಲೌಕಿಕಪ್ರಮಾಣಗಳ ಪ್ರಮೇಯವಿಲ್ಲ. ಹಾಗೆಂದು ಇಂಥ ಆಸ್ವಾದವನ್ನೇ ನಿರಾಕರಿಸೋಣವೆಂದರೆ ಅದು ಅನುಭವವಿರುದ್ಧ. ಹೀಗೆ ಪ್ರಮಾಣ-ಪ್ರಮೇಯಗಳೆಲ್ಲ ಪ್ರಾಮಾತೃವಿನಲ್ಲಿಯೇ ಕರಗುವ ರಸಾಸ್ವಾದತತ್ತ್ವವು ಯಾವುದೇ ರೀತಿಯಿಂದಲೂ ಯುಕ್ತಿಯುಕ್ತವಲ್ಲದೆ ಅವಿಚಾರಿತವಲ್ಲ[1]. ಮುಖ್ಯವಾಗಿ ರಸವೆಂಬುದೊಂದು ನಿಸ್ಸ್ವಾರ್ಥಪೂರ್ಣವಾದರೂ ಉದಾಸೀನವಲ್ಲದ, ಆಸಕ್ತಿಪೂರ್ಣವಾದರೂ ಅಭಿನಿವಿಷ್ಟವಲ್ಲದ, ಪ್ರಜ್ಞಾಪ್ರಬುದ್ಧವಾದರೂ ಶುಷ್ಕಬೌದ್ಧಿಕವಲ್ಲದ ಹೃದ್ಯಾನುಭವ. ಈ ಕಾರಣದಿಂದಲೇ ಆನಂದೇತರವಾದ ಯಾವುದೇ ಮೌಲ್ಯಗಳನ್ನು ರಸಕ್ಕಿಂತ ಮಿಗಿಲಾಗಿ ಕಲಾನುಭವದಲ್ಲಿ ಹುಡುಕಲೆಳಸುವುದೂ ಇಂಥ ಉದ್ದೇಶಕ್ಕಾಗಿ “ಕಲೆ”ಯನ್ನು ನಿರ್ಮಿಸಲೆಳಸುವುದೂ ಆತ್ಮಾಪಚಾರವಲ್ಲದೆ ಬೇರೇನಲ್ಲ.
“ಯಥಾಹುಃ “ಸರ್ವಾ ಚೇಯಂ ಪ್ರಮಿತಿಃ ಪ್ರತ್ಯಕ್ಷಪರಾ” (ನ್ಯಾಯಸೂತ್ರಭಾಷ್ಯ, ೧.೩) ಇತಿ | ಸ್ವಸಾಕ್ಷಾತ್ಕೃತೇ ಆಗಮಾನುಮಾನಶತೈರಪ್ಯನ್ಯಥಾಭಾವಸ್ಯ ಸ್ವಸಂವೇದನಾತ್” (ಸಂ.೧, ಪು.೨೮೦).
“ತಥಾ ಹಿ ಲೌಕಿಕಚಿತ್ತವೃತ್ತ್ಯನುಮಾನೇ ಕಾ ರಸತಾ? ತೇನಾಲೌಕಿಕಚಮತ್ಕಾರಾತ್ಮಾ ರಸಾಸ್ವಾದಃ ಸ್ಮೃತ್ಯನುಮಾನಲೌಕಿಕಸಂವೇದನವಿಲಕ್ಷಣ ಏವ | ತಥಾ ಹಿ—ಲೌಕಿಕೇನಾನುಮಾನೇನ ಸಂಸ್ಕೃತಃ ಪ್ರಮದಾದಿ ನ ತಾಟಸ್ಥ್ಯೇನ ಪ್ರತಿಪದ್ಯತೇ | ಅಪಿ ತು ಹೃದಯಸಂವಾದಾತ್ಮಕಸಹೃದಯತ್ವಬಲಾತ್ ಪೂರ್ಣೀಭವಿಷ್ಯದ್ರಸಾಸ್ವಾದಾಂಕುರೀಭಾವನಾನುಮಾನಸ್ಮೃತ್ಯಾದಿಸೋಪಾನಮಾರುಹ್ಯೇವ ತನ್ಮಯೀಭಾವೋಚಿತಚರ್ವಣಾಪ್ರಾಣತಯಾ | ನ ಚ ಸಾ ಚರ್ವಣಾ ಪ್ರಾಙ್ಮಾನಾಂತರಾದ್ಯೇನಾಧುನಾ ಸ್ಮೃತಿಃ ಸ್ಯಾತ್ | ನ ಚಾತ್ರ ಲೌಕಿಕಪ್ರತ್ಯಕ್ಷಾದಿಪ್ರಮಾಣವ್ಯವಹಾರಃ | ಕಿಂ ತ್ವಲೌಕಿಕವಿಭಾವಾದಿಸಂಯೋಗಬಲೋಪನತೈವೇಯಂ ಚರ್ವಣಾ | ಸಾ ಚ ಪ್ರತ್ಯಕ್ಷಾನುಮಾನಾದಿಲೌಕಿಕಪ್ರಮಾಣಜನಿತರತ್ಯಾದ್ಯವಬೋಧತಸ್ತಥಾ ಯೋಗಿಪ್ರತ್ಯಕ್ಷಜನಿತತಟಸ್ಥಪರಸಂವಿತ್ತಿಜ್ಞಾನಾತ್ಸಕಲವೈಷಯಿಕೋಪರಾಗಶೂನ್ಯಶುದ್ಧಪರಯೋಗಿಗತಸ್ವಾತ್ಮಾನಂದೈಕಘನಾನುಭವಾಚ್ಚ ವಿಶಿಷ್ಯತೇ ... ಅತ ಏವ ವಿಭವಾದಯೋ ನ ನಿಷ್ಪತ್ತಿಹೇತವೋ ರಸಸ್ಯ | ತದವಬೋಧಾಪಗಮೇऽಪಿ ರಸಸಂಭವಪ್ರಸಂಗಾತ್ | ನಾಪಿ ಜ್ಞಪ್ತಿಹೇತವೋ ಯೇನ ಪ್ರಮಾಣಮಧ್ಯೇ ಪತೇಯುಃ | ಸಿದ್ಧಸ್ಯ ಕಸ್ಯಚಿತ್ಪ್ರಮೇಯಭೂತಸ್ಯ ರಸಸ್ಯಾಭಾವಾತ್ | ಕ್ವಾನ್ಯತ್ರೇತ್ಥಂ ದೃಷ್ಟಮಿತಿ ಚೇದ್ಭೂಷಣಮೇತದಸ್ಮಾಕಮಲೌಕಿಕತ್ವಸಿದ್ಧೌ | ಪಾನಕರಸಾಸ್ವಾದೋऽಪಿ ಕಿಂ ಗುಡಮರೀಚಾದಿಷು ದೃಷ್ಟ ಇತಿ ಸಮಾನಮೇತತ್”
“ನನ್ವೇವಂ ರಸೋऽಪ್ರಮೇಯಃ ಸ್ಯಾದೇವಮ್ | ಯುಕ್ತಂ ಭವಿತುಮರ್ಹತಿ | ರಸ್ಯತೈಕಪ್ರಾಣೋ ಹ್ಯಸೌ ನ ಪ್ರಮೇಯಾದಿಸ್ವಭಾವಃ | ತರ್ಹಿ ಸೂತ್ರೇ ನಿಷ್ಪತ್ತಿರಿತಿ ಕಥಮ್? ನೇಯಂ ರಸಸ್ಯ, ಅಪಿ ತು ತದ್ವಿಷಯರಸನಾಯಾಃ | ತನ್ನಿಷ್ಪತ್ತ್ಯಾ ತು ಯದಿ ತದೇಕಾಯತ್ತಜೀವಿತಸ್ಯ ರಸಸ್ಯ ನಿಷ್ಪತ್ತಿರುಚ್ಯತೇ ನ ಕಶ್ಚಿದತ್ರ ದೋಷಃ | ಸಾ ಚ ರಸನಾ ನ ಪ್ರಮಾಣವ್ಯಾಪಾರೋ ನ ಕಾರಕವ್ಯಾಪಾರಃ | ಸ್ವಯಂ ತು ನಾಪ್ರಾಮಾಣಿಕಃ, ಸ್ವಸಂವೇದನಸಿದ್ಧತ್ವಾತ್ | ರಸನಾ ಚ ಬೋಧರೂಪ ಇವ | ಕಿಂ ತು ಬೋಧಾಂತರೇಭ್ಯೋ ಲೌಕಿಕೇಭ್ಯೋ ವಿಲಕ್ಷಣೈವ | ಉಪಾಯಾನಾಂ ವಿಭಾವಾದೀನಾಂ ಲೌಕಿಕವೈಲಕ್ಷಣ್ಯಾತ್ | ತೇನ ವಿಭಾವಾದಿಸಂಗಾದ್ರಸನಾ ಯತೋ ನಿಷ್ಪದ್ಯತೇऽತಸ್ತಥಾವಿಧರಸನಾಗೋಚರೋ ಲೋಕೋತ್ತರೋऽರ್ಥೋ ರಸ ಇತಿ ತಾತ್ಪರ್ಯಂ ಸೂತ್ರಸ್ಯ” (ಸಂ.೧, ಪು.೨೮೨-೨೮೩).
ರಸವೊಂದು ನಿರತಿಶಯಾನುಭವವಾದ ಕಾರಣದಿಂದಲೇ ಅದು ಸ್ವಶಬ್ದವಾಚ್ಯವಲ್ಲ. ಅಂತೆಯೇ ರಸವೆಂಬ ಶಬ್ದಕ್ಕೆ ಪ್ರಾತಿಪಾದಿಕಾರ್ಥವಲ್ಲದೆ ವಾಕ್ಯಾರ್ಥವೂ ಇಲ್ಲ. ಹೀಗಾಗಿ ರಸಸೃಷ್ಟಿಯೆಂದರೆ ರಸವೆಂಬ ಮಾತನ್ನೇ ಕುಮ್ಮರಿಸುವುದೆಂದರ್ಥವಲ್ಲ. ಕೇವಲ ಉಚಿತವಾದ ಶಬ್ದಾರ್ಥಗಳ ಮೂಲಕ ವಿಭಾವಾನುಭಾವಸಾಮಗ್ರಿಯನ್ನು ವಕ್ರತಾಪುರಸ್ಸರವಾಗಿ ಧ್ವನನಶೀಲವಾಗುವಂತೆ ರೂಪಿಸಿಕೊಡುವುದಷ್ಟೇ ಕವಿಯ ಕೆಲಸ. ಇದರಿಂದಲೇ ರಸವು ಸ್ವಯಂ ಸ್ಫುರಿತವಾಗುತ್ತದೆ. ಈ ಅಂಶವನ್ನು ಅಭಿನವಗುಪ್ತನು “ಧ್ವನ್ಯಾಲೋಕಲೋಚನ”ದಲ್ಲಿ ಸಾಕಷ್ಟು ವಿಸ್ತರಿಸಿದ್ದಾನೆ. “ಅಭಿನವಭಾರತಿ”ಯಲ್ಲಿ ಸೂಚ್ಯವಾಗಿ ಹೀಗೆ ಹೇಳುತ್ತಾನೆ:
“ಕೋಃ ಕವತೇರ್ವಾ ಕವನೀಯಂ ಕಾವ್ಯಮ್ | ತತ್ರ ಚ ಪದಾರ್ಥವಾಕ್ಯಾರ್ಥೌ ರಸೇಷ್ವೇವ ಪರ್ಯವಸ್ಯತ ಇತ್ಯಸಾಧಾರಣ್ಯಾತ್ಪ್ರಾಧಾನ್ಯಾಚ್ಚ ಕಾವ್ಯಾಸ್ಯಾರ್ಥಾ ರಸಾಃ | ಅರ್ಥ್ಯಂತೇ ಪ್ರಾಧಾನ್ಯೇನೇತ್ಯರ್ಥಾಃ | ನ ತ್ವರ್ಥಶಬ್ದೋऽಭಿಧೇಯವಾಚೀ | ಸ್ವಶಬ್ದಾನಭಿಧೇಯತ್ವಂ ಹಿ ರಸಾದೀನಾಂ ಧ್ವನಿಕಾರಾದಿಭಿರ್ದರ್ಶಿತಮ್ | ತಚ್ಚ ಮದೀಯಾದೇವ ತದ್ವಿವರಣಾತ್ಸಹೃದಯಾಲೋಕಲೋಚನಾದವಧಾರಣೀಯಮ್ | ಇಹ ತು ಯಥಾವಸರಂ ವಕ್ಷ್ಯತ ಏವ” (ಸಂ.೧, ಪು.೩೩೮).
ಟಿಪ್ಪಣಿಗಳು
[1] ಇಲ್ಲಿ ಅಭಿನವಗುಪ್ತನು ತೋರಿರುವ ಧೀರತೆಯು ದಿಟವಾಗಿ ಆರಾಧನೀಯ. ಸ್ವಯಂ ಯೋಗಿಯೆನಿಸಿ, ತಂತ್ರಸಾಧಕನೂ ಆದ ಅವನು ರಸಾನುಭವವನ್ನು ಯೋಗಿಪ್ರತ್ಯಕ್ಷಾದಿಗಳಿಂದ ಕಲುಷೀಕರಿಸಿಲ್ಲ. ಇಂಥ ಧೀರತೆಯನ್ನು ಆಧುನಿಕಕಾಲದ ಕಮ್ಯುನಿಸ್ಟ್ (Communist) ಮತಮೋಹಿತರು ಕಲೆಯ ವಿಷಯದಲ್ಲಿ ತೋರುತ್ತಿಲ್ಲ. ಅವರು ಕಲೆಯಿರುವುದೇ ತಮ್ಮ ಮೂಗಿನ ನೇರದ ಸಮಾಜಸುಧಾರಣೆ, ಸಮಾನತೆ ಮತ್ತು ಕ್ರಾಂತಿಗಳಿಗೆಂದು ನಂಬಿ ರಸಾನುಭವಕ್ಕೆ ವಿಷಕಾಲುಷ್ಯವನ್ನು ತುಂಬುತ್ತಿದ್ದಾರೆ. ಇನ್ನು ಕ್ರೈಸ್ತ, ಇಸ್ಲಾಮ್, ಬೌದ್ಧ, ಜೈನ, ಶೈವ, ವೈಷ್ಣವ, ಶಾಕ್ತಾದಿಮತಭ್ರಾಂತರ ವಿಷಯವೂ ಇದೇ ಆಗಿದೆ. ಈ ಎರಡು ವರ್ಗಕ್ಕೂ ಕಲೆಯು ತಮ್ಮ ನಂಬಿಕೆಗಳನ್ನು ಜಗತ್ತಿನ ಮೇಲೆ ಆಗ್ರಹದಿಂದ ಹೇರಲು ಬಳಕೆಯಾಗುವ ಒಂದು ಸಾಧನ ಮಾತ್ರ. ಹೀಗೆ ಅಧಿಭೂತವಾದಿಗಳಿಗೂ (Materialists) ಅಧಿದೈವವಾದಿಗಳಿಗೂ (Mystics) ರಸಾನುಭವ ಬೇಕಿಲ್ಲ. ಅದನ್ನು ತಂದೀಯುವ ಕಲೆ ಇದಕ್ಕಲ್ಲದೆ ತಮ್ಮ ಉದ್ದೇಶಗಳಿಗೆ ದುಡಿಯುವ ಆಯುಧವಾಗಬೇಕೆಂಬ ಆಗ್ರಹ ಅವರದು. ಇಂಥ ಪರಿಸ್ಥಿತಿಯಲ್ಲಿ ಭಾರತೀಯರಸಸಿದ್ಧಾಂತದ ಅನನ್ಯತೆ ಮತ್ತು ಅನಿವಾರ್ಯತೆಗಳು ಅವೆಷ್ಟು ಹಿರಿದೆಂಬುದನ್ನು ವಿಸ್ತರಿಸಬೇಕಿಲ್ಲ.