“ಅಭಿನವಭಾರತಿ”ಯ ಕೆಲವೊಂದು ವೈಶಿಷ್ಟ್ಯಗಳು — ವಿವಿಧರಸಗಳನ್ನು ಕುರಿತು

This article is part 8 of 19 in the series Abhinavabharati

ವಿವಿಧರಸಗಳನ್ನು ಕುರಿತು

ಅಭಿನವಭಾರತಿಯ “ರಸಾಧ್ಯಾಯ”ಕ್ಕಿರುವ ಮಹತ್ತ್ವದಲ್ಲಿ ಹೆಚ್ಚಿನದು ರಸಸೂತ್ರವಿವರಣೆ ಮತ್ತು ಈ ನಿಟ್ಟಿನಲ್ಲಿ ಪೂರ್ವಸೂರಿಗಳಾದ ಲೊಲ್ಲಟ, ಶಂಕುಕ, ಭಟ್ಟನಾಯಕ, ಭಟ್ಟತೌತಾದಿಗಳ ಅಭಿಪ್ರಾಯ ಮತ್ತು ಅಭಿನವಗುಪ್ತನ ಸಮಗ್ರಚಿಂತನೆಗಳನ್ನು ಒಳಗೊಳ್ಳುತ್ತದೆ. ಉಳಿದಂತೆ ಶೃಂಗಾರಾದಿರಸಗಳನ್ನು ಪ್ರತ್ಯೇಕವಾಗಿ ಚರ್ಚಿಸುವಾಗ ವಿವರಗಳೆಷ್ಟೇ ಇದ್ದರೂ ಹೊಸಹೊಳಹುಗಳು ಕಡಮೆ; ಭರತನ ಪ್ರತಿಪಾದನೆಯೇ ಮುನ್ನೆಲೆಯಲ್ಲಿರುತ್ತದೆ. ಇಂತಿದ್ದರೂ ಅಲ್ಲಲ್ಲಿ ಮಿಂಚುವ ಹಲಕೆಲವು ಮಾತುಗಳನ್ನು ಗಮನಿಸಬಹುದು. ರಸಾಭಾಸವನ್ನು ಚರ್ಚಿಸುವಾಗ ಅನೌಚಿತ್ಯವೇ ಹಾಸ್ಯದ ಮೂಲವೆಂದು ಯಾದೃಚ್ಛಿಕವಾಗಿ ಹೇಳುವ ಅಭಿನವಗುಪ್ತನ ಮಾತು ಸಾರ್ವಕಾಲಿಕವಾದ ಮಹತ್ತ್ವವನ್ನು ಹೊಂದಿದೆ. ಅಷ್ಟೇಕೆ, ಇಡಿಯ ಹಾಸ್ಯರಸಮೀಮಾಂಸೆಯ ಕೀಲಿಕೈಯೇ ಇದಾಗಿದೆ. ಈ ಕಾರಣದಿಂದಲೇ ಮುಂದೆ ಹಾಸ್ಯರಸವನ್ನು ಚರ್ಚಿಸುತ್ತ ಅವನು ಎಲ್ಲ ರಸಗಳೂ ಕವಿಯ ಸೋದ್ದಿಷ್ಟವಾದ ಅನೌಚಿತ್ಯಕಲ್ಪನೆಯ ನೆಲೆಯಲ್ಲಿ ಹಾಸ್ಯದ ವಲಯಕ್ಕೆ ಸಲ್ಲುತ್ತವೆಂಬ ನಿರ್ಣಯಕ್ಕೆ ಬರುತ್ತಾನೆ. ಹಾಸ್ಯಕ್ಕೆ ನೇರವಾದ ಪುರುಷಾರ್ಥಪ್ರಯೋಜನವಿಲ್ಲವೆಂದೂ ಗಮನಿಸುತ್ತಾನೆ. ಬಹುಶಃ ಈ ಕಾರಣದಿಂದಲೇ ಹಾಸ್ಯವನ್ನೇ ಪ್ರಧಾನವಾಗಿ ಉಳ್ಳ ಯಾವೊಂದು ಮಹಾಕೃತಿಯೂ ಜಗತ್ಸಾಹಿತ್ಯದಲ್ಲಿಲ್ಲವೆಂಬ ತಥ್ಯವನ್ನು ನಾವು ಮನಗಾಣಬಹುದು. ಈ ಬಗೆಗೆ ಪ್ರಕೃತಲೇಖಕನ ಪ್ರತ್ಯೇಕಚಿಂತನೆ (ವಾಗರ್ಥವಿಸ್ಮಯಾಸ್ವಾದಃ (ಸಂಸ್ಕೃತ) ಬೆಂಗಳೂರು: ಪ್ರೇಕ್ಷಾಪ್ರತಿಷ್ಠಾನ, ೨೦೧೮. ಪು. ೧೧೦-೧೨೦) ಇರುವ ಕಾರಣ ಸದ್ಯದ ವಿಸ್ತರ ಅನಪೇಕ್ಷಿತ.

“ಅನೌಚಿತ್ಯಪ್ರವೃತ್ತಿಕೃತಮೇವ ಹಿ ಹಾಸ್ಯವಿಭಾವತ್ವಮ್ ... ಅನೌಚಿತ್ಯತ್ಯಾಗಃ ಸರ್ವಪುರುಷಾರ್ಥೇಷು ವ್ಯುತ್ಪಾದ್ಯಃ” (ಸಂ.೧, ಪು. ೨೯೪).

“ವಿಕೃತೋ ದೇಶ-ಕಾಲ-ಪ್ರಕೃತಿ-ವಯೋऽವಸ್ಥಾವಿಪರೀತೋ ಹಾಸ್ಯಸ್ಯ ವಿಭಾವಃ | ಏತೇನ ಸರ್ವೇ ರಸಾ ಹಾಸ್ಯೇಂऽತರ್ಭೂತಾ ಇತಿ ದರ್ಶಿತಮ್” (ಸಂ.೧, ಪು. ೩೧೦).    

ಕರುಣರಸವನ್ನು ಕುರಿತು ವಿವೇಚಿಸುವಾಗ ಅಭಿನವಗುಪ್ತನು ಕೃಪೆ ಮತ್ತು ದಯೆಗಳು ಕರುಣೆಯ ಪರ್ಯಾಯಗಳೆಂಬಂತೆ ಲೋಕಪ್ರಸಿದ್ಧವಾಗಿದ್ದರೂ ಅವು ಶೋಕಸ್ಥಾಯಿಭಾವದಿಂದ ಜನಿಸುವ ಕರುಣರಸದ ಪರ್ಯಾಯಗಳಲ್ಲವೆಂದಿರುವುದು ಗಮನಾರ್ಹ (ಸಂ.೧, ಪು. ೩೧೪). ಆದರೆ ಇವು ಏಕೆ ಹಾಗೆ ಭಿನ್ನೈಸಿವೆಯೆಂಬುದನ್ನು ಚಿಂತಿಸದಿರುವುದು ಕೊರತೆಯಾಗಿದೆ. ಇದು ಈ ಲೇಖನದ ಎರಡನೆಯ ಟಿಪ್ಪಣಿಯಲ್ಲಿ ಚರ್ಚಿತವಾಗಿರುವುದು ಸ್ಮರಣೀಯ. ವೀರರಸವನ್ನು ಕುರಿತು ಹೇಳುವಾಗಲೇ ಧೀರೋದಾತ್ತಾದಿನಾಯಕಚತುಷ್ಟಯಪ್ರಕಾರದ ಧೀರತ್ವವು ವೀರತ್ವವೂ ಹೌದೆಂಬ ಅಭಿಪ್ರಾಯ ಅಭಿನವಗುಪ್ತನದಾಗಿದೆ. ಜೊತೆಗೆ ವೀರರಸವು ಅರ್ಥಶಾಸ್ತ್ರದ ಹೃದಯವಾದ “ವಿನಯ”, ಅರ್ಥಾತ್ ಇಂದ್ರಿಯಜಯವನ್ನು ಕಟಾಕ್ಷಿಸಿದೆಯೆಂದು ಗಮನಿಸಿರುವುದೂ ಮಹತ್ತ್ವದ ಸಂಗತಿ. ಈ ಬಗೆಗೆ ಕೌಟಿಲ್ಯನ “ಕೃತ್ಸ್ನಂ ಹಿ ಶಾಸ್ತ್ರಮಿದಮಿಂದ್ರಿಯಜಯಃ” (ಅರ್ಥಶಾಸ್ತ್ರ, ೧.೩.೬) ಎಂಬ ಮಾತನ್ನು “ಸಂಧ್ಯಾದಿಗುಣಾನಾಂ ಸಮ್ಯಕ್ಪ್ರಯೋಗೋ ನಯಃ | ಇಂದ್ರಿಯಜಯೋ ವಿನಯಃ” (ಸಂ.೧, ಪು. ೩೨೦) ಎಂದು ಅಭಿನವಗುಪ್ತನು ಒಕ್ಕಣಿಸಿರುವ ಅಭಿಪ್ರಾಯದೊಡನೆ ಹೋಲಿಸಬಹುದು. ಶಾಂತರಸವನ್ನು ಕುರಿತು ಅಭಿನವಗುಪ್ತನು ಹಿರಿದಾದ ಚರ್ಚೆಯನ್ನೇ ಮಾಡಿದ್ದಾನೆ. ಹೆಚ್ಚೇನು, ಈ ರಸದ ಪ್ರತಿಷ್ಠಾಪನಾಚಾರ್ಯನೇ ಇವನೆನ್ನಬಹುದು. ಯದ್ಯಪಿ ನಾಟ್ಯಶಾಸ್ತ್ರದ ಪ್ರಾಚೀನಪಾಠಗಳು ಶಾಂತರಸವನ್ನು ಉಲ್ಲೇಖಿಸದಿದ್ದರೂ ಅಭಿನವಗುಪ್ತನು ತನಗೆ ಲಭಿಸಿದ ಪಾಠಾನುಸಾರಿಯಾಗಿ ಶಾಂತರಸಮೀಮಾಂಸೆಯನ್ನು ನಡಸಿದ್ದೇನೆಂದು ಹೇಳಿಕೊಂಡಿರುವುದಲ್ಲದೆ ಇದೇ ಪರಮರಸವೆಂದೂ ಪ್ರತಿಪಾದಿಸುತ್ತಾನೆ. ಈ ನಿಟ್ಟಿನಲ್ಲಿ ಅವನ ನಯ-ನಿಶ್ಚಯಗಳು ಅಪ್ರಕಂಪ್ಯವೂ ಆನುಮೋದ್ಯವೂ ಆಗಿವೆ. ಈ ಬಗೆಗೆ ಅನೇಕವಿದ್ವಾಂಸರು[1] ಬರೆದಿರುವ ಕಾರಣ ಇಲ್ಲಿ ವಿಸ್ತರ ಬೇಕಿಲ್ಲ. ಕೇವಲ ಒಂದೆರಡು ಹೊಳಹುಗಳನ್ನಷ್ಟೇ ಗಮನಿಸೋಣ. ಶಾಂತರಸವು ಎಲ್ಲರಿಗೂ ಆಸ್ವಾದ್ಯವಾಗದೆಂಬ ಪೂರ್ವಪಕ್ಷಕ್ಕೆ ಉತ್ತರವೀಯುತ್ತ ಈ ತೊಡಕು ಎಲ್ಲ ರಸಗಳಿಗೂ ಉಂಟೆಂದು ಯುಕ್ತಿಯುಕ್ತವಾಗಿಯೇ ಅಭಿನವಗುಪ್ತನು ನಿರೂಪಿಸುವಾಗ ರಸಿಕರ ರುಚಿವೈವಿಧ್ಯವನ್ನೂ ವಿವಿಧರಸಗಳ ಅನ್ವಯಪರಿಣಾಮದಲ್ಲಿ ವ್ಯತ್ಯಾಸವನ್ನೂ ಗಮನಿಸಿಕೊಂಡಿರುವುದು ಮನನೀಯ. (ಸಂ.೧, ಪು. ೩೩೪). ಶಾಂತವು ಶಮಸ್ಥಾಯಿಭಾವವನ್ನುಳ್ಳದ್ದೆಂದು ಹೇಳುತ್ತಾ ಎಲ್ಲ ರಸಗಳೂ ಈ ಸ್ಥಿತಿಯನ್ನು ಮುಟ್ಟಿದಾಗಲೇ ಅವುಗಳಿಗೆ ಆಸ್ವಾದಾರ್ಹತೆಯೆಂಬ ಮಹಾವಾಕ್ಯವನ್ನು ಸಾರುತ್ತಾನೆ:

“ಶಾಂತೋ ನಾಮ ಶಮಸ್ಥಾಯಿಭಾವಾತ್ಮಕ ಇತ್ಯಾದಿ ಶಾಂತಲಕ್ಷಣಂ ಪಠ್ಯತೇ | ತತ್ರ ಸರ್ವರಸಾನಾಂ ಶಾಂತಪ್ರಾಯ ಏವಾಸ್ವಾದಃ” (ಸಂ.೧, ಪು. ೩೩೪).

ಇದು ಸರ್ವಥಾ ದಾರ್ಶನಿಕವಾದ ದೃಷ್ಟಿ. ಮಾನವನಲ್ಲಿ ನೈಸರ್ಗಿಕವಾದ ರಾಗ-ದ್ವೇಷಗಳ ಕಾರಣ ಅಪಾರದರ್ಶಕವಾದ ಭಾವಗಳೆಲ್ಲ ಪಾರದರ್ಶಕವಾಗುವುದು ರಸಸ್ಥಿತಿಯಲ್ಲಿಯೇ. ಮತ್ತಿದು ರಾಗ-ದ್ವೇಷಗಳ—ತಾತ್ಕಾಲಿಕವಾದರೂ ಸಂಭವನೀಯವಾದ—ವಿಲಯದಿಂದಲೇ ಸಾಧ್ಯ. ಈ ಸ್ಥಿತಿಯು ಮಾನವಹೃದಯದಲ್ಲಿ ಶಮಸಂವೇದನೆಯ ಮೂಲಕವೇ ಹೌದೆಂಬುದು ನಿರ್ವಿವಾದ. ಈ ದೃಷ್ಟಿಯಲ್ಲಿ ಸರ್ವರಸಗಳೂ ಶಾಂತಪ್ರಾಯವೇ. ಅಷ್ಟೇಕೆ, ರಸಾನುಭವವೇ ಚಿತ್ತವಿಶ್ರಾಂತಿಯೆಂಬುದು ಸರ್ವವಿದಿತ. ಚಿತ್ತವಾದರೋ ವೃತ್ತಿಗಳ ಸಮೂಹ; ವೃತ್ತಿಗಳೆಂದರೆ ನಾನಾಭಾವವಿಕಾರಗಳ ನಿರಂತರತರಂಗಿತೆಯಲ್ಲದೆ ಮತ್ತೇನು? ರಸಪ್ರಕರಣದ ಕಡೆಯಲ್ಲಿ—ಇರುವ ರಸಗಳ ಸಂಖ್ಯೆ ಒಂಬತ್ತೇ; ಸ್ನೇಹ-ವಾತ್ಸಲ್ಯಾದಿಗಳು ರಸತ್ವಕ್ಕೇರಲಾರವೆಂಬ ಅಭಿನವಗುಪ್ತನ ನಿಲವು ಚಿಂತನೀಯ:

“ಸ್ನೇಹೋ ರಸ ಇತಿ ತ್ವಸತ್ | ಸ್ನೇಹೋ ಹ್ಯಭಿಷಂಗಃ | ಸ ಚ ಸರ್ವೋ ರತ್ಯುತ್ಸಾಹಾದಾವೇವ ಪರ್ಯವಸ್ಯತೇ | ತಥಾ ಹಿ ಬಾಲಸ್ಯ ಮಾತಾಪಿತ್ರಾದೌ ಸ್ನೇಹೋ ಭಯೇ ವಿಶ್ರಾಂತಃ, ಯೂನೋ ಮಿತ್ರಜನೇ ರತೌ, ಲಕ್ಷ್ಮಣಾದೇರ್ಭ್ರಾತರಿ ಸ್ನೇಹೋ ಧರ್ಮವೀರ ಏವ | ಏವಂ ವೃದ್ಧಸ್ಯ ಪುತ್ರಾದಾವಪಿ ದ್ರಷ್ಟವ್ಯಮ್ | ಗರ್ಧಸ್ಥಾಯಿಕಸ್ಯ ಲೌಲ್ಯರಸಸ್ಯ ಪ್ರತ್ಯಾಖ್ಯಾನೇ ಸರಣಿರ್ಮಂತವ್ಯಾ, ಹಾಸೇ ವಾ ರತೌ ವಾನ್ಯತ್ರ ಪರ್ಯವಸಾನಾತ್ | ಏವಂ ಭಕ್ತಾವಪಿ ವಾಚ್ಯಮಿತಿ” (ಸಂ.೧, ಪು. ೩೩೫-೩೩೬).

ರಸಸಂಖ್ಯೆಯ ವಿಷಯದಲ್ಲಿ ಸಾಕಷ್ಟು ತೊಡಕುಗಳಿವೆ. ಜೊತೆಗೆ, ಇದನ್ನು ಕುರಿತು ರುದ್ರಟನಿಂದ ಮೊದಲ್ಗೊಂಡು ಜಗನ್ನಾಥನವರೆಗೆ ಸಾಂಪ್ರದಾಯಿಕಚರ್ಚೆ ವಿಸ್ತರಿಸಿದೆ. ಆಧುನಿಕರಲ್ಲಿಯೂ ವಿ. ರಾಘವನ್, ರಾಮಚಂದ್ರ ಶುಕ್ಲ, ನಗೇಂದ್ರ, ಪುಲ್ಲೆಲ ಶ್ರೀರಾಮಚಂದ್ರುಡು ಮುಂತಾದ ಅನೇಕರು ಈ ಚರ್ಚೆಯನ್ನು ಉತ್ಸಾಹದಿಂದ ಮುಂದುವರಿಸಿದ್ದಾರೆ. ಆದರೆ ಎಲ್ಲಿಯೂ  ತೃಪ್ತಿಕರವಾದ ನಿರ್ಣಯವಾದಂತಿಲ್ಲ. ಮುಖ್ಯವಾಗಿ ಸ್ನೇಹ/ವಾತ್ಸಲ್ಯ/ಪ್ರೇಯೋರಸವನ್ನು ಕುರಿತೂ ಭಕ್ತಿರಸವನ್ನು ಕುರಿತೂ ಕೊನೆಯಿಲ್ಲದ ಚರ್ಚೆ ಬೆಳೆದಿದೆ. ನಮ್ಮ ಎಷ್ಟೋ ಮಂದಿ ಆಲಂಕಾರಿಕರು ಭರತನು ಎಂಟು ಅಥವಾ ಒಂಬತ್ತು ರಸಗಳನ್ನು ಮಾತ್ರ ಅಂಗೀಕರಿಸಿದ್ದಾನೆಂಬ ಒಂದೇ ಅಂಶದಿಂದ ಸಂಭವನೀಯರಸಾಂತರಗಳ ಸಾಧ್ಯತೆಯನ್ನು ಒಪ್ಪುವುದಿಲ್ಲ. ಆಧುನಿಕರೂ ಅದೆಷ್ಟೋ ಬಾರಿ ಅಪ್ಪಟ ಜೀವಭಾವಸಂವೇದನೆಯನ್ನು ಪರಪಪ್ರಮಾಣವಾಗಿ ಕೈಗೊಂಡು ತರ್ಕಶುದ್ಧಕ್ರಮದಲ್ಲಿ ವಿವೇಚಿಸದೆ ಪ್ರಾಚೀನರ ವಾದಗಳನ್ನು ಹಿಡಿದೋ ಅರ್ವಾಚೀನಮನಶ್ಶಾಸ್ತ್ರಾದಿಗಳ ತಾತ್ಕಾಲಿಕಪ್ರಮೇಯಗಳನ್ನು ನಚ್ಚಿಯೋ ಸಂಶೋಧನೆಗೆ ತೊಡಗುತ್ತಾರೆ. ಹೀಗಾಗಿ ಈ ಚರ್ಚೆಗೆ ನಿಸ್ತಾರವಿಲ್ಲ. ಇಡಿಯ ಈ ಪ್ರಕರಣವೇ ಪ್ರತ್ಯೇಕವಾದ ಅಧ್ಯಯನವನ್ನು ಬಯಸುವ ಕಾರಣ ಇಲ್ಲಿ ಕೂಲಂಕಷವಿವೇಚನೆ ಅಸಾಧ್ಯವೂ ಹೌದು. ಕೇವಲ ದಿಙ್ಮಾತ್ರನಿರೂಪಣೆಯಲ್ಲಿಯೂ ಕೆಲವೊಂದು ನಿಗಮನಗಳನ್ನು ಮಾತ್ರ ಕಾಣಬಹುದು. ಅಭಿನವಗುಪ್ತನ ಪ್ರಕಾರ ಸ್ನೇಹ ಅಥವಾ ವಾತ್ಸಲ್ಯವು ರತಿ ಇಲ್ಲವೇ ಉತ್ಸಾಹದಲ್ಲಿ ಅಡಗುತ್ತದೆ. ಮಕ್ಕಳ ಮಾತಾಪಿತೃಪ್ರೀತಿಯು ಭಯಮೂಲ, ತರುಣರ ವಯಸ್ಯಪ್ರೀತಿಯು ರತಿಮೂಲ, ಪ್ರಬುದ್ಧರ ಸ್ನೇಹವು ಧರ್ಮವೀರದಲ್ಲಿ ಪರಿಣಮಿಸುವ ಉತ್ಸಾಹಮೂಲ ಎಂಬಿತ್ಯಾದಿಯಾಗಿ ಅವನು ಕೊಡುವ ವಿವರಣೆ ತೀರ ಅತೃಪ್ತಿಕರವಾಗಿ ತೋರುತ್ತದೆ. ದಿಟವೇ, ರತ್ಯುತ್ಸಾಹಗಳಿಗಿರುವ ಜೀವನವ್ಯಾಪ್ತಿ ಬಲುಹಿರಿದು. ಇದು ಅವುಗಳ ತ್ರಿವರ್ಗಪ್ರತಿಪಾದಕಸಾಮರ್ಥ್ಯದಿಂದಲೇ ಅನುಮಿತವಾಗುತ್ತದೆ. ಆದರೆ ಭಾವವೊಂದು ಸ್ಥಾಯಿಯಾಗಲು, ತನ್ಮೂಲಕ ರಸತ್ವಕ್ಕೇರಲು, ಇದೊಂದೇ ಅಳತೆಗೋಲಲ್ಲ. ಅದು ಜೀವಸಹಜವೋ ಅಲ್ಲವೋ ಎಂಬುದೇ ನಿರ್ಣಾಯಕ. ವ್ಯಾಪ್ತಿಯ ದೃಷ್ಟಿಯಿಂದ ರೌದ್ರ-ಬೀಭತ್ಸ-ಭಯಾನಕಾದಿಗಳು ಇಕ್ಕಟ್ಟಿನವಾದರೂ ಇವುಗಳಿಗೆ ರಸತ್ವ ದಕ್ಕಿರುವುದು ಅವುಗಳ ಮೂಲದಲ್ಲಿರುವ ಭಾವಗಳ ಜೀವಸಹಜತೆಯಿಂದ. ಯಾವುದೇ ಪುರುಷಾರ್ಥಪ್ರಯೋಜಕವಲ್ಲವೆಂದು ಹೇಳಬಹುದಾದ ಹಾಸ್ಯಕ್ಕೆ ರಸತ್ವ ದಕ್ಕಿದ್ದು ಅದರ ಮಾನುಷಸಾರ್ವತ್ರಿಕತೆಯಿಂದ. ಹೀಗೆ ಪರಿಶೀಲಿಸಿದಾಗ ರತಿಗಿರುವ ತೃಪ್ತೀಕರಣಸಾಮರ್ಥ್ಯವು ತುಂಬ ಮಿಗಿಲು; ಮತ್ತಿದು ಪ್ರಗಾಢವಾಗಿ ತ್ರಿಕರಣವ್ಯಾಪಿಯೂ ಹೌದೆಂದು ತಿಳಿಯುವುದಾದರೂ ಇಂಥ ವ್ಯಾಪ್ತಿಯಿಲ್ಲದಿದ್ದರೂ ಜೀವಸಹಜವಾಗಿ ಹೊಮ್ಮುವ ಸಿಸೃಕ್ಷೆ ಮತ್ತು ವಿಕಸಿತಸ್ತರದ ಜೀವರಾಶಿಗಳಲ್ಲಿ ನೈಸರ್ಗಿಕವಾದ ಸಂತಾನಪಾಲನಪ್ರವಣತೆಗಳು ಅಲ್ಪಸ್ವಲ್ಪದ ಭಾವಗಳಲ್ಲವೆಂದು ತಿಳಿಯುತ್ತದೆ. ದಿಟವೇ, ಸಿಸೃಕ್ಷೆಯ ಆರಂಭ ರತಿಯಲ್ಲಿದೆ. ಆದರೆ ರತಿಯೂ ಸಿಸೃಕ್ಷೆಗಾಗಿ ದುಡಿಯುತ್ತಿದೆಯೆಂಬುದನ್ನು ಮರೆಯುವಂತಿಲ್ಲ. ಏಕೆಂದರೆ ಸಕಲಜೀವಿಗಳಲ್ಲಿ ನಿರಪವಾದವಾಗಿರುವ ಜೀಜೀವಿಷೆಯು ಮರಣದ ಅನಿವಾರ್ಯತೆಯನ್ನು ಮನಗಂಡೇ ಪರಂಪರಾನಿತ್ಯತ್ವದ ನ್ಯಾಯಾನುಸಾರ ಸಿಸೃಕ್ಷೆಯ ಮೂಲಕ ಸಂತಾನ ರೂಪದಿಂದ ತನ್ನತನವನ್ನು ಉಳಿಸಿಕೊಂಡಿದೆ, ಬೆಳಸಿಕೊಂಡಿದೆ. ಇಂಥ ಸಂತತಿಪರ್ಯವಸಾಯಿಯಾದ ರತಿಯು ಒಂದು ನಿಟ್ಟಿನಿಂದ ನೋಡಿದಾಗ ಉಪಕರಣವೆಂದೂ ಮತ್ತೊಂದು ನಿಟ್ಟಿನಿಂದ ನೋಡಿದಾಗ ಮೂಲಾಧಾರವೆಂದೂ ತಿಳಿಯುತ್ತದೆ. ಈ ನ್ಯಾಯವು ಸ್ನೇಹ ಅಥವಾ ವಾತ್ಸಲ್ಯಕ್ಕೂ ಅನ್ವಯಿಸುತ್ತದೆ. ಹೆಚ್ಚೇನು, ಪ್ರೀತಿಗೆ ಮೈಥುನವನ್ನು ಕೂಡಿಸಿದಾಗ ರತಿಯಾಗುತ್ತದೆ; ಅಂತಲ್ಲದೆ ಆದನ್ನು ಹಾಗೆಯೇ ಉಳಿಸಿದಾಗ ವಾತ್ಸಲ್ಯವೆನಿಸುತ್ತದೆ. ಇದನ್ನು ಮತ್ತೊಂದು ರೀತಿಯಲ್ಲಿಯೂ ಹೇಳಬಹುದು: ರತಿಯಲ್ಲಿ ಮೈಥುನವನ್ನು ಕಳೆದರೆ ಅದು ವಾತ್ಸಲ್ಯವಾಗುತ್ತದೆ. ಇವೆರಡು ಭಾವಗಳೂ ಇಷ್ಟು ನಿಕಟವಾದ ಕಾರಣ ತೀರ್ಮಾನ ತೊಡಕು, ವಿವೇಚನೆಯೂ ಕಷ್ಟ. ಆದರೂ ಸ್ವಾನುಭವನಿಷ್ಠವಾಗಿ ನೋಡಿದಾಗ ಜೀವಕ್ಕೆ ಸಖ್ಯವೆಂತೋ ಸಂಭೋಗವೂ ಅಷ್ಟೇ ಮುಖ್ಯವೆಂದು ತೋರುತ್ತದೆ. ಸಖ್ಯದ ಪರ್ಯಂತಭೂಮಿ ಸಂಭೋಗವೇ ಹೌದು. ಆದರೆ ಅಂತರಾಳದ ಸ್ಥಿತಿಯೂ ಉಂಟಷ್ಟೆ. ಇಂತಿದ್ದರೂ ಜೀವಸಾಮಾನ್ಯವು ಯಾವುದೇ ಸಂಸ್ಕಾರಗಳ, ವಿಧಿ-ನಿಷೇಧಗಳ ವ್ಯವಸ್ಥೆಗೆ ಮುನ್ನ ತನ್ನ ಸಂತತಿಯಲ್ಲಿಯೇ ಸ್ನೇಹವನ್ನೂ ರತಿಯನ್ನೂ ಸಾಧಿಸಿಕೊಳ್ಳುತ್ತಿತ್ತೆಂಬ ತಥ್ಯವನ್ನು ಮರೆಯುವಂತಿಲ್ಲ. ಮಾತ್ರವಲ್ಲ, ಮೈಥುನದ ಉಪಫಲವಾಗಿ ಸಂತತಿಯನ್ನು ಹೊಂದಿಯೂ ಅಲ್ಲಿ ಯಾವುದೇ ಪಾಲನಪ್ರೀತಿಯಿಲ್ಲದೆ, ಮುಂದೆಂದೋ ಅದೇ ಸಂತತಿಯಲ್ಲಿ ರತಿಯನ್ನು ಸಾಧಿಸಿಕೊಳ್ಳುವಂಥ ಜೀವರಾಶಿಗಳ ಉದಾಹರಣೆಯೂ ನಮ್ಮ ಮುಂದಿದೆ. ಇವುಗಳೆಲ್ಲ ನಿರಪವಾದವಾಗಿ ಆಹಾರ-ನಿದ್ರಾ-ಭಯ-ಮೈಥುನಗಳೆಂಬ ಮೂಲಭೂತಚೋದನೆಗಳಿಗೆ ಒಳಪಟ್ಟಿವೆ. ಮತ್ತು ಈ ಚೋದನೆಯೇ ಎಲ್ಲ ಭಾವಗಳ, ತನ್ಮೂಲಕ ರಸಗಳ, ಮೂಲಸ್ಥಾನ. ಇದನ್ನೆಲ್ಲ ನಾವು ಈ ಮೊದಲೇ ಗಮನಿಸಿದ್ದೇವೆ. ಹೀಗೆ ತರ್ಕಿಸಿದಾಗ ಸ್ನೇಹವು ರತಿಯ ಒಂದು ವಿಭಾಗವಲ್ಲದೆ ಸ್ವತಂತ್ರಭಾವವೆನಿಸದು. ಆದುದರಿಂದ ವಾತ್ಸಲ್ಯವು ಹೆಚ್ಚೆಂದರೆ “ಉಪರಸ”ವಾದೀತೇ ಹೊರತು ಸ್ವತಂತ್ರರಸವಾಗದು. ಈ ನ್ಯಾಯವನ್ನೇ ಭಕ್ತಿರಸದ[2] ಸಾಧ್ಯಾಸಾಧ್ಯತೆಗೂ ಅನ್ವಯಿಸಬಹುದು. ಇಲ್ಲಿ ಚರ್ಚೆ ತುಂಬ ಆಳಕ್ಕೆ ಹೋಗಬೇಕಿಲ್ಲ. ಸ್ಬಲ್ಪದರಲ್ಲಿಯೇ ತಿಳಿಯುತ್ತದೆ—ಭಕ್ತಿಯೊಂದು ಸಂಸ್ಕಾರಸಂಭೂತವಾದ ಭಾವ (Cultivated Feeling). ಭಕ್ತಿಯು ಒಂದು ಮೌಲ್ಯವಾಗಿ ಇಹ-ಪರಜೀವನಗಳಿಗೆ ಎಷ್ಟೇ ಮುಖ್ಯವಾದರೂ ಅದು ನೈಸರ್ಗಿಕವಲ್ಲದ ಕಾರಣ ಭಾವದಾರ್ಢ್ಯವನ್ನು ಹೊಂದಿ ಉತ್ತರೋತ್ತರವಾಗಿ ರಸತ್ವಕ್ಕೇರಲಾರದು. ಹಾಗೆಂದ ಮಾತ್ರಕ್ಕೆ ಸೊಗಸಿಲ್ಲವೆಂದಲ್ಲ. ಆದರೆ ಭಕ್ತಿಯ ಸೊಗಸೆಲ್ಲ ಅದು ಇನ್ನಿತರ ರಸಗಳ ಉಪಜೀವಿಯಾಗಿ ತನ್ಮೂಲಕ ಅಭಿವ್ಯಕ್ತವಾಗುವುದರಲ್ಲಿಯೇ ಇದೆ. ಉದಾಹರಣೆಗೆ: ಮಧುರಭಕ್ತಿಯು ಶೃಂಗಾರೋಪಜೀವಿ, ದಾಸ್ಯಭಕ್ತಿಯು ಕರುಣೋಪಜೀವಿ, ವೀರಭಕ್ತಿಯು ವೀರೋಪಜೀವಿ, ವಾತ್ಸಲ್ಯ-ಸಖ್ಯಭಕ್ತಿಗಳು ಸ್ನೇಹೋಪಜೀವಿ. ಒಟ್ಟಿನಲ್ಲಿ ಅಭಿನವಗುಪ್ತನು ರಸಸಂಖ್ಯೆಯನ್ನು ಕುರಿತ ತನ್ನ ನಿಗಮನಗಳಿಗೆ ನಿಶ್ಚಿತವಾದ ತರ್ಕವನ್ನು ಕೊಡದಿದ್ದರೂ ತಪ್ಪನ್ನಂತೂ ಮಾಡಿಲ್ಲವೆಂದು ತಿಳಿಯಬಹುದು. ಇದು ಸ್ವಲ್ಪದ ಸಾಧನೆಯೇನಲ್ಲ.

ಟಿಪ್ಪಣಿಗಳು

[1] Raghavan, V. The Number of Rasas. Chennai: The Adyar Library and Research Centre, 1975; Masson, J. L., Patwardhan, M. V. Santarasa and Abhinavagupta’s Philosohpy of Aesthetics. Poona: BORI, 1985; ನಗೇಂದ್ರ. “ರಸಸಿದ್ಧಾಂತ” (ಅನು. ಪ್ರಧಾನ ಗುರುದತ್ತ). ನವದೆಹಲಿ: ಸಾಹಿತ್ಯ ಅಕಾದೆಮಿ, ೧೯೯೫. [2] ಭಕ್ತಿರಸದ ಸಾಧ್ಯಾಸಾಧ್ಯತೆಗಳನ್ನು ಕುರಿತು ಹೆಚ್ಚಿನ ಚರ್ಚೆ ಸಾಗಿದ್ದರೂ ಮಹೇಶ್ ಅಡಕೋಳಿಯವರ Bhakti Rasa: A Debate (Muroor: Anand Publications, 2000) ಎಂಬ ಹೊತ್ತಗೆಯು ಮಿಗಿಲಾಗಿ ಬೋಧಪ್ರದವಾಗಿದೆ.

To be continued.

Author(s)

About:

Dr. Ganesh is a 'shatavadhani' and one of India’s foremost Sanskrit poets and scholars. He writes and lectures extensively on various subjects pertaining to India and Indian cultural heritage. He is a master of the ancient art of avadhana and is credited with reviving the art in Kannada. He is a recipient of the Badarayana-Vyasa Puraskar from the President of India for his contribution to the Sanskrit language.