“ಅಭಿನವಭಾರತಿ”ಯ ಕೆಲವೊಂದು ವೈಶಿಷ್ಟ್ಯಗಳು — ಸಾಹಿತ್ಯದಲ್ಲಿ ದೃಶ್ಯಕಾವ್ಯದ ಮೇಲ್ಮೆ

This article is part 6 of 19 in the series Abhinavabharati

ಸಾಹಿತ್ಯದಲ್ಲಿ ದೃಶ್ಯಕಾವ್ಯದ ಮೇಲ್ಮೆ

ಅಭಿನವಭಾರತಿಯ ಮೊದಲಿಗೇ ದೃಶ್ಯಕಾವ್ಯದ ಮೇಲ್ಮೆಯನ್ನು ಅಭಿನವಗುಪ್ತನು ಹೇಳಿದ್ದಾನೆ. ಈ ಭಾವವನ್ನು ಕೃತಿಯ ಆದ್ಯಂತ ಅಲ್ಲಲ್ಲಿ ಬಿತ್ತರಿಸಿದ್ದಾನೆ ಕೂಡ. ವಿಶೇಷತಃ “ರಸಾಧ್ಯಾಯ”ದಲ್ಲಿ ಈ ಸಂಗತಿಯನ್ನು ಮತ್ತೆ ಪ್ರಸ್ತಾವಿಸುತ್ತಾನೆ. ಅಲ್ಲದೆ ಈ ಬಗೆಯಲ್ಲಿ ದೃಶ್ಯಕಾವ್ಯದಲ್ಲಿರುವ ರಸಪಾರಮ್ಯಕ್ಕೆ ಕಾರಣವನ್ನೂ ಹೇಳುತ್ತಾನೆ. ಮುಖ್ಯವಾಗಿ ಇಲ್ಲಿ ಚತುರ್ವಿಧಾಭಿನಯಗಳೂ ಸಮುಚಿತವಾದ ವೃತ್ತಿ-ಪ್ರವೃತ್ತಿಗಳೂ ಸೇರಿರುತ್ತವೆ; ಸಹೃದಯರಿಗೆ ಪ್ರತ್ಯೇಕವಾಗಿ ಕಲ್ಪಿಸಿಕೊಳ್ಳುವ ಶ್ರಮವಿಲ್ಲದೆಯೇ ವಿಭಾವಾನುಭಾವಸಾಮಗ್ರಿಯು ಇಂದ್ರಿಯಗೋಚರವಾಗುತ್ತದೆ. ಇಲ್ಲೆಲ್ಲ ತನ್ನ ಗುರುವಾದ ಭಟ್ಟತೌತನ ಪಾಠದ ಫಲವಂತಿಕೆಯನ್ನು ಚೆನ್ನಾಗಿ ಕಾಣಿಸಿದ್ದಾನೆ:

“ವಸ್ತುತಸ್ತು ದಶರೂಪಕ ಏವ | ಯದಾಹ ವಾಮನಃ ’ಸಂದರ್ಭೇಷು ದಶರೂಪಕಂ ಶ್ರೇಯಃ | ತದ್ವಿಚಿತ್ರಂ ಚಿತ್ರಪಟವದ್ವಿಶೇಷಸಾಕಲ್ಯಾತ್’ ಇತಿ | ತದ್ರೂಪರಸಚರ್ವಣಯಾ ತು ಪ್ರಬಂಧೇ ಭಾಷಾವೇಷಪ್ರವೃತ್ತ್ಯೌಚಿತ್ಯಾದಿಕಲ್ಪನಾತ್ | ತದುಪಜೀವನೇನ ಮುಕ್ತಕೇ ಯಥಾ ಚ ತತ್ರ ಸಹೃದಯಾಃ ಪೂರ್ವಾಪರಮುಚಿತಂ ಪರಿಕಲ್ಪ್ಯೇದೃಗತ್ರ ವಕ್ತಾಸ್ಮಿನ್ನವಸರ ಇತ್ಯಾದಿ ಬಹುತರಂ ಪೀಠಬಂಧರೂಪಂ ವಿದಧತೇ” (ಸಂ.೧, ಪು. ೨೮೪).

“ನಾಟ್ಯಾತ್ಸಮುದಾಯರೂಪಾದ್ರಸಾಃ | ಯದಿ ವಾ ನಾಟ್ಯಮೇವ ರಸಾಃ | ರಸಸಮುದಯೋ ಹಿ ನಾಟ್ಯಮ್ | ನಾಟ್ಯ ಏವ ಚ ರಸಾಃ | ಕಾವ್ಯೇऽಪಿ ನಾಟ್ಯಾಯಮಾನ ಏವ ರಸಾಃ | ಕಾವ್ಯಾರ್ಥವಿಷಯೇ ಹಿ ಪ್ರತ್ಯಕ್ಷಕಲ್ಪಸಂವೇದನೋದಯೇ ರಸೋದಯ ಇತ್ಯುಪಾಧ್ಯಾಯಾಃ | ಯದಾಹುಃ ಕಾವ್ಯಕೌತುಕೇ—’ಪ್ರಯೋಗತ್ವಮನಾಪನ್ನೇ ಕಾವ್ಯೇ ನಾಸ್ವಾದಸಂಭವ’ ಇತಿ ’ವರ್ಣನೋತ್ಕಲಿಕಾಭೋಗಪ್ರೌಢೋಕ್ತ್ಯಾ ಸಮ್ಯಗರ್ಪಿತಾಃ | ಉದ್ಯಾನಕಾಂತಾಚಂದ್ರಾದ್ಯಾ ಭಾವಾಃ ಪ್ರತ್ಯಕ್ಷವತ್ಸ್ಫುಟಾಃ’ ಇತಿ |

ಅನ್ಯೇ ತು ಕಾವ್ಯೇऽಪಿ ಗುಣಾಲಂಕಾರಸೌಂದರ್ಯಾತಿಶಯಕೃತಂ ರಸಚರ್ವಣಮಾಹುಃ | ವಯಂ ತು ಬ್ರೂಮಃ—ಕಾವ್ಯಂ ತಾವನ್ಮುಖ್ಯತೋ ದಶರೂಪಕಾತ್ಮಕಮೇವ | ತತ್ರ ಹ್ಯುಚಿತೈರ್ಭಾಷಾವೃತ್ತಿಕಾಕುನೇಪಥ್ಯಪ್ರಭೃತಿಭಿಃ ಪೂರ್ಯತೇ ರಸವತ್ತಾ ... ಪ್ರತ್ಯಕ್ಷೋಚಿತತಥಾವಿಧಚರ್ವಣಾಲಾಭಾಯ ನಟಾದಿಪ್ರಕ್ರಿಯಾ | ಸ್ವಗತಕ್ರೋಧಶೋಕಾದಿಸಂಕಟಹೃದಯಗ್ರಂಥಿಭಂಜನಾಯ ಗೀತಾದಿಪ್ರಕ್ರಿಯಾ ಚ ಮುನಿನಾ ವಿರಚಿತಾ | ಸರ್ವಾನುಗ್ರಾಹಕಂ ಹಿ ಶಾಸ್ತ್ರಮಿತಿ ನ್ಯಾಯಾತ್ | ತೇನ ನಾಟ್ಯ ಏವ ರಸಾ ನ ಲೋಕ ಇತ್ಯರ್ಥಃ | ಕಾವ್ಯಂ ಚ ನಾಟ್ಯಮೇವ” (ಸಂ.೧, ಪು. ೨೮೮-೨೮೯).

ನಾಟ್ಯಾಯಮಾನತೆಯಿಲ್ಲದೆ ಶ್ರವ್ಯಕಾವ್ಯದಲ್ಲಿಯೂ ಆಸ್ವಾದವು ಅಸಂಭವವೆಂಬುದು ಸತ್ಯವೇ ಹೌದಾದರೂ ವಿಭಿನ್ನಕಲಾಮಾಧ್ಯಮಗಳಿಗೆ ಅವುಗಳದೇ ಆದ ಬಲಾಬಲಗಳಿರುತ್ತವೆ. ಇವೇ ಅವುಗಳ ಅನನ್ಯಾಸ್ವಾದಕ್ಕೂ ಕಾರಣ. ದೃಶ್ಯಕಾವ್ಯವು ಅದೆಷ್ಟೇ ರೀತಿಯಲ್ಲಿ ಕಣ್ಣಿಗೆ ಕಟ್ಟುವಂತಿರಲಿ, ವಿಭಾವನಾಶಕ್ತಿಯು ಅಷ್ಟಾಗಿ ಸಿದ್ಧಿಸಿರದ ಪಾಮರಜನತೆಗೆ ಅದೆಷ್ಟೇ ಒದಗಿಬರುವಂತಿರಲಿ, ಶ್ರವ್ಯಕಾವ್ಯದ ಸೂಕ್ಷ್ಮಾಂಶಗಳೆಷ್ಟೋ ದೃಶ್ಯಮಾಧ್ಯಮಕ್ಕೆ ದಕ್ಕವೆಂಬುದು ಕಲಾಸತ್ಯ. ವಿಶೇಷತಃ ಕವಿಪ್ರೌಢೋಕ್ತಿಯ ನಯ-ನವುರುಗಳು ಮತ್ತು ಪ್ರಾಗಲ್ಭ್ಯ-ವೈಶದ್ಯಗಳು ವಿವಿಧಪಾತ್ರ-ಸಂನಿವೇಶಗಳ ಚಿತ್ತವೃತ್ತಿಗಳನ್ನೂ ವಿವರಗಳನ್ನೂ ರೂಪಿಸುವಲ್ಲಿ ದುಡಿಯುವ ಪರಿ ಅನನ್ಯ, ಅಸಾಮಾನ್ಯ. ಇದು ದೃಶ್ಯಕಾವ್ಯಕ್ಕೆ ಸರ್ವಥಾ ಅಸಾಧ್ಯ. ಅಲ್ಲದೆ ವ್ಯುತ್ಪನ್ನನೂ ಕಲ್ಪನಾಶೀಲನೂ ಆದ ಸಹೃದಯನಿಗೆ ದೃಶ್ಯಕಾವ್ಯವು ಅದೆಷ್ಟೋ ಬಾರಿ ಅವನ ವಿಭಾವನಾಶಕ್ತಿಗೆ ಸಾಕಾಗದೆ ಹೋಗುವುದುಂಟು. ತತ್ರಾಪಿ ಕಥೆ-ಕಾದಂಬರಿಗಳನ್ನೋ ಕಾವ್ಯ-ಇತಿಹಾಸಗಳನ್ನೋ ರೂಪಕ-ಚಲನಚಿತ್ರಗಳಾಗಿ ರೂಪಿಸುವ ಸಂದರ್ಭಗಳಲ್ಲಿ ಈ ಬಗೆಯ ರಸಹ್ರಾಸವು ಸಹೃದಯರಿಗೆಲ್ಲ ಸ್ವಾನುಭವವೇದ್ಯ. ಇದನ್ನು ಅಭಿನವಗುಪ್ತನು ಗಮನಿಸದಿರುವುದೊಂದು ಚೋದ್ಯ. ಪಾಶ್ಚಾತ್ಯಸಾಹಿತ್ಯಮೀಮಾಂಸಕರಲ್ಲಿ ಅಗ್ರೇಸರನಾದ ಅರಿಸ್ಟಾಟಲ್ ಕೂಡ ಈ ಬಗೆಯ ಅಭಿಪ್ರಾಯವನ್ನೇ ತಾಳಿರುವುದಿಲ್ಲಿ ಸ್ಮರಣೀಯ. ಅವನ ಪ್ರಕಾರ ರುದ್ರ/ಗಂಭೀರನಾಟಕವು (Tragedy) ಭೂಮಕಾವ್ಯಕ್ಕಿಂತ (Epic) ರಸಸೃಷ್ಟಿಯಲ್ಲಿ ಮಿಗಿಲು. ಆದರೆ ಭೋಜರಾಜನು ಇದಕ್ಕೆ ವ್ಯತಿರಿಕ್ತವಾಗಿ ನಾಟಕ-ಪ್ರಕರಣಗಳಿಗಿಂತ ಮಹಾಕಾವ್ಯವೇ ಮಿಗಿಲಾದ ರಸಸೃಷ್ಟಿಯೆಂದಿರುವುದು ಗಮನಾರ್ಹ.

ರಸವು ಸರ್ವಥಾ ಆನಂದಸ್ವರೂಪಿ

ರಸಾನುಭೂತಿಯು ಕೇವಲ ಸುಖವೇ ಅಥವಾ ಸುಖ-ದುಃಖಾತ್ಮಕವೇ ಎಂಬ ಚರ್ಚೆ ಸಾಕಷ್ಟು ಹಳೆಯದು. ಸುಖ-ದುಃಖಗಳು ಲೌಕಿಕಸ್ತರದ ಭಾವಕ್ಕಲ್ಲದೆ ಅಲೌಕಿಕವಾದ ರಸಕ್ಕಲ್ಲವೆಂಬುದು ಅಭಿನವಗುಪ್ತನ ಸ್ಪಷ್ಟವಾದ ನಿಲವು. ಇದನ್ನವನು ಹತ್ತಾರು ಬಾರಿ ಪ್ರಸ್ತಾವಿಸಿದ್ದಾನೆ. ಅಲ್ಲದೆ ರಸಾಸ್ವಾದವೆಂಬುದು ಆತ್ಮಾನಂದದ ಪ್ರಜ್ಞಾನಘನಸ್ವರೂಪವಲ್ಲದೆ ಮತ್ತೊಂದಲ್ಲವೆಂಬ ಎತ್ತರಕ್ಕೆ ಕಲಾನುಭವವನ್ನು ಕೊಂಡೊಯ್ದಿದ್ದಾನೆ ಕೂಡ:

“ಸಾಮಾಜಿಕಾನಾಂ ಹಿ ಹರ್ಷೈಕಫಲಂ ನಾಟ್ಯಂ ನ ಶೋಕಾದಿಫಲಮ್” (ಸಂ.೧, ಪು. ೨೮೭).

“ಅಸ್ಮನ್ಮತೇ ಸಂವೇದನಮೇವಾನಂದಘನಮಾಸ್ವಾದ್ಯತೇ | ತತ್ರ ಕಾ ದುಃಖಶಂಕಾ?” (ಸಂ.೧, ಪು. ೨೮೯).

ಕೇವಲ ವಾಸ್ತವವಾದಿಗಳು (ಜಗತ್ಸತ್ಯವಾದಿಗಳು) ಮಾತ್ರ ರಸವನ್ನು ಸುಖ-ದುಃಖಾತ್ಮಕವೆಂದು ಲಕ್ಷಣೀಕರಿಸುತ್ತಾರೆ. ಆದರೆ ಅವರಿಗೆ ಈ ಬಗೆಯ ಅನುಭವವನ್ನು ಕೊಡುವ ಜಗತ್ತೇ ಇರುವಾಗ, ಮತ್ತೆ ಅದೇ ಜಗತ್ತಿನಲ್ಲೊಂದು ಅಂಶವಾದ ಕಲೆಯೇಕೆ ಬೇಕು? ಇಂತಿದ್ದರೂ ಅವರು ಕಲೆಗಾಗಿ ಹಾತೊರೆದರೆ ಅದು ರಸಸ್ವರೂಪವನ್ನು ಅರಿಯಲಾಗದ ಅಜ್ಞಾನವೋ ಅಥವಾ ಅರಿತೂ ಅಂಗೀಕರಿಸಲಾಗದ ಕಾಪಟ್ಯವೋ ನಮಗೆ ತಿಳಿಯದು. ಹೀಗೆ ಕಲಾನುಭವವು ಆತ್ಯಂತಿಕವಾಗಿ ಆನಂದಸ್ವರೂಪವೇ ಆದರೂ ಕಲಾನಿರ್ಮಾಣಕಾಲದಲ್ಲಿ ಕವಿ-ಕಲಾವಿದರಿಗೆ ಉಂಟಾಗುವ ಅನುಭವ ಎಂಥದ್ದೆಂಬ ಕುತೂಹಲಕಾರಿಯಾದ ಪ್ರಶ್ನೆಗೆ ಅಭಿನವಗುಪ್ತನ ಉತ್ತರ ಮಾರ್ಮಿಕವಾಗಿದೆ. ಅವನ ಪ್ರಕಾರ ಕಲಾನಿರ್ಮಾಣಕಾಲದಲ್ಲಿ ಕವಿ-ಕಲಾವಿದರಿಗೆ ರಸಾಸ್ವಾದದ ಆನಂದವಿರದು. ಅವರೇನಿದ್ದರೂ ಸಹೃದಯರಿಗೆ ಅಂಥ ಆನಂದವನ್ನು ಮುಟ್ಟಿಸುವ ಪರಿಕರಮಾತ್ರಗಳಾಗಿರುತ್ತಾರೆ[1]:

“ಅತ ಏವ ಚ ನಟೇ ನ ರಸಃ ... ನಟೇ ತರ್ಹಿ ಕಿಮ್? ಆಸ್ವದನೋಪಾಯಃ | ಅತ ಏವ ಚ ಪಾತ್ರಮುಚ್ಯತೇ | ನ ಹಿ ಪಾತ್ರೇ ಮದ್ಯಾಸ್ವಾದಃ | ಅಪಿ ತು ತದುಪಾಯಕಃ | ತೇನ ಪ್ರಮುಖಮಾತ್ರೇ ನಟೋಪಯೋಗ ಇತ್ಯಲಮ್” (ಸಂ.೧, ಪು. ೨೮೯).

ಆದರೆ ಪರಿಸ್ಥಿತಿ ಇಷ್ಟು ಸುಕರನಿರ್ವಾಚ್ಯವಲ್ಲ. ಕಲಾನಿರ್ಮಾಣಕಾಲದಲ್ಲಿ ಕವಿ-ಕಲಾವಿದರು ಆನಂದವನ್ನು ಹೊಂದದೆ ಗತ್ಯಂತರವಿಲ್ಲ. ಆದರೆ ಇದು ಸಹೃದಯನಿಗೆ ಕಲಾಸ್ವಾದನಕಾಲದಲ್ಲುಂಟಾಗುವ ಆನಂದಕ್ಕಿಂತ ಕಿಂಚಿದ್ಭಿನ್ನವೆನ್ನಬೇಕು. ದಿಟವೇ, ಅಭಿನವಗುಪ್ತನ ನಾಟ್ಯಶಾಸ್ತ್ರಗುರು ಭಟ್ಟತೌತನೇ ಒಂದೆಡೆ ಒಕ್ಕಣಿಸುತ್ತಾನೆ: “ನಾಯಕಸ್ಯ ಕವೇಃ ಶ್ರೋತುಃ ಸಮಾನೋऽನುಭವಃ ಸ್ಮೃತಃ” ಎಂದು. ಈ ಪ್ರಕಾರ ಮೂಲಕಥೆಯ ನಾಯಕನ ಅಥವಾ ರಂಗಸ್ಥಳದಲ್ಲಿ ತದನುಕರ್ತನ, ಕಾವ್ಯರಚನೆಯನ್ನು ಮಾಡಿದ ಕವಿಯ ಹಾಗೂ ಇವನ್ನೆಲ್ಲ ಆಸ್ವಾದಿಸುವ ಸಹೃದಯನ ಅನುಭವಗಳೆಲ್ಲ ಒಂದೇ; ಮತ್ತದು ರಸಾನಂದವೇ ಹೌದು. ಆದರೆ ಇದೂ ಅಷ್ಟಾಗಿ ಕ್ಷೋದಕ್ಷಮವಲ್ಲ. ಏಕೆಂದರೆ ನಾಯಕನು ವಾಸ್ತವಜೀವನದಲ್ಲಿ, ತನ್ನ ಸುಖ-ದುಃಖಸಂನಿವೇಶಗಳಲ್ಲೆಲ್ಲ ರಸಾನಂದವನ್ನು ಹೊಂದಿರುವುದು ಅಸಂಭವ. ಇನ್ನು ಕವಿ-ಕಲಾವಿದರಿಗೆ ತಮ್ಮ ಕಲಾಸೃಷ್ಟಿಕಾಲದಲ್ಲಿ ಆನಂದವೇ ಇದ್ದರೂ ಕೃತಿಯು ಚೆನ್ನಾಗಿ ಬರಬೇಕೆಂಬ ವ್ಯಗ್ರತೆಯೂ ವಿಭಾವಾನುಭಾವಸಾಮಗ್ರಿಯ ಸಂಯೋಜನಬಾಧ್ಯತೆ ಮತ್ತು ಅದನ್ನು ಧರಿಸುವಲ್ಲಿ ಉಂಟಾಗುವ ಶ್ರಮಗಳು ಕೆಲಮಟ್ಟಿಗೆ ರಸವಿಘ್ನಕಾರಿ. ಹೀಗಾಗಿ ಇವರಿಗೆ ನಿರ್ಣಿರೋಧವಾಗಿ ರಸಾನಂದವುಂಟೆಂದು ಹೇಳಲಾಗದು. ಇನ್ನುಳಿದಂತೆ ಸಹೃದಯನಿಗೆ ಮಾತ್ರ ರಸದ ಸಮಗ್ರಸಿದ್ಧಿ. ಹೀಗೆಂದ ಮಾತ್ರಕ್ಕೆ ಕವಿ-ಕಲಾವಿದರಿಗೆ ರಸಾನುಭೂತಿಯಿಲ್ಲವೆ? ಈ ಪ್ರಶ್ನೆಯನ್ನು ಪ್ರಕೃತಲೇಖಕನು ಅರಿತ ಮಟ್ಟಿಗೆ ನಮ್ಮ ಪ್ರಾಚೀನಕಾವ್ಯಮೀಮಾಂಸಕರು ಉತ್ತರಿಸಿಲ್ಲ; ಅಷ್ಟೇಕೆ, ಗಣಿಸಿಯೇ ಇಲ್ಲ. ಸ್ವೋಪಜ್ಞವಾಗಿ ಹೇಳವುದಾದರೆ, ಕವಿ-ಕಲಾವಿದರಿಗೆ ತಮ್ಮ ಕಲಾನಿರ್ಮಿತಿಯ ಹೊಳಹು ಅಂತರಂಗದಲ್ಲಿ ಮೂಡಿದಾಗ ಅವಶ್ಯವಾಗಿ ರಸಾಸ್ವಾದವಾಗಿರುತ್ತದೆ. ಏಕೆಂದರೆ ಈ ಹೊಳಹು ಅವರ ಸೃಷ್ಟಿಯಲ್ಲ; ಅದು ಅವರದೆಂದು ಹೇಳಬಹುದಾದರೂ ಅವರ ಅಂಕೆಯಲ್ಲೆಂದೂ ಇಲ್ಲದ ಪ್ರತಿಭಾಶಕ್ತಿಯ ಫಲ. ಹೀಗಾಗಿ  ಮಿಂಚಿನಂತೆ ಮೂಡಿದ ಕಾವ್ಯ-ಕಲಾಕಲ್ಪನೆಯು ಪಿಂಡಾಂಡದಲ್ಲಡಗಿದ ಬ್ರಹ್ಮಾಂಡದಂತೆ ಸಂಕ್ಷಿಪ್ತವಾದರೂ ಸ್ವಯಂಪೂರ್ಣವಾಗಿರುವ ಕಾರಣ ಬೀಜಮಾತ್ರವಾಗಿರುವ ವಿಭಾವಾನುಭಾವಸಾಮಗ್ರಿಯಿಂದಲೇ ಸಮೃದ್ಧವೆನಿಸಬಲ್ಲ ರಸಾಸ್ವಾದವನ್ನು ಕೊಡುತ್ತದೆ. ಇದೊಂದು ಬಗೆಯಲ್ಲಿ ಘನಸಾಂದ್ರಾನುಭವ. ಇದನ್ನೇ ಶ್ರದ್ಧಾರಸಿಕರು ಭಗವತ್ ಸ್ಫುರಣೆ, ದೇವರ ಕಾವ್ಯ, ಶಾರದಾನುಗ್ರಹ ಎಂಬಿವೇ ಮಾತುಗಳಿಂದ ಮನ್ನಿಸುತ್ತಾರೆ. ಇಂಥ ದಟ್ಟವಾದ ರಸಾನುಭವವೇ ಕವಿ-ಕಲಾವಿದರನ್ನು ಪ್ರೇರಿಸಿ ಆ ಅನುಭೂತಿಯನ್ನು ತಮ್ಮ ತಮ್ಮ ಮಾಧ್ಯಮಗಳಲ್ಲಿ ಅಭಿವ್ಯಕ್ತಿಸುವ ಮೂಲಕ ಅದಕ್ಕೆ ಮೂರ್ತತೆಯನ್ನು ಕೊಡಲು ಕಾರಣವಾಗುತ್ತದೆ. ಹೀಗೆ ಮಿಂಚೊಂದು ಪ್ರದೀಪವಾಗುವ ತೆರದಲ್ಲಿ ಕವಿ-ಕಲಾವಿದರ ಕಾರಯಿತ್ರೀಪ್ರತಿಭೋನ್ಮೀಲಿತವಾದ ರಸಸಿದ್ಧಿಯು ಸಹೃದಯರ ಭಾವಯಿತ್ರೀಪ್ರತಿಭೋಜ್ಜೀವನಕ್ಕೆ ದೋಹದವೀಯುತ್ತದೆ.

ಟಿಪ್ಪಣಿಗಳು

[1] ಹೀಗೆ ಹೇಳಿಯೂ ಇದೇ ಅಧ್ಯಾಯದಲ್ಲಿ ಅಭಿನವಗುಪ್ತನು ತನ್ನ ಪೂರ್ವಾಭಿಪ್ರಾಯಕ್ಕೆ ವಿರುದ್ಧವಾದ ನಿಲವನ್ನು ತಾಳುವುದು ಚೋದ್ಯ:

“ಕವಿರ್ಹಿ ಸಾಮಾಜಿಕತುಲ್ಯ ಏವ | ತತ ಏವೋಕ್ತಂ ’ಶೃಂಗಾರೀ ಚೇತ್ಕವಿಃ’ ಇತ್ಯಾನಂದವರ್ಧನಾಚಾರ್ಯೇಣ” (ಸಂ.೧, ಪು. ೨೯೨).

ಮಾತ್ರವಲ್ಲ, ಮುಂದುವರಿದು ಇಡಿಯ ಕಲಾನಿರ್ಮಾಣದ ಮೂಲಚೂಲಗಳನ್ನು ಒಂದು ವೃಕ್ಷರೂಪಕವಾಗಿ ಮುಂದಿಡುತ್ತಾನೆ:

“ತತೋ ವೃಕ್ಷಸ್ಥಾನೀಯಂ ಕಾವ್ಯಮ್ | ತತ್ರ ಪುಷ್ಪಾದಿಸ್ಥಾನಿಯೋऽಭಿನಯಾದಿನಟವ್ಯಾಪಾರಃ | ತತ್ರ ಫಲಸ್ಥಾನೀಯಃ ಸಾಮಾಜಿಕರಸಾಸ್ವಾದಃ” (ಸಂ.೧, ಪು. ೨೯೨).

ಇಲ್ಲಿ ಕವಿ-ಕಲಾವಿದರ ಆನಂದವು ರಸವೃಕ್ಷದಲ್ಲಿ ಪುಷ್ಪಸದೃಶವೆಂದೂ ಸಹೃದಯರ ಆನಂದವು ಫಲಸಂನಿಭವೆಂದೂ ಹೇಳುವ ಮೂಲಕ ಮತ್ತೆ ತನ್ನ ಅಭಿಪ್ರಾಯವನ್ನು ಬದಲಿಸಿಕೊಂಡು ಮೊದಲಿಗೇ ಮರಳಿದಂತಿದೆ. ಅಭಿನವಗುಪ್ತನಲ್ಲಿ ಇಂಥ ವಿಪರ್ಯಯಗಳು ಹಲವಾರು. ಆದರೆ ಅವೆಲ್ಲ ಅವನ ಸಾರಸ್ವತಯೋಗದಾನದ ಮುಂದೆ ಗೌಣ. ಮಾತ್ರವಲ್ಲ, ಇಂಥ ಸೂಕ್ಷ್ಮಸಂಗತಿಗಳು ವಿವೇಚನೆಗೆ ಸಿಗದೆ ಅದೆಂತು ನುಣುಚಿಕೊಳ್ಳುತ್ತವೆ ಮತ್ತವುಗಳ ಗಹನತೆ ಅದೆಷ್ಟು ಊಹಾತೀತವೆಂಬುದೂ ನಮಗೆ ಸ್ಪಷ್ಟವಾಗುತ್ತದೆ.

To be continued.

Author(s)

About:

Dr. Ganesh is a 'shatavadhani' and one of India’s foremost Sanskrit poets and scholars. He writes and lectures extensively on various subjects pertaining to India and Indian cultural heritage. He is a master of the ancient art of avadhana and is credited with reviving the art in Kannada. He is a recipient of the Badarayana-Vyasa Puraskar from the President of India for his contribution to the Sanskrit language.