ದುರ್ಘಟನೆ
ಹೀಗೆ ಎಲ್ಲವೂ ಸುಯೋಜಿತವಾಗಿತ್ತು.
ಆದರೆ ದುರ್ದೈವದಿಂದ ಒಂದು ಘಟನೆ ನಡೆಯಿತು.
ಸೈನಿಕರು ತುಪಾಕಿಯಲ್ಲಿ ಬಳಸುವ ಕಾಡತೂಸು(ಕಾರ್ಟ್‍ರಿಡ್ಜ್)ಗಳಲ್ಲಿ ಗುಂಡಿಯೊಂದು ಇರುತ್ತಿತ್ತು. ಅದನ್ನು ಹಲ್ಲಿನಿಂದ ಕಿತ್ತು ತೆಗೆದು ಕಾಡತೂಸನ್ನು ಕೂಡಿಸಬೇಕಾಗಿತ್ತು. ಶಸ್ತ್ರಾಸ್ತ್ರಗಳನ್ನು ತಯಾರಿಸುವ ಕಾರ್ಖಾನೆ ಕಲ್ಕತ್ತದ ಡಂಡಂನಲ್ಲಿತ್ತು. ಅಲ್ಲಿಂದ ಪಂಜಾಬಿನ ಅಂಬಾಲಾ ಮುಂತಾದೆಡೆಗಳಿಗೆ ರವಾನೆಯಾಗುತ್ತಿತ್ತು.
1857 ಜನವರಿ ತಿಂಗಳಲ್ಲಿ ಒಮ್ಮೆ ಡಂಡಂನಲ್ಲಿ ಸೈನಿಕರು ಕುಳಿತು ವಿಶ್ರಮಿಸುತ್ತಿದ್ದಾಗ ದಾರಿಯ್ಲಲಿ ಕಾರ್ಮಿಕನೊಬ್ಬ ಹೋಗುತ್ತಿದ್ದ. “ನನಗೆ ಸ್ವಲ್ಪ ಕುಡಿಯಲು ನೀರು ಕೊಡು” ಎಂದು ಒಬ್ಬ ಸಿಪಾಯಿಯನ್ನು ಕಾರ್ಮಿಕ ಕೇಳಿದ. ಆದರೆ ಕೊಡಲು ಪಾತ್ರೆ ಬೇಕಲ್ಲ! “ನಿನ್ನ ಹತ್ತಿರ ಇರುವ ತಂಬಿಗೆಯಲ್ಲೇ ಕೊಡು” ಎಂದ ಕಾರ್ಮಿಕ. “ಇಲ್ಲ, ಅದು ಮೈಲಿಗೆಯಾಗಿಬಿಡುತ್ತದೆ” ಎಂದ, ಆ ಬ್ರಾಹ್ಮಣ ಸಿಪಾಯಿ. ಇದಕ್ಕೆ ರೇಗಿ ಕಾರ್ಮಿಕನು ಸಿಪಾಯಿಗೆ ಹೇಳಿದ: “ಸದ್ಯದಲ್ಲೇ ನಿಮ್ಮ ಜಾತಿಪಾತಿಯೆಲ್ಲ ನೀರ ಪಾಲಾಗುತ್ತದೆ. ದನದ ಮತ್ತು ಹಂದಿಯ ಮಾಂಸ ಸವರಿದ ಕಾಡತೂಸುಗಳನ್ನು ನೀವೆಲ್ಲ ಕಚ್ಚುವಂತೆ ಯೂರೋಪಿಯನ್ ಅಧಿಕಾರಿಗಳು ಮಾಡುತ್ತಾರೆ. ಆಗ ನಿಮ್ಮ ಜಾತಿ ಎಲ್ಲಿ ಉಳಿದಿರುತ್ತದೆ!”
ಇದನ್ನು ಕೇಳಿ ಬ್ರಾಹ್ಮಣ ಸಿಪಾಯಿಗೆ ಆಘಾತವಾಯಿತು. ಕ್ಷಿಪ್ರವಾಗಿ ಈ ವಾರ್ತೆ ಎಲ್ಲೆಡೆ ಹರಡಿತು.
ಮೇಲಿನದು ಒಂದು ಜನಜನಿತ ಕಥನ. ಇದರ ವಿವರಗಳು ನಿಜ ಇರಬಹುದು, ಸುಳ್ಳಿರಬಹುದು, ಅಥವಾ ಅರ್ಧಸತ್ಯ ಇರಬಹುದು. ಆದರೆ ಕಾಡತೂಸು ತನ್ನ ಕೆಲಸ ಮಾಡಿಯೇ ಮಾಡಿತು! “ಕಾಡತೂಸಿಗೆ ಚರ್ಬಿ ಹಚ್ಚಿರುತ್ತಾರಂತೆ” ಎಂಬ ಮಾತು ಸೈನಿಕರಲ್ಲಿ ಕಾಳ್ಗಿಚ್ಚಿನಂತೆ ಹರಡಿತು. ಇದು ಯಾವ ಸೈನಿಕರ ಮನಸ್ಸನ್ನೂ ಕಲಕದಿರಲಿಲ್ಲ. ಹಸುವಿನ ಮಾಂಸ ಮುಟ್ಟಿದರೆ ಹಿಂದೂ ಜಾತಿಭ್ರಷ್ಟನಾಗುತ್ತಾನೆ; ಹಂದಿಯ ಮಾಂಸ ಮುಟ್ಟಿದರೆ ಮುಸಲ್ಮಾನ ಜಾತಿಗೆಡುತ್ತಾನೆ.
ಸಮರಕ್ಕೆ ನಾಂದಿ
ಯೂರೋಪಿಯನರು ನಮ್ಮ ಜಾತಿ ಕೆಡಿಸಲು ಬಂದಿದ್ದಾರೆ, ಹಿಂದಿನಿಂದ ಅವರು ಇದೇ ಕೆಲಸ ಮಾಡುತ್ತಾ ಬಂದಿದ್ದಾರೆ – ಎಂದು ಇಲ್ಲಿಯವರು ಚಿಂತಿತರಾಗಿದ್ದರು. ಎಷ್ಟೊ ಇಡೀ ಪ್ರದೇಶಗಳೇ ಕ್ರಿಶ್ಚಿಯನ್ನರ ವಶವಾಗಿದ್ದವು. ಇದು ಎಷ್ಟು ನಿರ್ಭಿಡೆಯಾಗಿ ನಡೆಯುತ್ತಿತ್ತು ಎನ್ನಲು ಉದಾಹರಣೆಗಳಿಗೆ ಕೊರತೆಯಲ್ಲ. ಕ್ರೈಸ್ತ ಆಕ್ರಮಕತೆಯನ್ನು ವರ್ಣಿಸುವ ಕಥನಗಳು ಅಸಂಖ್ಯ. ಆಫ್ರಿಕಾದ ಕೆನ್ಯಾದ ನೀಗ್ರೋಗಳು ಕ್ರೈಸ್ತರಾಗಿ ಹೇಗೆ ಬದಲಾದರು ಎಂದು ಅಲ್ಲಿಯ ನಾಯಕ ಜೋಮೋ ಕೆನ್ಯಾಟ್ಟಾ ವರ್ಣಿಸಿರುವುದು ಪ್ರಸಿದ್ಧವಾಗಿದೆ: “When the Europeans came, they had the Bible and we had the land. They said that this is the Book of God and asked us to meditate. When we opened our eyes, they had the land and we had the Bible.” (“ನಮ್ಮಲ್ಲಿಗೆ ಮೊದಲು ಯೂರೋಪಿಯನರು ಬಂದಾಗ ತಮ್ಮಲ್ಲಿದ್ದುದು ದೈವಗ್ರಂಥವೆಂದು ಹೇಳಿದರು. ಬಂದಾಗ ಅವರ ಕೈಯಲ್ಲಿ ಬೈಬಲ್ ಇತ್ತು, ನಮ್ಮ ರಾಜ್ಯ ನಮ್ಮ ಕೈಯಲ್ಲಿತ್ತು. ಅವರು ನಮಗೆ ಕಣ್ಣು ಮುಚ್ಚಿಕೊಂಡು ಧ್ಯಾನ ಮಾಡಲು ಹೇಳಿದರು. ಮುಚ್ಚಿದೆವು. ಆಮೇಲೆ ಕಣ್ಣು ತೆರೆಯಲು ಹೇಳಿದರು ತೆರೆದೆವು. ಅದೇನಾಶ್ಚರ್ಯ! ಈಗ ನಮ್ಮ ಭೂಮಿ ಅವರ ಕೈಯಲ್ಲಿತ್ತು, ನಮ್ಮ ಕೈಯಲ್ಲಿ ಬೈಬಲ್ ಮಾತ್ರ ಉಳಿದಿತ್ತು.”)
ಇಂಥ ಕ್ರೈಸ್ತೀಕರಣ ಪ್ರಯತ್ನಗಳು ಎಲ್ಲೆಡೆ ನಡೆದಿದ್ದವು. ಭಾರತದಲ್ಲೂ ಅಂಥ ಪ್ರಯತ್ನಗಳು ಮುನ್ನೂರು ವರ್ಷಗಳಿಂದ ನಡೆದಿವೆ.
ಅಧಿಕಾರ ಯೂರೋಪಿಯನ್ನರ ಕೈಯಲ್ಲಿದ್ದ ಮೇಲೆ ಅವರ ಆದೇಶಗಳು ಅನುಲ್ಲಂಘ್ಯ. ಅವರು ತಾವು ಕೊಟ್ಟ ಕಾಡತೂಸುಗಳನ್ನು ಬಳಸಬೇಕೆಂದು ಆಜ್ಞೆಮಾಡಿದರೆ ಸೈನಿಕರು ನಿರಾಕರಿಸುವಂತಿರಲಿಲ್ಲ.
ಬಂಗಾಳದ ಬ್ಯಾರಕ್‍ಪುರದಲ್ಲಿ ಸೈನಿಕರು ಬ್ರಿಟಿಷ್ ಅಧಿಕಾರಿಗಳ ನಿರ್ದೇಶನದಂತೆ ಆ ಕಾಡತೂಸುಗಳನ್ನು ಬಳಸಿದರು; ಆಮೇಲಿನ ದಿನಗಳಲ್ಲಿ ಅವೇ ಕಾಡತೂಸುಗಳನ್ನು ಬ್ರಿಟಿಷ್ ಅಧಿಕಾರಿಗಳ ವಿರುದ್ಧವೇ ಪ್ರಯೋಗಿಸಿದರು.
ಆಮೇಲಿನ ಕಾಡುತೂಸುಗಳನ್ನು ಮುಟ್ಟಲು ನಿರಾಕರಿಸಿದಾಗ ಸೈನಿಕರಿಗೆ ದಂಡನೆಗಳಾದವು (ಯೂನಿಫಾರ್ಮ್ ತಪ್ಪಿಸುವುದು ಇತ್ಯಾದಿ).
ಬ್ಯಾರಕ್‍ಪುರದ ದಳದಲ್ಲಿದ್ದ ಒಬ್ಬ ಸೈನಿಕ – ಮಂಗಲಪಾಂಡೆ. ಮೇಲಧಿಕಾರಿ ಆದೇಶ ಪಾಲಿಸುವಂತೆ ಆಗ್ರಹ ಮಾಡಿದಾಗ ಮಂಗಲಪಾಂಡೆ ಎಲ್ಲರೆದುರಿಗೇ ತನ್ನ ಬಂದೂಕಿನಿಂದ ಆ ಅಧಿಕಾರಿಯನ್ನು ಗುಂಡಿಟ್ಟು ಕೊಂದ (29 ಮಾರ್ಚ್ 1857).
“ಚಲೋ ದಿಲ್ಲೀ!” ಹಾಗೆ ನಾಂದಿಯಾಯಿತು.
ಹರಡಿದ ಜ್ವಾಲೆ
ವಾಸ್ತವವಾಗಿ ದೇಶಾದ್ಯಂತ ಸೈನಿಕರು ಬಂಡೇಳುವುದಕ್ಕಾಗಿ ನಿಶ್ಚಿತವಾಗಿದ್ದ ದಿನಾಂಕ 1857ರ ಮೇ 31. ಎಲ್ಲೆಡೆ ಇದಕ್ಕಾಗಿ ಸಿದ್ಧತೆ ನಡೆದಿತ್ತು. ದೇಶದೆಲ್ಲೆಡೆ ಏಕಕಾಲಕ್ಕೆ ದಂಗೆಯಾಗಬೇಕೆಂದು ಯೋಜನೆಯಾಗಿತ್ತು. ಹಾಗೆ ಒಂದೇ ಸಮಯದಲ್ಲಿ ಕಾರ್ಯಾಚರಣೆ ನಡೆದಲ್ಲಿ ಮಾತ್ರ ಯಶಸ್ಸಿನ ಸಂಭವ ಇತ್ತು. ಆದರೆ ದೇಶಭಕ್ತ್ಯುದ್ರೇಕದಿಂದಲೂ ಅತ್ಯುತ್ಸಾಹದಿಂದಲೂ ಮಂಗಲಪಾಂಡೆ ಮಾಡಿದ ಕೆಲಸದಿಂದ ಇಡೀ ಯೋಜನೆ ಅಸ್ತವ್ಯಸ್ತವಾಯಿತು. ಅವನು ಸಂಯಮದಿಂದ ಇರಬೇಕಾಗಿತ್ತು.
ಮಂಗಲಪಾಂಡೆ ಮಡಿದುದರ ಸುದ್ದಿ ತಿಳಿದ ಮೇಲೆ ಹಲವೆಡೆ ಅಯೋಜಿತವಾಗಿ ಕ್ಷಿಪ್ರ ದಂಗೆಗಳಾಗತೊಡಗಿದವು. ಎಲ್ಲ ಕ್ರಾಂತಿಕಾರಿಗಳನ್ನು ಈಗ ಬ್ರಿಟಿಷರು ‘ಪಾಂಡೆ’ ಎಂದೇ ಕರೆಯತೊಡಗಿದ್ದರು. ‘Fifty Pandes are on the move’ – ಹೀಗೆ ಬ್ರಿಟಿಷರ ಅಧಿಕೃತ ವರದಿಗಳಿರುತ್ತಿದ್ದವು.
ಮಂಗಲಪಾಂಡೆಯನ್ನು 1857ರ ಏಪ್ರಿಲ್ 8ರಂದು ಗಲ್ಲಿಗೇರಿಸಲಾಯಿತು. ಹೇಗೂ ಅವನು ಸಾಯಲು ಸಿದ್ಧನಾಗಿಯೇ ಇದ್ದ. ಅವನು ಸತ್ತದ್ದರ ಪರಿಣಾಮ ಏನಾಯಿತು? ಬ್ರಿಟಿಷ್ ಅಧಿಕಾರಿ ಬರೆಯುತ್ತಾನೆ. “The whole land from Sutlej to Narmada is ablaze” (ಸಟ್ಲೆಜ್‍ನಿಂದ ನರ್ಮದಾವರೆಗಿನ ಅಷ್ಟೂ ಭೂಭಾಗ ಬೆಂಕಿ ಹೊತ್ತಿ ಉರಿಯುತ್ತಿದೆ). ಎಂದರೆ ಇಡೀ ಉತ್ತರ ಭಾರತ ಧಗಧಗಿಸತೊಡಗಿತ್ತು. ಎಲ್ಲೆಡೆಗೆ ಹರಡಿತ್ತು ಕ್ರಾಂತಿಯ ಜ್ವಾಲೆ.
ಯೋಜಿತವಾಗಿದ್ದ ಸಮಯಕ್ಕೆ ಮುಂಚೆಯೇ ಕೆಲವರು ಅತ್ಯುತ್ಸಾಹಿಗಳು ವಿವೇಕಾಭಾವದಿಂದ ಸಿಡಿದೆದ್ದುದು ಭಾರತೀಯರ ಪಾಲಿಗೆ ಬಹಳ ದುಬಾರಿ ವೈಫಲ್ಯವಾಯಿತು. ಗ್ರಂಥವೊಂದಕ್ಕೆ ಬರೆದ ಪ್ರಸ್ತಾವನೆಯಲ್ಲಿ ಶ್ರೀಗುರೂಜಿ ಗೋಲ್ವಲಕರರು 1857ರ ಘಟನಾವಳಿಯನ್ನು ವಿಶ್ಲೇಷಿಸಿ, ಬ್ಯಾರಕ್‍ಪುರದಲ್ಲಿ ಶಹೀದ್ ಮಂಗಲಪಾಂಡೆ ಸಂಯಮ ಕಳೆದುಕೊಂಡದ್ದು ಇಡೀ ಆಂದೋಲನದ ವೈಫಲ್ಯಕ್ಕೆ ದಾರಿಮಾಡಿತು – ಎಂದಿದ್ದಾರೆ. ಇದೇ ಅಭಿಪ್ರಾಯ ಇನ್ನೂ ಅನೇಕ ಮಂದಿಯದೂ ಆಗಿದೆ. ಇದರ ತಾತ್ಪರ್ಯ; ಉತ್ಸಾಹ – ದೇಶ ಭಕ್ತಿಗಳಷ್ಟೆ ಸಂಯಮ – ಅನುಶಾಸನಗಳು ಅತ್ಯಗತ್ಯ – ಎಂದು.
ಎಲ್ಲೆಲ್ಲಿಗೆ ಮಂಗಲಪಾಂಡೆ ಗಲ್ಲಿಗೇರಿದುದರ ಸುದ್ದಿ ಪ್ರಸರಿಸಿತೋ ಅಲ್ಲೆಲ್ಲ ಚಿಕ್ಕಪುಟ್ಟ ಬಂಡಾಯಗಳು ಆಗತೊಡಗಿದವು. ಹೀಗೆ ಉದ್ದಿಷ್ಟ ಕ್ರಾಂತಿಯ ಸೂತ್ರಬದ್ಧತೆ ತಪ್ಪಿ ಅದು ದಿಶಾಹೀನವಾಯಿತು. ನಿಯಂತ್ರಣ ತಪ್ಪಿತು.
ಮೀರಠ್‍ಗೆ ಲಗ್ಗೆ
ಬ್ಯಾರಕ್‍ಪುರ ಘಟನೆಯ ಪರಿಣಾಮ ಪ್ರಸ್ಫುಟವಾಗಿ ತಲೆದೋರಿದ್ದು ಮೀರಠ್‍ನಲ್ಲಿ. 1857ರ ಹೋರಾಟದಲ್ಲಿ ಅತ್ಯಂತ ಪ್ರಮುಖ ನಗರವೆಂದರೆ ಮೀರಠ್. ಅಲ್ಲಿ ಮೇ 10ನೇ ತಾರೀಖಿನ ವೇಳೆಗೆ ಬಂಡಾಯ ಆರಂಭವಾಯಿತು. ಬಂಡಾಯಗಾರರಿಗೆ ನೀಡಲಾಗಿದ್ದ ನಿರ್ದೇಶನ – 1) ಸರ್ಕಾರಿ ಖಜಾನೆಯನ್ನು ವಶಪಡಿಸಿಕೊಳ್ಳುವುದು, 2) ಸರ್ಕಾರಿ ಶಸ್ತ್ರಾಗಾರಗಳನ್ನು ವಶಪಡಿಸಿಕೊಳ್ಳುವುದು, 3) ಜೈಲುಗಳ ಬಾಗಿಲುಗಳನ್ನೊಡೆದು ಒಳಗಿದ್ದ ಬಂದಿಗಳನ್ನೆಲ್ಲ ಬಿಡುಗಡೆ ಮಾಡುವುದು, 4) ಎದುರಿಗೆ ಸಿಕ್ಕ ಬ್ರಿಟಿಷರನ್ನು ಕೊಂದು ಹಾಕುವುದು. ಕೊಲ್ಲುವುದರಲ್ಲಿ ಸಾಮಾನ್ಯ ಸೈನಿಕರಿಗಿಂತ ಅಧಿಕಾರಿಗಳಿಗೆ ಆದ್ಯತೆ ಸಲ್ಲಬೇಕು ಎಂದು ತಿಳಿಸಲಾಗಿತ್ತು. ಕೊಲ್ಲುವುದು ಎಂಬುದರಲ್ಲಿಯೆ ಕೊಲ್ಲಿಸಿಕೊಳ್ಳಲು ಸಿದ್ಧರಾಗಿರಬೇಕು ಎಂಬುದೂ ಸೇರಿದೆಯಷ್ಟೆ.
ಮೇ 31ರಂದು ದೇಶಾದ್ಯಂತ ಏಕಕಾಲದಲ್ಲಿ ಸೈನಿಕರು ದಂಗೆಯೇಳಬೇಕೆಂದು ನಿರ್ಣಯಿಸಿದ್ದುದಕ್ಕೆ ಪ್ರಬಲ ಕಾರಣವಿತ್ತು. ಅಂದು ಭಾನುವಾರ, ಬ್ರಿಟಿಷರು ಅಂದು ತಪ್ಪದೆ ಚರ್ಚಿಗೆ ಹೋಗುತ್ತಾರಾದ್ದರಿಂದ ಬಹುಮಂದಿಯ ಮೇಲೆ ಒಮ್ಮೆಗೇ ದಾಳಿ ಮಾಡಲು ಅನುಕೂಲವಾಗಿರುತ್ತದೆ. ಕೆಲಸ ಹೀಗೆ ಸುಲಭವಾಗಿ ಮುಗಿಯುತ್ತಿತ್ತು. ಆದರೆ ಎಲ್ಲ ಯೋಜನೆ ಅಸ್ತವ್ಯಸ್ತಗೊಂಡಿತು.
ಮೀರಠ್‍ನ ಬಂಡಾಯಗಾರರು ಜೂಲುಗಳೊಳಗಿಂದ ಬಂದಿಗಳನ್ನು ಬಿಡುಗಡೆ ಮಾಡುವುದರಲ್ಲಿ ಸಫಲರಾದರು. ಮೀರಠ್ ದಂಡು ಪ್ರದೇಶದ ಹಲವಾರು ಭಾಗಗಳು ಅಗ್ನಿಗಾಹುತಿಯಾದವು. ಬಂಡಾಯಗಾರರೂ ಬಿಡುಗಡೆಗೊಂಡಿದ್ದ ಬಂದಿಗಳು ರಣಘೋಷ ಮಾಡುತ್ತ ದೆಹಲಿಯತ್ತ ಹೊರಟರು. ದೆಹಲಿ ಇರುವುದು ಮೀರಠ್‍ನಿಂದ ದಕ್ಷಿಣಕ್ಕೆ ಸುಮಾರು ನಲವತ್ತು ಮೈಲಿ ದೂರದಲ್ಲಿ.
ಮುಂದುವರೆಯುವುದು...
(ಈ ಲೇಖನವು 'ಉತ್ಥಾನ' ಮಾಸಪತ್ರಿಕೆಯ ಜುಲೈ ೨೦೦೭ ಸಂಚಿಕೆಯಲ್ಲಿ ಪ್ರಕಟವಾಗಿತ್ತು. ಡಿಜಿಟೈಜೇಷನ್ (ಟಂಕನ) ಮಾಡಿಸಿದ್ದ ಶ್ರೀ ವಿಘ್ನೇಶ್ವರ ಭಟ್ಟರಿಗೂ ಕರಡುಪ್ರತಿ ತಿದ್ದಿದ್ದ ಶ್ರೀ ಕಶ್ಯಪ್ ನಾಯ್ಕ್ ಅವರಿಗೂ ಧನ್ಯವಾದಗಳು.)