‘ಜಯದೇವನ ಗೀತಗೋವಿಂದ’ ಎಂಬ ಕಿರುಹೊತ್ತಿಗೆ ‘ಗೀತಗೋವಿಂದ’ ಎಂಬ ಅಭಿಧಾನದಿಂದ ಮತ್ತೊಮ್ಮೆ ಪ್ರಕಟನೆಗೆ ಸಿದ್ಧವಾದಾಗ ಇದರಲ್ಲಿ ಮೊದಲ ಆವೃತ್ತಿಯ ಕೆಲವಂಶಗಳು ಇಲ್ಲವಾಗಿ ಮತ್ತೆ ಹಲವು ಅಂಶಗಳು ಸೇರಿಕೊಂಡದ್ದಲ್ಲದೆ ಲೀಲಾಶುಕನ ‘ಶ್ರೀಕೃಷ್ಣಕರ್ಣಾಮೃತ’ ಕಾವ್ಯದ ಕೆಲವೊಂದು ವಿವರಗಳೂ ಒಟ್ಟುಗೂಡಿವೆ. ಜಯದೇವಕವಿಯ ಬಾಳಿನ ವಿವರಗಳನ್ನು ‘ಜಯದೇವಚರಿತ’ವೆಂಬ ಸಾಂಪ್ರದಾಯಿಕ ರಚನೆಯನ್ನೂ ಆಧುನಿಕ ವಿದ್ವಾಂಸರ ಸಂಶೋಧನೆಗಳನ್ನೂ ಆಧರಿಸಿ ನಿರೂಪಿಸುವ ರಾಯರು ಹಳೆಯ ಆವೃತ್ತಿಯಲ್ಲಿ ಬಂದಿರುವ ಪ್ರಯೋಜಕವೂ ಆದ ಕೆಲವೊಂದು ವಿವರಗಳನ್ನು ಬಿಟ್ಟು ‘ಗೀತಗೋವಿಂದ’ದ ಇತಿವೃತ್ತವನ್ನೇ ಆಕರ್ಷಕವಾಗಿ ಒಕ್ಕಣಿಸಿದ್ದಾರೆ. ಜೊತೆಗೆ ಮಧುರಭಕ್ತಿಯ ಹಲವು ಮೌಲಿಕ ವಿಚಾರಗಳನ್ನು ಸಂಗ್ರಹಿಸಿ ಕೊಟ್ಟಿದ್ದಾರೆ. ಮಾತ್ರವಲ್ಲ, ಶ್ರೀವೈಷ್ಣವ, ಗೌಡೀಯ ವೈಷ್ಣವ ಮತ್ತು ಅದ್ವೆöÊತ ಪರಂಪರೆಗಳಲ್ಲಿ ಬಂದಿರುವ ಮಧುರಭಕ್ತಿರೂಪದ ಕೃಷ್ಣೋಪಾಸನೆಯ ವಿಷಯಗಳನ್ನೂ ಅಡಕವಾಗಿ ನಿರೂಪಿಸಿದ್ದಾರೆ. ಇದಕ್ಕಾಗಿ ಆಳ್ವಾರರ, ಚೈತನ್ಯಮಹಾಪ್ರಭುವಿನ ಶಿಷ್ಯವರ್ಗದ ಹಾಗೂ ‘ಶ್ರೀಕೃಷ್ಣಲೀಲಾತರಂಗಿಣಿ’ಯAಥ ವಿಶಿಷ್ಟ ಗೇಯಕಾವ್ಯವನ್ನು ಬರೆದ ಯತೀಂದ್ರ ನಾರಾಯಣತೀರ್ಥರ ಪ್ರಸ್ತಾವವನ್ನೂ ತಂದಿದ್ದಾರೆ. ಇಲ್ಲಿಯ ಯಾವೊಂದು ವಿವರವೂ ವ್ಯರ್ಥವಲ್ಲ; ಯಾವೊಂದು ಸಂಗತಿ ಕೂಡ ಬೇಡದ್ದಲ್ಲ. ಇಂತಿದ್ದರೂ ವಿವರಗಳು ಮತ್ತಷ್ಟು ಪೂರ್ಣವಾಗಿ, ವಿಶದವಾಗಿ ಬಾರದ ಕಾರಣ, ವಿವಿಧ ಆವೃತ್ತಿಗಳ ಸೇರ್ಪಡೆ-ಬೇರ್ಪಡೆಗಳು ಆತ್ಯಂತಿಕ ಸಾಮಂಜಸ್ಯವನ್ನು ಉಳಿಸಿಕೊಳ್ಳದ ಕಾರಣ ಪ್ರಕೃತ ಪುಸ್ತಕವು ಓದುಗರಲ್ಲಿ ಕೆಲಮಟ್ಟಿನ ಅರಕೆಯನ್ನು ತಂದರೆ ಅಚ್ಚರಿಯಲ್ಲ.
ಇನ್ನು ಮುಂದೆ ‘ಪ್ರತಿಭೆಯೆಂದರೇನು?’ ಎಂಬ ಮೂವತ್ತೊಂಬತ್ತು ಪುಟಗಳ ಪುಸ್ತಿಕೆಯನ್ನು ನೋಡೋಣ. ರಾಯರ ಪ್ರಧಾನ ಕ್ಷೇತ್ರ ಕಾವ್ಯಮೀಮಾಂಸೆಯಲ್ಲ. ಇದು ಅವರಿಗಿರುವ ಹತ್ತಾರು ಆಸಕ್ತಿಗಳಲ್ಲಿ ಒಂದಷ್ಟೇ. ಇಂತಿದ್ದರೂ ಪ್ರತಿಭೆಯಂಥ ಅನಿರ್ವಚನೀಯವಾದ ವಿಷಯವನ್ನು ಕುರಿತು ಸಾಕಷ್ಟು ವ್ಯಾಪಕವಾಗಿ, ವಿಶದವಾಗಿ ಚಿಂತಿಸಿದ್ದಾರೆ. ಮೊತ್ತಮೊದಲಿಗೆ ಎಲ್ಲರಲ್ಲಿಯೂ ಕಾಣಬಹುದಾದ ಒಳಹೊಳಹನ್ನು ಪ್ರತಿಭೆಯೆಂದು ಗುರುತಿಸಿ ಮುಂದುವರಿಯುವ ರಾಯರು ವೇದಗಳಿಂದ ಇದರ ಉಲ್ಲೇಖಗಳನ್ನು ಮೊಗೆದು ಕೊಡುತ್ತಾರೆ. ಮುಖ್ಯವಾಗಿ ಭಟ್ಟತೌತ, ಅಭಿನವಗುಪ್ತ, ಜಗನ್ನಾಥ ಮುಂತಾದ ಆಲಂಕಾರಿಕರನ್ನು ಆಧರಿಸುವರಾದರೂ ಶಿವಸೂತ್ರಗಳ, ಪ್ರತ್ಯಭಿಜ್ಞಾಶೈವದರ್ಶನದ ಎಷ್ಟೋ ವಿವರಗಳನ್ನು ಪೋಣಿಸುವರು. ಇವೆಲ್ಲವನ್ನೂ ಬೆಸೆಯುವಾಗ ಓದುಗರಿಗೆ ಮೇಲ್ನೋಟಕ್ಕೆ ಎದ್ದುಕಾಣದಿದ್ದರೂ ಅಂತರAಗದ ಅರಿವಿಗೆ ಬರುವ ರೀತಿಯಲ್ಲಿ ಅವರ ಮನಃಶಾಸ್ತçದ ಚಿಂತನಕ್ರಮವೂ ದುಡಿದಿದೆ. ಹೀಗೆ ದರ್ಶನಗಳು, ಅಲಂಕಾರಶಾಸ್ತçಗ್ರAಥಗಳು ಮತ್ತು ಮನಃಶಾಸ್ತಿçÃಯ ವಿವೇಚನಕ್ರಮ ಎಂಬ ಮೂರು ವಿಭಿನ್ನ ಧಾರೆಗಳು ಇಲ್ಲಿ ಸಮರಸವಾಗಿ ಹೆಣೆದುಕೊಂಡಿರುವುದು ಗಮನಾರ್ಹ. ಇದನ್ನು ರಾಯರಂಥವರೇ ಬರೆಯಬಲ್ಲರು.
ನಾಟ್ಯಶಾಸ್ತçದ ಕೆಲವೊಂದು ಅಧಿಕರಣಗಳನ್ನು ಕುರಿತ ಪುಸ್ತಿಕೆಯೇ ‘ಭರತಮುನಿಯ ನಾಟ್ಯಶಾಸ್ತç’. ಇಲ್ಲಿಯ ಹಲವಾರು ಅಧ್ಯಾಯಗಳಲ್ಲಿ ಬೇರೆ ಬೇರೆ ನಿಟ್ಟುಗಳಿಂದ ರಾಯರು ವಿಚಾರಗಳನ್ನು ಹವಣಿಸಿಕೊಟ್ಟಿದ್ದಾರೆ. ಜೊತೆಗೆ ತಮ್ಮ ಒಳನೋಟಗಳನ್ನೂ ಕಾಣಿಸಿದ್ದಾರೆ. ಅದು ಹರಿವಿನ ಅರ್ಥವನ್ನು ಒಳಗೊಂಡ ರಸಶಬ್ದದ ನಿರ್ವಚನವಾಗಿರಬಹುದು, ಮೀಮಾಂಸಾಶಾಸ್ತçದ ಹಿನ್ನೆಲೆಯಲ್ಲಿ ವಿವೇಚಿಸುವ ಭಾವನಾವ್ಯಾಪಾರವನ್ನು ಕುರಿತಿರಬಹುದು, ಕಾಮಸೂತ್ರ ಮತ್ತು ಅಥರ್ವವೇದಗಳ ಆಭಿಚಾರಿಕ ಪ್ರಕರಣಗಳಿರಬಹುದು, ಸಾಂಖ್ಯದರ್ಶನದ ಪ್ರಕೃತಿ-ಪುರುಷರನ್ನು ಕುರಿತ ವಿವರವಿರಬಹುದು, ‘ವಿಜ್ಞಾನಭೈರವ’ದ ನೂರ ಹನ್ನೆರಡು ಬಗೆಯ ಧಾರಣೆಗಳಲ್ಲಿ ಒಂದಾದ ಸಾಹಸವಿರಬಹುದು, ತಲ್ಲಯ ಮತ್ತು ತನ್ಮಯ ಎಂಬ ಮಾತುಗಳನ್ನು ವಿವರಿಸುವ ಪರಿಯಾಗಿರಬಹುದು - ಒಂದೊAದೂ ರಾಯರ ಛಾಪನ್ನು ಒಳಗೊಂಡಿದೆ. ಇಂಥ ಬರೆವಣಿಗೆ ಸಾರ್ವಪಾರ್ಷದರಿಗೆ ಮಾತ್ರ ಎಟುಕುವಂಥದ್ದು.
ಇನ್ನು ‘ನಗೆಯ ನೆಲೆ’ ಎಂಬ ಅಂಗೈಯಗಲದ ಪುಸ್ತಿಕೆಯನ್ನು ನೋಡೋಣ. ಎಲ್ಲರೂ ಅನುಭವಿಸಿ ಬಲ್ಲ ಚಿರಪರಿಚಿತ ಸಂಗತಿಯನ್ನೇ ಅದೆಷ್ಟು ಹೊಸತಾಗಿ, ಅದೆಷ್ಟು ಸವಿಯಾಗಿ ರಾಯರು ನಿರೂಪಿಸುವರೆಂಬುದನ್ನು ಇದರ ಓದಿನಿಂದಲೇ ಮನಗಾಣಬೇಕು. ಹಲವು ಪಾಶ್ಚಾತ್ತ್ಯ ಚಿಂತಕರ ಮಾತುಗಳಿಂದ ಉಪಕ್ರಮಿಸುವ ರಾಯರು ನಗೆಯ ಹಿಂದಿನ ಮನೋವ್ಯಾಪಾರದಿಂದ ಆರಂಭಿಸಿ ನಗುವಾಗ ಉಂಟಾಗುವ ದೈಹಿಕ ಕ್ರಿಯೆಗಳ ಕಡೆಗೆ ದಾಪಿಡುತ್ತಾರೆ. ನಗೆಯ ಬಗೆಗಳನ್ನೂ ಪ್ರಯೋಜನಗಳನ್ನೂ ಪಟ್ಟಿ ಮಾಡುತ್ತಾರೆ. ಕಡೆಗೆ ನಗುವಿನಲ್ಲಿ ಅಡಗಿದ ಹೊಗೆ-ಹಗೆಗಳನ್ನೂ ಬಗೆದಿಡುತ್ತಾರೆ. ಹೀಗೆ ಒಬ್ಬ ಮನಃಶಾಸ್ತçಜ್ಞ, ಸಮಾಜವಿಜ್ಞಾನಿ, ವರ್ತನಾಶಾಸ್ತçಜ್ಞ ಮತ್ತು ದಾರ್ಶನಿಕನ ತಿಳಿವುಗಳೆಲ್ಲ ಈ ಹೊತ್ತಿಗೆಗೆ ಒದಗಿಬಂದಿವೆ.
ಇದೇ ರೀತಿ ‘ವಿವಾಹಪದ್ಧತಿಗಳು’ ಎಂಬ ಪುಸ್ತಿಕೆಯಲ್ಲಿ ನಮ್ಮ ಧರ್ಮಶಾಸ್ತçಗಳು ತಿಳಿಸುವ ಎಂಟು ಬಗೆಯ ಮದುವೆಗಳಿಂದ ಮೊದಲುಮಾಡಿ ಬಹುಪತಿತ್ವ, ಬಹುಪತ್ನೀತ್ವ, ಏಕಪತಿತ್ವ, ಏಕಪತ್ನೀತ್ವ ಮುಂತಾದ ಸಾಧ್ಯತೆಗಳನ್ನೂ ವಿವೇಚಿಸುತ್ತಾರೆ. ಸಹಸ್ರಮಾನಗಳಿಂದ ಬೆಳೆದುಬಂದಿರುವ ವಿವಾಹಸಂಸ್ಥೆಯ ನೆಲೆ-ಬೆಲೆಗಳನ್ನು ಚರ್ಚಿಸುವುದಲ್ಲದೆ, ಅನೇಕ ದೇಶಗಳಲ್ಲಿ ಕಂಡುಬರುವ ಬಗೆಬಗೆಯ ಮದುವೆಗಳ ಪರಿಗಳನ್ನು ಪರಿಚಯಿಸುತ್ತಾರೆ. ಇಲ್ಲಿ ವಿವಿಧ ಮತಗಳ, ವಿವಿಧ ಜನಾಂಗಗಳ, ವಿವಿಧ ಸಂಸ್ಕöÈತಿಗಳ ವಿವಾಹಗಳು ವಿಶ್ಲೇಷಣೆಗೆ ಒಳಗಾಗಿವೆ. ಎಲ್ಲಿಯೂ ಮೇಲು-ಕೀಳುಗಳ ಆಗ್ರಹವಿಲ್ಲ; ಸರಿ-ತಪ್ಪುಗಳ ಅವಸರದ ತೀರ್ಪಿಲ್ಲ. ಎಷ್ಟೋ ಬಗೆಯ ಮದುವೆಗಳಲ್ಲಿ ತೋರಿಕೊಳ್ಳುವ ವೈಚಿತ್ರ್ಯ-ವೈಲಕ್ಷಣ್ಯಗಳತ್ತ ಕೂಡ ರಾಯರ ದೃಷ್ಟಿ ಹಾಯ್ದಿದೆ. ಇವನ್ನೆಲ್ಲ ಅವರು ಬಹುಪ್ರಸನ್ನವಾಗಿ, ಹೃದಯಂಗಮವಾಗಿ ನಿರೂಪಿಸುವರಲ್ಲದೆ ಗೇಲಿಯ ದನಿಯನ್ನು ಅವಲಂಬಿಸುವುದಿಲ್ಲ. ಇಷ್ಟೆಲ್ಲ ವಿವರಗಳುಳ್ಳ ಈ ಬರೆಹವನ್ನು ಪರಿಭಾವಿಸಿದಾಗ ರಾಯರ ಮನೋಧರ್ಮ ಅದೆಷ್ಟು ವಿಶಾಲ, ಅದೆಷ್ಟು ಕುತೂಹಲಿ, ಅದೆಷ್ಟು ಹಾರ್ದಿಕ ಎಂದು ತಿಳಿಯುತ್ತದೆ. ಇವು ಎಟುಕಿಸಿಕೊಳ್ಳಲು ಕಷ್ಟವಾದರೂ ಯಾವ ಲೇಖಕನೂ ಮೈಗೂಡಿಸಿಕೊಳ್ಳಲೇಬೇಕಾದ ಮಹತ್ತ್ವದ ಮೌಲ್ಯಗಳೆಂಬುದರಲ್ಲಿ ಸಂದೇಹವಿಲ್ಲ.
ರಾಮಚಂದ್ರರಾಯರಿಗೆ ದರ್ಶನಶಾಸ್ತçಗಳಲ್ಲಿದ್ದ ಅರಿವಾಗಲಿ, ಅಭಿಮಾನವಾಗಲಿ ಎಣೆಯಿಲ್ಲದ್ದು. ವಿಶೇಷತಃ ವೇದಾಂತದಲ್ಲಿ ಅವರಿಗೆ ಮಿಗಿಲಾದ ಆದರ. ತತ್ತ್ವತಃ ಅವರು ಅದ್ವೆöÊತದಲ್ಲಿಯೇ ತಾತ್ಪರ್ಯವನ್ನು ಉಳ್ಳವರಾದರೂ ದ್ವೆöÊತ, ವಿಶಿಷ್ಟಾದ್ವೆöÊತ, ಶಕ್ತಿವಿಶಿಷ್ಟಾದ್ವೆöÊತ, ಶುದ್ಧಾದ್ವೆöÊತ, ಭೇದಾಭೇದ, ಅಚಿಂತ್ಯಭೇದಾಭೇದ ಮುಂತಾದ ಮಿಕ್ಕೆಲ್ಲ ವೇದಾಂತಪ್ರಭೇದಗಳನ್ನೂ ಮನ್ನಿಸಿಕೊಂಡು ಬಂದವರೇ. ಮುಖ್ಯವಾಗಿ ಭೇದ-ಅಭೇದ-ಭೇದಾಭೇದಗಳೆಂದು ಮುಬ್ಬಗೆಯಾಗಿ ತೋರಿಕೊಳ್ಳುವ ವೇದಾಂತದ ಕವಲುಗಳಿಗೆ ಸಮನ್ವಯವನ್ನು ಕಾಣಿಸಬೇಕೆಂಬ ಆಸ್ಥೆಯುಳ್ಳವರು. ಈ ನಿಟ್ಟಿನಲ್ಲಿ ಡಿ.ವಿ.ಜಿ., ಮಾಸ್ತಿ, ರಾಜರತ್ನಂ ಮುಂತಾದ ಹಿರಿಯರ ಹಾದಿಯನ್ನೇ ಇನ್ನಷ್ಟು ಚಿಕಿತ್ಸಕವಾಗಿ, ಮತ್ತಷ್ಟು ಶಾಸ್ತçವಾಕ್ಯಗಳ ಬಲದಿಂದ, ಸಾಕಷ್ಟು ತೌಲನಿಕ ಸ್ತರಗಳನ್ನು ಗಮನಿಸಿಕೊಂಡು ರಾಯರು ವಿಸ್ತರಿಸಿದ್ದಾರೆಂದರೆ ತಪ್ಪಾಗದು. ಆದರೆ ಹೀಗೆ ಭಾವುಕವಾದ ಸಮನ್ವಯಾಭಾಸಕ್ಕೆ ದುಡಿಯುವ ಯಾರಿಗೇ ಆಗಲಿ, ನಿರ್ವಿಶೇಷ ಸಾರ್ವತ್ರಿಕ ಅನುಭವದ ನೆಲೆ ತಪ್ಪುತ್ತದೆ, ಸುನಿಶ್ಚಿತವಾದ ನಿರ್ಣಯವನ್ನು ಹರಳುಗಟ್ಟಿಸುವ ಸಾಧ್ಯತೆ ಕಡಮೆಯಾಗುತ್ತದೆ. ಇದಕ್ಕೆ ರಾಯರೂ ಹೊರತಲ್ಲ. ಇಂತಿದ್ದರೂ ತತ್ತ್ವನಿಶ್ಚಯವುಳ್ಳ ವಿವೇಕಿಗಳ ಪಾಲಿಗೆ ಇಂಥವರ ಬರೆಹಗಳು ಒಳ್ಳೆಯ ವಿಚಾರಸಾಮಗ್ರಿಯನ್ನು ಒದಗಿಸುತ್ತವೆ, ಆಕರಗಳನ್ನು ಶೋಧಿಸಿ ನೀಡುತ್ತವೆ. ಇವೆಲ್ಲ ಅಲ್ಪಸ್ವಲ್ಪದ ಪ್ರಯೋಜನಗಳಲ್ಲ.
ಈ ಹಿನ್ನೆಲೆಯಲ್ಲಿ ರಾಯರ ‘ಈಶಾವಾಸ್ಯ ಉಪನಿಷತ್ತು’ ವಿಶಿಷ್ಟವಾದ ಗ್ರಂಥ. ಸುಪ್ರಸಿದ್ಧವಾದ ಹತ್ತು ಉಪನಿಷತ್ತುಗಳ ಪೈಕಿ ತುಂಬ ಸಂಕ್ಷಿಪ್ತವಾದ ಕೃತಿಯಿದು. ಇದಕ್ಕಿಂತಲೂ ಚಿಕ್ಕ ಗಾತ್ರದ್ದೆಂದರೆ ಮಾಂಡೂಕ್ಯಶ್ರುತಿಯೊAದೇ. ರಾಯರು ಇದರ ಪ್ರತಿಯೊಂದು ಮಂತ್ರವನ್ನೂ ವ್ಯಾಪಕವಾಗಿ ವಿವೇಚಿಸಿದ್ದಾರೆ. ಮೊದಲಿಗೆ ಮೂಲ ಮತ್ತು ತಾತ್ಪರ್ಯಗಳನ್ನು ನೀಡಿ ಬಳಿಕ ಉವಟ, ಶಂಕರ, ಮಧ್ವ, ವೇಂಕಟನಾಥ, ಶಂಕರಾನAದ, ಆನಂದಗಿರಿ, ಆತ್ಮಾನಂದ, ಸತ್ಯಾನಂದ, ರಾಘವೇಂದ್ರ, ಅನಂತ, ರಾಮಚಂದ್ರ ಮುಂತಾದ ಹತ್ತಾರು ಮಂದಿ ಆಚಾರ್ಯರ, ಪಂಡಿತರ ಭಾಷ್ಯ-ವ್ಯಾಖ್ಯೆ-ಟೀಕೆ-ಟಿಪ್ಪಣಿಗಳನ್ನೂ ವಿವಿಧ ಸಂಪ್ರದಾಯಗಳಲ್ಲಿ ಬೆಳೆದುಬಂದ ನಾನಾ ಗ್ರಂಥಗತವಾದ ವಿಚಾರಗಳನ್ನೂ ವ್ಯವಸ್ಥಿತವಾಗಿ ಕ್ರೋಡೀಕರಿಸಿ ಇವನ್ನೆಲ್ಲ ತೌಲನಿಕವಾಗಿಯೂ ನೋಡಿ ಎಲ್ಲ ನಿಲವುಗಳ ಸ್ವಾರಸ್ಯವನ್ನು ಸರಳವೂ ಸಮರ್ಥವೂ ಆದ ನುಡಿಯಲ್ಲಿ ಹವಣಿಸಲಾಗಿದೆ. ಇದು ಸಾಮಾನ್ಯದ ಸಾಹಸವಾಗದು. ರಾಯರು ಮಿಕ್ಕೆಲ್ಲ ಉಪನಿಷತ್ತುಗಳಿಗೂ ಇಂಥ ಸರ್ವತೋಮುಖ ವಿವರಣೆಗಳನ್ನು ಒದಗಿಸಿದ್ದಲ್ಲಿ ಅನೂಹ್ಯವಾದ ವಿದ್ವದುಪಕಾರವೇ ಆಗುತ್ತಿತ್ತು. ಆದರೆ ಇದು ತುಂಬ ಶ್ರಮ, ವಿದ್ವತ್ತೆ ಮತ್ತು ತಾಳ್ಮೆಗಳನ್ನು ಬೇಡುವ ಸಾರಸ್ವತ ತಪಸ್ಸು. ರಾಯರು ಋಕ್ಸಂಹಿತೆಗೆ ವಿವರಣೆಯನ್ನು ಬರೆಯುವುದಕ್ಕೆ ಬದಲಾಗಿ ಇದನ್ನೇ ಕೈಗೊಂಡಿದ್ದಲ್ಲಿ ಜಿಜ್ಞಾಸುಗಳಿಗೆ ಹೆಚ್ಚಿನ ನೆರವಾಗುತ್ತಿತ್ತೆಂದರೆ ತಪ್ಪಲ್ಲ.
‘ದರ್ಶನಪ್ರಬಂಧ’ವು ರಾಯರು ‘ಶಂಕರಭಾಸ್ಕರ’ ಎಂಬ ವೇದಾಂತಪತ್ರಿಕೆಗೆ ನಿಯತವಾಗಿ ಬರೆದ ಲೇಖನಗಳ ಸಂಗ್ರಹ. ಇಲ್ಲಿ ಶಾಂಕರಾದ್ವೆöÊತವನ್ನೇ ಕೇಂದ್ರದಲ್ಲಿರಿಸಿಕೊAಡ ಬರೆಹಗಳಿವೆ. ಮೊದಲ ಹದಿನಾರು ಲೇಖನಗಳು ಶಂಕರ ಭಗವತ್ಪಾದರ ಭಾಷ್ಯಗಳನ್ನೇ ಪ್ರಧಾನವಾಗಿ ಆಧರಿಸಿ ಅವರ ಜೀವನ-ಸಾಧನೆಗಳನ್ನೂ ತತ್ತ್ವಚಾರವನ್ನೂ ಅಚ್ಚುಕಟ್ಟಾಗಿ ನಿರೂಪಿಸಿವೆ. ಇಲ್ಲಿ ವೇದಾಂತದ ಪ್ರಮೇಯಗಳನ್ನೆಲ್ಲ ವ್ಯವಸ್ಥಿತವಾಗಿ, ‘ಇದಮಿತ್ಥಂ’ ಎಂಬAತೆ, ಹವಣಿಸಿಕೊಡುವ ಕ್ರಮವಿಲ್ಲದಿದ್ದರೂ ಗೊಂದಲಕ್ಕೆ ಎಡೆಯಾಗದಂತೆ ಹಲಕೆಲವು ಮಹತ್ತ್ವದ ವಿಚಾರಗಳನ್ನಾದರೂ ತಿಳಿಯಾಗಿ ಹಿಡಿದಿಡುವ ಸಾರ್ಥಕ ಯತ್ನವಿದೆ. ಇವನ್ನೆಲ್ಲ ಪ್ರಾಯಿಕವಾಗಿ ಶ್ರೀಸಚ್ಚಿದಾನಂದೇAದ್ರಸರಸ್ವತೀಸ್ವಾಮಿಗಳ ಗ್ರಂಥಗಳ, ಸಂಶೋಧನೆಯ ಹಾಗೂ ವಿಚಾರಕ್ರಮದ ಬಲದಿಂದಲೇ ರಾಯರು ಮಾಡಿದ್ದಾರೆ. ಆದುದರಿಂದಲೇ ಇಲ್ಲಿಯ ಕಡೆಯ ಐದು ಲೇಖನಗಳು ಅವರನ್ನೂ ಅವರ ಕೃತಿಗಳನ್ನೂ ಕುರಿತಿವೆ. ಇದು ರಾಯರು ಸ್ವಾಮಿಗಳಲ್ಲಿ ಇರಿಸಿದ್ದ ಗೌರವಕ್ಕೆ ಸಾಕ್ಷಿ. ಒಟ್ಟಿನಲ್ಲಿ ಈ ಹೊತ್ತಿಗೆ ‘ಶಂಕರವಾಣಿ’ (ಇದೇ ಅತ್ಯಲ್ಪ ಸೇರ್ಪಡೆ-ಬೇರ್ಪಡೆಗಳಿಂದ ‘ಶಾಂಕರಸAದೇಶ’ ಎಂದು ಆ ಬಳಿಕ ಪ್ರಕಟವಾಯಿತು), ‘Śaṅkara and Adhyāsabhāṣya’, ‘Writings on Śaṅkara’s Advaita’, ‘Jīvanmukti in Advaita’, ‘Śaṅkara: A Psychological Study’ ಎಂಬಿವೇ ಮೊದಲಾದ ರಾಯರ ಮತ್ತೂ ಹಲವು ಮೌಲಿಕ ಗ್ರಂಥಗಳ ಜೊತೆಗೆ ನಿಲ್ಲಬಲ್ಲ ಒಳ್ಳೆಯ ರಚನೆ. ಈ ಎಲ್ಲ ಪುಸ್ತಕಗಳ ವಿಚಾರಸಾಮಗ್ರಿ ಅನ್ಯೋನ್ಯ ಪೂರಕ ಮತ್ತು ಅದೆಷ್ಟೋ ಬಾರಿ ಏಕರೂಪದ್ದೇ ಆಗಿದೆ ಎಂಬುದು ವಿಜ್ಞವೇದ್ಯ. ಇವುಗಳಲ್ಲಿ ಹೆಚ್ಚಿನ ಭಾಗವನ್ನು ಅವರ ಮೊದಮೊದಲಿನ ಮನಃಶಾಸ್ತಿçÃಯ ಕೃತಿಗಳಲ್ಲಿಯೂ ಅನಂತರ ‘ಋಗ್ವೇದದರ್ಶನ’ ಗ್ರಂಥಮಾಲಿಕೆಯ ಸಂಪುಟಗಳಲ್ಲಿಯೂ ಕಾಣಬಹುದು. ಒಟ್ಟಿನಲ್ಲಿ ರಾಯರಿಗೆ ಶಂಕರರಲ್ಲಿದ್ದ ಆದರ ಮತ್ತು ಅನುಸಂಧಾನಗಳನ್ನು ಈ ಮೂಲಕ ಮನಗಾಣಬಹುದು.
ರಾಯರಿಗೆ ವೇದವಾಙ್ಮಯವನ್ನು ಕುರಿತು ಅಸೀಮ ಶ್ರದ್ಧಾದರಗಳಿದ್ದವು; ಆಸಕ್ತಿ-ಅಧ್ಯಯನಗಳಂತೂ ಇದ್ದೇ ಇದ್ದವು. ಅವರ ‘ಋಗ್ವೇದದರ್ಶನ’ ಇಂಥ ಪ್ರೀತಿ-ಪರಿಶ್ರಮಗಳ ವ್ಯಕ್ತರೂಪವಷ್ಟೆ. ಈ ಬಗೆಯ ವಿಶಾಲ ಕಾರ್ಯವನ್ನು ಕೈಗೊಳ್ಳುವುದಕ್ಕೆ ತಾವೇ ಮಾಡಿಕೊಂಡ ಪೂರ್ವಸಿದ್ಧತೆಯೆಂಬAತೆ ಅವರ ಶ್ರೀಸೂಕ್ತ ಮತ್ತು ಪುರುಷಸೂಕ್ತಗಳ ವಿವರಣೆಗಳನ್ನು ಕಾಣಬಹುದು.
ಶ್ರೀಸೂಕ್ತವು ಋಕ್ಸಂಹಿತೆಯ ಖಿಲಸೂಕ್ತಗಳಲ್ಲೊಂದು. ಇದನ್ನು ಸಾಂಪ್ರದಾಯಿಕ ಭಾಷ್ಯಗಳ ಹಾಗೂ ನಿರುಕ್ತ-ಕಲ್ಪಗಳಂಥ ವೇದಾಂಗಗಳ ನೆರವಿನಿಂದ ತಂತ್ರ, ಯಂತ್ರ, ಆಗಮ ಮತ್ತು ಆರಾಧನಪದ್ಧತಿಗಳ ಹಿನ್ನೆಲೆಯಲ್ಲಿ ರಾಯರು ಸೊಗಸಾಗಿ ವಿವರಿಸಿದ್ದಾರೆ. ಇಲ್ಲಿ ಅವರು ನಿಗಮ ಮತ್ತು ಆಗಮಗಳ ಸಾಮರಸ್ಯವನ್ನು ಸಾಧಿಸಿದ ಪರಿ ಶ್ಲಾಘನೀಯ, ಅನುಕರಣೀಯ ಕೂಡ. ಸಾಮಾನ್ಯವಾಗಿ ಆಧುನಿಕ ವಿದ್ವತ್ತೆಯು ವೇದ ಮತ್ತು ಪುರಾಣಾಗಮಗಳ ಸಾಮ್ಯಕ್ಕಿಂತ ವೈಷಮ್ಯವನ್ನೇ ಹೆಚ್ಚಾಗಿ ಗಮನಿಸುತ್ತಿರುತ್ತದೆ. ಇದಕ್ಕೆಲ್ಲ ಸಮರ್ಥ ಉತ್ತರವೆಂಬAತೆ ಈ ಕೃತಿಯು ಮೆಯ್ದಾಳಿದೆ. ಅಂತೆಯೇ ಇಲ್ಲಿ ಒಡಮೂಡಿರುವ ಲಕ್ಷ್ಮೀತತ್ತ್ವದ ವಿಶ್ವರೂಪವೂ ಅಸಾಧಾರಣ.
ಪುರುಷಸೂಕ್ತದ ವಿವರಣೆ ಕೂಡ ಮೇಲಣ ಜಾಡನ್ನೇ ಬಲುಮಟ್ಟಿಗೆ ಹಿಡಿದಿದೆಯಾದರೂ ಇಲ್ಲಿ ತಂತ್ರಾಗಮಗಳ ಪ್ರಸ್ತಾವ ಇಲ್ಲ. ಸೂಕ್ತದ ಪ್ರತಿಯೊಂದು ಮಂತ್ರವನ್ನೂ ಋಕ್ಸಂಹಿತೆಯ ವಿವಿಧ ಸೂಕ್ತಗಳ ಸೊಲ್ಲುಗಳಿಂದ ಪುಷ್ಟೀಕರಿಸುವುದಲ್ಲದೆ ಐತರೇಯಬ್ರಾಹ್ಮಣ, ತೈತ್ತಿರೀಯಬ್ರಾಹ್ಮಣ, ತೈತ್ತಿರೀಯ ಆರಣ್ಯಕ, ಶತಪಥಬ್ರಾಹ್ಮಣ ಮುಂತಾದುವುಗಳಿAದಲೂ ಈಶ, ಕೇನ, ಕಠ, ಪ್ರಶ್ನ, ಮುಂಡಕ ಮೊದಲಾದ ಉಪನಿಷತ್ತುಗಳಿಂದಲೂ ಉಪಬೃಂಹಿಸಲಾಗಿದೆ. ಪುರುಷಸೂಕ್ತದ ಒಂದೊAದು ಮಂತ್ರದ ಪ್ರಮುಖ ಪದಪುಂಜಗಳನ್ನೂ ಬಿಡಿಬಿಡಿಯಾಗಿ ವಿಶ್ಲೇಷಿಸುವ ಕಾರ್ಯವೂ ಸಾಗಿದೆ. ಹೀಗೆ ಇದನ್ನು ಇಡಿಯ ವೇದವಾಙ್ಮಯದ ನೇಪಥ್ಯದಲ್ಲಿ ಪುರುಷಸೂಕ್ತವನ್ನು ಕಾಣುವ ವಿಶಿಷ್ಟ ಪ್ರಯತ್ನವೆಂದು ಬಣ್ಣಿಸಬಹುದು. ವಿಶ್ವಯಜ್ಞದ ಮಹಾರೂಪಕವೆಂದೇ ಪ್ರಸಿದ್ಧವಾದ ಪುರುಷಸೂಕ್ತವನ್ನು ತಮ್ಮೊಲವಿನ ಆಧ್ಯಾತ್ಮಿಕ ಸ್ತರದಲ್ಲಿ ರಾಯರು ಕಾಣಿಸಲೆಳಸಿದ್ದಾರೆ. ಮೂಲತಃ ಇಂಗ್ಲಿಷ್ ಭಾಷೆಯಲ್ಲಿರುವ ಈ ಹೊತ್ತಿಗೆಯನ್ನು ಅಂಬುಜಾ ಶ್ರೀನಿವಾಸನ್ ಅವರು ಕನ್ನಡಿಸಿದ್ದಾರೆ.
ಓಂಕಾರವನ್ನು ವೇದಗಳ ಸಾರವೆಂದೇ ಉಪನಿಷತ್ತುಗಳು ಸಾರಿವೆ. ಪ್ರಣವವು ಬ್ರಹ್ಮವಾಚಕವೆಂದೂ ವೇದವಾಙ್ಮಯದಲ್ಲಿ ಪ್ರಸಿದ್ಧಿಯಿದೆ. ಇಂಥ ಓಂಕಾರವನ್ನು ಕುರಿತು ರಾಯರು ‘Om: The Ultimate Word’ ಎಂಬ ಕಿರುಹೊತ್ತಿಗೆಯನ್ನು ರಚಿಸಿದ್ದಾರೆ. ಇದಕ್ಕೂ ಎಸ್. ಕೇಶವನ್ ಎಂಬುವರು ಮಾಡಿದ ಕನ್ನಡ ಅನುವಾದವಿದೆ. ಈ ಪುಸ್ತಿಕೆಯಲ್ಲಿ ಕೂಡ ರಾಯರ ವಿಶಿಷ್ಟ ‘ಸ್ಪರ್ಶ’ವನ್ನು ಕಾಣಬಹುದು. ಮೊದಲಿಗೆ ಪ್ರಾಣಾಯಾಮಪದ್ಧತಿಯಲ್ಲಿ ಓಂಕಾರವನ್ನು ಅನ್ವಯಿಸಿಕೊಂಡ ಬಗೆ ಬಂದಿದೆ. ಅನಂತರ ವಿವಿಧ ಉಪನಿಷತ್ತುಗಳ ಹಾಗೂ ವೇದಸಂಹಿತೆಗಳ ಉಕ್ತಿಗಳ ಬಲದಿಂದ ಓಂಕಾರದ ವಿಶ್ಲೇಷಣೆ ಸಾಗಿದೆ. ಮಾತ್ರವಲ್ಲ, ಜೈನ ಮತ್ತು ಬೌದ್ಧ ದರ್ಶನ-ಧ್ಯಾನಸಂಪ್ರದಾಯಗಳಲ್ಲಿಯೂ ಓಂಕಾರಕ್ಕಿರುವ ಪ್ರಾಶಸ್ತ್ಯದ ಪ್ರಸ್ತಾವ ಅರ್ಥಪೂರ್ಣವಾಗಿ ಬಂದಿದೆ. ಇವೆಲ್ಲ ರಾಯರ ಸರ್ವಸಮಯಪರಿಜ್ಞಾನ ಮತ್ತು ಸಮನ್ವಯಗಳಿಗೆ ಸಾಕ್ಷಿ. ಪ್ರಣವಜಪದ ಕ್ರಮ, ತ್ರಿಕಪದ್ಧತಿಯಲ್ಲಿ ಓಂಕಾರದ ವಿನಿಯೋಗ, ಓಂಕಾರದ ದೇವನಾಗರೀಲಿಪಿರೂಪ ಮತ್ತು ಆ ಮೂಲಕ ಉನ್ಮೀಲಿಸುವ ತಾಂತ್ರಿಕ ಧ್ಯಾನವಿಧಾನ, ತಂತ್ರಾಗಮಗಳಲ್ಲಿ ಪ್ರಣವದ ಮಹತ್ತ್ವ, ಸೋಽಹಂ ತತ್ತ್ವದ ಅನುಸಂಧಾನಕ್ಕಾಗಿ ಮಾಡುವ ಓಂಕಾರಚಿAತನ ಇತ್ಯಾದಿ ಅನೇಕ ವಿಷಯಗಳು ಈ ಪುಟ್ಟ ಪುಸ್ತಿಕೆಯಲ್ಲಿ ಎಡೆಮಾಡಿಕೊಂಡಿವೆ. ಒಟ್ಟಿನಲ್ಲಿ ದೇಹ, ಮನಸ್ಸು ಮತ್ತು ಅಸ್ತಿತ್ವಗಳ ನೆಲೆಯಲ್ಲಿ ಪ್ರಣವದ ಪಾರಮ್ಯವನ್ನು ರಾಯರಿಲ್ಲಿ ಹಾಳತವಾಗಿ ಹವಣಿಸಿದ್ದಾರೆ. ಈ ಬಗೆಯ ಪ್ರಕಲ್ಪಗಳು ಅವರಿಗೆ ಲೀಲಾಜಾಲ.
ರಾಮಚಂದ್ರರಾಯರ ವೇದಪ್ರೀತಿ ಅದೆಷ್ಟು ಬಗೆಯ ಬರೆಹಗಳನ್ನೆಲ್ಲ ಹೊರತಂದಿದೆಯೆAದರೆ ಆ ಸಾಹಿತ್ಯದಲ್ಲಿ ಕಾಣಸಿಗುವ ಹಲಕೆಲವು ಆಖ್ಯಾನಗಳನ್ನು ಸುಬೋಧವಾದ ಕಿರುಗತೆಗಳ ರೂಪದಲ್ಲಿಯೂ ಕಂಡರಿಸುವAತೆ ಮಾಡಿದೆ. ಇವೆಲ್ಲ ಹಿಂದೆ ‘ಮಲ್ಲಿಗೆ’ ಮಾಸಪತ್ರಿಕೆಯಲ್ಲಿ ಧಾರಾವಾಹಿಯಾಗಿ ಬಂದು ಬಳಿಕ ಕಿರುಹೊತ್ತಿಗೆಯ ಆಕೃತಿಯನ್ನು ತಾಳಿದವು. ವೇದದ ಇವೇ ಕಥನಗಳನ್ನಲ್ಲದೆ ಮತ್ತೂ ಅನೇಕವನ್ನು ಅನೇಕರು ಅನೇಕ ಭಾಷೆಗಳಲ್ಲಿ ಹೊರತಂದಿದ್ದಾರೆ. ಆದರೂ ರಾಯರ ಭಾಷೆ ಮತ್ತು ನಿರೂಪಣೆಗಳ ಸೊಗಸೇ ಅದೊಂದು ತೆರನಾದದ್ದು. ಇದಕ್ಕೆ ಹೋಲಿಕೆಯಿಲ್ಲ. ಆದರೆ ಇಲ್ಲಿಯ ನಿರೂಪಣೆಯಲ್ಲಿ ವೇದಗಳ ಆಧಿದೈವಿಕವು ಆಧಿಭೌತಿಕ ಮತ್ತು ಆಧ್ಯಾತ್ಮಿಕ ಸ್ತರಗಳ ಹಾಸು-ಹೊಕ್ಕುಗಳ ನಡುವೆ ಲೀಲೆಯಿಂದ ಲಾಳಿಯಾಡುವ ಬಗೆ ಮಾತ್ರ ವಿಶದೀಕೃತವಾಗಿಲ್ಲ. ಇದನ್ನು ರಾಯರಂಥವರಲ್ಲದೆ ಹೆಚ್ಚಿನ ಮಂದಿ ಮಾಡಲಾರರು. ಆದರೂ ಅದೇಕೋ ಇಲ್ಲಿ ಆ ಸೀಮೋಲ್ಲಂಘನ ಸಾಧಿತವಾಗಿಲ್ಲ. ಇಂತಿದ್ದರೂ ಈ ಕೃತಿಯ ನುಡಿಬೆಡಗು ಮನದಾಳದಲ್ಲಿ ಸವಿಯೂರಿ ನಿಲ್ಲುವಂಥದ್ದು.
‘Principles of Yajnavidhi’ ಎಂಬ ಹೊತ್ತಿಗೆ ತನ್ನ ಹೆಸರಿನಿಂದಲೇ ಸೂಚಿಸುವಂತೆ ಶ್ರೌತಯಾಗಗಳ ಸಂಕ್ಷಿಪ್ತ ಪರಿಚಯ ಮತ್ತು ಅಲ್ಲಿ ಬಳಕೆಯಾಗುವ - ಯಜ್ಞಾಯುಧಗಳೆಂದು ಹೆಸರಾದ - ಬಗೆಬಗೆಯ ಪಾತ್ರ-ಪರಿಕರಗಳ ಹಾಗೂ ಅವನ್ನೆಲ್ಲ ಬಳಸಿ ಯಜ್ಞಗಳನ್ನು ನಡಸುವ ಋತ್ವಿಗ್ವರ್ಗದ ಲಘುವಿವರಣೆ. ತುಂಬ ಹಿಂದೆ ಪ್ರಸಿದ್ಧ ಶ್ರೌತ-ಮೀಮಾಂಸಾಕೋವಿದರಾದ ಚಿನ್ನಸ್ವಾಮಿಶಾಸ್ತಿçಗಳು ಸಂಸ್ಕöÈತದಲ್ಲಿ ರಚಿಸಿದ ‘ಯಜ್ಞತತ್ತ್ವಪ್ರಕಾಶಃ’ ಎಂಬ ಅತ್ಯಂತ ಮೌಲಿಕ ಗ್ರಂಥದ ಜಾಡನ್ನು ಹಿಡಿದು ಅಲ್ಲಿಯ ಸಾಮಗ್ರಿಯನ್ನೇ ಬಳಸಿಕೊಂಡು ರಾಯರ ಈ ಇಂಗ್ಲಿಷ್ ಪುಸ್ತಕ ಮೈದಾಳಿದೆ. ಇಲ್ಲಿ ವಿವಿಧ ಯಜ್ಞಾಯುಧಗಳ ಚಿತ್ರಗಳೂ ಉಂಟು.
ರಾಮಚಂದ್ರರಾಯರು ತಮ್ಮ ಹೃದಯಕ್ಕೆ ತುಂಬ ಹತ್ತಿರವಾಗಿದ್ದ ಭಗವದ್ಗೀತೆಯನ್ನು ಕುರಿತೇ ಕನ್ನಡ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ಏಳು ಗ್ರಂಥಗಳನ್ನು ರಚಿಸಿದ್ದಾರೆ. ಇವುಗಳಲ್ಲಿ ಒಂದೊAದೂ ಸಹ ತನ್ನದೇ ಆದ ವೈಶಿಷ್ಟ್ಯವನ್ನು ತಳೆದಿದೆ. ಇಲ್ಲಿ ಗಾತ್ರದಿಂದ ಚಿಕ್ಕವೆನ್ನಬಹುದಾದ ‘ಬದುಕಿಗೆ ಬೆಳಕು: ಗೀತಾಸಪ್ತತಿ’ ಮತ್ತು ‘ಗೀತೆಗೊಂದು ಕೈಪಿಡಿ’ ಎಂಬೆರಡನ್ನು ಗಮನಿಸಬಹುದು. ಮೊದಲ ಹೊತ್ತಿಗೆಯಲ್ಲಿ ಭಗವದ್ಗೀತೆಯ ಆಯ್ದ ಎಪ್ಪತ್ತು ಶ್ಲೋಕಗಳನ್ನು ಮೂರು ಅರ್ಥಪೂರ್ಣ ವಿಭಾಗಗಳ ಅಡಿಯಲ್ಲಿ ಹವಣಿಸಿ ಆ ಬಳಿಕ ಇವಕ್ಕೆ ಜೀವನಾನ್ವಯರೂಪದ ವ್ಯಾಖ್ಯಾನವನ್ನು ನೀಡಲಾಗಿದೆ. ಈ ಮೂರು ವಿಭಾಗಗಳು ನಿರ್ಲೇಪಕರ್ಮ ಅಥವಾ ಕರ್ಮಯೋಗದ ಹಿನ್ನೆಲೆಯಲ್ಲಿ ಕರ್ತೃತ್ವ-ಭೋಕ್ತöÈತ್ವಗಳ ನೆಲೆ-ಬೆಲೆ, ತ್ರಿಗುಣಗಳ ಮೇಲಾಟ ಮತ್ತು ಅವುಗಳ ಹಿಡಿತದಿಂದ ನಾವು ತಪ್ಪಿಸಿಕೊಳ್ಳುವ ವಿಧಾನಗಳನ್ನು ಕ್ರಮವಾಗಿ ಹೊಂದಿವೆ. ಇಲ್ಲಿಯೇ ನಮ್ಮ ಸಾಂಪ್ರದಾಯಿಕರು ಹೇಳುವ ಕರ್ಮಷಟ್ಕ, ಭಕ್ತಿಷಟ್ಕ ಮತ್ತು ಜ್ಞಾನಷಟ್ಕಗಳೆಂಬ ಆರಾರು ಅಧ್ಯಾಯಗಳ ಮೂರು ಭಾಗಗಳೂ ಧ್ವನಿತವಾಗಿವೆ. ಎರಡನೆಯ ಪುಸ್ತಕದಲ್ಲಿ ಭಗವದ್ಗೀತೆಯನ್ನು ಕುರಿತ ಹತ್ತಾರು ಹೊಸಹೊಳಹುಗಳು ಅಣಿಗೊಂಡಿವೆ. ಇಲ್ಲಿ ಗೀತೆಯೊಂದು ಶಾಸ್ತçವಾಗಿ ಹೇಗೆ ಮಾನಿತವಾಗಿದೆ, ಗೀತೆಗಿರುವ ಅಪೂರ್ವತೆ ಎಂಥದ್ದು, ಇದನ್ನು ಬೋಧಿಸಿದ ಭಗವಂತನ ಭಗವತ್ತ್ವ ಯಾವ ತೆರನಾದುದು, ನರ-ನಾರಾಯಣರೆನಿಸಿದ ಅರ್ಜುನ-ಕೃಷ್ಣರು ಹತ್ತಿ ಕುಳಿತಿದ್ದ ರಥದ ಸಂಕೇತ ಏನು ಎಂಬಿವೇ ಮೊದಲಾದ ಸ್ವಾರಸ್ಯಕರ ಪ್ರಕರಣಗಳ ಬಳಿಕ ನಾವು ಈ ಮುನ್ನ ನೋಡಿದ ‘ಗೀತಾಸಪ್ತತಿ’ಯ ಸಾರವೇ ಪುನರುಕ್ತವಾಗಿದೆ. ಅನಂತರ ವಿಷ್ಣುತೀರ್ಥರು ‘ಮುಕ್ತಾಮಾಲಾ’ ಎಂಬ ಹೆಸರಿನಿಂದ ಹದಿನೆಂಟು ಶ್ಲೋಕಗಳಲ್ಲಿ ಸಂಗ್ರಹಿಸಿರುವ ಗೀತಾಸಾರದ ಪ್ರಸ್ತುತಿ ಉಂಟು. ಬಳಿಕ ಹಲವು ಚಿಕ್ಕ ಚಿಕ್ಕ ಅನುಬಂಧಗಳಲ್ಲಿ ಭಗವದ್ಗೀತೆಯ ಹದಿನೆಂಟು ಅಧ್ಯಾಯಗಳಿಗೆ ಬೇರೆ ಬೇರೆ ಹಸ್ತಪ್ರತಿಗಳಲ್ಲಿ, ಪಾಠಾಂತರಗಳಲ್ಲಿ ಇರುವ ವಿವಿಧ ನಾಮಧೇಯಗಳ ಪಟ್ಟಿ ಮತ್ತು ಗೀತೆಯ ಗರ್ಭದಲ್ಲಿರುವ ಸುಭಾಷಿತಗಳ ಸಂಗ್ರಹ ಅಡಕವಾಗಿದೆ. ಕಟ್ಟಕಡೆಗೆ ಬಲಿದ್ವೀಪದಲ್ಲಿ ಪ್ರಚಲಿತವಿದ್ದ ಭಗವದ್ಗೀತೆಯ ಪಾಠದ ಪ್ರಸ್ತಾವವೂ ಅಲ್ಲಿಯ ಶ್ಲೋಕಗಳ ಉಲ್ಲೇಖವೂ ಬಂದಿದೆ. ಒಟ್ಟಿನಲ್ಲಿ ಈ ಕೃತಿಯ ಪುಟಪುಟದಲ್ಲಿಯೂ ಹೊಸ ಹೊಸ ವಿಷಯಗಳ ಹೊನಲು ಅಡಕವಾಗಿ, ಆಕರ್ಷಕವಾಗಿ ಹರಿದಿದೆ. ಕೃಷ್ಣಾರ್ಜುನರು ಅಧಿರೋಹಿಸಿದ್ದ ರಥದ ರೂಪಕದ ಮೂಲವನ್ನು ಋಕ್ಸಂಹಿತೆಯ ‘ದ್ವಾ ಸುಪರ್ಣಾ ಸಯುಜಾ ಸಖಾಯೌ’ ಎಂಬ ಮಂತ್ರದಲ್ಲಿ ಕಾಣಿಸುವರೆಂಬ ಒಂದೇ ಅಂಶದಿAದ ಅವರ ಹೊಸಹೊಳಹಿನ ಪರಿ ಎಂಥದ್ದೆAದು ನಾವು ಊಹಿಸಬಹುದು. ಕನ್ನಡದಲ್ಲಿ ಇದುವರೆಗೂ ಗೀತೆಯನ್ನು ಆಶ್ರಯಿಸಿ ಬಂದ ಪುಸ್ತಕಗಳಿಗೆ ಕೊನೆಮೊದಲಿಲ್ಲ. ಈ ನೂರಾರು ಗ್ರಂಥಗಳ ನಡುವೆ ಮೌಲ್ಯಪ್ರದವಾದ ಹೊಸತನ್ನು ಕಾಣಿಸುವುದೆಂದರೆ ಅಲ್ಪಸ್ವಲ್ಪದ ಮಾತಲ್ಲ. ಇಂಥ ಅಸಾಧ್ಯ ಸಾಧನೆಯನ್ನು ರಾಯರು ಮಾಡಿದ್ದಾರೆಂದರೆ ಅತಿಶಯವಲ್ಲ.
‘ಶ್ರೀಕೃಷ್ಣನ ವ್ಯಕ್ತಿತ್ವ’ ಎಂಬ ಪುಸ್ತಕವಂತೂ ರಾಯರ ವ್ಯಕ್ತಿತ್ವದಷ್ಟೇ ಆಕರ್ಷಕವಾಗಿದೆ, ಬಹುಮುಖಿಯಾಗಿದೆ. ಇಲ್ಲಿ ಕೃಷ್ಣತತ್ತ್ವವು ಮಹಾಭಾರತ, ಹರಿವಂಶ, ವಿಷ್ಣುಪುರಾಣ, ಭಾಗವತಪುರಾಣಗಳಂಥ ಪ್ರಾಚೀನ ಗ್ರಂಥಗಳಲ್ಲಿ ಬೆಳೆದುಬಂದ ಬಗೆಯನ್ನು ಮೊದಲು ಕಾಣಬಹುದು. ಇವುಗಳಿಗೆ ಪೂರಕವಾದ ವೇದ-ವೇದಾಂಗಗಳ ಉಲ್ಲೇಖವನ್ನೂ ನೋಡಬಹುದು. ಅನಂತರ ಜಾನಪದಜೀವನದಲ್ಲಿ ಕೃಷ್ಣನ ವ್ಯಕ್ತಿತ್ವ ಹರಳುಗಟ್ಟಿದ ಬಗೆಯೂ ಮೂಡಿರುವುದು ಸ್ವಾರಸ್ಯದ ಸಂಗತಿ. ಇಷ್ಟನ್ನೂ ಅಧಿಕರಿಸಿದ ರಾಯರು ಗೋಕುಲ ಮತ್ತು ಬೃಂದಾವನಗಳಲ್ಲಿ ಮೆರೆಯುವ ಬಾಲಕೇಳಿಯ, ರಾಸಲೀಲೆಯ ಒಬ್ಬ ಕೃಷ್ಣನನ್ನೂ ಮಹಾಭಾರತದ ಉದ್ಯೋಗಪರ್ವ ಮತ್ತು ಯುದ್ಧಪರ್ವಪಂಚಕದಲ್ಲಿ ಬೆಳಗುವ ರಾಜನೀತಿಜ್ಞನಾದ ಇನ್ನೊಬ್ಬ ಕೃಷ್ಣನನ್ನೂ ಬ್ರಹ್ಮವೈವರ್ತವೇ ಮೊದಲಾದ ಪುರಾಣಗಳಲ್ಲಿ ತೋರಿಕೊಳ್ಳುವ ಲೀಲಾಮಾನುಷಮೂರ್ತಿಯಾದ ಮತ್ತೊಬ್ಬ ಕೃಷ್ಣನನ್ನೂ ಭಗವದ್ಗೀತೆಯಂಥ ದರ್ಶನಗ್ರಂಥಗಳಲ್ಲಿ ಬಿಂಬಿತನಾದ ಯೋಗೇಶ್ವರನೆನಿಸಿದ ಮಗದೊಬ್ಬ ಕೃಷ್ಣನನ್ನೂ ಕಟ್ಟಿಕೊಡುತ್ತಾರೆ. ಎಲ್ಲವನ್ನೂ ಆಯಾ ನೆಲೆಗಳಲ್ಲಿ ನ್ಯಾಯಸಮ್ಮತವಾಗಿ ನಿರೂಪಿಸುವುದಲ್ಲದೆ ಇವೆಲ್ಲವನ್ನೂ ಒಳಗೊಂಡು ಇವನ್ನೂ ಮೀರಿದ ಬ್ರಹ್ಮತತ್ತ್ವವಾದ ಕೃಷ್ಣನು ನಮ್ಮೊಳಗೆ ಧ್ವನಿತವಾಗುವಂತೆ ಮಾಡುತ್ತಾರೆ. ಇದು ಬರಿಯ ಮುಗ್ಧ ಶ್ರದ್ಧಾಳುವಿಗೋ ಕೇವಲ ಶುಷ್ಕ ಚಿಕಿತ್ಸಕನಿಗೋ ಆಗದ ಕೆಲಸ. ಇಂಥ ರಚನೆಗೆ ಅದೊಂದು ಬಗೆಯ ಸಮುನ್ನತ ಸಮನ್ವಯದೃಷ್ಟಿ ಬೇಕು. ಓದುಗರನ್ನು ಬೆಚ್ಚಿಬೀಳಿಸುವಂಥ ವಿವರಗಳೆಷ್ಟಿದ್ದರೂ ಅವನ್ನು ಜೀರ್ಣಿಸಿಕೊಂಡು ಆಪ್ತವಾಗಿ ಹೇಳಬಲ್ಲ ಕಾವ್ಯಭಾವವೂ ಬೇಕು. ಈ ಮೌಲ್ಯಗಳು ರಾಯರ ಅಸಂಖ್ಯ ಕೃತಿಗಳ ಜೀವಧಾತುವಾಗಿರುವುದನ್ನು ನಾವು ನೋಡಬಹುದು.
ಮೊದಲಿನ ಆವೃತ್ತಿಯಲ್ಲಿ ‘ಶ್ರೀಕೃಷ್ಣನ ವ್ಯಕ್ತಿತ್ವ’ ಎಂಬ ಪೂರ್ವೋಕ್ತ ಪುಸ್ತಕಕ್ಕೆ ಅಂಟಿಕೊAಡೇ ಪ್ರಕಟವಾದದ್ದು ‘ಆಳ್ವಾರರ ನುಡಿಮುತ್ತುಗಳು’. ಇದು ‘ತಿರುಪತಿ ತಿಮ್ಮಪ್ಪ’ ಕೃತಿಯ ಅನುಬಂಧವಾಗಿ ಅದರ ಎರಡನೆಯ ಆವೃತ್ತಿಯಿಂದ ಸೇರ್ಪಡೆಗೊಂಡಿದೆ. ತನ್ನ ಹೆಸರಿನಿಂದಲೇ ಸೂಚಿತವಾಗುವಂತೆ ತಮಿಳುನಾಡಿನ ಭಗವದ್ಭಕ್ತರಾದ ಆಳ್ವಾರುಗಳನ್ನು ಕುರಿತ ಹೊತ್ತಿಗೆಯಿದು. ಮೊದಲಿಗೆ ಆಯ್ದ ಕೆಲವರು ಆಳ್ವಾರುಗಳ ಎಪ್ಪತ್ತೆöÊದು ಪಾಶುರಗಳನ್ನು ಸಮೂಲವಾಗಿ ಕನ್ನಡಿಸಿ ಕೊಡಲಾಗಿದೆ. ಬಳಿಕ ಅನುಬಂಧವೆAಬAತೆ ಆಳ್ವಾರರ ಸಂಕ್ಷಿಪ್ತ ಪರಿಚಯವಿದೆ. ಅನುವಾದದ ಭಾಷೆ ಸರಳ, ಸಾಹಜಿಕ. ಇಲ್ಲಿ ಛಂದಸ್ಸು-ಪ್ರಾಸಗಳ ಪಾಲನೆಯಿಲ್ಲವಾದರೂ ಪದ್ಯಗಂಧಿಯೆAಬAಥ ಗೇಯಗುಣವಿದೆ. ಹೆಚ್ಚಿನ ಪಾಶುರಗಳೆಲ್ಲ ರಾಯರ ಕುಲದೈವ ತಿರುವೇಂಗಡದೊಡೆಯನ ಸ್ತುತಿಗಳೇ ಆಗಿವೆ. ಅವರು ಮೂಲತಃ ತಮ್ಮ ಮನೆದೇವರನ್ನು ಆಳ್ವಾರರು ಕೊಂಡಾಡಿದ ಪರಿಯನ್ನಾದರೂ ಗುರುಮುಖೇನ ಕಲಿಯಬೇಕೆಂದು ಭಾವಿಸಿ ಹೆಮ್ಮಿಗೆ ದೇಶಿಕಾಚಾರ್ಯರಲ್ಲಿ ಶಿಷ್ಯವೃತ್ತಿ ಮಾಡಿ ಆ ಬಳಿಕ ತಮ್ಮದೇ ಅಧ್ಯಯನದ ಫಲವಾಗಿ ಈ ಪುಟ್ಟ ಪುಸ್ತಕವನ್ನು ಹವಣಿಸಿದರು. ಇದನ್ನು ಅರಿತಾಗ ರಾಯರ ಮನೋಧರ್ಮ ಎಂಥದ್ದೆAದು ತಿಳಿಯದಿರದು. ‘ಮನಕೆ ತೋರ್ಪ ಸೊಬಗನೆಲ್ಲ ತನಗೆ ತುಷ್ಟಿಯಪ್ಪ ತೆರದಿ ಅನುವಿನಿಂದ ನುಡಿಯಲು’ ಬಯಸಿದ ಅವರ ಯತ್ನಗಳೆಲ್ಲ ಇಂಥವೇ.
ತಮ್ಮ ಪಂಗಡದ ಆಚಾರ್ಯರಾದ ಮಧ್ವರನ್ನು ಕುರಿತು ರಾಯರು ನಡಸಿದ ಚಿಂತನೆ-ಸAಶೋಧನೆಗಳ ಫಲವೇ ‘ಪೂರ್ಣಪ್ರಜ್ಞಪ್ರಶಸ್ತಿ’ ಎಂಬ ಸೊಗಸಾದ ಗ್ರಂಥ. ಇಲ್ಲಿ ಅಂಧಾರಾಧನೆಯ ಸೊಲ್ಲೂ ಇಲ್ಲದ ಐತಿಹಾಸಿಕವೂ ದಾರ್ಶನಿಕವೂ ಆದ ಅಧ್ಯಯನವನ್ನು ಕಾಣಬಹುದು. ಮೊದಲಿಗೆ ಆಚಾರ್ಯರ ಕಾಲ-ದೇಶಗಳನ್ನು ಚರ್ಚಿಸುವ ರಾಯರು ಅವರು ನೆಲೆನಿಂತ ಉಡುಪಿಯ ಪರಿಸರವನ್ನೂ ಅದರ ಸಾಂಸ್ಕöÈತಿಕ ಸ್ವಾರಸ್ಯಗಳನ್ನೂ ನಿರೂಪಿಸಿದ್ದಾರೆ. ಅನಂತರ ಮಧ್ವರ ಜೀವನ ಮತ್ತು ಸಾಧನೆಗಳ ಸಂಕ್ಷಿಪ್ತವಾದರೂ ಸ್ವಾರಸ್ಯಕಾರಿಯಾದ ವಿವರಗಳಿವೆ. ಇಲ್ಲಿಯ ಎಷ್ಟೋ ಸಂಗತಿಗಳು ಲೋಕವು ಸಾಮಾನ್ಯವಾಗಿ ಅಂಗೀಕರಿಸಿ ನಂಬಿದ ನೆಲೆಗಳಿಗಿಂತ ಭಿನ್ನವೂ ವಿರುದ್ಧವೂ ಆಗಿವೆ. ಹಾಗೆಂದ ಮಾತ್ರಕ್ಕೆ ಇವನ್ನೆಲ್ಲ ರಾಯರ ಅಶ್ರದ್ಧಾಮಯ ಮನಸ್ಸಿನ ಫಲವೆಂದು ದೂರಿ ದೂರವಿಡಲು ಸಾಧ್ಯವಿಲ್ಲ. ಐತಿಹಾಸಿಕ ಸಂಶೋಧಕರ ಆಲೋಚನಕ್ರಮ ಹೇಗಿರುತ್ತದೆಂಬುದಕ್ಕೆ ಈ ಹೊತ್ತಿಗೆಯನ್ನೇ ಒಂದು ನಿದರ್ಶನವಾಗಿ ನೀಡಬಹುದು. ತನ್ಮೂಲಕ ರಾಯರು ‘ತಮ್ಮದೆಂಬ’ ಸಂಗತಿಗಳಲ್ಲಿಯೂ ಹೇಗೆ ನಿರ್ಮಮರಾಗುತ್ತಾರೆ; ಆ ಹೊತ್ತಿಗೆ ಸಾಕ್ಷ್ಯಗಳ ಬೆಳಕಿನಲ್ಲಿ ಕಾಣಸಿಗುವ ತಥ್ಯವನ್ನು ಜಗತ್ತಿನ ಮುಂದಿರಿಸಿ ನಿಶ್ಚಲ ನಮ್ರತೆಯನ್ನು ಮೆರೆಯುತ್ತಾರೆ ಎಂಬುದನ್ನು ನಾವು ಮನಗಾಣಲು ಸಾಧ್ಯ.
ರಾಯರ ವಿದ್ವತ್ತೆಯ ಹರಹಿಗೆ ‘ಗಣಪತಿಯ ಕಲ್ಪನೆ’ ಎಂಬ ಕೃತಿ ಒಳ್ಳೆಯ ನಿದರ್ಶನ. ಇದು ಕೂಡ ಗಾತ್ರದಲ್ಲಿ ದೊಡ್ಡದಲ್ಲ. ಮೂವತ್ತೆöÊದು ಪುಟಗಳ ವಿವರಣೆಗೆ ಮೂವತ್ತೊಂಬತ್ತು ಚಿತ್ರಗಳು ಇಂಬಾಗಿ ಬಂದಿವೆ. ಈ ರೇಖಾಚಿತ್ರಗಳನ್ನು ರಾಯರೇ ರಚಿಸಿರುವುದು ಮತ್ತೊಂದು ವೈಶಿಷ್ಟ್ಯ. ಗಣಪತಿತತ್ತ್ವವು ವೇದವಾಙ್ಮಯದಲ್ಲಿ, ಆಗಮಗಳಲ್ಲಿ, ಪುರಾಣೇತಿಹಾಸಗಳಲ್ಲಿ, ಜಾನಪದರಲ್ಲಿ ಹೇಗೆಲ್ಲ ಬೆಳೆದುಬಂದಿದೆ ಎಂಬ ವಿವರಗಳನ್ನು ಅಧಿಕೃತತೆಗೆ ಕೊರತೆಯಾಗದ - ಆದರೆ ಅನೌಪಚಾರಿಕತೆಗೆ ಧಕ್ಕೆ ಬರದ - ಅನುಪಮ ಶೈಲಿಯಲ್ಲಿ ರಾಯರು ನಿರೂಪಿಸಿದ್ದಾರೆ. ಈ ಮೂಲಕ ಗಣಪತಿ ಹೇಗೆ ಸರ್ವಜನಪ್ರಿಯ, ಎಲ್ಲ ದೇಶ-ಕಾಲಗಳಲ್ಲಿಯೂ ವ್ಯಾಪ್ತ ಎನ್ನುವುದು ಯಾರಿಗೂ ವೇದ್ಯವಾಗುತ್ತದೆ. ರಾಯರ ಸೂಕ್ಷ್ಮ ಪರಿಶೀಲನೆಗೆ ಇಲ್ಲಿಯ ಒಂದು ವಿಚಾರಶಕಲವನ್ನು ಉಲ್ಲೇಖಿಸಬಹುದು. ಗಣಪತಿಯನ್ನು ವಿದ್ಯಾಗಣಪತಿಯೆಂದು ಕೊಂಡಾಡುವರಷ್ಟೆ. ಇದಕ್ಕೆ ವೇದಗಳ ಬ್ರಹ್ಮಣಸ್ಪತಿಯಿಂದ ಮೊದಲುಗೊಂಡು ವ್ಯಾಕರಣದ ಗಣಪಾಠದವರೆಗೆ ರಾಯರು ಪುರಾವೆ ನೀಡುತ್ತ, ಮಕ್ಕಳ ಅಕ್ಷರಾಭ್ಯಾಸದ ಕಾಲದಲ್ಲಿ ‘ಓಂ ನಮಃ ಸಿದ್ಧಮ್’ ಅಥವಾ ‘ಓಂ ನಮಃ ಸ್ವಸ್ತಿ’ ಎಂದು ಬರೆಯಿಸುವ ಪರಿಪಾಟಿಯನ್ನು ನೆನಪಿಸುತ್ತ, ಇಲ್ಲಿಯೇ ಗಣಪತಿತತ್ತ್ವ, ಗಣಪತಿಯಂತ್ರ ಮತ್ತು ಗಣಪತಿಯ ರೂಪಗಳು ಕಾಣಸಿಗುತ್ತವೆನ್ನುತ್ತಾರೆ. ಈ ಕಾರಣದಿಂದಾಗಿಯೇ ಮಹಾಭಾರತಕ್ಕೆ ಗಣಪತಿ ಲಿಪಿಕಾರನಾದನೆಂದು ಒಕ್ಕಣಿಸುತ್ತ, ಇದಕ್ಕೆ ರಾಜಶೇಖರನ ‘ಬಾಲಭಾರತ’ ರೂಪಕ, ಅಲ್‌ಬೆರೂನಿಯ ಪ್ರವಾಸಕಥನ ಮತ್ತು ಕಂಬೋಡಿಯಾ ದೇಶದ ದ್ವಿಭುಜ ಗಣಪತಿಯ ಕೈಯಲ್ಲಿರುವ ಪುಸ್ತಕ-ಲೇಖನಿಗಳ ಸಾಕ್ಷ್ಯಗಳನ್ನು ಒದಗಿಸುತ್ತಾರೆ. ಇವೆಲ್ಲ ಕೇವಲ ಒಂದು ಪುಟದೊಳಗೆ ಅಡಕವಾಗಿವೆ. ಹೀಗೆ ರಾಯರು ಕೈಯಿಟ್ಟ ಕಡೆಯಲ್ಲೆಲ್ಲ ಕಸವರವನ್ನು ನಮ್ಮ ಕೈಗೆತ್ತಿಕೊಟ್ಟಿದ್ದಾರೆ.
To be continued.











































