“ಅಭಿನವಭಾರತಿ”ಯ ಕೆಲವೊಂದು ವೈಶಿಷ್ಟ್ಯಗಳು — ಇತಿವೃತ್ತ

This article is part 13 of 19 in the series Abhinavabharati

ಇತಿವೃತ್ತ

“ಇತಿವೃತ್ತ”ವೆಂದರೆ ಕಥಾವಿಸ್ತರವೆಂದು ಸ್ಥೂಲವಾಗಿ ಹೇಳಬಹುದು. ಯಾವುದೇ ತೆರನಾದ (ದೃಶ್ಯ ಅಥವಾ ಶ್ರವ್ಯ) ಕಾವ್ಯದಲ್ಲಿ ಕಥಾತಂತುವೊಂದಿರಬೇಕಷ್ಟೆ. ಅದು ಇತಿವೃತ್ತವೇ ಆಗಿದೆ. ಈ ಸುದೀರ್ಘತಂತುವನ್ನು ಕೃತಿಕಾರನು ತನ್ನ ಭಾವ-ಬುದ್ಧಿಗಳ ಮಗ್ಗದಲ್ಲಿ ಅಳವಡಿಸಿ ಕಾವ್ಯವಸ್ತ್ರವನ್ನು ನೇಯುತ್ತಾನೆ. ಭರತನು ನಾಟ್ಯದ ಶರೀರವೇ ಇತಿವೃತ್ತವೆಂದು ಒಕ್ಕಣಿಸಿದ್ದಾನೆ (೧೯.೧). ಅಭಿನವಗುಪ್ತನು ಇದನ್ನು ವಿವರಿಸುತ್ತ, ಇತಿವೃತ್ತರೂಪಿಯಾದ ಕಥೆಯು ಶರೀರವಾದರೆ ರಸವೇ ಆತ್ಮವೆಂದು ನಮ್ಮ ಆಲಂಕಾರಿಕಲೋಕಕ್ಕೆ ಪ್ರಿಯವಾದ ಆತ್ಮ-ಶರೀರಗಳ ರೂಪಕವನ್ನು ವಿಸ್ತರಿಸುತ್ತಾನೆ. ಮಾತ್ರವಲ್ಲ, ಇತಿವೃತ್ತವು ಕಾವ್ಯದ ರೂಪ—ಅರ್ಥಾತ್, ಶಬ್ದಮಯಶರೀರ—ಎಂದು ಸಮೀಕರಿಸಿ ಇಂಥ ಆಕೃತಿಯು ರಸವೆಂಬ ಅರ್ಥವನ್ನು ಹವಣಿಸಿಕೊಡುವಲ್ಲಿ ತನ್ನ ಸಾರ್ಥಕ್ಯವನ್ನು ಕಾಣುವುದೆಂದು ಪ್ರತಿಪಾದಿಸುತ್ತಾನೆ. ಜೊತೆಗೆ, ಈ ಬಗೆಯ ಇತಿವೃತ್ತವು ಕವಿಪ್ರತಿಭೆಯ ಕೈಗೆ ಸಿಕ್ಕಾಗ—ವಿಶೇಷತಃ ದೃಶ್ಯಕಾವ್ಯರೂಪವನ್ನು ಪಡೆಯುವಾಗ[1]—ಕಲಾತರ್ಕಾನುಸಾರಿಯಾದ ವಿವಿಧಘಟನೆಗಳ ಬೆಳೆವಣಿಗೆಯೆಂಬ ವಿಭಾವಾನುಭಾವಸಂಯೋಜನಶೀಲವಾದ ಕಥನವಾಗಿ ಮಾರ್ಪಡುತ್ತದೆ[2]; ಈ ಹಂತದಲ್ಲದು “ಸಂಧಿ”ಗಳೆಂಬ ವ್ಯವಸ್ಥಿತವಿಭಾಗವನ್ನು ತಳೆಯುತ್ತವೆಂದು ಕೂಡ ಒಕ್ಕಣಿಸುತ್ತಾನೆ. ಈ ಬಗೆಯ ಕಥಾಪ್ರಗತಿಯ ಹಂತಗಳಾದ ಸಂಧಿಗಳ ಸಂಖ್ಯೆ ಐದೆಂದೂ ಅವು ಯಾವುದೇ ಕಾವ್ಯಪ್ರಕಾರದಲ್ಲಿ ಕವಿಯ ಉದ್ದೇಶಕ್ಕೆ ತಕ್ಕಂತೆ ಪೂರ್ಣವಾಗಿಯೋ ಆಂಶಿಕವಾಗಿಯೋ ಅನ್ವಿತವಾಗುವವೆಂದೂ ತಿಳಿಸುತ್ತಾನೆ. ಹೀಗೆ ಸಂಧಿಗಳ ವಿನಿಯೋಗದ ವ್ಯತ್ಯಾಸದಿಂದಲೇ ಬಗೆಬಗೆಯ ರೂಪಕಪ್ರಕಾರಗಳು ಹೊಮ್ಮುತ್ತವೆಂದೂ ಗಮನಿಸುತ್ತಾನೆ:

“ಕಾವ್ಯಮಾತ್ರಸ್ಯಾನಭಿನೇಯಸ್ಯ ತಾವದ್ವೃತ್ತಮಾತ್ರಂ ಶರೀರಂ, ನಟನೀಯಸ್ಯ ತ್ವಭಿನೇಯರೂಪಸ್ಯೇತ್ಯೇವಂ ಪ್ರಕಾರತಯಾ ಯದುಪಸ್ಕೃತಂ ವೃತ್ತಂ, ಅತ ಏವೇತಿವೃತ್ತಶಬ್ದವಾಚ್ಯಂ ತದ್ವಸ್ತು ಶರೀರಂ, ರಸಾಃ ಪುನರಾತ್ಮಾ ಶರೀರಾವಿರ್ಭಾವಕಾ ಅತ ಏವಾರ್ಥನಿರ್ಮಾಪಕತ್ವಾತ್, ಅರ್ಥತಾದಾತ್ಮ್ಯಾತ್, ಅರ್ಥರೂಪಾಧ್ಯಾಸಾತ್, ಅರ್ಥೈಕಜ್ಞಾನನಿವೇಶಿತತ್ವಾತ್, ಅರ್ಥೋಪರಂಜಕತ್ವಾತ್, ಅರ್ಥನಿಮಿತ್ತತ್ವಾದ್ವಾ—ಇತಿವೃತ್ತಾರ್ಥೈಕಯೋಗಕ್ಷೇಮತ್ವಂ ವಾಗಾತ್ಮನಾಂ ಶಬ್ದಾನಾಮಿತಿ | ತದಾಶಯೇನ “ವಾಚಿ ಯತ್ನಸ್ತು ಕರ್ತವ್ಯೋ ನಾಟ್ಯಸ್ಯೈಷಾ ತನುಃ ಸ್ಮೃತಾ” (೧೪.೨) ಇತಿ ಪೂರ್ವಮುಕ್ತಮ್ | ಇಹ ವೃತ್ತಂ ಶರೀರಮಿತಿ ದರ್ಶಿತಮಿತ್ಯವಿರೋಧಃ | ಸ ತು ಕಥಂಪ್ರಕಾರವೈಚಿತ್ರ್ಯ ಇತ್ಯಾಶಂಕ್ಯಾಹ ಪಂಚಭಿಃ ಸಂಧಿಭಿರಿತಿ | ಏತದುಕ್ತಂ ಭವತಿ—ಪ್ರಕಾರವೈಚಿತ್ರ್ಯಕಲ್ಪನಾಮಯಾ ಏವ ಸಂಧಯಃ | ತತ್ರ ಪಾರಮ್ಯಪರತಯಾ ಪಂಚಸಂಖ್ಯೇತಿ, ತೇನ ಹೀನಸಂಧಿತ್ವೇऽಪಿ ನ ಕಶ್ಚಿದತ್ರ ವಿರೋಧಃ” (ಸಂ ೩, ಪು. ೧-೨).

ಇತಿವೃತ್ತವು ಆಧಿಕಾರಿಕ ಮತ್ತು ಪ್ರಾಸಂಗಿಕವೆಂದು ಇಬ್ಬಗೆಯಾಗಿದೆ. ಇದನ್ನು ಅಭಿನವಗುಪ್ತನು ವಿವರಿಸುತ್ತ, ಇಂಥ ವಿಭಾಗವು ಕವಿಯ ಮನಸ್ಸಿನಲ್ಲಿ ಮೂಡುವ ಕಲಾವಿವೇಕವಲ್ಲದೆ ಕಥಾವಸ್ತುವಿನಲ್ಲಿಯೋ ಕಥನಮಾತ್ರದಲ್ಲಿಯೋ ಇರುವುದಿಲ್ಲವೆಂದು ತಿಳಿಸಿರುವುದು ಮನನೀಯ:

“ನ ನಿಸರ್ಗತಃ ಕಿಂಚಿದಾಧಿಕಾರಿಕಮನ್ಯದ್ವಾ | ಕವಿಧಿಯಾ ಯದೇತದಾಧಿಕಾರಿಕಂ ಕೃತಂ ತದಾಪರಸ್ಯ ಪ್ರಾಸಂಗಿಕತಾಸ್ತೀತಿ ದ್ವಿಧಾ ಶಬ್ದೇನ ಸೂಚಿತಂ, ತದೇವೇದಂ ದರ್ಶಿತಮ್” (ಸಂ ೩, ಪು. ೨).

ಸಕಲವೂ ಕವಿವಿವಕ್ಷಾಧೀನವೆಂದು ಮತ್ತೂ ಒಮ್ಮೆ ಉಗ್ಗಡಿಸುತ್ತಾನೆ:

“ನನ್ವೇವಮಪಿ ಕವಿವಿವಕ್ಷೈವ ಪುನರಪಿ ಪ್ರಧಾನೀಭೂತಾ” (ಸಂ ೩, ಪು. ೫).

ಇಲ್ಲೆಲ್ಲ ಪ್ರಧಾನವಾಗಿ ತೋರುವುದು ಪ್ರತಿಭಾಪಾರಮ್ಯಕ್ಕಿತ್ತ ಬೆಲೆ. ಸಾಮಾನ್ಯವಾಗಿ ಆಧುನಿಕರು ನಮ್ಮ ಪರಂಪರೆಯಲ್ಲಿ ಸ್ವಂತಿಕೆಗೆ ಬೆಲೆ ಕಡಮೆಯೆಂದು ಆಕ್ಷೇಪಿಸುತ್ತಾರೆ. ಆದರೆ ಆಳದಲ್ಲಿ ಹುಡುಕಿದಾಗ ನಮ್ಮೀ ಸನಾತನವಿದ್ಯಾವಾಹಿನಿಯಲ್ಲಿ ಎಲ್ಲ ಹಿರಿಯರೂ ಸ್ವೋಪಜ್ಞತೆಗೆ ಮಿಗಿಲಾದ ಬೆಲೆ ಸಲ್ಲಿಸಿದ್ದಾರೆ. ಹೆಚ್ಚೇಕೆ, ಅವರ ಹಿರಿತನವೇ ಇಂಥ ಮನ್ನಣೆಯಲ್ಲಿದೆ. ಇತಿವೃತ್ತದಲ್ಲಿ ಪ್ರಾಸಂಗಿಕ ಮತ್ತು ಆಧಿಕಾರಿಕಗಳೆಂಬ ಭೇದವು ಒಡಮೂಡುವುದು ಸಮರ್ಥನಾದ ಕವಿಯೊಬ್ಬನು ಅದನ್ನು ತನ್ನ ಕಲಾನಿರ್ಮಾಣಕ್ಕೆ ಮೂಲಸಾಮಗ್ರಿಯಾಗಿ ಸ್ವೀಕರಿಸಿದಾಗಲೇ ಎಂಬ ಅಭಿನವಗುಪ್ತನ ಮಾತಿನಲ್ಲಿ ಕವಿಪ್ರತಿಭೆಯೇ ಸಂಧಿ-ಸಂಧ್ಯಂಗಗಳೇ ಮೊದಲಾದ ಕಲಾಪೂರ್ಣವಾದ ಕಥನಕ್ರಮತತ್ತ್ವಗಳನ್ನು ಕಲ್ಪಿಸಿಕೊಳ್ಳುತ್ತದೆಂಬ ಧ್ವನಿಯಿದೆ. ಇದು ವಸ್ತುತಃ ರಸಸಿದ್ಧಿಗಾಗಿ ಹವಣಿಸಿದ ವಿಭಾವಾನುಭಾವಸಾಮಗ್ರೀಸಾಮರಸ್ಯವೇ ಆಗಿದೆ. ಹಾಗೆಂದ ಮಾತ್ರಕ್ಕೆ ಯಾಂತ್ರಿಕವಾಗಿ ಸಂಧಿ-ಸಂಧ್ಯಂಗಾದಿಗಳ ವ್ಯವಸ್ಥಾಪನೆಗೆ ಮುಂದಾಗಬಾರದೆಂಬ ಎಚ್ಚರವನ್ನೂ ಅಭಿನವಗುಪ್ತನು ವಹಿಸಿದ್ದಾನೆ. ಹೀಗಾಗಿಯೇ “ಧ್ವನ್ಯಾಲೋಕ”ದಲ್ಲೊಂದೆಡೆ ಆನಂದವರ್ಧನನು ರಸದೃಷ್ಟಿಯಿಲ್ಲದೆ ಶಾಸ್ತ್ರಮಾತ್ರಮೋಹಿತರಾಗಿ ಇಂಥ ಪ್ರಕಲ್ಪಗಳನ್ನು ಕೈಗೊಳ್ಳುವುದು ಸರಿಯಲ್ಲವೆಂದು ಸಾರಿದ ಮಾತನ್ನು ಇಲ್ಲಿ ಉದ್ಧರಿಸಿದ್ದಾನೆ (ಸಂ ೩, ಪು. ೪೨).

“ಸಂಧಿಸಂಧ್ಯಂಗಘಟನಂ ರಸಬಂಧವ್ಯಪೇಕ್ಷಯಾ | ನ ತು ಕೇವಲಶಾಸ್ತ್ರಾರ್ಥಸ್ಥಿತಿಸಂಪಾದನೇಚ್ಛಯಾ ||” (ಧ್ವನ್ಯಾಲೋಕ, ೩.೧೨)

ಅಭಿನವಗುಪ್ತನಿಗೆ ಪ್ರಬಂಧನಿರ್ಮಾತೃಗಳಾದ ಕವಿಗಳ ಬಗೆಗಿರುವ ಗೌರವ ಮುಕ್ತಕಮಾತ್ರಕವಿಗಳಲ್ಲಿಲ್ಲ. ಅವನ ಈ  ಅಭಿನಿವೇಶವು ಯುಕ್ತವೂ ಆಗಿದೆ. ಏಕೆಂದರೆ ಇತಿವೃತ್ತನಿರ್ವಾಹವು ಹಿರಿದಾದ ಪ್ರತಿಭೆಯನ್ನು ಅಪೇಕ್ಷಿಸುತ್ತದೆ.

“ಯೋ ಯಸ್ಮಿನ್ ಸಂಧೌ ಯೋಗ್ಯ ಇತಿ ... ಯೋಗ್ಯತಾಂ ಚ ಕವಿರೇವ ಜಾನಾತಿ | ನ ಚ ಮುಕ್ತಕಕವಿಃ ಕಿಂ ತು ಪ್ರಬಂಧಯೋಜನಾಸಮರ್ಥಃ ... ನನು ಕವೇಃ ಕೀದೃಶಂ ತತ್ಪ್ರಬಂಧನಿರ್ಮಾಣಕೌಶಲಮಿತ್ಯಾಹ ರಸಭಾವಮಪೇಕ್ಷ್ಯೇತಿ, ತದಪೇಕ್ಷಾ ಚ ಕೌಶಲಮಿತ್ಯರ್ಥಃ” (ಸಂ ೩, ಪು. ೬೦).

ಒಟ್ಟಿನಲ್ಲಿ ಅಭಿನವಗುಪ್ತನಿಗೆ ರಸಪಾರಮ್ಯವನ್ನು ಅದೆಷ್ಟು ಸಾರಿದರೂ ತೃಪ್ತಿಯಿಲ್ಲ[3]! ನಮ್ಮ ಪರಂಪರೆಯ ಎಷ್ಟೋ ಪರಿಭಾಷೆಗಳು ಸಂಪ್ರದಾಯಸಿದ್ಧಿಯಿಲ್ಲದೆ ಅರ್ಥವಾಗವು. ಪ್ರತಿಯೊಂದು ಶಾಸ್ತ್ರವೂ ಇಂಥ ಹತ್ತಾರು ಗ್ರಂಥಗ್ರಂಥಿಗಳನ್ನು ಹೊಂದಿರುತ್ತದೆ. ಅಭಿನವಗುಪ್ತನು ಈ ಬಗೆಯ ಗಂಟುಗಳನ್ನು ಬಿಡಿಸುವಲ್ಲಿ ಪರಮಕುಶಲಿ. ಅಂಥ ಒಂದು ಗೌಣಸಂನಿವೇಶ ಇಲ್ಲಿದೆ. ನಾಟ್ಯಶಾಸ್ತ್ರವು ಸಂಧ್ಯಂಗಗಳನ್ನು ವರ್ಣಿಸುತ್ತಾ “ವರ್ಣಸಂಹಾರ”ವೆಂಬ ಒಂದು ವಿಭಾಗವನ್ನು ಹೆಸರಿಸಿ ಅದು “ಚಾತುರ್ವರ್ಣ್ಯೋಪಗಮನ”ವೆಂದು ವಿವರಿಸುತ್ತದೆ (೧೯.೮೨). ಈ ಮಾತ್ರದಿಂದ ನಮಗೇನೂ ಸ್ಪಷ್ಟತೆ ಸಿಗದು. ಇದನ್ನು ಬ್ರಾಹ್ಮಣ-ಕ್ಷತ್ರಿಯಾದಿಚಾತುರ್ವರ್ಣ್ಯಕ್ಕೆ ಸಮೀಕರಣ ಮಾಡಿಕೊಂಡು ಅನರ್ಥವನ್ನೇ ಕಾಣುವ ಸಂಭವದಿಲ್ಲದಿಲ್ಲ. ಇದಕ್ಕೆ ಅಭಿನವಗುಪ್ತನು ತನ್ನ ಗುರು ಭಟ್ಟತೌತನ ವಿಚಾರದ ಬೆಳಕಿನಲ್ಲಿ ವಿವರಣೆ ನೀಡುತ್ತಾನೆ. ಆ ಪ್ರಕಾರ ವರ್ಣನೀಯವಾದದ್ದೇ ವರ್ಣ. ಅಂದರೆ, ಪ್ರಮುಖಪಾತ್ರಗಳಿಗೆ ಪೂರಕವಾಗಿಯೋ ಮಾರಕವಾಗಿಯೋ ಒದಗಿಬರಬಲ್ಲ ಇನ್ನಿತರ ಭೂಮಿಕೆಗಳ ವರ್ತನೆಯೇ ಇಲ್ಲಿ ವಿವಕ್ಷಿತವೆಂದು ವಿವರಿಸುತ್ತಾನೆ. ಇದು ನಿಜಕ್ಕೂ ಕಣ್ತೆರಸುವ ವ್ಯಾಖ್ಯಾನ.

“ಚಾತುರ್ವರ್ಣ್ಯಶಬ್ದೇನ ಪಾತ್ರಾಣ್ಯುಪಲಕ್ಷ್ಯಂತೇ | ತೇನ ಯತ್ರ ಪಾತ್ರಾಣಿ ಪೃಥಕ್ಸ್ಥಿತಾನ್ಯಪಿ ಢೌಕ್ಯಂತೇ ಸ ವರ್ಣಸಂಹಾರಃ” (ಸಂ ೩, ಪು. ೪೭).

ಟಿಪ್ಪಣಿಗಳು

[1] ಇತಿವೃತ್ತವು ಸಂಧ್ಯಾತ್ಮಕತೆಯನ್ನು ಹೊಂದುವುದು ಶ್ರವ್ಯಕಾವ್ಯಕ್ಕೂ ಅನಿವಾರ್ಯ. ಮುಖ್ಯವಾಗಿ, ಕಥನಪ್ರಧಾನವಾದ ಮಹಾಕಾವ್ಯಾದಿಗಳಲ್ಲಿದು ಗಮನೀಯ. ಈ ಬಗೆಗೆ ಭಾಮಹನಂಥ ಚಿರಂತನಾಲಂಕಾರಿಕನಿಂದ ಮೊದಲ್ಗೊಂಡು ಆನಂದವರ್ಧನನವರೆಗೆ ಅಭಿನವಗುಪ್ತನ ಎಲ್ಲ ಪೂರ್ವಸೂರಿಗಳೂ ತಿಳಿಸಿದ್ದಾರೆ. ಅಭಿನವಗುಪ್ತನಿಗೂ ಇದು ಉಪಾದೇಯ. ಆದರೆ ಪ್ರಧಾನವ್ಯಪದೇಶದಿಂದ ಇಲ್ಲಿ ಪಂಚಸಂಧಿಗಳ ಪಾರಮ್ಯವು ದೃಶ್ಯಕಾವ್ಯದಲ್ಲಿ ಮಿಗಿಲೆಂಬ ಅಭಿಪ್ರಾಯವನ್ನವನು ವ್ಯಕ್ತಪಡಿಸಿದ್ದಾನೆ. [2] ನಾಟ್ಯಶಾಸ್ತ್ರವು ಕಥೆಯೊಂದು ಸಮಗ್ರವಾದ ದೃಶ್ಯಕಾವ್ಯತ್ವವನ್ನು ತಳೆಯುವಾಗ ಅದು ಮೂರು ಬಗೆಯಿಂದ ವಿವೇಚಿತವಾಗಬೇಕೆಂದು ಅಭಿಪ್ರಾಯಿಸುತ್ತದೆ: (೧) ಘಟನಾತ್ಮಕವಾಗಿ ಕಥೆಯ ಸಂಯೋಜನೆ: ಇದು “ಸಂಧಿ-ಸಂಧ್ಯಂಗ”ಗಳಿಗೆ ಸಂಬಂಧಿಸಿದೆ. ಇಲ್ಲಿ ಘಟನೆಗಳನ್ನು ಕ್ರಿಯೆ-ಪ್ರತಿಕ್ರಿಯೆ-ಸಂಘರ್ಷ-ಸಂಕ್ಷೋಭ-ಸಮನ್ವಯಗಳೆಂಬ ಐದು ಹಂತಗಳಲ್ಲಿ ಜೋಡಿಸಿಕೊಳ್ಳಲಾಗುತ್ತದೆ. ಈ ಹಂತಗಳನ್ನೇ ಮುಖ-ಪ್ರತಿಮುಖ-ಗರ್ಭ-ಅವಮರ್ಶ-ನಿರ್ವಹಣಗಳೆಂಬ ಐದು ಸಂಧಿಗಳಾಗಿ ಹೆಸರಿಸಿದ್ದಾರೆ. ಇವುಗಳೊಂದೊಂದರಲ್ಲಿಯೂ ಮತ್ತೆ ಹನ್ನೆರಡು-ಹದಿಮೂರು ಉಪವಿಭಾಗಗಳಿವೆ. ಇವೇ ಸಂಧ್ಯಂಗಗಳು. ಆದರೆ ಈ ಮಟ್ಟಿಗೆ ಕೂದಲುಸೀಳುವುದು ಕಲಾದೃಷ್ಟಿಯಿಂದ ಹಿತವೆನಿಸದು. (೨) ಕಥಾತಂತುವಿನ ಕ್ರಮವಾದ ಬೆಳೆವಣಿಗೆ: ಇದು “ಅರ್ಥಪ್ರಕೃತಿ”ಗಳಿಗೆ ಸಂಬಂಧಿಸಿದೆ. ಇಲ್ಲಿ ಕಥೆಯ ಮೂಲಭೂತವಾದ ಘಟನೆಯ ಸೂಚನೆ, ಮತ್ತದರ ವಿಶದವಾದ ವಿಸ್ತಾರ, ಉಪಕಥೆಗಳ ವಿವರ, ಹಾಗೂ ಅಲ್ಲಿ ಬರಬಹುದಾದ ಸಣ್ಣಪುಟ್ಟ ಪ್ರಾಸಂಗಿಕವಿವರಗಳು, ಕಟ್ಟಕಡೆಗೆ ಒಟ್ಟಂದದ ಕಥೆಯ ಮುಗಿತಾಯಗಳೆಂಬ ಐದು ಹಂತಗಳನ್ನು ಗುರುತಿಸಿದ್ದಾರೆ. ಇವನ್ನೇ ಬಿಂದು, ಬೀಜ, ಪತಾಕಾ, ಪ್ರಕರೀ ಮತ್ತು ಕಾರ್ಯಗಳೆಂದು ಪಾರಿಭಾಷಿಕವಾಗಿ ಹೆಸರಿಸಿದ್ದಾರೆ. ಕಥೆಯ ಅಳವಿಗೆ ತಕ್ಕಂತೆ ಉಪಕಥೆಗಳೂ ಅಲ್ಲಿಯ ಪ್ರಾಸಂಗಿಕವೃತ್ತಾಂತಗಳೂ ಬರಬಹುದು, ಬರದೆಯೂ ಇರಬಹುದು. (೩) ಮುಖ್ಯಪಾತ್ರದ ಕಾರ್ಯದೃಷ್ಟಿಯಿಂದ ಕಥೆಯ ವಿಸ್ತರಣೆ: ಇದು “ಅವಸ್ಥೆ”ಗಳಿಗೆ ಸಂಬಂಧಿಸಿದೆ. ಸಾಮಾನ್ಯವಾಗಿ ಯಾವುದೇ ಸಾಂಪ್ರದಾಯಿಕಕಥನದಲ್ಲಿ ಮುಖ್ಯಪಾತ್ರಗಳಾದವರು ನಾಯಕ-ನಾಯಿಕೆಯರೆನಿಸುತ್ತಾರೆ. ಇವರಿಗೆ ಪೂರಕವಾಗಿ ಅಥವಾ ಪ್ರತಿರೋಧರೂಪದಿಂದ ಮಿಕ್ಕ ಪಾತ್ರಗಳಿದ್ದು ಬಗೆಬಗೆಯ ಘಟನೆಗಳು ರೂಪುಗೊಂಡು ತನ್ಮೂಲಕ ಕಥೆಯು ಸಾಗುತ್ತದೆ. ಪಾರಂಪರಿಕವಾಗಿ ಹೇಳುವುದಾದರೆ, ಕಥನವೊಂದರಲ್ಲಿ ಹರಳುಗಟ್ಟುವ ಹಲವು ಬಗೆಯ ಕಾರ್ಯಗಳ ಫಲವು ಯಾರಿಗೆ ಸಿದ್ಧಿಸುವುದೋ ಅವರೇ ನಾಯಕರಾಗುತ್ತಾರೆ. ಈ ಬಗೆಯ ಫಲಪ್ರಾಪ್ತಿರೂಪದ ನಾಯಕತ್ವವನ್ನು ಆಧುನಿಕಸಾಹಿತ್ಯದಲ್ಲಿ ನೇರವಾಗಿ ಕಾಣಲು ಸಾಧ್ಯವಿಲ್ಲದಿರಬಹುದು. ಆದರೆ ಒಟ್ಟಂದದ ಘಟನೆಗಳ ಹಿತಾಹಿತಗಳಿಗೆ ಬಾಧ್ಯವಾಗುವ ಪಾತ್ರವಾಗಲಿ, ಪಾತ್ರಗಳಾಗಲಿ ಇದ್ದೇ ಇರಬೇಕಷ್ಟೆ. ಇದನ್ನೇ, ಇವುಗಳನ್ನೇ, ನಾಯಕಪಾತ್ರವೆಂದೋ ಮುಖ್ಯಪಾತ್ರಗಳೆಂದೋ ಗ್ರಹಿಸುವುದು ಅನಿವಾರ್ಯ. ಈ ರೀತಿಯಲ್ಲಿ ಎಲ್ಲ ಕಾಲದ ಸಾಹಿತ್ಯದಲ್ಲಿಯೂ ನೇತೃತ್ವದ ಅನಿವಾರ್ಯತೆಯುಂಟು. ಮತ್ತಿದು ಪರಮಾರ್ಥದಲ್ಲಿ ಸ್ತ್ರೀ-ಪುರುಷಭೇದಾತೀತ, ಅರ್ಥಾತ್ ಲಿಂಗಾತೀತ. ಇಂಥ ನೇತೃತ್ವವುಳ್ಳ ಪಾತ್ರ/ಪಾತ್ರಗಳ ಕ್ರಿಯೆಗಳನ್ನು ಐದು ಬಗೆಯಾಗಿ ಗಮನಿಸಬಹುದು. ಅದು ಕಾರ್ಯಸಾಧನೆಯಲ್ಲಿ ನೇತೃವಿಗಿರುವ ಆಸ್ಥೆ, ಮತ್ತದಕ್ಕೆ ಒದಗಿಬರುವ ಅಡ್ಡಿಗಳನ್ನು ನಿವಾರಿಸಿಕೊಳ್ಳಲು ನಡಸುವ ಪ್ರಯತ್ನ, ತನ್ಮೂಲಕ ತಮ್ಮೊಳಗೇ ಉಂಟಾಗುವ ಫಲನಿರೀಕ್ಷೆ, ಮತ್ತು ಪ್ರಯತ್ನಗಳ ಮುಂದುವರಿಕೆಯಿಂದ ಫಲಸಿದ್ಧಿಯ ಬಗೆಗಾಗುವ ನಿಶ್ಚಯ ಹಾಗೂ ಪರ್ಯಂತದಲ್ಲಿ ಫಲವೇ ಕೈಗೂಡುವಿಕೆಯೆಂದಾಗಿದೆ. ಇದನ್ನೇ ಆರಂಭ, ಯತ್ನ, ಪ್ರಾಪ್ತ್ಯಾಶೆ, ನಿಯತಾಪ್ತಿ ಮತ್ತು ಫಲಾಗಮಗಳೆಂದು ಶಾಸ್ತ್ರೀಯವಾಗಿ ಹೆಸರಿಸಿದ್ದಾರೆ. ಇಲ್ಲಿಯವರೆಗೆ ನಮ್ಮ ಪರಂಪರೆ ವಿವರಗಳನ್ನು ಹವಣಿಸಿದೆಯಾದರೂ ಅದನ್ನು ರಸಸೂತ್ರಕ್ಕೆ ವ್ಯವಸ್ಥಿತವಾಗಿ ಬೆಸೆಯುವ ಪ್ರಯತ್ನವನ್ನು ಮಾಡಿದಂತೆ ತೋರದು. ಅದನ್ನು ಪೂರ್ವಸೂರಿಗಳ ಅಡಿಜಾಡಿನಲ್ಲಿ ನಡೆದು ಹೀಗೆ ನಿರೂಪಿಸಬಹುದು: ಮೇಲೆ ಕಾಣಿಸಿದ ಮೂರು ಎಳೆಗಳೂ ಚೆನ್ನಾಗಿ ಹೊಂದಿಕೊಂಡಾಗ ಕೃತಿಯು ರಸಸಮೃದ್ಧವಾಗುತ್ತದೆ. ತತ್ತ್ವತಃ ಈ ಎಳೆಗಳು ಒಂದೇ ಆದರೂ ಇವುಗಳಲ್ಲಿರುವ ಸೂಕ್ಷ್ಮವ್ಯತ್ಯಾಸಗಳು ಕವಿವ್ಯಾಪಾರಕ್ಕೆ ಸೊಗಸಾಗಿ ಒದಗಿಬರುತ್ತವೆ. ಸಂಧಿಗಳ ಮೂಲಕ ಸಂದರ್ಭಗಳ ವರ್ಣನೆಗೆ ಅವಕಾಶವಾಗುತ್ತದೆ; ಅರ್ಥಪ್ರಕೃತಿಗಳ ಮೂಲಕ ಕಥನಕ್ಕೆ ಒಪ್ಪ-ಓರಣ ಹಾಗೂ ವೈವಿಧ್ಯ-ವೈಚಿತ್ರ್ಯಗಳು ದಕ್ಕುತ್ತವೆ; ಅವಸ್ಥೆಗಳ ಮೂಲಕ ವಿವಿಧಪಾತ್ರಗಳ ಸ್ವಭಾವಚಿತ್ರಣಕ್ಕೆ ಚೆನ್ನಾಗಿ ಎಡೆಯಾಗುತ್ತದೆ. ಇವು ಒಂದೊಂದೂ ಬೇರೆ ಬೇರೆ ನಿಟ್ಟಿನಿಂದ ಒಟ್ಟಂದದ ಇತಿವೃತ್ತವನ್ನು ವಿಭಾವಾನುಭಾವಸಾಮಗ್ರೀಪರಿಪುಷ್ಟವಾಗಿಸುವುದು ವಿಜ್ಞವೇದ್ಯ. ಸಂಧಿಗಳಲ್ಲಿ ಉದ್ದೀನಪನವಿಭಾವಗಳಿಗೂ ಅರ್ಥಪ್ರಕೃತಿಗಳಲ್ಲಿ ಅನುಭಾವಗಳಿಗೂ ಅವಸ್ಥೆಗಳಲ್ಲಿ ಆಲಂಬನವಿಭಾವಗಳಿಗೂ ಎಲ್ಲವುಗಳಲ್ಲಿ ವ್ಯಭಿಚಾರಿಭಾವಗಳಿಗೂ ವಿಪುಲಾಭಿವ್ಯಕ್ತಿಯ ಅವಕಾಶ ಸಿಕ್ಕು ಸಹೃದಯನಲ್ಲಿರುವ ಸ್ಥಾಯಿಭಾವವನ್ನು ಸ್ಪಂದಿಸುವ ಮೂಲಕ ಅದೇ ರಸವಾಗಿ ನಿಷ್ಪನ್ನಗೊಳ್ಳಲು ರಾಜಮಾರ್ಗವಾಗುತ್ತದೆ. ಹಾಗೆಂದಮಾತ್ರಕ್ಕೆ ಇವುಗಳಲ್ಲಿ ಕೇವಲ ಒಂದೊಂದೇ ಅಂಶಗಳು ಪುಷ್ಟಿವಡೆಯುವುವೆಂದು (ಉದಾ: ಸಂಧಿಗಳಲ್ಲಿ ಉದ್ದೀಪನವಿಭಾವಗಳು ಮಾತ್ರ, ಅರ್ಥಪ್ರಕೃತಿಗಳಲ್ಲಿ ಅನುಭಾವಗಳು ಮಾತ್ರ; ಇತ್ಯಾದಿ) ಇಕ್ಕಟ್ಟಾದ ಅರ್ಥವಲ್ಲ. ಪ್ರತಿಯೊಂದರಲ್ಲಿಯೂ ಮಿಕ್ಕ ಅಂಶಗಳಿಗೆ ಅವಕಾಶವಿದ್ದೇ ಇರುತ್ತದೆ. ಆದರೆ ಪ್ರಧಾನವ್ಯಪದೇಶವಷ್ಟೇ ಇಲ್ಲಿ ವಿವಕ್ಷಿತ. ಅಷ್ಟೇಕೆ, ಸಂಧಿಗಳೂ ಅವಸ್ಥೆಗಳೂ ಅರ್ಥಪ್ರಕೃತಿಗಳೂ ಒಟ್ಟಾಗಿಯೇ ಕಾರ್ಯನಿರ್ವಾಹವನ್ನು ಮಾಡುತ್ತವೆ; ಇವೆಲ್ಲ ಇತಿವೃತ್ತದಲ್ಲಿ, ಕಾವ್ಯರಚನೆಯಲ್ಲಿ ಅವಿನಾಭಾವದಿಂದ ಅಡಕವಾಗಿಯೇ ಇರುತ್ತವೆ. ಇಂತಲ್ಲದೆ ಕಾವ್ಯದ ನಿರ್ಮಾಣಸಾರ್ಥಕ್ಯವಿಲ್ಲ; ರಸಸಿದ್ಧಿಯಂತೂ ಇಲ್ಲವೇ ಇಲ್ಲ. ಇವನ್ನೆಲ್ಲ ಪೃಥಕ್ಕರಿಸಿ ನೋಡುವುದು ಕೇವಲ ವಿಶ್ಲೇಷಣದೃಷ್ಟಿಯಿಂದ ಮಾತ್ರ. ಇಂಥ ವಿದಲನಕ್ರಿಯೆ ಶಾಸ್ತ್ರಕ್ಕೆ ಅನಿವಾರ್ಯವಾದ ಕ್ಲೇಶ; ಸಜೀವವಾದ ಶರೀರವೊಂದರ ಸಕಲಾಂಗಗಳ ಸಮಗ್ರಕ್ರಿಯಾಸ್ವಾರಸ್ಯವನ್ನು ಅರಿಯಬೇಕೆಂಬ ವೈದ್ಯಕೀಯವಿದ್ಯಾರ್ಥಿಯು ಶವವನ್ನು ಮೊದಲು ಕತ್ತರಿಸಿ ಪ್ರತಿಯೊಂದು ಅಂಗೋಪಾಂಗಗಳನ್ನೂ ಬಿಡಿಬಿಡಿಯಾಗಿ ಅರಿತು ಅನಂತರ ಅಖಂಡವಾದ ಸಜೀವಕಾಯದ ಕ್ರಿಯೆಯನ್ನು ಸಾಕ್ಷಾತ್ಕರಿಸಿಕೊಳ್ಳುವ ವಿಚಿತ್ರವಾದರೂ ಅನಿವಾರ್ಯನೈಜಕಾರ್ಯದಂತೆಯೇ ಇದೂ. ಸಾಹಿತ್ಯಶಾಸ್ತ್ರದ (ಅಷ್ಟೇಕೆ, ಯಾವುದೇ ಶಾಸ್ತ್ರದ) ಇಂಥ ದುರ್ನಿವಾರ್ಯತೆಯನ್ನು ಅಭಿನವಗುಪ್ತನೇ ಒಪ್ಪಿ ಹೇಳಿಕೊಂಡಿರುವುದನ್ನು ನಾವಿಲ್ಲಿ ನೆನೆಯಬಹುದು: “ಸತ್ಯಮೇತತ್, ಕಿಂ ತು ಕವಿನಾ ಕಾವ್ಯವಿರಚನವಿವೇಚನಸಾಮರ್ಥ್ಯಸಮರ್ಥನಾಯಾವಶ್ಯಂ ಕಾಲ್ಪನಿಕೋऽಪಿ ವಿಭಾಗ ಆಶ್ರಯಣೀಯಃ” (ಸಂ.೨, ಪು.೨೧೩). [3] ಈ ಸಂದರ್ಭದಲ್ಲಿ ಭಟ್ಟತೌತನ ಕೆಲವೊಂದು ರಸಪ್ರಾಧಾನ್ಯದ ಮಾತುಗಳನ್ನು ಅಭಿನವಗುಪ್ತನು ಸಂಗ್ರಹಿಸಿ ಕೊಟ್ಟಿರುವುದು ಸ್ಮರಣಿಯವಾಗಿದೆ. ಇಲ್ಲಿಯ ಆಶಯಗಳೆಲ್ಲ ನಮಗಿಂದು ತುಂಬ ಸ್ಪಷ್ಟ, ಸಹಜ; ಕೆಲಮಟ್ಟಿಗೆ ಸಾಮಾನ್ಯವೆಂದೂ ತೋರಬಹುದು. ಆದರೆ ಹಿರಿದಾದ ಜ್ಞಾನಶಾಖೆಯೊಂದರ ಬೆಳೆವಣಿಗೆಯ ಕಾಲದಲ್ಲಿ ಏನೆಲ್ಲ ವಿದ್ವದ್ವಿಕ್ಷೇಪಗಳ ನಡುವೆಯೂ ಮಹಾಮತಿಗಳು ಉದ್ದಿಷ್ಟಶಾಸ್ತ್ರದ ಸದ್ಭಾವವನ್ನು ಧೀರೋದಾರವಿಧಿಯಿಂದ ಗಟ್ಟಿಯಾಗಿ ಹಿಡಿದು ಪ್ರತಿಪಾದಿಸಿದರೆಂಬ ಐತಿಹಾಸಿಕಸತ್ಯವನ್ನು ನೆನೆದಾಗ ಇಂಥ ಮಾತುಗಳ ಮಹತ್ತ್ವ ಮಿಗಿಲಾಗಿ ಮನಮುಟ್ಟದಿರದು. ವಸ್ತುತಃ ಯಾವುದೇ ಒಂದು ವಿದ್ಯಾಶಾಖೆಯ ಬೆಳೆವಣಿಗೆಯಲ್ಲಿ ಹೊಮ್ಮಿದ ಮಹಾಸತ್ಯಗಳೆಲ್ಲ ಮುಂದಿನ ಪೀಳಿಗೆಯವರಿಗೆ ಸಾಮಾನ್ಯಜ್ಞಾನಮಾತ್ರದ ಸಂಗತಿಯಾಗಿ ವಸ್ತುತಂತ್ರವೆನಿಸುತ್ತದೆಯೋ ಅದೇ ಆ ಪೂರ್ವಸೂರಿಪ್ರಜ್ಞಾ-ಫಲವಾಗಿ ಜನಿಸಿದ ಮಹಾಸತ್ಯಗಳ ಸತ್ಯತ್ವಕ್ಕೆ ಸಾಕ್ಷಿ.

“ಲಕ್ಷಣಾಲಂಕೃತಿಗುಣಾ ದೋಷಾಃ ಶಬ್ದಪ್ರವೃತ್ತಯಃ | ವೃತ್ತಿಸಂಧ್ಯಂಗಸಂರಂಭಃ ಸಂಭಾರೋ ಯಃ ಕವೇಃ ಕಿಲ ||

ಅನ್ಯೋನ್ಯಸ್ಯಾನುಕೂಲ್ಯೇನ ಸಂಭೂಯೈವ ಸಮುತ್ಥಿತೈಃ | ಝಟಿತ್ಯೇವ ರಸಾ ಯತ್ರ ವ್ಯಜ್ಯಂತೇ ಹ್ಲಾದಿಭಿರ್ಗುಣೈಃ ||

ವೃತ್ತೈಃ ಸರಲಬಂಧೈರ್ಯತ್ಸ್ನಿಗ್ಧೈಶ್ಚೂರ್ಣಪದೈರಪಿ | ಅಶ್ಲಿಷ್ಟಹೃದ್ಯಘಟನಂ ಭಾಷಯಾ ಸುಪ್ರಸಿದ್ಧಯಾ ||

ಯಚ್ಚೇದೃಕ್ಕಾವ್ಯಮಾತ್ರಂ ಸದ್ರಸಭಾವಾನುಭಾವಕಮ್ | ಸಾಮಾನ್ಯಾಭಿನಯೇ ಪ್ರೋಕ್ತಂ ವಾಚಾಭಿನಯಸಂಜ್ಞಯಾ ||

ಏವಂಪ್ರಕಾರಂ ಯತ್ಕಿಂಚಿದ್ವಸ್ತುಜಾತಂ ಕಥಾರ್ಪಿತಮ್ | ಅನೂನಾಧಿಕಸಾಮಗ್ರೀಪರಿಣಾಮೋನ್ಮಿಷದ್ರಸಮ್ ||

ರಸಪೋಷಾಯ ತಜ್ಜಾತಂ ಲೋಕಾನ್ನಾಟ್ಯಜಗತ್ಸ್ವಯಮ್ | ಪ್ರತಿಭಾಯಾಃ ಪ್ರಗಲ್ಭಾಯಾಃ ಸರ್ವಸ್ವಂ ಕವಿವೇಧಸಃ ||” (ಸಂ ೩, ಪು. ೭೫).

To be continued.

Author(s)

About:

Dr. Ganesh is a 'shatavadhani' and one of India’s foremost Sanskrit poets and scholars. He writes and lectures extensively on various subjects pertaining to India and Indian cultural heritage. He is a master of the ancient art of avadhana and is credited with reviving the art in Kannada. He is a recipient of the Badarayana-Vyasa Puraskar from the President of India for his contribution to the Sanskrit language.