“ರೂಪಕ-ಪ್ರತಿಮೆ ಭಾಷಾಪ್ರಯೋಗ” ಇತ್ಯಾದಿ
ಕುಮಾರವ್ಯಾಸನನ್ನು ‘ರೂಪಕ ಸಾಮ್ರಾಜ್ಯ ಚಕ್ರವರ್ತಿ’ ಎಂದು ಬಣ್ಣಿಸುತ್ತಾರೆ. ಅವನು ಉಪಯೋಗಿಸುವ ಸಾಧಾರಣ ಭಾಷೆ ಕೂಡ ರೂಪಕದ ದೀಪ್ತಿಯಿಂದ ಪ್ರಕಾಶಿಸುತ್ತದೆ. ಈತನ ರೂಪಕ ರಚನಾಸಾಮರ್ಥ್ಯಕ್ಕೆ ನಿದರ್ಶನಕೊಡಬೇಕೆಂದರೆ ಇಡೀ ಗ್ರಂಥವನ್ನೇ ಉದ್ಧರಿಸಬೇಕಾಗುತ್ತದೆ. ಕುಮಾರವ್ಯಾಸನ ರೂಪಕಗಳು, ಪ್ರತಿಮೆಗಳು ಪ್ರಾಕೃತಿಕ ಘಟನೆಗಳಿಂದ, ನಿತ್ಯ ಜೀವನದ ಸಾಮಾನ್ಯ ಘಟನೆಗಳಿಂದ, ಹಲವಾರು ರೀತಿಯ ತನ್ನದೇ ಜೀವನದ ಅನುಭವಗಳಿಂದ ಹಾಗೂ ಪೌರಾಣಿಕ ಘಟನೆ, ಪಾತ್ರಗಳ ಆಧಾರದಿಂದ ಸುಂದರವಾಗಿ ಶಕ್ತವಾಗಿ ಮೈದಳೆದು ನಿಲ್ಲುತ್ತವೆ. ಕುಮಾರವ್ಯಾಸನ ರೂಪಕ ವೈವಿಧ್ಯವನ್ನು ಕುರಿತೇ ಮಹಾಪ್ರಭಂಧ ಒಂದನ್ನು ರಚಿಸಬಹುದು. ಇಂತಹ ರೂಪಕಗಳು ಮತ್ತು ಪ್ರತಿಮೆಗಳಿಂದ ಕವಿಯ ಗಾಢ ಸೌಂದರ್ಯ ಪ್ರಜ್ಞೆ, ಸೂಕ್ಷ್ಮ ನಿರೀಕ್ಷಣಾ ಸಾಮರ್ಥ್ಯ, ಅಪಾರ ಮತ್ತು ಆಳವಾದ ಜ್ಞಾನ – ಅನುಭವಗಳು ಅಭಿವ್ಯಕ್ತಿಸಲ್ಪಡುತ್ತವೆ. ಮೆಟಾಫಿಸಿಕಲ್ ಕನ್ಸೀಟ್(metaphysical conceit) ಎನ್ನುವಂತಹ ರೂಪಕಗಳು ಕವಿಯ ಭೌದ್ಧಿಕ ಪ್ರಗಲ್ಭತೆಯನ್ನು ಸೂಚಿಸುತ್ತದೆ.
ಭೀಷ್ಮನ ಅಭಿಮತದಲ್ಲಿ “ಕಾಯದಲ್ಪ ಸುಖಕ್ಕೆ ಘನಶ್ರೇಯಸವ ಕೆಡಿಸುವುದು, ಯೆಲವದ ಕಾಯಿಗೋಸುಗ ಕಲ್ಪವೃಕ್ಷವ ಕಡಿವಂತೆ”. ರಾಜಕುಮಾರರು “ಹರಿಣ ಪಕ್ಷದ ನಳಿನರಿಪುವಿನಂತೆ ಬೆಳೆಯುತ್ತರ್ದರು” ಎನ್ನುವಾಗ “ಹರಿಣ ಪಕ್ಷ” ಎನ್ನುತ್ತಾನೆ ಕೃಷ್ಣ ಪಕ್ಷ ಎನ್ನುವುದಕ್ಕೆ. ಕನ್ಯೆ ಕುಂತಿಗೆ ಹುಟ್ಟಿದ ಶಿಶು “ತರಣಿ ಬಿಂಬದ ಮರಿಯೋ, ಕೌಸ್ತುಭ ವರ ಮಣಿಯ ಖಂಡದ ಕಣಿಯೋ” ಎನ್ನುವಂತಿರುತ್ತದೆ.
“ಮಾಣಿಕವೆಂದು ಕೊಂಡೊಡೆ ಕೆಂಡವಾದುದು, ಸರವಿಯೇ ಹಾವಾದುದು” ಎನ್ನುವ ಸಾಮಾನ್ಯ ಪ್ರಯೋಗಗಳೂ ಧಾರಾಳವಾಗಿವೆ. ವಸಂತ ಮಾಸವನ್ನು ಮಧುಮಾಸವೆಂದು ಕರೆದು ಬಣ್ಣಿಸುವ ಬಗೆ ಹೀಗಿದೆ. “ಪಸರಿಸಿತು ಮಧುಮಾಸ, ತಾವರೆ ಎಸೆಳ ದೋಣಿಯ ಮೇಲೆ ಹಾಯ್ದುವು ಕುಸುಮ ರಸದುಬ್ಬರದ ತೊರೆಯನು ಕೂಡೆ ದುಂಬಿಗಳು”. ಇಂತಹ ವರ್ಣನೆಗಳಲ್ಲಿ ಶಬ್ದಶಿಲ್ಪದಂತಹ ಚಿತ್ರಗೀತಗಳನ್ನು ಕಾಣಬಹುದು (ಕಲ್ಪಿಸಿಕೊಳ್ಳಬಹುದು). ಅರ್ಜುನನ ಅಸ್ತ್ರ ಶಸ್ತ್ರ ನೈಪುಣ್ಯವನ್ನು ವಿದ್ಯಾ ಪ್ರದರ್ಶನದ ಸನ್ನಿವೇಶದಲ್ಲಿ ಕಂಡ ಜನತೆ ಹರ್ಷೋದ್ಗಾರದಿಂದ “ಅಂಧಭೂಪನ ಕೊರಳು ಕುಸಿದುದು ನುಡಿಯ ನಾಟಕ ಹರ್ಷ ಭಾರದಲಿ” ಎನ್ನುತ್ತಾರಂತೆ. ಒಮ್ಮೊಮ್ಮೆ ಇಡೀ ಪದ್ಯ ಪದ್ಯದ ಭಾಗಗಳೂ ಒಂದು ಚಿಂತನದ ಅಭಿವ್ಯಕ್ತಿಗೆ ರೂಪಕದ ಗೊಂಚಲಾಗಿ ಬಿಡುತ್ತದೆ.
ವಿಷವನಣುವೆಂದಳುಕದುಪಭೋ-
ಗಿಸಲು ಕೊಲ್ಲದೆ ಬಿಡುವುದೇ ಕರ-
ಗಸದ ನಡು ಬಡವಾದರೆಯು ಕುಯ್ದಿಕ್ಕದೇ ತರುವ
ಎನ್ನುವಲ್ಲಿನ ನಿತ್ಯ ಜೀವನದ ಅನುಭವವನ್ನು ಕಾಣಬಹುದು.
ಕಾಲವನು ಗೂಗೆಗಳು ನಿರ್ಜರ-
ರೇಳಿಗೆಯನಾ ದೈತ್ಯರುಗಳು ತ-
ಮಾಳಿ ರವಿರಶ್ಮಿಗಳನಾ ಬಲು ನಿದ್ರೆಯನು ಚೋರ |
ಕಾಲಭುಜಗನು ಗರುಡನುಳಿವನು
ತಾಳದಂದದಿ ಪಾಂಡವರು ನಿ-
ನ್ನೇಳಿಗೆಯ ಸೈರಿಸರು ಚಿತ್ತೈಸೆಂದನಾ ಶಕುನಿ ||
ವಿಗಡ ರುದ್ರನು ಲೋಚನಾಗ್ನಿಯೊ-
ಳೊಗುಮಿಗೆಯ ಕೋಪದಲಿ ಕಾಮನ-
ಮಿಗೆ ದಹಿಸಿದಂದಲಿ ರಿಪು ಕುಂತೀಕುಮಾರಕರ
ಲಾಕ್ಷಾ ಭವನದಲಿ ಹೊಗೆದು ಕಳೆಯುವಂತೆ ಶಕುನಿ ಸಲಹೆ ಕೊಡುತ್ತಾನೆ. ಇಂತಹ ಪೌರಾಣಿಕ ಪ್ರತಿಮೆಗಳ, ಸಂಗತಿಗಳ ಉಲ್ಲೇಖ ಶಕುನಿಯ ಬಾಯಲ್ಲಿ, ಪಿಶಾಚಿಯ ಬಾಯಲ್ಲಿನ ವೇದ ಪಠಣವೆಂಬಂತೆ ತೋರಿ ಆ ಮಾತನಾಡುವ ಪಾತ್ರದ ಬಗೆಗೆ ನಮ್ಮ ಮನಸ್ಸಿನಲ್ಲಿ ಕೋಪ, ಅಸಹ್ಯ, ಮಾತಿನ ಚಮಕ್ಕಾರದ ಬಗೆಗೆ ಮೆಚ್ಚುಗೆ ಎಲ್ಲವೂ ಮೂಡುತ್ತವೆ. “ಹಿಡಿವ ಫಣಿಯನು, ಹೊಡೆವ ಸಿಡಿಲನು, ಜಡಿವ ಮಾರಿಯ, ನಲಿವ ರುಜೆಯನು, ಮಡಿವ ದಿನವನ್ನು – ಕಾಲಕರ್ಮದ ಗಡಣವನು, ಸುಖದು:ಖದುದಯದ ಕಡೆ ಮೊದಲ ಕಾಣಿಸುವನಾವನೆನ್ನುವ ಶಕುನಿಯ/ ಕವಿಯ ಲೌಕಿಕಜ್ಞಾನ ಅನುಭವವನ್ನು ಯಾರು ಅಲ್ಲಗೆಳೆಯಬಹುದು?
ಗ್ರಹಣಗ್ರಸ್ತ ಸೂರ್ಯ “ಅಹಿಯ ಬಾಧೆಯ ಬಲೆಗೆ ಸಿಲುಕಿದ ಮಿಹಿರಬಿಂಬ” ಎನ್ನುವಲ್ಲಿ ಪ್ರಾಕೃತಿಕ ಘಟನೆ, ಪೌರಾಣಿಕ ಘಟನೆ ಎರಡೂ ಸೇರಿರುವ ಸುಂದರ ಪ್ರತಿಮೆಯಾಗುವುದನ್ನು ಕಾಣಬಹುದು.
ಭೀಮ ಬಂಡಿ ತುಂಬಿದ ಸರಕನೆಲ್ಲವ ಸಂತವಿಟ್ಟನು ತನ್ನ ಜಠರದಲಿ”. ಜಠರ ಸರಕು ತುಂಬುವ ಉಗ್ರಾಣವೇನು ?
ಒಮ್ಮೊಮ್ಮೆ ವ್ಯಷ್ಟಿಯ ಸೌಂದರ್ಯಕ್ಕೆ ಒಂದು ನಿರ್ದಿಷ್ಟ ಕ್ರಿಯೆಗೆ, ಅಥವಾ ದು:ಖಕ್ಕೆ ಇಡೀ ವಿಶ್ವವೇ ಪ್ರತಿಕ್ರಿಯಿಸುವಂತೆ ಚಿತ್ರಿಸುತ್ತಾನೆ ಕವಿ. ದ್ರೌಪದೀ ಸ್ವಯಂವರಕ್ಕೆ ಬಂದ ಭೂಮೀಶ್ವರ ಚತುರಂಗ ಪದಹತಿಯಿಂದ ಇಡೀ ಭೂಮಿ ಧೂಳಾದುದನ್ನು
ಅರುಣಮಯಮಾಯ್ತಖಿಳ ಜಗದಲಿ
ಸರಸಿಜಾಕ್ಷಿಯ ನೆನೆದು ಸಚರಾ-
ಚರದ ಮುಖದಲಿ ರಾಗರಸವುಬ್ಬರಿಸಿದಂದದಲಿ
ಎನ್ನುತ್ತಾನೆ. ಅಲ್ಲಿ “ಹಬ್ಬಿದ ಪರಿಮಳದ ಭಾರದಲಿ ಬಿರುಗಾಳಿ ಕುಸಿಯಿತಂತೆ”, ದ್ರೌಪದೀ ದೇವಿಯ ಸೌಂದರ್ಯ ವರ್ಣನೆಗೆ ಕವಿ ಉದಯೋಗಿಸುವ ಉಪಮೆಗಳು ರೂಪಕಗಳು ಅವೆಷ್ಟೋ. “ಚೆಲುವಿಕೆಯ ಚೈತನ್ಯ, ಪರಿಮಳದ ಪುತ್ಥಳಿ, ಲಾವಣ್ಯಕ ರಸಸಾಕಾರ ವಿಭ್ರಮ, ಲಲಿತ ಶೃಂಗಾರಾಬ್ಧಿ ಮದನೋಚ್ಛಲಿತ ಸುಧೆ” ದ್ರೌಪದಿ. ಸ್ತ್ರೀ ಸೌಂದರ್ಯವನ್ನು ನಿರ್ಭಿಡೆಯಿಂದ ವರ್ಣಿಸುವ ಕವಿ ಸಭ್ಯತೆಯ ಎಲ್ಲೆಯನ್ನು ಮೀರುವುದಿಲ್ಲ. ದ್ರೌಪದಿಯ ಸಖಿಯರ ಪರಿಹಾಸದ ಮಾತುಗಳಲ್ಲಿ, ವಿಪ್ರವೇಷದ ಪಾಂಡವ “ಮಟ್ಟಿಯ ಮದನ, ದರ್ಭೆಯ ತಿಲದ ಮನ್ಮಥ, ವಿಮಲಧೋತ್ರದ ತಳಿರುಗಾಸೆಯ ಕಾಮ, ಕೃಷ್ಣಾಜಿನದ ಕಂದರ್ಪ, ಗಡ್ಡದುಪಾಧ್ಯ”ನಾಗುತ್ತಾನೆ.
ರಾಜ್ಯಾಡಳಿತ, ರಾಜಪದವಿ ಅದೆಷ್ಟು ಅಪಾಯ, ಸಂದಿಗ್ಧ ಕಷ್ಟಗಳಿಂದ ಒಳಗೊಂಡಿದ್ದೆನ್ನುವುದನ್ನು ಹೀಗೆ ವಿವರಿಸುತ್ತಾನೆ “ಖಡುಗಧಾರೆಯ ಮಧು, ಮಹಾಹಿಯ ಹೆಡೆಯ ಮಾಣಿಕ ವಜ್ರದಿಂಬಿಗಿದೊಡಲಿಗೊಡ್ಡಿದ ಸುರಗಿ, ಕಡುಗೆರಳಿದ ಮೃಗಾಧಿಪನ ನಡುಗುಹೆಯೊಳಿದ ಸುಧೆಯ ಘಟವೀ ಪೊಡವಿಯೊಡೆತನ ಸದರವೇ?” ಎಂದು ವಿಶ್ಲೇಷಿಸುತ್ತಾನೆ.
ಶಿಶುಪಾಲನ ಬಾಯಲ್ಲಿ ಕೃಷ್ಣ “ಹಳ್ಳಿಕಾರರ ನಾರಿಯರ ನೆರೆಮಿಂಡ” ನಾಗುತ್ತಾನೆ. ಅದೇ ಕೃಷ್ಣನನ್ನು ಮನತುಂಬಿ ಸ್ತುತಿಸುತ್ತಾ ಕೃಷ್ಣತತ್ತ್ವವನ್ನು ನಾನಾ ರೂಪಕಗಳ ಮೂಲಕ ವಿಷದೀಕರಿಸುತ್ತಾನೆ. ‘ವಿಶ್ವದಿವನ ಸುಳಿವು ತೋರುವುದಿಲ್ಲ, ಮಾಯಾಲಲನೆ ಯಿಕ್ಕಿದ ಮದ್ದು ಜೀವರಿಗೆ’ ಈ ಕೃಷ್ಣನೆನ್ನುತ್ತಾನೆ ಭೀಷ್ಮ. ಕೃಷ್ಣ ತತ್ವವನ್ನು ಘನವಾದ ರೂಪಕಗಳಿಂದ ವಿವರಿಸುತ್ತಲೇ (ತಿಲದಲ್ಲಿನ ತೈಲ, ಕಾಷ್ಠದೊಳಗಿನ ಅಗ್ನಿ ಇತ್ಯಾದಿ) ಆ ತತ್ವವನ್ನರಿಯದ ಮೂರ್ಖನನ್ನು ಜರೆಯುತ್ತಾ ದಿನನಿತ್ಯ (ಜೀವನದ) ದ ಸಾಮಾನ್ಯ ವಸ್ತುಗಳನ್ನು ಬಳಸಲು ಅಶಕ್ತನಾದವನೆನ್ನುತ್ತಾನೆ. “ಏಕೆ ಕನ್ನಡಿ ಕುರುಡಂಗೆ, ತಾನೇಕೆ ಸಾಳಗ ಶುದ್ಧ ಬಧಿರಂಗೇಕೆ ಮೂರ್ಖ ಸಮಾಜದಲಿ ಸಾಹಿತ್ಯ ಸನ್ನಾಹ, ಏಕೆ ಖಳಂಗೆ ನಯವಿಧಾನ” ಎನ್ನುತ್ತಾ ಶಿಶುಪಾಲನನ್ನು ಮೂದಲಿಸುತ್ತಾನೆ.
ಕಪಟದ್ಯೂತದ ಯೋಜನೆ ಮಾಡುವವ “ಕಂದು ಹೃದಯದ ಕೌರವೇಂದ್ರ” ನಾಗುತ್ತಾನೆ. ಧರ್ಮರಾಯ ದ್ಯೂತದಲ್ಲಿ ದ್ರೌಪದಿಯನ್ನು ಸೋತಮೇಲೆ, ದ್ರೌಪದಿಯನ್ನು ಸಭೆಗೆ ಎಳತರಲು ಮಿದುರನಿಗೆ ಹೇಳಿದಾಗ “ಸಿಡಿಲ ಪೊಟ್ಟಣಗಟ್ಟಿ ಸೇಕವ ಕೊಡುವರೆ?” “ಹರನೇತ್ರವಹ್ನಿಯೊಳಡಬಳವ ಸುಡಬಗೆದೆಯಾ?” ಎನ್ನುತ್ತಾನೆ, ಹಾಗೂ “ಕಾಲಕೂಟದ ತೊರೆಗಳಲಿ ಜಲಕೇಳಿಯೇ? ಕಾಲಾಂತಕನ ದಂಷ್ಟ್ರಾಳಿಯಲಿ ನವಿಲುಯ್ಯಾಲೆಯೇ” ಎಂದೂ ಹೇಳಿ ದುರ್ಯೋಧನ ಆಲೋಚಿಸುತ್ತಿರುವ ಕಾರ್ಯದಲ್ಲಡಗಿರುವ ಅಪಾಯವನ್ನೂ, ವಿನಾಶವನ್ನೂ ರೂಪಕದ ವಸ್ತುಗಳ ಭಯಾನಕತೆಗಳಿಂದ ದುರ್ಯೋಧನನಿಗೆ ಮನಿವರಿಕೆ ಮಾಡಲೆತ್ನಿಸುತ್ತಾನೆ.
ದುರ್ಯೋಧನ ದೈತ್ಯರ ಸಲಹೆಯಿಂದಾಗಿ, ಅವರ ಒತ್ತಾಸೆಯಿಂದಾಗಿ ಪ್ರಾಯೋಪವೇಶ ತೊರೆದು ಮತ್ತೆ ತನ್ನರಮನೆಗೆ ಹಿಂದಿರುಗಿದಾಗ ಧರ್ಮಕ್ಕೆ ಬಂದ ಪರಿಸ್ಥಿತಿಯನ್ನು ಹೀಗೆ ವಿವರಿಸುತ್ತಾನೆ ಕವಿ.
ಮತ್ತೆ ನೆಗ್ಗಿತು ನಯವಧರ್ಮದ
ಕುತ್ತುದಲೆ ನೆಗಹಿದುದು ಸತ್ಯದ
ಬಿತ್ತು ಹುರಿದುದು ಪಟ್ಟಗಟ್ಟಿದುದಾ ಕೃತಘ್ನತೆಗೆ |
ನೆತ್ತಿಕಣ್ಣಾಯ್ತಧಮತೆಗೆ . . .
“ಸತ್ಯದ ಬಿತ್ತು ಹುರಿದುದು” ಎಂಬ ಪದಗಳು ವ್ಯಕ್ತಪಡಿಸುವ ನಿರಾಶೆ, ಕರಾಳತೆಗಳು ಕಲ್ಪನೆಗೂ ಸಿಗುವುದಿಲ್ಲ. ಬಿತ್ತ ಹುರಿದ ಮೇಲೆ, ಸತ್ಯ ಮೊಳೆಯುವುದು, ಬೆಳೆಯುವುದು ಸಾಧ್ಯವೇ ಇರದಂತಹ ಪರಿಸ್ಥಿತಿಯ ನಿರ್ಮಾಣವಾಗಿರುವುದನ್ನು ಅದೆಷ್ಟು ಸಮರ್ಥವಾಗಿ ವ್ಯಕ್ತಿಪಡಿಸುತ್ತದೆ. ಇಂತಹ ಪ್ರತಿಮೆಗಳು ಸಾರ್ವಕಾಲಿಕ ಪ್ರಸ್ತುತತೆಯನ್ನು ಹೊಂದಿರುವಂತಹವುಗಳು. “ಸತ್ಯವೆಂಬುದು ಗಗನಮಣಿಗೆಣೆ” “ಸತ್ಯವೊಂದೇ ಸೋಪನವು ಸಗ್ಗಕ್ಕೆ, ಜನ್ಮದ ಕೂಪರಕ್ಕಿದು ನಾವೆಯಾಗಿಹುದು” ಎಂದು ಸತ್ಯದ ಮಹಿಮೆಯನ್ನು ಕೊಂಡಾಡುತ್ತಾನೆ.
ಮನೋಹರವಾದ ಬೆಳಗಿನ ವರ್ಣನೆಗಳು ಮನಸೂರೆಗೊಳ್ಳುತ್ತವೆ. “ತರಣಿ ತೆಗೆದನು ತಾವರೆಯ ಬಾಗಿಲಿನ ಬೀಯಗವ”, “ಮೂಡಣ ಶೈಲ ಮುಖದಲಿ ಕೆಂಪು ಸುಳಿದುದು ಭಾನು ಮಂಡಲದ”, “ಏಳು ಕುದುರೆಯ ಖುರಪುಟದ ಕೆಂಧೂಳಿಯೋ, ಕುಂತೀ ಕುಮಾರಕದೇಳಿಗೆಯ ತನಿರಾಗರಸವುಬ್ಬರಿಸಿ ಪಸರಿಸಿತೋ, ಹೇಳಲೇನು, ಮಹೇಂದ್ರ ವರ ದಿಗ್ಬಾಲಕಿಯ ಬೈತಲೆಯ ಕುಂಕುಮ ಜಾಲವೋ ಹೇಳೆನಲು ದಿನಪನ ಚೂಣಿ ರಂಜಿಸಿತು” “ರವಿ ಮೂಡಣಾದ್ರಿಯೊಳಿತ್ತ ನೋಲಗವ” ಇತ್ಯಾದಿ. ಕೃಷ್ಣ ಸಂಧಿಗೆಂದು ಹಸ್ತಿನಾಪುರಕ್ಕೆ ಬಂದಾಗ ಅಲ್ಲಿ ಸೇರಿದ್ದ ಗಜ, ತುರುಗ ಜನಗಳು ಎಷ್ಟು ಸಾಂದ್ರವಾಗಿ ಸಂದಣಿಸಿದ್ದರೆಂದರೆ ಅಲ್ಲಿ ‘ಹೊಗಲನಿಲನಿಗುಬ್ಬಸ’ ವಂತೆ. ಈ ಸಾಲಿನಲ್ಲಿರುವ ದ್ವಂದ್ವಾರ್ಥ ಪದ ಪ್ರಯೋಗ ನೋಡಿ (Pun) “ದೂತರ ಹರಿಯ ಬಿಟ್ಟನು, ಹರಿಯ ನಿಳಯಕೆ ಹರಿಯ ವೇಗದಲಿ”.
“ಕೃಷ್ಣ ಕೌರವನ ಸಭೆಯಲ್ಲಿ ವಿಶ್ವರೂಪ ತೋರಿದಾಗ, “ಮಿಂಚಿನ ಹೊದರು ಹುರಿಗೊಂಡಂತೆ ರವಿಶತ ಉದುರಿದುವು, ಮೈ ಮುರಿದು ನಿಂದಡೆ ದೇವರಂಗದಲಿ, ಸದೆದುದಾಸ್ಥಾನವನು ಘನ ತೇಜದ ಲಹರಿ”.
ಯುದ್ಧವನ್ನು, ರಣರಂಗವನ್ನು ವರ್ಣಿಸುವಾಗಿನ ಪ್ರತಿಮೆಗಳ, ರೂಪಕಗಳ ಸೊಗಸೇ ಬೇರೆ ರೀತಿಯದು. ಗಜಸೇನೆಯಿರುವೆಡೆ “ಶೈಲದೆಡಬಲದೊರತೆಯನೆ, ಸುಕಪೋಲದಲಿ ದಾರಿಡುವ ಮದ ಜಲಧಾರೆ” ಹರಿದಿತ್ತಂತೆ. ರಣರಂಗ “ನೆಲವೆ ಬೆಸಲಾದುದೊ” ಎಂಬಂತೆ ಕಾಣುತ್ತದೆ. ಕಲಿ ಘಟೋತ್ಕಚನ ಮತ್ತವನ ದೈತ್ಯಕುಲ “ಕಾರಿರುಳ ಪಟ್ಟಣಕೆ ಚಂದ್ರನ ತೋರಣವ ಬಿಗಿದಂತೆ ದಾಡೆಗಳೋರಣದ ಹೊಳಹುಗಳ ಹೊಗರಿಡುವೊಡಲ ಕಪ್ಪು”ಗಳಿಂದ ಶೋಭಿಸುತ್ತದೆ. ಎರಡೂ ಸೇನೆಗಳ ಭಾರಕ್ಕೆ “ದಿಗುದಂತಿಗಳು ಮೊಣಕಾಲೂರಿ ಮನಗುಂದುತ್ತವೆ”. ಭೀಷ್ಮ ಕೌರವ ಪಡೆಗೆ ‘ವಜ್ರ ಪಂಜರ’ವಾಗುತ್ತಾನೆ. ಅಲ್ಲದೆ ಭೀಷ್ಮ “ಕಾಲನ ಸಾಧಿಸಿದ ಛಲದಂಕ ಮಲ್ಲ”. ಘಟೋತ್ಕಜ “ಸಿಡಿಲಿನ ಹೊರಳಿ ಹೊದರೆದ್ದಂತೆ” ನಿಲ್ಲುತ್ತಾನೆ, ಅರ್ಜುನ “ಜಯ ಯುವತಿಯ ವಿಟ”ನಾಗುತ್ತಾನೆ, ಭೀಮ “ಉರಿವ ಮಾರಿಯ ಬೇಟದಾತ”ನಾಗುತ್ತಾನೆ. ಯುದ್ಧದ ಭಯಂಕರತೆಯನ್ನು ವರ್ಣಿಸಲು “ಸೇನಾಕಡಲು ರಕುತದ ಕಡಲನುಗುಳಿತು” ಎಂದು ಇಡೀ ಪದ್ಯದಲ್ಲಿ ರೂಪಕಗಳ ಮೂಲಕ, ಪ್ರತಿಮೆಗಳ ಮೂಲಕ ಯುದ್ಧದ ಭೀಕರತೆಯನ್ನು ಚಿತ್ರಿಸುತ್ತಾನೆ. “ಕಡಿತಲೆಯ ಮಿಂಚುಗಳ, ಹೊಯ್ಲಿನ ಸಿಡುಲುಗಳ, ರಕ್ತ ಪ್ರವಾಹದ ಕಡುವಳೆಯ ನೃತ್ಯಕ್ಕೆ ಬಂಧದ ಸೋಗೆನವಿಲುಗಳ, ಬಿಡುಮಿದುಳ ಹೊರಳಿಗಳ ಹಂಸೆಯ, ನಡಹುಗಳ ನವಖಂಡದೊಳು ಹೆಣನಡವಿ ತಳಿತಿರೆ ಮೆರೆದುದೈ ಸಂಗ್ರಾಮಕಾರ್ಗಾಲ” ಎಲ್ಲ ಪ್ರತಿಮೆಗಳೂ, ಸಂಗ್ರಾಮ ಕಾರ್ಗಾಲವೆಂಬ ರೂಪಕವಾಗಿ ಬಿಡುತ್ತದೆ. (Sustained metaphor ಆಗಿ ಬಿಡುತ್ತದೆ ಇಡೀ ಪದ್ಯ).
"ನೊರಜು ಹೊಕ್ಕೊಡೆ ಕಲಕುವುದೇ ಜಲಧಿಯನು”, “ನೊಣವೆರಗಿದೊಡೆ ಕುಲಗಿರಿಗಳಲ್ಲಾಡುವುದೆ” ಇಂತಹವುಗಳೊಡನೆ ನಿತ್ಯ ಜೀವನದ ಅನೇಕ ಪ್ರತಿಮೆಗಳು ಮನಸೆಳೆಯುತ್ತವೆ. “ಕಾಲನ ವನಕೆ ರಕುತದ ಕೆರೆಯ ತೂಬೆತ್ತಿದರು”, “ಬತ್ತಿದ ಕೆರೆಯೊಳಗೆ ಬಲೆಯೇಕೆ”, “ಬತ್ತಿದುದಧಿಯ ಮೀನು”, “ಸೀಳಬಹುದೇ ಸೀಸದುಳಿಯಲಿ ಶೈಲವನು”, “ಅರಿವಿನ ಸೆರಗು ಹಾರಿತು”, “ಹಡಗು ಜಲಧಿಯೊಳೋಡಿ ಗಿರಿಗಳ ನಡಹಿ ನುಗ್ಗಾದಂತೆ”, ಇಂತಹ ನೂರಾರು ಪ್ರಯೋಗಗಳು ಕಂಡು ಬರುತ್ತವೆ ಕುಮಾರವ್ಯಾಸನಲ್ಲಿ.
ಆಯುಧಗಳ ಹೊಳೊಪು “ಅಗಿವ ವಜ್ರದ ಹೊಳಕೆಗಳೊ, ದಿಟ ಹಗಲ ತಡಗೋ ಮೇಣು ಮಿಂಚಿನ ಬಗೆಯ ಸೆಕ್ಕೆಯೋ, ಸೂರ್ಯ ಕಾಂತಿಚ್ಛವಿಯ ತೆಕ್ಕೆಗಳೊ” ಎನ್ನುವಂತಿತ್ತು. ಕುಮಾರವ್ಯಾಸನಲ್ಲಿ ಅತಿಶಯೋಕ್ತಿಗಳಿಗೆ ಬರವಿಲ್ಲ. “ಸುರಿವ ಗಜ ಮದಧಾರೆಯಲಿ ಹೊಸ ಶರಧಿಗಳು ಸಂಭವಿಸಿದವು -- ನೃಪವರರ ಮಕುಟದ ಮಣಿಯೊಲಾದರು ಚಂದ್ರ ಸೂರ್ಯರು, ಗಿರಿಗಳಾದವು ದಂತಿಯಲಿ, ಪಡಿಧರಣಿಯಾದವು ಛತ್ರ ಚಾಮರದಲರರೆ ನೂತನ ಸೃಷ್ಟಿಯಾಯಿತು ವಿರಿಂಚಿ ಸೃಷ್ಟಿಯಲಿ” ಎನ್ನುತ್ತಾನೆ. ಒಂದು ರೀತಿಯಲ್ಲಿ ಇಂತಹ ವರ್ಣನೆಗಳಿಂದ, ಮಾಂತ್ರಿಕ ವಾಸ್ತವತೆಯನ್ನು ಸೃಷ್ಟಿಸಿಬಿಡುತ್ತಾನೆ ಕುಮಾರವ್ಯಾಸ (Magic realism).
“ಗರುಡನೂರವರೆರೆವರೇ ನಾಗರಿಗೆ ತನಿಯನು, ಕಾಲುವೊಳೆಗೇಕವನಿಪತಿ ಹರಿಗೋಲು” , “ಎಳೆಯ ಬಾಳೆಯ ಸುಳಿಗೆ ಸೀಗೆಯ ಮೆಳೆಯೊಡನೆ ಸರಸವೆ”, “ಸಿಡಿಲು ಮೊರೆದರೆ ಸರ್ಪನಂಜುವುದಡಗುವವನೇ ಗರುಡನು”, “ಹಸುಳೆ ನಿದ್ದೆಯ ಹಾವ ಹೊಯ್ ಬಿಟ್ಟಿಸುರುವರೇ”, “ಹಾವಿಂಗನಿಲನೆ ಆಹಾರವಾದೊಡನೆ ಬಿಟ್ಟುದೇ ವಿಷವ”, ಹೀಗೆ ಲೋಕ ವ್ಯವಹಾರ, ಜನರ ನಡೆನುಡಿಯ ಬಗೆಗೆ ಗಾದೆಮಾತಿನ ಜಾಡಿನಲ್ಲಿ ಪ್ರತಿಮೆಗಳನ್ನಿರಿಸುವುದನ್ನು ಕಾಣುತ್ತೇವೆ.
This is the seventeenth part of the eighteen-part article on kumaravyasa-bharata by Prof. L.V. Shantakumari. Thanks to Smt. Kanchana and Shri. Ganesh Bhat Koppalatota for reviewing. Edited by G S Raghavendra.