ಕನ್ನಡಸಾಹಿತ್ಯದ ನಾಂದಿಯನ್ನು ಹಾಡಿದ್ದೇ ಚಂಪೂಕಾವ್ಯಗಳು. ಅಭಿಜಾತಶೈಲಿಯ ಹಳಗನ್ನಡದಲ್ಲಿ ವಿದ್ವನ್ಮಾನ್ಯವಾಗುವಂತೆ ಮೂಡಿದ ಈ ಕಾವ್ಯರಾಶಿ ಯಾವ ಭಾಷೆಗೂ ಹೆಮ್ಮೆ ತರಬಲ್ಲ ಗುಣ-ಗಾತ್ರಗಳಿಂದ ವಿಸ್ತರಿಸಿಕೊಂಡಿದೆ. ಈ ಚಂಪೂಕಾವ್ಯಧಾರೆ ಹೊಯ್ಸಳರ ಅವಸಾನದೊಡನೆ ಸೊರಗಿ ಮತ್ತೆ ಮೈಸೂರು ಒಡೆಯರ ಕಾಲದಲ್ಲಿ ಮೈದುಂಬಿಸಿಕೊಳ್ಳುವ ಪ್ರಯತ್ನ ಮಾಡಿ ನಮ್ಮ ದೇಶದ ಸ್ವಾತಂತ್ರ್ಯೋದ್ಯಮಕ್ಕೂ ಮುನ್ನ ಬತ್ತಿಯೇ ಹೋಯಿತೆಂಬುದು ವಿಷಾದದ ಸಂಗತಿ. ದಿಟವೇ, ಆಗೊಮ್ಮೆ ಈಗೊಮ್ಮೆ ಕೆಲವೊಂದು ರಚನೆಗಳು ಉದಿಸಿದ್ದುವು; ಆದರೂ ಅವುಗಳ ಸೌಷ್ಠವ-ಸ್ವಾರಸ್ಯಗಳು ಹೇಳಿಕೊಳ್ಳುವ ಮಟ್ಟದವಲ್ಲ. ಪರಿಸ್ಥಿತಿ ಹೀಗಿರುವಾಗ ಕೃತಕ ಮೇಧೆಯ ಈ ಅತ್ಯಾಧುನಿಕ ಯುಗದಲ್ಲಿ ಇಂಥ ಸಾಹಿತ್ಯದ ಸಂಭವವಾದರೂ ಹೇಗೆ? ಈಚೆಗಂತೂ ಸಾಮಾನ್ಯದ ಹೊಸಗನ್ನಡಗದ್ಯಕ್ಕೇ ತತ್ವಾರ ಬಂದಿರುವಾಗ ಕಂದ-ವೃತ್ತಗಳ ಅಂದ-ಚಂದಗಳನ್ನು ಮೈಗೂಡಿಸಿಕೊಂಡ, ವ್ಯಾಕರಣಶುದ್ಧವಾದ, ಸ್ವೋಪಜ್ಞತೆಯಿಂದ ಪ್ರಬುದ್ಧವಾದ, ನವಕಲ್ಪನೆಗಳಿಂದ ಕಂಗೊಳಿಸುವ ಚಂಪೂಕೃತಿಗಳ ಹುಟ್ಟನ್ನು ಊಹಿಸುವುದೂ ಅಸಾಧ್ಯ. ಇಂಥ ಬರಗಾಲದಲ್ಲಿ ಬೇಸಗೆಯಲ್ಲಿ ಬುವಿಗೆರಗಿ ತಂಪೆರೆಯುವ ಮಳೆಯಂತೆ ‘ಸೌಂದರಾನಂದಂ’ ಮತ್ತು ‘ಸುಧಾಸುಪರ್ಣೀಯಂ’ ಎಂಬ ಎರಡು ಸುಂದರ ಖಂಡಕಾವ್ಯಗಳು ಹಳಗನ್ನಡದಲ್ಲಿ ಕಾಣಿಸಿಕೊಂಡಿರುವುದು ಅಭಿಜಾತಸಾಹಿತ್ಯರಸಿಕರಿಗೆ ಎಷ್ಟೋ ನೆಮ್ಮದಿಯನ್ನು ತಂದಿದೆ. ಇಪ್ಪತ್ತೊಂದನೆಯ ಶತಮಾನದಲ್ಲಿ ಮೊತ್ತಮೊದಲಿಗೆ ಉದಿಸಿದ ಕನ್ನಡ ಚಂಪೂಕೃತಿಗಳೆಂಬ ಹೆಗ್ಗಳಿಕೆ ಇವಕ್ಕಿದೆ. ಇಂಥ ವಿಶಿಷ್ಟ ಕಾವ್ಯಗಳನ್ನು ರಚಿಸಿದ ಕವಿಮಿತ್ರರಾದ ಅಷ್ಟಾವಧಾನಿ ಗಣೇಶ ಭಟ್ಟ ಕೊಪ್ಪಲತೋಟ ಮತ್ತು ನೀಲಕಂಠ ಕೃಷ್ಣಾಜಿ ಕುಲಕರ್ಣಿ ಅವರನ್ನು ಹಾರ್ದಿಕವಾಗಿ ಅಭಿನಂದಿಸಬೇಕಿದೆ. ನಮ್ಮ ನೆರೆಯ ನಾಡಾದ ಆಂಧ್ರದಲ್ಲಿ ಚಂಪೂಕಾವ್ಯಗಳು ಅವಿಚ್ಛಿನ್ನವಾಗಿ ಅಹಮಹಮಿಕೆಯಿಂದ ಉದಿಸುತ್ತಲೇ ಇರುವಾಗ ನಮ್ಮ ತಾಯ್ನುಡಿ ಬಡವೆಯಾಗದಂತೆ ಕಾಪಿಟ್ಟ ಈ ಕವಿಕಲಾದರಿಗೆ ನಾವೆಲ್ಲ ಕೃತಜ್ಞರಾಗಿರಬೇಕು.[1]
ಕನ್ನಡ ಚಂಪೂರಚನೆಗಳ ಪೈಕಿ ಖಂಡಕಾವ್ಯಗಳು ವಿರಳ. ಹೆಚ್ಚು ಪ್ರಸಿದ್ಧವಲ್ಲದ ಉಪಾಖ್ಯಾನಗಳನ್ನು ಆಧರಿಸಿದ ಕೃತಿಗಳು ಮತ್ತೂ ವಿರಳ. ಸದ್ಯದಲ್ಲಿ ನಾವು ಪರಿಶೀಲಿಸಲಿರುವ ಎರಡೂ ಕಾವ್ಯಗಳು ಈ ವರ್ಗದವು.
‘ಸೌಂದರಾನಂದಂ’ ತಮಿಳುನಾಡಿನ ಮಧುರೈ ನಗರದಲ್ಲಿ ನೆಲಸಿದ ಸುಂದರೇಶ್ವರಸ್ವಾಮಿಯ ಲೀಲಾಕಥನ. ಇದು ಸಂಸ್ಕೃತದ ಹಾಲಾಸ್ಯಪುರಾಣ ಮತ್ತು ತಮಿಳಿನ ತಿರುವಿಳೆಯಾಡಲ್‌ಪುರಾಣಗಳನ್ನು ಆಧರಿಸಿದೆ. ‘ಸುಧಾಸುಪರ್ಣೀಯಂ’ ಮಹಾಭಾರತ ಮತ್ತು ಹಲಕೆಲವು ಪುರಾಣಗಳಲ್ಲಿ ಕಾಣಸಿಗುವ ಗರುಡನ ಅಮೃತಹರಣೋದ್ಯಮವನ್ನು ವರ್ಣಿಸುತ್ತದೆ. ಹೀಗೆ ಈ ಕೃತಿಗಳ ಕಥೆ ಪೂರ್ವಸಿದ್ಧವಾಗಿದ್ದರೂ ವರ್ಣನೆ, ಸನ್ನಿವೇಶನಿರ್ಮಾಣ ಮತ್ತು ಪಾತ್ರಚಿತ್ರಣಗಳಲ್ಲಿ ಕವಿಗಳ ಸ್ವಂತಿಕೆಯನ್ನು ಕಾಣಬಹುದು. ಇವೆರಡೂ ಹಳಗನ್ನಡದಲ್ಲಿ ರಚಿತವಾಗಿದ್ದರೂ ಭಾಷಾಪ್ರಯೋಗದಲ್ಲಿ ಆಯಾ ಕವಿಯ ಮನೋಧರ್ಮವನ್ನು ಚೆನ್ನಾಗಿ ಗುರುತಿಸಬಹುದು. ಕೊಪ್ಪಲತೋಟರದು ಪ್ರಸನ್ನಮಧುರ ಶೈಲಿ. ಇದನ್ನು ಕದಳೀಪಾಕವೆಂದು ಹೇಳಬಹುದು. ಕುಲಕರ್ಣಿ ಅವರದು ಓಜೋಗಂಭೀರ ಶೈಲಿ. ಇದನ್ನು ಕೆಲಮಟ್ಟಿಗೆ ನಾರಿಕೇಳಪಾಕಕ್ಕೆ ಒಪ್ಪವಿಡಬಹುದು. ಪದಪ್ರಯೋಗದಲ್ಲಿಯೂ ಈ ತೆರನಾದ ವೈಚಿತ್ರ್ಯವನ್ನು ಕಾಣಬಹುದು. ಇನ್ನು ಛಂದಸ್ಸನ್ನು ಕುರಿತು ಒಂದು ಮಾತು: ಕಂದ ಮತ್ತು ಖ್ಯಾತಕರ್ಣಾಟಕಗಳೆಂಬ ಆರು ವೃತ್ತಗಳನ್ನಲ್ಲದೆ ರಗಳೆ, ಸೀಸ, ಗೀತ, ತ್ರಿಪದಿ ಮತ್ತು ಇನ್ನಿತರ ವರ್ಣವೃತ್ತಗಳನ್ನೂ ಕವಿಗಳು ಬಳಸಿದ್ದಾರೆ. ಇವುಗಳ ವಿನಿಯೋಗದಲ್ಲಿ ಔಚಿತ್ಯವೂ ಇದೆ. ಕೊಪ್ಪಲತೋಟರಲ್ಲಿ ಛಂದೋವೈವಿಧ್ಯ ಹೆಚ್ಚು. ಇಬ್ಬರೂ ನಾಲ್ಕು ಪಾದಗಳಿಗೇ ಸೀಮಿತವಾಗದೆ ಹಲವು ಸಾಲಗಳಿಗೆ ವಿಸ್ತರಿಸಿಕೊಳ್ಳುವಂತೆ ಮಾಲಿಕಾವೃತ್ತಗಳನ್ನೂ ಬಳಸಿದ್ದಾರೆ. ಈ ಪದ್ಧತಿಯನ್ನು ತೆಲುಗಿನಲ್ಲಿ ಹೆಚ್ಚಾಗಿ ಕಾಣುತ್ತೇವೆ. ತೀರ ವಿರಳವಾಗಿ ಕೆಲವೆಡೆ ಆದಿಪ್ರಾಸವನ್ನು ಬಿಟ್ಟು ಬರೆದಿರುವುದೂ ಉಂಟು (ಸೌಂ: ಡಂಗುರ ಸಾರುವ ತ್ರಿಪದಿಗಳು; ಸುಧಾ: ಗರುಡನ ಹಾರಾಟವನ್ನು ವರ್ಣಿಸುವ ಉಪಜಾತಿಗಳು). ಇಂಥ ಸ್ವಾತಂತ್ರ್ಯವೂ ಸ್ವಾಗತಾರ್ಹ.
* * *
ಇದೀಗ ಈ ಕಾವ್ಯಗಳನ್ನು ಅನುಕ್ರಮವಾಗಿ ಪರಿಚಯಿಸಿಕೊಳ್ಳೋಣ. ಮೊದಲಿಗೆ ಸೌಂದರಾನಂದವನ್ನು ಗಮನಿಸಬಹುದು. ಇದರ ಕಥಾಸಂಗ್ರಹ ಹೀಗಿದೆ:
ಮಧುರೆಯನ್ನು ಆಳುತ್ತಿದ್ದ ಪಾಂಡ್ಯಮಹಾರಾಜನ ಆಶ್ರಯದಲ್ಲಿ ಅನೇಕ ಕವಿಗಳಿದ್ದರು. ಇವರೆಲ್ಲ ಸೇರಿ ನಡಸುತ್ತಿದ್ದ ಕಾವ್ಯವಿದ್ಯಾವಿನೋದಗೋಷ್ಠಿಯನ್ನು ‘ಸಂಗಂ’ (ಸಂಘ) ಎಂದು ಕರೆಯುತ್ತಿದ್ದರು. ಇಲ್ಲಿಯ ಕವಿಗಳ ಪೈಕಿ ನಕ್ಕೀರ ಅಥವಾ ನತ್ಕೀರ ಎಂಬವನು ಪ್ರಮುಖ. ಅದೊಮ್ಮೆ ಮಹಾರಾಜ ತನ್ನ ಪತ್ನಿಯೊಡನೆ ಉಪವನದಲ್ಲಿ ವಿಹರಿಸುವಾಗ ಯಾವುದೋ ಪರಿಮಳ ಅವನ ಅನುಭವಕ್ಕೆ ಬಂದಿತು. ಅದು ತನ್ನ ಪತ್ನಿಯ ತುರುಬಿನಿಂದ ಬಂದದ್ದೆಂದು ಭಾಸವಾಗಿ ಇದೊಂದು ವಿಶೇಷವೆಂದು ಅವನಿಗೆ ತೋರಿತು. ತನ್ನ ಈ ಅನುಭವದ ಮೂಲವನ್ನು ತಿಳಿಸದೆ ಪರಿಮಳದ ಕಾರಣ ಯಾವುದೆಂಬ ಪ್ರಶ್ನೆಯನ್ನು ಸಂಗಂ ಕವಿಗಳ ಮುಂದಿರಿಸಿ ಅವರಿಂದ ಕವಿತಾರೂಪದ ಉತ್ತರ ಪಡೆಯಲು ನಿಶ್ಚಯಿಸಿದ. ಮಾರನೆಯ ದಿನ ಆಸ್ಥಾನದಲ್ಲಿ ತನ್ನ ಪ್ರಶ್ನೆಯನ್ನು ಮುಂದಿರಿಸಿದ್ದಲ್ಲದೆ ಇದಕ್ಕೆ ತಕ್ಕ ಉತ್ತರವನ್ನು ಕೊಡುವ ಕವಿಗೆ ಸಾವಿರ ಹೊನ್ನುಗಳ ಬಹುಮಾನ ನೀಡುವುದಾಗಿ ಉದ್ಘೋಷಿಸಿದ. ಆಸೆ ಕೆರಳಿದ ಕವಿಗಳೆಲ್ಲ ಪದ್ಯರೂಪದ ಉತ್ತರಕ್ಕಾಗಿ ತಿಣುಕತೊಡಗಿದರು. ಆದರೆ ಯಾರೊಬ್ಬರ ಕವಿತೆಯೂ ರಾಜನಿಗೆ ಸೊಗಸೆನಿಸಲಿಲ್ಲ. ಹೀಗಾಗಿ ಈ ಸುದ್ದಿ ಮತ್ತಷ್ಟು ಪ್ರಸಿದ್ಧಿ ಪಡೆಯಿತು.
ಮಧುರೆಯಲ್ಲಿದ್ದ ಬಡಹಾರುವನೊಬ್ಬನಿಗೆ ಸಾವಿರ ಹೊನ್ನುಗಳನ್ನು ದಕ್ಕಿಸಬಲ್ಲ ರಾಜನ ಡಂಗುರ ಕಿವಿಗೆ ಬಿತ್ತು. ಅವನ ಹೆಸರು ಧರ್ಮಿ. ಬಡತನದೊಂದಿಗೆ ಅರಿವುಗೇಡಿತನವೂ ಇದ್ದ ಆ ಬ್ರಾಹ್ಮಣ ಹೇಗಾದರೂ ಮಾಡಿ ಬಹುಮಾನವನ್ನು ದಕ್ಕಿಸಿಕೊಂಡರೆ ತನ್ನ ಬಡತನ ಅಳಿದೀತು; ಮಡದಿ-ಮಕ್ಕಳು ನಲಿದಾರು ಎಂಬ ಹಂಬಲದಿಂದ ಹಪಹಪಿಸತೊಡಗಿದ. ಊರಿನ ಕೇಂದ್ರದಲ್ಲಿದ್ದ ಸುಂದರೇಶ್ವರನ ದೇವಾಲಯದಲ್ಲಿ ಕುಳಿತು ಸ್ಫೂರ್ತಿಗಾಗಿ ದೇವರನ್ನು ಬೇಡಿಕೊಳ್ಳತೊಡಗಿದ. ಆಗ ಅವನ ದೈನ್ಯವನ್ನು ಕಂಡು ಕರಗಿದ ಮಹಾದೇವ ವರಕವಿಯ ವೇಷದಲ್ಲಿ ಬಂದು ಪಾಂಡ್ಯರಾಜನ ಮನಸ್ಸಿನಲ್ಲಿದ್ದ ಕಲ್ಪನೆಯನ್ನೇ ಆಧರಿಸಿ ಸುಂದರವಾದ ಮುಕ್ತಕವೊಂದನ್ನು ಬರೆದು ಧರ್ಮಿಗೆ ಕೊಟ್ಟು ಅದರ ಮೂಲಕ ಅವನು ತನ್ನ ಇಷ್ಟಾರ್ಥವನ್ನು ಪಡೆಯಬಹುದೆಂದು ಪ್ರೇರಿಸಿ ರಾಜಾಸ್ಥಾನಕ್ಕೆ ಕಳುಹಿಸಿದ. ತನಗೆ ಈ ರೀತಿ ಬಂದ ನೆರವಿಗೆ ಹಿಗ್ಗಿನಿಂದ ತಬ್ಬಿಬ್ಬಾದ ಧರ್ಮಿ ಸಂಭ್ರಮದಿಂದ ರಾಜನ ಬಳಿ ಸಾರಿ ಕವಿರೂಪದ ಶಿವನ ಪದ್ಯವನ್ನು ತನ್ನದಾಗಿ ಮುಂದಿರಿಸಿದ. ಇದನ್ನು ಓದಿ ಮೆಚ್ಚಿದ ರಾಜ ಸಾವಿರ ಹೊನ್ನುಗಳನ್ನು ಅವನಿಗೆ ಕೊಡಲು ಮುಂದಾದ. ಅಷ್ಟರಲ್ಲಿ ನತ್ಕೀರ ಇದಕ್ಕೆ ಅಡ್ಡಿಯಾದ. ಪಾಮರ ಧರ್ಮಿಯ ವರ್ತನೆಯಿಂದಲೇ ಅವನು ಇಂಥ ಸುಂದರ ಕವಿತೆಯ ನಿರ್ಮಾತೃವಲ್ಲವೆಂದು ಊಹೆಯಾಗಿತ್ತು. ಅಲ್ಲದೆ ಯಾವುದೇ ಹೆಣ್ಣಿನ ತುರುಬು ಸಹಜ ಪರಿಮಳದಿಂದ ಕೂಡಿರುವುದಿಲ್ಲವೆಂಬ ಆಕ್ಷೇಪವೂ ಅವನದಾಗಿತ್ತು. ಇಂಥ ಕಲ್ಪನೆ ಲೋಕವಿರುದ್ಧ ಮಾತ್ರವಲ್ಲದೆ ಕವಿಸಮಯಕ್ಕೂ ವಿರುದ್ಧವೆಂದು ನತ್ಕೀರನ ಗಟ್ಟಿ ನಿಲವು. ಈ ಬಗೆಯ ಶಾಸ್ತ್ರೀಯ ವಿರೋಧಕ್ಕೆ ಉತ್ತರ ಹೇಳಲಾಗದೆ ಧರ್ಮಿ ತತ್ತರಿಸಿ ತನ್ನದೆಂಬ ಕವಿತೆಯ ಮೂಲಲೇಖಕ ಬೇರೊಬ್ಬ ಎಂಬ ಸತ್ಯವನ್ನು ಬಿಟ್ಟುಕೊಡಬೇಕಾಯಿತು. ಹೀಗಾಗಿ ಅವನಿಗೆ ಬಹುಮಾನ ದಕ್ಕಲಿಲ್ಲ. ಮತ್ತೆ ದೇವಾಲಯಕ್ಕೆ ಓಡಿದ ಧರ್ಮಿ ಅಲ್ಲಿ ಕಾದಿದ್ದ ಲೀಲಾಕವೀಶ್ವರನ ಬಳಿ ಸಾರಿ ತನಗಾದ ಅಪಮಾನ-ನಿರಾಶೆಗಳನ್ನು ಅವನಲ್ಲಿ ಹೇಳಿಕೊಂಡ. ತಾನು ಬರೆದ ಕವಿತೆಯಲ್ಲಿ ನರಕವಿಯೊಬ್ಬನು ಹುಳುಕನ್ನು ಕಂಡದ್ದು ಹರನಿಗೆ ತೀವ್ರ ಕೋಪವನ್ನು ತಂದಿತು. ಆ ಕೂಡಲೇ ಅವನು ರಾಜಾಸ್ಥಾನಕ್ಕೆ ಧಾವಿಸಿ ಅಲ್ಲಿದ್ದ ನತ್ಕೀರನೊಡನೆ ತನ್ನ ಕವಿತೆಯ ಸಮರ್ಥನೆಗೆ ತೊಡಗಿದ. ಆದರೆ ನತ್ಕೀರ ಬಗ್ಗಲಿಲ್ಲ. ಕೊನೆಗೆ ತನ್ನ ಹಣೆಗಣ್ಣನ್ನು ತೆರೆಯುವ ಮೂಲಕ ತಾನಾರೆಂದು ಶಿವ ಸೂಚಿಸಿದ. ಆಗಲೂ ನತ್ಕೀರ ತನ್ನ ನಿಲವನ್ನು ಸಡಲಿಸದೆ “ನೀನು ನಿನ್ನ ಹಣೆಗಣ್ಣ ಬೆಂಕಿಯಲ್ಲಿ ನನ್ನನ್ನು ಸುಟ್ಟರೂ ನಿನ್ನ ಕವಿತೆಯ ತಪ್ಪು ಒಪ್ಪಾಗದು” ಎಂದು ಹಠಕ್ಕೆ ನಿಂತ; ಮುಕ್ಕಣ್ಣನ ಕೆಂಗಣ್ಣಿನ ಕೇಸುರಿಗಳಲ್ಲಿ ಬೂದಿಯೇ ಆದ. ಆ ಬಳಿಕ ಉಪಶಾಂತನಾದ ಶಿವ ದೊರೆಯ ಮತ್ತವನ ಆಸ್ಥಾನದ ಕವಿಗಳ ಪ್ರಾರ್ಥನೆಯಂತೆ ನತ್ಕೀರನನ್ನು ಉಜ್ಜೀವಿಸಿದ. ಪ್ರಾಣಕ್ಕೆ ಸಂಚಕಾರ ಬಂದ ಹೊತ್ತಿನಲ್ಲಿಯೂ ಸತ್ಕಾವ್ಯ-ದುಷ್ಕಾವ್ಯಗಳ ವಿಮರ್ಶೆಯ ನಿಶ್ಚಯವನ್ನು ಬಿಡದ ಅವನ ನಿಷ್ಠೆಯನ್ನು ಮೆಚ್ಚಿದ. ಅಂತೂ ಧರ್ಮಿಗೆ ಅದು ಹೇಗೋ ಬಡತನ ನೀಗಿತು; ಎಲ್ಲವೂ ಸುಖಾಂತವಾಯಿತು. ಹೀಗೆ ಸುಂದರೇಶ್ವರನ ಲೀಲೆಗಳ ಪೈಕಿ ಅವನು ಕವಿಯಾಗಿ ಕಲಹಿಸಿದ ಕೇಳಿಯೂ ಒಂದು ದಿವ್ಯವಿನೋದವಾಗಿ ಭಕ್ತರ ಪಾಲಿಗೆ ಆನಂದ ತಂದಿತು.
ಕೊಪ್ಪಲತೋಟರು ಈ ಇತಿವೃತ್ತವನ್ನು ಚಂದ್ರ, ಸೂರ್ಯ ಮತ್ತು ಅಗ್ನಿಗಳ ಪ್ರತೀಕವಾದ ಶಿವನ ಮೂರು ಕಣ್ಣುಗಳನ್ನು ಪ್ರತಿನಿಧಿಸುವಂತೆ ‘ಆಲೋಕ’ಗಳೆಂಬ ಮೂರು ಅಧ್ಯಾಯಗಳಲ್ಲಿ ವಿಸ್ತರಿಸಿದ್ದಾರೆ. ಪಾಂಡ್ಯರಾಜನ ಪುರವೈಭವ, ವನವಿಹಾರ, ಸಂಧ್ಯಾವರ್ಣನೆ ಮುಂತಾದ ತಂಪಾದ ವಿವರಗಳನ್ನು ‘ಚಂದ್ರಚಕ್ಷು’ವಿನಲ್ಲಿ; ಪ್ರಭಾತವರ್ಣನೆ, ಧರ್ಮಿಯ ಪಾಡು, ಶಿವನೇ ಬರೆದುಕೊಟ್ಟ ಕವಿತೆಯನ್ನು ಅವನು ರಾಜಾಸ್ಥಾನಕ್ಕೆ ಕೊಂಡೊಯ್ಯುವ ಸಂಗತಿಗಳನ್ನು ‘ಸೂರ್ಯಚಕ್ಷು’ವಿನಲ್ಲಿ; ಅನಂತರದ ವಾದ-ವಿವಾದ, ನತ್ಕೀರದಹನ ಮತ್ತು ಶಿವಾನುಗ್ರಹಗಳನ್ನು ‘ಅಗ್ನಿಚಕ್ಷು’ವಿನಲ್ಲಿ ವಿಸ್ತರಿಸುವ ಮೂಲಕ ಕವಿ ಆಯಾ ಅಧ್ಯಾಯಗಳ ವಿಷಯ ಮತ್ತು ಶೀರ್ಷಿಕೆಗಳಿಗೆ ಸುಂದರ ಸಾಮಂಜಸ್ಯವನ್ನು ಒದಗಿಸಿದ್ದಾರೆ. ‘ಆಲೋಕ’ ಎಂಬ ಶಬ್ದಕ್ಕೆ ನೋಟ, ಬೆಳಕು ಮತ್ತು ಜಯ ಎಂಬ ಅರ್ಥಗಳಿರುವುದು ಗಮನಾರ್ಹ. ಇವೆಲ್ಲವೂ ಆಯಾ ಅಧ್ಯಾಯಗಳಿಗೆ ಹೊಂದಿಕೊಳ್ಳುವುದು ಮತ್ತೂ ಹೆಚ್ಚಿನ ಸ್ವಾರಸ್ಯ. ಈ ಮೂಲಕ ಕೊಪ್ಪಲತೋಟರು ಪ್ರಕೃತ ಕಾವ್ಯದ ಪ್ರತಿಪದಸ್ವಾರಸ್ಯವನ್ನೂ ಹೇಗೆ ಪೋಷಿಸಿದ್ದಾರೆಂಬ ಊಹೆ ಬಾರದಿರದು. ಇಡಿಯ ಈ ಕೃತಿಯ ಕೇಂದ್ರದಲ್ಲಿರುವ ಧರ್ಮಿಯ ಪಾತ್ರ ಅದ್ಭುತವಾಗಿ ಚಿತ್ರಿತವಾಗಿದೆ. ಇಲ್ಲಿ ಕಾಣುವ ಕರುಣವನ್ನು ಮರೆಯಿಸುವಂಥ ಹಾಸ್ಯ ಕವಿಕೌಶಲಕ್ಕೆ ನಿದರ್ಶನ. ಇಲ್ಲವಾದಲ್ಲಿ ಇದು ಶಿವನ ಲೀಲೆಯಾಗದೆ ಹಿಂಸೆಯಾಗಿ ಮಾರ್ಪಡುವ ಅಪಾಯವುಂಟು. ಉಳಿದಂತೆ ಚಿಕ್ಕದಾಗಿ ಬಂದರೂ ಸ್ಫುಟವಾಗಿ ನಿಲ್ಲುವ ಧರ್ಮಿಯ ಪತ್ನಿ, ನತ್ಕೀರ, ಪಾಂಡ್ಯರಾಜ ಮುಂತಾದ ಪಾತ್ರಗಳು ತಮ್ಮ ಛಾಪನ್ನು ಚೆನ್ನಾಗಿ ಬಿಂಬಿಸಿವೆ. ಇವರೆಲ್ಲರನ್ನೂ ಬೆಸೆಯುವ ಶಿವನ ಪಾತ್ರವಂತೂ ಲಘುಲೀಲೆ ಮತ್ತು ದಿವ್ಯಗಾಂಭೀರ್ಯಗಳ ಸಾಮರಸ್ಯದಿಂದ ಪರಿಣಾಮಕಾರಿಯೆನಿಸಿದೆ.
ಸೌಂದರಾನಂದದಂಥ ಅಭಿಜಾತಕಾವ್ಯಗಳ ಪ್ರಾಬಂಧಿಕ ಸೌಂದರ್ಯ ಏನೇ ಆಗಿರಲಿ, ಪ್ರತಿಪದ್ಯಸೌಂದರ್ಯ ಮತ್ತೂ ಹೆಚ್ಚಿನದು. ಇದನ್ನು ಮನಗಾಣದಿದ್ದಲ್ಲಿ ನಷ್ಟ ನಮಗೆ. ಆದುದರಿಂದ ಇನ್ನು ಮುಂದೆ ಈ ಕೃತಿಯ ಕೆಲವೊಂದು ಪದ್ಯಗಳ ಸ್ವಾರಸ್ಯವನ್ನು ಪರಿಶೀಲಿಸಬಹುದು.
ಕೃತಿಯ ಆರಂಭದಲ್ಲಿ ಕವಿ ತಾವು ಬರೆದ ಬೇರೆ ಬೇರೆ ಕಾವ್ಯಗಳನ್ನು ಕುರಿತು ಪ್ರಸ್ತಾವಿಸುತ್ತಾರೆ. ಆಗ ಗರುಡನು ಅಮೃತವನ್ನು ತಂದೀಯುವ ಮೂಲಕ ತನ್ನ ತಾಯಿಯ ದಾಸ್ಯವನ್ನು ಕಳೆದ ಕಥೆಯನ್ನು ಆಧರಿಸಿದ ಕೃತಿಯೂ ಪ್ರಸ್ತುತವಾಗುತ್ತದೆ (೧.೮). ಇದಕ್ಕಾಗಿ ಅವರು ಬಳಸಿದ ‘ಖಚರಪ್ಲುತ’ (ಹಕ್ಕಿಯ ನೆಗೆತ) ಎಂಬ ಛಂದಸ್ಸು ತನ್ನ ಹೆಸರು ಮತ್ತು ನಡಿಗೆಗಳ ಸೊಗಸಿನಿಂದ ಸಂದರ್ಭೋಚಿತವೆನಿಸಿದೆ. ಇಂಥ ಔಚಿತ್ಯ ಈ ಕಾವ್ಯದ ಪದಗಳಲ್ಲಿ, ಛಂದಸ್ಸುಗಳಲ್ಲಿ, ಅಲಂಕಾರಗಳಲ್ಲಿ ಕೋಡಿವರಿದಿದೆ. ಉದಾ: ವನವರ್ಣನೆಯ ಸನ್ನಿವೇಶದಲ್ಲಿ ವಸಂತರ್ತುವಿನ ಮಾಮರದ ಬಣ್ಣನೆ ವಸಂತತಿಲಕಾವೃತ್ತದ ಮೂಲಕ, ಹೂವುಗಳ ಕಂಪಿನ ಬಣ್ಣನೆ ಮಲ್ಲಿಕಾಮಾಲಾವೃತ್ತದ ಮೂಲಕ ಮೈವೆತ್ತಿದೆ:
ಅಲ್ಲಿ ಚೆಲ್ವಿನೊಳೆಲ್ಲ ಪಾದಪಮೊಲ್ದು ಪೂತಿರೆ ಪೊಣ್ಮುತುಂ
ಮೆಲ್ಲನೆಯ್ದು ಸುಗಂಧದಿಂದೆ ಸಮೀರನೆಯ್ದಿರೆ ಮತ್ತಿನೊಳ್ |
ಚೆಲ್ಲುತಿರ್ಪ ಪರಾಗಧೂಳಿಯೆ ತುಂಬಿರಲ್ಕೆ ಸಮಸ್ತಮಂ
ಕಲ್ಲಿಗಾದುದೆ ರೋಮಹರ್ಷಣಮೆಂಬವೋಲದು ತೋಱುಗುಂ || (೧.೪೧)
ಕಲ್ಲಿಗೂ ರೋಮಾಂಚನವಾಯಿತೋ ಏನೋ ಎಂಬಂಥ ಇಲ್ಲಿಯ ಉತ್ಪ್ರೇಕ್ಷೆ ಬಲುಚೆಲುವಾಗಿದೆ.
ಕೃತಿಯ ಉಪಕ್ರಮದಲ್ಲಿಯೇ ಕವಿ ತಮ್ಮ ವಿನಯವನ್ನು ಮೆರೆಯುವ ಪರಿ ಮನನೀಯ:
ಆರಂಭಶೂರರ್ ಗಡ ದಾಕ್ಷಿಣಾತ್ಯರ್
ಸಾರಿರ್ಪರಾರೋ ಸರಿಯಿಲಮೆಂದಿಂ-
ದೋರಂತೆ ಸರ್ವರ್ ಬಹುಯತ್ನಶೀಲರ್
ತೋಱುತ್ತಿರಲ್ಕಾಂ ವಿಪರೀತನಾದೆಂ! || (೧.೧೦)
“ಆರಂಭಶೂರಾಃ ಖಲು ದಾಕ್ಷಿಣಾತ್ಯಾಃ” ಎಂಬ ಸಂಸ್ಕೃತದ ನಾಣ್ನುಡಿಯನ್ನು ಅದೇ ಛಂದಸ್ಸಿನಲ್ಲಿ ಕನ್ನಡಿಸಿದ ಕೊಪ್ಪಲತೋಟರ ಕೌಶಲ ಮೆಚ್ಚುವಂಥದ್ದು. ಈ ಕಾಲದಲ್ಲಿ ದಾಕ್ಷಿಣಾತ್ಯರು ಕೂಡ ಉದ್ಯಮಶೀಲರಾಗಿದ್ದಾರೆ, ಆದರೆ ತಾನು ಮಾತ್ರ ಹಾಗಿಲ್ಲ ಎಂದು ಚಮತ್ಕರಿಸುವ ಕವಿಯ ವಿನೋದಪ್ರಜ್ಞೆ ಹೃದ್ಯವಾಗಿದೆ.
ಸುಕವಿಸ್ತುತಿ ಮತ್ತು ಕುಕವಿನಿಂದೆ ನಮ್ಮ ಪ್ರಾಚೀನ ಕವಿಗಳ ಅನುಲ್ಲಂಘ್ಯ ಸಂಪ್ರದಾಯಗಳಲ್ಲಿ ಒಂದು. ಇದನ್ನು ನಮ್ಮ ಕವಿ ಮೀರದೆ ಅತಿಶಯ ನಾವೀನ್ಯವನ್ನು ತೋರಿದ್ದಾರೆ:
ಪೊಸತಂ ಸೃಷ್ಟಿಪ ಬಯಕೆಯೊ-
ಳಸವಸಮಂ ಗೆಯ್ದು ಬರೆದು ಮುದ್ರಿಸಿ ಜನಕಂ
ಕಸಮಂ ಕಸವರಮೆನುತುಂ
ಪುಸಿಯಿಂ ನುಡಿದವರದೆಂತು ಲೇಖಕರಪ್ಪರ್ ||
ಜಸಮೆಲ್ಲಿರ್ಪುದೊ ಪುಡುಕುತೆ
ಬಸಿಯದೆ ತಾಂ ಬೆಮರನಂತೆ ಶೀಘ್ರದೆ ಪಡೆಯಲ್
ದೆಸೆಗೆಟ್ಟರೆಲ್ಲರೆಯ್ದಿರೆ
ಪೊಸಗಬ್ಬದ ಗುಣ್ಪದಾಯ್ತು ಪುಸಿಗಬ್ಬಂಗಳ್ ||
ಪಿರಿಯರ್ ಪಿಂತಣ ಕವಿಗಳ್
ಬರೆದೊಂದಕ್ಕರಮುಮಂ ನೆಗಳ್ದೋದದವರ್
ಪಿರಿದಾಗಿ ಜಾಲದಾಣದ
ಪರಮೇಶ್ವರರರಾದರೆಂಬುದೇನಚ್ಚರಿಯೋ! ||
ಕಂಡಿರೆ ಭೂವ್ಯೋಮಂಗಳ್
ತುಂಡಾದುದು ಮೂಲೆಮೂಲೆಗಳುಮೀ ಕರದೊಳ್
ಮಂಡಿತಯಂತ್ರದ ಪಟಲದೆ
ಅಂಡಲೆದಪರಾರೊ ಜಾಣರೇಂ ಕಲಿಯುವರೋ! || (೧.೧೪-೧೭)
ಈ ಕಂದಗಳ ಹಳಗನ್ನಡದ ಅಂದ ಅಸಮಾನ. ‘ಅಸವಸ’ (ಗಡಿಬಿಡಿ), ‘ಕಸವರ’ (ಬಂಗಾರ) ಮುಂತಾದ ಅಚ್ಚಗನ್ನಡದ ಪದಗಳ ಪ್ರಯೋಗವೂ ಗಮನಾರ್ಹ. ಇವಕ್ಕಿಂತ ಮಿಗಿಲಾದುದು ಕವಿಗಿರುವ ವರ್ತಮಾನವಿವೇಕ. ಹಿಂದಿನ ಕಬ್ಬಿಗರಂತೆ ಕೊಪ್ಪಲತೋಟರು ಹಸ್ತಪ್ರತಿಯ ಕಾಲದವರಲ್ಲ. ಗಣಕಯಂತ್ರ, ಮುದ್ರಣವ್ಯವಸ್ಥೆ, ಅಂತರ್ಜಾಲಮಾಧ್ಯಮ ಮುಂತಾದ ಸೌಕರ್ಯಗಳನ್ನು ಪಡೆದವರು. ಈ ಅನುಕೂಲತೆಗಳೇ ಶ್ರಮವಿಲ್ಲದೆ ಕುಕಾವ್ಯಗಳನ್ನು ಬರೆಬರೆದು ರಸಿಕರ ಮೇಲೆ ಪ್ರಹರಣಗಳಂತೆ ಪ್ರಯೋಗಿಸುವ ಕುಕವಿಗಳ ಠೌಳಿಯನ್ನು ಹೆಚ್ಚಿಸಿವೆಯೆಂದು ಅವರ ಸಹೇತುಕ ನಿಶ್ಚಯ. ಅಂಗೈಯಲ್ಲಿ ಅಡಗುವ ಸೆಲ್ ಫೋನಿನ ಮೇಲೆ ಮೂರು ಲೋಕಗಳನ್ನೂ ಕಾಣಬಲ್ಲವರಿಗೆ ಮೈಬಗ್ಗಿಸಿ ಅಕ್ಕರಕ್ಕರಗಳನ್ನೂ ಹೆಕ್ಕಿಕೊಂಡು ಕಲಿಯುವ ಆಸನಸಿದ್ಧಿ, ಶ್ರದ್ಧಾಬುದ್ಧಿ ಎಲಿಂದ ಬಂದೀತು? ಎಂಬುದು ಅವರ ಕಳವಳ. ಹೀಗೆ ಹೊಸ ಭಾವನೆಗಳನ್ನು ಹಳೆಯ ಬಂಧಗಳಲ್ಲಿ ಚಿರಸ್ಮರಣೀಯವಾಗಿ ದಾಖಲಿಸುವ ಕಲೆ ಅಭಿಜಾತಕಾವ್ಯದ ಜೀವನಾಡಿ.
[1] ದಿಟವೇ, ಗಣೇಶ ಭಟ್ಟ ಕೊಪ್ಪಲತೋಟ ಅವರು ಸುದರ್ಶನ ಮುರಳೀಧರ ಅವರೊಡಗೂಡಿ ‘ಸಾಗರಘೋಷ’ ಎಂಬ ಚಂಪೂಶೈಲಿಯ ಬೃಹತ್ಕಾವ್ಯವನ್ನು ಈ ಮುನ್ನವೇ ರಚಿಸಿದ್ದಾರೆ. ಆದರೆ ಇದು ಇದೇ ಹೆಸರಿನ ತೆಲುಗುಕಾವ್ಯದ ಅನುವಾದ. ಮೂಲದ ಲೇಖಕರು ಸಹಸ್ರಾವಧಾನಿ ಡಾ|| ಗರಿಕಿಪಾಟಿ ನರಸಿಂಹರಾಯರು. ಹೀಗಾಗಿ ಅನುವಾದಗ್ರಂಥರೂಪದಲ್ಲಿಯೂ ಈ ಶತಮಾನದ ಮೊದಲ ಹಳಗನ್ನಡ ಕಾವ್ಯವನ್ನು ಹೊರತಂದ ಶ್ರೇಯಸ್ಸು ಗಣೇಶ ಭಟ್ಟರಿಗೆ ಸಲ್ಲುತ್ತದೆ.
To be continued.















































