ದಿನಾಂಕ ೧೦.೪.೨೦೨೬ರಂದು ಪರಮಪದವನ್ನು ಸೇರಿದ ಆದರಣೀಯ ನಾಡೋಜ ಎಸ್. ಆರ್. ರಾಮಸ್ವಾಮಿ ಅವರ ಜೊತೆಯಲ್ಲಿಯೇ ಒಂದೂವರೆ ಶತಮಾನದಷ್ಟು ನಿಡಿದಾದ ಭಾರತೀಯ ಸಾಂಸ್ಕೃತಿಕ ಸಾಕ್ಷಿದೀಪ ಆರಿಹೋಗಿದೆ ಎಂದರೆ ಅತಿಶಯದ ಮಾತಲ್ಲ. ತಮಗಿಂತ ಅರ್ಧಶತಮಾನಕ್ಕೂ ಹಿರಿಯರ ಜೊತೆಯಲ್ಲಿ ಹೆಜ್ಜೆ ಹಾಕುತ್ತಲೇ ತಮ್ಮ ಎಳವೆಯ ನಡಿಗೆಯನ್ನು ಕಲಿತ ರಾಮಸ್ವಾಮಿಯವರು ಮುಪ್ಪಿನಲ್ಲಿ ತಮಗಿಂತ ಅರುವತ್ತು ವರ್ಷಕ್ಕೂ ಕಿರಿಯರ ಹೆಗಲಿಗೆ ಹೆಗಲು ಜೋಡಿಸಿ ಕಾಲದ ಅಲೆಗಳ ಮೇಲೆ ಈಜಿ ಕೈವಲ್ಯ ಪಡೆದರು. ಅವರ ಗಮನಕ್ಕೆ ಬಾರದೆ ಯಾವ ಸಾರವತ್ತಾದ ಜಗದ್ವಿಷಯವೂ ಉಳಿಯಲಿಲ್ಲ. ಹೀಗೆ ಲೋಕದಿಂದ ಗಳಿಸಿದ ಎಲ್ಲ ಬಗೆಯ ತಿಳಿವು, ನಲವು, ಗೆಳೆತನಗಳನ್ನು ರಾಮಸ್ವಾಮಿಯವರು ಜಿಪುಣನ ಹಣದಂತೆ ತಮ್ಮೊಳಗೇ ಬೈತಿಟ್ಟುಕೊಳ್ಳದೆ, ಬೇಸಗೆಯ ಕಸಿಮಾವಿನ ಮರದಂತೆ ಹತ್ತು ದಿಕ್ಕಿನಿಂದ ಬಂದ ಹಸಿದವರಿಗೆಲ್ಲ ರಸಫಲಗಳಂತೆ ಹಂಚಿ ಹಿಗ್ಗಿದರು. ಹುಳಿಮಾವೇ ಬೇಕೆಂದವರಿಗೆ ಅದನ್ನೇ ಕೊಟ್ಟು ಬಾಳ ಬುತ್ತಿಯ ಮೊಸರನ್ನಕ್ಕೆ ಮಿಡಿ ಉಪ್ಪಿನಕಾಯಿ ಒದಗಿಸಿದರು. ಕಳಿತ ಹಣ್ಣೇ ಬೇಕೆಂದವರಿಗೆ ದೋರೆಗಾಯನ್ನು ಜತನದಿಂದ ಮಾಗಿಸಿ ಹೆಚ್ಚಿಕೊಟ್ಟು ಹಸಿವೆ ಹಿಂಗಿಸಿದರು. ಹಣ್ಣು-ಕಾಯಿಗಳ ಹಂಗೇಕೆಂದವರಿಗೆ ತೋರಣಕ್ಕೆ ಒದಗಿಬರುವ ಚಿಗುರೆಲೆಯಾದರು. ಒಟ್ಟಿನಲ್ಲಿ ಕಲಿತವರಿಗೂ ಕಲಿಯದವರಿಗೂ ಕಲ್ಪವೃಕ್ಷದಂತೆ ತಂಪುಹೊತ್ತಿನಲ್ಲಿ ನೆನೆಯಬೇಕಾದ ಅಸ್ತಿತ್ವವೇ ಆದರು.
ಇಂಥ ಮಹನೀಯರು ತಮ್ಮ ಮೈಯನ್ನು ಮಣ್ಣಿಗೆ ಮುಡಿಪಿಟ್ಟಾಗ ಇವರಿಗೆ ಬಾಳ ಗುರುವಾಗಿದ್ದ ಡಿ.ವಿ.ಜಿ. ಅವರನ್ನೇ ಮತ್ತೊಮ್ಮೆ ಕಳೆದುಕೊಂಡ ಅಳಲಿನ ಅನುಭವ ಎಷ್ಟೋ ಮಂದಿಗೆ ಆದದ್ದು ಸಹಜ. ಪತ್ರಿಕಾಕರ್ತನೆಂಬ ಸಾಮಾನ್ಯ ಅಭಿಧಾನದ ಅಡಿಯಲ್ಲಿ ರಾಮಸ್ವಾಮಿಯವರು ಸಾಹಿತ್ಯಕ, ಸಾಮಾಜಿಕ, ರಾಜನೈತಿಕ, ಸಾಂಸ್ಕೃತಿಕ, ಶೈಕ್ಷಣಿಕ ಮತ್ತು ಸಾಂಸ್ಥಿಕ ವಲಯಗಳಲ್ಲಿ ಏರಿದ ಎತ್ತರ ಮತ್ತು ಮುಟ್ಟಿದ ಬಿತ್ತರಗಳನ್ನು ಕಂಡಾಗ, ಡಿ.ವಿ.ಜಿ. ಅವರ ಮರುವುಟ್ಟೇ ಇವರೆಂದು ತೋರಿದರೆ ಅತಿಶಯವಲ್ಲ. ಹಾಗೆಂದು ರಾಮಸ್ವಾಮಿಯವರು ತಮ್ಮ ಅಸಾಮಾನ್ಯ ಗುರುವಿನ ಸಾಮಾನ್ಯ ಛಾಯೆಯಲ್ಲ. ಇವರದಾದ ಬಣ್ಣಬಣ್ಣಗಳ ಬೆಳಕು ಬಗೆಯಾಗಸದಲ್ಲಿ ಮಳೆಬಿಲ್ಲಾಗಿ ಹೊಳೆಯುತ್ತಲೇ ಇತ್ತು. ಇದಕ್ಕೆ ಸಾಕ್ಷಿ ಅವರು ಬರೆದ ಸಾವಿರಕ್ಕೂ ಮಿಕ್ಕ ಲೇಖನಗಳು, ಅರುವತ್ತರ ಅಂಚನ್ನು ದಾಟಿದ ಗ್ರಂಥಗಳು. ಇವೂ ಕೇವಲ ಒಂದು ಪಾದ ಮಾತ್ರ. ಮಿಕ್ಕ ಮೂರು ಪಾದಗಳಷ್ಟು ವ್ಯಾಪ್ತಿ ಸ್ವದೇಶೀ ಆಂದೋಲನ, ಪರಿಸರಜಾಗರಣ ಮತ್ತು ಸಾಂಸ್ಕೃತಿಕ ಪುನರುತ್ಥಾನಗಳಲ್ಲಿ ಅಡಗಿದೆ. ಇವನ್ನೂ ಮೀರಿ ನಿಲ್ಲುವಂಥದ್ದು ರಾಮಸ್ವಾಮಿಯವರು ತೊಡಗಿಸಿಕೊಂಡ ಸಂಸ್ಥೆಗಳ ನಿರ್ಮಾಣ-ಅಭ್ಯುದಯಗಳ ಸಂಗತಿ. ಹೊಸ ಹೊಸ ಸಂಸ್ಥೆಗಳನ್ನು ಕಟ್ಟುವ ಉತ್ಸಾಹ ಹೆಚ್ಚಿನವರದು. ಆದರೆ ಇದ್ದ ಸಂಸ್ಥೆಗಳನ್ನು ಉಳಿಸಿಕೊಂಡು, ಉಳಿಸಿಕೊಂಡವನ್ನು ಊರ್ಜಿತಗೊಳಿಸಿಕೊಂಡು ಅವಕ್ಕೆ ಅವೇ ಮಾದರಿಯಾಗಿ ನಿಲ್ಲಬಲ್ಲಂತೆ ರೂಪಿಸುವ ಕಸುವು ಎಲ್ಲಿಯೋ ಕೆಲವರದು. ಇಂಥ ಕೆಲವರಲ್ಲಿ ಯಾರೋ ಒಬ್ಬಿಬ್ಬರು ಮಾತ್ರ ಸ್ಥಾವರ ಸಂಸ್ಥೆಗಳ ಮೋಹಗಳಲ್ಲಿ ಕಳೆದುಹೋಗುವುದಿಲ್ಲ. ಈ ಒಬ್ಬಿಬ್ಬರಲ್ಲಿ ಎದ್ದುಕಾಣುವಂಥವರು ರಾಮಸ್ವಾಮಿಯವರು.
ಇದಿಷ್ಟೂ ಒಂದು ತೂಕವಾದರೆ, ವ್ಯಕ್ತಿಯಾಗಿಯೇ ಅವರದು ಮತ್ತೊಂದು ತೂಕ. ಅದು ರುಕ್ಮಿಣಿ ತುಲಾಭಾರದಲ್ಲಿ ತಂದಿರಿಸಿದ ತುಳಸೀದಳದಂತೆ ಪವಿತ್ರ, ಅನೂಹ್ಯ. ರಾಮಸ್ವಾಮಿಯವರ ಈ ಆಯಾಮವನ್ನು ಅವರೊಡನೆ ನಡೆದಾಡಿ, ನುಡಿದಾಡಿ, ದುಡಿದ ಒಡನಾಡಿಗಳಷ್ಟೇ ಬಲ್ಲರು. ಈ ಸತ್ತ್ವವನ್ನು ಎಷ್ಟು ಹೇಳಿದರೂ ತೀರದು. ಆದರೆ ಹಾಗೆ ಹೇಳಿದರೂ ಹೊಸಬರಿಗೆ ಅರಿವಾಗದು. ಅತ್ತರಿನ ಪರಿಮಳದಲ್ಲಿ ಹೂವಿನ ಆಕಾರ-ಸೌಕುಮಾರ್ಯಗಳನ್ನು ಕಾಣಿಸುವುದಾದರೂ ಹೇಗೆ? ರಾಮಸ್ವಾಮಿಯವರ ಈ ವ್ಯಕ್ತಿತ್ವವನ್ನು ಅನುಭವಿಸಿದವರಿಗೆ ಅವರ ಅವಸಾನ ತುಂಬಲಾಗದ ನಷ್ಟ. “ತುಂಬಲಾಗದ ನಷ್ಟ” ಎಂಬ ಈ ಸವಕಲು ನಾಣ್ಯಕ್ಕೂ ಕಾರ್ಷಾಪಣದ ಬೆಲೆಯನ್ನು ತುಂಬಿಕೊಡಬಲ್ಲ ಶಕ್ತಿ ಬರುವುದು ಇಂಥ ಸಂದರ್ಭಗಳಲ್ಲಿಯೇ. “ಪ್ರೇಕ್ಷಾ ಪ್ರತಿಷ್ಠಾನ” ಕಳೆದುಕೊಂಡಿರುವುದು ಇಂಥ ಮಾರ್ಗದರ್ಶಕ ಮಹನೀಯರನ್ನು. ಈ ನಷ್ಟವನ್ನು ತುಂಬಿಕೊಡಬಲ್ಲ ಕಸುವನ್ನು ರಾಮಸ್ವಾಮಿಯವರ ಪುಣ್ಯಸ್ಮೃತಿಯೇ ನೀಡಬೇಕು.
“ಪ್ರೇಕ್ಷಾ ಪ್ರತಿಷ್ಠಾನ” ಹುಟ್ಟುವುದಕ್ಕೂ ಹಲವು ವರ್ಷಗಳ ಮುನ್ನವೇ ಇದರ ಕನಸನ್ನು ಕಂಡ ಗೆಳೆಯರಿಗೆ ರಾಮಸ್ವಾಮಿಯವರ ಪ್ರೀತಿ-ವಿಶ್ವಾಸಗಳು ದಕ್ಕಿದ್ದವು. ಹೀಗಾಗಿ ಇದಕ್ಕೆ ರಾಮಸ್ವಾಮಿಯವರ ಹರಕೆ ಅನಾದಿಕಾಲದಿಂದ ಇತ್ತೆಂದರೆ ತಪ್ಪಲ್ಲ. ಇದರ ವಿಶ್ವಸ್ತಮಂಡಲಿಯ ಪ್ರತಿಯೊಬ್ಬ ಸದಸ್ಯರಿಗೂ ಅವರು ಆಪ್ತರು, ಮಾರ್ಗದರ್ಶಕ ಮಂಡಲಿಯ ಹಿರಿಯರಿಗೆಲ್ಲ ಆದರಣೀಯರು, ಸಂಪಾದಕವರ್ಗಕ್ಕೆಲ್ಲ ಆಚಾರ್ಯೋತ್ತಮರು. “ಪ್ರೇಕ್ಷಾ ಪ್ರತಿಷ್ಠಾನ”ದ ಮೊತ್ತಮೊದಲ ಕಾರ್ಯಕ್ರಮದಿಂದಲೂ ರಾಮಸ್ವಾಮಿಯವರ ಉಪಸ್ಥಿತಿ, ಉತ್ತೇಜನ ದಕ್ಕಿದ್ದೊಂದು ಭಾಗ್ಯ. ಪ್ರಾಯಶಃ ಅವರ ಅನುಪಸ್ಥಿತಿಯಲ್ಲಿ ಇದರ ಯಾವೊಂದು ಕಾರ್ಯಕ್ರಮವೂ ನಡೆಯಲಿಲ್ಲ. ಶಾರೀರಿಕವಾಗಿ ಎಷ್ಟೇ ಕಷ್ಟ ಇದ್ದರೂ ರಾಮಸ್ವಾಮಿಯವರು ಸಭೆಗಳಿಗೆ ಬರುತ್ತಿದ್ದರು; ಗ್ರಂಥಲೋಕಾರ್ಪಣೆ, ಅಧ್ಯಕ್ಷತೆ, ಶುಭಾಶಂಸನೆ ಮುಂತಾದ ವಿಹಿತ ಕಾರ್ಯಗಳನ್ನು ಅನ್ಯಾದೃಶವಾಗಿ ನಡಸಿಕೊಡುತ್ತಿದ್ದರು. ಅಷ್ಟೇಕೆ, ಅವರ ಉಪಸ್ಥಿತಿಯ ಮಾಧುರ್ಯವನ್ನು ಪ್ರತಿಯೊಬ್ಬರಿಗೂ ಸದ್ದಿಲ್ಲದೆ ಮುಟ್ಟಿಸುತ್ತಿದ್ದರು. ಇಂಥ ಕಾರ್ಯಕ್ರಮಗಳಿಗೆಲ್ಲ ಗೋಖಲೆ ಸಾರ್ವಜನಿಕ ವಿಚಾರ ಸಂಸ್ಥೆಯ ಉದಾರ ಆಶ್ರಯವನ್ನು ಧಾರಾಳವಾಗಿ ಕಲ್ಪಿಸಿಕೊಡುತ್ತಿದ್ದರು. ಹೀಗಾಗಿ ಕಾರ್ಯಕರ್ತರಿಗೆ ಕಾರ್ಯಭಾರದ ಅರಿವೇ ಆಗುತ್ತಿರಲಿಲ್ಲ.
ಪುಸ್ತಕಲೋಕಾರ್ಪಣೆ, ದಿನದರ್ಶಿಕೆಯ ಆವಿಷ್ಕರಣ, ಸಮಾರಂಭ ಮುಂತಾದುವೆಲ್ಲ ಕಡೆಯ ಹಂತದ ಕೆಲಸಗಳು. ರಾಮಸ್ವಾಮಿಯವರು ಈ ಬಗೆಯ “ಕುಂಭಾಭಿಷೇಕ”ದ ಕಾರ್ಯಕ್ರಮಕ್ಕಷ್ಟೇ ಸೀಮಿತವಾಗುತ್ತಿರಲಿಲ್ಲ. ಅವರ ಪಾತ್ರ ಗುದ್ದಲಿ ಪೂಜೆಯಿಂದ ಮೊದಲಾಗುತ್ತಿತ್ತು. ಹೀಗಲ್ಲವಾದರೆ ಡಿ.ವಿ.ಜಿ. ಅವರ “ಜ್ಞಾಪಕಚಿತ್ರಶಾಲೆ”, “ಜೀವನಧರ್ಮಯೋಗ” ಮುಂತಾದ ಮಹಾಕೃತಿಗಳ ಅನುವಾದಗಳನ್ನು ಮಾಡಲು ಬೇಕಾದ ಅಧಿಕೃತ ಸಮ್ಮತಿ, ಸಂಪನ್ಮೂಲ ಮತ್ತು ಮಾರ್ಗದರ್ಶನಗಳು “ಪ್ರೇಕ್ಷಾ ಪ್ರತಿಷ್ಠಾನ”ದ ಕೈಗೆ ದಕ್ಕುತ್ತಿದ್ದುದಾದರೂ ಹೇಗೆ? ರಾಮಸ್ವಾಮಿಯವರು ಇಂಥ ಗ್ರಂಥಗಳ ಆಂಗ್ಲಾನುವಾದಗಳಿಗೆ ಅಮೂಲ್ಯವೂ ಅನನ್ಯವೂ ಆದ ಮುನ್ನುಡಿಗಳ ಕಲ್ಯಾಣತಿಲಕಗಳನ್ನು ಇರಿಸಿ ಹರಸಿದ್ದಾರೆ. “ಜೀವನಧರ್ಮಯೋಗ”ದ ಮುನ್ನುಡಿಯನ್ನು ಬರೆಯುವಾಗಲಂತೂ ಅವರ ಕಣ್ಣು-ಕೈಗಳೂ ಶಾರೀರಿಕ ಸ್ವಾಸ್ಥ್ಯವೂ ತೀರ ಹದಗೆಟ್ಟಿದ್ದವು. ಇಂತಿದ್ದರೂ ದಿನಕ್ಕೊಂದರಂತೆ ಇಪತ್ತನಾಲ್ಕು ಪುಟಗಳನ್ನು ಸ್ವಹಸ್ತದಲ್ಲಿ ಬರೆದುಕೊಟ್ಟರು! ಈ ಪ್ರಸ್ತಾವನೆಯ ಒಂದೊಂದು ಪದವೂ ಅಮೂಲ್ಯ, ಅರ್ಥಗರ್ಭಿತ. ಇದೇ ಬಗೆಯ ಅನುಗ್ರಹವನ್ನು ಅವರು ಎಂ. ಹಿರಿಯಣ್ಣನವರ “Indian Conception of Values” ಗ್ರಂಥದ ನವೀನ ಆವೃತ್ತಿಗೂ ಎ. ಆರ್. ಕೃಷ್ಣಶಾಸ್ತ್ರಿಗಳ “ವಚನಭಾರತ”ದ ಆಂಗ್ಲಾನುವಾದಕ್ಕೂ ಮಾಡಿದರು. ಇದಲ್ಲದೆ “ಪ್ರೇಕ್ಷಾ ಪ್ರತಿಷ್ಠಾನ” ಕೈಗೊಂಡ ಹತ್ತು ಹಲವು ಪ್ರಕಲ್ಪಗಳ ರೂಪ-ರೇಖೆಗಳನ್ನು ಪರಿಷ್ಕರಿಸಿಕೊಟ್ಟರು; ತೊಡಕು ಬಂದಲ್ಲೆಲ್ಲ ಗಂಟನ್ನು ಬಿಚ್ಚಿ ನೇರ್ಪುಗೊಳಿಸಿದರು. ತಮಗೆ ತೃಪ್ತಿ ಎನಿಸಿದಾಗಲೆಲ್ಲ ಕಣ್ಣರಳಿಸಿ, ನಗೆಮಿಂಚು ಹಾಯಿಸಿ, ಬೆನ್ನು ತಟ್ಟಿ, ಉಲ್ಲಾಸದಿಂದ ತೋಳು ಹಿಡಿದು ಅಲ್ಲಾಡಿಸಿ ಮೆಚ್ಚುಗೆಯ ಮೇಲುಹೊಳೆಯನ್ನು ಹರಿಸಿದರು. ಇದಕ್ಕಿಂತ ಮಿಗಿಲಾದ ಪ್ರಶಸ್ತಿ ಮತ್ತೇನಿದೆ? ಇಂಥ ಎಷ್ಟನ್ನೋ ಅವರು ನಿಃಸ್ಪೃಹವಾಗಿ ಮಾಡಿದರು. ಅವರ ಗ್ರಂಥವೊಂದರ ಆಂಗ್ಲಾನುವಾದಕ್ಕೆ “ಪ್ರೇಕ್ಷಾ ಪ್ರತಿಷ್ಠಾನ” ಗೌರವಧನವನ್ನು ಸಲ್ಲಿಸಲು ಮುಂದಾದಾಗ, ತಮ್ಮ ಅನನ್ಯಕಠೋರ ವಾತ್ಸಲ್ಯದಿಂದ “Don’t even think about it” ಎಂದು ಹೇಳಿ ಆ ಪ್ರಸ್ತಾವವನ್ನು ನಿರಾಕರಿಸಿದ್ದಲ್ಲದೆ ಹಕ್ಕುಗಳನ್ನೂ ಪ್ರತಿಷ್ಠಾನಕ್ಕೆ ಬಿಟ್ಟುಕೊಟ್ಟರು. “ಪ್ರೇಕ್ಷಾ” ಬಂಧುಗಳ ಜೊತೆ ರಾಮಸ್ವಾಮಿಯವರು ಅದೆಷ್ಟು ತಾದಾತ್ಮ್ಯವನ್ನು ಹೊಂದಿದ್ದರೆಂದರೆ, ತಮ್ಮ ಕುಟುಂಬದ ಸಮಾರಂಭವೊಂದರಲ್ಲಿ ಅಲ್ಲಿದ್ದ ಗಣ್ಯರಿಗೆ ಇಲ್ಲಿಯ ಸದಸ್ಯರನ್ನು ಪರಿಚಯಿಸುವಾಗ, “These are my distinguished colleagues” ಎಂದು ಹಿಗ್ಗಿನಿಂದ ತಮ್ಮ ತೋಳ್ತೆಕ್ಕೆಗೆ ತಂದುಕೊಂಡಿದ್ದರು. ಒಂದು ಸಂವತ್ಸರಚಕ್ರದಷ್ಟು ಕಾಲ ಸಾರ್ವಜನಿಕ ಜೀವನದಲ್ಲಿ ಚಂದನದಂತೆ ತೇಯ್ದುಕೊಂಡಿದ್ದ ರಾಮಸ್ವಾಮಿಯವರಿಗೆ ನಿನ್ನೆ-ಮೊನ್ನೆಯಷ್ಟೇ ಈ ದಿಕ್ಕಿನಲ್ಲಿ ಹೆಜ್ಜೆ ಹಾಕಿದ ಹುಡುಗರು ಸಹೋದ್ಯೋಗಿಗಳಾಗಿದ್ದರು!
ಇದೀಗ “ಪ್ರೇಕ್ಷಾ ಪ್ರತಿಷ್ಠಾನ”ಕ್ಕೆ ಹತ್ತನೆಯ ವರ್ಷದ ಹೊತ್ತು ಬಂದಿದೆ. ಆದರೆ ಎಸ್. ಎಲ್. ಭೈರಪ್ಪನವರಂಥ, ಎಸ್. ಆರ್. ರಾಮಸ್ವಾಮಿಯವರಂಥ ಮಾರ್ಗದರ್ಶಕರನ್ನು ಕಳೆದುಕೊಂಡ ಖೇದವೂ ಹೆಗಲನ್ನು ಹತ್ತಿದೆ. ಇಲ್ಲಿಯವರೆಗೆ ಈ ಸಂಸ್ಥೆ ಹೆಜ್ಜೆ ಇಡುವಲ್ಲಿ ಕೈಹಿಡಿದು ನಡಸಿ ಬೀಳದಂತೆ ನೋಡಿಕೊಂಡು ಚಪ್ಪಾಳೆ ತಟ್ಟಿ ಸಂಭ್ರಮಿಸಿದ ಹಿರಿಯರ ಹರಕೆ ಇನ್ನು ಮುಂದೆಯೂ ಇರುವುದೆಂಬ ಶ್ರದ್ಧೆಯಿಂದ ಈ ಶ್ರದ್ಧಾಂಜಲಿ ಸಮರ್ಪಿತವಾಗುತ್ತಿದೆ.
ರಾಮಸ್ವಾಮಿಯವರ ಅಗಲಿಕೆ “ಪ್ರೇಕ್ಷಾ ಪ್ರತಿಷ್ಠಾನ”ವನ್ನಲ್ಲದೆ ಮತ್ತೆಷ್ಟೋ ಸಂಸ್ಥೆಗಳನ್ನೂ ವ್ಯಕ್ತಿಗಳನ್ನೂ ದುಃಖದಲ್ಲಿ ದೂಡಿದೆ. ವಿಶೇಷತಃ ಅವರನ್ನು ಹೂವಿನಲ್ಲಿರಿಸಿ ನೋಡಿಕೊಂಡ (ಇದು ರಾಮಸ್ವಾಮಿಯವರದೇ ಮಾತು) ಅವರ ಕುಟುಂಬಸದಸ್ಯರ ಮತ್ತು ಆಪ್ತ ಬಂಧುಗಳ ಅಳಲು ಹೇಳತೀರದು. ಇವರೆಲ್ಲರಿಗೂ ಈ ಶೋಕವನ್ನು ತಾಳಿ ಬಾಳುವ ಶಕ್ತಿ ಬರಲೆಂದು ಬೇಡುತ್ತೇವೆ.















































