ಚಂಪೂಕಾವ್ಯಗಳಲ್ಲಿ ಆಗೀಗ ಕಾಣಸಿಗುವ ರಗಳೆ ಕೂಡ ಈ ಕೃತಿಯಲ್ಲಿ ರಂಗೋಲಿ ಹಾಕಿದೆ. ಇಲ್ಲಿಯ ಉತ್ಸಾಹರಗಳೆ ಮತ್ತು ಸಂತುಲಿತ ಮಧ್ಯಾವರ್ತ ಗತಿಯ ರಗಳೆಗಳು (೧.೪೭, ೧.೪೮) ಪಂಪನ ರಚನೆಯನ್ನು ನೆನಪಿಸುತ್ತವೆ. ಪ್ರಾಚೀನ ಕವಿಗಳಿಂದ ಸ್ಫೂರ್ತಿಯನ್ನು ಗಳಿಸಿದ ಹಾಗೆಯೇ ಆಧುನಿಕ ಕವಿವರ್ಯರಿಂದಲೂ ಕೊಪ್ಪಲತೋಟರು ಪ್ರೇರಣೆ ಪಡೆದಿದ್ದಾರೆ. ಉದಾ: ಪು.ತಿ.ನ. ಅವರ ‘ಮಲೆದೇಗುಲ’ದ ಸ್ಮರಣೀಯ ಸೂಕ್ತಿಯೊಂದು ಇಲ್ಲಿ ಮರುವುಟ್ಟನ್ನು ಗಳಿಸಿದೆ:
ಇಲ್ಲಿ ಪೊಡಮಟ್ಟವರ್ ಮತ್ತೆ ತಲೆಯನೆತ್ತರ್
ಇಲ್ಲಿ ಕೈಮುಗಿದವರ್ ಮತ್ತೆ ಕೈಗೊಳರ್ ತಾಂ |
ಇಲ್ಲಿ ಕಣ್ಮುಚ್ಚಿದರ್ ಮತ್ತೆ ಕಾಣದಾದರ್
ಇಲ್ಲದೇಂ ಗೆಯ್ದೊಡಂ ಮತ್ತೆ ಗೆಯ್ವುದಿಲ್ಲಂ || (೧.೩೧)
ತೆಲುಗಿನಲ್ಲಿ ಪ್ರಸಿದ್ಧವಾದ ‘ತೇಟಗೀತಿ’ ಎಂಬ ಕರ್ಷಣಜಾತಿಯ ಬಂಧದಲ್ಲಿ ಮೂಡಿದ ಈ ಪದ್ಯ ವಿರೋಧಾಭಾಸ ಅಲಂಕಾರಕ್ಕೆ ಸುಂದರ ನಿದರ್ಶನ. ಇಂಥ ಭಾವನೆಗಳನ್ನು ಸಂಸ್ಕೃತದ ಅಭಿಜಾತಕಾವ್ಯಗಳಲ್ಲಿಯೂ ಕಾಣಬಹುದು.
ಸ್ವಯಂ ಅವಧಾನಿಯಾದ ಕವಿ ತನ್ನ ಕಲೆಯ ಪ್ರಸ್ತಾವವನ್ನು ಸಂಗಂ ಕವಿಗಳ ಗೋಷ್ಠಿಯಲ್ಲಿ ತರದಿರುವುದಾದರೂ ಹೇಗೆ? ತಮಿಳಿನಲ್ಲಿಯೂ ಅವಧಾನಕಲೆ ಇತ್ತಷ್ಟೆ. ಇದನ್ನು ಬಣ್ಣಿಸುವ ಪ್ರೌಢಶೈಲಿಯ ಮತ್ತೇಭವಿಕ್ರೀಡಿತವೃತ್ತ ಮನನೀಯ:
ಶತಲೇಖಿನ್ಯವಧಾನಮಾಶುಕವಿತಾನಿರ್ಮಾಣದತ್ತಾಕ್ಷರ-
ಚುತ್ಯವರ್ಣಾತ್ಮಕಚಿತ್ರಪದ್ಯರಚನಾಚಾತುರ್ಯಯುಕ್ತಪ್ರಭಾ-
ವಿತಸಾಮಸ್ಯಕಪೂರಣಾದಿಬಹುವೈವಿಧ್ಯಂಗಳಿಂ ವಿದ್ಯೆಯಿಂ
ನುತಪಾಂಡ್ಯಾವನಿಪಾಲಸಂಘಸಭೆಯೇಂ ವೈದುಷ್ಯಸಂಪೂರಿತಂ || (೧.೩೮)
ಶತಾವಧಾನ, ಆಶುಕವಿತೆ, ಸಮಸ್ಯಾಪೂರಣ, ದತ್ತಾಕ್ಷರ-ಚ್ಯುತಾಕ್ಷರಗಳಂಥ ಚಿತ್ರಕವಿತೆ ಮುಂತಾದ ಹಲವು ಹೆಸರುಗಳನ್ನು ಛಂದೋವಿನ್ಯಾಸದಲ್ಲಿ ಅಳವಡಿಸಿರುವ ಕವಿಚಾತುರ್ಯ ಮೆಚ್ಚುವಂಥದ್ದು.
ಶ್ಲೇಷಸ್ಪರ್ಶವಿರುವ ಅರ್ಥಾಂತರನ್ಯಾಸಾಲಂಕಾರದಿಂದ ಸೊಗಯಿಸುವ ಇರುಳಿನ ವರ್ಣನೆ ಚೆಲುವಾಗಿದೆ:
ಕೆರಳುತೆ ಬಾಡಿರೆ ತಾವರೆ-
ಯರಳಲ್ ನೈದಿಲೆಗಳಿವನ ಬರವಂ ಕಾಣಲ್ |
ಪೆರೆ ರಾಜನಾದೊಡೇನಾರ್
ಪರಿಹರಿಸಲ್ ಬಲ್ಲರೆಲ್ಲರಾ ಚಿಂತೆಗಳಂ || (೧.೫೩)
ಇರುಳಲ್ಲಿ ತಾವರೆ ಬಾಡುತ್ತದೆ, ನೈದಿಲೆ ಅರಳುತ್ತದೆ. ಆಗ ತಂಗದಿರನಾದ ಚಂದ್ರನೇ ರಾಜ. ಇಂಥವನ ಆಳ್ವಿಕೆಯಲ್ಲಿಯೂ ಕೆಲವರಿಗೆ ದುಮ್ಮಾನ, ಮತ್ತೆ ಕೆಲವರಿಗೆ ಸುಮ್ಮಾನ ತಪ್ಪದು. ಯಾರ ಕಾಲದಲ್ಲಿ ತಾನೆ ಎಲ್ಲರಿಗೂ ನೆಮ್ಮದಿ ಸಾಧ್ಯ? ಈ ಮಾರ್ಮಿಕ ಸತ್ಯವಿಷ್ಟು ಕಿರಿದಾದ ಪದ್ಯದಲ್ಲಿ ಕಂಡರಣೆಗೊಂಡಿರುವುದು ನಿಜಕ್ಕೂ ಹಿರಿದಾದ ಸಿದ್ಧಿ.
ಒಂದೆಡೆ ಸುರತಾಂತ್ಯದ ಸಂತೋಷವನ್ನು ಕವಿ ವರ್ಣಿಸಿದ್ದಾರೆ. ಇದು ಸಾಮಾನ್ಯವಾಗಿ ಚಂಪೂಕಾವ್ಯಗಳಲ್ಲಿ ಕಾಣುವ ಅಗ್ಗದ ರತಿಯಲ್ಲ. ಇಲ್ಲಿರುವುದು ರತಿಭಾವವು ಶೃಂಗಾರವಾಗುವ ಹದ:
ತರುವಿಂದಂ ಪಕ್ವಮಾಗುತ್ತುರುಳ್ದಿರೆ ಫಲಮೇ ಸಂದ ಸಂತೃಪ್ತಭಾವಂ
ಸ್ಫುರಿಸಲ್ ಸತ್ಕಾವ್ಯಮೊಂದಂ ಪ್ರಸವಿಸೆ ಕವಿಗಂ ಸಂದ ಸಾಫಲ್ಯಭಾವಂ |
ಗಿರಿಯೊಂದಕ್ಕೇಱುತುಂ ಶೃಂಗದೊಳೆ ನೆಲಸಿ ವಿಶ್ರಾಂತಿಯಾಂತಿರ್ಪ ಭಾವಂ
ಸುರತಾಂತ್ಯಾನಂದಮುಂ ತೃಪ್ತಿಯುಮನಿತೊದವಲ್ಕಿರ್ವರೊಳ್ ದೀಪ್ತಭಾವಂ || (೧.೬೬)
ಇದು ದೇಹವೃತ್ತಿಗಳನ್ನು ದೂರದೆ ಚಿತ್ತವೃತ್ತಿಗಳನ್ನು ಲಕ್ಷಿಸಿ ಹವಣಿಸಿದ ಆನಂದದ ಚಿತ್ರಣ. ಇಂಥ ಕಲ್ಪನೆಗಳನ್ನು ಕನ್ನಡ ಸಾಹಿತ್ಯನವೋದಯದ ಕವಿಗಳಲ್ಲಿ ಕಾಣಬಹುದು. ಇದನ್ನು ಮತ್ತೆ ಹಳಗನ್ನಡಕ್ಕೆ ಬೆಸೆದ ಶ್ರೇಯಸ್ಸು ಕೊಪ್ಪಲತೋಟರದು. ಈ ಪದ್ಯದ ಪ್ರತಿಯೊಂದು ಪಾದದ ಕೊನೆಲ್ಲಿಯೂ ಬಂದಿರುವ ‘ಭಾವ’ಶಬ್ದ ರತಾಂತದ ಭವಕ್ಕಿಂತ ಮಿಗಿಲಾದ ಸ್ಥಿತಿಯನ್ನು ಸಮರ್ಥವಾಗಿ ವ್ಯಂಜಿಸಿದೆ. ಇದಕ್ಕೆ ಪೂರಕವಾಗುವಂತೆ ಮೊದಲ ಮೂರು ಪಾದಗಳಲ್ಲಿ ಬಳಕೆಯಾದ ದೃಷ್ಟಾಂತಗಳೂ ಗಮನಾರ್ಹ.
ದ್ವಿತೀಯಾಲೋಕದ ‘ಸೂರ್ಯಚಕ್ಷು’ವಿನಲ್ಲಿ ಮೊದಲಿಗೆ ಸುಪ್ರಭಾತವರ್ಣನೆ ಬಂದಿದೆ. ಇಲ್ಲಿ ಕಾಣಿಸಿಕೊಳ್ಳುವ ಕಲ್ಪನೆಗಳು ಅಭಿಜಾತಕವಿಗಳ ವಿಭಾವನಾಶಕ್ತಿಗೆ ಸಮರ್ಥ ನಿದರ್ಶನಗಳು:
ಕಂತುಪಿತಂ ತಳೆದಿರ್ದ ಸ್ಯ-
ಮಂತಕಮಣಿಯೇ ಸಮುದ್ರದೊಳ್ ತೇಲುತ್ತುಂ |
ಬಂತೇನೆಂಬಂತಾಗಸ-
ಕಂ ತರಣಿಯೆ ಕೆಂಪಿನಿಂದೆ ಪರಿಯುತ್ತಿರ್ದಂ ||
ಸರೋಜದೊಳ್ ಸಂಜೆಯೊಳೆಂತೊ ಚೌರ್ಯದಿಂ
ಮರಂದಮಂ ಕೊಳ್ಳುತೆ ಬಂದಿಯಾಗಿರಲ್ |
ದ್ವಿರೇಫಬೃಂದಂ ಬಿಡಿಸಲ್ಕೆ ಮಿತ್ರನೇ
ಸ್ವರೋಚಿಯೊಳ್ ಪೊನ್ಗಳನೀಯುತಿರ್ಪನೇಂ ||
ಬುವಿಯೊಳ್ ನಡೆದಿರ್ಪುವುತ್ಸವಂಗಳ್
ತವೆ ಮಾರಂ ಮಱುವುಟ್ಟನಾಂತನೆಂದೀ |
ಶಿವನೇ ತೆರೆದಿರ್ಪ ಬೆಂಕೆಗಣ್ಣೆಂ-
ಬವೊಲೀಗಳ್ ಸುಡುನೇಸಱಲ್ಲಿ ಕಂಡಂ ||
ಸ್ಮರಶರಹತಿಯಿಂದಂ ಮೂರ್ಚ್ಛೆವೋಗಿರ್ಪ ಲೋಕ-
ಕ್ಕರರೆ ಸೊಗದೊಳಾಗಳ್ ನಲ್ಮೆಯಿಂದೆಳ್ಚರಿಪ್ಪಂ |
ಕರತಲಮೃದುಚಂಚತ್ಸ್ಪರ್ಶಮಂ ವರ್ಷಿಸುತ್ತುಂ
ಕರುಣೆಯ ಭಗವಂತಂ ಶ್ರೀಮದಾದಿತ್ಯದೇವಂ || (೨.೩-೬)
ಈ ಪದ್ಯಗಳಲ್ಲಿ ಎದ್ದುತೋರುವಂಥದ್ದು ಛಂದೋವೈವಿಧ್ಯ. ಪ್ರತಿಯೊಂದು ಪದ್ಯವೂ ಸುಂದರ ಅರ್ಥಾಲಂಕಾರಗಳಿಂದ ಕೂಡಿದೆ. ಮೊದಲನೆಯ ಕಂದಪದ್ಯದಲ್ಲಿ ಕೃಷ್ಣನು ಧರಿಸಿದ ಸ್ಯಮಂತಕಮಣಿಯೇ ಸಮುದ್ರದಲ್ಲಿ ತೇಲಿಬರುವಂತೆ ಕಡಲ ಮಡಿಲಿನಿಂದ ರವಿಬಿಂಬ ಹೊಮ್ಮುತ್ತಿದೆ ಎಂಬ ಉತ್ಪ್ರೇಕ್ಷೆಯಿದೆ. ಕೃಷ್ಣಾವಸಾನದ ಬಳಿಕ ದ್ವಾರಕೆ ಶರಧಿಯಲ್ಲಿ ಮುಳುಗಿತಷ್ಟೆ. ಆಗ ಸ್ಯಮಂತಕವೂ ನೀರುಪಾಲಾಗಿರಬಹುದೆಂಬ ಊಹೆಯ ಹಿನ್ನೆಲೆಯಲ್ಲಿ ಪ್ರಕೃತ ಕಲ್ಪನೆ ಮತ್ತಷ್ಟು ಚೆಲುವಾಗಿದೆ. ಸಂಜೆ ಕಮಲಗಳೊಳಗೆ ಸೆರೆಯಾಗಿದ್ದ ದುಂಬಿಗಳನ್ನು ಗೆಳೆಯ ಸೂರ್ಯ ತನ್ನ ಕಿರಣಗಳೆಂಬ ಹೊನ್ನನ್ನು ತೆತ್ತು ಬಿಡಿಸಿಕೊಳ್ಳುವನು ಎಂಬ ಹೇತೂತ್ಪ್ರೇಕ್ಷೆಯನ್ನು ಒಳಗೊಂಡ ಎರಡನೆಯ ಪದ್ಯ ಕನ್ನಡದಲ್ಲಿ ವಿರಳವಾದ ವಂಶಸ್ಥವೃತ್ತದಲ್ಲಿದೆ. ಸೂರ್ಯನ ವಾಚಕವಾಗಿ ಇಲ್ಲಿ ಬಳಕೆಯಾಗಿರುವ ‘ಮಿತ್ರ’ಶಬ್ದ ಗೆಳೆಯ ಎಂಬ ಅರ್ಥವನ್ನೂ ಒಳಗೊಂಡಿರುವುದು ಹೆಚ್ಚಿನ ಸ್ವಾರಸ್ಯಕ್ಕೆ ಕಾರಣವಾಗಿದೆ. ಮೊದಲನೆಯ ಆಲೋಕದ ಕೊನೆಗೆ ಬಂದ ರತಿಯ ಹಿನ್ನೆಲೆಯಲ್ಲಿ ಇಲ್ಲಿಯ ಮೂರನೆಯ ಪದ್ಯ ಮತ್ತಷ್ಟು ಅರ್ಥಪೂರ್ಣ. ಲೋಕದಲ್ಲಿ ಮೆರೆಯುತ್ತಿರುವ ಮದನೋತ್ಸವವನ್ನು ಕಂಡು ತಾನು ಸುಟ್ಟ ಮಾರನು ಮತ್ತೆ ಮೆಯ್ವೆತ್ತು ಬಂದನೆಂಬ ಕೋಪದಿಂದ ಶಿವನೇ ಹಣೆಗಣ್ಣನ್ನು ತೆರೆದಂತೆ ಸೂರ್ಯೋದಯವಾಯಿತೆಂಬ ಉತ್ಪ್ರೇಕ್ಷೆ ಹೃದ್ಯವಾಗಿದೆ. ಈ ಪದ್ಯ ಔಪಚ್ಛಂದಸಿಕ ಎಂಬ ಅರ್ಧಸಮವೃತ್ತದಲ್ಲಿರುವುದು ಗಮನಾರ್ಹ. ಕಡೆಯಲ್ಲಿ ಬರುವ ಮಾಲಿನೀವೃತ್ತ ಅತಿಶಯೋಕ್ತಿಯನ್ನು ಒಳಗೊಂಡಿದೆ. ಅನಂಗನ ಬಾಣಗಳಿಂದ ಮೂರ್ಚ್ಛಿತವಾಗಿರುವ ಲೋಕವನ್ನು ಬಾಲಭಾಸ್ಕರ ತನ್ನ ಮೃದುಕರಗಳಿಂದ ಉಜ್ಜೀವಿಸುತ್ತಿರುವನೆಂಬ ಇಲ್ಲಿಯ ಕಲ್ಪನೆ ಮನೋಹರ. ಹೀಗೆ ಈ ಕಾವ್ಯದಲ್ಲಿ ಹೆಚ್ಚಿನ ಪದ್ಯಗಳೆಲ್ಲ ಸಾಲಂಕೃತಗಳೇ.
ಸಂವಾದಗಳನ್ನು ಮೈದುಂಬಿಸಿಕೊಂಡ ಪದ್ಯಗಳ ನಾಟಕೀಯತೆ ಅತಿಶಯ. ಇಂಥವು ಹೆಚ್ಚಿನ ಕಾವ್ಯಗಳಲ್ಲಿ ಕಾಣಸಿಗುವುದಿಲ್ಲ. ಅಂಥ ಒಂದು ರಚನೆ ಹೀಗಿದೆ:
“ನೃಪಶಾರ್ದೂಲ! ಪರಾವನೀಪತಿಕರೀಂದ್ರಾಂತ್ಯಕ್ಕೆ ಚಿಂತಾಕುಲಂ
ತಪಿಸಿರ್ಪಯ್” “ದಿಟಮಲ್ತು ವೈರಿನಿವಹಂ ಸ್ನೇಹಾದರಾನಂದದಿಂ |
ಸ್ವಪದಸ್ಥಂ ಸಲಲಿಂತು ಚಿಂತೆಯೆನಗೇಂ” “ಕ್ಷಂತವ್ಯ ನಾಂ ಹೇ ಪ್ರಭೋ
ಕೃಪೆಯಿಂ ಲಾಲಿಪುದೆಮ್ಮನುಂ ಕವಿಗಳೊಳ್ ಬಾಲೋಕ್ತಿಯೆಂಬಂದದಿಂ” || (೨.೧೭)
ಇಲ್ಲಿರುವುದು ಕವಿ ಮತ್ತು ರಾಜನ ನಡುವೆ ನಡೆದ ಸಾಮಾನ್ಯ ಸಂವಾದ. ಆದರೆ ಅದನ್ನು ಛಂದೋಬಂಧದೊಳಗೆ ಅಡಗಿರಿಸಿರುವುದು ವಿಶೇಷ.
ಧರ್ಮಿಯ ಬಡತನವನ್ನು ಅವನ ಪತ್ನಿಯೇ ಹೀಗೆ ಬಣ್ಣಿಸಿ ಬಿಸುಸುಯ್ಯುತ್ತಾಳೆ:
ಬೋನದ ಸಟ್ಟುಗಮದೊ ಕಾಣ್
ದೀನತೆಯಿಂ ಗೆಜ್ಜಲಿಂಗೆ ಭೋಜನಮಕ್ಕುಂ |
ಮಾನಕ್ಕಿಂ ಪ್ರಾಣಂಗಳ್
ತಾನೇ ಪಿರಿದಲ್ತೆ ಭಾಗ್ಯಮಿಂದೇ ಬರ್ಕುಂ || (೨.೪೦)
ಧರ್ಮಿಗೆ ಲೋಹದ ಸೌಟುಗಳನ್ನು ಕೊಳ್ಳುವಷ್ಟು ಅನುಕೂಲತೆಯಿಲ್ಲ. ಹೀಗಾಗಿ ಮರದ ಸಟ್ಟುಗವೇ ಗತಿ. ಆದರೆ ಇದೀಗ ಅದೂ ಗೆದ್ದಲಿಗೆ ತುತ್ತಾಗುವಂತಾಗಿದೆ! ಮರದಿಂದ ಮಾಡಿದ ಯಾವುದೇ ವಸ್ತು ಬಳಕೆಯಿಲ್ಲದೆ ಮಣ್ಣಿನ ಮನೆಯಲ್ಲಿ ಬಿದ್ದಿದ್ದರೆ ಅದಕ್ಕೆ ಹತ್ತುವುದು ಗೆದ್ದಲೇ ತಾನೆ! ಇಂಥ ದುಃಸ್ಥಿತಿ ಧರ್ಮಿಯದು. ಇದನ್ನು ಕವಿಯ ಕಾಣ್ಕೆ ಗಮನಿಸಿದೆ.
ಕೊಪ್ಪಲತೋಟರ ಸ್ವಭಾವದಲ್ಲಿಯೇ ಹಾಸ್ಯಪ್ರಜ್ಞೆಯಿದೆ. ಅದನ್ನು ಈ ಕಾವ್ಯದಲ್ಲಿ ಸೊಗಸಾಗಿ ಬಳಸಿಕೊಂಡಿದ್ದಾರೆ. “ಸುಂದರ ಕವಿತೆಗೆ ಸಾವಿರ ಹೊನ್ನು” ಎಂಬ ಡಂಗುರವನ್ನು ಕೇಳಿ ಬಾಯಲ್ಲಿ ನೀರೂರಿಸಿಕೊಂಡ ಧರ್ಮಿ ದೇಗುಲದ ಮಂಟಪವೊಂದರಲ್ಲಿ ಕುಳಿತು ಹೀಗೆ ಚಪ್ಪರಿಸಿಕೊಳ್ಳುತ್ತಿದ್ದನಂತೆ:
ಸಾಸಿರ ಪೊನ್ ಸಾಸಿರ ಪೊನ್
ಸಾಸಿರ ಪೊನ್ನಾರ್ಗೆ ದೊರೆವುದೋ ಹೇ ಶಿವನೇ! |
ಸಾಸಿರ ಪೊನ್ ಸಾಸಿರ ಪೊನ್
ಸಾಸಿರ ಪೊನ್ನೆನಗೆ ಸಿಗದೆ ಕರುಣಾಮಯಿಯೇ! || (೨.೫೬)
ಈ ಕಂದಪದ್ಯದಲ್ಲಿರುವ ವ್ಯಂಗ್ಯ ಮಾರ್ಮಿಕ. ಧರ್ಮಿ ಅದೆಷ್ಟು ಪ್ರಯತ್ನಿಸಿದರೂ ಇದಕ್ಕಿಂತ ಚೆಲುವಾದ ಪದ್ಯವನ್ನು ಬರೆಯಲಾರನೆಂಬ ಧ್ವನಿ ಇಲ್ಲಿದೆ. ಇದರ ಎರಡು ಪಾದಗಳು ಒಂದೇ ಆಗಿವೆ. ಮಿಕ್ಕೆರಡು ಪಾದಗಳ ಸಾಕಷ್ಟು ಭಾಗಗಳೂ ಸಮಾನವಾಗಿವೆ. ಇವಷ್ಟರಲ್ಲಿರುವುದೂ ಒಂದೇ ಶಬ್ದಗಳ ಗುಂಪು. ಯಾವೊಂದು ಅರ್ಥಾಲಂಕಾರದ ಸ್ಪರ್ಶವೂ ಇಲ್ಲದೆ ಯಾವೊಂದು ಕಲ್ಪನೆಯ ಲೇಶವೂ ಇಲ್ಲದೆ ಬರಿಯ ಛಂದಸ್ಸು-ಪ್ರಾಸಗಳನ್ನು ತೂಗಿಸಿಕೊಂಡು ಹೋಗುವ ಈ ರಚನೆ ಧರ್ಮಿಗೆ ಅದಾವ ಅರ್ಥ-ಪರಮಾರ್ಥಗಳನ್ನು ತಂದೀತೆಂಬ ಕಟಕಿ ಅದ್ಭುತವಾಗಿದೆ!
ವರಕವಿಯಾಗಿ ಬಂದ ಶಿವನ ವರ್ಣನೆ ಹೀಗಿದೆ:
ಧರಿಸಿರ್ಪಾ ಸರ್ಪಮುಂ ಗಂಗೆಯುಮೆನಿತೊ ಭುಜಾಶ್ಲೇಷಮಾಲ್ಯಂಗಳಾಗಲ್
ಪೆರೆಯಾದಂ ಮೌಳಿರತ್ನಂ ಮಣಿಮಯಮೆನೆ ರುದ್ರಾಕ್ಷಿಯೇ ಹಾರಮಾಗಲ್ |
ಚಿರದಿಂ ಭಸ್ಮಂ ಸುಗಂಧಾತ್ಮಕಮೆನೆ ಪಣೆಗಣ್ ಚೆಂದದಿಂದಾಗಿರಲ್ ಕ-
ತ್ತುರಿಯೇ ಕಂಟಂ ತ್ರಿಶೂಲಂ ಬರೆಪದೆಲೆಗಳೇ ಭಕ್ತರರ್ಚಿಪ್ಪ ಬಿಲ್ವಂ || (೨.೫೭)
ಶಿವನು ತನ್ನ ಸರ್ಪ, ಗಂಗೆ, ಭಸ್ಮ, ರುದ್ರಾಕ್ಷ ಮುಂತಾದ ವಿಕಟಾಲಂಕಾರಗಳನ್ನು ಶ್ರೀಮಂತ ಕವಿಯ ಭೂಷಣರಾಸಿಕ್ಯಕ್ಕೆ ಅನುವಾಗುವಂತೆ ಪರಿವರ್ತಿಸಿಕೊಂಡ ಪರಿ ಇಲ್ಲಿದೆ. ಇದು ಸಾಮಾನ್ಯ ಕವಿಗಳಿಗೆಲ್ಲ ಎಟುಕಬಲ್ಲ ಕಲ್ಪನೆ. ಆದರೆ ಕಡೆಯಲ್ಲಿ ಬರುವ ಕಂಟ-ತಾಳಪತ್ರಗಳು ತ್ರಿಶೂಲ ಮತ್ತು ಭಕ್ತರು ಸಮರ್ಪಿಸಿದ ಬಿಲ್ವಪತ್ರಗಳೆಂಬ ಚಿತ್ರಣದಲ್ಲಿ ಒಳ್ಳೆಯ ಕವಿಗಷ್ಟೇ ದಕ್ಕುವ ಕಲ್ಪನೆಯಿದೆ. ವಿಶೇಷತಃ ಶಿವನಿಗೆ ಭಕ್ತರು ಒಪ್ಪಿಸಿದ ಬಿಲ್ವಪತ್ರಗಳು ತಾಳಪತ್ರಗಳಾಗುವುವು ಎಂಬ ಚಿತ್ರಣದಲ್ಲಿ ವರಕವಿಯೊಬ್ಬ ತಾಳಪತ್ರಗಳಲ್ಲಿ ಪದ್ಯಗಳನ್ನು ಬರೆಯುವಂತೆ ಮಹಾದೇವನು ಭಕ್ತರ ಭಾಗ್ಯಗಳನ್ನು ಅವರೇ ಅರ್ಪಿಸಿದ ಬಿಲ್ವಪತ್ರಗಳಲ್ಲಿ ಮೂಡಿಸುವನೆಂಬ ಧ್ವನಿಯಿದೆ. ಹೀಗೆ ಶಿವಭಕ್ತನಿಗೆ ಮಾತ್ರ ಸಿರಿ ದಕ್ಕುವುದೆಂಬ ಸೂಚನೆ ಮಾರ್ಮಿಕವಾಗಿ ಬಂದಿದೆ.
ಧರ್ಮಿಗೆ ಕವಿವೇಷದ ಶಿವನು ತನ್ನನ್ನು ಹೀಗೆ ಪರಿಚಯಿಸಿಕೊಳ್ಳುತ್ತಾನೆ:
ಎನ್ನ ಕೃತಿಗಳನಿನ್ನೆಗಂ ಪಂಡಿತರ್ ಮತ್ತೆ
ಪಾಮರರುಮೇಗಳುಂ ವಾಚಿಸುತ್ತುಂ |
ಪಲವು ವಿಧದಿಂದದಱ ಗೂಢಾರ್ಥಮಂ ಕಂಡು
ನಿರ್ನೆರಂ ತೋಷಮಾಂತಿರ್ಪರಲ್ತೇ |
ರೌದ್ರಾದ್ಭುತಂಗಳೇ ಮೆರೆದಿರ್ಪ ಕಥೆಗಳೊಳ್
ಸಕಲರಸಮುಂ ಪೊಣ್ಮುತಿರ್ಪುದೆಂಬರ್
ಕವಿಸಂಘದೊಳ್ ದಿವ್ಯಭವ್ಯಕೃತಿಯೆನುತಿರ-
ಲ್ಕಿತರಕವಿನಿಕರಮಾಶ್ರಯಿಪುದೆನ್ನಂ ||
ವಿದಿತಮಲ್ತೆ ಜಗದೊಳಾವಗಂ ಸರ್ವಮುಂ
ಮೊದಲಿಗಾಯ್ತು ದಕ್ಷಯಜ್ಞನಾಶಂ |
ಮದನದಹನಮೆಂಬ ಕೃತಿಗೆ ಕರ್ತೃವೆ ನೋಡೆ
ಪದಪಿನಿಂದೆ ಪಾರ್ವತೀಪರಿಣಯಂ || (೨.೬೭)
ಇದು ಕನ್ನಡದಲ್ಲಿ ಹೆಚ್ಚು ಪ್ರಾಚುರ್ಯ ಪಡೆಯದ ಸೀಸಪದ್ಯವೆಂಬ ಬಂಧದಲ್ಲಿದೆ. ತೆಲುಗಿನಲ್ಲಿದು ಸಂಪೂರ್ಣವಾಗಿ ಕರ್ಷಣಜಾತಿಗೆ ಸೇರಿದೆ. ಇಲ್ಲಿ ಕೊಪ್ಪಲತೋಟರು ಇದನ್ನು ಮಾತ್ರಾಗತಿಗೆ ಮಾರ್ಪಡಿಸಿಕೊಂಡಿದ್ದಾರೆ. ಆದರೆ ಕಡೆಯ ನಾಲ್ಕು ಸಾಲುಗಳಲ್ಲಿರುವ ಆಟವೆಲದಿ ರೂಪದ ಎತ್ತುಗೀತಿ ಮಾತ್ರಾ- ಮತ್ತು ಕರ್ಷಣ- ಜಾತಿಗಳೆರಡಕ್ಕೂ ಬದ್ಧವಾಗಿದೆ. ಇಂತಿದ್ದರೂ ಆದಿಪ್ರಾಸವಾಗಲಿ, ಯತಿಮೈತ್ರಿಯಾಗಲಿ ಪಾಲಿತವಾಗದಿರುವುದು ಗಮನಾರ್ಹ. ಇದಿಷ್ಟೂ ಛಂದಸ್ಸನ್ನು ಕುರಿತ ವಿವರವಾಯಿತು. ಮುಖ್ಯ ಸ್ವಾರಸ್ಯವಿರುವುದು ಇದರ ಹೂರಣದಲ್ಲಿ. ಸುಬೋಧವಾದ ರೀತಿಯಿಂದಲೇ ಶಿವನು ತಾನೊಬ್ಬ ಕವಿಯೆಂದು ಧರ್ಮಿಗೆ ಪರಿಚಯಿಸಿಕೊಳ್ಳುವಾಗಲೇ ತನ್ನ ನೈಜಸ್ವರೂಪ ಏನೆಂಬುದನ್ನೂ ಸೂಚಿಸಿರುವುದು ಕವಿಕೌಶಲದ ಫಲ. ಇದರ ಸ್ವಾರಸ್ಯ ಸ್ವಯಂವೇದ್ಯ, ಚರ್ವಣಾಸ್ಪದ. ವಿಶೇಷತಃ ಶಿವನ ಲೀಲೆಗಳೇ ಅವನು ಬರೆದ ಕಾವ್ಯಗಳೆಂಬ ಒಕ್ಕಣೆ ಹೃದಯಂಗಮವಾಗಿದೆ.
ಅಗ್ನಿಚಕ್ಷುವೆಂಬ ಮೂರನೆಯ ಆಲೋಕದಲ್ಲಿರುವ ಕೆಲವು ಪದ್ಯಗಳ ಸ್ವಾರಸ್ಯವನ್ನು ಪರಿಶೀಲಿಸೋಣ. ರಾಜಸಭೆಯಲ್ಲಿ ನತ್ಕೀರನ ಅಧಿಕ್ಷೇಪಗಳನ್ನು ಎದುರಿಸಲಾಗದೆ ಸುಂದರೇಶ್ವರನ ಮಂದಿರಕ್ಕೆ ಓಡೋಡಿ ಬಂದ ಧರ್ಮಿ ಕವಿವೇಷದ ಶಿವನಿಗೆ ತನ್ನ ಪಾಡನ್ನು ಹೀಗೆ ಬಣ್ಣಿಸುತ್ತಾನೆ:
ನಾಯ್ಗಳ ಪಾಡೆನಗಾಯ್ತಯ್
ಕಯ್ಗಂ ಬಂದಿರ್ಪ ತುತ್ತು ಬಾಯ್ಗೆಟುಕದವೊಲ್ |
ಮೆಯ್ಗಂ ದಂಡನೆಯಾಗದೆ
ಸುಯ್ಗಳೊಳೇದುತ್ತೆ ಬಂದುದೇ ಭಾಗ್ಯಮೆ ಪೇಳ್ || (೩.೧೮)
‘ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ’ ಎಂಬ ಲೋಕೋಕ್ತಿಯಿಂದ ಕಂಗೊಳಿಸಿದ ಈ ಸರಳ ಪದ್ಯ ಧರ್ಮಿಯ ಸ್ವಭಾವಕ್ಕೆ ತಕ್ಕಂತಿದ್ದು ಕರುಣ-ಹಾಸ್ಯಗಳನ್ನು ಉಕ್ಕಿಸುತ್ತಿದೆ.
ಕೊಪ್ಪಲತೋಟರ ಪದ್ಯಗಳಲ್ಲಿ ತೋರಿಕೊಳ್ಳುವ ಪ್ರಸಾದಗುಣ ಪ್ರಶಸ್ತವಾದುದು. ಇದನ್ನವರು ಸಮಸಂಸ್ಕೃತ ಮತ್ತು ಅಚ್ಚಗನ್ನಡಗಳ ಪ್ರಾಚುರ್ಯದಲ್ಲಿಯೂ ಕಾಯ್ದುಕೊಳ್ಳುವುದು ಒಂದು ವಿಶೇಷ. ಧರ್ಮಿಯ ಮಾತನ್ನು ಕೇಳಿ ಕಿಡಿಕಿಡಿಯಾದ ಶಿವನ ಅಚ್ಚಗನ್ನಡ ಪದ್ಯವೊಂದು ಹೀಗಿದೆ:
ನುಡಿಯಾತನ ಪೆಸರಂ ನಾಂ
ಸುಡುವೆಂ ನಡೆ ತೊಡೆವೆನವನನೆನ್ನಡಿಗಳೊಳಂ |
ಕೆಡೆದೊಡೆ ಬಿಡುವೆಂ ಕುಡಿಸುವೆ-
ನೊಡನೆಯೆ ನಿನಗೊಪ್ಪುವಂತೆ ಪಣಮಂ ದಿಟದಿಂ || (೩.೨೦)
ಸರಳವಾಗಿದ್ದರೂ ಓಜಸ್ವಿಯಾಗಿರುವ ಈ ಕಂದದ ಅಂದಕ್ಕೆ ಡ-ಕಾರಗಳ ಪ್ರಾಚುರ್ಯವೂ ಒಂದು ಕಾರಣ. ‘ಪಣ’ ಎಂಬ ಪದಕ್ಕೆ ಬಹುಮಾನದ ಮೀಸಲುಹೊನ್ನೆಂಬ ಅರ್ಥವಿದೆ. ಇದು ಸಂಸ್ಕೃತಮೂಲದ ಶಬ್ದ. ಆದರೆ ಹಣವೆಂಬ ಶಬ್ದದ ಹಳಗನ್ನಡರೂಪವಾಗಿ ಕಂಡಾಗ ಅಚ್ಚಗನ್ನಡವೇ ಆಗುತ್ತದೆ. ಹೀಗೆ ಅಚ್ಚಗನ್ನಡತನವನ್ನು ಕಾಪಿಟ್ಟುಕೊಂಡ ಕವಿಯ ಕೌಶಲ ಮೆಚ್ಚುವಂಥದ್ದು.















































