ಇನ್ನು ಸಂಸ್ಕೃತಪದಗಳೇ ಅಧಿಕವಾಗಿರುವ ಸಮಾಸಜಟಿಲ ವೃತ್ತವೊಂದನ್ನು ಕಾಣಬಹುದು:
ಎಲವೋ ಆವನೊ ಈತನಿಲ್ಲಿ ನುಡಿದಾ ಪದ್ಯಕ್ಕೆ ಕೆಟ್ಟಿರ್ಪುದೆಂ-
ದುಲಿದಿರ್ಪಂ ಗಡ ದೋಷಮೇಂ ಗಡ ಪದಂ ವಾಕ್ಯಂ ಸಮಸ್ತಾರ್ಥಮುಂ |
ಪ್ರಲಯಾಟೋಪನಿಮಗ್ನರುದ್ರಕೃತಢಕ್ಕಾನಾದಸಂಭೂತವ-
ರ್ಣಿಲಶಾಸ್ತ್ರಾನ್ವಿತಮಾಗಿರಲ್ಕದಟಿದೇಂ ಮಾತ್ಸರ್ಯಮೋ ಬಲ್ಪೊ ಪೇಳ್ || (೩.೨೮)
ಈ ಪದ್ಯ ಆಡುನುಡಿಯ ಧಾಟಿಯಲ್ಲಿ ಆರಂಭವಾಗಿ, ಎರಡನೆಯ ಪಾದಕ್ಕೆ ಬರುತ್ತಿದ್ದಂತೆಯೇ ಶಾಸ್ತ್ರೀಯ ಚರ್ಚೆಯ ರೀತಿಗೆ ತಿರುಗಿ, ಮೂರನೆಯ ಪಾದವಿಡೀ ಸಮಾಸಭೂಯಿಷ್ಠವಾಗಿ, ಅದು ನಾಲ್ಕನೆಯ ಪಾದಕ್ಕೂ ಚಾಚಿಕೊಂಡು, ಕಡೆಯಲ್ಲಿ ಮತ್ತೆ ಆಡುನುಡಿಯ ಜಾಡಿಗೆ ಸೇರಿಕೊಳ್ಳುವ ಪರಿ ಸೊಗಸಾಗಿದೆ. ತನ್ನ ಡಮರುಕನಾದದಿಂದ ವರ್ಣಸಮಾಮ್ನಾಯವನ್ನು ಮಾಡಿ ಮೂಕವಾಗಿದ್ದ ಜಗತ್ತಿಗೆ ಮಾತನ್ನಿತ್ತ ಮಹೇಶ್ವರ ಇದೀಗ ತನ್ನ ಮಾತಿನಲ್ಲಿ ತಪ್ಪನ್ನು ಹುಡುಕುವವರ ವಿಷಯದಲ್ಲಿ ಕನಲಿ ಕೋಲಾಹಲಿಸುವ ಭಾವವಿಲ್ಲಿ ಭವ್ಯವಾಗಿ ಮೂಡಿದೆ.
ಎಷ್ಟು ತಿಳಿಯಹೇಳಿದರೂ ಒಪ್ಪದ ನತ್ಕೀರನನ್ನು ಮುಕ್ಕಣ್ಣಿನಿಂದಲೇ ಎಚ್ಚರಿಸುವ ಶಿವನ ರೋಷವನ್ನೂ ಇದಕ್ಕೆ ಕೂಡ ಜಗ್ಗದೆ ತನ್ನ ಹಠಕ್ಕೇ ಕಟ್ಟುಬಿದ್ದ ನತ್ಕೀರನನ್ನೂ ಬಣ್ಣಿಸುವ ಪದ್ಯಗಳೆರಡು ಸೊಗಸಾಗಿವೆ:
ವಾರ್ಧಿಪ್ರಜ್ವಲದಂತರಂಗಗಹನೋದ್ದೀಪ್ತೌರ್ವಮಾಲಾಕುಲಂ
ವರ್ಧಿಪ್ಪಂದದೆ ವಕ್ತ್ರಮಾಗೆ ಶಿವನಾ ಬೆಚ್ಚಿರ್ದೊಡಂ ಭೂವಿಯೇ |
ಅರ್ಧೋನ್ಮೀಲಿತಫಾಲಲೋಚನಯುತಂ ಪಂಚಾಸ್ಯಕೋಪಾನ್ವಿತಂ
ದುರ್ಧೀಮಂತನನೀಕ್ಷಿಸಲ್ಕುಡುಗಿತಯ್ ಜಂಘಾಬಲಂ ಕೀರನಾ || (೩.೪೩)
ಏಱುವ ದನಿಯೊಳ್ ಪೇೞುತೆ
ತೋರಲ್ ಪಣೆಗಣ್ಣನೇಕೆ ಮೆಯ್ಗೆಲ್ಲಂ ಕಣ್ |
ಸಾರಿರಲೇಂ ಬೆದರ್ದಪೆನೇ
ಮಾರಾರಿಯೆ! ದೋಷಮೇಗಳುಂ ದೋಷಮೆ ದಲ್ || (೩.೪೪)
ಸಿಂಹದಂತೆ ಕೆರಳಿ, ವಡವಾಗ್ನಿಯಂತೆ ಭುಗಿಲಾಗಿ, ಫಾಲನೇತ್ರವನ್ನು ತೆರೆದ ಕಾಲರುದ್ರನನ್ನು ಕಂಡ ನತ್ಕೀರ ಕ್ಷಣಕಾಲ ಕಂಗೆಟ್ಟರೂ ಆ ಕೂಡಲೆ ಉದ್ದಂಡ ಸಮಾಸಗಳ ಹಂಗಿಲ್ಲದೆ ಬಿಡಿಬಿಡಿಯಾದ ಆಡುನುಡಿಯ ಬಡಿಗೆಯಿಂದ ಹರನ ಉರಿಗಣ್ಣನ್ನೇ ತಿವಿಯುವಂತೆ ಉತ್ತರಿಸುವುದು ವೀರರೌದ್ರಾದ್ಭುತರಸಗಳ ಉಕ್ಕಂದಕ್ಕೆ ತಕ್ಕುದೆನಿಸಿದೆ. ವಿಶೇಷತಃ “ನೀನು ಹಣೆಯಲ್ಲಿರುವ ಮೂರನೆಯ ಕಣ್ಣನ್ನು ತೆರೆಯುವುದಿರಲಿ, ಮೈಯೆಲ್ಲ ನೂರಾರು ಕಣ್ಣುಗಳನ್ನು ಮೂಡಿಸಿಕೊಂಡು ದುರುಗುಟ್ಟಿ ನೋಡಿದರೂ ತಪ್ಪು ತಪ್ಪೇ!” ಎಂಬ ಕೆಚ್ಚಿನ ಮಾತು ಯಾರನ್ನೂ ರಂಜಿಸದಿರದು. ಕಾವ್ಯವೊಂದರ ಗುಣದೋಷಮೀಮಾಂಸೆಗೆ ತೊಡಗುವಾಗ ಅದರ ಕರ್ತೃ ಹರನಾಗಲಿ, ನರನಾಗಲಿ, ಸುರನಾಗಲಿ, ಅಸುರನಾಗಲಿ - ವಿಮರ್ಶೆ ನಿಷ್ಪಾಕ್ಷಿಕವಾಗಿ ನಡೆಯಬೇಕೆಂಬ ನತ್ಕೀರನ ನಿಲವು ಎಂಥ ಮೌಲ್ಯಸಂಪನ್ನರಿಗೂ ಮಾದರಿಯಾಗಬಲ್ಲುದು. ಈ ಪ್ರಜ್ಞೆಯನ್ನು ಲೋಕಕ್ಕೆ ಸಾರುವುದೇ ಸುಂದರೇಶ್ವರನ ಸದ್ಯದ ಲೀಲೆ ಎಂಬುದೇ ಈ ಕಾವ್ಯದ ಪ್ರಬಂಧಧ್ವನಿ.
ಕೃತಿಯ ಕಡೆಯಲ್ಲಿ ಕವಿ ತನ್ನ ಸ್ವಭಾವವನ್ನೂ ಪ್ರಕೃತ ಕಾವ್ಯದ ಸ್ಫೂರ್ತಿಯನ್ನೂ ಪ್ರಾಮಾಣಿಕವಾಗಿ ಸಾರಿಕೊಂಡಿದ್ದಾರೆ:
ಆಟವೆಲದಿಯೊಡನೆ ಆಟವಾಡುತ್ತಿಂದು
ತೇಟಗೀತಿಯಲ್ಲಿ ತೇಲಿಕೊಂಡು |
ತೋಟನೆಂಬ ಕಬ್ಬದೋಂಟನೆಂ ಸರ್ವದಾ
ಚಾಟುಸೂಕ್ತಿಯುಲಿವ ಚತುರನಲ್ತೆ ||
ದ್ರಮಿಳಚಲನಚಿತ್ರಂ ಚಿತ್ತದೊಳ್ ಚಿತ್ರಮಾಗ-
ಲ್ಕಮಮ ಕಥೆಯಿದೆಂತೋ ಸುತ್ತುತಿರ್ದತ್ತು ನೋಡಲ್ |
ಕ್ರಮದೆ ಬರೆವ ವಾಂಛಾವೃಕ್ಷಮುಂ ವರ್ಧಿಸಲ್ ಮೇಣ್
ಸಮನಿಸೆ ಫಲಮಾಯ್ತಯ್ ಕಾವ್ಯಮಂ ಲೇಖಿಸಿರ್ಪೆಂ || (೩.೫೭, ೫೮)
ಇಲ್ಲಿ ಮೊದಲಿಗೆ ಬಂದಿರುವ ಆಟವೆಲದಿ ಪದ್ಯ ತೆಲುಗಿನ ಛಂದೋನಿಯಮಾನುಸಾರ ಯತಿಮೈತ್ರಿಯಿಂದ ಕೂಡಿರುವುದು ಗಮನಾರ್ಹ. ಇಲ್ಲಿಯ ಒಂದೊಂದು ಮಾತೂ ಕೊಪ್ಪಲತೋಟರ ವಿಷಯದಲ್ಲಿ ಸತ್ಯ; ಹೀಗಾಗಿ ಇದು ಅವರ ಸ್ವಭಾವದ್ಯೋತಕ. ಎರಡನೆಯ ಪದ್ಯದಲ್ಲಿ ಕವಿ ತಮ್ಮ ಈ ಕಾವ್ಯದ ಸ್ಫೂರ್ತಿಕೇಂದ್ರವನ್ನು ಪ್ರಾಮಾಣಿಕವಾಗಿ ಹೇಳಿಕೊಂಡಿದ್ದಾರೆ. ಐದಾರು ದಶಕಗಳ ಹಿಂದೆ ತಮಿಳಿನಲ್ಲಿ ಬಂದ ‘ತಿರುವಿಳೆಯಾಡಲ್’ ಎಂಬ ಚಲನಚಿತ್ರ ಅಸಾಮಾನ್ಯ ಯಶಸ್ಸನ್ನು ಗಳಿಸಿತ್ತು. ಇಲ್ಲಿ ಪ್ರಸಿದ್ಧ ನಾಯಕನಟ ಶಿವಾಜಿ ಗಣೇಶನ್ ಮತ್ತು ಖ್ಯಾತ ಹಾಸ್ಯನಟ ತಾಯ್ ನಾಗೇಶ್ ಶಿವ ಮತ್ತು ಧರ್ಮಿಗಳ ಪಾತ್ರಗಳನ್ನು ಅದ್ಭುತವಾಗಿ ನಿರ್ವಹಿಸಿದ್ದರು. ಈ ಪ್ರಕರಣ ಕೊಪ್ಪಲತೋಟರಿಗೆ ಪ್ರೇರಣೆ ನೀಡಿದ್ದು ಹೌದಾದರೂ ಅದರ ಮೂಲಕ ಅವರು ನಮಗೆ ದಕ್ಕಿಸಿಕೊಟ್ಟ ಸೌಂದರಾನಂದದ ಸೊಗಸು ಹಿರಿದು.
ಈ ಕಾವ್ಯದ ರಚನೆ ಕೆಲವೇ ದಿವಸಗಳಲ್ಲಿ ಸಂಪನ್ನವಾಯಿತು. ಇದನ್ನೂ ಕವಿ ಹೇಳಿಕೊಂಡಿದ್ದಾರೆ (೩.೫೯). ಇಷ್ಟು ಬೇಗ ಇಷ್ಟೊಂದು ಚೆಲುವಿನ ಕೃತಿಯ ನಿರ್ಮಾಣ ಅಲ್ಪಸ್ವಲ್ಪದ ಸಂಗತಿಯಲ್ಲ. ಒಟ್ಟಿನಲ್ಲಿ ಆ ಕಾಲದ ನತ್ಕೀರ ಈ ಕಾಲಕ್ಕೆ ಬಂದು ಪರೀಕ್ಷಿಸಿದರೂ ಕುಂದೊಂದೂ ಇಲ್ಲದ ರೀತಿ ಪ್ರಕೃತ ಕಾವ್ಯ ಮೈದಳೆದಿದೆ. ಇದಕ್ಕಾಗಿ ಅಭಿಜಾತಕನ್ನಡಕಾವ್ಯರಸಿಕರು ಗಣೇಶ ಭಟ್ಟರಿಗೆ ಆಭಾರಿಗಳಾಗಬೇಕಿದೆ.
* * *
ಇದೀಗ ‘ಸುಧಾಸುಪರ್ಣೀಯಂ’ ಕಾವ್ಯದತ್ತ ತಿರುಗೋಣ. ಇದರ ಕಥಾಸಂಗ್ರಹ ಹೀಗಿದೆ:
ಕಶ್ಯಪಪ್ರಜಾಪತಿಯ ಅನೇಕ ಪತ್ನಿಯರ ಪೈಕಿ ಪಕ್ಷಿಕುಲಮಾತೆ ವಿನತೆಯೂ ಒಬ್ಬಳು. ಇವಳ ಒಡಹುಟ್ಟು ಸರ್ಪಕುಲಮಾತೆ ಕದ್ರು. ಹುಟ್ಟುವಾಗ ಇವರಿಬ್ಬರೂ ಸಹೋದರಿಯರು. ಬೆಳೆದ ಬಳಿಕ ಸವತಿಯರಾದರು. ಇನ್ನು ಸಪತ್ನೀಮಾತ್ಸರ್ಯ ತಪ್ಪುವುದುಂಟೇ? ದೇವಾಶ್ವ ಉಚ್ಚೈಃಶ್ರವಸ್ಸಿನ ಬಾಲದ ಬಣ್ಣದ ವಿಷಯದಲ್ಲಿ ಹುರುಡಿನಿಂದ ಪಂದ್ಯಕ್ಕೆ ನಿಂತ ಇವರಿಬ್ಬರಲ್ಲಿ ವಿನತೆ ಸೋತು ಸವತಿಗೆ ದಾಸಿಯಾದಳು. ಇದಕ್ಕೆ ಕಾರಣ ಕದ್ರುವಿನ ಕೌಟಿಲ್ಯ. ತಾಯಿಯ ದಾಸ್ಯವನ್ನು ನೀಗಲು ಮಗ ಸುಪರ್ಣ ಮುಂದಾದ. ಇದಕ್ಕಾಗಿ ಅವನು ದೇವಲೋಕದಿಂದ ಅಮೃತವನ್ನು ತರಬೇಕಾಯಿತು. ತಾಯಿ ವಿನತೆಯ ತಾಳ್ಮೆಗೆಟ್ಟ ವರ್ತನೆ ಸುಪರ್ಣನ ಅಣ್ಣ ಅರುಣನು ಅನೂರುವಾಗಿ ಹುಟ್ಟುವಂತೆ ಮಾಡಿತ್ತು. ಇದಕ್ಕಾಗಿ ಅವನು ತನ್ನ ತಾಯಿಗೆ ದಾಸ್ಯ ಬರಲೆಂದು ಶಪಿಸಿದ್ದ. ವಿನತೆಯ ತಾಳ್ಮೆಗೆಟ್ಟ ನಡೆಗೆ ತನಗಿಂತ ಮೊದಲೇ ತಾಯಾದ ಕದ್ರುವಿನ ಮೇಲಿದ್ದ ಅಸೂಯೆ ಕಾರಣವಾಗಿತ್ತು. ಏನಾದರೇನು, ಸುಪರ್ಣನಿಗೆ ಬಾಧ್ಯತೆ ತಪ್ಪಲಿಲ್ಲ. ತಂದೆ ಕಶ್ಯಪರನ್ನು ಕಂಡು ಅವರ ಹರಕೆ ಪಡೆದ. ಬಳಿಕ ಅಮೃತವನ್ನೇ ತಂದ. ಈ ಹಾದಿಯಲ್ಲಿ ಅವನಿಗೆಷ್ಟೋ ಅಡೆತಡೆಗಳಾದುವು. ಎಲ್ಲವನ್ನೂ ಮೀರಿ ನಿಂತು ಇಂದ್ರನನ್ನು ಗೆದ್ದುದಲ್ಲದೆ ಉಪೇಂದ್ರ ಎನಿಸಿದ ವಿಷ್ಣುವನ್ನೂ ಒಲಿಸಿಕೊಂಡ. ಲೋಕಕಂಟಕರಾದ ಸರ್ಪಗಳಿಗೆ ಅಮೃತ ಸಿಗದಂತೆ ಎಚ್ಚರವಹಿಸಿದ್ದಲ್ಲದೆ ತನ್ನ ತಾಯಿಯ ದಾಸ್ಯವೂ ನೀಗುವಂತೆ ನೋಡಿಕೊಳ್ಳುವಲ್ಲಿ ಸಫಲನಾದ ಸುಪರ್ಣ ಅಸೂಯೆಯಿಲ್ಲದ ಸಾಮರ್ಥ್ಯಕ್ಕೆ, ಮಹತ್ತಿಗೆ, ಸ್ವಸಂತೋಷದಿಂದ ಸೇವೆ ಸಲ್ಲಿಸುವ ಸಮರ್ಪಣೆಗೆ, ಅಸಾಮಾನ್ಯ ಸಾಧನೆಗೆ ಸಂಕೇತವಾದ.
‘ಸುಧಾಸುಪರ್ಣೀಯಂ’ ಕಾವ್ಯದ ಹಿಂದೊಂದು ಕಥೆಯಿದೆ. ಅದು ಇದರ ರಚನೆಗೆ ಸಂಬಧಿಸಿದ್ದು. ನೀಲಕಂಠರು ತಮ್ಮ ಇಬ್ಬರು ಕವಿಮಿತ್ರರಾದ ಗಣೇಶ ಭಟ್ಟ ಕೊಪ್ಪಲತೋಟ ಮತ್ತು ಮಂಜುನಾಥ ಹೆಗಡೆ ಅವರೊಡನೆ ಒಂದೇ ವಿಷಯವನ್ನು ಆಯ್ದುಕೊಂಡು ಮೂವರೂ ಸ್ವತಂತ್ರವಾಗಿ ಕಾವ್ಯಗಳನ್ನು ರಚಿಸಬೇಕೆಂದು ನಿಶ್ಚಯಿಸಿದರು. ಮೂವರು ಕವಿಗಳೂ ಸುಪರ್ಣವಿಜಯವನ್ನು ಕುರಿತ ಚಂಪೂಕಾವ್ಯಗಳನ್ನೇ ಬರೆದರಾದರೂ ಈವರೆಗೆ ಪ್ರಕಟವಾಗಿರುವುದು ನೀಲಕಂಠರೊಬ್ಬರದೇ ಕೃತಿ. ಅವರೇ ಹೇಳುವಂತೆ “ಇಡಿಯ ಕಾವ್ಯವನ್ನು ಎಳೆದುಕೊಂಡು ಹೋಗಲು ಪರಸ್ಪರ ಪೈಪೋಟಿಯೇ ಒಂದು ಹದವಾದ ಮುದವಾದ ಪರಿಸರವನ್ನೂ ಉತ್ಸಾಹವನ್ನೂ ಒದಗಿಸಿತ್ತು”. ಮತ್ತೂ ಮುಂದುವರಿದು “ಆಸೆಗಳಂತೆಯೇ ಹೊಳೆಯುವ ಕಲ್ಪನೆಗಳಿಗೂ ಮೇರೆ-ಮಿತಿ ಇಲ್ಲ. ಆಸೆ ಪೂರೈಸಿಕೊಳ್ಳುವುದು ಅವರವರ ಸಾಮರ್ಥ್ಯಕ್ಕೆ ಒಳಪಡುವಂತೆಯೇ ಮೂಡುವ ಕಲ್ಪನೆಗೆ ರೂಪ ಕೊಡುವುದೂ ಪ್ರತಿಭೆ-ವ್ಯುತ್ಪತ್ತಿಗಳ ಮಿತಿಯಲ್ಲಿಯೇ ಇರುತ್ತದೆ” ಎಂದು ಈ ಕಾವ್ಯದ ಮುಮ್ಮಾತಿನಲ್ಲಿ ಒಕ್ಕಣಿಸಿದ್ದಾರೆ. ಈ ಮೂವರು ಕವಿಗಳೂ ಒಟ್ಟಾಗಿ ‘ಕಾಕಶತಕ’ ಎಂಬ ಸರಸಾಗ್ರ ವಿಡಂಬನಕಾವ್ಯವನ್ನೂ ರಚಿಸಿದ್ದಾರೆ. ಇದಿನ್ನೂ ಪ್ರಕಟವಾಗಿಲ್ಲ; ಬೇಗ ಹೊರಬಂದು ಸಹೃದಯರಿಗೆ ಸಂತಸವನ್ನು ನೀಡಲೆಂದು ಆಶಿಸುತ್ತೇನೆ.
‘ಸುಧಾಸುಪರ್ಣೀಯಂ’ ಕೃತಿಯ ಒಟ್ಟಂದದ ಸ್ವಾರಸ್ಯವನ್ನು ಹೇಳುವುದಾದರೆ, ಇದೊಂದು ‘ವಿಚಿತ್ರ ಮಾರ್ಗ’ದ ವಿಶಿಷ್ಟ ರಚನೆ. ವಿಚಿತ್ರ ಮಾರ್ಗವೆಂದರೆ ವಾಗರ್ಥಗಳ ಅನನ್ಯ-ವಿಲಕ್ಷಣ ಪಾಕವೆಂದು ತಾತ್ಪರ್ಯ. ಈ ಕಾವ್ಯದ ಹದ ‘ನಾರಿಕೇಳಪಾಕ’ವೆಂದು ಹೇಳಬಹುದು. ಆದರೆ ಇದು ಶಬ್ದಾಡಂಬರದಲ್ಲಲ್ಲ; ಅರ್ಥಗಾಂಭೀರ್ಯದ ಉನ್ನತಿಯಲ್ಲಿ. ಕಾವ್ಯದ ಆದ್ಯಂತ ಈ ಬಗೆಯ ಮಹತ್ತ್ವಾಕಾಂಕ್ಷೆ ಎದ್ದುಕಾಣುತ್ತದೆ. ಇದನ್ನು ಅಮೃತಸಾಧನೆಗಾಗಿ ಯತ್ನಿಸಿ ಯಶಸ್ವಿಯಾದ ಸುಪರ್ಣನ ಉಡ್ಡಯನಕ್ಕೇ ಒಪ್ಪವಿಡಬಹುದು. ಮೊದಲಿಗೆ ಬರುವ ಶಿವನ ಸ್ತುತಿಯಲ್ಲಿಯೇ ನೀಲಕಂಠರ ಕಾವ್ಯದೃಷ್ಟಿ ವ್ಯಕ್ತವಾಗಿದೆ:
ಆವನ ಡಕ್ಕೆಯಕ್ಕರದೊಳಂ ನಿಗಮಾವಳಿ ಠಾವುಗಂಡುದೋ
ಆವನ ಪಾದಪಂಕಜದ ರೇಣು ಋತಂಭರಕುಂಭಮಾದುದೋ |
ಆವನ ಹೂಂಕೃತಂ ವಿಧಿನಿಷೇಧನಯಂಗಳ ಧರ್ಮಮಾದುದೋ
ದೇವರ ದೇವ ಗುಡ್ಡದೊಡೆಯಂ ನಲಿದೀಗೆಮಗಾತ್ಮರಕ್ತಿಯಂ || (೨)
‘ಋತಂಭರ’ ಎಂದರೆ ವಿಶ್ವವ್ಯವಸ್ಥೆಯನ್ನು ಒಳಗೊಂಡ ತತ್ತ್ವ. ಕವಿ ಶಿವನನ್ನು ಹೀಗೆ ಕಂಡಿದ್ದಾರೆ. ಆತನ ಹೂಂಕೃತಿಯೇ ವಿಧಿನಿಷೇಧರೂಪದ ಧರ್ಮವಾಯಿತೆಂದು ಮನಗಂಡಿದ್ದಾರೆ. ಇಂಥ ಪರಮೇಶ್ವರನಲ್ಲಿ ಅವರು ಆತ್ಮಪ್ರೀತಿಯನ್ನಷ್ಟೇ ಬೇಡಿದ್ದಾರೆ. ಈ ಬಗೆಯ ದೃಷ್ಟಿ ಚಿರಂತನ ಅಭಿಜಾತಕಾವ್ಯಮಾರ್ಗಕ್ಕೆ ಅನುಗುಣವೇ ಆದರೂ ಅದನ್ನು ವ್ಯಕ್ತೀಕರಿಸುವಲ್ಲಿ ಪ್ರಕೃತ ಕವಿಯ ಕೌಶಲ ಹೊಸಬಗೆಯಿಂದ ದುಡಿದಿದೆ. ಇಂಥ ಪ್ರಜ್ಞೆಯನ್ನು ಸುಧಾಸುಪರ್ಣೀಯದ ಉದ್ದಕ್ಕೂ ನೋಡಬಹುದು.
ನೀಲಕಂಠರು ಬೆಳಗಿನ ಬಣ್ಣನೆಯಿಂದ ಕಥಾವಿಸ್ತರದೊಳಗೆ ಧುಮುಕುತ್ತಾರೆ. ಇಂಥ ವರ್ಣನೆಯಲ್ಲಿಯೂ ಇತಿವೃತ್ತದ ಘಟನೆ-ಪಾತ್ರಗಳನ್ನು ಬೆಸೆಯುವ ಮೂಲಕ ಮುಕ್ತಕವಾಗಬಲ್ಲ ಪದ್ಯವನ್ನು ಮೂರ್ತಿಯಂತೆ ಶಿಲ್ಪಿಸುತ್ತಾರೆ.
ತಂಬೆಲರಂಬುಜಂ ಬೆರೆಸಿವೋದುರುಸೌರಭವೊತ್ತ ಮತ್ತಿನಿಂ
ಮುಂಬರಿದಿರ್ದುದೊಯ್ಯನೆ ವಿಹಂಗಮಕಾಂತೆ ನಿತಾಂತದುಃಖವಿ-
ಷ್ಟಂಭಿತಚಿತ್ತೆ ಆ ವಿನತೆಗಂ ಮೊದಲೊಳ್ಳಿತನಿಂದು ಸಂದ ಬ-
ನ್ನಂಬಡುವಾಗಳಂ ನೆನಪಿಗಿತ್ತು ಸೊಗಂಗೊಡುತಿರ್ಪ ಪಾಂಗಿನಿಂ || (೮)
ಬೆಳಗಿನ ತಂಗಾಳಿಯು ವಿನತೆಗೆ ಬಿಸಿಸುಯ್ಲಾಗಿತ್ತೆಂಬುದು ಇಲ್ಲಿಯ ಧ್ವನಿ. ಇದನ್ನು ವ್ಯಕ್ತಪಡಿಸುವ ಪದಪದ್ಧತಿ ಸಂಕೀರ್ಣವಾಗಿದೆ; ಆಲೋಚನಾಮೃತವೂ ಆಗಿದೆ.
‘ಆಶೆಯರುಣೋದಯಂ’ ಎಂಬ ಮೊದಲ ಭಾಗದಲ್ಲಿ ಪೂರ್ವದ ಘಟನೆಗಳನ್ನು ಸ್ಮೃತಿತಂತ್ರದಿಂದ ವರ್ತಮಾನಕ್ಕೆ ತರುವ ಮೂಲಕ ಸುಪರ್ಣನ ಮಾತುಗಳಲ್ಲಿಯೇ ಕದ್ರೂ-ವಿನತೆಯರ ಸ್ಪರ್ಧೆ, ಅರುಣನ ಅಕಾಲಿಕ ಜನ್ಮ, ವಿನತೆಯ ದಾಸ್ಯ ಮತ್ತು ಸುಪರ್ಣ ಶಪಥಗಳನ್ನು ಮಾರ್ಮಿಕವಾಗಿ ನಿರೂಪಿಸಿದ್ದಾರೆ:
ಬಿಡು ಬಿಡು ನಿನ್ನನುತಾಪವ-
ನೆಡೆಗೊಡದಿರ್ ಶಾಪ ಗೀಪದುಲಿಗಂ ಪೊಲೆಗಂ |
ಕಿಡಲಪ್ಪದೆ ಬಾಳ್ ಕೇಡಿಗ-
ರೊಡನಾಡಿದಡೆಮ್ಮ ಕರ್ಮ ಗಿರ್ಮವದೆತ್ತಂ ||
ಆವನವನಿಂದ್ರನಾವುದ-
ಲಾವುಚ್ಚೈಃಶ್ರವಮೊ ಆವ ಕೊಚ್ಚೆಯ ಹಯಮೋ |
ಆವುದು ಬಿಳುಪೋ ಕರ್ಪೋ
ಈ ವಿಷವಿಕ್ಕಿಪರ ಬಣ್ಣಮಂ ಬಯಲ್ಗೆಳೆವೆಂ ||
ಮುರ್ಚಿದುವಂತೆ ತುರಂಗದ
ಪುಚ್ಛಮನದಕಿತ್ತುವಂತೆ ಕರ್ಪಿನ ಛವಿಯಂ |
ಮೆರ್ಚಿದೆನಿವದಿರ ಚರ್ಮವ-
ನುರ್ಚುವೆನೀಗಳ್ ನೆಗಳ್ದ ಕರ್ಪಂ ನೋಳ್ಪೆಂ ||
ಉನ್ಮೀಲಿತಪಕ್ಷಯುಗಂ
ಪೊಣ್ಮಿಪುದೆಮಗಂ ದಿಗಂತಸೀಮಾಶ್ರೀಯಂ |
ಜನ್ಮಾರಭ್ಯಮೊಡಲ್ಗಂ
ಮಣ್ಮೆತ್ತಿ ತೆವಳ್ವ ಪಾವುಗಳಾಳ್ವರೆಯೆಮ್ಮಂ ||
ತಿಳಿಯದಿರೆನ್ನಂ ಮರಿಯೆಂ-
ದಳುಕದಿರೀ ಪಾವ್ಗಳುರ್ಬಟೆಯ ಸಟೆಯಂ ಮೆ-
ಟ್ಟಳುಪಿಟ್ಟು ಕೊಟ್ಟೆನೆಂದೇ
ತಿಳಿಯೌ ಸ್ವಾತಂತ್ರ್ಯಮಂ ಭವತ್ಪದಕಿಂದೇ || (೨೩-೨೭)
ಈ ಕಂದಗಳಲ್ಲಿ ತುಂಬಿ ತುಳುಕಿರುವ ಆಡುನುಡಿಯ ವೈಖರಿ, ಭಾವದ ಓಜಸ್ಸು, ಸುಪರ್ಣನ ಹದಿಹರೆಯಕ್ಕೆ ಒಪ್ಪುವ ಒಗರುನುಡಿ, ಹಾವುಗಳನ್ನು ಹಳಿಯುವಾಗ ತೋರುವ ತಿರಸ್ಕಾರ ಮುಂತಾದ ಅಂಶಗಳು ಕವಿಯ ಸ್ವೋಪಜ್ಞತೆಗೆ ಸಾಕ್ಷಿ. ಹಿಂದಿನ ಕಥೆಯನ್ನು ಕೆಲವೊಂದು ಗೆರೆಗಳ ಮೂಲಕ ಹೀಗೂ ರೇಖಿಸಬಹುದೆಂಬ ನವಸಂವಿಧಾನಕವಿಲ್ಲಿದೆ. ಶಾಪ-ಗೀಪ, ಕರ್ಮ-ಗಿರ್ಮ ಮುಂತಾದ ಪಡೆನುಡಿಗಳು ಪದ್ಯಬಂಧದೊಳಗೆ ಮೂಡಿಸುವ ಗದ್ಯಸಹಜ ಸಂಭಾಷಣಶೀಲತೆ ಸ್ಪೃಹಣೀಯ.
ತಾಯಿಗಾದ ಅನ್ಯಾಯಕ್ಕೆ ಮರುಗುವ ಮನಸ್ಸು ಸುಪರ್ಣನದಾದರೂ ಅವಳ ಅವಿವೇಕವನ್ನು ಮರೆಯದ ಬುದ್ಧಿ ಅವನದು. ಪಣದ ಕಟ್ಟಲೆಯೆಂದು ದಾಸ್ಯವನ್ನು ಮೂಕವಾಗಿ ಸಹಿಸಿಕೊಳ್ಳುವ ಅವಳ ಶಾಂತಿಯನ್ನು ದೌರ್ಬಲ್ಯವೆಂದೇ ಧಿಕ್ಕರಿಸುತ್ತಾನೆ:
ಏನಬ್ಬೆ ಏನಿದುಪದೇ-
ಶಾನರ್ಥಂ ವ್ಯರ್ಥಮಕ್ಕೆ ಪಣಮುಂ ದ್ಯೂತಂ |
ನೀನವಕಂ ಬಲಿಬೀಳ್ದುಂ
ಮೌನಿಜನಂಗಳವೊಲಂತೆ ಶಾಂತಿಯುಲಿವೆಯೇಂ || (೨೯)
ಈ ಮಾತುಗಳು ಧರ್ಮಜನ ಶಾಂತ್ಯಾಭಾಸವನ್ನು ಜಂಕಿಸುವ ಭೀಮ-ಕೃಷ್ಣೆಯರ ನುಡಿಗಳಂತಿವೆ. ಇಷ್ಟೆಲ್ಲ ಮಾತುಗಳು ಸಾಗುವಾಗಲೂ ವಿನತೆ ತನ್ನ ಎಂದಿನ ದಾಸ್ಯದ ಪಾಡನ್ನು ಮರೆಯುವುದಿಲ್ಲ. ಕದ್ರುವಿನ ಮಕ್ಕಳಿಗೆ ಊಟದ ಹೊತ್ತಾಯಿತೆಂದು ಗಡಿಬಿಡಿಯಿಂದ ಎಲೆಗಳ ಕಟ್ಟನ್ನು ಹೊತ್ತು ಹೋಗುತ್ತಾಳೆ. ಇಂಥ ನಾಟಕೀಯತೆಯನ್ನು ಕಟ್ಟಿಕೊಡುವ ಕವಿಯ ಕುಶಲತೆ ಹಿರಿದು:
ಮನಕಿದು ಬಾರದಾಗೆ ಪ್ರತಿಯಾಡೆ ಮನಂ ಮಿಗೆ ಬಾರದಾಗೆ ಮುಂ-
ದಣವೆಣಿಸುತ್ತೆ ಮೌನದೆ ಸುಪರ್ಣನಿರಲ್ ಭುಜಗಾಳಿಗಾಯ್ತು ಭೋ-
ಜನಸಮಯಂ ಗಡೆಂದೊದರ್ದ ಕದ್ರುವಿನಾಳಿಯ ಕೂಗಿಗೋಡಿದಳ್
ವಿನತೆ ವಿನೀತೆಯಾಗಿ ತಲೆಮೇಲೆಲೆಗಟ್ಟುಗಳೊಟ್ಟಿ ಬೇಗದಿಂ || (೩೪)
ತಾಯಿಯ ದಾಸ್ಯದ ದುಡಿಮೆಯಲ್ಲಿ ಮಗನಿಗೂ ಪಾಲುಂಟು. ಹೀಗಾಗಿ ಹಾವುಗಳನ್ನು ಹೆಗಲ ಮೇಲೆ ಹೊತ್ತು ಅವುಗಳಿಗೆ ಗಗನವಿಹಾರದ ಭೋಗವನ್ನು ಒದಗಿಸುವುದು ಗರುಡನ ಕೆಲಸಗಳಲ್ಲೊಂದು. ಇದನ್ನು ನಿರ್ವಹಿಸುವಾಗ ಬಾನಿಂದ ಭೂಮಿ ಹೇಗೆ ಕಂಡಿತೆಂಬ ಚಿತ್ರಣವನ್ನು ಕವಿ ನೀಡುತ್ತಾರೆ:
ತರುತತಿ ಪುಲ್ಲ ಬೊಂತೆಗಳವೊಲ್ ಗಿರಿಗಹ್ವರಕಂದರಾಳಿ ಪೂ-
ಡಿರದೆರೆವಣ್ಣ ಪೆಂಟೆಗಳ ಮೇಣ್ ವಿವರಂಗಳವೊಲ್ ಸರಿಚ್ಚಯಂ
ಪರಿವುರಗಾಳಿಯೆಂಬಿನವೊಲಾಗಿ ಅಭೋ ಎನಿಸಲ್ಕೆ ನೋಡಿ ನಿ-
ಬ್ಬೆರಗಿನೊಳುಬ್ಬೆಗಂಬಡುತೆ ಬೊಬ್ಬಿರಿದಿರ್ದುವು ಪಾವ್ಗಳೊರ್ಮೆಯೇ || (೪೮)
ಗಿಡ-ಮರಗಳು ಹುಲ್ಲಿನ ಪೆಂಡಿಯಂತೆ, ಗಿರಿ-ಕಂದರಗಳು ಎರೆಮಣ್ಣಿನ ಹೆಂಟೆಗಳಂತೆ, ನದಿಗಳು ಹರಿದಾಡುವ ಹಾವುಗಳಂತೆ ಕಂಡವೆಂಬ ಕಲ್ಪನೆ ಮೆಚ್ಚುವಂತಿದೆ. ‘ಅಭೋ’ ಎಂಬ ವಿನೂತನ ಉದ್ಗಾರವಾಚಕ ಸಾರ್ಥಕವಾಗಿದೆ. ಕಡೆಯ ಪಾದದ ಓಷ್ಠ್ಯವರ್ಣಗಳ ಶಬ್ದಾಲಂಕಾರ ವ್ಯಂಜಕವಾಗಿದೆ.















































