ಪರಮಾರ್ಥಚಿಂತಾಮಣಿಯ ಪರಮಋಷಿ: ಶ್ರೀ ಸಚ್ಚಿದಾನಂದೇಂದ್ರಸರಸ್ವತಿ ಸ್ವಾಮಿಗಳು

ಶ್ರೀ ಶಂಕರಾಚಾರ್ಯರು ಅದ್ವೈತಸಿದ್ಧಾಂತದ ಪರಮಾಚಾರ್ಯರೆಂಬುದು ಸುವಿದಿತ. ಭಾರತದೇಶದ ನಾಲ್ಕು ದಿಕ್ಕುಗಳಲ್ಲಿ ಅವರು ಸ್ಥಾಪಿಸಿದ ಆಮ್ನಾಯಪೀಠಗಳಲ್ಲಿ ಶೃಂಗಗಿರಿಯ ಶಾರದಾಪೀಠವೂ ಒಂದು. ಶಂಕರರ ಶಿಷ್ಯೋತ್ತಮರಾದ ಸುರೇಶ್ವರರು ಈ ಪೀಠದ ಪ್ರಥಮಾಚಾರ್ಯರೆಂಬುದು ಅದರ ಹಿರಿಮೆಗಳಲ್ಲೊಂದು. ಹೀಗೆ ಆಚಾರ್ಯ ಶಂಕರರಿಗೂ ಕರ್ನಾಟಕಕ್ಕೂ ಸಾವಿರವರ್ಷಗಳಿಗೂ ಮೇಲ್ಪಟ್ಟ ಗಾಢ ನಂಟಸ್ತಿಕೆ ಇದೆ. ವಿಷಾದದ ಸಂಗತಿಯೆಂದರೆ, ಇಷ್ಟು ಗಾಢವಾದ ಸಂಬಂಧವಿದ್ದರೂ ಕನ್ನಡನಾಡಿನಲ್ಲಿ ಶಂಕರರ ಗ್ರಂಥಗಳು ೨೦ನೆಯ ಶತಮಾನದ ಮಧ್ಯಭಾಗದವರೆಗೂ ಹೊರಬರಲಿಲ್ಲವೆಂಬುದು.

ಪ್ರಸ್ಥಾನತ್ರಯಗ್ರಂಥಗಳಿಗೆ (ಬ್ರಹ್ಮಸೂತ್ರ, ದಶೋಪನಿಷತ್ತುಗಳು ಹಾಗೂ ಭಗವದ್ಗೀತೆ) ಶಂಕರರು ರಚಿಸಿದ ಭಾಷ್ಯಗಳು ಇಡೀ ದೇಶದಲ್ಲಿ ಅದ್ಭುತವಾದ ಅಧ್ಯಾತ್ಮಸಂಚಲನವೊಂದನ್ನು ಕಲ್ಪಿಸಿದ ಪರಿ ಅವಿಸ್ಮರಣೀಯ. ಪ್ರಸನ್ನಗಂಭೀರಶೈಲಿಯಲ್ಲಿ ರಚಿತವಾದ ಈ ಭಾಷ್ಯಗಳು ಅಧ್ಯಾತ್ಮವಿದ್ಯೆಯನ್ನು ಯಾವುದೇ ಶಂಕೆಗೆ ಅಸ್ಪದವಿಲ್ಲದಿರುವಂತೆ ಪ್ರತಿಪಾದಿಸುತ್ತವೆ. ಪ್ರಾಪಂಚಿಕಸ್ತರದಲ್ಲಿ ಗಮನಿಸುವುದಾದರೆ, ತತ್ತ್ವಶಾಸ್ತ್ರದ ಸೀಮಾರೇಖೆಗಳಂತೆ ಇವು ನಿಂತಿವೆಯೆಂದರೆ ತಪ್ಪಾಗಲಾರದು. ಶತಮಾನಗಳುದ್ದಕ್ಕೂ ತತ್ತ್ವಜಿಜ್ಞಾಸುಗಳ ಅಕುಂಠಿತಾದರಕ್ಕೆ ಇವು ಪಾತ್ರವಾಗಿರುವುದು ಐತಿಹಾಸಿಕಸತ್ಯ.  ಇವುಗಳ ಪಾಠ-ಪ್ರವಚನಾದಿಗಳು ಕೇವಲ ಮಠ-ಮಂದಿರಗಳ ವಲಯಕ್ಕೆ ಎಂದೂ ಸೀಮಿತವಾಗಿಲ್ಲ. ನಮ್ಮ ಸಮಾಜದ ಕೋಟ್ಯಂತರ ಜನ ಇವುಗಳ ಅಧ್ಯಯನದಿಂದ ಸತ್ಯದರ್ಶನವನ್ನೂ ನೆಮ್ಮದಿಯನ್ನೂ ಪಡೆದಿದ್ದಾರೆ. ಕೆಲವರಂತೂ ಈ ಗ್ರಂಥಗಳ ಅಧ್ಯಯನ-ಅಧ್ಯಾಪನಕ್ಕೆಂದೇ ತಮ್ಮ ಇಡೀ ಜೀವನವನ್ನು ಮುಡಿಪಾಗಿಟ್ಟಿದ್ದಾರೆ. ಇಂಥ ವಿರಳಪಂಕ್ತಿಗೆ ಸೇರಿದವರು ಪೂಜ್ಯಶ್ರೀ ಸಚ್ಚಿದಾನಂದೇಂದ್ರಸರಸ್ವತಿ ಸ್ವಾಮಿಗಳು.

“ಆಸುಪ್ತೇರಾಮೃತೇಃ ಕಾಲಂ ನಯೇದ್ ವೇದಾಂತಚಿಂತಯಾ” (ಬೆಳಗಾಗಿ ಎದ್ದಾಗಿನಿಂದ ಮಲಗುವವರೆಗೂ, ಹುಟ್ಟಂದಿನಿಂದ ಸಾಯುವವರೆಗೂ ವೇದಾಂತಚಿಂತನದಲ್ಲಿಯೇ ಮಗ್ನರಾಗಿರಬೇಕು) ಎಂಬುದೊಂದು ಪ್ರಾಚೀನವಾದ ಪ್ರಸಿದ್ಧೋಕ್ತಿ. ಇದರಂತೆ ಜೀವನ ನಡೆಸಲು ಸಾಧ್ಯವೆಂಬುದು ನಮ್ಮ ಮಟ್ಟಿಗಂತೂ ಊಹಾತೀತ. ಇದರ ಮೇಲ್ಪಂಕ್ತಿಯನ್ನು ಅನುಸರಿಸಿದವರು ಒಬ್ಬರಾದರೂ ಇದ್ದಾರೆಯೇ? ಕುತೂಹಲಜೀವಿಗಳಾದ ನಮ್ಮಲ್ಲಿ ಇಂಥ ಪ್ರಶ್ನೆ ಏಳುವುದು ಸಹಜ. ಇದಕ್ಕೆ ಉತ್ತರವೂ ಇಲ್ಲದಿಲ್ಲ. ಶ್ರೀ ಸಚ್ಚಿದಾನಂದೇಂದ್ರಸರಸ್ವತಿ ಸ್ವಾಮಿಗಳು ಈ ಉಕ್ತಿಗೆ ಅನ್ವರ್ಥವಾಗಿ ಬದುಕಿದವರು.

ತೊಂಭತ್ತಾರು ವರ್ಷಗಳ ಪೂರ್ಣಜೀವನವನ್ನು ನಡೆಸಿದ ಸ್ವಾಮಿಗಳ ಪೂರ್ವಾಶ್ರಮದ ಹೆಸರು ಯಲ್ಲಂಬಳಸೆ ಸುಬ್ಬರಾವ್. ಬಾಲ್ಯದಿಂದಲೂ ಅನೇಕ ಕಷ್ಟಗಳನ್ನು ಅನುಭವಿಸುತ್ತಲೇ ಬೆಳೆದ ಸುಬ್ಬರಾಯರು ಪರಸ್ಥಳಗಳಲ್ಲಿ ಪರದಾಡಿಕೊಂಡು, ವಾರನ್ನವನ್ನು ತಿಂದುಕೊಂಡು ವಿದ್ಯಾರ್ಜನೆ ಮಾಡಿದರು. ಸ್ವಪ್ರಯತ್ನದಿಂದಲೇ ಸಂಸ್ಕೃತಭಾಷೆಯನ್ನು ಅಭ್ಯಾಸ ಮಾಡಿ ಅದರಲ್ಲಿ ಅಸಾಮಾನ್ಯಪಾಂಡಿತ್ಯವನ್ನು ಗಳಿಸಿದರು. ಅವರ ಇಂಗ್ಲಿಷ್ ಭಾಷಾಪ್ರೌಢಿಮೆಯೂ ಉಚ್ಚಕೋಟಿಯದ್ದು. ಕೆಲವು ಕಾಲ ಬೆಂಗಳೂರಿನ ಸಂಸ್ಕೃತ ಕಾಲೇಜಿನಲ್ಲಿ ಅಧ್ಯಾಪಕರಾಗಿದ್ದ ಇವರು ವೃತ್ತಿಜೀವನದಿಂದ ನಿವೃತ್ತರಾದದ್ದು ಮಿಡಲ್-ಸ್ಕೂಲಿನ ಹೆಡ್ಮಾಸ್ತರಾಗಿ.

ಏತನ್ಮಧ್ಯ ಲಭಿಸಿದ ಸಜ್ಜನರ ಸಹವಾಸ ಇವರ ಮನಸ್ಸನ್ನು ತತ್ತ್ವಚಿಂತನೆಯತ್ತ ತಿರುಗಿಸಿತು. ಎಳೆವಯದಿಂದಲೂ ಇವರ ಮಾರ್ಗದರ್ಶಕರಾಗಿದ್ದ ಶ್ರೀ ಕೆ. ಎ. ಕೃಷ್ಣಸ್ವಾಮಿ ಅಯ್ಯರ್, ವಿದ್ಯಾನಿಧಿ ಹಾನಗಲ್ ವಿರೂಪಾಕ್ಷಶಾಸ್ತ್ರಿ, ಕುರ್ತುಕೋಟಿ ಮಹಾರಾಜ್, ಹೊಸಕೆರೆ ಚಿದಂಬರಯ್ಯ ಮುಂತಾದ  ಅನೇಕರ ಸಾಹಚರ್ಯ ಆಧ್ಯಾತ್ಮಿಕದಿಶೆಯಲ್ಲಿನ ಇವರ ಬೆಳವಣಿಗೆಗೆ ಭದ್ರಬುನಾದಿಯನ್ನು ಹಾಕಿಕೊಟ್ಟಿತು.

ಸರ್ಕಾರಿ ಉದ್ಯೋಗದಲ್ಲಿದ್ದಾಗಲೇ ಅಧ್ಯಾತ್ಮವಿಷಯಕ್ಕೆ ಸಂಬಂಧಿಸಿದ ಹಲವಾರು ಗ್ರಂಥಗಳನ್ನು ಶ್ರೀಯುತರು ರಚಿಸಿದರು. ಇಷ್ಟೇ ಅಲ್ಲದೆ, ಶಾಂಕರತತ್ತ್ವಪ್ರಸಾರಕ್ಕೆಂದು ‘ಅಧ್ಯಾತ್ಮಪ್ರಕಾಶ’ ಎಂಬ ಮಾಸಪತ್ರಿಕೆಯನ್ನು ಆರಂಭಿಸಿದರು. ಇನ್ನೂ ಮುನ್ನಡೆದು ಬೆಂಗಳೂರಿನಲ್ಲಿ ಅಧ್ಯಾತ್ಮಪ್ರಕಾಶ ಕಾರ್ಯಾಲಯವನ್ನೂ ಒಂದು ಮುದ್ರಣಾಲಯವನ್ನೂ ಸ್ಥಾಪಿಸಿದರು. ತಾವೇ ಸ್ವತಃ ಅಚ್ಚಿನ ಮೊಳೆಗಳನ್ನು ಜೋಡಿಸಿ ಒಂದೂ ತಪ್ಪಿಲ್ಲದ ಹಾಗೆ ಮುದ್ದಾಗಿ, ಕಡಿಮೆ ಬೆಲೆಯಲ್ಲಿ ಗ್ರಂಥಗಳನ್ನು ಪ್ರಕಟಿಸಿದರು. ಮಡದಿ-ಮಕ್ಕಳಿಗೆ ಯಾವ ವಿಧದಲ್ಲಿಯೂ ತೊಂದರೆ ಬಾರದಂತೆ ವ್ಯವಸ್ಥೆಯನ್ನು ಕಲ್ಪಿಸಿ ಸಂನ್ಯಾಸ ಸ್ವೀಕರಿಸಿದರು.

ಬೀದಿಗೊಂದು ಮಠ, ಕೇರಿಗೊಂದು ಆಶ್ರಮ ಇರುವ ಈ ಕಾಲದಲ್ಲಿ ಅವುಗಳ ಬಗೆಗೆ ಅವಜ್ಞೆ ಉಂಟಾಗಿರುವುದು ಸಹಜವೇ. “ಅತಿಪರಿಚಯಾದ್ ಅವಜ್ಞಾ ಭವತಿ” ಅಲ್ಲವೇ? ಇನ್ನು ಮೋಜು-ಮೆಜವಾನಿಗಳಲ್ಲೇ ಸದಾ ಮುಳುಗಿರುವ ಸ್ವಯಂಘೋಷಿತ ಸಂನ್ಯಾಸಿಗಳ ಬಗೆಗೆ ಹೇಳಲೇಬೇಕಿಲ್ಲ. ಹೀಗಿರುವಾಗ ವೈರಾಗ್ಯವೊಂದನ್ನೇ ಬಲವಾಗಿ ನಚ್ಚಿಕೊಂಡು ಬದುಕುವುದು ಕಷ್ಟಸಾಧ್ಯ. ಅದರಲ್ಲಿಯೂ ಅವಿರತಶಾಸ್ತ್ರಾಭ್ಯಾಸದ ಜತೆಯಲ್ಲಿಯೇ ಯಾರ ನೆರವೂ ಇಲ್ಲದೆ ಕಾರ್ಯಾಲಯವೊಂದನ್ನು ಕಟ್ಟಿ ಬೆಳೆಸುವುದು ಸಾಹಸವೇ ಸರಿ. ಪೂಜ್ಯಶ್ರೀ ಸಚ್ಚಿದಾನಂದೇಂದ್ರಸರಸ್ವತಿ ಸ್ವಾಮಿಗಳು ಕೈಗೊಂಡಿದ್ದು ಇಂಥ ಧೀರಕೃತ್ಯವನ್ನು.

ಶಂಕರರ ಗ್ರಂಥಗಳು ಕನ್ನಡಭಾಷೆಯಲ್ಲಿ ಬಹಳ ಕಾಲ ಬೆಳಕನ್ನು ಕಾಣಲಿಲ್ಲವೆಂದು ಹಿಂದೆ ಗಮನಿಸಿದೆವಷ್ಟೆ. ಈ ಕೊರತೆಯನ್ನು ನೀಗಿಸಿದವರು ‘ಅಭಿನವ ಶಂಕರ’ ಸಚ್ಚಿದಾನಂದೇಂದ್ರಸರಸ್ವತಿಗಳು. ಈ ಕೆಲಸವನ್ನು ಅವರು ಎಷ್ಟು ಸಮರ್ಥವಾಗಿ, ನಿರ್ದುಷ್ಟವಾಗಿ ನೆರವೇರಿಸಿದರೆಂದರೆ, ಅವರ ಗ್ರಂಥಗಳು ‘critical edition’ಗಳಾಗಿ ಮಹೋಪಕಾರ ಮಾಡಿವೆ. ಮೂಲಕ್ಕೆ ಕಿಂಚಿತ್ತೂ ಊನಬಾರದಂತೆ ಅನುವಾದ ಮಾಡುವುದು, ಪಾಠಭೇದಗಳನ್ನು ಗುರುತಿಸುವುದು, ವಿವರಣಾತ್ಮಕ ಟಿಪ್ಪಣಿಗಳನ್ನು ಬರೆಯುವುದು, ಗ್ರಂಥದಲ್ಲಿ ಉದಾಹೃತವಾದ ವಾಕ್ಯಗಳ ಸ್ಥಳನಿರ್ದೇಶನ ಮಾಡುವುದು, ಸೂತ್ರ, ಮಂತ್ರ ಮುಂತಾದವುಗಳಿಗೆ ಅಕಾರಾದಿ ಪಟ್ಟಿಗಳನ್ನು ರಚಿಸುವುದು – ಹೀಗೆ ಹಲವು ಸಂಸ್ಥೆಗಳು ಸೇರಿ ದುಡಿದರೂ ದುಸ್ಸಾಧ್ಯವಾದ ಕೆಲಸವನ್ನು ಸ್ವಾಮಿಗಳು ಧೃತಿಗೆಡದೆ ದೀಕ್ಷೆಯಿಂದ ಮಾಡಿದರು. ಮತ್ತೂ ಉಲ್ಲೇಖಾರ್ಹವಾದುದು ಅವರು ರಚಿಸಿದ ‘ಶ್ರೀಶಂಕರಭಗವತ್ಪಾದವೃತ್ತಾಂತಸಾರಸರ್ವಸ್ವ’ ಎಂಬ ಗ್ರಂಥ. ಇದು ಶಂಕರಾಚಾರ್ಯರಿಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನೂ ಪರಿಕಿಸಿ, ಅವುಗಳನ್ನು ಯುಕ್ತ್ಯನುಭವಗಳಿಂದ ಶೋಧಿಸಿ, ಮಥಿತಾರ್ಥವನ್ನು ನಿರ್ವಿವಾದವಾಗಿ ಪ್ರಕಟಿಸುತ್ತದೆ. ಶಂಕರರ ವ್ಯಕ್ತಿತ್ವ-ಕೃತಿತ್ವಗಳ ಬಗೆಗೆ ಕೊನೆಯ ಮಾತಾಗಿ ಈ ಗ್ರಂಥವು ನಿಂತಿದೆಯೆಂದರೆ ಅದರ ಮಹತ್ತ್ವವು ಅರಿವಿಗೆ ಬಾರದಿರದು.

ವೇದಾಂತಕ್ಕೆ ಸಂಬಂಧಿಸಿದ ಹಲವಾರು ಪ್ರಕರಣಗ್ರಂಥಗಳನ್ನು ಸ್ವಾಮಿಗಳು ಅನುವಾದಿಸಿದ್ದಾರೆ. ಹಾಗೆಯೇ ಪದ್ಮಪಾದರ, ಸುರೇಶ್ವರರ ಬರವಣಿಗೆಗಳ ಹೊತ್ತಿಗೆಗಳನ್ನೂ ಹೊರತಂದಿದ್ದಾರೆ. ಮನೋವಾಕ್ಕಾಯಗಳಿಂದ ಸ್ವಯಂ ಅದ್ವೈತಿಗಳಾಗಿದ್ದರೂ ಅನ್ಯದರ್ಶನಗಳ ಬಗೆಗೆ ಅವರಲ್ಲಿ ಕಿಂಚಿತ್ತೂ ಕಹಿಯಿರಲಿಲ್ಲ. ಈ ದಿಶೆಯಲ್ಲಿ ಗಮನಿಸಬೇಕಾದುದು ಸ್ವಾಮಿಗಳು ನೆರವೇರಿಸಿದ ಭಗವದ್ರಾಮಾನುಜರ ಮತ್ತು ಭಗವಾನ್ ಬುದ್ಧನ ಮೌಲಿಕಗ್ರಂಥಗಳ ಸಾನುವಾದ ಪ್ರಕಟಣೆ. ಅವರ ಮನೋವೈಶಾಲ್ಯದ ದರ್ಶನಕ್ಕೆ ಇದಕ್ಕೂ ಮಿಗಿಲಾದ ಸಾಕ್ಷ್ಯ ಅನವಶ್ಯ.

‘ಮಾಂಡೂಕ್ಯರಹಸ್ಯವಿವೃತಿಃ’, ‘ವೇದಾಂತಪ್ರಕ್ರಿಯಾಪ್ರತ್ಯಭಿಜ್ಞಾ’ ಮುಂತಾದ ಸ್ವತಂತ್ರ ಸಂಸ್ಕೃತಕೃತಿಗಳಲ್ಲಿ ಸ್ವಾಮಿಗಳು ಹೂಡಿರುವ ನಿಶಿತ ತರ್ಕಸರಣಿಯೂ, ಅವರು ಬಳಸಿರುವ ಪ್ರೌಢಭಾಷೆಯೂ ವಿದ್ವದಗ್ರೇಸರರನೇಕರನ್ನು ಮೂಕವಿಸ್ಮಿತರನ್ನಾಗಿ ಮಾಡಿವೆ. ಹೀಗಾಗಿಯೇ ರಂಗನಾಥಶರ್ಮರಂಥ ಪ್ರಗಲ್ಭಪಂಡಿತರು ತಲೆದೂಗಿ ಮುಕ್ತಕಂಠದಿಂದ ಪ್ರಶಂಸಿಸಿರುವುದು – “... ಸಂಸ್ಕೃತವು ಮಾತ್ರ ಸ್ವಯಂ ಬೋಧಿನಿಯ ನೆರವಿನಿಂದ ಸ್ವಯಂ ಕಲಿತ ಸ್ವಾರ್ಜಿತ ಭಾಷೆ. ಭಾಷ್ಯಾದಿ ಸಂಸ್ಕೃತಗ್ರಂಥಗಳನ್ನು ಓದಿ ಓದಿ ಭಾಷೆಯನ್ನು ವಶಪಡಿಸಿಕೊಂಡು ಶಾಸ್ತ್ರೀಯ ಭಾಷೆಯಲ್ಲಿ ಶಾಸ್ತ್ರಗ್ರಂಥಗಳನ್ನು ರಚಿಸಿದ್ದಾರೆ. ಮಾಂಡೂಕ್ಯರಹಸ್ಯವಿವೃತಿಯಲ್ಲಿ ಅವರು ಬಳಸಿದ ಸಂಸ್ಕೃತ ಭಾಷಾಶೈಲಿಯನ್ನು ನೋಡಿ ನಾನು ಮುಗ್ಧನಾಗಿದ್ದೇನೆ.” ಇಷ್ಟಿದ್ದರೂ ಸಾಂಪ್ರದಾಯಿಕ ವಲಯಗಳಲ್ಲಿ ಸ್ವಾಮಿಗಳ ಬಗೆಗೆ, ಅವರ ಕೃತಿಗಳ ಬಗೆಗೆ, ಒಂದು ತೆರನಾದ ತಾಮಸನಿರ್ಲಕ್ಷ್ಯ, ಉದ್ದಂಡ ಉಪೇಕ್ಷೆ ಇದೆ. ಇದು ಸರ್ವಥಾ ಖಂಡನೀಯವೆಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.

ಸ್ವಾಮಿಗಳ ವ್ಯಕ್ತಿತ್ವದಲ್ಲಿ ಎದ್ದುಕಾಣುವ ಗುಣವೆಂದರೆ ಸಮಾಜದ ಒಳಿತಿನ ಬಗೆಗೆ ಅವರಲ್ಲಿದ್ದ ಅಳಿಯದ ಕಳಕಳಿ. ಹೀಗಾಗಿಯೇ ಅವರು ಪಂಡಿತರಿಗಷ್ಟೇ ಪ್ರಯೋಜನಕ್ಕೆ ಬರುವ ಪ್ರೌಢಗ್ರಂಥಗಳನ್ನು ಬರೆದು ಸುಮ್ಮನಾಗದೆ, ಎಲ್ಲ ವರ್ಗದ ಜನರಿಗೂ ಉಪಯೋಗವಾಗುವಂತೆ ಅಧ್ಯಾತ್ಮಗೀತೆಗಳನ್ನೂ ವೇದಾಂತಕಥಾವಳಿಗಳನ್ನೂ ರಚಿಸಿದರು; ಉದ್ಧರಣಗಳ ಕೊಲಾಹಲವಿಲ್ಲದ ಸುಬೋಧವಾದ ಉಪನ್ಯಾಸಮಂಜರಿಗಳನ್ನು ಪ್ರಕಟಿಸಿದರು. ಸಂಸ್ಕೃತಭಾಷಾಕಲಿಕೆಗೆ ನೆರವಾಗುವ ‘ಪ್ರಥಮ ಪುಸ್ತಕ’ಗಳೂ ಕೂಡ ಅವರ ಲೇಖನಿಯಿಂದ ಹೊರಬಂದವು. ಮತ್ತೂ ಹೆಚ್ಚಿನ ವ್ಯುತ್ಪತ್ತಿಗೆ ಅನುವಾಗಲೆಂದು ರಘುವಂಶಕಾವ್ಯದ ಎರಡು ಸರ್ಗಗಳನ್ನು ಸಟಿಪ್ಪಣವಾಗಿ ಅನುವಾದಿಸಿದರು. ಶುದ್ಧಜ್ಞಾನದಿಂದ ಚೋದಿತವಾದ ವೈರಾಗ್ಯ ಪ್ರಾಪ್ತವಾಗುವುದಕ್ಕೆ ಚಿತ್ತಶುದ್ಧಿ ಅತ್ಯವಶ್ಯ; ಚಿತ್ತಶುದ್ಧಿಯನ್ನುಂಟುಮಾಡಲು ನಿಷ್ಕಾಮಕರ್ಮ ಹಾಗೂ ನಿರ್ಮಲಭಕ್ತಿಗಳು ಅವಶ್ಯವಾಗಿ ನೆರವಾಗುತ್ತವೆ. ಇದನ್ನು ಮನಗಂಡ ಸ್ವಾಮಿಗಳು ಸಾಧಕರ ಸಹಾಯಕ್ಕಾಗಿ ‘ನಾರದ ಭಕ್ತಿಸೂತ್ರ’ವನ್ನು ಅನುವಾದಿಸಿದರು. ಲೋಕಸಂಗ್ರಹಕ್ಕಾಗಿ ಸ್ವಯಂ ಕರ್ಮಠರಾಗಿ ಬಾಳಿದರು.  

ಸ್ವಾಮಿಗಳು ತಮ್ಮ ಗುರುಗಳಾದ ಕೆ. ಎ. ಕೃಷ್ಣಸ್ವಾಮಿ ಅಯ್ಯರ್ ಅವರು ರಚಿಸಿದ Vedanta or The Science of Reality’ ಗ್ರಂಥದ ಬೆಳಕಿನಲ್ಲಿಯೇ ಮುನ್ನಡೆದು ಉಪನಿಷತ್-ತತ್ತ್ವವನ್ನು ಅನ್ಯಾದೃಶವಾಗಿ ಅನಾವರಣಗೊಳಿಸುವ ‘ಪರಮಾರ್ಥಚಿಂತಾಮಣಿ’ ಎಂಬ ಗ್ರಂಥವನ್ನು ರಚಿಸಿದರು. ಇದರಲ್ಲಿ ಅನುಸರಿಸಿರುವುದು ಅವಸ್ಥಾತ್ರಯಪ್ರಕ್ರಿಯೆ. ಯಾವ ಶ್ರುತಿ-ಸ್ಮೃತಿವಾಕ್ಯಗಳನ್ನು ಉದ್ಧರಿಸುವ ಗೋಜಿಗೂ ಹೋಗದೆ ಕೇವಲ ನಿರ್ವಿಶಿಷ್ಟಾನುಭವವನ್ನು ನಚ್ಚಿ  ಬ್ರಹ್ಮವನ್ನು ಅರಿಯಬಹುದೆಂದು ಈ ಗ್ರಂಥವು ನಿಶ್ಚಪ್ರಚವಾಗಿ ತೋರಿಸಿಕೊಡುತ್ತದೆ. ವೇದಾಂತವನ್ನು ನಂಬಿಕೆಯ ಮೇಲೆ ನಿಲ್ಲಿಸದೆ ಸಾರ್ವತ್ರಿಕಾನುಭವವನ್ನು ಅಶ್ರಯಿಸಿರುವುದು ಈ ಕೃತಿಯ ವೈಶಿಷ್ಟ್ಯ. ಇದರಿಂದಾದ ಅತಿದೊಡ್ಡ ಉಪಕಾರವೆಂದರೆ – ವೇದಾಂತಕ್ಕೆ ಅಂಟಿದ್ದ ಹಣೆಪಟ್ಟಿಗಳೆಲ್ಲವೂ ಕಳಚಿಹೋಗಿ ಅದು ವಿಚಾರಸಹವಾಯಿತು.

ವೇದಾಂತವೆಂಬ ಒಂದೇ ವಿಚಾರವನ್ನು ಕುರಿತು ೨೦೦ಕ್ಕೂ ಹೆಚ್ಚಿನ ಗ್ರಂಥಗಳನ್ನು ಸ್ವಾಮಿಗಳು ಕನ್ನಡ, ಸಂಸ್ಕೃತ ಮತ್ತು ಇಂಗ್ಲಿಷ್ ಭಾಷೆಗಳಲ್ಲಿ ರಚಿಸಿದ್ದಾರೆ. ತೊಂಭತ್ತಕ್ಕೂ ಮೀರಿದ ಅಪರವಯಸ್ಸಿನಲ್ಲಿಯೂ ವ್ಯಾಧಿಗಳಾವುದನ್ನೂ ಲೆಕ್ಕಿಸದೆ ಹಾಸಿಗೆಯಿಂದ ತೆವಳಿಕೊಂಡು ಬಂದು ಉಪನ್ಯಾಸ ಮಾಡುತ್ತಿದ್ದರೆಂದರೆ, ಅವರಲ್ಲಿ ಸದಾ ಜಾಗೃತವಾಗಿದ್ದ ವೇದಾಂತವರಿವಸ್ಯೆಯ ತುಡಿತದ ಬಗೆಗೆ ಏನು ಹೇಳಲಾದೀತು?

ನಮಸ್ಕುರ್ಮೋ ಯಥಾಬಲಂ.

 

Comments

Author(s)

About:

Shashi Kiran B N holds a bachelor’s degree in Mechanical Engineering and a master's degree in Sanskrit. His interests include Indian aesthetics, Hindu scriptures, Sanskrit and Kannada literature, and philosophy. A literary aficionado, Shashi enjoys composing poetry set to classical meters in Sanskrit. He co-wrote a translation of Śatāvadhāni Dr. R Ganesh’s Kannada work Kavitegondu Kathe.

Prekshaa Publications

Prekṣaṇīyam is an anthology of essays on Indian classical dance and theatre authored by multifaceted scholar and creative genius, Śatāvadhāni Dr. R Ganesh. As a master of śāstra, a performing artiste (of the ancient art of Avadhānam), and a cultured rasika, he brings a unique, holistic perspective...

Yaugandharam

इदं किञ्चिद्यामलं काव्यं द्वयोः खण्डकाव्ययोः सङ्कलनरूपम्। रामानुरागानलं हि सीतापरित्यागाल्लक्ष्मणवियोगाच्च श्रीरामेणानुभूतं हृदयसङ्क्षोभं वर्णयति । वात्सल्यगोपालकं तु कदाचिद्भानूपरागसमये घटितं यशोदाश्रीकृष्णयोर्मेलनं वर्णयति । इदम्प्रथमतया संस्कृतसाहित्ये सम्पूर्णं काव्यं...

Vanitakavitotsavah

इदं खण्डकाव्यमान्तं मालिनीछन्दसोपनिबद्धं विलसति। मेनकाविश्वामित्रयोः समागमः, तत्फलतया शकुन्तलाया जननम्, मातापितृभ्यां त्यक्तस्य शिशोः कण्वमहर्षिणा परिपालनं चेति काव्यस्यास्येतिवृत्तसङ्क्षेपः।

Vaiphalyaphalam

इदं खण्डकाव्यमान्तं मालिनीछन्दसोपनिबद्धं विलसति। मेनकाविश्वामित्रयोः समागमः, तत्फलतया शकुन्तलाया जननम्, मातापितृभ्यां त्यक्तस्य शिशोः कण्वमहर्षिणा परिपालनं चेति काव्यस्यास्येतिवृत्तसङ्क्षेपः।

Nipunapraghunakam

इयं रचना दशसु रूपकेष्वन्यतमस्य भाणस्य निदर्शनतामुपैति। एकाङ्करूपकेऽस्मिन् शेखरकनामा चित्रोद्यमलेखकः केनापि हेतुना वियोगम् अनुभवतोश्चित्रलेखामिलिन्दकयोः समागमं सिसाधयिषुः कथामाकाशभाषणरूपेण निर्वहति।

Bharavatarastavah

अस्मिन् स्तोत्रकाव्ये भगवन्तं शिवं कविरभिष्टौति। वसन्ततिलकयोपनिबद्धस्य काव्यस्यास्य कविकृतम् उल्लाघनाभिधं व्याख्यानं च वर्तते।

Karnataka’s celebrated polymath, D V Gundappa brings together in the third volume, some character sketches of great literary savants responsible for Kannada renaissance during the first half of the twentieth century. These remarkable...

Karnataka’s celebrated polymath, D V Gundappa brings together in the second volume, episodes from the lives of remarkable exponents of classical music and dance, traditional storytellers, thespians, and connoisseurs; as well as his...

Karnataka’s celebrated polymath, D V Gundappa brings together in the first volume, episodes from the lives of great writers, poets, literary aficionados, exemplars of public life, literary scholars, noble-hearted common folk, advocates...

Evolution of Mahabharata and Other Writings on the Epic is the English translation of S R Ramaswamy's 1972 Kannada classic 'Mahabharatada Belavanige' along with seven of his essays on the great epic. It tells the riveting...

Shiva-Rama-Krishna is an English adaptation of Śatāvadhāni Dr. R Ganesh's popular lecture series on the three great...

Bharatilochana

ಮಹಾಮಾಹೇಶ್ವರ ಅಭಿನವಗುಪ್ತ ಜಗತ್ತಿನ ವಿದ್ಯಾವಲಯದಲ್ಲಿ ಮರೆಯಲಾಗದ ಹೆಸರು. ಮುಖ್ಯವಾಗಿ ಶೈವದರ್ಶನ ಮತ್ತು ಸೌಂದರ್ಯಮೀಮಾಂಸೆಗಳ ಪರಮಾಚಾರ್ಯನಾಗಿ  ಸಾವಿರ ವರ್ಷಗಳಿಂದ ಇವನು ಜ್ಞಾನಪ್ರಪಂಚವನ್ನು ಪ್ರಭಾವಿಸುತ್ತಲೇ ಇದ್ದಾನೆ. ಭರತಮುನಿಯ ನಾಟ್ಯಶಾಸ್ತ್ರವನ್ನು ಅರ್ಥಮಾಡಿಕೊಳ್ಳಲು ಇವನೊಬ್ಬನೇ ನಮಗಿರುವ ಆಲಂಬನ. ಇದೇ ರೀತಿ ರಸಧ್ವನಿಸಿದ್ಧಾಂತವನ್ನು...

Vagarthavismayasvadah

“वागर्थविस्मयास्वादः” प्रमुखतया साहित्यशास्त्रतत्त्वानि विमृशति । अत्र सौन्दर्यर्यशास्त्रीयमूलतत्त्वानि यथा रस-ध्वनि-वक्रता-औचित्यादीनि सुनिपुणं परामृष्टानि प्रतिनवे चिकित्सकप्रज्ञाप्रकाशे। तदन्तर एव संस्कृतवाङ्मयस्य सामर्थ्यसमाविष्कारोऽपि विहितः। क्वचिदिव च्छन्दोमीमांसा च...

The Best of Hiriyanna

The Best of Hiriyanna is a collection of forty-eight essays by Prof. M. Hiriyanna that sheds new light on Sanskrit Literature, Indian...

Stories Behind Verses

Stories Behind Verses is a remarkable collection of over a hundred anecdotes, each of which captures a story behind the composition of a Sanskrit verse. Collected over several years from...