ಸಾಮಾನ್ಯವಾಗಿ ಭಾರತೀಯ ತತ್ತ್ವಚಿಂತನೆಯಲ್ಲಿ ಆಸಕ್ತಿಯುಳ್ಳವರಿಗೆ ಅಧ್ಯಾತ್ಮ ಎಂಬ ಶಬ್ದ ಕಿವಿಗೆ ಬಿದ್ದಿರುತ್ತದೆ. ಅತ್ಯಂತ ಪ್ರಾಚೀನ ಉಪನಿಷತ್ತುಗಳಲ್ಲಿಯೇ ಇದರ ಉಲ್ಲೇಖವಿದೆ (ಉದಾ: ಛಾಂದೋಗ್ಯ. ೪.೩.೩ ಮತ್ತು ತೈತ್ತಿರೀಯ. ೧.೩). ಇದೇ ರೀತಿ ಅಧಿಭೂತ, ಅಧಿದೈವ ಮತ್ತು ಅಧಿಯಜ್ಞ ಎಂಬ ಶಬ್ದಗಳೂ ಆಗೀಗ ಕೇಳಿಬರುತ್ತವೆ. ನಾನರಿತ ಮಟ್ಟಿಗೆ ಮೊದಲ ಬಾರಿ ಈ ನಾಲ್ಕೂ ಪದಗಳ ಒಟ್ಟು ಪ್ರಸ್ತಾವ ಮತ್ತು ವಿವರಣೆಗಳನ್ನು ಭಗವದ್ಗೀತೆಯಲ್ಲಿ ನೋಡುತ್ತೇವೆ (೮.೧—೪). ಇದರ ಪ್ರಕಾರ ಅಧಿಭೂತವೆಂದರೆ ನಾಶವಾಗಬಲ್ಲ ಎಲ್ಲ ಬಗೆಯ ಅಸ್ತಿತ್ವ; ಅಧಿದೈವವೆಂದರೆ ಆಗಸದಲ್ಲಿ ಬೆಳಗುವ ಸೂರ್ಯಬಿಂಬದಲ್ಲಿ ನೆಲಸಿರುವನೆಂದು ನಮ್ಮ ಸಂಸ್ಕೃತಿ ನಂಬಿದ ಸೃಷ್ಟಿಕರ್ತ; ಅಧಿಯಜ್ಞವೆಂದರೆ ನಮ್ಮೊಳಗಿರುವ ಭಗವಂತ; ಅಧ್ಯಾತ್ಮವೆಂದರೆ ಪ್ರತಿಯೊಂದು ಅಸ್ತಿತ್ವದ ಮೂಲಸ್ವಭಾವ. ಇದು ಅವಿನಾಶಿ, ಅದ್ವಿತೀಯ ಮತ್ತು ಇದು ತನ್ನಂತೆ ತಾನಿರುವ, ತಾನೇ ತಾನಾದ ತತ್ತ್ವ. (ಈ ವಿವರಣೆಯು ಶಂಕರಭಗವತ್ಪಾದರ ಭಗವದ್ಗೀತಾಭಾಷ್ಯದ ಬೆಳಕಿನಲ್ಲಿ ಸಾಗಿದೆ.) ಇಷ್ಟಕ್ಕೂ ಈ ನಾಲ್ಕು ಪದಗಳ ಅಕ್ಷರಾರ್ಥವಿಷ್ಟು: ಭೂತ ಅಥವಾ ಇರುವ ಎಲ್ಲ ವಸ್ತುಗಳನ್ನು ಕುರಿತದ್ದು ಅಧಿಭೂತ; ದೈವ ಅಥವಾ ನಮ್ಮ ಶ್ರದ್ಧಾ-ಭಕ್ತಿಗಳಿಗೆ ನೆಲೆಯಾಗಿರುವ ದೇವರನ್ನು ಕುರಿತದ್ದು ಅಧಿದೈವ; ಯಜ್ಞ ಅಥವಾ ಸಮಷ್ಟಿರೂಪದ ಆರಾಧನೆ, ಸಹಜೀವನ ಮತ್ತು ಹಂಚಿಕೊಳ್ಳುವಿಕೆಗಳನ್ನು ಕುರಿತದ್ದು ಅಧಿಯಜ್ಞ; ಆತ್ಮ ಅಥವಾ ನಾವೂ ಸೇರಿದಂತೆ ಇರುವ ಎಲ್ಲ ಸೃಷ್ಟಿಯ ಜೀವಾಳವಾಗಿರುವ, ನಮ್ಮೆಲ್ಲರ ಮೂಲಸ್ವಭಾವವೇ ಎನಿಸಿರುವ ಪರಬ್ರಹ್ಮವಸ್ತುವನ್ನು ಕುರಿತದ್ದು ಅಧ್ಯಾತ್ಮ. ವ್ಯಾಕರಣದ ಪ್ರಕಾರ ಹೇಳುವುದಾದರೆ ‘ಅಧಿ’ ಎಂಬ ಉಪಸರ್ಗದ ಬಳಿಕ ಭೂತ, ದೈವ, ಯಜ್ಞ ಮತ್ತು ಆತ್ಮ ಶಬ್ದಗಳು ಕ್ರಮವಾಗಿ ಬಂದು ಈ ನಾಲ್ಕು ಪದಗಳು ಮೂಡಿವೆ. ಅಧಿ ಎಂಬುದಕ್ಕೆ ಕುರಿತಾದದ್ದು ಎಂಬ ಅರ್ಥವನ್ನು ಹೇಳಬಹುದು.
ಈ ನಾಲ್ಕು ತತ್ತ್ವಗಳೂ ಪರಸ್ಪರ ವಿರುದ್ಧವಲ್ಲದ, ಅನ್ಯೋನ್ಯವಾಗಿ ಪೂರಕವೂ ಆಗಬಲ್ಲ ಮೌಲ್ಯಗಳನ್ನು ಸೂಚಿಸುತ್ತಿವೆ. ಅಲ್ಲದೆ ಇವು ಅನ್ವಿತವಾಗುವ ಸ್ತರಗಳೂ ಪ್ರತಿನಿಧಿಸುವ ಸತ್ಯಗಳೂ ವಿಭಿನ್ನವಾಗಿವೆ. ಆದುದರಿಂದಲೇ ಇವುಗಳ ನಡುವೆ ವೈಷಮ್ಯವಿಲ್ಲ. ಇಂದು ನಮ್ಮ ಸುತ್ತಣ ಜಗತ್ತಿನಲ್ಲಿ ಎದ್ದುಕಾಣುವ ಎಷ್ಟೋ ಬಗೆಯ ವೈರುದ್ಧ್ಯ ಮತ್ತು ವೈಷಮ್ಯಗಳನ್ನು ಇವುಗಳ ಬೆಳಕಿನಲ್ಲಿ ಕಂಡರೆ ಲೋಕಹಿತಕಾರಿಗಳಾದ ಸಮನ್ವಯ-ಸಾಮರಸ್ಯಗಳು ಸಿದ್ಧಿಸದಿರವು.
ತಾತ್ತ್ವಿಕ ವ್ಯಾಪ್ತಿ
ಮೇಲೆ ಕಾಣಿಸಿದ ನಾಲ್ಕೂ ತತ್ತ್ವಗಳಿಗೆ ಅಪಾರ ವ್ಯಾಪ್ತಿಯಿದೆ. ಇವನ್ನು ಕೇವಲ ವೇದಾಂತಚಿಂತನೆಗೆ ಸೀಮಿತಗೊಳಿಸದೆ ನಮ್ಮೆಲ್ಲರ ಬಾಳಿನ ಅನೇಕ ಸನ್ನಿವೇಶಗಳಲ್ಲಿಯೂ ಸಮುಚಿತವಾಗಿ ಅನ್ವಯಿಸಿಕೊಳ್ಳಬಹುದು. ಆರ್ಷೇಯವಾದ ಇಂಥ ಎಷ್ಟೋ ವಿಚಾರಗಳನ್ನು ಎಲ್ಲ ದೇಶ-ಕಾಲಗಳಿಗೆ ಸೇರಿದ ಎಲ್ಲ ಬಗೆಯ ಜನರೂ ತಮ್ಮ ತಮ್ಮ ಜೀವನಗಳಲ್ಲಿ ಅರ್ಥಪೂರ್ಣವಾಗಿ ಅನ್ವಯಿಸಿಕೊಂಡು ಕೃತಾರ್ಥರಾಗಲೆಂದೇ ವಿಶಾಲಬುದ್ಧಿಗಳಾದ ಮಹರ್ಷಿಗಳ ದರ್ಶನ ಉದಿಸಿದೆಯೆಂದರೆ ಅತಿಶಯವಲ್ಲ. ಇಂಥ ಒಂದು ಅನ್ವಯವನ್ನು ಸೋದಾಹರಣವಾಗಿ ಕಂಡರೆ ಈ ತತ್ತ್ವಗಳು ಮತ್ತಷ್ಟು ಪ್ರಸ್ಫುಟವಾದಾವು.
ಸ್ನಾನದಿಂದ ಮೈಯ ಕೊಳೆ ಹೋಗುತ್ತದೆಂಬುದು ಅಧಿಭೂತಸ್ತರದ ಸತ್ಯ. ಇಂಥ ಸ್ನಾನವನ್ನು ದಿವ್ಯಕ್ಷೇತ್ರಗಳಲ್ಲಿ, ಪುಣ್ಯನದಿಗಳಲ್ಲಿ ಮಾಡಿದರೆ ದೈವಕೃಪೆ ದೊರೆತು ಸದ್ಗತಿ ಸಿಗುತ್ತದೆ; ಇಷ್ಟಾರ್ಥಗಳು ನೆರವೇರುತ್ತವೆ ಎಂಬ ನಂಬಿಕೆ ಅಧಿದೈವಸ್ತರದ ಸತ್ಯ. ಈ ಬಗೆಯ ಬಹಿರಂಗಸ್ನಾನವು ಅಂತರಂಗಕ್ಕೂ ಒದಗಿದರೆ ಅದು ಮನೋಬುದ್ಧಿಗಳ ಮಾಲಿನ್ಯವನ್ನು ಕಳೆದು ನಮ್ಮನ್ನು ಇಲ್ಲಿಯೇ ಉತ್ತಮರನ್ನಾಗಿ ಮಾಡುವುದೆಂಬ ವಿವೇಕ ಅಧ್ಯಾತ್ಮಸ್ತರದ ಸತ್ಯ. ಹೀಗೆ ಒಳಗೂ ಹೊರಗೂ ಆಗಬೇಕಿರುವ ಪುಣ್ಯಸ್ನಾನಕ್ಕೆ ನಮ್ಮ ಸುತ್ತಣ ಸಮಾಜವೂ ಅದಕ್ಕೆ ಸೇರಿದ ವಿವಿಧ ರೀತಿಯ ಮನುಜರ ಸ್ನೇಹ-ಸಹಕಾರಗಳೂ ಒದಗಿಬರಬೇಕೆಂಬ ಕಳಕಳಿ ಅಧಿಯಜ್ಞಸ್ತರದ ಸತ್ಯ. ಮರದ ಕೊರಡೊಂದು ಗೊಂಬೆಯಾಗುವುದು ಅಧಿಭೂತದ ತಥ್ಯವಾದರೆ, ಅದನ್ನು ದೇವರೆಂದು ಪೂಜಿಸುವ ಶ್ರದ್ಧೆ ಅಧಿದೈವದ ಹಂತದ್ದು. ಈ ದೇವರನ್ನೂ ಅದು ಪ್ರತಿನಿಧಿಸುವ ಸಮಸ್ತ ಮೌಲ್ಯಗಳನ್ನೂ ನಮ್ಮ ಒಳಹೊರಗೆ ಕಂಡುಕೊಳ್ಳಬಲ್ಲ ಎಚ್ಚರ ಅಧ್ಯಾತ್ಮದ ಸಂವೇದನೆಯಾದರೆ, ಈ ಭಾವವನ್ನು ಇಡಿಯ ಸಮಾಜದೊಳಗೆ ಮೈಗೂಡಿಸಿಕೊಳ್ಳುವ ಕ್ರಿಯಾಶೀಲತೆ ಅಧಿಯಜ್ಞದ ಬಾಧ್ಯತೆ.
ಅಧ್ಯಾತ್ಮವು ಸರ್ವೋತ್ಕೃಷ್ಟ
ಅಧಿದೈವವಷ್ಟೇ ಸೇರಿಕೊಂಡ ಅಧಿಯಜ್ಞವು ಅರ್ಥವಾಗದ ಯಾವುದೋ ವರ್ಗಕ್ಕೆ ಸೀಮಿತವಾದ ಆಚರಣೆಯೆನಿಸಿದರೆ ಅಧಿಭೂತಕ್ಕಷ್ಟೇ ಸೀಮಿತವಾದ ಅಧಿಯಜ್ಞವು ಪ್ರದರ್ಶನಪ್ರಿಯತೆಯ ರಾಜಸಿಕ ಸಮಾಜಸೇವೆಯಾಗಿ ಪರಿಣಮಿಸುತ್ತದೆ. ಅಧಿಭೂತ-ಅಧಿದೈವಗಳಿರದ ಅಧಿಯಜ್ಞ ನೀರು, ಗೊಬ್ಬರ ಮತ್ತು ಬೇಲಿಗಳಿಲ್ಲದ ಸಸ್ಯವೊಂದರ ಅತಂತ್ರ ಜೀವನದಂತೆ ಆದೀತು. ಅಧ್ಯಾತ್ಮವಾದರೋ ಆ ಗಿಡದ ಬೀಜವಾಗಿ, ಜೀವವಾಗಿ ಬೆಳಗುವ ಚೈತನ್ಯ. ಇದಿಲ್ಲದ ಅಧಿಭೂತ ಬರ್ಬರವೂ ದುರ್ಭರವೂ ಆದ ಸ್ವಾರ್ಥವಾಗಿ, ಲೋಕಕ್ಕೇ ಮಾರಕವಾಗುವುದು. ಅಂತೆಯೇ ಅಧಿದೈವವು ಅಂಧಶ್ರದ್ಧೆಯಾಗಿ, ಕಂದಾಚಾರವೆನಿಸಿ, ಮತಾಗ್ರಹದ ಬೆಂಕಿಯಲ್ಲಿ ಜಗತ್ತನ್ನು ಬಾಡಿಸುವುದು; ಅಧಿಯಜ್ಞ ಕೂಡ ಆಳವಿಲ್ಲದ ಆಚರಣೆಯಾಗಿ, ಭಾವವಿಲ್ಲದ ಬದುಕಾಗಿ ವಿಶ್ವಜೀವನವನ್ನು ಸೊರಗಿಸುವುದು. ಆದುದರಿಂದ ಅಧ್ಯಾತ್ಮತತ್ತ್ವವು ಮಿಕ್ಕ ಮೂರು ಮೌಲ್ಯಗಳೆಂಬ ಮೂರು ಆಯಾಮಗಳ ಒಳಗಿರುವ ದ್ರವ್ಯದಂತೆ ಯಾವುದೇ ಅಸ್ತಿತ್ವಕ್ಕೂ ಸಾರವನ್ನು ತುಂಬಿಕೊಡುತ್ತದೆ; ಸಾರ್ಥಕ್ಯವನ್ನು ಸಾಧಿಸುತ್ತದೆ. ಆದುದರಿಂದ ಅಧ್ಯಾತ್ಮವಿಲ್ಲದ ಮಿಕ್ಕ ತತ್ತ್ವಗಳು ಟೊಳ್ಳೂ ಪೊಳ್ಳೂ ಆಗಿ ಪರಿಣಮಿಸದಿರವು. ಹೇಗೆ ಬ್ರಹ್ಮತತ್ತ್ವಕ್ಕೆ ಜಗತ್ತು, ಜೀವ ಮತ್ತು ಈಶ್ವರ ತತ್ತ್ವಗಳು ಅಧೀನವಾಗಿ ವಿವರ್ತವಾಗಿ ಇರುವುವೋ ಹಾಗೆಯೇ ಇವನ್ನೂ ಪರಿಭಾವಿಸಬೇಕು.
ನಮ್ಮ ಸುತ್ತಣ ಜಗತ್ತಿನ ವಾಸ್ತವಗಳೂ ಬಗೆಬಗೆಯ ಜನಗಳ ನಂಬಿಕೆಗಳೂ ಪರಸ್ಪರ ಹೊಂದಾಣಿಕೆ ಇಲ್ಲದೆ ಹೋರಾಡುವುದನ್ನು ನಾವು ಸಾಮಾನ್ಯವಾಗಿ ಕಾಣುತ್ತಲೇ ಇರುತ್ತೇವೆ. ಹೀಗಾಗಿಯೇ ಇವು ಕ್ರಿಯಾತ್ಮಕವಾಗಿ ವರ್ತಿಸಬೇಕಾದ ಆಧಿಯಜ್ಞಸ್ತರವೂ ಗೊಂದಲದಿಂದ ಕೂಡಿರುತ್ತದೆ. ಆದುದರಿಂದ ಇವುಗಳ ನಡುವೆ — ಅಂದರೆ ತಥ್ಯ ಅಥವಾ ವಾಸ್ತವಸ್ತರದ ಅಧಿಭೂತ ಮತ್ತು ಶ್ರದ್ಧೆ ಅಥವಾ ನಂಬಿಕೆಯ ಸ್ತರದ ಅಧಿದೈವಗಳಿಗೆ — ವಿರೋಧವಿಲ್ಲದಂತೆ ಸಮನ್ವಯವನ್ನು ಸಾಧಿಸಿ ತನ್ಮೂಲಕ ಅಧಿಯಜ್ಞದ ಸಂಪೂರ್ಣ ಪ್ರಯೋಜನವನ್ನು ಹೊಂದಲು ಅಧ್ಯಾತ್ಮವೊಂದೇ ಶರಣ್ಯ. ಅಧ್ಯಾತ್ಮವು ಸಾರ್ವತ್ರಿಕ ನಿರ್ವಿಶೇಷ ಅನುಭವವಾದ ಕಾರಣ ಇಲ್ಲಿ ದೇಶ, ಕಾಲ ಮತ್ತು ವಸ್ತು ಎಂಬ ಮೂರು ಬಗೆಯ ಮಿತಿಗಳಿಗೆ (ಪರಿಚ್ಛೇದ) ಅವಕಾಶವಿರುವುದಿಲ್ಲ. ಹೀಗಾಗಿ ಇದು ಕೇವಲ ಇರವು, ಅರಿವು ಮತ್ತು ನಲವುಗಳು ಮುಪ್ಪುರಿಗೊಂಡ ಸತ್-ಚಿತ್-ಆನಂದ ಎಂಬ ಮಹಾಮೌಲ್ಯದ ಘನಿಷ್ಠ ಸಂವೇದನೆಯಾಗಿರುತ್ತದೆ. ಆದುದರಿಂದಲೇ ಇಲ್ಲಿ ಯಾವುದೇ ಎರಡನೆಯ ವಸ್ತುವಿನ ಅಥವಾ ಆ ಬಗೆಯ ಆಲೋಚನೆಯ ಅಸ್ತಿತ್ವವೂ ಇರುವುದಿಲ್ಲ. ಅಂದರೆ ಎಂಥದ್ದೇ ರೀತಿಯ ರಾಗ-ದ್ವೇಷಗಳಿಗೂ ಆಸ್ಪದವಿಲ್ಲದ ಸ್ಥಿತಿ ಇದೆಂದು ಸ್ಪಷ್ಟವಾಗುತ್ತದೆ. ದೇಹ, ಇಂದ್ರಿಯ, ಮನಸ್ಸು, ಬುದ್ಧಿ ಎಂಬಿವೇ ಉಪಾಧಿಗಳಿಲ್ಲದೆ ಕೇವಲ ಸಚ್ಚಿದಾನಂದವೆಂಬ ಅಸ್ತಿತ್ವವಷ್ಟೇ ನಮ್ಮದಾಗಿ ಉಳಿದಿರುವ ಗಾಢನಿದ್ರೆಯಂಥ ಈ ಸ್ಥಿತಿಯಲ್ಲಿ ಲಿಂಗ, ಜಾತಿ, ಜನಾಂಗ, ವಯಸ್ಸು ಮುಂತಾದ ಮತ್ತೂ ಸಾಪೇಕ್ಷ ಉಪಾಧಿಗಳ ಅಸ್ತಿವವವಾದರೂ ಎಲ್ಲಿ?
ಪಂಚಕೋಶವಿವೇಕ
ತೈತ್ತಿರೀಯೋಪನಿಷತ್ತು ವಿಶೇಷವಾಗಿ ವಿವರಿಸಿರುವ ಅನ್ನಮಯ, ಪ್ರಾಣಮಯ, ಮನೋಮಯ, ವಿಜ್ಞಾನಮಯ ಮತ್ತು ಆನಂದಮಯ ಎಂಬ ಐದು ಕೋಶಗಳ ಸ್ವಾರಸ್ಯವನ್ನು ಸದ್ಯದ ವಿಚಾರದೊಡನೆ ಹೋಲಿಸಿ ನೋಡಿದಲ್ಲಿ ಹೆಚ್ಚಿನ ಉಪಯೋಗ ಉಂಟು. ವ್ಯಷ್ಟಿಸ್ತರದಲ್ಲಿ ಭೌತಿಕವಾದ ಶರೀರ ಮತ್ತು ಸಮಷ್ಟಿಸ್ತರದಲ್ಲಿ ಜಡವಾದ ಜಗತ್ತು ಅನ್ನಮಯ ಎಂಬ ಹಂತವನ್ನು ಪ್ರತಿನಿಧಿಸಿದರೆ, ಇವುಗಳಲ್ಲಿ ಚಟುವಟಿಕೆ ಮೈಗೂಡಿದ ಹಂತವೇ ಪ್ರಾಣಮಯ. ಮನೋಮಯವು ಜೀವರಾಶಿಗಳ ಭಾವನೆಗಳ ಹಂತವಾದರೆ, ವಿಜ್ಞಾನಮಯವು ವಿಚಾರ ಮತ್ತು ವಿವೇಕಗಳ ಹಂತ. ಆನಂದಮಯವು ತನ್ನ ಹೆಸರಿನಿಂದಲೇ ತಿಳಿಯುವಂತೆ ಎಲ್ಲ ಅಸ್ತಿತ್ವಗಳೂ ತಮ್ಮೊಳಗೆ ಆನಂದವನ್ನು ತುಂಬಿಕೊಂಡಿರುವ ಹಂತ.
ಅನ್ನಮಯವನ್ನು ಅಧಿಭೂತದ ಪ್ರತಿನಿಧಿಯೆನ್ನಬಹುದು. ಪ್ರಾಣಮಯವು ಇದಕ್ಕೆ ಪೂರಕ. ಕೆಲವೊಮ್ಮೆ ಮನೋಮಯ ಮತ್ತು ವಿಜ್ಞಾನಮಯಗಳೂ ಅಧಿಭೂತಕ್ಕೆ ಒದಗಿಬರುತ್ತವೆ. ಅಧಿದೈವವು ಹೆಚ್ಚಾಗಿ ಮನೋಮಯಕ್ಕೆ ಸಲ್ಲುತ್ತದೆ. ಇದಕ್ಕೂ ಅನ್ನಮಯ, ಪ್ರಾಣಮಯ ಮತ್ತು ವಿಜ್ಞಾನಮಯಗಳು ಪೂರಕವಾಗಿ ಬರಬಹುದು. ಅಧಿಯಜ್ಞವು ಈ ನಾಲ್ಕೂ ಕೋಶಗಳಲ್ಲಿ ವ್ಯಾಪಿಸಿದೆ. ಆನಂದಮಯ ಅಧ್ಯಾತ್ಮದ ನೆಲೆಯೇ ಆಗಿದೆ. ಈ ಆನಂದಮಯಕೋಶದ ಅಧೀನದಲ್ಲಿಯೇ ಮಿಕ್ಕ ಕೋಶಗಳಿದ್ದು ತಮ್ಮ ತಮ್ಮ ಬಾಧ್ಯತೆಗಳನ್ನು ನಿರ್ವಹಿಸಿದಾಗಲೇ ಜಗತ್ತಿಗೂ ಜೀವಕ್ಕೂ ನೆಮ್ಮದಿ.
ಪುರುಷಾರ್ಥಗಳು
ಅಧಿಭೂತ, ಅಧಿದೈವ, ಅಧಿಯಜ್ಞ ಮತ್ತು ಅಧ್ಯಾತ್ಮಗಳ ಜೊತೆಗೆ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷ ಎಂದು ನಾಲ್ಕು ಬಗೆಯಾಗಿ ವಿಭಕ್ತವಾದ ಪುರುಷಾರ್ಥಗಳನ್ನೂ ಪರಿಶೀಲಿಸಿದರೆ ಹೆಚ್ಚಿನ ಪ್ರಯೋಜನವುಂಟು. ಧರ್ಮ-ಮೋಕ್ಷಗಳನ್ನೇ ಧಿಕ್ಕರಿಸಿ ಇಹಲೋಕದ ಅರ್ಥ ಮತ್ತು ಕಾಮಗಳನ್ನೇ ಪ್ರಧಾನವಾಗಿ ನಚ್ಚಿಕೊಳ್ಳುವುದು ಧೂರ್ತ ಚಾರ್ವಾಕರೆಂದು ಹೆಸರಾಗಿದ್ದ ಪ್ರಾಚೀನ ಭಾರತದ ಚಿಂತಕವರ್ಗವೊಂದಕ್ಕೆ ಸಲ್ಲುವ ನಿಲವಾಗುತ್ತದೆ. ಇದನ್ನು ಆಧುನಿಕ ವಿಚಾರವಾದಿಗಳೆಂದು ಹೇಳಿಕೊಳ್ಳುವ ಎಷ್ಟೋ ಮಂದಿಯಲ್ಲಿಯೂ ಕಾಣಬಹುದು. ಹೀಗಲ್ಲದೆ ಮೋಕ್ಷವನ್ನು ಪೂರ್ಣವಾಗಿ ಅಲ್ಲಗಳೆದು ತಮ್ಮ ತಮ್ಮ ಅರ್ಥ-ಕಾಮಗಳ ಈಡೇರಿಕೆಗೆ ಅನುಕೂಲಿಸಬಲ್ಲ ವ್ಯವಸ್ಥೆಯೊಂದನ್ನು ಮಾತ್ರ ಧರ್ಮವೆಂದು ಸೀಮಿತಗೊಳಿಸಿ ‘ಲಿವ್ ಅಂಡ್ ಲೆಟ್ ಲಿವ್’ (ನೀನೂ ಬಾಳು, ಇನ್ನೊಬ್ಬರನ್ನೂ ಬಾಳಿಸು) ಎಂಬ — ಅಂದವಾದರೂ ಅನುಷ್ಠಾನಕ್ಕೆ ಬರಲಾಗದ — ಸೂತ್ರವನ್ನು ತಾವೆಲ್ಲ ಅನುಸರಿಸುತ್ತಿರುವರೆಂಬಂತೆ ಬಿಂಬಿಸಿಕೊಳ್ಳುವ ಸುಶಿಕ್ಷಿತ ಚಾರ್ವಾಕರೆಂಬ ಮತ್ತೊಂದು ವರ್ಗವೂ ಭಾರತೀಯ ದರ್ಶನಗಳಲ್ಲಿ ಕಾಣಸಿಗುತ್ತದೆ. ತಮ್ಮನ್ನು ತಾವು ಮಾನವವಾದಿ, ಉದಾರವಾದಿ, ಪ್ರಗತಿವಾದಿ ಎಂದೆಲ್ಲ ವರ್ಣಿಸಿಕೊಳ್ಳುವ ಹೆಚ್ಚಿನ ಜನರು ಈ ನಿಲವನ್ನು ಅತಿಶಯವಾಗಿ ನೆಮ್ಮುತ್ತಾರೆ. ಇಂದಿಗೂ ಇದು ಜಗತ್ತಿನಲ್ಲಿ ಎದುರಿಲ್ಲದೆ ಮೆರೆಯುತ್ತಿರುವ ವ್ಯಾಪಕ ವಿಚಾರಪ್ರಣಾಲಿ.
ಇವರಿಬ್ಬರಂತೆ ಅಲ್ಲದೆ ನಾಲ್ಕೂ ಪುರುಷಾರ್ಥಗಳನ್ನು ಒಪ್ಪಿಯೂ ಮೋಕ್ಷವನ್ನು ಸಾವಿನ ಬಳಿಕವೇ ಪಡೆಯಬಹುದಾದ ಮೌಲ್ಯವೆಂದು ಭಾವಿಸಿ ಆ ನಿಟ್ಟಿನಲ್ಲಿ ದುಡಿಯಲು ಧರ್ಮವನ್ನು ತಮ್ಮ ತಮ್ಮ ಮತಗ್ರಂಥಗಳ, ಪ್ರವಾದಿಗಳ, ಪ್ರಾಚಾರ್ಯರ ಸಂಕುಚಿತವೂ ಸಾಗ್ರಹವೂ ಆದ ಮಾತುಗಳ ಅಪ್ರಬುದ್ಧ ಅನುಷ್ಠಾನವಷ್ಟೇ ಎಂದು ನಿಶ್ಚಯಿಸಿ ನಡೆಯುವ ಶ್ರದ್ಧಾಜಡರೂ ಇದ್ದಾರೆ. ಇವರನ್ನು ಜಗತ್ಸತ್ಯತ್ವವನ್ನು ಒಪ್ಪಿದ ಈಶ್ವರವಾದಿಗಳೆಂದು ನಮ್ಮ ಪರಂಪರೆ ವಿವರಿಸುವುದುಂಟು. ಈ ವರ್ಗದವರಿಗೂ ಅರ್ಥ-ಕಾಮಗಳಲ್ಲಿ ಅಪಾರ ಆಸಕ್ತಿಯಿದೆ; ರಾಗ-ದ್ವೇಷಗಳಲ್ಲಿ ನೆಲೆಯಿದೆ. ಆದರೆ ಅರ್ಥ-ಕಾಮಗಳಲ್ಲಿ ಇವರು ತಳೆದ ಆಸಕ್ತಿ ಹೆಚ್ಚಾಗಿ ಪರಲೋಕದಲ್ಲಿ ಸಿಗಬಹುದಾದ ಸಂಪತ್ತಿ-ಭೋಗಗಳಿಗೆ ಸಂಬಂಧಿಸಿದೆ; ರಾಗ-ದ್ವೇಷಗಳು ತಮ್ಮ ಅಭಿಪ್ರಾಯಗಳನ್ನು ಒಪ್ಪುವ ಅಥವಾ ಒಪ್ಪದ ವ್ಯಕ್ತಿಗಳಿಗೂ ವಿಚಾರಗಳಿಗೂ ತಳಿಕೆಹಾಕಿಕೊಂಡಿವೆ.
ಈ ಮೂರು ವರ್ಗದವರಿಗೂ ಪೂರ್ಣದೃಷ್ಟಿ ಇಲ್ಲವೆಂಬುದು ನಿಶ್ಚಿತ. ಆದರೆ ಧರ್ಮವನ್ನೇ ಒಪ್ಪದೆ ಕೇವಲ ಅರ್ಥ-ಕಾಮಗಳನ್ನೇ ಬೆಂಬತ್ತುವ ಧೂರ್ತ ಚಾರ್ವಾಕರಿಗಿಂತ ಸಂಕುಚಿತ ರೂಪದಲ್ಲಿಯಾದರೂ ಅದನ್ನು ಒಪ್ಪುವ ಸುಶಿಕ್ಷಿತ ಚಾರ್ವಾಕರು ಮೇಲು. ಮೋಕ್ಷವನ್ನು — ಇಲ್ಲಿಯೇ, ಈಗಲೇ ಎಲ್ಲರ ಅನುಭವಕ್ಕೆ ದಕ್ಕಬಹುದಾದ ಜೀವನ್ಮುಕ್ತಿಯ ಭವ್ಯ ಸ್ತರದಲ್ಲಿರಲಿ — ಸಾವಿನ ಬಳಿಕ ಸಿಗುವುವೆಂದು ಭಾವಿಸಲಾದ ವಿದೇಹಮುಕ್ತಿಯ ರೂಪದಲ್ಲಿಯೂ ಒಪ್ಪದ ಸುಶಿಕ್ಷಿತ ಚಾರ್ವಾಕರಿಗಿಂತ ಈಶ್ವರವಾದಿಗಳೂ ಜಗತ್ಸತ್ಯವಾದಿಗಳೂ ಆದ ಶ್ರದ್ಧಾವಂತರು ಎಷ್ಟೋ ಮೇಲು.
ಒಟ್ಟಿನಲ್ಲಿ ಈ ಎಲ್ಲ ಗುಂಪುಗಳಲ್ಲಿಯೂ ಅಧಿಭೂತದ ಪಾರಮ್ಯ ಎದ್ದುಕಾಣುವಂತಿದೆ; ಮಾತ್ರವಲ್ಲ, ಚಾರ್ವಾಕರೂ ಸೇರಿದಂತೆ ಎಲ್ಲರಲ್ಲಿಯೂ — ತಮ್ಮ ತಮ್ಮ ನಿಲವುಗಳನ್ನು ನಿರ್ವಿಶಿಷ್ಟ ಸಾರ್ವತ್ರಿಕ ಅನುಭವಕ್ಕೆ ಒದಗಿಬರುವ ಪೂರ್ಣತರ್ಕವೆಂಬ ಅಧ್ಯಾತ್ಮ ದೃಷ್ಟಿಯ ಬೆಳಕಿನಲ್ಲಿ ತಿದ್ದಿಕೊಳ್ಳದ ವಿಚಾರಾಗ್ರಹರೂಪದ — ಅಧಿದೈವದ ಆಧಿಕ್ಯವೂ ಇದೆಯೆಂದರೆ ವಿಚಿತ್ರವಾಗಿ ತೋರಿದರೂ ಸತ್ಯ. ಒಟ್ಟಿನಲ್ಲಿ ಎಲ್ಲಿಯೂ ಅಧ್ಯಾತ್ಮದ ಪಾರಮ್ಯವಿಲ್ಲ. ಜಗತ್ಸತ್ಯತ್ವದ ಪ್ರತಿಪಾದಕರಾದ ಈಶ್ವರವಾದಿಗಳು ಅಧ್ಯಾತ್ಮವೆಂದು ಹೇಳುವುದೆಲ್ಲ ಅಧಿದೈವದ ವಿವಿಧ ರೂಪಗಳೇ ಆಗಿರುತ್ತವೆ; ಅಧಿಭೂತವಾದಿಗಳು ತಾವು ನಚ್ಚಿಕೊಂಡ ಅಧಿಭೂತದ ಚೌಕಟ್ಟಿನೊಳಗೇ ಅಧ್ಯಾತ್ಮವನ್ನು ಇರುಕಿಸುವ ಹವಣಿನಲ್ಲಿ ಇರುತ್ತಾರೆ. ಹೀಗಾಗಿಯೇ ಈ ಎಲ್ಲ ವರ್ಗದವರು ಅಧಿಯಜ್ಞವನ್ನು ಆಚರಿಸುವಲ್ಲಿ ಪೂರ್ಣವಾಗಿ ಸೋಲದಿದ್ದರೂ ಅಪೂರ್ಣರಂತೂ ಆಗುತ್ತಾರೆ. ಒಟ್ಟಿನಲ್ಲಿ ದಿಟವಾದ ಅಧ್ಯಾತ್ಮದೃಷ್ಟಿ ಸಿದ್ಧವಾಗದೆ ಪುರುಷಾರ್ಥಚತುಷ್ಟಯದ ಅನುಸಂಧಾನವೂ ಸರಿಯಾಗದೆಂಬುದು ಪರಮಸತ್ಯ.
ಸ್ವಲ್ಪ ಆಳಕ್ಕೆ ಹೋಗಿ ನೋಡಿದರೆ ಸುಶಿಕ್ಷಿತ ಚಾರ್ವಾಕರ ಧರ್ಮದೃಷ್ಟಿ ಇಹಲೋಕದಲ್ಲಿ ತಮಗೆ ಸಿಗುವ ಲಾಭಗಳ ಮೇಲೆಯೇ ನಿಂತಿದೆ; ಅನುಕೂಲಸಿಂಧುವೆನಿಸಿದ ಕಾಣ್ಮೆಯಿಲ್ಲದ ಜಾಣ್ಮೆಯ ಹೊಂದಾಣಿಕೆಯಾಗಿದೆ; ಜಗತ್ಸತ್ಯತ್ವವನ್ನು ಒಪ್ಪಿದ ಈಶ್ವರವಾದಿಗಳ ಧರ್ಮದೃಷ್ಟಿಯು ಪರಲೋಕದಲ್ಲಿ ತಮಗೆ ಸಿಗುವ ಲಾಭಗಳ ಮೇಲೆ ನಿಂತಿದೆ; ಭಯ-ಕಾತರಗಳನ್ನೇ ಅವಲಂಬಿಸಿದ ಕ್ಲೀಬವೃತ್ತಿಯೂ ಆಗಿದೆಯೆಂದು ತಿಳಿಯದಿರದು. ಇಂಥ ಮನೋವೃತ್ತಿ ತಮ್ಮ ಆಗ್ರಹಗಳನ್ನು ಒಪ್ಪದವರ ಮೇಲೆ ಕ್ರೂರವೂ ಆಗುವುದು ನಿಜಕ್ಕೂ ಚೋದ್ಯ. ಒಟ್ಟಿನಲ್ಲಿ ಈ ಎಲ್ಲ ಗುಂಪುಗಳಲ್ಲಿ ಧರ್ಮವೂ ಅವ್ಯಾಜವಾಗಿ ಇಲ್ಲ; ಇರುವುದೆಲ್ಲ ವಾಸ್ತವ ಮತ್ತು ನಂಬಿಕೆ ಎಂಬ ಎರಡು ಬೇರೆ ಬೇರೆ ಜಾಡುಗಳಲ್ಲಿ ಸಾಗುತ್ತಿರುವ ಜಾಣ್ಮೆ ಮತ್ತು ಭಯಗಳೆಂಬ ಬಂಡಿಗಳ ಯಾತ್ರೆಯೇ ಆಗಿದೆ. ಇವು ಅನ್ಯಸಾಪೇಕ್ಷವಾದ ಭೋಗವನ್ನೇ ತಮ್ಮ ಗಮ್ಯವನ್ನಾಗಿ ಹೊಂದಿರುವುದರಲ್ಲಿ ಅಚ್ಚರಿ ಏನಿಲ್ಲ. ಇಂಥ ಯಾವುದೇ ಯಾತ್ರೆಯಲ್ಲಿ ಕಾಮನೆಯೇ ಪಯಣಿಗನಾಗುವುದು ಅನಿವಾರ್ಯ. ಬಯಕೆಯೊಡನೆ ಪಯಣ ಯಾರಿಗೆ ತಾನೆ ನೆಮ್ಮದಿಯನ್ನು ತಂದೀತು?
ತ್ರಿಗುಣ
ಸಾಂಖ್ಯ, ಯೋಗ, ವೇದಾಂತ ಮುಂತಾದ ವಿವಿಧ ದರ್ಶನಗಳು ವಿಸ್ತೃತವಾಗಿ ನಿರೂಪಿಸುವ ಸತ್ತ್ವ, ರಜಸ್ಸು ಮತ್ತು ತಮಸ್ಸು ಎಂಬ ಮೂರು ಗುಣಗಳನ್ನೂ ಅಧಿಭೂತ, ಅಧಿದೈವ ಮತ್ತು ಅಧಿಯಜ್ಞ ತತ್ತ್ವಗಳಲ್ಲಿ ಯಥೋಚಿತವಾಗಿ ಗಮನಿಸಿಕೊಂಡು ವಿವೇಚಿಸಿದಲ್ಲಿ ಇನ್ನೂ ಹೆಚ್ಚಿನ ಪ್ರಯೋಜನವುಂಟು. ಅಧ್ಯಾತ್ಮವು ಮೂಲತಃ ಗುಣಾತೀತವಾದ ಕಾರಣ ಅಲ್ಲಿ ಗುಣಗಳ ಬಂಧನವಿಲ್ಲ. ಈ ಮುನ್ನ ಹೇಳಿದ ಗುಣಗಳು ಪ್ರಕೃತಿಯೆಂದು ಹೆಸರಾದ ಭಗವಚ್ಛಕ್ತಿಯ ಅಧೀನದಲ್ಲಿ ಇರುವುವೆಂದು ಶಾಸ್ತçಗಳ ಶ್ರದ್ಧೆ. ಇವುಗಳನ್ನು ಜಡವಾದ ಜಗತ್ತು ಮತ್ತು ಚೈತನ್ಯಮಯವಾದ ಜೀವಗಳಿಗೆ ಸಂಬಂಧಿಸಿದ ಲಕ್ಷಣಗಳೆಂದೂ ಎಲ್ಲ ಬಗೆಯ ವಸ್ತು ಅಥವಾ ವ್ಯಕ್ತಿಗಳ ಸ್ವಭಾವಗಳೆಂದೂ ಹೇಳಬಹುದು. ಭಗವದ್ಗೀತೆಯ ಅನೇಕ ಭಾಗಗಳಲ್ಲಿ ಇವುಗಳ ಪ್ರಸ್ತಾವವಿದೆ. ಮುಖ್ಯವಾಗಿ ಹದಿನಾಲ್ಕು, ಹದಿನಾರು, ಹದಿನೇಳು ಮತ್ತು ಹದಿನೆಂಟನೆಯ ಅಧ್ಯಾಯಗಳಲ್ಲಿ ಇವನ್ನು ಕುರಿತು ಹೆಚ್ಚಿನ ವಿವೇಚನೆ ಇದೆ. ಇದೆಲ್ಲವನ್ನೂ ಗ್ರಹಿಸಿ ಪ್ರಕೃತ ಸಂಗತಿಯೊಡನೆ ಅನ್ವಯಿಸಿದರೆ ಅಧಿಭೂತ, ಅಧಿದೈವ ಮತ್ತು ಅಧಿಯಜ್ಞ ಎಂಬ ಮೂರು ತತ್ತ್ವಗಳ ವಿಸ್ತಾರ-ವೈವಿಧ್ಯಗಳನ್ನು ಕುರಿತು ಮತ್ತೂ ಹೆಚ್ಚಿನ ಸ್ಪಷ್ಟತೆ ಬಂದೀತು.
ಇವು ಮೂರರಲ್ಲಿಯೂ ಮೂರೂ ಗುಣಗಳು ಕಾಣಿಸಿಕೊಳ್ಳುತ್ತವೆ; ಬೇರೆ ಬೇರೆ ಪ್ರಮಾಣಗಳಲ್ಲಿ ಸ್ವತಂತ್ರವಾಗಿಯೂ ಬೆರೆತುಕೊಂಡೂ ತೋರಿಕೊಳ್ಳುತ್ತವೆ. ಈ ವ್ಯಾಪ್ತಿಯ ಪ್ರಾಧಾನ್ಯ ಮತ್ತು ಅಪ್ರಾಧಾನ್ಯಗಳಿಗೆ ಅನುಸಾರವಾಗಿ ಸಾತ್ತ್ವಿಕ ಅಧಿಭೂತ, ರಾಜಸ ಅಧಿಭೂತ ಮತ್ತು ತಾಮಸ ಅಧಿಭೂತ ಎಂಬ ಒಂದು ವರ್ಗವೂ ಸಾತ್ತ್ವಿಕ ಅಧಿದೈವ, ರಾಜಸ ಅಧಿದೈವ ಮತ್ತು ತಾಮಸ ಅಧಿದೈವ ಎಂಬ ಇನ್ನೊಂದು ವರ್ಗವೂ ಸಾತ್ತ್ವಿಕ ಅಧಿಯಜ್ಞ, ರಾಜಸ ಅಧಿಯಜ್ಞ ಮತ್ತು ತಾಮಸ ಅಧಿಯಜ್ಞ ಎಂಬ ಮತ್ತೊಂದು ವರ್ಗವೂ ರೂಪಿತವಾಗುತ್ತವೆ. ಇವನ್ನು ಅರ್ಥಮಾಡಿಕೊಳ್ಳಲು ತ್ರಿಗುಣಗಳ ಸ್ವರೂಪವನ್ನು ಅರಿತರೆ ಸಾಕು.
ಸಾತ್ತ್ವಿಕದಲ್ಲಿ ಚೈತನ್ಯಾಂಶ ಬಲುಮಿಗಿಲು. ಇಲ್ಲಿ ಹದ, ಶಾಂತಿ, ಸಾಮರಸ್ಯ, ಪ್ರಸನ್ನತೆ, ಜ್ಞಾನಪರತೆ ಮತ್ತು ಸೌಖ್ಯಾಭಿಮುಖತೆಗಳು ಹೆಚ್ಚಾಗಿರುತ್ತವೆ. ರಾಜಸದಲ್ಲಿ ಚೈತನ್ಯಾಂಶವಿದ್ದರೂ ಅದು ಹಠ, ವೈಷಮ್ಯ, ವೈರುದ್ಧ್ಯ, ಪ್ರಕ್ಷೋಭೆ, ಕಾಲುಷ್ಯ, ಆಡಂಬರ, ಅಹಂಕಾರ, ಕಾರ್ಯಾವೇಶ, ಕೋಲಾಹಲ ಮತ್ತು ರಾಗ-ದ್ವೇಷಗಳ ಮೇಲಾಟವಾಗಿ ದುಃಖಾಭಿಮುಖತೆ ಇರುತ್ತದೆ. ತಾಮಸದಲ್ಲಿ ಜಾಡ್ಯ, ಆಲಸ್ಯ, ಅಜ್ಞಾನ, ಪ್ರಮಾದ ಮುಂತಾದುವು ಕೆರಳಿ ಕಡೆಗೆ ಮಂಕುತನದ ನಿಸ್ತೇಜತೆಯೇ ಉಳಿಯುತ್ತದೆ.
ಇದೀಗ ಇವನ್ನು ಒಳಗೊಂಡ ಅಧಿಭೂತಾದಿ ತತ್ತ್ವಗಳ ಸ್ವಭಾವ ಎಂಥದ್ದೆಂಬುದನ್ನು ಸ್ವಲ್ಪ ಗಮನಿಸಬಹುದು. ಅಧ್ಯಾತ್ಮಕ್ಕೆ ಮಿಕ್ಕ ಮೂರೂ ಎಷ್ಟರಮಟ್ಟಿಗೆ ಅಧೀನವಾಗಿವೆ ಎಂಬುದನ್ನೇ ಗುಣತ್ರಯದ ಆಧಾರದ ಮೇಲೆ ನಡಸಿದ ಮೇಲಣ ವಿಭಾಗಕ್ರಮವು ತಿಳಿಸುತ್ತಿದೆಯೆಂದು ಸೂತ್ರಪ್ರಾಯವಾಗಿ ಹೇಳಬಹುದು.
ಇದನ್ನು ಮತ್ತಷ್ಟು ವಿವರಿಸುವುದಾದರೆ, ಸಾತ್ತ್ವಿಕ ಅಧಿಭೂತವು ಅಧ್ಯಾತ್ಮಕ್ಕೆ ಸ್ವಪ್ರೇರಣೆಯಿಂದಲೇ ಅಧೀನವಾಗಿರುತ್ತದೆ. ರಾಜಸ ಅಧಿಭೂತವಾದರೋ ಅಧ್ಯಾತ್ಮಕ್ಕೆ ವಿಧೇಯವಾಗಲೊಲ್ಲದೆ ಸೆಣಸಾಟಕ್ಕೆ ತೊಡಗಿದ್ದು ಸೋಲಿನ ಸಂಕಟ, ನಿರಾಶೆ, ಕೋಪಗಳನ್ನು ತಾಳುತ್ತದೆ. ತಾಮಸ ಅಧಿಭೂತಕ್ಕಂತೂ ಅಧ್ಯಾತ್ಮವೆಂಬ ತತ್ತ್ವವೊಂದು ಇದೆಯೆಂಬ ಅರಿವೂ ಇರುವುದಿಲ್ಲ. ಇದೇ ಕ್ರಮವನ್ನು ಅಧಿದೈವ ಮತ್ತು ಅಧಿಯಜ್ಞಗಳಿಗೂ ಅನ್ವಯಿಸಿ ನೋಡಿಕೊಳ್ಳಬಹುದು.
ಅಧಿಭೂತ, ಅಧಿದೈವ ಮುಂತಾದ ಪೂರ್ವೋಕ್ತ ತತ್ತ್ವಗಳನ್ನು ವಿವಿಧ ಜ್ಞಾನಕ್ಷೇತ್ರಗಳಿಗೆ ಅನ್ವಯಿಸಿ ಭಾರತೀಯ ಸ್ವೋಪಜ್ಞತೆಯ ಬೆಳಕಿನಲ್ಲಿ ಸಾರ್ಥಕ ವಿಚಾರವಿಶ್ಲೇಷಣೆಯನ್ನು ಹೇಗೆ ನಡಸಬಹುದೆಂಬುದರ ದಿಕ್ಸೂಚಿಯನ್ನು ಇನ್ನು ಮುಂದೆ ಕಾಣಬಹುದು.
ದ್ರವ್ಯವಾದ, ದೈವವಾದ
ಸಾಮಾನ್ಯವಾಗಿ ಆಧುನಿಕ ಪಾಶ್ಚಾತ್ತ್ಯರು ಮನುಜರಲ್ಲಿ ದ್ರವ್ಯವಾದಿಗಳು ಮತ್ತು ದೇವವಾದಿಗಳು ಎಂಬ ಎರಡು ವಿಭಾಗಗಳನ್ನು ಮಾಡುವುದುಂಟು. ಇವೆರಡೂ ನಮ್ಮ ಅಧಿಭೂತ ಮತ್ತು ಅಧಿದೈವಗಳಿಗೆ ಹತ್ತಿರದ ಪರಿಕಲ್ಪನೆಗಳಂತೆ ತೋರಿದರೂ ನಮ್ಮಲ್ಲಿ ಯಾವೊಂದು ತತ್ತ್ವವೂ ಪರಮಾರ್ಥವಾಗಿ ಅಧ್ಯಾತ್ಮದೂರವೂ ಅಧ್ಯಾತ್ಮವಿರುದ್ಧವೂ ಅಲ್ಲದ ಕಾರಣ ಇವು ಪಾಶ್ಚಾತ್ತ್ಯಚಿಂತನೆಗೆ ಸಂವಾದಿಯಾಗಿ ಭಾಸವಾದರೂ ಅವುಗಳ ತದ್ವದ್ರೂಪಗಳಲ್ಲ. ವಸ್ತುತಃ ಪಾಶ್ಚಾತ್ತ್ಯರೂ ಸೇರಿದಂತೆ ಈ ಹೊತ್ತಿನ ಜಗತ್ತಿನಲ್ಲಿ ಭಾರತೀಯ ಸಂಸ್ಕöÈತಿಯನ್ನುಳಿದು ಮತ್ತಾವುದರಲ್ಲಿಯೂ ಸಚ್ಚಿದಾನಂದಘನವೆಂಬ ಅಧ್ಯಾತ್ಮದ ಅರಿವಾಗಲಿ, ಅಸ್ತಿತ್ವವಾಗಲಿ ಇಲ್ಲ. ಆದುದರಿಂದಲೇ ಹೆಚ್ಚಿನ ಜಗತ್ತೆಲ್ಲ ಆತ್ಯಂತಿಕ ದ್ವಂದ್ವಗಳಲ್ಲಿ, ಶಾಶ್ವತ ವಿರೋಧಗಳಲ್ಲಿ, ಕೊನೆಯಿಲ್ಲದ ರಾಗ-ದ್ವೇಷಗಳ ಗೊಂದಲದಲ್ಲಿ ಕಳೆದುಹೋಗಿದೆ. ಭಾರತೀಯ ವಿಚಾರಕ್ರಮಕ್ಕೂ ಮಿಕ್ಕ ಜಗತ್ತಿನ ಧೋರಣೆಗಳಿಗೂ ಇರುವ ಈ ತೆರನಾದ ವ್ಯತ್ಯಾಸಗಳನ್ನು ನಾವು ಸದಾ ಗಮನದಲ್ಲಿ ಇರಿಸಿಕೊಳ್ಳಬೇಕು. ಆದರೆ ಪಾಶ್ಚಾತ್ತ್ಯರ ಆಲೋಚನಕ್ರಮವೇ ಸದ್ಯದ ಜಗತ್ತಿನಲ್ಲಿ ಪ್ರಬಲಿಸಿರುವ ಕಾರಣ ತಾತ್ಕಾಲಿಕವಾಗಿ ದ್ರವ್ಯವಾದ ಮತ್ತು ದೈವವಾದಗಳಿಗೆ ಸಂವಾದಿಯಾಗಿ ಕೇವಲ ಅಧಿಭೂತ ಮತ್ತು ಕೇವಲ ಅಧಿದೈವಗಳನ್ನು ಒಪ್ಪವಿಟ್ಟು ನೋಡಬಹುದು.
ಈ ಪ್ರಕಾರ ಅಧಿಭೂತವನ್ನೇ ಪರಮಾರ್ಥವೆಂದು ಆಗ್ರಹಿಸುವವರು ಲೌಕಿಕ ಸಂಪತ್ತಿ ಮತ್ತು ಭೋಗಗಳನ್ನೇ ಸರ್ವೋಚ್ಚವೆಂದು ಭಾವಿಸಿ ಆ ನಿಟ್ಟಿನಲ್ಲಿ ನಡೆದು ಲೋಕಶೋಷಕರಾಗುತ್ತಾರೆ. ಆಧುನಿಕ ಜಗತ್ತಿನಲ್ಲಿ ವಿಚಾರವಾದ, ಭೌತವಾದ, ಸಾಮ್ಯವಾದ, ಸಂಪದ್ವಾದ, ಉತ್ಥಾನವಾದ ಎಂಬ ಹತ್ತಾರು ಹೆಸರುಗಳಲ್ಲಿ ಕೋಲಾಹಲ ಮಾಡುತ್ತಿರುವ ಕಮ್ಯೂನಿಸಮ್, ಸೋಷಿಯಲಿಸಮ್, ಕ್ಯಾಪಿಟಲಿಸಮ್, ಇತ್ತೀಚಿನ ವೋಕಿಸಮ್ ಮುಂತಾದ ಪಂಥಗಳೆಲ್ಲ ಇದೇ ಜಾಡಿನವಾಗಿವೆ. ಈ ಗುಂಪಿನವರಿಗೆ ಕಾನೂನು-ಕಟ್ಟಲೆಗಳೂ ತಮ್ಮ ಲಾಭ-ಲಾಲಸೆಗಳಿಗೆ ಒದಗಿಬರಬೇಕಾದ ವ್ಯವಸ್ಥೆಗಳಾಗಿವೆ.
ಇವರಂತಲ್ಲದೆ ಅಧಿದೈವವೇ ಸರ್ವೋನ್ನತವೆಂದು ಆಗ್ರಹಿಸುವವರು ತಾವು ನಚ್ಚಿಕೊಂಡ ಪ್ರವಾದಿಗೆ, ಪರಲೋಕಕ್ಕೆ, ಪವಿತ್ರ ಪುಸ್ತಕಕ್ಕೆ ಕಣ್ಮುಚ್ಚಿ ಶರಣಾಗಿ ಈ ನಂಬಿಕೆಗಳಿಗೆ ವಿರುದ್ಧರೂ ವಿಮುಖರೂ ಆದ ಮಿಕ್ಕೆಲ್ಲ ಮಂದಿಯನ್ನು ಶೋಷಿಸುವ ಇಲ್ಲವೇ ಸಾಯಿಸುವ ಮಟ್ಟಕ್ಕೆ ಇಳಿಯುತ್ತಾರೆ. ಭಾರತೀಯ ಸಂಸ್ಕöÈತಿಯಲ್ಲಿ ಕಾಣಸಿಗುವ ಶೈವ, ವೈಷ್ಣವ, ಜೈನ, ಬೌದ್ಧ ಮುಂತಾದ ಮತಗಳಲ್ಲಿ ಈ ಬಗೆಯ ಆಗ್ರಹಗಳು ಕೆಲಮಟ್ಟಿಗೆ ಉಂಟಾದರೂ ನಮ್ಮ ದೇಶದ ಆಚೆ ಹುಟ್ಟಿ, ಮತಾಂತರಕ್ಕೆ ಹೆಸರಾದ ಕ್ರೈಸ್ತ ಮತ್ತು ಇಸ್ಲಾಮ್ ಪಂಥಗಳ ಕ್ರೌರ್ಯ, ಧೂರ್ತತೆ ಮತ್ತು ದುರಾಶೆಗಳ ಪ್ರಮಾಣ ಊಹಾತೀತ.
ವಸ್ತುತಃ ಮೇಲೆ ಕಾಣಿಸಿದ ದ್ರವ್ಯವಾದ (ಅಧಿಭೂತ) ಮತ್ತು ದೈವವಾದ (ಅಧಿದೈವ) ಎಂಬುವು ಮೇಲ್ನೋಟಕ್ಕೆ ವಿಭಿನ್ನವಾಗಿ ತೋರಿದರೂ ಆಳದಲ್ಲಿ ಇವು ಒಂದೇ ಆಗಿವೆ. ಎರಡರಲ್ಲಿಯೂ ನೆಲೆಗೊಂಡಿರುವುದು ಲಾಭ-ಲಾಲಸೆಗಳ ವಿಜೃಂಭಣೆಯೇ. ದ್ರವ್ಯವಾದವು ಈ ಲೋಕದಲ್ಲಿಯೇ ಅದನ್ನು ಸಾಧಿಸಿಕೊಳ್ಳಲು ಹೊರಟರೆ ದೈವವಾದವು ಅದನ್ನು ತಾನು ತನ್ನ ನಂಬಿಕೆಯ ಮೂಲಕ ಕಟ್ಟಿಕೊಂಡ ಪರಲೋಕದಲ್ಲಿಯೇ ಕಂಡುಕೊಳ್ಳಲು ಮುಂದಾಗುತ್ತದೆ. ಮಾತ್ರವಲ್ಲ, ಕಮ್ಯೂನಿಸಮ್, ಕ್ಯಾಪಿಟಲಿಸಮ್ ಮುಂತಾದ ದ್ರವ್ಯವಾದಿಗಳು ತಮ್ಮದಾಗಿ ಸಾರಿಕೊಳ್ಳುವ ವಾಸ್ತವ ಅಥವಾ ವಸ್ತುಪ್ರಯೋಜನವಾದದ ಹೆಚ್ಚಿನ ಪ್ರಮೇಯಗಳು ದೈವವಾದಿಗಳ ಪ್ರವಾದಿಗಳು ಪ್ರಚುರಿಸುವ ಕಾಣ್ಕೆಗಳಂತೆ, ಅಲ್ಲಿಯ ಪವಿತ್ರ ಗ್ರಂಥಗಳು ಬಿತ್ತರಿಸುವ ಉದ್ಗಾರಗಳಂತೆ ವಿವೇಕಕ್ಕೂ ವಿಚಾರಕ್ಕೂ ದೂರವಾಗಿ ಶ್ರದ್ಧಾಜಾಡ್ಯದ ರೂಪಾಂತರಗಳನ್ನು ತಳೆದಿರುತ್ತವೆ; ತಾವು ಒಪ್ಪದವರನ್ನು ತಮ್ಮ ನಡೆ-ನುಡಿಗಳಿಂದ ಎಣೆಮೀರಿ ಹಿಂಸಿಸುವ, ಶೋಷಿಸುವ ಕ್ರೂರವಾಕ್ಯಗಳಾಗಿ ಮೈದಳೆದಿರುತ್ತವೆ; ತಮ್ಮ ನಂಬಿಕೆಗಳನ್ನು ಕಣ್ಮುಚ್ಚಿ ಒಪ್ಪಿದವರನ್ನು ಮರುಳುಗೊಳಿಸಿ ಭಯ-ಆಶೆ-ಅಜ್ಞಾನಗಳ ಕಪಿಮುಷ್ಟಿಯಲ್ಲಿಯೇ ಶಾಶ್ವತವಾಗಿ ಸೆರೆಹಿಡಿದು ಉಪಾಯವಾಗಿ ಹಿಂಡಿಕೊಳ್ಳುವ ಹುನ್ನಾರಗಳೇ ಆಗಿ ಹವಣುಗೊಂಡಿರುತ್ತವೆ. ಹೀಗಾಗಿ ಇವೆರಡರಲ್ಲಿಯೂ ಅಧಿಯಜ್ಞವು ಸರಿಯಾಗಿ ಬಾಳಲಾರದು. ಇದರ ಪಾಡು ಏನಾದೀತೆಂದು ನಾವು ಈ ಮೊದಲಿಗೇ ಕಂಡಿರುವ ಕಾರಣ ಮತ್ತೆ ವಿಸ್ತರಿಸಬೇಕಿಲ್ಲ. ಒಟ್ಟಿನಲ್ಲಿ ಇಂಥ ದ್ರವ್ಯವಾದ ಮತ್ತು ದೈವವಾದಗಳು ಅಧ್ಯಾತ್ಮತತ್ತ್ವದ ಆಲಂಬನದಿಂದಲೇ ಸರಿಯಾದ ಹಾದಿಗೆ ಬರಬೇಕಲ್ಲದೆ ಗತ್ಯಂತರವಿಲ್ಲ. ಹೀಗೆ ನಮ್ಮೀ ಜಗತ್ತಿನ ಆರ್ಥಿಕ, ರಾಜಕೀಯ ಮತ್ತು ಸಾಂಸ್ಕöÈತಿಕ ವಲಯಗಳಲ್ಲಿ ಸ್ವಾಗತಾರ್ಹ ಸುಧಾರಣೆಗಳಾಗಬೇಕೆಂದರೆ ಭಾರತೀಯ ಪರಂಪರೆಯ ಆಧ್ಯಾತಿಕ ಮೌಲ್ಯಗಳೇ ಶರಣ್ಯ.
ಪರಿಸರಸಂರಕ್ಷಣೆ
ಇದೀಗ ವಾಸ್ತವಜಗತ್ತಿನ ಒಂದು ಅಂಶವಾಗಿ ಎಣಿಕೆಗೆ ಬರಬಹುದಾದ ಪರಿಸರಸಂರಕ್ಷಣೆಯನ್ನು ಕುರಿತು ಚಿಂತಿಸೋಣ. ಅಧಿಭೂತಸ್ತರದಲ್ಲಿ ಇದು ನೆಲ, ನೀರು, ಗಾಳಿ, ಕಾಡು, ಬೆಟ್ಟ, ಮಿಗ, ಹಕ್ಕಿ, ಹುಳು, ಹುಪ್ಪಟೆ ಮುಂತಾದ ಸಜೀವ ಹಾಗೂ ನಿರ್ಜೀವ ಅಸ್ತಿತ್ವಗಳ ಕೇವಲ ರಕ್ಷಣೆ-ಸಂವರ್ಧನೆಗಳನ್ನು ಕುರಿತಿದೆ. ಇದು ಆಗಬೇಕಾದ ಒಳಿತೆಂಬುದರಲ್ಲಿ ಸಂದೇಹವಿಲ್ಲ. ಆದರೆ ಇಷ್ಟಕ್ಕೇ ಸೀಮಿತವಾದರೆ ಇದು ಔಪಯೋಗಿಕ ದೃಷ್ಟಿಯನ್ನಷ್ಟೇ ಉಳ್ಳ ದೂರದರ್ಶಿ ಸ್ವಾರ್ಥವೆನ್ನದೆ ಗತ್ಯಂತರವಿಲ್ಲ. ಇವೆಲ್ಲ ಭೂದೇವಿ, ಆಪೋದೇವಿ, ವಾಯುದೇವ, ವನದೇವಿ, ಗಿರಿದೇವ ಮುಂತಾದ ದೇವತೆಗಳ ಭೌತಿಕ ಅಸ್ತಿತ್ವ; ಇವನ್ನೆಲ್ಲ ಎಚ್ಚರದಿಂದ ಆರಾಧಿಸದಿದ್ದರೆ ಪರಲೋಕದಲ್ಲಿ ಸುಖವು ಸಿಗದೆಂದು ಇಂಥವನ್ನು ಗೌರವಿಸುವ ದೃಷ್ಟಿ ಆಧಿದೈವಸ್ತರದ್ದು. ಇದೂ ಅಪೇಕ್ಷಣೀಯವೇ. ಭಯ-ಭಕ್ತಿಗಳುಳ್ಳ ಆರಾಧನೆ ಪರಿಸರದ ರಕ್ಷಣೆಗೆ ಅವಶ್ಯವಷ್ಟೇ ಅಲ್ಲ, ಅಧಿಭೂತಕ್ಕಷ್ಟೇ ಕಟ್ಟುಬಿದ್ದವರು ಕೂಡ ಮಾಡಲಾಗದ ಹಲವು ರಕ್ಷಣೋಪಾಯಗಳನ್ನೂ ಒಳಗೊಳ್ಳುವಂಥ ಶ್ರದ್ಧಾವ್ಯವಸ್ಥೆ ಕೂಡ. ಪರಿಸರದ ರಕ್ಷಣೆಯಿಲ್ಲದೆ ಇಹಲೋಕದಲ್ಲಿ ತಮಗೆ ಭವಿಷ್ಯವಿಲ್ಲವೆಂಬುದು ಅಧಿಭೂತಸ್ತರದವರ ದೃಷ್ಟಿಯಾದರೆ, ಇಂಥದ್ದಿಲ್ಲದೆ ಪರಲೋಕದಲ್ಲಿ ತಮಗೆ ಭವಿಷ್ಯವಿಲ್ಲವೆಂಬುದು ಅಧಿದೈವಸ್ತರದವರ ನಿಶ್ಚಯ. ಇವರಿಬ್ಬರೂ ಪರಿಸರವೂ ಸೇರಿದಂತೆ ಇಡಿಯ ಜಗತ್ತು-ಜೀವಗಳನ್ನು ತಮ್ಮಿಂದ ಬೇರೆಯೆಂದೇ ಭಾವಿಸಿಕೊಂಡಿರುವುದು ಸ್ಪಷ್ಟವಾಗಿದೆ. ಆದರೆ ಅಧ್ಯಾತ್ಮಸ್ತರದವರ ನಿಲವು ಮಾತ್ರ ಇವೆರಡಕ್ಕೂ ವಿರುದ್ಧವಲ್ಲದ, ಇವೆರಡನ್ನೂ ಒಳಗೊಳ್ಳುವ ದರ್ಶನವಾಗಿದೆ. ಇಲ್ಲಿ ಈ ನೆಲವು ನನ್ನ ಒಡಲು, ಈ ನೀರು ನನ್ನ ರಕ್ತ, ಈ ಗಾಳಿ ನನ್ನ ಉಸಿರು, ಈ ಕಾಡು ನನ್ನ ನವಿರು, ಈ ಬೆಟ್ಟ ನನ್ನ ಶಿರಸ್ಸು ಎಂಬ ಆತ್ಮೌಪಮ್ಯ ಗಾಢವಾಗಿ ಮೆಯ್ವೆತ್ತಿದೆ. ಅಲ್ಲದೆ ನೆಲ, ನೀರು, ಗಾಳಿ, ಕಾಡು, ಬೆಟ್ಟ ಮುಂತಾದುವುಗಳ ಅಭಿಮಾನಿದೇವತೆಗಳು ನನ್ನೊಳಗೆ ಆಯಾ ಇಂದ್ರಿಯದ್ವಾರಗಳ ಮೂಲಕ ಒಳಗೆ ಬಂದು ನೆಲಸಿದಂತೆಯೇ ಹೊರಗೂ ಹೋಗಿಬರುತ್ತ ಇವುಗಳೊಡನೆ ಸಂವಾದವನ್ನು ಕಲ್ಪಿಸುತ್ತಾರೆಂಬ ಸಂವೇದನೆಯೂ ದೈವಶ್ರದ್ಧೆಯನ್ನು ಪ್ರಜ್ಞೆಯಲ್ಲಿ ಸಾಕ್ಷಾತ್ಕರಿಸಿಕೊಳ್ಳುವ ಹಾಗೆ ಮಾಡುತ್ತದೆ. ಹೀಗೆ ಎಲ್ಲವೂ ತಿಳಿಯಾದ ಬಳಿಕ ಮೂಡುವ ಪರಿಸರಸಂರಕ್ಷಣೆಯ ಕಾರ್ಯ ಅಧಿಯಜ್ಞವೇ ಆಗಿ ಅತ್ಯುತ್ತಮ ಕೌಶಲ ಮತ್ತು ಸತ್ಫಲಗಳಲ್ಲಿ ಪರಿಣಮಿಸುತ್ತದೆ.
ಕಲೆ, ಸಾಹಿತ್ಯ
ಮುಂದಿನ ಮಜಲಾಗಿ ಕಲೆ-ಸಾಹಿತ್ಯಗಳನ್ನು ಗಮನಿಸಬಹುದು. ಭಾವನೆ, ಕಲ್ಪನೆ, ಶಿಲ್ಪನೆ ಮತ್ತು ಆಸ್ವಾದನೆಗಳಿಗೆ ಸಂಬಂಧಿಸಿದ ಇವನ್ನು ವಿವೇಕಿಗಳೆಲ್ಲ ಅಧ್ಯಾತ್ಮಪ್ರಾಧಾನ್ಯವುಳ್ಳ ವಿಷಯಗಳೆಂದು ಗುರುತಿಸುತ್ತಾರೆ. ಆದರೆ ದ್ರವ್ಯಪಾರಮ್ಯವಾದಿಗಳು ಇವನ್ನು ಅಧಿಭೂತಸ್ತರಕ್ಕೇ ಸೀಮಿತವಾಗಿಸುತ್ತಾರೆ. ಸಂಪದ್ವಾದಿಗಳು ಇವನ್ನು ಹಸಿಹಸಿಯಾದ ಭೋಗಕ್ಕೆ ಹೆಚ್ಚಾಗಿ ಬಳಸಿಕೊಂಡರೆ ಸಾಮ್ಯವಾದಿಗಳು ತಮ್ಮ ಆಗ್ರಹಗಳನ್ನು ಪ್ರತಿಪಾದಿಸುವುದಕ್ಕೆ ದುಡಿಸಿಕೊಳ್ಳುತ್ತಾರೆ. ದೈವವಾದಿಗಳಾದರೋ ಇವನ್ನೇ ಬೇರೊಂದು ಬಗೆಯಲ್ಲಿ ಮಾಡುತ್ತಾರೆ. ಆ ಪ್ರಕಾರ ಇವು ತಾವು ಆರಾಧಿಸುವ ದೇವತೆಗಳ ಉಪಭೋಗಕ್ಕೂ ಆ ದೇವತೆಗಳ ಮಹತ್ತ್ವದ ಪ್ರಚಾರಕ್ಕೂ ವಿನಿಯುಕ್ತವಾಗುತ್ತವೆ. ಬ್ರಹ್ಮವಾದಿಗಳು ಮಾತ್ರ ಅಧ್ಯಾತ್ಮಪಾರಮ್ಯಕ್ಕೆ ಅನುಸಾರವಾಗಿ ಬ್ರಹ್ಮಾಸ್ವಾದಸಹೋದರವೆಂದು ಹೆಸರಾದ ರಸಾನಂದವನ್ನು ಕಲೆ-ಸಾಹಿತ್ಯಗಳ ಮೂಲಕ ಪಡೆಯುತ್ತಾರೆ. ಇಲ್ಲಿ ದ್ರವ್ಯಪಾರಮ್ಯವಾದಿಗಳು ಬಯಸುವ ಭೋಗಕ್ಕೆ ಕೊರತೆಯಿರುವುದಿಲ್ಲವಾದರೂ ಅದು ಸಾತ್ತ್ವಿಕವಲ್ಲದೆ ರಾಜಸವಲ್ಲ. ಆದರೆ ದ್ರವ್ಯಪಾರಮ್ಯವಾದಿಗಳು ಆನಂದಸ್ವರೂಪಿಯಾದ ರಸದ ಮಟ್ಟಕ್ಕೆ ಏರದ ಬರಿಯ ಸುಖದುಃಖಾತ್ಮಕವಾದ ಭಾವ ಮತ್ತದರ ವಿಕಾರಗಳನ್ನೇ ಅನುಭವಿಸಿರುತ್ತಾರೆ. ಅಧ್ಯಾತ್ಮಸ್ತರದಲ್ಲಿ ಕಲೆ-ಸಾಹಿತ್ಯಗಳ ಆಸ್ವಾದವು ಬರಿಯ ಮೋದವನ್ನಲ್ಲದೆ ಬೋಧವನ್ನೂ ಒದಗಿಸುತ್ತದೆ; ಮತ್ತಿದು ಅಯತ್ನವಾಗಿಯೇ ಆಗುತ್ತದೆ; ಕಲಿಕೆಯೆಂಬ ಪರಿವೆಯಿಲ್ಲದೆಯೇ ದಕ್ಕುತ್ತದೆ. ರಾಜಸಭೋಗಗಳ ರೀತಿ ಹೀಗಲ್ಲ. ಅಲ್ಲಿ ಕಲಾಭೋಗದ ಬಳಿಕ ಶ್ರಮ, ವ್ಯಯ, ಆಲಸ್ಯ, ಪ್ರಮಾದ, ಅತೃಪ್ತಿಗಳೆಲ್ಲ ಕೆರಳಿ ಕುಣಿಯುತ್ತವೆ. ದೈವಪಾರಮ್ಯವಾದಿಗಳೂ ದ್ರವ್ಯಪಾರಮ್ಯವಾದಿಗಳ ಹಾಗೆಯೇ ತಮ್ಮ ತಮ್ಮ ನಂಬಿಕೆಯನ್ನು ಬಲಗೊಳಿಸುವ ವಿಷಯಗಳನ್ನೇ ಕಲೆ-ಸಾಹಿತ್ಯದಲ್ಲಿ ಕಾಣಬಯಸುವುದಲ್ಲದೆ ಅವುಗಳನ್ನು ಪ್ರಚಾರಕ್ಕೋ ವಿರೋಧಕ್ಕೋ ದುಡಿಸಿಕೊಳ್ಳುವ ಕಾರಣ ಅವರಲ್ಲಿ ರಾಗ-ದ್ವೇಷಗಳೇ ಕೆರಳುತ್ತವೆ; ರಸಕ್ಕೆ ಹೊರತಾದ ಭಾವೋದ್ರೇಕವೇ ಅವರಿಗೆ ಪ್ರತಿಫಲವಾಗಿ ದಕ್ಕುತ್ತದೆ. ಅಲ್ಲದೆ ತಾವು ನಚ್ಚಿದ ದೈವದ ಉಪಭೋಗಕ್ಕಾಗಿ ಇದನ್ನು ವಿನಿಯೋಗಿಸುವಾಗ ಸಹೃದಯತೆಗಿಂತ ಮಿಗಿಲಾಗಿ ಲೌಕಿಕವಾದ ಭಯ, ದೈನ್ಯ, ಅಭಿಮಾನ, ಕೃತಾರ್ಥತೆಗಳೇ ಮೇಲೆದ್ದು ಮತ್ತೆ ರಾಗ-ದ್ವೇಷಗಳಿಗೆ ಆಸ್ಪದವಾಗುತ್ತದೆ.
ದ್ರವ್ಯಪಾರಮ್ಯವಾದಿಗಳು ಅಧಿದೈವವನ್ನು ಧಿಕ್ಕರಿಸುವ ಕಾರಣ ಅದರ ಮೂಲಕ ಎಟುಕಬಹುದಾದ ಪೌರಾಣಿಕ, ಸಾಂಕೇತಿಕ ಮತ್ತು ಸಾಂಸ್ಕೃತಿಕ ಸಮೃದ್ಧಿಯುಳ್ಳ ಇತಿವೃತ್ತಗಳಿಗೂ ಸಂವಿಧಾನಕಗಳಿಗೂ ಎರವಾಗುತ್ತಾರೆ. ಹೀಗಾಗಿ ಅವರಿಗೆ ಸಿಗಬಹುದಾದ ಭೋಗದ ರುಚಿ ಸೊರಗುವುದರಲ್ಲಿ ಸಂದೇಹವಿಲ್ಲ. ಏಕೆಂದರೆ ಇಂಥ ಆಯಾಮಗಳು ಅನೇಕ ಕಲ್ಪನೆಗಳಿಗೆ ಅವಕಾಶವಿತ್ತು ಕಲೆ-ಸಾಹಿತ್ಯಗಳ ವೈವಿಧ್ಯ ಮತ್ತು ಗಾಂಭೀರ್ಯಗಳನ್ನು ವಿಸ್ತರಿಸುತ್ತವೆ. ದೈವಪಾರಮ್ಯವಾದಿಗಳು ಅಧಿಭೂತವನ್ನು ಉಪೇಕ್ಷಿಸುವ ಕಾರಣ ಲೋಕಸ್ತರದಲ್ಲಿಯೇ ದಕ್ಕುವ ಸ್ವಾರಸ್ಯಗಳೆಷ್ಟೋ ದೂರವಾಗುತ್ತವೆ. ಜೊತೆಗೆ ದೈವದ ವಿಷಯದಲ್ಲಿ ತಮಗಿರುವ ಭಯ, ದೈನ್ಯ, ಅಭಿಮಾನ, ನೈಚ್ಯಾನುಸಂಧಾನ ಮುಂತಾದುವುಗಳ ಕಾರಣದಿಂದ ಅರ್ಥವತ್ತಾದ ಹೊಸತನ್ನು ಮಾಡುವ, ನೋಡುವ ಧೈರ್ಯವಾಗಲಿ, ರಾಸಿಕ್ಯವಾಗಲಿ ಉಳಿಯುವುದಿಲ್ಲ. ಇದು ದ್ರವ್ಯಪಾರಮ್ಯವಾದಿಗಳು ಕಲೆ-ಸಾಹಿತ್ಯಗಳಲ್ಲಿ ರೂಪಮಾತ್ರದ ಹೊಸತನ್ನಷ್ಟೇ ಹಂಬಲಿಸುವ ಭರದಲ್ಲಿ ಅಭಿಜಾತವೂ ಕಾಲಪ್ರತಿಷ್ಠಿತವೂ ಆದುದನ್ನು ಕಾಣದೆಯೇ ಹೋಗುವ, ಕಂಡರೂ ಕೃಪಣರಾಗಿ ನಿರಾಕರಿಸುವ ದುಃಸ್ಥಿತಿಗೆ ಸಂವಾದಿ. ನಾಟ್ಯಶಾಸ್ತçದ ಪರಿಭಾಷೆಯನ್ನು ಬಳಸಿ ಹೇಳುವುದಾದರೆ, ಒಬ್ಬರಲ್ಲಿ ನಾಟ್ಯಧರ್ಮಿಯೂ ಮತ್ತೊಬ್ಬರಲ್ಲಿ ಲೋಕಧರ್ಮಿಯೂ ಸೊರಗುತ್ತವೆ; ಇಲ್ಲವೇ ನಷ್ಟವೇ ಆಗುತ್ತವೆ. ದ್ರವ್ಯಪಾರಮ್ಯದ ಸ್ತರದಲ್ಲಿ ಸಾಂಕೇತಿಕತೆ, ಶೈಲೀಕರಣ ಮುಂತಾದ ಒಳ್ಳೆಯ ಅಂಶಗಳು ಇಲ್ಲವಾದರೆ ನಂಬಿಕೆಯನ್ನೇ ಎತ್ತಿಹಿಡಿಯುವ ಸ್ತರದಲ್ಲಿ ಸಹಜತೆ, ಸಂಭಾವ್ಯತೆ ಮೊದಲಾದ ಅಪೇಕ್ಷಣೀಯ ಗುಣಗಳು ಬತ್ತಿಹೋಗುತ್ತವೆ. ಅಧ್ಯಾತ್ಮಪಾರಮ್ಯವಾದಿಗಳ ಕಲೆ-ಸಾಹಿತ್ಯಗಳು ಮಾತ್ರ ಈ ಎರಡೂ ವರ್ಗದ ಸುಗುಣಗಳನ್ನು ಸಮೃದ್ಧವಾಗಿ ಬಳಸಿಕೊಂಡು ಅಲಂಕಾರಚಮತ್ಕಾರ, ಧ್ವನಿಶೀಲತೆ, ಕವಿಸಮಯ ಮುಂತಾದ ಎಷ್ಟೋ ಅಂಶಗಳನ್ನೂ ಒಳಗೊಂಡು ಸಹಜವೂ ಸಂಭಾವ್ಯವೂ ಆಗಿ ಸೊಗಯಿಸುತ್ತವೆ. ದ್ರವ್ಯಪಾರಮ್ಯ ಮತ್ತು ದೈವಪಾರಮ್ಯಗಳ ವರ್ಗಗಳಲ್ಲಿ ಕಲೆಯ ಮಹಾಮೌಲ್ಯಗಳಾದ ರಸ, ಧ್ವನಿ, ವಕ್ರತೆ ಮುಂತಾದುವು ಇರುವುದಿಲ್ಲ ಅಥವಾ ಇಲ್ಲವೆಂಬಷ್ಟು ಗೌಣವಾಗಿರುತ್ತವೆ. ಆದರೆ ಅಧ್ಯಾತ್ಮಪಾರಮ್ಯದಲ್ಲಿ ಇವೇ ಮೆರೆಯುತ್ತವೆ. ಒಂದು ಮಾತಿನಲ್ಲಿ ಹೇಳುವುದಾದರೆ, ಅಧ್ಯಾತ್ಮವು ಮಿಕ್ಕ ಎರಡಕ್ಕೂ ಅರ್ಥವಂತಿಕೆಯನ್ನು ನೀಡಿ ಅಧಿಯಜ್ಞದ ರೂಪದಿಂದ ಕಲೆ-ಸಾಹಿತ್ಯಗಳು ಜನಜನಿತವಾಗಲು ನೆರವಾಗುತ್ತದೆ.
ಉಪಸಂಹಾರ
ಹೀಗೆ ಅಧಿಭೂತ, ಅಧಿದೈವ ಮತ್ತು ಅಧಿಯಜ್ಞಗಳು ಅಧ್ಯಾತ್ಮ ಎಂಬ ಸಮುನ್ನತ ತತ್ತ್ವದಿಂದ ತಾವೂ ಬಾಳಿ ಲೋಕವನ್ನೂ ಬಾಳಿಸುತ್ತವೆ. ಈ ಮೌಲ್ಯಗಳ ಬೆಳಕಿನಲ್ಲಿ ವಿವಿಧ ಶಾಸ್ತçಗಳನ್ನೂ ಕಲೆಗಳನ್ನೂ ಲೋಕಜೀವನದ ನಾನಾ ಆಯಾಮಗಳನ್ನೂ ವಿವೇಚಿಸಿದಲ್ಲಿ, ಉನ್ಮೇಷಿಸಿದಲ್ಲಿ ಹೆಚ್ಚಿನ ಪ್ರಯೋಜನವುಂಟು; ಮತ್ತೂ ಮಿಗಿಲಾದ ಅರಿವು-ನಲವುಗಳುಂಟು. ಇದನ್ನೆಲ್ಲ ನಮ್ಮ ಜನತೆ ಕಾಣುವಂತಾಗಲಿ; ಕಂಡು ಆ ನಿಟ್ಟಿನಲ್ಲಿ ತೊಡಗಿಕೊಳ್ಳುವಂತಾಗಲಿ.















































