ಭಾರತೀಯಕಾವ್ಯಮೀಮಾಂಸೆಯಲ್ಲಿ ಪಾದೆಕಲ್ಲು ನರಸಿಂಹಭಟ್ಟರು ಕಾಣಿಸಿದ ಒಳನೋಟಗಳು--ಮತ್ತೆ ಕೆಲವು ಒಳನೋಟಗಳು

This article is part 5 of 12 in the series ಪಾದೆಕಲ್ಲು ನರಸಿಂಹಭಟ್ಟರು

ಮತ್ತೆ ಕೆಲವು ಒಳನೋಟಗಳು

ನರಸಿಂಹಭಟ್ಟರು ತಮ್ಮ ಲೇಖನಗಳಲ್ಲಿ ಉದ್ಬೋಧಕವಾದ ಅನೇಕಾಂಶಗಳನ್ನು ಪ್ರಸ್ತಾವಿಸಿದ್ದಾರೆ. ಇವುಗಳಲ್ಲಿ ಹಲವನ್ನು ಈಗಾಗಲೇ ನಾವು ವಿಷಯಾನುಸಾರಿಯಾಗಿ ಸ್ವಲ್ಪ ಮಟ್ಟಿಗೆ ಪರಿಶೀಲಿಸಿದ್ದೇವೆ. ಇದೀಗ ಅವರ ಮತ್ತಷ್ಟು ಒಳನೋಟಗಳನ್ನು ಪರಾಂಬರಿಸೋಣ. ಇವು ಮುಖ್ಯವಾಗಿ ಅವರ “ಭಾರತೀಯಸಂವೇದನೆ”ಯ ಹಿನ್ನೆಲೆಯಲ್ಲಿಯೇ ಹರಳುಗಟ್ಟಿದ ಕಾರಣ ತಾತ್ತ್ವಿಕಾಂಶಗಳಿಗಿಲ್ಲಿ ಅವಧಾರಣೆ ಹೆಚ್ಚು. ಪ್ರಾಯಿಕವಾಗಿ ಇಲ್ಲಿಯ ಅವರ ಎಲ್ಲ ನಿಲವು-ನಿಗಮನಗಳೂ ಕೇವಲಾದ್ವೈತದ ಹಿನ್ನೆಲೆಯಲ್ಲಿ, ಯಾವುದೇ ವಿವೇಕಿಗೆ ಸಂಮತವಾಗಬಲ್ಲ ಕಾರಣ ಅವನ್ನು ಪಾರಮಾರ್ಥಿಕಸ್ತರದಲ್ಲಿಯೇ ಗ್ರಹಿಸಬೇಕು. ಇಂತಿದ್ದರೂ ಕೆಲವು ಸಂದರ್ಭಗಳಲ್ಲಿ ಅವರು ಕೊಡುವ ವಿವರಣೆಗಳು ಕಾವ್ಯಮೀಮಾಂಸೆಯ ರಚನಾಸ್ತರಕ್ಕೂ ಅನುಕೂಲಿಸಿಬರುತ್ತವೆ. ಅಂಥ ಒಂದು ಸಂದರ್ಭ ಹೀಗಿದೆ:

ಕವಿಯ ಕೆಲಸವಿರುವುದು ಕಾವ್ಯವಲ್ಲದೆ ಇರುವುದನ್ನು ಕಾವ್ಯವಾಗಿಸುವಲ್ಲಿ ಅಲ್ಲ; ಕವಿಯ ವಿಶಿಷ್ಟಾನುಭವವೇ ಕಾವ್ಯವಸ್ತು. ಇದನ್ನು ಹೊರಗೆಡಹಿ ಬೇರೆಯವರಿಗೆ ತಿಳಿಯುವಹಾಗೆ ಮಾಡುವಲ್ಲಿ ಕಾವ್ಯವಲ್ಲದ ವಸ್ತುವಿನ ಸಹಾಯ ಇವನಿಗೆ ಬೇಕಾಗುತ್ತದೆ. ಕಾವ್ಯವಲ್ಲದ ವಸ್ತುವನ್ನು ಕಾವ್ಯವಹನಕ್ಕೆ ಮಾಧ್ಯಮವನ್ನಾಗಿ ಉಪಯೋಗಿಸುವ ಕೌಶಲ ಮತ್ತು ಕಾವ್ಯವಾಗಿ ಹರಿಯುವ ವಿಶಿಷ್ಟಾನುಭವ – ಇವೆರಡರ ಸಂಯೋಗದಿಂದ ಕವಿಯಾದವನ ಹಿರಿಮೆ. ಕಾವ್ಯವಲ್ಲದ ವಸ್ತುವು ಕವಿಯ ಕೌಶಲದ ಮೂಲಕ ಕಾವ್ಯವಾಹಿಯಾಗಿ ಮಾರ್ಪಟ್ಟಾಗ ಅದರಲ್ಲುಂಟಾಗುವ ಹೊಸ ಶಕ್ತಿಯೇ ಧ್ವನಿಯೆಂದು ಹೇಳುತ್ತಾರೆ (ಪು. ೩೪-೩೫).

ಇದು ಧ್ವನಿಪ್ರಸ್ಥಾನಕ್ಕೆ ಭಟ್ಟರು ಕೊಟ್ಟ ವಿವರಣೆ. ಇಲ್ಲಿ ಮುಖ್ಯವಾಗಿ ತೋರುವುದು ಪ್ರಕೃತಾಪ್ರಕೃತಗಳ ಸಾರ್ಥಕಸಂಯೋಗ. ವಸ್ತುತಃ ಇದನ್ನು ಧ್ವನಿತತ್ತ್ವಕ್ಕೆ ವಿವರಣೆಯಾಗಿ ಭಟ್ಟರು ಹೇಳಿದ್ದರೂ ವಕ್ರೋಕ್ತಿತತ್ತ್ವವೂ ಇಲ್ಲಿ ವಿವೃತವಾಗಿದೆಯೆನ್ನಬೇಕು. ಅಷ್ಟೇಕೆ, ಅದೇ ಇಲ್ಲಿ ಪ್ರಸ್ಫುಟವಾಗಿ ತೋರಿದೆ. ಸಕಲಾಲಂಕಾರಗಳ ಮೂಲವೇ ಇಲ್ಲಿದೆ.

* * *

ಭಟ್ಟರ ಮುಖ್ಯವಾದ ಅವಧಾರಣೆಗಳಲ್ಲೊಂದು ಆಧುನಿಕವಿಕಾಸವಾದವನ್ನು ಪ್ರಾಚೀನರ ಮೇಲೆ ಹೇರುವ ಅನರ್ಥವನ್ನು ಕುರಿತಾಗಿದೆ (ಪು. ೭೪). ಇದು ನಿಜಕ್ಕೂ ಶ್ಲಾಘನೀಯಸಂಗತಿ. ಏಕೆಂದರೆ ಗಣಿತ-ಪ್ರಯೋಗಪ್ರಧಾನವಾದ ಭೌತ-ರಾಸಾಯನಿಕ-ಜೀವ-ಮನೋವಿಜ್ಞಾನಗಳಲ್ಲಿ ಭಾವಕ್ಕೆ ಯಾವುದೇ ಬೆಲೆಯಿಲ್ಲ. ಇವೆಲ್ಲ ತಥ್ಯಗಳನ್ನಾಧರಿಸಿ ಸಾಗುವ ಶಾಸ್ತ್ರಗಳು. ಆದರೆ ಕಲೆಗಳಾಗಲಿ, ಅವುಗಳ ಮೀಮಾಂಸೆಯಾಗಲಿ ಹೀಗಲ್ಲ. ಇವು ಮೌಲ್ಯಪ್ರಪಂಚದವು. ಈ ವ್ಯತ್ಯಾಸವನ್ನು ಸುಮಾರು ಶತಮಾನದ ಮುನ್ನವೇ ಆಚಾರ್ಯ ಎಂ. ಹಿರಿಯಣ್ಣನವರು ಸೊಗಸಾಗಿ ಸಾರಿದ್ದಾರೆ. ಆದುದರಿಂದ ಕೇವಲ ಸಂವೇದನೆಯನ್ನೇ ಆಧರಿಸಿದ ಕಲಾ-ಶಾಸ್ತ್ರಗಳ ವಿಕಾಸವು ರೇಖಾತ್ಮಕವಾಗಿಯೇ ಸಾಗಬೇಕೆಂಬ ನಿರ್ಬಂಧವಿಲ್ಲ. ಮಾತ್ರವಲ್ಲ, ಅವುಗಳ ಹಾದಿಯು ಹೀಗಿಲ್ಲವೆಂಬುದೂ ಇತಿಹಾಸವೇದ್ಯ. ಜೊತೆಗೆ ಇಂಥ ಸಂವೇದನೆಯನ್ನೇ ಕೇಂದ್ರವಾಗಿರಿಸಿಕೊಂಡ ಅನೇಕಸಂಸ್ಕೃತಿಗಳು ಆತ್ಮನಿಷ್ಠವಾಗಿಯೇ ಲೌಕಿಕವಿದ್ಯೆಗಳನ್ನು ಕೂಡ ಸಾಕ್ಷಾತ್ಕರಿಸಿಕೊಂಡಿವೆ. ಇಂಥ ಸಂಸ್ಕೃತಿಗಳ ಪೈಕಿ ಭಾರತೀಯಸಂಸ್ಕೃತಿಗೆ ಮಿಗಿಲಾದ ಸ್ಥಾನವಿದೆ. ಏಕೆಂದರೆ ಇದು ಗುಣ-ಗಾತ್ರಗಳಿಂದ ಮಾತ್ರವಲ್ಲದೆ ಅವಿಚ್ಛಿನ್ನಪರಂಪರೆ ಮತ್ತು ಸತತಾನ್ವಯಗಳಿಂದ ಇಂದಿಗೂ ಜೀವಂತವಾಗಿದೆ. ಹೀಗಾಗಿ ಇಲ್ಲಿಯ ಲೌಕಿಕವೆನಿಸಿಕೊಳ್ಳುವ ವಿದ್ಯೆಗಳೂ ಪರಮಾರ್ಥತಃ ಆತ್ಮವಿದ್ಯೆಯ ವಿವರ್ತಗಳೇ ಆಗಿವೆ. ಇದನ್ನು ಆಧುನಿಕಭಾರತವೂ ಸೇರಿದಂತೆ ಹೊಸ ಜಗತ್ತು ಉಪೇಕ್ಷಿಸಿದೆ. ಇದಕ್ಕೆ ಮುಖ್ಯಕಾರಣ ಭೌತಿಕನಾಗರಕತೆ ಮತ್ತು ವಿಜ್ಞಾನ-ತಂತ್ರಜ್ಞಾನಗಳು ತಂದಿತ್ತ ಭೋಗಪಾರಮ್ಯ. ಇದರಿಂದಾಗಿ ಭೌತವಿದ್ಯೆಗಳೂ ಹೇತುವಾದಗಳೂ ಸರ್ವಪ್ರಕಾರದಿಂದ ಮಿಕ್ಕೆಲ್ಲ ಸಂವೇದನಮೂಲವಿದ್ಯೆಗಳ ಆಗು-ಹೋಗುಗಳನ್ನು ನೋಡಬಲ್ಲುವು, ಮತ್ತು ಅವನ್ನೂ ಮೀರಿ ನಿಂತು ಸರ್ವೋಚ್ಚಪ್ರಮಾಣವೆನಿಸಬಲ್ಲುವೆಂಬ ಅಂಧಶ್ರದ್ಧೆಯೇ ಬೆಳೆದಿದೆ. ಇದು ಎಲ್ಲ ಕಾಲಗಳಲ್ಲಿಯೂ ಆಗುತ್ತಿದ್ದ ವಿದ್ಯಮಾನವೇ. ಆದರೆ ನಮ್ಮೀ ಕಾಲದಲ್ಲಿ ಉಂಟಾದ ಜಗತೀಕರಣ, ತಂತ್ರಜ್ಞಾನಸ್ಫೋಟ; ತನ್ಮೂಲಕ ಒದಗಿಬಂದ ದೇಶ-ಕಾಲ-ವಸ್ತುಸಂಕೋಚಗಳಿಂದಾಗಿ ಇದು ಸಂವೇದನಶೀಲರಿಗೆ ಮಿಗಿಲಾಗಿ ಅನುಭವಕ್ಕೆ ಬರುತ್ತಿದೆ. ಇಂಥ ಪರಿಸ್ಥಿತಿಯು ಮಾರ್ಪಡದೆ ಲೋಕಕ್ಕೆ ಹಿತವಿಲ್ಲ. ಇದು ಭಟ್ಟರ ಇರಾದೆ.

* * *

ಭಟ್ಟರು ಪ್ರಾಚೀನವಾದ ಆರ್ಷಸಂಪ್ರದಾಯದ ಪ್ರಕಾರ ಜೀವನಸಾಪೇಕ್ಷವಲ್ಲದ ಅಧ್ಯಯನವಿಷಯಗಳು ಅರ್ಥಶೂನ್ಯವೆಂದು ಹೇಳಿರುವುದು ತುಂಬ ಮನನೀಯ (ಪು. ೯೫). ಈ ಕಾರಣದಿಂದಲೇ ನಮ್ಮ ಪರಂಪರೆಯ ಎಷ್ಟೋ ವಿದ್ಯೆಗಳಲ್ಲಿ ನಾವಿಂದು ಭಾವಿಸುವ ಕೊರತೆಗಳು ನಮ್ಮ ಪೂರ್ವಜರನ್ನು ಕಾಡಿರಲಿಲ್ಲ. ಮಾತ್ರವಲ್ಲ, ಸಂತೋಷವನ್ನು ಸಾಧನೆಗಿಂತ ಮಿಗಿಲಾಗಿ ಪರಿಭಾವಿಸಿದ ಪರಂಪರೆ ನಮ್ಮದಾದ ಕಾರಣ, ಅಹಂಕಾರವನ್ನು ಉದ್ದೀಪಿಸುವ ಬಹಿರಂಗಸಾಧನೆಗಳಿಗಿಂತ ಆನಂದವನ್ನು ಆವಿಷ್ಕರಿಸುವ ಅಂತರಂಗಸಂವೇದನೆಗೆ ಹೆಚ್ಚಿನ ಬೆಲೆ ನೀಡಿದುದು ಯುಕ್ತವೇ ಆಗಿದೆ. ಇದರ ಪ್ರತಿಫಲನವನ್ನು ಸಾಹಿತ್ಯಾದಿಕಲೆಗಳಲ್ಲಿಯೂ ಅವುಗಳ ಮೀಮಾಂಸೆಯಲ್ಲಿಯೂ ಕಂಡರೆ ಅಚ್ಚರಿಯಲ್ಲ. ಭಟ್ಟರು ಇಂಥ ಅರಿವು ನಮ್ಮದಾಗಬೇಕೆಂಬ ತೀವ್ರವಾದ ಕಳಕಳಿಯುಳ್ಳವರು. ಅವರ ಮಾತುಗಳನ್ನು ಇಂಥ ಭಾವಸಂಚಲನದ ನೇಪಥ್ಯದಲ್ಲಿರಿಸದೆ ಪೃಥಕ್ಕಾಗಿ ನೋಡಿದರೆ ಅನರ್ಥ ತಪ್ಪದು.  

* * *

ಇದೇ ಸಂದರ್ಭದಲ್ಲವರು ನಮ್ಮ ಶಾಸ್ತ್ರ-ಸಾಹಿತ್ಯಗಳಲ್ಲಿ ಕಂಡುಬರುವ ಪ್ರತಿಪಾದನಕ್ರಮವು ಏನೂ ಹಿನ್ನೆಲೆಯಿಲ್ಲದವನಿಗೆ ಹೊಸತೊಂದು ವಿಷಯವನ್ನು ತಿಳಿಸುವ ಉಪಕ್ರಮಗಳಾಗಿ ರೂಪುಗೊಳ್ಳದೆ ಈಗಾಗಲೇ ಆಯಾ ವಿಚಾರಗಳನ್ನರಿತವರ ಪ್ರತ್ಯಭಿಜ್ಞಾನಕ್ಕಾಗಿ ರೂಪುಗೊಂಡಿವೆಯೆಂದು ಒಕ್ಕಣಿಸಿರುವುದು (ಪು. ೯೬-೯೮) ತುಂಬ ಬೋಧಪ್ರದ. ಈ ಸತ್ಯವನ್ನರಿಯದ ಕಾರಣ ಅದೆಷ್ಟೋ ಮಂದಿ “ಸಂಸ್ಕೃತಗ್ರಂಥಗಳು ಭದ್ರಲೋಕದವರಿಗೆ ಮಾತ್ರ (only for elitists); ಉಪೇಕ್ಷಿತವರ್ಗಗಳಿಗೆ ಇವು ದುಷ್ಪ್ರವೇಶ್ಯಗಳು; ಇಲ್ಲಿ ಜಾನಪದಸಂವೇದನೆಗೆ ಆಸ್ಪದವೇ ಇಲ್ಲ” ಎಂದೆಲ್ಲ ಆಕ್ಷೇಪಿಸುವಂತಾಗಿದೆ. ಇಂಥ ಅಧಿಕ್ಷೇಪಗಳಿಗೆ ಕೆಲವೊಂದು ಕಾರಣಗಳಿಲ್ಲದಿಲ್ಲ. ಆದರೆ ಪ್ರಧಾನವಾಗಿ ನಮ್ಮ ಶಾಸ್ತ್ರಹೃದಯವು ವಿದ್ಯಾವಂಚನೆಯನ್ನು ಮಾಡುವಲ್ಲಿಲ್ಲ. ಅದೇನಿದ್ದರೂ ಅಧಿಕಾರಿಭೇದಾನುಸಾರ ಫಲವೀಯುವಂಥದ್ದು. ಇಂಥ ವಿವೇಕವಿಲ್ಲದೆ ಸಾಗಿದಲ್ಲಿ ನಮ್ಮ ಪಾರಂಪರಿಕಜ್ಞಾನವು ಯಾರಿಗೂ ಯಾವುದೇ ರೀತಿಯಲ್ಲಿ ಪ್ರಯೋಜಕವಾಗದು. ಈ ಅಂಶಗಳನ್ನೆಲ್ಲ ಭಟ್ಟರು ತುಂಬ ಸೊಗಸಾಗಿ ನಿರೂಪಿಸಿದ್ದಾರೆ. ವಿಶೇಷತಃ ಅವರು “ಅಥ” (ಅನಂತರ) ಮತ್ತು “ಅತಃ” (ಆದುದರಿಂದ) ಎಂಬ ಶಬ್ದಗಳಿಗೆ ನೀಡಿರುವ ವಿವರಣೆ ಗಮನಾರ್ಹ. ಅವರ ಪ್ರಕಾರ “ಅಥ”ಶಬ್ದವು “ಜೀವನಾನುಭವದಿಂದ ಗ್ರಂಥಸ್ವಾರಸ್ಯವನ್ನು ಅನುಭವಿಸಿದ ಬಳಿಕ” ಎಂದೂ “ಅತಃ”ಶಬ್ದವು “ಜೀವನಾನುಭವದಲ್ಲಿ ವೈಯಕ್ತಿಕಪರಿಮಿತಿಯು ಅನಿವಾರ್ಯವಾಗಿ, ತನ್ಮೂಲಕ ಅದು ಸ್ವಯಂಪೂರ್ಣವಲ್ಲದ ಕಾರಣ” ಎಂದೂ ಅಭಿಪ್ರೇತವಾಗಬೇಕು. ಇಂಥ ಸಂವೇದನೆಯು ನಷ್ಟವಾದ ಕಾರಣದಿಂದಲೇ ನಮ್ಮ ಅದೆಷ್ಟೋ ಉಪಲಬ್ಧಗ್ರಂಥಭಾಗಗಳು ತಪ್ಪಾಗಿ ತಿಳಿಯಲ್ಪಟ್ಟಿವೆ; ಮತ್ತೆಷ್ಟೋ ಭಾಗಗಳು ಅವಗಣಿತವಾಗಿ ಲುಪ್ತಗೊಂಡಿವೆ.  

* * *

ಯಾವುದೇ ಅನ್ಯಪರಂಪರೆಯಲ್ಲಿಲ್ಲದ ಸೂತ್ರ-ಭಾಷ್ಯಪದ್ಧತಿಯು ನಮ್ಮದಾಗಿದೆ. ಇದಕ್ಕೆ ಲೌಕಿಕವಾದ ಕಾರಣಗಳೇನೇ ಇರಲಿ, ಸಂಪ್ರದಾಯಶುದ್ಧಿಯಿಲ್ಲದೆ ಈ ಗ್ರಂಥಗಳನ್ನು ಅರ್ಥೈಸಲಾಗುವುದಿಲ್ಲ. ಇಂಥ ಅವಿಚ್ಛಿನ್ನಸಂಪ್ರದಾಯಕ್ಕೆ ಬೆಲೆ ಕೊಡುವುದು ಭಾರತೀಯಸಂವೇದನೆಯ ಅಂಗಗಳಲ್ಲೊಂದು. ಈ ಬಗೆಯ ಸಂವೇದನೆಯ ಸಾರ ಋಷಿಪ್ರಜ್ಞೆಯಲ್ಲಿದೆಯೆಂಬ ಭಟ್ಟರ ನಿಶ್ಚಯ (ಪು. ೯೭-೯೮) ಹೊಸತಲ್ಲವಾದರೂ ಹಿರಿದು, ಉಪಾದೇಯ. ಋಷಿತ್ವದ ಲಕ್ಷಣವೇ ಜೀವನದ ಅಖಂಡತೆಯ ಸಾಕ್ಷಾತ್ಕಾರ; ಈ ನೆಲೆಯಲ್ಲಿ ಋಷಿಯು ಸರ್ವಜ್ಞನೂ ಹೌದು. ಆದರೆ ಈತನ ಸರ್ವಜ್ಞತೆಯು ವಿಷಯನಿಷ್ಠವಲ್ಲ, ವಿಷಯಿನಿಷ್ಠ. ಇದನ್ನು ಮರೆತಲ್ಲಿ ಅನರ್ಥ ತಪ್ಪದು.

* * *

ಭಟ್ಟರು ನಮ್ಮ ಮಹಾಕಾವ್ಯಗಳಲ್ಲಿಯೇ ಅವುಗಳ ಮೀಮಾಂಸೆಗೆ ಬೇಕಾದ ಅಂಶಗಳೂ ಹಾಸುಹೊಕ್ಕಾಗಿವೆಯೆಂದು ವ್ಯಾಸ-ವಾಲ್ಮೀಕಿಗಳ ಬೆಳಕಿನಲ್ಲಿ ತೋರುವುದಲ್ಲದೆ, ಇದನ್ನು ಆನಂದವರ್ಧನನೂ ಮನಗಾಣಿಸಿದ್ದಾನೆನ್ನುತ್ತಾರೆ (ಪು. ೧೦೨). ಈ ಸಂಗತಿಯನ್ನು ಪೂರ್ವಸೂರಿಗಳು ಸ್ಪಷ್ಟಪಡಿಸಿಯೇ ಇದ್ದಾರೆ. ಪಾಶ್ಚಾತ್ಯಪ್ರಪಂಚದಲ್ಲಿಯೂ ಮಹಾಕವಿಯ ಕೃತಿಯೊಂದರ ಅತ್ಯುತ್ತಮವಿಮರ್ಶೆಗೆ ಬೇಕಾದ ಸೂತ್ರಗಳು ಅದರೊಳಗೇ ಇರುತ್ತವೆಂಬ ಅಭಿಪ್ರಾಯಗಳುಂಟು. ಹೀಗೆ ಆರ್ಷಪ್ರಜ್ಞೆಯು ದೇಶ-ಕಾಲಾತೀತ. ಇದನ್ನು ಭಟ್ಟರೂ ಒಪ್ಪಿದ್ದಾರೆ. ಆದರೆ ಭಾರತವು ಇಂಥ ಆರ್ಷಪ್ರಜ್ಞೆಯನ್ನು ವ್ಯಕ್ತೀಕರಿಸುವಲ್ಲಿ ಜಾಗತಿಕವಿಭೂತಿಯೆನಿಸಿದೆ. 

* * *

ಭಟ್ಟರು ಇಂದು ಪ್ರಚಲಿತವಿರುವ ಹೆಚ್ಚಿನ ಚರ್ಚೆಗಳನ್ನು ಭಾರತೀಯ ಮತ್ತು ಪಾಶ್ಚಾತ್ಯ ಎಂದು ಹೆಸರಿಸುವುದಕ್ಕಿಂತ “ಭಾರತೀಯತಾ-ಅಂಕಿತ” ಮತ್ತು “ಪಾಶ್ಚಾತ್ಯತಾ-ಅಂಕಿತ” ಎಂಬುದಾಗಿ ನಿರ್ದೇಶಿಸುವುಸು ಸೂಕ್ತವೆನ್ನುತ್ತಾರೆ (ಪು. ೧೧೨). ಏಕೆಂದರೆ ಅದೆಷ್ಟೋ ಬಾರಿ ಇಂಥ ವಿಭಾಗಗಳು ಹೆಸರಿಗಾಗಿ ಹೋರಾಡುತ್ತಿವೆಯಲ್ಲದೆ ಹುರುಳಿಗಾಗಿ ಅಲ್ಲ. ಇದೇ ಸಂದರ್ಭದಲ್ಲವರು ಆದರ್ಶಪರತೆಯನ್ನು ಪ್ರಬಲವಾಗಿ ಸಮರ್ಥಿಸುತ್ತ ವಸ್ತುಪರತೆ ಮತ್ತು ಆದರ್ಶಪರತೆಗಳ ವ್ಯತ್ಯಾಸವನ್ನು ಸೋದಾಹರಣವಾಗಿ ಹೀಗೆ ಹೇಳುತ್ತಾರೆ: “ದೇಹ ಆತ್ಮವನ್ನು ’ಒಳಗೊಳ್ಳುತ್ತದೆ’ ಎಂಬುದು ಸಾಮಾನ್ಯ(ವಸ್ತುಪರ)ದೃಷ್ಟಿ. ಆದರೆ ಆತ್ಮ ದೇಹವನ್ನು ’ಒಳಗೊಳ್ಳುತ್ತದೆ’ ಎಂಬುದು ತಾತ್ತ್ವಿಕ(ಆದರ್ಶಪರ)ದೃಷ್ಟಿ” (ಪು. ೧೧೩). ಇಂತಾದರೂ ಆದರ್ಶಪರತೆಯೇ ಆದರ್ಶದ ಸಾಕ್ಷಾತ್ಕಾರವಲ್ಲ; ಅದು ಆದರ್ಶದ ವೈಚಾರಿಕಸಮೀಪನಮಾತ್ರವೆಂದು ನಿರ್ಣಯಿಸುತ್ತಾರೆ. ಜೊತೆಗೆ, ವಸ್ತುಪರವಾದ ಸೃಷ್ಟಿಶೀಲತೆಗೆ ಆದರ್ಶಪರತೆಯ ತಾತ್ತ್ವಿಕನೇಪಥ್ಯವೂ ಆದರ್ಶಪರತೆಗೆ ವಸ್ತುಪರತೆಯ ಪ್ರಯೋಗಕುಶಲತೆಯೂ ಅವಶ್ಯವಾದ ಪೂರಕಸಾಮಗ್ರಿಗಳೆಂದು ಯುಕ್ತವಾಗಿ ತರ್ಕಿಸುತ್ತಾರೆ. ಅಂತೆಯೇ ನಿರ್ಗುಣಬ್ರಹ್ಮದಂಥ ತತ್ತ್ವಗಳು ಅಭಾವರೂಪಿಗಳಲ್ಲವೆಂದೂ ಅಲ್ಲಿಯ ನಿರ್ಗುಣತ್ವವು ಲಕ್ಷಣಾತೀತತೆಯ ಧ್ವನಿಯೆಂದೂ ಪ್ರತಿಪಾದಿಸುವುದು ಸ್ವಾಗತಾರ್ಹ. ಹೀಗೆಯೇ ವಿಚಾರಸೂಕ್ಷ್ಮತೆ-ಸಂವೇದನೆಗಳನ್ನು ಬೆಳಸುವಲ್ಲಿ ವಾದವೂ ಒಂದು ಸಾಧನವಲ್ಲದೆ ಅದೊಂದೇ ಸಾಧನವಲ್ಲವೆಂದು ಹೇಳುವಾಗ ಹೃದಯಂಗಮವಾದ ಆರ್ಷದೃಷ್ಟಿಯಿದೆ.

* * *

ಭಟ್ಟರ ಸಂವೇದನಶೀಲತೆಗೆ ತುಂಬ ಸುಂದರವಾದ ನಿದರ್ಶನವಾಗಿ ಅವರು ನಮ್ಮ ಅಭಿಜಾತಸಾಹಿತ್ಯದ್ದಲ್ಲಿ ಕಾಣಸಿಗುವ ಕೀರ್ತಿ ಅಥವಾ ಯಶಸ್ಸಿನ ಮೀಮಾಂಸೆಯನ್ನು ನಡಸಿದ ಪರಿಯನ್ನು ಕಾಣಬಹುದು. ಸಾಮಾನ್ಯವಾಗಿ ನಮ್ಮ ಕಾವ್ಯನಾಯಕರೆಲ್ಲ ಕೀರ್ತಿಕಾಮಿಗಳೆಂದು ಆಧುನಿಕರ ಆಕ್ಷೇಪ. ಆದರೆ ಪ್ರಾಚೀನರ ಕೀರ್ತಿಪರಿಕಲ್ಪನೆಯು ಪುಣ್ಯ, ಯೋಗ್ಯತೆ, ಅರ್ಹತೆ ಮುಂತಾದವುಗಳಿಗೆ ನಿಕಟವಾದ ಮೌಲ್ಯವೆಂದು ಭಟ್ಟರು ಯುಕ್ತವಾಗಿ ತರ್ಕಿಸುವುದಲ್ಲದೆ (ಪು. ೧೧೭) ಇಂಥ ಮೌಲ್ಯಕ್ರಮಕ್ಕೆ ವ್ಯತಿರಿಕ್ತವಾಗಿ ಇಂದು ಕೀರ್ತಿಯು ನೀತಿ-ನ್ಯಾಯಗಳ ಪರಿಧಿಯಿಂದಾಚೆಗೂ ಪ್ರಾಪ್ತವಾಗುತ್ತಿರುವ ಬಗೆಯನ್ನು ಮುಂದಿಡುತ್ತಾರೆ. ತಾತ್ಪರ್ಯತಃ ಹೇಳುವುದಾದರೆ, ಸನಾತನದೃಷ್ಟಿಯಲ್ಲಿ ಕೀರ್ತಿಯು ಸರ್ವಥಾ ಸತ್ಕಾರ್ಯಜಾತ; ಆದರೆ ಅಧುನಾತನದೃಷ್ಟಿಯಲ್ಲಿ ಇದು ಕೇವಲ ಕಾರ್ಯಜಾತ. ಇದು ತುಂಬ ಬೋಧಪ್ರದವಾದ ನಿದರ್ಶನ. 

* * *

ಆರ್ಷವೆಂಬ ಗೌರವವನ್ನು ಗಳಿಸಿದ ಭರತಮುನಿಯ ನಾಟ್ಯಶಾಸ್ತ್ರವು ಕಂಠೋಕ್ತವಾಗಿ ತನ್ನ ವೇದಮೂಲತ್ವವನ್ನು ಸಾರಿದೆ. ಇದು ಪುರುಷಾರ್ಥಪ್ರತಿಪಾದಕವಾಗಿದ್ದು, ಶೃಂಗಾರದಂಥ ಸವಿಕಲ್ಪರಸಗಳನ್ನೂ ವ್ಯಾಪಕವಾಗಿ ಬೆಳೆಸಿ ಆರ್ಷಕಾವ್ಯಗಳ ನಿರ್ಚಿಕಲ್ಪಸ್ತರದ ಶಾಂತರಸಕ್ಕೆ ಒಂದು ಹೊಸ ಆಯಾಮವನ್ನೂ ನೀಡಿದೆ. ಮಾತ್ರವಲ್ಲ, ಅದು ಯಾವುದೇ ಲಕ್ಷ್ಯಗ್ರಂಥಗಳನ್ನೂ ಹೆಸರಿಸದೆ ಕೇವಲ ತತ್ತ್ವಪ್ರತಿಪಾದನೆಯಿಂದಲೇ ಸ್ವಯಂಪೂರ್ಣತೆಯನ್ನು ಗಳಿಸಿದೆ. ಜೊತೆಗೆ ತನ್ನೀ ಆಕೃತಿಯ ಮೂಲಕ ಮುಂದಿನ ಕವಿಯಾದ ಕಾಳಿದಾಸನನ್ನು ಎದುರುನೋಡುತ್ತದೆಯೆಂದು ಭಟ್ಟರು ಭಾವಿಸಿದ ಬಗೆ (ಪು. ೧೨೩) ನಿಜಕ್ಕೂ ಸ್ವಾರಸ್ಯಕರ. ಕಾಳಿದಾಸ-ಬಾಣರು ಭರತೋದಿತಕ್ರಮದಲ್ಲಿ ಶೃಂಗಾರವನ್ನು ಶಾಂತಕ್ಕೆ ಪೂರಕವಾಗುವಂತೆ ನಿರೂಪಿಸಿದರೆ, ಇದೇ ರೀತಿ ವಿಶಾಖದತ್ತ-ಭಾರವಿಗಳು ವೀರವನ್ನು ಶಾಂತಕ್ಕೆ ಪೂರಕವಾಗಿಸುತ್ತಾರೆಂಬ ಭಟ್ಟರ ಒಳನೋಟ ಗಮನಾರ್ಹ. ಜೊತೆಗೆ ಆನಂದವರ್ಧನನಂಥವರು ಭರತನ ವ್ಯಾಖ್ಯಾತೃಗಳಂತೆ ವರ್ತಿಸಿ ಆ ಮುನಿಯ ಮೌಲ್ಯವನ್ನು ವ್ಯಾಸ-ವಾಲ್ಮೀಕಿಗಳ ದರ್ಶನಕ್ಕೆ ಬೆಸೆಯುವರೆಂಬ ಮಾತೂ ಮಾನನೀಯ (ಪು. ೧೨೪). ಇದೇ ಸಂದರ್ಭದಲ್ಲವರು ಭೌತಿಕದೃಷ್ಟಿಯಲ್ಲಿ ಸದಾ ವೈಚಾರಿಕ ಅಶಾಂತಿಯಿರುತ್ತದೆಂದು ಮಾರ್ಮಿಕವಾಗಿ ಒಕ್ಕಣಿಸುತ್ತಾರೆ. ನಾವು ಮತ್ತೂ ಮುಂದುವರಿದು, ಇದು ವೈಚಾರಿಕವಾದ ಅಶಾಂತಿಯನ್ನಷ್ಟೇ ಅಲ್ಲದೆ ಆನಂದಾನುಭವವನ್ನೇ ಸೊರಗಿಸುತ್ತದೆಂದು ಹೇಳಬಹುದು.

* * *

ಪಾಶ್ಚಾತ್ಯಪ್ರಭಾವದಿಂದ ನಮ್ಮ ಅಧ್ಯಯನಕ್ರಮದಲ್ಲಿ ಐತಿಹಾಸಿಕದೃಷ್ಟಿ ಮತ್ತು ತೌಲನಿಕವ್ಯಾಸಂಗಗಳು ತಲೆದೋರಿದುವೆಂದು ಭಟ್ಟರು ಗುರುತಿಸುತ್ತಾರೆ (ಪು. ೧೩೨). ಇದು ಕೂಡ ಪೂರ್ವಸೂರಿಪ್ರಸಿದ್ಧವೇ. ಅಂತೆಯೇ ಪಾಶ್ಚಾತ್ಯರ ಈ ಕ್ರಮವು ರೇಖಾತ್ಮಕವಾಗಿದ್ದುದೇ ಅದರ ದೋಷ; ಮತ್ತಿದು ವ್ಯಧಿಕರಣಬುದ್ಧಿಯದಾಗಿರುವುದು ಮತ್ತೂ ಹೆಚ್ಚಿನ ಅನರ್ಥವೆಂದು ಅವರು ತರ್ಕಿಸಿರುವುದೂ ಯುಕ್ತ. ಈ ಕಾರಣದಿಂದಲೇ ಭಾರತೀಯಮೌಲ್ಯಗಳ ತಥಾಕಥಿತವಿಕಾಸವಾದಕ್ಕೆ ಹೆಚ್ಚಿನ ಮನ್ನಣೆ ಬಂದಿತಲ್ಲದೆ ವಿವರ್ತವಾದಕ್ಕಲ್ಲ, ಅಭಿವ್ಯಕ್ತಿವಾದಕ್ಕಲ್ಲವೆಂಬ ನಿಗಮನವೂ ಶ್ಲಾಘನೀಯ (ಪು. ೧೩೩). ಮತ್ತೊಂದೆಡೆ ಭಟ್ಟರು ಪಾಶ್ಚಾತ್ಯವ್ಯಾಸಂಗಕ್ರಮವು ಗ್ರಂಥಾತೀತಪರಂಪರೆಯ ಕಡೆಗೆ ಹೆಚ್ಚಿನ ಮನ್ನಣೆ ನೀಡುವುದಿಲ್ಲವೆಂದು ಗಮನಿಸಿರುವುದು ಮೌಲಿಕ (ಪು. ೧೮೨). ನಮ್ಮ ಪರಂಪರೆಯು ಅವಿಚ್ಛಿನ್ನಸಂಪ್ರದಾಯಕ್ಕೂ ವಿದ್ಯಾವಿಷಯಗಳ ಜೀವನಾನುಸಂಧಾನಕ್ಕೂ ಹೆಚ್ಚಿನ ಬೆಲೆ ನೀಡುತ್ತವೆ. ಶುಷ್ಕಾಸಕ್ತಿಯನ್ನಾಗಲಿ, ಬೌದ್ಧಿಕಕುತೂಹಲಮಾತ್ರವನ್ನಾಗಲಿ ಇದು ಉತ್ತೇಜಿಸುವುದಿಲ್ಲ. 

* * *

ಭಟ್ಟರು ನಮ್ಮ ಗ್ರಂಥಗಳಲ್ಲಿ ಕಾಣಸಿಗುವ ಪ್ರಕ್ಷೇಪಭಾಗಗಳನ್ನು ಕುರಿತು ತುಂಬ ಮಾರ್ಮಿಕವಾದ ಮಾತುಗಳನ್ನಾಡಿದ್ದಾರೆ. ಅವರದೇ ಆದ “ಸಹಜಪ್ರಕ್ಷಿಪ್ತ” ಮತ್ತು “ಕೃತಕಪ್ರಕ್ಷಿಪ್ತ”ಗಳೆಂಬ ಪರಿಭಾಷೆಗಳು ತುಂಬ ಬೋಧಪ್ರದ (ಪು. ೧೩೪-೧೩೫). ಈ ಪ್ರಕಾರ ಸಹಜಪ್ರಕ್ಷಿಪ್ತವು ಭೌತಿಕವಾಗಿ ಕೃತಿಕಾರನ ದೇಶ-ಕಾಲಗಳಿಂದ ತುಂಬ ದೂರವಿದ್ದರೂ ಭಾವನೈಕಟ್ಯದ ಕಾರಣ ಸ್ವೀಕಾರ್ಯ. ಆದರೆ ಕೃತಕಪ್ರಕ್ಷೇಪದ ಸ್ಥಿತಿ ಹೀಗಲ್ಲ. ಇದು ಮೂಲಕೃತಿಕಾರನ ದರ್ಶನಕ್ಕೇ ವಿಸಂವಾದಿ. ಇಂಥ ವಿಚಾರವನ್ನು ಡಿ.ವಿ.ಜಿ.ಯವರು ಹಿಂದೆಯೇ ಹೇಳಿದ್ದರು. ಪ್ರಕ್ಷೇಪದ ಕ್ರಮವು ಯಾವುದೇ ಆಗಿರಲಿ, ಅದು ಪ್ರಕ್ಷೇಪವೆಂಬ ಎಚ್ಚರವಿದ್ದಲ್ಲಿ ಅಂಥ ಭಾಗಗಳ ಸ್ವೀಕಾರ್ಯ-ತಿರಸ್ಕಾರ್ಯಗಳಲ್ಲಿ ಹೆಚ್ಚಿನ ವಿವೇಕವಿರುತ್ತದೆ.

To be continued.

Author(s)

About:

Dr. Ganesh is a 'shatavadhani' and one of India’s foremost Sanskrit poets and scholars. He writes and lectures extensively on various subjects pertaining to India and Indian cultural heritage. He is a master of the ancient art of avadhana and is credited with reviving the art in Kannada. He is a recipient of the Badarayana-Vyasa Puraskar from the President of India for his contribution to the Sanskrit language.