ಭಟ್ಟರು ಭಾರತೀಯವಿದ್ಯಾಕ್ರಮದಲ್ಲಿ ಪಾಶ್ಚಾತ್ಯಪ್ರಭಾವವು ಮಾಡಿದ ಪರಿಣಾಮವನ್ನು ತುಂಬ ಸಮರ್ಥವಾಗಿ ವಿವೇಚಿಸಿದ್ದಾರೆ. ಮಾತ್ರವಲ್ಲ, ಇಂಥ ಸತ್ತ್ವಶೂನ್ಯಚಿಂತನಕ್ರಮವು ಪಾಶ್ಚಾತ್ಯಸಂಪರ್ಕಕ್ಕಿಂತ ಮೊದಲೇ ಉಂಟಾಗಿತ್ತೆಂದೂ ನಮ್ಮ ಪರಂಪರೆಯ ಗ್ರಂಥಗಳಲ್ಲಿ ಕಂಡುಬರುವ ತತ್ತ್ವಸ್ಖಾಲಿತ್ಯವನ್ನು ಗಮನಿಸಿ ತರ್ಕಿಸುತ್ತಾರೆ (ಪು. ೧೦೯-೧೧೨). ಇಂಥ ಮಧ್ಯಯುಗದ ಸತ್ತ್ವಶೂನ್ಯತೆಗೆ ಮುಖ್ಯಕಾರಣ ಇಸ್ಲಾಮಿನ ಬರ್ಬರವಾದ ಆಕ್ರಮಣದಿಂದ ಉಂಟಾದ ರಾಜಕೀಯ-ಸಾಮಾಜಿಕ-ಸಾಂಸ್ಕೃತಿಕ-ಧಾರ್ಮಿಕಕ್ಷೋಭೆಯೆಂಬುದನ್ನು ಅವರು ಕಂಠೋಕ್ತವಾಗಿ ಹೇಳದಿರುವುದು ಆಶ್ಚರ್ಯ ಮಾತ್ರವಲ್ಲ, ಅನ್ಯಾಯ ಕೂಡ. ದಿಟವೇ, ಯಾವುದೇ ಸಂಸ್ಕೃತಿಯು ಭೋಗಪಾರಮ್ಯವನ್ನವಲಂಬಿಸಿದಾಗ ಹೊರಗಿನ ಶತ್ರುಗಳ ಅನುಪಸ್ಥಿತಿಯಲ್ಲಿಯೂ ಹ್ರಾಸವನ್ನು ಹೊಂದುತ್ತದೆ. ಆದರೆ ಇಸ್ಲಾಮಿನ ದಾಳಿಯಿಲ್ಲದಿದ್ದಲ್ಲಿ ನಮ್ಮ ಪರಂಪರೆಯ ಪತನ ಇಷ್ಟು ಮಾತ್ರದ್ದಾಗುತ್ತಿರಲಿಲ್ಲ. ಆದರೂ ಸೃಷ್ಟಿಶೀಲತೆಯ ಸ್ಥಾನವನ್ನು ಅನುಕರಣೆ ಆಕ್ರಮಿಸಿತೆಂಬ ಭಟ್ಟರ ಪರಿಶೀಲನೆ ಒಪ್ಪುವಂಥದ್ದು. ಇದನ್ನು ಅಸಂಖ್ಯಪೂರ್ವಸೂರಿಗಳು ಹೇಳಿಯೇ ಇದ್ದಾರೆ.
* * *
ಭಟ್ಟರು ಕಾವ್ಯ-ಕಾವ್ಯಮೀಮಾಂಸೆಗಳನ್ನು ಮಿಕ್ಕ ಶಾಸ್ತ್ರಗಳ—ವಿಶೇಷತಃ ದರ್ಶನಶಾಸ್ತ್ರಗಳ—ಪರಂಪರೆಯೊಡನೆ ಹೋಲಿಸಿ, ಸಾಹಿತ್ಯ ಮತ್ತದರ ಮೀಮಾಂಸೆಯಲ್ಲಿ ಸರ್ವಾಂಗೀಣಪರಿಪೋಷಣೆಯಿಲ್ಲವೆಂದು ಹೇಳುತ್ತಾರೆ. ದೃಶ್ಯ-ಶ್ರವ್ಯಪ್ರಕಾರಗಳ ಪೈಕಿ ದೃಶ್ಯಕ್ಕಿರುವ ವೈವಿಧ್ಯ ಶ್ರವ್ಯಕ್ಕೆ ಸಂದಿಲ್ಲವೆಂದೂ ಗದ್ಯ-ಪದ್ಯಗಳ ಪೈಕಿ ಗದ್ಯದಲ್ಲಿ ವೈಪುಲ್ಯವಿಲ್ಲವೆಂದೂ ನಿರೂಪಿಸುತ್ತಾರೆ (ಪು. ೧೩೬). ಜೊತೆಗೆ ಕಾವ್ಯ-ನಾಟಕಗಳ ವ್ಯಾಖ್ಯಾನಗಳನ್ನೂ ಆಕ್ಷೇಪಿಸುತ್ತಾರೆ. ಅವರ ಈ ನಿಲವು ಆಂಶಿಕವಾಗಿ ಮಾತ್ರ ಸ್ವೀಕಾರ್ಯ. ಏಕೆಂದರೆ ಇಂಥ ಕುಂದು-ಕೊರತೆಗಳು ಎಲ್ಲ ವಾಙ್ಮಯಪರಂಪರೆಯಲ್ಲಿಯೂ ಇವೆ. ಮಾತ್ರವಲ್ಲ, ಭಾಷ್ಯಲಕ್ಷಣಕ್ಕೇ ಬಹಿರ್ಭೂತವಾದ ಅದೆಷ್ಟೋ ಪ್ರಸ್ಥಾನತ್ರಯಭಾಷ್ಯಗಳನ್ನು ವೇದಾಂತವೆಂಬ ಹೆಸರಿನಡಿ ನೋಡಬಹುದು. ಯಾವುದೇ ವಿದ್ಯಾಶಾಖೆಯಲ್ಲಿ ಮೌಲಿಕವಾದ ಕೃತಿಗಳ ಆವಿರ್ಭಾವವು ವಿರಳವೇ ಸರಿ. ವಿಶೇಷತಃ ಕಾಲಪರೀಕ್ಷೆಯಲ್ಲಿ ಇವುಗಳ ತೇರ್ಗಡೆ ತುಂಬ ಕಷ್ಟ. ಇದಕ್ಕೆ ನೂರಾರು ನಿದರ್ಶನಗಳಿದ್ದರೂ ಗ್ರಂಥವಿಸ್ತರಭೀತಿಯಿಂದ ಕೊಡಲಾಗುತ್ತಿಲ್ಲ, ಅಷ್ಟೇ. ಅಲ್ಲದೆ ದರ್ಶನಶಾಸ್ತ್ರಗಳಿಗೆ ಬಂದಡರುವ ಯೋಗಿಪ್ರತ್ಯಕ್ಷದ ಭೂತವು ಪುಣ್ಯವಶಾತ್ ಅಲಂಕಾರಶಾಸ್ತ್ರವನ್ನು ಆ ಮಟ್ಟಿಗೆ ಕಾಡಿಲ್ಲ. ಜೊತೆಗೆ ವಿವಿಧಶಾಸ್ತ್ರಗಳ ಪರಂಪರೆಯಲ್ಲಿ ತೋರುವ ಅಂತರ್ವಿರೋಧಗಳೂ ವಿಭಿನ್ನಪಕ್ಷಗಳ ನಡುವಣ ವಿರೋಧಗಳೂ ಹೇರಳ. ವ್ಯಾಖ್ಯಾನಕೃತಿಗಳ ಕಳಪೆತನವು ಯಾವುದೇ ನಿರ್ದಿಷ್ಟಶಾಸ್ತ್ರಕ್ಕೆ ಸೀಮಿತವಾಗಿಲ್ಲ. ಇಲ್ಲಿಯೇ ಒಂದೆಡೆ ಭಟ್ಟರು ಮೂಲಗ್ರಂಥ ಮತ್ತು ವ್ಯಾಖ್ಯಾನಗ್ರಂಥಗಳ ನಡುವಣ ಕಾಲದ ಅಂತರವು ಕಾವ್ಯ-ಕಾವ್ಯಮೀಮಾಂಸೆಗಳ ಪರಂಪರೆಯಲ್ಲಿ ಹೆಚ್ಚಾಗಿದೆಯಂದು ಹೇಳುತ್ತಾರೆ. ಆದರೆ ಇಂಥ ಅಂತರ ಮಿಕ್ಕ ಶಾಸ್ತ್ರಪರಂಪರೆಗಳಲ್ಲಿಯೂ ಇದೆ. ಉದಾಹರಣೆಗೆ: ವೇದೋಪನಿಷತ್ತುಗಳ ಕಾಲಕ್ಕೂ ಅವುಗಳ ವ್ಯಾಖ್ಯಾತೃಗಳ ಕಾಲಕ್ಕೂ ಎಣೆಮೀರಿದ ಅಂತರವುಂಟು. ಹೀಗೆಯೇ ಅವರು ಸೂತ್ರ-ಭಾಷ್ಯರಚನಾಕ್ರಮದ ರೂಪವೈಶಿಷ್ಟ್ಯವನ್ನು ಮಿಗಿಲಾಗಿ ಕೊಂಡಾಡಿರುವುದೂ ಪ್ರಶ್ನಾರ್ಹ. ಏಕೆಂದರೆ ಈ ಬಗೆಯ ನಿರೂಪಣಕ್ರಮವು ರಾಚನಿಕವೈಶಿಷ್ಟ್ಯ ಮಾತ್ರ. ಜೊತೆಗೆ ಇದು ಶಾಸ್ತ್ರತತ್ತ್ವೇತರವಾದ ಸಂಗತಿಯೂ ಹೌದು. ಎಲ್ಲಕ್ಕಿಂತ ಮಿಗಿಲಾಗಿ, ಇವುಗಳಲ್ಲಿ ಯಾವುದೇ ತಾತ್ತ್ವಿಕವೈಶಿಷ್ಟ್ಯವಿಲ್ಲ; ಪ್ರತ್ಯುತ ಸೂತ್ರಶೈಲಿಯು ವ್ಯಾಕರಣವೊಂದನ್ನುಳಿದು ಮಿಕ್ಕಂತೆ ಗೊಂದಲದ ಗೂಡೇ ಆಗಿದೆ. ಇಂಥ ರೂಪಮೋಹ ಭಟ್ಟರಂಥವರಿಗೆ ಬೇಕಿಲ್ಲ.
* * *
ಉಪಸಂಹಾರ
ಪಾದೆಕಲ್ಲು ನರಸಿಂಹಭಟ್ಟರ ಕಾವ್ಯಮೀಮಾಂಸಾಚಿಂತನಗಳು ಭಾರತೀಯಪರಂಪರೆಗೆ ಅನುಗುಣವಾದುವು; ಅಲ್ಲಿಯ ಸನಾತನತತ್ತ್ವಗಳನ್ನೇ ಮತ್ತೆ ಎತ್ತಿಕೊಡುವಂಥವು. ಯಾವುದೇ ವಿಚಾರದ ಅಪ್ರತಿಹತತೆಯು ಹೆಚ್ಚಾದಂತೆಲ್ಲ ಅದು ಸ್ವತಃಸಿದ್ಧವೂ ವಿಶ್ವಜನೀನವೂ ಆಗಿರುತ್ತದೆ. ಈ ಕಾರಣದಿಂದಲೇ ಅಲ್ಲಿ ಯಾವುದೇ ಪ್ರತ್ಯೇಕವ್ಯಕ್ತಿಯ ಸ್ವಂತಿಕೆಯೆಂಬ ಮಾತು ಸಲ್ಲುವುದಿಲ್ಲ. ಇದೊಂದು ಬಗೆಯ ಅಪೌರುಷೇಯತೆಯೂ ಹೌದು. ಬಹುಶಃ ಇಂಥ ತತ್ತ್ವೈಕರೂಪದ ಕಾರಣ ಇಲ್ಲಿ ವಿಸ್ತರಕ್ಕೆ ಅವಕಾಶವಿಲ್ಲ. ಇದನ್ನು ಅನುಲಕ್ಷಿಸಿದರೆ ಭಟ್ಟರ ಆಲೋಚನೆಗಳ ಮಹತ್ತ್ವವೂ ಮಿತಿಯೂ ಮನದಟ್ಟಾಗದಿರವು. ಅವರ ಚಿಂತನದ ಪ್ರಾಮುಖ್ಯವು ಅನುದಿನಜೀವನದಲ್ಲಿ ಸುಷುಪ್ತಿಯ ಮಹತ್ತ್ವವಿದ್ದಂತೆ. ಜಾಗ್ರತ್-ಸ್ವಪ್ನಗಳಲ್ಲಿ ನಾವು ನಡಸುವ ಎಲ್ಲ ಕ್ರಿಯೆಗಳಿಗೆ ಬೇಕಾದ ಚೈತನ್ಯವು ಸುಷುಪ್ತಿಯ “ನಿಷ್ಕ್ರಿಯ”ವಿಶ್ರಾಂತಿಯಿಂದಲೇ ಚಿಮ್ಮಿರುತ್ತದೆಂಬುದು ಎಲ್ಲರ ಅನುಭವ. ಆದರೆ ಇಂಥ ಸುಷುಪ್ತಿಯು ತನ್ನಂತೆ ತಾನು ವ್ಯವಹರಿಸಲಾರದು; ವ್ಯವಹರಿಸಬೇಕಿಲ್ಲ ಕೂಡ. ಏಕೆಂದರೆ ಸುಷುಪ್ತಿಯು ಎಲ್ಲ ಬಗೆಯ ಭೇದಗಳಿಗೆ ಅತೀತ. ಇಲ್ಲಿ ತ್ರಿಪುಟೀವ್ಯವಹಾರವೇ ಇರುವುದಿಲ್ಲ. ಆದರೆ ಜಾಗ್ರತ್-ಸ್ವಪ್ನಗಳಲ್ಲಿ ಹಾಗಲ್ಲ. ಇದೇ ರೀತಿ ಭಟ್ಟರ ತಾತ್ತ್ವಿಕಚಿಂತನಗಳೂ ಅನ್ವಿತವಾಗಬೇಕೆಂದಿದ್ದಲ್ಲಿ ಅಧಿಕಾರಿಭೇದವನ್ನೂ ವ್ಯಾವಹಾರಿಕವಿಭಾಗಗಳನ್ನೂ ಒಪ್ಪದೆ ಗತ್ಯಂತರವಿಲ್ಲ. ಅಷ್ಟೇಕೆ, ಅವರ ಗ್ರಂಥರೂಪದ ಅಭಿವ್ಯಕ್ತಿಯೇ ಇದಕ್ಕೊಂದು ಸಾಕ್ಷಿ.
ಆದರೆ, ಅವರ ಕೆಲವೊಂದು ತವಕ-ತಲ್ಲಣಗಳನ್ನೂ ಹಾರೈಕೆ-ಎಚ್ಚರಿಕೆಗಳನ್ನೂ ಗಮನಿಸಿಕೊಂಡಲ್ಲಿ ಸಮಕಾಲೀನಸಾಹಿತ್ಯಮೀಮಾಂಸೆಗೂ ಸಂಸ್ಕೃತಿಚಿಂತನಕ್ಕೂ ಹೆಚ್ಚಿನ ನೆಲೆ-ಬೆಲೆಗಳು ದಕ್ಕುವುದರಲ್ಲಿ ಸಂದೇಹವಿಲ್ಲ. ಉದಾಹರಣೆಗೆ: ನಮ್ಮ ಪೂರ್ವಕವಿ-ಪಂಡಿತರ ದೇಶ-ಕಾಲಗಳ ವಿಷಯದಲ್ಲಿ ತುಂಬ ತಲೆಕೆಡಿಸಿಕೊಂಡು, ಇವುಗಳನ್ನು ನಿರ್ಣಯಿಸುವ ವ್ಯಗ್ರತೆಯಲ್ಲಿ ಆ ಕೃತಿಕಾರರ ವಿಶಿಷ್ಟಯೋಗದಾನವನ್ನೇ ಮರೆತರೆ ಸರ್ವಾನರ್ಥವಾದೀತೆಂದು ಅವರು ಪ್ರಬೋಧಿಸುವುದು ನಿಜಕ್ಕೂ ಗಂಭೀರವಾದ ಸ್ವಾಗತಾರ್ಹಸಂಗತಿ. ಅಂತೆಯೇ ದೇಶ-ಕಾಲಗಳ ವಿಷಯದಲ್ಲಿ ತುಂಬ ಅನಿರ್ದಿಷ್ಟನಾದ ಕಾಳಿದಾಸ ಹಾಗೂ ತುಂಬ ನಿರ್ದಿಷ್ಟನಾದ ಬಾಣಭಟ್ಟರ ಕೃತಿಗಳನ್ನು ಆಸ್ವಾದಿಸಲು ಈ ಬಗೆಯ ಅನಿರ್ದಿಷ್ಟತೆ-ನಿರ್ದಿಷ್ಟತೆಗಳು ನಮ್ಮನ್ನು ಮಿಗಿಲಾಗಿ ಬಾಧಿಸುವುದಿಲ್ಲವೆಂದು ಭಟ್ಟರು ಹೇಳುವುದಂತೂ ಎಲ್ಲರ ಅನುಭವಕ್ಕೆ ಬರುವಂಥದ್ದೇ. ಆದರೆ ಈ ಬಗೆಯ ತತ್ತ್ವೀಕರಣದ ಹವಣಿನಲ್ಲಿ ಅಮೂರ್ತತೆಯನ್ನೊಂದು ಅಸ್ತ್ರವಾಗಿ ಮಾಡಕೊಳ್ಳಬೇಕಿಲ್ಲ. ಜೊತೆಗೆ ಇದೊಂದು ದೌರ್ಬಲ್ಯದಂತೆಯೂ ಆಗಬಾರದು.
ಅವ್ಯಕ್ತದ ವ್ಯಕ್ತೀಕರಣವೇ ಭಾರತೀಯಸಂವೇದನೆಯ ಬುನಾದಿಗಳಲ್ಲೊಂದೆಂಬ ಭಟ್ಟರ ಮಾತು ಸನಾತನಧರ್ಮದ ಇಂಗಿತವೂ ಹೌದು. ಇದೇ ಸಂದರ್ಭದಲ್ಲಿ ಯಾವುದೇ ಕಾಲದ ಪೂರ್ವಸೂರಿಗಳ ಪರಿಶ್ರಮವಿಲ್ಲದೆಯೇ ಸ್ವಯಂ ನಮಗೆ ಅವರು ಕಂಡು ವಿವರಿಸಿದ ವಿಚಾರಗಳು ಸ್ಫುರಿಸುವಂತಿದ್ದರೆ ಮಾತ್ರ ಪೂರ್ವೋಕ್ತಸಿದ್ಧಾಂತವನ್ನು ಅನ್ವಯನಿರಪೇಕ್ಷವಾಗಿಯೂ ಎತ್ತಿಹಿಡಿಯಲು ಸಾಧ್ಯ. ಆದರೆ, ಪೂರ್ವಸೂರಿಗಳ ರೂಪನಿಷ್ಠಪರಿಶ್ರಮವಿಲ್ಲದಿದ್ದಲ್ಲಿ ನಮಗೆ ಅದೆಷ್ಟೋ ಬಾರಿ ಸ್ವರೂಪವನ್ನು ನಿಷ್ಕರ್ಷಿಸಿಕೊಳ್ಳುವುದಕ್ಕೆ ಸಾಧ್ಯವೇ ಆಗುವುದಿಲ್ಲವೆಂಬುದು ನಮ್ಮೆಲ್ಲರ ಅರಿವಿಗೆ ಬಂದ ಸತ್ಯ. ಇದನ್ನು ಶಂಕರರು ಮಿಥ್ಯಾಮಾತ್ರವಾದ ಶಾಸ್ತ್ರವು ಪರಮಸತ್ಯವೆನಿಸಿದ ಬ್ರಹ್ಮದ ಪ್ರತ್ಯಭಿಜ್ಞಾನಕ್ಕೆ ಹೇಗೆ ಒದಗಿಬರುತ್ತದೆಂಬುದನ್ನು ನಿರೂಪಿಸುವಲ್ಲಿ ಸೊಗಸಾಗಿ ತೋರಿಸಿಕೊಡುತ್ತಾರೆ. ಒಂದು ಕಾಲದ ಶಾಸ್ತ್ರಲೋಕದ ಪ್ರೌಢಚರ್ಚೆಗಳೂ ಸೂಕ್ಷ್ಮಾತಿಸೂಕ್ಷ್ಮತರ್ಕ-ವಿತರ್ಕಗಳೂ ಮತ್ತೊಂದು ಕಾಲದಲ್ಲಿ ಸಾಮಾನ್ಯಜ್ಞಾನದ ಮಟ್ಟಕ್ಕೆ ಬರುತ್ತವೆ. ಈ ಕಾರಣದಿಂದ ಆ ಪೂರ್ವಸೂರಿಗಳ ಪರಿಶ್ರಮವೆಲ್ಲ ವ್ಯರ್ಥವೆಂದೋ ಸಂಕುಚಿತವೆಂದೋ ತಾತ್ಪರ್ಯವಲ್ಲ. ಹಾಗೆಯೇ ಪ್ರಜ್ಞಾಸ್ತರದಲ್ಲಿ ಅವರಿಂದ ನಾವು ಮತ್ತೂ ಮೇಲಿದ್ದೇವೆಂದು ಹೇಳುವ ಮಾತೂ ಸಾಪೇಕ್ಷ. ಏಕೆಂದರೆ ಮಾಹಿತಿಯ ದೃಷ್ಟಿಯಿಂದ ಇದು ಸತ್ಯ; ಆದರೆ ಮೌಲ್ಯದೃಷ್ಟಿಯಿಂದ ಮಿಥ್ಯೆ. ಒಂದಂತೂ ನಿಜ: ಅದೆಂದರೆ, ಎಲ್ಲಿ ಪೂರ್ವಸೂರಿಗಳು ನಮ್ಮನ್ನು ತಂದು ನಿಲ್ಲಿಸಿದ್ದಾರೋ ಅಲ್ಲಿಂದ ನಮ್ಮ ಪ್ರಸ್ಥಾನ; ಆದರೆ ಅದೆಷ್ಟೋ ಬಾರಿ ಇಂಥ ಪ್ರಸ್ಥಾನವು ಮತ್ತೆ ಪೂರ್ವಸೂರಿಗಳ ಮೂಲಪ್ರೇರಣೆಯಲ್ಲಿ ಪರ್ಯವಸಿಸುವುದೂ ಆಗಿರುತ್ತದೆ. ವಿಶೇಷತಃ ಭೌತಜಗತ್ತಿಗೆ ಸಂಬಂಧಿಸಿದಂತೆ ಪ್ರಗತಿಯು ರೈಖಿಕವಾದರೂ ಭಾವಜಗತ್ತಿಗೆ ಸಂಬಂಧಿಸಿದಂತೆ ಇದು ಚಾಕ್ರಿಕ. ತ್ರಿಪುಟೀವಲಯದಲ್ಲಿ ಇವೆರಡೂ ಪರಸ್ಪರಭಾವಿತ.
ಇಂದು ಸಂಸ್ಕೃತ ಅಥವಾ ವೈದಿಕಸಂಗತಿಗಳನ್ನು ತೀರ ಸಂಕುಚಿತಾರ್ಥದಲ್ಲಿ ಒಂದೇ ಎಂಬಂತೆ ಕಂಡು, ಇದನ್ನೆಲ್ಲ ಬ್ರಾಹ್ಮಣವೆಂಬ ಜನ್ಮಮಾತ್ರಸಿದ್ಧವಾದ ವರ್ಗವೊಂದಕ್ಕಷ್ಟೇ ಸೀಮಿತವಾಗಿಸಿ ನಿಂದಿಸುವ ಪ್ರವೃತ್ತಿ ದೃಷ್ಟಚರ. ಜೊತೆಗೆ ಇದರ ಪ್ರತಿಕೋಟಿಯಾಗಿ ಪ್ರಾಕೃತವೂ ಸೇರಿದಂತೆ ಮಿಕ್ಕೆಲ್ಲ ದೇಶಭಾಷೆಗಳನ್ನೂ ವರ್ಣ-ಜಾತಿಗಳನ್ನೂ ತಂದಿರಿಸಿ ತಗಾದೆ ತೆಗೆಯುವ ಪರಿಪಾಟಿಯೂ ಬೆಳೆದಿದೆ. ಮಾತ್ರವಲ್ಲ, ಈ ವಿಭಾಗವನ್ನು ಸಾರಾಸಗಟಾಗಿ “ಜಾನಪದ”ವೆಂಬ, ಪ್ರತಿಸಂಸ್ಕೃತಿಯೆಂಬ, ಉಪಸಂಸ್ಕೃತಿಗಳೆಂಬ, ಅಧೀನಸಂಸ್ಕೃತಿಗಳೆಂಬ ಶೀರ್ಷಿಕೆಯಡಿ ಸೇರಿಸಿಕೊಂಡು ಇದು ತುಳಿಯಲ್ಪಟ್ಟವರ ಕೂಗೆಂದೂ ಸಾರುವುದುಂಟು. ಈ ವರ್ಗಕ್ಕೆ ಮಹಿಳಾವಾದವನ್ನೂ ಜೋಡಿಸಿ ಮತ್ತೂ ವ್ಯಧಿಕರಣಬುದ್ಧಿಗಳಾಗುವುದುಂಟು. ಭಟ್ಟರು ತುಂಬ ಸಂಕ್ಷಿಪ್ತವಾದರೂ ಸಮರ್ಥವಾದ ರೀತಿಯಲ್ಲಿ ಇಂಥ ಎಲ್ಲ ಅವಾಂಛಿತವಾದ ಉಪಕ್ರಮಗಳಿಗೂ ಸಂಯಮದ ಪ್ರತಿಕ್ರಿಯೆಯನ್ನು ತೋರಿದ್ದಾರೆ. ಈ ಬೆಳಕಿನಲ್ಲಿ ಹೆಚ್ಚಿನ ಆನ್ವಯಿಕವ್ಯವಸಾಯವನ್ನು ಮಾಡಿದಲ್ಲಿ ಮಿಗಿಲಾದ ಒಳಿತುಂಟು.
ಹೀಗೆ ದುಡಿಯುವಾಗ ಯಾವುದೇ ತೆರನಾದ ಯೋಗಿಪ್ರತ್ಯಕ್ಷದ ಪ್ರಲೋಭನೆಗೆ ತುತ್ತಾದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಈ ಬಗೆಗೆ ವಿದ್ವಾಂಸರಾದ ಮಹೇಶ ಅಡಕೋಳಿಯಂಥವರು ಎಚ್ಚರಿಸಿಯೇ ಇದ್ದಾರೆ. ಏಕೆಂದರೆ ಭಾರತೀಯಪುನರುತ್ಥಾನಯುಗದಲ್ಲಿ ದಯಾನಂದ-ಅರವಿಂದರಂಥವರೂ ಈ ಸುಳಿಯಲ್ಲಿ ಸಿಲುಕಿದ್ದರು; ಗಾಂಧಿಯಂಥವರನ್ನೂ ಇದು ಗಾಢವಾಗಿ ಆವರಿಸಿತ್ತು. ಆದುದರಿಂದ ನಿರ್ವಿಶೇಷಾದ್ವೈತದ ನೆಲೆಯಲ್ಲಿಯೇ ತತ್ತ್ವನಿಶ್ಚಯವನ್ನು ಮಾಡಿಕೊಳ್ಳಬೇಕು. ಇದಕ್ಕೆ ಸಾರ್ವತ್ರಿಕಾನುಭವವೇ ಜೀವಾತು. ಭಟ್ಟರು ಇಂಥ ಸಂದರ್ಭದಲ್ಲಿ ಸ್ವಲ್ಪ ಶಿಥಿಲವಾಗಿ ಚಿಂತಿಸಿದಂತೆ ತೋರುತ್ತದೆ. ಈ ಕಾರಣದಿಂದಲೇ ಅವರು ಸ್ಥೂಲಾದ್ವೈತ ಮತ್ತು ವಿಜ್ಞಾನವಾದಗಳ ಕಡೆಗೆ ವಾಲಿದ್ದಾರೆ. ಇದು ಸಹಜವಾಗಿಯೇ ಕ್ರಿಯಾದ್ವೈತದಂಥ ಅತಿವಾದಕ್ಕೂ ಎಡೆಮಾಡಿಕೊಟ್ಟಿದೆ. ಈ ಕೆಲವು ಅಂಶಗಳನ್ನು ನಮ್ಮ ಮಟ್ಟಿಗೆ ತಿದ್ದಿಕೊಂಡಲ್ಲಿ ಭಟ್ಟರ ವಿಚಾರಗಳು ಮತ್ತೂ ಅರ್ಥಪೂರ್ಣವಾಗುತ್ತವೆ; ಮಾತ್ರವಲ್ಲ, ಅವರಾದರೂ ಇಂಥ ಸಾರ್ವತ್ರಿಕಾನುಭವಮೂಲದ ಕೇವಲಾದ್ವೈತವನ್ನು ಒಪ್ಪುವಂಥವರೇ. ಕೇವಲ ವಿಚಾರವ್ಯಗ್ರತೆಯಷ್ಟೇ ಅವರಿಂದ ಅನ್ಯಥಾ ಪ್ರತಿಪಾದನೆಯನ್ನು ಮಾಡಿಸಿದೆಯೆಂದು ತೋರುತ್ತದೆ.
ನಮ್ಮ ಅಭಿಜಾತವಿದ್ಯೆಗಳ ಪೂರ್ಣಪ್ರಯೋಜನವನ್ನು ಪಡೆಯಲು ಸೀಮಿತಾರ್ಥದ ವಿಕಾಸವಾದವನ್ನಾಗಲಿ, ಆಪಾತವಿರೋಧಗಳ ವಿಜೃಂಭಣೆಯನ್ನಾಗಲಿ ಆಶ್ರಯಿಸದೆ ಸಾಗಬೇಕೆಂಬ ಭಟ್ಟರ ಮಾತು ಮಿಗಿಲಾಗಿ ಉಪಾದೇಯ. ಜೊತೆಗೆ ಅವರು ಸಂಸ್ಕೃತಶಿಕ್ಷಣ ಮತ್ತು ಶಾಸ್ತ್ರ-ಕಾವ್ಯಗಳ ಅಧ್ಯಯನದಲ್ಲಿ ಪ್ರಸಕ್ತಪದ್ಧತಿಯು ಭಾರತೀಯವೆಂದು ಹೇಳಿಕೊಂಡೂ ಹೇಗೆ ಅಭಾರತೀಯವೆನಿಸಿದೆಯೆಂಬ ವಿಷಾದನೀಯವಾಸ್ತವವನ್ನು ಚೆನ್ನಾಗಿ ತೆರೆದಿಟ್ಟಿದ್ದಾರೆ. ಇದು ನಿಜಕ್ಕೂ ಬೆಲೆಯುಳ್ಳ ಆವಿಷ್ಕಾರ. ಇದರತ್ತ ನಮ್ಮ ಶಿಕ್ಷಣತಜ್ಞರು ಗಮನವಿತ್ತಲ್ಲಿ ಒಳಿತು. ಅವಿಚಾರಿತರಮಣೀಯವಾದ ಭಾರತೀಯತೆಯು ಕೇವಲ ರೂಪಮಾತ್ರದ್ದೆಂಬ ಅವರ ತಾತ್ಪರ್ಯವು ಗಮನಾರ್ಹ. ಇದು ಹೆಚ್ಚಿನ ಸತ್ಫಲವನ್ನೇನೂ ಕೊಡದೆಂಬ ಅವರ ನಿಗಮನವೂ ಸ್ವೀಕಾರ್ಯ. ಆದರೆ ರೂಪ-ಸ್ವರೂಪಗಳೆರಡರಿಂದಲೂ ಅಭಾರತೀಯವಾದ ಗುಂಪುಗಳಿಗಿಂತ ಪೂರ್ವೋಕ್ತವರ್ಗವು ನಮಗೆ ಕೆಲಮಟ್ಟಿಗಾದರೂ ನಿಕಟವೆಂಬ ವಾಸ್ತವವನ್ನು ಮರೆಯುವಂತಿಲ್ಲ.
ಹೀಗೆ ಹಲವು ನಿಟ್ಟಿನಿಂದ ಕಾವ್ಯಮೀಮಾಂಸೆಯ ಮೂಲಕ ಜೀವನಮೀಮಾಂಸೆಗೂ ಜೀವೋತ್ಕರ್ಷಕ್ಕೂ ತುಡಿಯುವ ಭಟ್ಟರ ಅಭೀಪ್ಸೆಯು ಶ್ಲಾಘ್ಯತರ. ನರಸಿಂಹಭಟ್ಟರು ಸ್ವಭಾವತಃ ಸಜ್ಜನರು, ಮಿತಭಾಷಿ ಮತ್ತು ಅಂತರ್ಮುಖಿ. ಜೊತೆಗೆ ಅವರೆಂದೂ ಲೋಕೈಷಣವನ್ನು ಬೆನ್ನಟ್ಟಿಹೋದವರಲ್ಲ. ಈ ಎಲ್ಲ ಕಾರಣಗಳಿಂದ ನನಗವರು ಮಾನನೀಯರು. ಅವರನ್ನು ಹಲವು ಬಾರಿ ಕಂಡು ಮಾತನಾಡಿಸುವ ಸದವಕಾಶ ನನ್ನದಾಗಿತ್ತಾದರೂ ಬರೆವಣಿಗೆಯಲ್ಲಿ ಹೇಗೋ ಮಾತಿನಲ್ಲಿ ಕೂಡ ಅವರು ಸೂತ್ರಮಾರ್ಗದವರು. ಹೀಗಾಗಿ ನನಗೆ ಅವರೊಡನೆ ವ್ಯಾಪಕವಾದ ಸಂವಾದಕ್ಕೆ ಅವಕಾಶವಾಗಲಿಲ್ಲ. ಆದುದರಿಂದ ಪ್ರಕೃತಪ್ರಯತ್ನವು ನನ್ನ ಪರೋಕ್ಷವಿನಯವಾಗಿ ಅವರ ಸ್ಮೃತಿಗೆ ಸಲ್ಲಿಸುವ ಶ್ರದ್ಧಾಂಜಲಿ.
ಸ್ವೋಪಜ್ಞಚಿಂತನನಖಃ ಸ್ವನಿಮಗ್ನತಾಯಾಃ
ಸ್ತಂಭೇ ನಿಲೀನಧಿಷಣೋ ನರಸಿಂಹ ಏವ |
ಪ್ರಹ್ಲಾದವತ್ಸಲಮತಿರ್ಬಹುಕಾವ್ಯವಿದ್ಯಾ-
ದೇಹಲ್ಯುಪಸ್ಥಿತಿರಗಾದ್ರಸಧಾಮ ದಿವ್ಯಮ್ ||
ಸ್ವೋಪಜ್ಞಚಿಂತನೆಯ ಸೆಳ್ಳುಗುರುಗಳ ತಳೆದು
ತನ್ನತನವೆಂಬ ಕಂಬದೆ ಬಿಂಬಿಸಿ |
ಪ್ರಹ್ಲಾದವಾತ್ಸಲ್ಯಮತಿಯಾಗಿ ಮೆರೆದವನು
ಕಾವ್ಯಶಾಸ್ತ್ರದ ಹೊಸಿಲೊಳೆಸೆದ ಬಳಿಕ |
ವ್ಯಧಿಕರಣಚಿಂತನೆಯ ದೈತ್ಯನಂ ಸೀಳಿ ರಸ-
ವೈಕುಂಠಧಾಮಕ್ಕೆ ತೆರಳಿದನಲಾ ||