ಭಾರತೀಯಕಾವ್ಯಮೀಮಾಂಸೆಯಲ್ಲಿ ಪಾದೆಕಲ್ಲು ನರಸಿಂಹಭಟ್ಟರು ಕಾಣಿಸಿದ ಒಳನೋಟಗಳು--ವಿವಿಧವ್ಯಾಖ್ಯೆಗಳು

This article is part 6 of 12 in the series ಪಾದೆಕಲ್ಲು ನರಸಿಂಹಭಟ್ಟರು

ಭಟ್ಟರು ಪ್ರತಿಭೆಯನ್ನು ವಿವೇಚಿಸುತ್ತ ಇದು ವಿಶ್ಲೇಷಣೆಗೆ ಎಟುಕದೆ ನಿಲ್ಲುವುದೇ ಭಾರತೀಯಸೌಂದರ್ಯಮೀಮಾಂಸೆಯ ಒಂದು ಸ್ವಾರಸ್ಯಕರಾಂಶವೆಂದು ಗುರುತಿಸಿರುವುದು ಮೆಚ್ಚುವಂತಿದೆ (ಪು. ೧೪೨). ಹೀಗೆಯೇ ನಮ್ಮ ವಿವಿಧಶಾಸ್ತ್ರಕಾರರು ಸೌಂದರ್ಯ ಮತ್ತು ಸೌಂದರ್ಯಮೀಮಾಂಸೆಗಳನ್ನು ಉಪೇಕ್ಷಿಸಿದರೂ ಸೌಂದರ್ಯಮೀಮಾಂಸಕರು ಮಾತ್ರ ಶಾಸ್ತ್ರಗಳನ್ನು ಉಪೇಕ್ಷಿಸಲಿಲ್ಲವೆಂದು ಹೇಳಿರುವುದು ಬೆಲೆಯುಳ್ಳ ಮಾತು (ಪು. ೧೪೩). ಅಂತೆಯೇ ಅಭಿಧಾ-ಲಕ್ಷಣಾ-ವ್ಯಂಜನಾವೃತ್ತಿಗಳನ್ನು ಸ್ಥೂಲ-ಸೂಕ್ಷ್ಮ-ಸುಂದರಗಳೆಂದು ಗುರುತಿಸಿರುವುದು ಬೋಧಪ್ರದ. ಎಲ್ಲಕ್ಕಿಂತ ಮಿಗಿಲಾಗಿ ಯಾವುದೇ ಕಲಾಕೃತಿಯು ಎಷ್ಟರ ಮಟ್ಟಿಗೆ ವ್ಯವಹಾರ-ಪರಮಾರ್ಥಗಳ ಪಾರಸ್ಪರ್ಯವನ್ನು ಪ್ರತಿನಿಧಿಸುತ್ತದೆಂಬ ಸಂಗತಿಯನ್ನು ಪ್ರತಿಭಾಸಾಮರ್ಥ್ಯದಿಂದ ಕಂಡುಹಿಡಿಯುವುದೇ ಸೌಂದರ್ಯಮೀಮಾಂಸೆಯ ಪ್ರಾಯೋಗಿಕ ಆಯಾಮವೆಂದಿರುವುದು ಸೊಗಸಾದ ಸೂತ್ರ (ಪು. ೧೪೫).

* * *

ಭಟ್ಟರು ಅನುಭವವನ್ನು ಜೀವನ, ಕಲೆ ಮತ್ತು ಅಧ್ಯಾತ್ಮಗಳಿಗೆ ಅನ್ವಯಿಸಿ ಮೂರು ಬಗೆಯೆಂದು ಶಾಸ್ತ್ರಾನುಸಾರ ವಿಭಾಗಿಸುತ್ತಾರೆ (ಪು. ೧೪೬). ಇದನ್ನೇ ವ್ಯಾವಹಾರಿಕ, ಆಹಾರ್ಯ ಮತ್ತು ಪಾರಮಾರ್ಥಿಕಸತ್ತೆಗಳಿಗೆ ಒಪ್ಪವಿಡಬಹುದು. ಈ ಸತ್ತಾತ್ರೈವಿಧ್ಯಕ್ಕೆ ಪ್ರತಿಕೋಟಿಯಾಗಿ ನಿಲ್ಲುವಂಥವು ಕ್ರಮವಾಗಿ ಅನ್ಯಥಾ, ಪ್ರಾತಿಭಾಸಿಕ ಮತ್ತು ಅಸತ್ತೆಗಳು. ಇದನ್ನು ಭಟ್ಟರು ಮೂಲಪರಿಭಾಷೆಯಂತೆಯೇ ವಿವರಿಸಿದ್ದಲ್ಲಿ ಮತ್ತೂ ಸೊಗಸಿರುತ್ತಿತ್ತು. ಆದರೆ ಅವರು ಈ ಮೂರು ಬಗೆಯ ಅನುಭವಗಳೂ ಆಗೀಗ ಬೆರೆತುಕೊಂಡಿರಬಹುದೆಂದು ಹೇಳುವ ಮಾತು ಮಿಗಿಲಾಗಿ ಮನನೀಯ. ಜೊತೆಗೆ ಕಲಾನುಭವವೆಂಬುದು ಏಕಕಾಲದಲ್ಲಿ ಅನೇಕರಿಗೆ ಹಲವು ಸ್ತರಗಳಲ್ಲಿ ಸಾಧ್ಯವಾಗುವಂಥದ್ದು; ಮತ್ತೀ ಕಾರಣದಿಂದಲೇ ಅದು ಸಾಮಾನ್ಯವಾದ ಭೌತಾನುಭವಕ್ಕಿಂತಲೂ ಆಧ್ಯಾತ್ಮಿಕಾನುಭವಕ್ಕಿಂತಲೂ ಭಿನ್ನವೆಂದು ಗುರುತಿಸಿರುವುದು ಶ್ಲಾಘನೀಯ.

* * *

ಭಟ್ಟರು ಸುಪ್ರಸಿದ್ಧವಾದ ನಾಟ್ಯಸಂಗ್ರಹಕಾರಿಕೆಯನ್ನು ತುಂಬ ಚೆನ್ನಾಗಿ ವಿವರಿಸಿದ್ದಾರೆ (ಪು. ೧೪೯). ಅವರು ಆ ಕಾರಿಕೆಯಲ್ಲಿ ಬರುವ ಹನ್ನೊಂದು ಅಂಶಗಳನ್ನು ತುಂಬ ಅರ್ಥಪೂರ್ಣವಾಗಿ ವರ್ಗೀಕರಿಸಿದ್ದಾರೆ. ಆ ಪ್ರಕಾರ ರಸ ಮತ್ತು ಭಾವಗಳು ಸಹೃದಯನಿಷ್ಠ; ಅಭಿನಯ-ಧರ್ಮಿ-ವೃತ್ತಿ-ಪ್ರವೃತ್ತಿಗಳು ಕವಿ-ಕಲಾವಿನ್ನಿಷ್ಠ; ಸ್ವರ-ಆತೋದ್ಯ-ಗಾನ-ರಂಗಗಳು ನಾಟ್ಯದಂಥ ಸಂಕೀರ್ಣಕಲೆಗೂ ಸಂಗೀತದಂಥ ಸಾಪೇಕ್ಷವಾಗಿ ಅಲ್ಪಸಂಕೀರ್ಣವಾದ ಕಲೆಗೂ ಸಲ್ಲುವಂಥವು. ಉಳಿದಂತೆ ಸಿದ್ಧಿಯು ಕಲೆಯ ಸಾಮಾಜಿಕಪರಿಣಾಮಕ್ಕೆ ಸಂಬಂಧಿಸಿದೆ.

* * *

ಇದೇ ಸಂದರ್ಭದಲ್ಲಿ ಅವರು ಸಾಕ್ಷಾತ್ಕೃತವಾದ ರಸಾನುಭವವನ್ನು ಸೀಮಿತವಾದ ವೈಚಾರಿಕತೆಯೊಳಗೆ ಅನ್ವಯಿಸಲು ಯತ್ನಿಸಿದರೆ ತತ್ತ್ವಹಾನಿಯಾಗದಿರದೆಂದು ಎಚ್ಚರಿಸಿರುವುದು ಮಿಗಿಲಾಗಿ ಪರಿಭಾವನೀಯ (ಪು. ೧೫೦). ಅಭಿನವಗುಪ್ತನು ರಸವು ಅನುಭೂತವಾಗುತ್ತಿರುವಾಗ ಅದಕ್ಕೊಂದು ಲಿಂಗವನ್ನಪೇಕ್ಷಿಸುವುದು ಅವಿವೇಕವೆಂದು ಹೇಳಿರುವುದಿಲ್ಲಿ ಸ್ಮರಣೀಯ. ಹೀಗೆ ಮೌಲಿಕವಾದ ಎಷ್ಟೋ ಸಂಗತಿಗಳನ್ನೀಯುವ ಭಟ್ಟರು ವ್ಯಭಿಚಾರಿಭಾವಗಳ ಸಂಖ್ಯೆ ಮೂವತ್ತಮೂರು ಆಗಿರುವುದಕ್ಕೆ ಸಾಂಖ್ಯಾದಿದರ್ಶನಗಳ ತ್ರಿಗುಣಗಳಿಗೂ ತ್ರಿಕರಣಗಳಿಗೂ ಒಪ್ಪವಿಟ್ಟಿರುವುದು ಅನಪೇಕ್ಷಿತ[1]. ಸೇಡಿಯಾಪು ಕೃಷ್ಣಭಟ್ಟರು ತಮ್ಮ “ಛಂದೋಗತಿ”ಯಲ್ಲಿ ಯ-ಮ-ತ-ರ-ಜಾದಿಗಣಗಳು ಮೂರು ಮೂರು ವರ್ಣಗಳನ್ನೇ ಏಕೆ ತಳೆದಿವೆಯೆಂಬ ಸಂಗತಿಯನ್ನು ವಿಶ್ಲೇಷಿಸುತ್ತ ಈ ಕುರಿತು ಎಚ್. ಡಿ. ವೇಲಣಕರ್ ಅವರು ತ್ರಿಮೂರ್ತಿ-ತ್ರಿಕಾಲ-ತ್ರಿಗುಣ-ತ್ರಯಿಗಳಂಥ ಛಂದಸ್ತತ್ತ್ವೇತರಾಂಶಗಳ ಮೂಲಕ ಸಮರ್ಥಿಸಲೆಳಸಿರುವುದು ಅಯುಕ್ತವೆಂದು ಹೇಳಿರುವುದಿಲ್ಲಿ ಸ್ಮರಣೀಯ.   

* * *

ಭಟ್ಟರು ಋಷಿತ್ವವನ್ನಾಗಲಿ, ಅಪೌರುಷೇಯತ್ವವನ್ನಾಗಲಿ ನಿರೂಪಿಸುವಾಗ ಯಾವುದೇ ವೈಭವಕರಣವನ್ನು ಮಾಡುವುದಿಲ್ಲ. ಅವುಗಳ ಲಕ್ಷಣವನ್ನೂ ನಿರ್ಮಮತಾಟಸ್ಥ್ಯದಿಂದ ರೂಪಿಸುತ್ತಾರೆ. ಅವರ ಪ್ರಕಾರ ಜೀವಾನಾನುಭವನಿಷ್ಠೆ, ಅಮೂರ್ತೋಪಾಸನೆ, ಅಧ್ಯಾತ್ಮಪಾರಮ್ಯಗಳೇ ಇವುಗಳ ಹೆಗ್ಗುರುತುಗಳು. ಜೊತೆಗೆ ಇಂಥ ದರ್ಶನವನ್ನು ಗಳಿಸಿದ ದ್ರಷ್ಟೃತ್ವದ ಲಕ್ಷಣವೆಂದರೆ ಅಂತರಂಗ-ಬಹಿರಂಗಗಳೆರಡನ್ನೂ ಸಮಾನವಾಗಿ ಚಿಂತಿಸಿ ಅವುಗಳ ಮೂಲಭೂತವಾದ ಐಕ್ಯವನ್ನು ಗುರುತಿಸುವ ಶಕ್ತಿಯೆಂದೂ ನಿರ್ವಚಿಸುತ್ತಾರೆ (ಪು. ೧೮೬-೧೯೨). ಇಂಥ ದರ್ಶನವು ಯಾರಿಗೂ ಎಂದೂ ಎಲ್ಲಿಯೂ ಆಗಬಹುದೆಂಬುದು ಅವರ ನಿಶ್ಚಯ. ಏನಿದ್ದರೂ ಇದು ಭಾರತದಲ್ಲಿ ಅವಿಚ್ಛಿನ್ನವಾಗಿ ಬಂದಿದೆಯಂದು ಹೇಳುವಲ್ಲಿ ಮಾತ್ರ ನಮ್ಮ ದೇಶವನ್ನು ಗಮನಕ್ಕೆ ತಂದುಕೊಳ್ಳುತ್ತಾರೆ. ಇವೆಲ್ಲ ಉದಾರಕಲ್ಪಗಳು, ಮತ್ತು ಪೂರ್ವಸೂರಿಪ್ರತಿಷ್ಠಿತಗಳು. ಕೇವಲ ಹೇಳುವ ಕ್ರಮ ಮಾತ್ರ ಭಟ್ಟರದು.

* * *

ಇದೇ ಸಂದರ್ಭದಲ್ಲಿ ಭಟ್ಟರು ವಸ್ತುಪ್ರಪಂಚ ಮತ್ತು ಭಾಷಾಪ್ರಪಂಚಗಳೆಂಬ ಎರಡು ಅಂಶಗಳ ಅವಿನಾಭಾವವನ್ನು ಜಗಲ್ಲಕ್ಷಣವಾಗಿ ಉಲ್ಲೇಖಿಸುತ್ತಾರೆ ಹಾಗೂ ಇವುಗಳನ್ನೇ ನಮ್ಮ ಶಾಸ್ತ್ರಗಳು ಪ್ರಪಂಚವು ನಾಮ-ರೂಪಾತ್ಮಕವೆಂದು ಹೇಳಿರುವತ್ತ ಗಮನ ಸೆಳೆಯುತ್ತಾರೆ (ಪು. ೧೯೩). ಈ ಪ್ರಕಾರ ನಾಮವೇ ಭಾಷೆ, ರೂಪವೇ ವಸ್ತು. ಇದನ್ನು ನಾವು ಮತ್ತಷ್ಟು ವಿಸ್ತರಿಸಿಕೊಂಡಾಗ ಭಾರತೀಯಸಂವೇದನೆಯು ರೂಪಪ್ರಪಂಚಕ್ಕಿಂತ ನಾಮಪ್ರಪಂಚದಲ್ಲಿ ಮಾಡಿರುವ ಕೆಲಸವೇ ಈ ಹೊತ್ತಿಗೆ ಕೂಡ ಸಂಗತವೆಂದು ಅರಿಯಬಹುದು. ಇದಕ್ಕೆ ಕಾರಣವಿಷ್ಟೆ: ನಾಮಪ್ರಪಂಚವು ಪ್ರಧಾನವಾಗಿ ಜೀವಪರವಾದುದು, ಭಾವಪರವಾದುದು. ರೂಪಪ್ರಪಂಚವಾದರೋ ಜಡಪರ, ಭವಪರ.

* * *

ಭಟ್ಟರು ಪುರುಷಾರ್ಥಗಳನ್ನು ಕುರಿತು ಕೆಲವೊಂದು ಸ್ವಾರಸ್ಯಕರಸಂಗತಿಗಳನ್ನು ಹೇಳಿದ್ದಾರೆ. ಆ ಪ್ರಕಾರ ಕಾಮವು ಇಚ್ಛೆ ಮತ್ತು ಸೌಂದರ್ಯಗಳೆರಡಕ್ಕೂ ಸಂವಾದಿ. ಇಚ್ಛೆಯು ಲೌಕಿಕವಾದರೆ ಸೌಂದರ್ಯವು ಅಲೌಕಿಕ ಅಥವಾ ಆಧ್ಯಾತ್ಮಿಕ. ಅಂತೆಯೇ ಅರ್ಥಕ್ಕೂ ಅಪೇಕ್ಷೆ ಮತ್ತು ನಿವೃತ್ತಿ ಅಥವಾ ತ್ಯಾಗಗಳೆಂಬ ಅರ್ಥಚ್ಛಾಯೆಗಳುಂಟು. ಹೀಗೆ ಲೌಕಿಕಮೌಲ್ಯಗಳೆಂದು ಗುರುತಿಸಲ್ಪಟ್ಟ ಅರ್ಥ-ಕಾಮಗಳಲ್ಲಿಯೂ ಅಲೌಕಿಕಸ್ಪಂದವಿರುವುದು ಗಮನಾರ್ಹ. ಆದುದರಿಂದ ಪುರುಷಾರ್ಥತತ್ತ್ವವೇ ಮೂಲತಃ ಆಧ್ಯಾತ್ಮಿಕ (ಪು. ೧೮೭). ಆ ಬಳಿಕ ಅವರು ರಸಗಳಿಗೂ ಪುರುಷಾರ್ಥಗಳಿಗೂ ಇರುವ ಅವಿನಾಭಾವಸಂಬಂಧವನ್ನು ನಿರೂಪಿಸುತ್ತಾರೆ. ಇದು ಅಭಿನವಗುಪ್ತನ ಪ್ರತಿಧ್ವನಿಯೇ ಆಗಿದೆ. ಅನಂತರ ಪ್ರಾಣಿಗಳಲ್ಲಿ ಕಂಡುಬರುವ ಕಾಮ-ಕ್ರೋಧಾದಿಗಳು ರಸಪರ್ಯವಸಾಯಿಗಳಲ್ಲವೆಂದು ಯುಕ್ತವಾಗಿಯೇ ನಿರ್ವಚಿಸುತ್ತಾರೆ. ಅವುಗಳ ರಸರಾಹಿತ್ಯಕ್ಕೆ ಅವುಗಳಲ್ಲಿಯ ಪುರುಷಾರ್ಥರಹಿತತೆಯೇ ಕಾರಣವೆಂಬ ಭಟ್ಟರ ನಿಗಮನ ಒಪ್ಪುವಂತಿದೆ.

* * *

ಭಟ್ಟರು ಭಾರತೀಯಸಂವೇದನೆಯನ್ನು ಕುರಿತು ಅದೆಷ್ಟು ಆದರಾಭಿಮಾನಗಳನ್ನು ಹೊಂದಿದ್ದರೂ ಅಜ್ಞಾನದಿಂದ ಅಥವಾ ಅಭನಿವೇಶದಿಂದ ಭಾರತೀಯತೆಯನ್ನು ಬೆಂಬಲಿಸುವ ಪರಿಪಾಟಿಯನ್ನು ಒಪ್ಪಿಲ್ಲ (ಪು. ೧೯೪, ೨೧೪). ಇದನ್ನವರು ಪಾಶ್ಚಾತ್ಯಕ್ರಮಕ್ಕೂ ಅನ್ವಯಿಸುತ್ತಾರೆ. ಹೀಗೆ ತಾಟಸ್ಥ್ಯವನ್ನು ತತ್ತ್ವತಃ ಕಾಪಾಡಿಕೊಳ್ಳುವಲ್ಲಿ ಅವರು ಸಾಕಷ್ಟು ಎಚ್ಚರ ವಹಿಸುತ್ತಾರೆ. ಹೀಗೆಯೇ ನಿರ್ಗುಣಬ್ರಹ್ಮವಾದಿಗಳು ಕೂಡ ನಿತ್ಯಜೀವನಕ್ಕೆ ಸಗುಣಾರಾಧನೆಯನ್ನು ಹೊಂದಿಸಿಕೊಂಡ ಬಗೆಯನ್ನೂ ಅಲ್ಲಿಯ ಪಾರಮಾರ್ಥಿಕ-ವ್ಯಾವಹಾರಿಕಸ್ತರಗಳನ್ನೂ ಸಮರ್ಥಿಸಿ ರಸಸಂವೇದನೆಯ ಸಮನ್ವಯರೂಪವನ್ನು ಮನಗಾಣಿಸುತ್ತಾರೆ. ಜೊತೆಗೆ ಶ್ರದ್ಧೆ-ತರ್ಕಗಳ ಹದವನ್ನೂ ಕಟಾಕ್ಷಿಸುತ್ತಾರೆ. ಇದೆಲ್ಲ ಪ್ರಾಚೀನ-ಅರ್ವಾಚೀನಪೂರ್ವಸೂರಿಗಳು ತಿಳಿಸಿರುವ ಸಂಗತಿಗಳೇ ಆಗಿವೆ.

* * *

ಭಟ್ಟರು ಆಧುನಿಕಸಾಹಿತ್ಯದ ರೀತಿ-ನೀತಿಗಳನ್ನು ಪರಾಮರ್ಶಿಸುತ್ತ ಇಂದು ಸಾಹಿತ್ಯವು ತನ್ನ ಬಾಹ್ಯಾಕರ್ಷಣೆಗೆ ಹೆಚ್ಚಿನ ಅವಧಾರಣೆ ಹಾಕಿದೆ; ರಚನೆಯಲ್ಲಿ ಲಾಲಿತ್ಯ, ನಿರರ್ಗಳತೆ, ಸೌಲಭ್ಯಾದಿಗಳೇ ಮುಖ್ಯವಾಗಿ, ಪ್ರೌಢಪ್ರಬಂಧಗಳ ಸೃಷ್ಟಿ ತಗ್ಗಿರುವುದಷ್ಟೇ ಅಲ್ಲ, ಅದಕ್ಕೆ ಓದುಗರೂ ಇಲ್ಲವಾಗುತ್ತಿದ್ದಾರೆಂಬ ಕಾಳಜಿಯನ್ನು ವ್ಯಕ್ತಪಡಿಸಿದ್ದಾರೆ (ಪು. ೧೯೬). ಇವೆಲ್ಲ ಉಪಾದೇಯಾಂಶಗಳೇ. ಸುಮಾರು ನೂರು ವರ್ಷಗಳ ಮುನ್ನ ಡಿ.ವಿ.ಜಿ.ಯವರು ತಮ್ಮ ಸಾಹಿತ್ಯಸಮ್ಮೇಳನಾಧ್ಯಕ್ಷತೆಯ ಭಾಷಣದಲ್ಲಿಯೇ ಇವುಗಳತ್ತ ಬೆಳಕು ಚೆಲ್ಲಿದ್ದರು. ಅಂತೆಯೇ ತೌಲನಿಕಾಧ್ಯಯನದ ಹುರುಪಿನಲ್ಲಿ ಅರೆ-ಬರೆಯಾದ ಸಾಮ್ಯ-ವೈಷಮ್ಯಗಳತ್ತ ಮರುಳಾಗಿ ಸಿದ್ಧಾಂತಗಳನ್ನು ಹೊಸೆಯುವುದು ಅನಪೇಕ್ಷಿತ ಮತ್ತು ಅಪಾಯಕಾರಿಯೆಂದು ಭಟ್ಟರ ತೀರ್ಮಾನ (ಪು. ೨೦೭). ಇದನ್ನು ಶತಮಾನಕ್ಕೆ ಮುನ್ನವೇ ಎಂ. ಹಿರಿಯಣ್ಣನವರು ಹೇಳಿದ್ದರು. 

* * *

ಮಹಿಮಭಟ್ಟನನ್ನು ಉಪೇಕ್ಷಿಸಿ ಕುಂತಕನಿಗೆ ಮಿಗಿಲಾದ ಮಾನ್ಯತೆ ನೀಡಿರುವುದು ಭಟ್ಟರ ಶಾಸ್ತ್ರೌಚಿತ್ಯಪರಿಜ್ಞಾನಕ್ಕೆ ಸಾಕ್ಷಿ (ಪು. ೨೧೩). ಹೀಗೆಯೇ ವಿಶ್ವನಾಥ ಮತ್ತು ಜಗನ್ನಾಥರ ಕಾವ್ಯಲಕ್ಷಣ ಹಾಗೂ ರಸಲಕ್ಷಣಗಳನ್ನು ಆದರಿಸಿದ ಬಗೆಯೂ ಸ್ತವನೀಯ (ಪು. ೨೦೩).  

* * *

ಜ್ಞಾನಮೂಲಗಳನ್ನು ಕುರಿತು ಹೇಳುತ್ತ, ಅವನ್ನು ಐಂದ್ರಿಯ, ವೈಚಾರಿಕ ಮತ್ತು ಪ್ರಾತಿಭವೆಂದು ಮೂರು ಬಗೆಯಾಗಿ ಭಟ್ಟರು ವಿಂಗಡಿಸಿರುವುದು ಉಪಾದೇಯ (ಪು. ೨೧೪). ಇವುಗಳಲ್ಲಿ ಉತ್ತರೋತ್ತರವಾಗಿ ಸೂಕ್ಷ್ಮತೆಯು ಹೆಚ್ಚಾಗುವುದೆಂಬ ಮಾತೂ ಗ್ರಾಹ್ಯ. ಅಪೌರುಷೇಯತ್ವವನ್ನು ಇದಕ್ಕೂ ಆಚೆ ಅವರು ನಿಲ್ಲಿಸುತ್ತಾರೆ. ಹಾಗಿದ್ದರೂ ಪ್ರಾತಿಭದೊಳಗೇ ಅದನ್ನು ಸೇರಿಸಲು ಹೆಚ್ಚಿನ ಆಕ್ಷೇಪಣೆ ಅವರದಾಗಿಲ್ಲ.

* * *

ಸಂಸ್ಕೃತಸಾಹಿತ್ಯದ ಜೀವಾತುವೆನ್ನಬಹುದಾದ ವಾಗರ್ಥಾದ್ವೈತವನ್ನು ಅವರು ಮಹಾಕವಿಗಳ ಮಾತುಗಳಲ್ಲಿ ಕಾಣಿಸಿರುವುದು ನಿಜಕ್ಕೂ ಹೊಸ ಹೊಳಹು (ಪು. ೨೧೭-೨೧೮). ಆ ಪ್ರಕಾರ “ವಾಗರ್ಥಾವಿವ ಸಂಪೃಕ್ತೌ” (ರಘುವಂಶ), “ತಮರ್ಥಮಿವ ಭಾರತ್ಯಾ ಸುತಯಾ ಯೋಕ್ತುಮರ್ಹಸಿ” (ಕುಮಾರಸಂಭವ), “ಸ್ಫುಟತಾ ನ ಪದೈರಪಾಕೃತಾ ನ ಚ ನ ಸ್ವೀಕೃತಮರ್ಥಗೌರವಮ್ | ರಚಿತಾ ಪೃಥಗರ್ಥತಾ ಗಿರಾಂ ನ ಚ ಸಾಮರ್ಥ್ಯಮಪೋಹಿತಂ ಕ್ವಚಿತ್ ||” (ಕಿರಾತಾರ್ಜುನೀಯ), “ಕ್ಷಣೇ ಕ್ಷಣೇ ಯನ್ನವತಾಮುಪೈತಿ ತದೇವ ರೂಪಂ ರಮಣೀಯತಾಯಾಃ” (ಶಿಶುಪಾಲವಧ), “ಗರೌ ಗಿರಃ ಪಲ್ಲವನಾರ್ಥಲಾಘವೇ ಮಿತಂ ಚ ಸಾರಂ ಚ ವಚೋ ಹಿ ವಾಗ್ಮಿತಾ” (ನೈಷಧೀಯಚರಿತ) ಮುಂತಾದ ವಾಕ್ಯಗಳ ಮೂಲಕ ಈ ತತ್ತ್ವವು ಅನ್ವಿತವಾಗಬಲ್ಲುದೆಂಬ ಕಾಣ್ಕೆ ತುಂಬ ವ್ಯುತ್ಪಾದಕ.

* * *

“ಸಂಸ್ಕೃತವನ್ನು ಹೇಗೆ ನೋಡಬೇಕು” ಎಂಬ ಅವರ ಬರೆಹವಂತೂ ವಿಶೇಷಾಧ್ಯಯನಕ್ಕೆ ಅರ್ಹವಾದುದು. ಇದರ ಆರಂಭದಲ್ಲಿಯೇ ಇವರ ವಿಚಾರಗಳ ಅಚ್ಚುಕಟ್ಟಾದ ಸಂಗ್ರಹವಿದೆಯೆನ್ನಬೇಕು (ಪು. ೨೨೭-೨೨೮). ಸಂಸ್ಕೃತದಂಥ ಭಾಷೆಯು ಅಧ್ಯಯನವನ್ನೇ ಅಧ್ಯೇಯವಿಷಯವೆಂಬಷ್ಟು ವಸ್ತುನಿಷ್ಠವಾಗಿ ಸ್ವೀಕರಿಸಿದಾಗ ಮಾತ್ರ ಅರ್ಥಪೂರ್ಣವಾಗುವುದೆಂಬ ಅವರ ಕಾಣ್ಕೆ ಹಿರಿದು. ಇದು ವಸ್ತುತಃ ದರ್ಶನಶಾಸ್ತ್ರಗಳ ನೆಲೆಯೂ ಆಗಿದೆ. ಈ ಬಗೆಗೆ ಎಂ. ಹಿರಿಯಣ್ಣನವರು ತಮ್ಮ “The Mission of Philosophy” ಗ್ರಂಥದ ಆರಂಭದಲ್ಲಿಯೇ ಸೊಗಸಾಗಿ ಚರ್ಚಿಸಿರುವುದು ಸ್ಮರಣೀಯ. ಭಟ್ಟರು ಸಂಸ್ಕೃತವನ್ನು ವಿರಳವೂ ವಿಲಕ್ಷಣವೂ ಆದ ಭಾಷೆಯೆಂದು ಲಕ್ಷಿಸಿರುವುದು ಕೂಡ ಒಪ್ಪುವಂತಿದೆ. ಜೊತೆಗೆ ಸಂಸ್ಕೃತದ ಅನನ್ಯತೆ ಎಲ್ಲಿದೆಯೆಂದು ಅವರು ಗುರುತಿಸಿರುವ ಅಂಶಗಳೂ ಉಪಾದೇಯ. ಈ ಪ್ರಕಾರ ಇಂದು ಸಂಸ್ಕೃತಕ್ಕೆ ಅನ್ವಯಪ್ರಯೋಜನಕ್ಕಿಂತ ಸಂವೇದನಪ್ರಯೋಜನವೇ ಮಿಗಿಲು. ಇಲ್ಲಿಯೇ ಅವರು ಪಾಶ್ಚಾತ್ಯವಿದ್ವಾಂಸರ ಸಂಸ್ಕೃತವ್ಯವಸಾಯ ಮತ್ತದರ ಗುಣ-ದೋಷಗಳನ್ನೂ ನಿರ್ಭಾವುಕವಾಗಿ ವಿಶ್ಲೇಷಿಸಿದ್ದಾರೆ (ಪು. ೨೩೪). ಹಲವೆಡೆ ಭಟ್ಟರ ಅಭಿನಿವೇಶಗಳು ತೋರಿಕೊಳ್ಳುವುವಾದರೂ ಇಂದು ಭಾರತೀಯತೆಯ ಹೆಸರಿನಲ್ಲಿ ಹರುಡುತ್ತಿರುವ ಪಾಶ್ಚಾತ್ಯಬುದ್ಧಿಯನ್ನು ಅವರು ಗುರುತಿಸಿ ಎಚ್ಚರಿಸುವ ಪರಿ ಮಾತ್ರ ಶಂಸನೀಯ. ಹೀಗೆಯೇ ದೇಶೀಯಭಾಷೆ-ಸಂಸ್ಕೃತಿಗಳ ಅನನ್ಯತೆಯನ್ನು ಆತ್ಯಂತಿಕಸ್ತರದಲ್ಲಿ ಪ್ರತಿಪಾದಿಸಲೆಳಸುವ ವಿಪರೀತವರ್ತನೆಗಳತ್ತಲೂ ಸೂಕ್ಷ್ಮವಾಗಿ ಸಾಗಿಸಿದ ವಿಮರ್ಶೆ ಗಣನೀಯ. ಇದನ್ನು ಅವರು ಮತ್ತೂ ವಿಶದವಾಗಿ, ನಿಶಿತವಾಗಿ ಮಾಡಿದ್ದಲ್ಲಿ ಒಳಿತಿತ್ತು. ಸಂಸ್ಕೃತಪರಂಪರೆಯು ಅಧಿಕಾರಿಭೇದವನ್ನು ಕುರಿತು ನಡಸಿದ ಚಿಂತನೆಯ ಮಹತ್ತ್ವವನ್ನು ಭಟ್ಟರು ಚೆನ್ನಾಗಿ ಪ್ರತಿಪಾದಿಸಿರುವುದಲ್ಲದೆ ವೇದಾಂತದ ತ್ರ್ಯಂಗಯೋಗವೆನಿಸಿದ ಶ್ರವಣ-ಮನನ-ನಿದಿಧ್ಯಾಸನಗಳನ್ನು ಪರಾಮರ್ಶಿಸುವ ಕ್ರಮ ಸೊಗಸಾಗಿದೆ. ಹೀಗೆಯೇ ಇತ್ತೀಚಿನ ದಶಕಗಳಲ್ಲಿ ಸಂಸ್ಕೃತೋಜ್ಜೀವನಕ್ಕಾಗಿ ಅಭಿಯಾನರೂಪದಲ್ಲಿ ಬಂದಿರುವ ಸರಳಸಂಭಾಷಣ, ಗುರುಕುಲನಿರ್ಮಾಣ, ನವಸಾಹಿತ್ಯಸರ್ಜನ ಮುಂತಾದ ಪ್ರಕಲ್ಪಗಳ ಇತಿ-ಮಿತಿಗಳನ್ನೂ ಧ್ವನಿಪೂರ್ಣವಾಗಿ ನಿರೂಪಿಸಿದ್ದಾರೆ (ಪು. ೨೪೫). ವಿಶೇಷತಃ ಸಂಸ್ಕೃತವು ಬೋಧನಮಾಧ್ಯಮವಾಗಬೇಕೆಂಬ ಏಕಮೇವಾಂಶವು ಅದೆಷ್ಟರ ಮಟ್ಟಿಗೆ ಅಪೇಕ್ಷಿತವಾದ ಸುಧಾರಣೆಯನ್ನು ತರಬಹುದೆಂಬ ಅವರ ಸಂದೇಹವೂ ಸಹೇತುಕವಾಗಿ ಹೊಮ್ಮಿದೆ. ಈ ಪ್ರಕಾರ ಮೂಲಭೂತಸಂವೇದನೆಯಲ್ಲಿ ಮಾರ್ಪಾಡಿಲ್ಲದೆ ಈ ಎಲ್ಲ ಪ್ರಕಲ್ಪಗಳೂ ಹೆಚ್ಚಿನ ಯಶಸ್ಸನ್ನು ಕಾಣವು. ಇದು ವಿವೇಕಿಗಳು ಒಪ್ಪುವಂಥ ನಿಶ್ಚಯ.    [1] ಇದೇ ರೀತಿಯಲ್ಲಿ ಶಾಸ್ತ್ರಸ್ವರೂಪಕ್ಕೆ ಯಾವುದೇ ರೀತಿಯಲ್ಲಿ ಯೋಗದಾನವನ್ನೀಯದ ಆದಿ-ಮಧ್ಯ-ಅಂತ್ಯಭಾಗಗಳ ಮಾಂಗಲಿಕತೆಯ ಬಗೆಗೂ ಭಟ್ಟರು ಅಭಿನಿವಿಷ್ಟರಾಗಿರುವುದನ್ನು ಕಾಣಬಹುದು (ಭಾರತೀಯಸಂವೇದನೆ: ಸಂವಾದ, ಪು. ೨೩೦).

To be continued.

 

Author(s)

About:

Dr. Ganesh is a 'shatavadhani' and one of India’s foremost Sanskrit poets and scholars. He writes and lectures extensively on various subjects pertaining to India and Indian cultural heritage. He is a master of the ancient art of avadhana and is credited with reviving the art in Kannada. He is a recipient of the Badarayana-Vyasa Puraskar from the President of India for his contribution to the Sanskrit language.