‘ಪುರುಷಸರಸ್ವತಿ’ (ವಿ.ಸೀ. ಸಂಪದ, ಬೆಂಗಳೂರು, ೧೯೯೪) ಸಣ್ಣದಾದರೂ ಹಿರಿದಾದ ಕೃತಿ. ಕೇವಲ ಐವತ್ತು ಪುಟಗಳ ಒಳಗೆ ಕರ್ಣಾಟಾಂಧ್ರಸವ್ಯಸಾಚಿ ರಾಳ್ಲಪಲ್ಲಿ ಅನಂತಕೃಷ್ಣಶರ್ಮರ ಸ್ಫಟಿಕೋಪಮ ಜೀವನವನ್ನು ಕಟ್ಟಿಕೊಡುವ ರಾಯರು ಅನುಬಂಧವಾಗಿ ‘ಸಂಗೀತದ ಮೂಲದ್ರವ್ಯಗಳು’ ಎಂಬ ಶರ್ಮರ ತೆಲುಗು ಬರೆಹವೊಂದರ ಕನ್ನಡ ಅನುವಾದವನ್ನು ಒದಗಿಸಿ, ಅವರ ಜೀವನಪಥದ ಪ್ರಮುಖ ಘಟ್ಟಗಳನ್ನೂ ಅವರಿಗೆ ಸಂದ ಪ್ರಶಸ್ತಿಗಳನ್ನೂ ಅವರು ಬರೆದ ಗ್ರಂಥಗಳ ವಿವರಗಳನ್ನೂ ನೀಡಿದ್ದಾರೆ. ಹೀಗೆ ಇದೊಂದು ಸ್ವಯಂಪೂರ್ಣವಾದ ರಚನೆ. ಶರ್ಮರ ಜನ್ಮಶತಮಾನೋತ್ಸವದಲ್ಲಿ ಪ್ರಕಟವಾದ ಈ ಕೃತಿಗೆ ಸಂದರ್ಭದ ಔಚಿತ್ಯವೂ ಸಂದಿದೆ.
ಕೃತಿಯ ಮೊದಲಿಗೆ “ಸಂಪನ್ನವಾದ ಸಂಸ್ಕೃತಿಯೂ ಸದಾಚಾರವೂ ಮನುಷ್ಯನಿಗೆ ಹೇಗೆ ನೆರವಾಗಬಲ್ಲವು ಎನ್ನುವುದಕ್ಕೆ ಇವರು ನಿದರ್ಶನವಾಗಿದ್ದರು. ‘ತುಂಬಿದ ಕೊಡ’ ಎನ್ನುವ ಸಾಮತಿ ಎಲ್ಲಿ ಸಾರ್ಥಕವಾಗುತ್ತದೆ ಎನ್ನುವುದು ಇವರನ್ನು ನೋಡಿದಾಗ ತಿಳಿಯುತ್ತಿದ್ದಿತು. ಇಂಥ ವ್ಯಕ್ತಿಗಳಿದ್ದರೆ ಸಮಾಜವು ಧನ್ಯತೆಯನ್ನು ಪಡೆದೀತು ಎಂಬ ಅರಿವು ಮೂಡುತ್ತಿದ್ದಿತು” (ಪು. ೬) ಎಂದು ಶರ್ಮರ ವ್ಯಕ್ತಿತ್ವವನ್ನು ವರ್ಣಿಸುವ ರಾಯರು ಓದುಗರಿಗೆ ‘ಕೈ ಮುಗಿದು ಒಳಗೆ ಬಾ’ ಎಂದು ಹೇಳದೆಯೇ ಹೇಳಿದ್ದಾರೆ. ಮುಂದೆ ಅವರ ಗುಣಗಳನ್ನು ವಿಸ್ತರಿಸುತ್ತ, “ಸಾಹಿತ್ಯದಲ್ಲಿ, ಸಂಗೀತದಲ್ಲಿ, ಬದುಕಿನಲ್ಲಿ ಅವರು ಹಿಡಿದದ್ದು ರಾಜಮಾರ್ಗ; ನಡೆದದ್ದು ಪಟ್ಟದಾನೆಯಂತೆ. ಅಳುಕದೆ, ಕೊಂಕದೆ, ಬಾಗದೆ, ಆಮಿಷಗಳಿಗೆ ವಶವಾಗದೆ, ಆತಂಕಗಳಿಗೆ ಅಂಜದೆ, ಹೊತ್ತಿಗೆ ಮೂರು ಮೊಳ ನೇಯದೆ, ಹಣಕ್ಕೆ ಆಸೆ ಪಡದೆ, ಯಶಸ್ಸಿಗೆ ಬಾಯಿ ಬಿಡದೆ, ತಮಗೆ ಸರಿಯೆಂದು ತೋರಿದ ದಾರಿಯಲ್ಲೇ ದಿಟ್ಟತನದಿಂದ ನಡೆದು ಬದುಕಿದ ದೊಡ್ಡ ಜೀವ” (ಪು. ೭) ಎನ್ನುವ ಮೂಲಕ ಹೇಳಬೇಕಾದುದನ್ನೆಲ್ಲ ಒಂದೇ ವಾಕ್ಯದಲ್ಲಿ ಸಂಗ್ರಹಿಸಿಬಿಟ್ಟಿದ್ದಾರೆ.
ಶರ್ಮರ ಋಜುತೆ-ರಸಿಕತೆಗಳನ್ನು ಬಣ್ಣಿಸುವ ನಾಲ್ಕಾರು ಪ್ರಸಂಗಗಳು ಇಲ್ಲಿವೆ. ತಮಗೆ ಬಹುವಾಗಿ ನೆರವಾಗಿದ್ದ, ಆಗಿನ ಕಾಲಕ್ಕೆ ತೆಲುಗು ಸಾಹಿತ್ಯವಲಯದಲ್ಲಿ ಸಾಕಷ್ಟು ಹೆಸರು ಮಾಡಿದ್ದ ಕಟ್ಟಮಂಚಿ ರಾಮಲಿಂಗ ರೆಡ್ಡಿಯವರ ಬರೆಹವೊಂದನ್ನು ವಿಮರ್ಶಿಸುತ್ತ ಅವರ ಅಭಿಪ್ರಾಯಗಳು “ಬಹುಮಟ್ಟಿಗೆ ಸ್ವಚ್ಛಂದ, ವಿಪ್ಲಾವಕ” ಎಂದು ಟೀಕಿಸಿದ್ದರು; ಹೀಗಿದ್ದರೂ ತಮ್ಮ ಒಂದು ಗ್ರಂಥವನ್ನು ರೆಡ್ಡಿ ಅವರಿಗೇ ಅಂಕಿತ ಮಾಡಿದ್ದರು! (ಪು. ೨೭). ಒಮ್ಮೆ ಯಾರೋ ಒಬ್ಬರು ಮುಪ್ಪಿನಲ್ಲಿ ಅಂಧರಾಗಿ, “ನಾನು ಮಹಾಭಾರತದ ಮಹಾವ್ಯಕ್ತಿಗಳನ್ನು ಅಗೌರವದಿಂದ ವಿಮರ್ಶೆ ಮಾಡಿದ್ದಕ್ಕೆ ಇದು ಫಲ ಎಂದು ಕೆಲವರು ಹೇಳುತ್ತಾರೆ, ನೋಡಿ” ಎಂದು ಶರ್ಮರಲ್ಲಿ ಹೇಳಿಕೊಂಡಾಗ, “ಆ ಕೆಲವರಲ್ಲಿ ನಾನೂ ಒಬ್ಬ” ಎಂದು ನಿಸ್ಸಂಕೋಚವಾಗಿ ಪ್ರತಿಕ್ರಿಯಿಸಿದ್ದರು! (ಪು. ೨೮). ವೀಣೆ ಶೇಷಣ್ಣನವರು ಗತಿಸಿದ ತರುಣದಲ್ಲಿಯೇ ತೆಲುಗು ಪತ್ರಿಕೆಯೊಂದು ಪ್ರಾರಂಭವಾಯಿತು. ಅದರ ಮೊದಲ ಸಂಚಿಕೆಯಲ್ಲಿಯೇ ಶರ್ಮರು ಒಂದು ಲೇಖನವನ್ನು ಬರೆಯಬೇಕಾಗಿ ಬಂದಾಗ ಆ ಮಹಾವೈಣಿಕರನ್ನೇ ಕುರಿತು ಬರೆಯುವೆನೆಂದು ಹೇಳಿ, “ಶೇಷಣ್ಣನವರಂತೆ ಬದುಕಿ ಬಾಳಿ ಯಾರಾದರೂ, ಈ ಪತ್ರಿಕೆಯಾದರೂ, ಸತ್ತರೆ ಅದು ಸಂತೋಷದ ಮಾತೇ” ಎಂದರು! (ಪು. ೩೭). ಇದು ಶರ್ಮರ ಪುಣ್ಯಾಹ, ಸ್ವಸ್ತಿವಾಚನ. ಇಂಥ ಕೃತಾತ್ಮರು ತಿರುಪತಿಯ ದೇವಸ್ಥಾನದ ಆಸ್ಥಾನವಿದ್ವಾಂಸರಾದ ಸುದ್ದಿ ಪ್ರಸಾದದೊಡನೆ ಬಂದು ತಲಪಿದ ಕೆಲವು ಘಂಟೆಗಳಲ್ಲಿಯೇ ಜೀವಯಾತ್ರೆ ಮುಗಿಸಿದರು (ಪು. ೪೫).
ಶರ್ಮರಂಥ ಧೀಮಂತರ ಕೆಲವು ಮೌಲಿಕ ಆಲೋಚನೆಗಳನ್ನು ಇಲ್ಲಿ ನಮೂದಿಸಿರುವುದು ಕೃತಿಯ ಮೌಲ್ಯವನ್ನು ಹೆಚ್ಚಿಸಿದೆ. ಸಂಗೀತದ ವಿನಿಕೆಯನ್ನು ಕುರಿತ ಅವರ ಅಭಿಪ್ರಾಯ ಹೀಗಿದೆ: “ಕೃತಿಯ ರಾಗ-ತಾಳಗಳಿಗೆ ಯಾವ ರೀತಿಯ ಭಂಗವನ್ನೂ ಶೈಥಿಲ್ಯವನ್ನೂ ತಾರದೆ, ಕೇಳುವವರಿಗೆ ಸಾಹಿತ್ಯವು ಚೆನ್ನಾಗಿ ತಿಳಿಯುವಂತೆ, ಸಾಹಿತ್ಯಭಾಗವನ್ನೂ ಅವರು ಆನಂದಿಸುವಂತೆ ಹಾಡಬೇಕು. ಸ್ವರಕಲ್ಪನೆ ಮಾಡುವಾಗ ತಾಳಕ್ಕೆ ಹೆಚ್ಚು ಪ್ರಾಧಾನ್ಯ ಕೊಡದೆ ರಾಗಭಾವವನ್ನು ಪೋಷಿಸಬೇಕು” (ಪು. ೩೯). ಅವರು ಭಗವಂತನಲ್ಲಿ ಮಾಡಿದ ಪ್ರಾರ್ಥನೆ ಎಲ್ಲರಿಗೂ ಯಾವಾಗಲೂ ಉಪಾದೇಯವಾಗಿದೆ - “ನಾನು ಏನನ್ನು ಸಾಧಿಸಲಾಗಿಲ್ಲವೋ ಅದರ ಬಗ್ಗೆ ಚಿಂತೆಯಿರದಂತೆ, ಏನನ್ನು ಸಾಧಿಸಿದ್ದೇನೋ ಅದನ್ನು ಕುರಿತು ಹೆಮ್ಮೆಯಿರದಂತೆ, ಏನನ್ನು ಸಾಧಿಸಬಹುದೋ ಅದರ ಬಗ್ಗೆ ಆಲಸ್ಯವಿರದಂತೆ ಅನುಗ್ರಹಿಸು” - “ಅನಿರ್ವೇದಮಸಿದ್ಧೇಷು ಸಾಧಿತೇಷ್ವನಹಂಕೃತಿಮ್ | ಅನಾಲಸ್ಯಂ ಚ ಸಾಧ್ಯೇಷು ಕೃತ್ಯೇಷ್ವನುಗೃಹಾಣ ನಃ” (ಪು. ೪೯).
* * *
‘ಕಲಾತಪಸ್ವಿ ವೆಂಕಟಪ್ಪ’ (ಕನ್ನಡ ಮತ್ತು ಸಂಸ್ಕೃತಿ ನಿರ್ದೇಶನಾಲಯ, ಬೆಂಗಳೂರು, ೧೯೮೮) ಒಂದು ಸರ್ವಾಂಗಸುಂದರವಾದ ಜೀವನಚರಿತ್ರೆ. ಜೀವನ, ವ್ಯಕ್ತಿ ಮತ್ತು ಕಲೆ ಎಂಬ ವಿಭಾಗಗಳು ಇಲ್ಲಿದ್ದು ವೆಂಕಟಪ್ಪನವರು ಮೈಸೂರಿನಲ್ಲಿ ಹುಟ್ಟಿ, ಬಂಗಾಳದಲ್ಲಿ ಕಲಿತು, ಹಿಮಾಲಯದ ಯಾತ್ರೆಯನ್ನು ಮಾಡಿ, ಮೈಸೂರಿಗೆ ಹಿಂದಿರುಗಿ ಬಂದು, ಕಡೆಯ ವರ್ಷಗಳನ್ನು ಬೆಂಗಳೂರಿನಲ್ಲಿ ಕಳೆದ ಪರಿಯನ್ನೂ ಹಲವು ತೆರದ ವೈಶಿಷ್ಟ್ಯಗಳನ್ನುಳ್ಳ ಅವರ ‘ಒಗಟಿನಂಥ’ ವ್ಯಕ್ತಿತ್ವವನ್ನೂ ಚಿತ್ರ-ಶಿಲ್ಪ ಕಲೆಗಳಲ್ಲಿ ಅವರು ಗಳಿಸಿದ ಸಿದ್ಧಿ-ಪ್ರಸಿದ್ಧಿಗಳನ್ನೂ ಸಾಕಲ್ಯದಿಂದ ವಿವರಿಸಿವೆ. ಕೆಲವು ಪ್ರಾತಿನಿಧಿಕ ಚಿತ್ರಗಳು, ವೆಂಕಟಪ್ಪನವರ ಕನ್ನಡ ಹಸ್ತಾಕ್ಷರದ ಮಾದರಿ ಕೃತಿಯ ಅಂದವನ್ನೂ ಉಪಯುಕ್ತತೆಯನ್ನೂ ಹೆಚ್ಚಿಸಿವೆ.
ಇಡಿಯ ಕೃತಿಯಲ್ಲಿ ನಮ್ಮನ್ನು ಸೆಳೆಯುವುದು ವೆಂಕಟಪ್ಪನವರ ವ್ಯಕ್ತಿತ್ವ ಮತ್ತು ಅದನ್ನು ಕುರಿತ ರಾಯರ ಟಿಪ್ಪಣಿಗಳು. ಮೈಸೂರಿನ ಒಡೆಯರ ನೆರವಿನಿಂದ ಬಂಗಾಳದಲ್ಲಿ ಚಿತ್ರಕಲೆಯನ್ನು ಕಲಿಯಲು ಹೋದ ವೆಂಕಟಪ್ಪನವರಿಗೆ ಕಲ್ಕತ್ತೆಯಲ್ಲಿ ಸರ್ಕಾರದ ಉನ್ನತ ಉದ್ಯೋಗದ ಅವಕಾಶ ದಕ್ಕಿದರೂ ಅದನ್ನು ಒಪ್ಪಿಕೊಳ್ಳಲಿಲ್ಲ. ‘ನನಗೆ ವಿದ್ಯಾರ್ಥಿವೇತನ ನೀಡಿ ಇಲ್ಲಿಗೆ ಕಳುಹಿಸಿದವರು ಮೈಸೂರಿನ ಮಹಾರಾಜರು; ಹೀಗಾಗಿ ನನ್ನ ಸೇವೆ ಸಲ್ಲಬೇಕಾದುದು ಅವರ ನೆಲೆಯಲ್ಲಿ’ (ಪು. ೩೦-೩೧) ಎಂದು ಹೇಳಿ ನಿಷ್ಠೆಯನ್ನು ಮೆರೆದಿದ್ದರು. ಆದರೆ ಅದೇ ಮಹಾರಾಜರು ಗತಿಸಿದ ಬಳಿಕ ಅರಮನೆಯಿಂದ ತಮಗೆ ಅನ್ಯಾಯವಾದಾಗ ಒಡೆಯರ ಮೇಲೆ ನ್ಯಾಯಾಲಯದಲ್ಲಿ ಮೊಕದ್ದಮೆ ಹೂಡಲು ಮೀನ-ಮೇಷ ಎಣಿಸಲಿಲ್ಲ! ಸಾಧು-ಸಂತರ ಬಗೆಗೆ ಅಪಾರವಾದ ಭಕ್ತಿಯನ್ನು ತಳೆದು ತಮ್ಮ ಹದಿಹರೆಯದ ವಯಸ್ಸಿನಲ್ಲಿಯೇ ಹಿಮಾಲಯಯಾತ್ರೆಯನ್ನು ಮಾಡಿದ್ದವರು ವೆಂಕಟಪ್ಪನವರು. ಇಂಥವರು ರಚಿಸಿದ ಒಂದು ಚಿತ್ರ ರಾಮಕೃಷ್ಣ ಆಶ್ರಮವು ಹೊರತರುತ್ತಿದ್ದ ‘ಉದ್ಬೋಧನ’ ಎಂಬ ಪತ್ರಿಕೆಯಲ್ಲಿ ಒಮ್ಮೆ ಪ್ರಕಟವಾಗಿತ್ತು. ರಾಮ ಹನುಮಂತನಿಗೆ ಅಂಗುಲಿಪ್ರದಾನ ಮಾಡುವ ಆ ಚಿತ್ರದಲ್ಲಿ ಬ್ಲಾಕ್ ತಿರುಗುಮುರುಗಾಗಿ ರಾಮನ ಬಲಭುಜದ ಮೇಲೆ ಯಜ್ಞೋಪವೀತ ಇರುವಂತೆ, ಆತ ಎಡಗೈಯಿಂದ ಉಂಗುರವನ್ನು ನೀಡುತ್ತಿರುವಂತೆ ತೋರುತ್ತಿತ್ತು. ಇದರಿಂದ ಕೋಪಗೊಂಡ ವೆಂಕಟಪ್ಪ ಮೊಕದ್ದಮೆ ಹೂಡಿ ಇಬ್ಬರು ಯತಿಗಳಿಂದ ಒಂದೊಂದು ರೂಪಾಯಿ ಸಾಂಕೇತಿಕ ಪರಿಹಾರದ್ರವ್ಯವನ್ನು ಪಡೆದರು! (ಪು. ೬೦-೬೧). ವೆಂಕಟಪ್ಪನವರು ಯಾರಿಂದಲೂ ಏನನ್ನೂ ಸ್ವೀಕರಿಸದ ಅಪರಿಗ್ರಹವ್ರತವನ್ನು ಕಾಪಾಡಿಕೊಂಡಿದ್ದರು. ಇದು ಅತಿರೇಕಕ್ಕೆ ಹೋದಾಗ ರಾಯರ ಟಿಪ್ಪಣಿ ಸೊಗಸಾಗಿದೆ: “ಅಪರಿಗ್ರಹವೇನೊ ಸರಿಯೆ. ಆದರೆ ಅದಕ್ಕೊಂದು ಮಿತಿ ಇರಬೇಡವೆ ಎನಿಸುತ್ತದೆ ... [ತಮ್ಮ ಸೋದರಿ] ಹೇರಳೆ ಹಣ್ಣಿನ ಉಪ್ಪಿನಕಾಯಿ ಹಾಕಿದ ಜಾಡಿಯೊಂದನ್ನು ತಂದುಕೊಟ್ಟರೆ, ಈ ಅಪರಿಗ್ರಹವ್ರತಿ ಅದಕ್ಕೆ ಬದಲಾಗಿ ಮೂರುಕಾಲು ಸೇರು ಗೋಧಿಯನ್ನು ತಂದು ಮುಂದಿಟ್ಟರು! ಆಕೆಗೆ ಇದರಿಂದ ಆಗಿರಬಹುದಾದ ಅಳಲನ್ನು ಇವರು ಅರಿತುಕೊಂಡರೆ? ಅದರ ಕಡೆ ಗಮನವಾದರೂ ಇದ್ದಿತೋ?” (ಪು. ೧೦೧). ತಾವು ತಮ್ಮನ್ನು ಸದಾ ‘ಕಲಾವಿದ್ಯಾರ್ಥಿ’ ಎಂದೇ ಕರೆದುಕೊಳ್ಳುತ್ತಿದ್ದ ವೆಂಕಟಪ್ಪ ಕಲೆಯ ವಿಚಾರದಲ್ಲಿ ಸ್ವಲ್ಪದ ಏರುಪೇರನ್ನೂ ಸಹಿಸುತ್ತಿರಲಿಲ್ಲ. ತಮ್ಮಲ್ಲಿ ವೀಣೆಯ ಪಾಠ ಕಲಿಯುತ್ತಿದ್ದ ರುದ್ರಪ್ಪ ಎಂಬಾತ ತಮಗಾಗಿ ವೀಣೆಯೊಂದನ್ನು ತಯಾರಿಸುವುದಾಗಿ ಹೇಳಿ ಆರೇಳು ವರ್ಷಗಳು ಉರುಳಿದರೂ ಕೆಲಸವನ್ನು ಅರ್ಧಾಂತಿಕವಾಗಿ ನಿಲ್ಲಿಸಿಬಿಟ್ಟಾಗ, ಇವರು ಆ ಕೆಲಸವನ್ನು ತಾವೇ ಮುಗಿಸಿ ತಯಾರಾದ ವೀಣೆಯ ಮೇಲೆ ‘ಗುರುದ್ರೋಹಿ ರುದ್ರಪ್ಪನ ದಗ (ಮೋಸ) ವೀಣೆ’ ಎಂದು ಬರೆದರು! (ಪು. ೭೧-೭೨). ರಾಯರು ಹೇಳುತ್ತಾರೆ, “ಸೌಜನ್ಯ ಅವರಲ್ಲಿದ್ದುದು ದಿಟ; ಆದರೆ ಅದನ್ನು ಅನುಭವಿಸಿದವರು ವಿರಳ” (ಪು. ೯೧).
ಕಡೆಯ ಭಾಗದಲ್ಲಿ ಬಂದಿರುವ ವೆಂಕಟಪ್ಪನವರ ಕಲಾಕೃತಿಗಳ ವಿಮರ್ಶೆ ಉದ್ಬೋಧಕವಾಗಿದೆ. ಸದ್ಯಕ್ಕೆ ಒಂದು ಮಾದರಿಯನ್ನು ನೋಡೋಣ: “ಅವರು ತಮ್ಮದಾಗಿಸಿಕೊಂಡ ಶೈಲಿಯಲ್ಲಿ ವಾಸ್ತವಿಕತೆ ಮತ್ತು ಕಾವ್ಯಮನೋಧರ್ಮ ಎರಡೂ ಸೇರಿಕೊಂಡಿವೆ. ಅವರು ಸೌಂದರ್ಯಾನುಭವದ ಪಕ್ಷಪಾತಿಗಳೂ ಹೌದು, ಯಥಾವತ್ತಾದ ವಿವರನಿರೂಪಣೆಗೆ ಒಲಿದವರೂ ಹೌದು ... ಭಾವವಾಗಲಿ, ಚೆಲುವಿನ ಪ್ರಕಾರಗಳಾಗಲಿ ರೂಪವನ್ನು ಮಾರ್ಪಡಿಸಬಾರದು; ನಿಯತವಾದ ರೇಖೆಗಳ ನಿಯಮಕ್ಕೆ ಅಡ್ಡಿ ಬರಬಾರದು, ಅಂಗವಿಭಜನೆಯ ನಿಯಮವನ್ನೂ ಕಡೆಗಾಣಿಸಬಾರದು. ರೂಪದ ಸಮಷ್ಟಿ ಮತ್ತು ವ್ಯಷ್ಟಿ ನಿರೂಪಣೆ, ಮೇಲ್ಮೈ ರೇಖೆಗಳ ನಿರ್ದಿಷ್ಟತೆ, ಅವಯವಗಳ ವಿಂಗಡಣೆ, ವರ್ಣಗಳ ಕ್ರಮ, ಭೂಮಿಕೆ ಮತ್ತು ರೂಪಗಳ ವಿನ್ಯಾಸ ಇವನ್ನು ಕಲಾವಿದ ಮರೆಯುವಹಾಗಿಲ್ಲ.” (ಪು. ೧೩೩). ಇದು ಸ್ವಭಾವೋಕ್ತಿ ಮತ್ತು ವಕ್ರೋಕ್ತಿಗಳ, ಲೋಕಧರ್ಮೀ ಹಾಗೂ ನಾಟ್ಯಧರ್ಮಿಗಳ ಹದವನ್ನು ಕಂಡುಕೊಂಡಿದ್ದ ಸಿದ್ಧಹಸ್ತರ ಅನುಭವದ ಮಾತು. ವೆಂಕಟಪ್ಪನವರು ಬಿಡಿಸಿದ ಅವನೀಂದ್ರನಾಥ ಠಾಕೂರರ ಚಿತ್ರದಲ್ಲಿ ಕೈ ಮೇಲಿನ ನೀಲಿಗಟ್ಟಿದ ನರಗಳು, ಅವರು ತೊಟ್ಟ ನಿಲುವಂಗಿಯ ದಾರಗಳು ಕೂಡ ಸ್ಪಷ್ಟವಾಗಿ ಕಾಣುತ್ತವೆಂದೂ ನಾಲ್ಮಡಿ ಕೃಷ್ಣರಾಜ ಒಡೆಯರ ಚಿತ್ರದಲ್ಲಿ ಒಂದು ದಿನ ಮುಖಕ್ಷೌರ ತಪ್ಪಿ ನೀಲಿಗಟ್ಟಿದ ಕೆನ್ನೆಗಳು, ಕಣ್ಣುಗುಡ್ಡೆಗಳಲ್ಲಿ ಮೂಡಿಬಂದ ಪದರಗಳು ಕೂಡ ಸ್ಪಷ್ಟವಾಗಿ ಆಕೃತಿಗೊಂಡಿವೆಯೆಂದೂ ರಾಯರು ವಿವರಿಸುವುದು (ಪು. ೧೩೯) ಅವರ ಸೂಕ್ಷ್ಮಜ್ಞತೆಯ ಸಂಕೇತ.
ಬರೆಹದ ಬನಿ
ರಾಯರ ನುಡಿಜಾಡಿನ ಹೆಗ್ಗುರುತುಗಳನ್ನು ಹಿಂದೆಯೇ ಕಾಣಿಸಿದ್ದೇನೆ. ಅವುಗಳಿಗೆ ನಿದರ್ಶನವಾಗಿ ಕೆಲವು ಉದ್ಧೃತಿಗಳನ್ನು ಈಗ ಪರಿಶೀಲಿಸೋಣ. ಅವರು ಶ್ರೀಚಂದ್ರಶೇಖರಭಾರತೀಸ್ವಾಮಿಗಳ ಪೂರ್ವಾಶ್ರಮದ ತಾಯಿ-ತಂದೆಯರ ಜೀವನವಿಧಾನವನ್ನು ಬಣ್ಣಿಸುವ ಬಗೆ ಹೀಗೆ:
“ಏನೋ, ಇರಲೊಂದು ಜಾಗ, ತಲೆಯ ಮೇಲೊಂದು ಸೂರು, ಮಠದಿಂದ ಅಷ್ಟಿಷ್ಟು ನೆರವು; ಸಾಕೆಂದು ಸುಮ್ಮನಿದ್ದರು. ಹೆಚ್ಚು ಗಳಿಸುವ ಯಾವ ಪ್ರಯತ್ನವನ್ನೂ ಮಾಡದೆ, ತಾನಾಗಿ ಬಂದುದರಲ್ಲಿ ತೃಪ್ತರಾಗಿ, ಹೆರವರನ್ನು ನೋಡಿ ಕರುಬದೆ, ಜನರ ಗುಂಪಿನಲ್ಲಿ ಬೆರೆಯದೆ, ಬೇರೆಯವರ ಹವ್ಯಾಸಕ್ಕೆ ಕೈಯಿಕ್ಕದೆ, ತಮ್ಮ ಪಾಡಿಗೆ ತಾವು ಇರುತ್ತಿದ್ದರು. ಬ್ರಾಹ್ಮಣ್ಯಕ್ಕೆ ಬೇಕಾದ ಕರ್ಮಾನುಷ್ಠಾನವನ್ನು ಕೈಲಾದಷ್ಟು ಹಾಗೂ ಹೀಗೂ ಉಳಿಸಿಕೊಂಡಿದ್ದರು. ಬಡವರಾದರೆ ಭಕ್ತಿಗೇನು ಬಡತನವೆ? ನಿಷ್ಠೆಗೇನು ಕೊರತೆಯೆ? ಬಡವರೆಂದು ಅವರಿಗೆ ಬೇಸರವೂ ಇಲ್ಲ, ಬೇಗುದಿಯೂ ಇಲ್ಲ.” (‘ಶಾರದಾಪೀಠದ ಮಾಣಿಕ್ಯ’, ಪು. ೩೨)
ತಮ್ಮ ಗುರುಗಳಾದ ರಾಳ್ಲಪಲ್ಲಿ ಅನಂತಕೃಷ್ಣಶರ್ಮರನ್ನು ರಾಯರು ಹೀಗೆ ಕಂಡರಿಸಿದ್ದಾರೆ:
“ಅವರ ವ್ಯಕ್ತಿತ್ವದ ಮುಖಗಳು ಒಂದೆ, ಎರಡೆ? ಮಾತನಾಡುವಾಗ ಮುತ್ತಿನ ಚಪ್ಪರ ಕಟ್ಟುತ್ತಿದ್ದರು; ಬರೆಯುವಾಗ ಬಂಗಾರದ ಬಲೆಯನ್ನು ಬೀಸುತ್ತಿದ್ದರು; ಹಾಡುವಾಗ ಹನಿಜೇನು ಸೂಸುತ್ತಿದ್ದರು. ನೋಡಿದರೆ ನೆಮ್ಮದಿಯನ್ನುಂಟುಮಾಡುವುದು ಅವರಿಗೆ ಸಹಜವಾಗಿ ಒಲಿದುಬಂದಿದ್ದ ಕಲೆ. ಅವರ ನಡೆ, ನುಡಿ, ಉಡುಗೆ, ತೊಡುಗೆ, ನಿಲುವು, ನೆಲೆ ಎಲ್ಲದರಲ್ಲೂ ಓರಣ, ಅಚ್ಚುಕಟ್ಟು. ಯಾವುದರಲ್ಲೂ ಒಂದಿಷ್ಟೂ ಆತಂಕವಿಲ್ಲ, ಆತುರವಿಲ್ಲ, ಗೊಂದಲವಿಲ್ಲ.” (‘ಪುರುಷಸರಸ್ವತಿ’, ಪು. ೬)
ಜಗನ್ಮಾನ್ಯ ವಿದ್ವಾಂಸರಾದ ಎಂ. ಹಿರಿಯಣ್ಣನವರನ್ನು ಕುರಿತು ಮಕ್ಕಳಿಗಾಗಿ ಬರೆದ ಪುಸ್ತಕದಲ್ಲಿ ಅವರನ್ನು ಪರಿಚಯಿಸುವ ಪರಿ ಹೀಗಿದೆ:
“ಏರುಪೇರಿಲ್ಲದ, ಆಡಂಬರವಿಲ್ಲದ ಬದುಕನ್ನು ಗದ್ದಲವಿಲ್ಲದೆ ಬದುಕಿ, ತಮ್ಮ ಬದುಕಿನಂತೆಯೇ ಬರಹವನ್ನೂ ನಿರಾಡಂಬರ, ಸರಳ, ಸುಂದರ, ಸ್ಪಷ್ಟ ಮಾಡಿ ತೀರಿಕೊಂಡವರು ಅವರು. ತಮ್ಮಲ್ಲಿ ಅಪಾರವಾದ ಪಾಂಡಿತ್ಯ ಇದ್ದಿತಾದರೂ ಅದನ್ನು ಹೊರಗೆ ತೋರಿಸಿಕೊಳ್ಳುತ್ತಿರಲಿಲ್ಲ. ‘ಎಲೆ ಮರೆಯ ಕಾಯಿ’ ಎನ್ನುತ್ತಾರಲ್ಲ; ಹಾಗೆಯೇ ಇದ್ದವರು. ಅವರು ಆದರೆ ಕಾಯಲ್ಲ, ಹಣ್ಣು ಅಷ್ಟೆ. ಹೀಗಾಗಿ ಬಹು ಮಂದಿ ಅವರ ಹೆಸರನ್ನು ಕೇಳರಿಯರು.” (‘ಪ್ರೊ|| ಎಂ. ಹಿರಿಯಣ್ಣ’. ಐ.ಬಿ.ಎಚ್. ಪ್ರಕಾಶನ, ಬೆಂಗಳೂರು, ೧೯೭೩, ಪು. ೬-೭)
ಇಲ್ಲಿಯ ಒಂದೊಂದು ವಾಕ್ಯವೂ ಸರಳಸುಭಗವಾದ ಗದ್ಯಶೈಲಿಗೆ ಮಾದರಿ. ಆಡುನುಡಿಯ ಪರಿಮಳ ಕಟ್ಟಿದ ಅಚ್ಚಗನ್ನಡದ ಮಾತುಗಳು, ಅತಿಯಾಗದ ಪ್ರತ್ಯಯಲೋಪಗಳು, ವೆಗಟಾಗದ ಅವಧಾರಣೆಗಳು, ಎದ್ದುತೋರದ ಕಾವ್ಯಸ್ಪರ್ಶ, ತಿಳಿಯಾದ ಅರ್ಥಕ್ರಮ, ಸವಿಯಾದ ಶಬ್ದಮೈತ್ರಿ - ಯಾವ ಪುಣ್ಯದ ಫಲವೋ!
ಪೂರಕ ಸಾಮಗ್ರಿ
ರೇಖಾಚಿತ್ರಗಳಂತೆ ರಾಯರು ಹಲವು ತೆರದ ಪೂರಕ ಸಾಮಗ್ರಿಯನ್ನು ಹೊಂದಿಸಿಕೊಟ್ಟು ನಮ್ಮ ಅರಿವಿನ ಸೀಮೆಗಳನ್ನು ವಿಸ್ತರಿಸುತ್ತಾರೆ; ಎಂದೂ ಮರೆಯಲಾಗದ ಓದಿನ ಅನುಭವವನ್ನು ಒದಗಿಸುತ್ತಾರೆ.
ವಯೊಲಿನ್ ವಾದಕರಾಗಿ ಖ್ಯಾತನಾಮರಾದ ಟಿ. ಚೌಡಯ್ಯನವರನ್ನು ಕುರಿತು ಬರೆಯುತ್ತ, ಕರ್ಣಾಟಕಸಂಗೀತದ ವಿಕಾಸಕ್ಕೆ ಕಾವೇರಿ ನದಿ ಹೇಗೆ ಸಾಕ್ಷಿಯಾಗಿದೆ ಎಂದು ವಿವರಿಸುತ್ತಾರೆ: “ಕರ್ನಾಟಕ ಸಂಗೀತದ ಭಾಗ್ಯದೇವತೆಯರಾದ ತ್ಯಾಗರಾಜರು, ಮುತ್ತುಸ್ವಾಮಿ ದೀಕ್ಷಿತರು, ಶ್ಯಾಮಶಾಸ್ತ್ರಿಗಳು ನಮ್ಮೆದುರು ತೋರಿಕೊಂಡದ್ದು ತಿರುವಾರೂರಿನಲ್ಲಿ; ಕಾವೇರಿಯ ತೀರವೇ ಅದು. ತ್ಯಾಗರಾಜರು ನೆಲೆಸಿ ಕಣ್ಮರೆಯಾದದ್ದು ತಿರುವಯ್ಯಾರಿನಲ್ಲಿ; ಅದೂ ಕಾವೇರಿಯ ದಡವೇ ... ಕಾವೇರಿಯ ತೀರದಲ್ಲೇ ಇರುವ ಹನಸೋಗೆ ವೀಣೆ ಶೇಷಣ್ಣನವರು ಹುಟ್ಟಿ ಬೆಳೆದ ಜಾಗ. ರುದ್ರಪಟ್ಟಣವಂತೂ ಸರಿಯೇ ಸರಿ; ಸಂಗೀತದ ತೌರೂರು. ಕಾವೇರಿ ಮುಂದೆ ಹರಿದುಬಂದ ಶ್ರೀರಂಗಪಟ್ಟಣವೂ ಸಂಗೀತಕ್ಷೇತ್ರವೇ. ಇನ್ನೂ ಮುಂದೆ ಕಾವೇರಿಯು ಕಪಿಲೆಯೊಂದಿಗೆ ಕೂಡಿಕೊಳ್ಳುವ ತಾಣ ತಿರುಮಕೂಡಲು ನಮ್ಮ ಚೌಡಯ್ಯನವರ ಊರೇ ... ಅಂತೂ ಕಾವೇರಿ ನದಿಗೂ ಕರ್ನಾಟಕ ಸಂಗೀತಕ್ಕೂ ಮೊದಲಿಂದ ಅದೇನೋ ನಂಟು.” (‘ಸಂಗೀತರತ್ನ ಮೈಸೂರು ಟಿ. ಚೌಡಯ್ಯ’. ಶ್ರೀರಾಮಸೇವಾಮಂಡಲಿ ಟ್ರಸ್ಟ್, ಬೆಂಗಳೂರು, ೧೯೯೪, ಪು. ೧)
ಬಹುಮುಖಪ್ರಜ್ಞಾಶಾಲಿ ಆನಂದ ಕೆ. ಕುಮಾರಸ್ವಾಮಿ ಅವರನ್ನು ಕುರಿತು ಬರೆಯುತ್ತ, ನಮ್ಮ ದೇಶದ ಸ್ವಾತಂತ್ರ್ಯಪ್ರಾಪ್ತಿಯ ಇತಿಹಾಸದಲ್ಲಿ ‘ಸ್ವದೇಶೀ’ ಮನೋಭಾವ ವಹಿಸಿದ ಪಾತ್ರವನ್ನೂ ಅದಕ್ಕೆ ಕುಮಾರಸ್ವಾಮಿಯವರು ನೀಡಿದ ದಿಶಾನಿರ್ದೇಶನವನ್ನೂ ವಿವರಿಸಿದ್ದಾರೆ: “ಸ್ವರಾಜ್ಯದ ಕಲ್ಪನೆ ಬೇರೂರಲು ‘ಸ್ವದೇಶೀ’ ಎಂಬ ಮಂತ್ರ ಅಗತ್ಯವಾಯಿತು ... ಇದನ್ನು ಆನಂದ ಕುಮಾರಸ್ವಾಮಿ ಅನುಮೋದಿಸಿ, ‘ಸ್ವದೇಶೀ’ ಎನ್ನುವ ಕಲ್ಪನೆ ದಿಟವಾಗಬೇಕಾದರೆ ದೇಶದ ಜನ ತಮ್ಮ ಧರ್ಮ, ಕಲೆ, ರೀತಿ, ನೀತಿಗಳ ಹಿರಿಮೆಯನ್ನು ಅರಿತುಕೊಳ್ಳಬೇಕು ಎಂದರು. ಸ್ವದೇಶೀಭಾವನೆಯಲ್ಲೊಂದು ಆಧ್ಯಾತ್ಮಿಕತೆ ಇದೆಯೆಂದು ಅವರ ವಾದ ... ರಾಜಕೀಯವಾಗಿ ಮಾತ್ರ ವಿದೇಶೀ-ಆಡಳಿತದಿಂದ ಮುಕ್ತಿಯನ್ನು ಪಡೆದುಕೊಂಡರೆ ಅದು ದಿಟವಾದ ಸ್ವಾತಂತ್ರ÷್ಯವಲ್ಲ; ಆರ್ಥಿಕವಾಗಿ, ಧಾರ್ಮಿಕವಾಗಿ, ಸಾಂಸ್ಕೃತಿಕವಾಗಿ, ಆಧ್ಯಾತ್ಮಿಕವಾಗಿ ದೇಶ ‘ಸ್ವತಂತ್ರ’ವಾಗುವುದು ಮುಖ್ಯವಾದ ವಿಚಾರ. ದೇಶ ಸ್ವತಂತ್ರವಾದರೆ ನಿಮ್ಮ ಸಂದೇಶವೇನು ಎಂದು ಯಾರೋ ಆನಂದ ಕುಮಾರಸ್ವಾಮಿಯವರನ್ನು ಕೇಳಿದರಂತೆ. ಅದಕ್ಕೆ ಅವರು “ನೀವು ನೀವೇ ಆಗಿರಬೇಕು” (‘Be yourself’) ಎಂದು ಉತ್ತರ ನೀಡಿದರು.” (‘ಕಲಾತತ್ತ್ವಮಹರ್ಷಿ ಆನಂದ ಕುಮಾರಸ್ವಾಮಿ’. ಅಭಿಜ್ಞಾನ, ಬೆಂಗಳೂರು, ೨೦೦೦. ಪು. ೧೬-೧೭)
ಇಂಥ ವಿವರಗಳನ್ನು ವೆಂಕಟಪ್ಪನವರ ಬಗೆಗಿನ ಕೃತಿಯಲ್ಲಿಯೂ ಕಾಣಬಹುದು. ಅದರ ಮೊದಲ ಭಾಗದಲ್ಲಿ ಮೈಸೂರಿನ ಅರಸರು, ದಿವಾನರು, ಅರಮನೆಯ ಕೆಲಸಗಳನ್ನು ಸಾಗಿಸುತ್ತಿದ್ದ ‘ದಫ್ತರ್’ ಇಲಾಖೆಗಳು, ಬಕ್ಷಿಗಳೇ ಮುಂತಾದ ಮೇಲ್ವಿಚಾರಕರು, ಆಗಿನ ಕಾಲದ ಸಾಂಸ್ಕೃತಿಕ ವಾತಾವರಣ - ಇವೆಲ್ಲ ಸಂಗ್ರಹವಾಗಿ, ಚೊಕ್ಕಟವಾಗಿ ಒಕ್ಕಣೆಗೊಂಡಿವೆ. ಜೊತೆಗೆ ಆಗಿನ ಕಾಲದಲ್ಲಿ ಹ್ಯಾವೆಲ್, ಆನಂದ ಕುಮಾರಸ್ವಾಮಿ, ಅವನೀಂದ್ರನಾಥ ಠಾಕೂರ್, ಸೋದರಿ ನಿವೇದಿತಾ ಮುಂತಾದವರಿಂದ ಪ್ರಚುರಗೊಂಡ ಭಾರತದ ಸಾಂಪ್ರದಾಯಿಕ ಚಿತ್ರಕಲೆಯ ವಿವರಗಳೂ ಅಧಿಕೃತವಾಗಿ ಬಂದಿವೆ. ಇನ್ನು ಶ್ರೀಚಂದ್ರಶೇಖರಭಾರತೀಸ್ವಾಮಿಗಳನ್ನು ಕುರಿತ ಕೃತಿಯಲ್ಲಿ ಶೃಂಗೇರಿ ಮಠದ ಇತಿಹಾಸ, ಅದಕ್ಕೂ ಮೈಸೂರಿನ ಒಡೆಯರಿಗೂ ಇರುವ ಸಂಬಂಧ, ಪ್ರಸಿದ್ಧವಾದ ಶ್ರೀಮಹಾಗಣಪತಿ ವಾಕ್ಯಾರ್ಥಸಭೆಯ ಇತಿಹಾಸ, ವಿಕಾಸವೇ ಮೊದಲಾದ ಸಂಗತಿಗಳು ಸಮುಚಿತವಾಗಿ ಸೇರಿವೆ. ರಾಳ್ಲಪಲ್ಲಿ ಅವರ ಬಗೆಗಿನ ಹೊತ್ತಿಗೆಯಲ್ಲಿ ‘ಆಕಾಶವಾಣಿ’ ಎಂಬ ಶಬ್ದವನ್ನು ಅವರು ಟಂಕಿಸಿದ ಅಪೂರ್ವ ವಿವರ ದಾಖಲಾಗಿದೆ.
ಈ ಬಗೆಯ ಸಾಮಗ್ರಿ ಉಪಯುಕ್ತವಾದ ಅನುಬಂಧಗಳಾಗಿಯೂ ಮೈದಾಳುವುದನ್ನು ಈಗಾಗಲೇ ಕಂಡಿದ್ದೇವೆ. ಇದನ್ನು ‘ಅಭಿನವಗುಪ್ತ’ ಪುಸ್ತಕದಲ್ಲಿಯೂ (ಅಭಿಜ್ಞಾನ, ಬೆಂಗಳೂರು, ೨೦೧೬) ಗಮನಿಸಬಹುದು. ಅಲ್ಲಿ ‘ಗುರುನಾಥಪರಾಮರ್ಶ’ ಮತ್ತು ‘ಭಗವದ್ಗೀತಾರ್ಥಸಂಗ್ರಹ’ಗಳ ಕೆಲವು ಶ್ಲೋಕಗಳು ಸಾನುವಾದವಾಗಿ ಸೇರಿರುವುದೂ ಪ್ರತ್ಯಭಿಜ್ಞಾಶೈವದರ್ಶನದ ಬಗೆಗೆ ಒಂದು ಸಣ್ಣ ಲೇಖನ ಜೊತೆಗೂಡಿರುವುದೂ ಅಧ್ಯಯನಾಸಕ್ತರ ಪಾಲಿಗೆ ಹಬ್ಬವೆನಿಸಿವೆ.
ಪೂರಕ ಸಂಗತಿಗಳು ಮಾಹಿತಿಯಾಗಿ ಮಾತ್ರವೇ ಅಲ್ಲದೆ ಘಟನೆಗಳಾಗಿಯೂ ಅರಳಿವೆ. ಇದಕ್ಕೊಂದು ಸೊಗಸಾದ ನಿದರ್ಶನ ಸುಬ್ಬುಲಕ್ಷ್ಮಿ ಅವರ ಬಗೆಗಿನ ಕೃತಿಯಲ್ಲಿದೆ. ಕಲಾವಿದರ ವಿವಿಧ ಸ್ವಭಾವಗಳನ್ನು ತಿಳಿಹೇಳಲು ತಮ್ಮ ಗುರುಗಳು ನಿರೂಪಿಸಿದ್ದ ಎರಡು ಪ್ರಸಂಗಗಳನ್ನು ರಾಯರಿಲ್ಲಿ ಕಾಣಿಸಿದ್ದಾರೆ. ಹಿಂದಿನ ಕಾಲದ ವೈಣಿಕರೊಬ್ಬರು ವಾದನ ಮಾಡುವಾಗ ಒಳ್ಳೆಯ ನುಡಿಕಾರ ಬಂದರೆ, ಹೆಮ್ಮೆಯಿಂದ “ಹಾಗೆ ನುಡಿಯೇ ಮುಂಡೆ!” (‘ಅಷ್ಟ್ಲ ಪಲುಕವೇ, ಮುಂಡ!’) ಎಂದು ತಮ್ಮ ಮೆಚ್ಚಿಗೆ ಸೂಚಿಸುತ್ತಿದ್ದರಂತೆ. ಆದರೆ ವೈಣಿಕಶಿಖಾಮಣಿ ಶೇಷಣ್ಣನವರು “ನನ್ನ ಶಕ್ತಿಯಿದ್ದಷ್ಟು ನಾನು ನುಡಿಸಬಲ್ಲೆ; ವೀಣೆಯ ಸಾಮರ್ಥ್ಯಕ್ಕೆ ಸರಿಯಾಗಿ ನುಡಿಸುವ ಯೋಗ್ಯತೆ ನನಗೆಲ್ಲಿ ಬಂತು?” ಎಂದು ನಮ್ರತೆಯಿಂದ ನಿವೇದಿಸುತ್ತಿದ್ದರಂತೆ.
ಇಂಥ ಸಂದರ್ಭಗಳಿಂದಲ್ಲವೇ ಕೃತಿ ಕಳೆಗಟ್ಟುವುದು? ಎಂದೋ ಯಾರೋ ಹೇಳಿದ ಸಂಗತಿಯನ್ನು, ಎಲ್ಲೋ ಓದಿದ ವಿವರವನ್ನು ನೆನಪಿನಲ್ಲಿ ಇರಿಸಿಕೊಂಡು ಸರಿಯಾದ ಎಡೆಯಲ್ಲಿ ಬಳಸಿಕೊಳ್ಳುವುದು ತನ್ನಂತೆಯೇ ಒಂದು ಕಲೆ. ಇದರಲ್ಲಿ ನುರಿತವರು ರಾಯರು.
ಸಾರಗ್ರಹಣ
ರಾಯರ ಅಸಮಾನ ಶಕ್ತಿಗಳಲ್ಲಿ ಒಂದು ಸಾರಗ್ರಹಣ. ತಿಳಿಸಬೇಕಿರುವ ವಿಷಯ ಬೆಟ್ಟದಷ್ಟೇ ಇರಲಿ, ಅದು ಎಣಿಕೆಗೆ ಎಟುಕದಷ್ಟು ಮುಖಗಳನ್ನೇ ಹೊಂದಿರಲಿ, ರಾಯರು ಅದರ ಹೃದಯವನ್ನು ಹೊಕ್ಕು, ಸಾರವನ್ನು ಹೀರಿ ಕೆಲವೇ ಪರಿಣಾಮಕರ ವಾಕ್ಯಗಳಲ್ಲಿ ಹೇಳಿಬಿಡುವರು. ಇದು ಬರೆಹಕ್ಕೊಂದು ಅಡಕವನ್ನೂ ಅಧಿಕೃತತೆಯನ್ನೂ ತಂದುಕೊಡುತ್ತದೆ. ಇಂಥ ವಾಕ್ಯಗಳು ಅದೆಷ್ಟು ದೂರಗಾಮಿಯಾದ ಧ್ವನಿಗಳನ್ನು ಹೊರಡಿಸಬಲ್ಲುವೆಂದು ಇಡಿಯ ಕೃತಿಯನ್ನು ಓದುವಷ್ಟರಲ್ಲಿ ನಮಗೇ ಮನವರಿಕೆಯಾಗುತ್ತದೆ. ಒಂದೆರಡು ಉದಾಹರಣೆಗಳನ್ನು ಪರಿಶೀಲಿಸೋಣ.
‘ಭಾರತ-ಭಾರತಿ ಪುಸ್ತಕಸಂಪದ’ದಲ್ಲಿ ತ್ಯಾಗರಾಜರನ್ನು ಕುರಿತು ಮಕ್ಕಳಿಗಾಗಿ ಬರೆದ ಕೃತಿಯಲ್ಲಿಯ ಒಂದು ವಾಕ್ಯವೃಂದ ಹೀಗಿದೆ: “ತ್ಯಾಗರಾಜರು ಇದ್ದ ಕಾಲ ತುಂಬ ಹಿಂದೇನಲ್ಲ. ಅವರು ತೀರಿಕೊಂಡು ಈಗ್ಗೆ ನೂರ ಇಪ್ಪತ್ತೈದು ವರ್ಷಗಳಾದುವಷ್ಟೆ. ಆದರೆ ಎಷ್ಟೋ ಸಾವಿರಾರು ವರ್ಷಗಳ ಹಿಂದಿದ್ದ ಋಷಿಗಳಂತೆ ಅವರ ವಿಚಾರವಾಗಿ ನಮ್ಮ ಕಲ್ಪನೆಯಿದೆ. ದೇವಲೋಕದ ಋಷಿ ನಾರದರ ಹೆಸರು ಕೇಳಿದ್ದೀರಷ್ಟೆ. ತ್ಯಾಗರಾಜರು ನಾರದರ ಅವತಾರವೆಂದೇ ಅವರ ಶಿಷ್ಯಪರಂಪರೆಯ ನಂಬಿಕೆ. ರಾಮಾಯಣವನ್ನು ರಚಿಸಿದ ವಾಲ್ಮೀಕಿ ಋಷಿಗಳೇ ತ್ಯಾಗರಾಜರಾಗಿ ಅವತರಿಸಿದರೆಂದೂ ಹೇಳುತ್ತಾರೆ. ಜನ ಹೀಗೆ ನಂಬಬೇಕಾದರೆ ತ್ಯಾಗರಾಜರು ಎಷ್ಟು ದೊಡ್ಡ ಮನುಷ್ಯರಾಗಿರಬೇಕು, ಎಂಥ ಮಹಾತ್ಮರಾಗಿರಬೇಕು, ಊಹಿಸಿಕೊಳ್ಳಿ.” (ರಾಷ್ಟ್ರೋತ್ಥಾನ ಸಾಹಿತ್ಯ, ಬೆಂಗಳೂರು, ೨೦೨೦, ಪು. ೧೨)
ಅಭಿನವಗುಪ್ತನ ಬಗೆಗೆ ರಾಯರು ಬರೆದಿರುವ ಪುಸ್ತಕದ ಮೊದಲ ಕಂಡಿಕೆಯೇ ಆತನ ವ್ಯಕ್ತಿತ್ವಸರ್ವಸ್ವವನ್ನು ನಮ್ಮೆದುರು ತೆರೆದಿಡುತ್ತದೆ: “ನಮ್ಮ ದೇಶದಲ್ಲಿ ನಡುಯುಗದಲ್ಲಿ ತೋರಿಕೊಂಡ ಮೇಧಾವಿಗಳ ಸಾಲಿನಲ್ಲಿ ಮೊದಲಿಗೇ ನೆನೆಯಬೇಕಾದ ಕೆಲವರಲ್ಲಿ ಅಭಿನವಗುಪ್ತ (ಕ್ರಿಸ್ತಾಬ್ದ ಹತ್ತನೆಯ ಶತಮಾನದಲ್ಲಿದ್ದವನು) ಸೇರುತ್ತಾನೆ ... ತನ್ನ ಬರಹಗಳಿಂದ ಸಂಸ್ಕೃತಸಾಹಿತ್ಯದಲ್ಲಿ ಹೊಸದೊಂದು ಕಳೆಯನ್ನು ಮೂಡಿಸಿದವನು, ಹೊಸದೊಂದು ಪ್ರೇರಣೆಯನ್ನು ಒದಗಿಸಿದವನು. ಎಲ್ಲ ವಿದ್ವಾಂಸರ ವಿಸ್ಮಯಕ್ಕೆ ಕಾರಣವಾಗುವಂಥ ಬಹುಮುಖ ಪ್ರತಿಭೆ ಅವನದ್ದು. ಕವಿ, ವಿಮರ್ಶಕ, ವ್ಯಾಖ್ಯಾನಕಾರ, ದಾರ್ಶನಿಕ, ದ್ರಷ್ಟಾರ, ಆಲಂಕಾರಿಕ, ಭಾವುಕ, ಅನುಭಾವಿ, ಗಾಯಕ, ಯೋಗಿ, ಸಂತ, ಸಿದ್ಧ; ಅವನ ಸಾರಸ್ವತವ್ಯವಸಾಯ ಅನನ್ಯಸಾಧಾರಣವಾದುದು; ಬಹುಶ್ರುತತ್ವಕ್ಕೆ ಅವನಿಗಿಂತ ಮಿಗಿಲಾದ ನಿದರ್ಶನ ಸಿಗಲಾರದು. ಗುರೂಪದೇಶದಿಂದ, ಶಾಸ್ತ್ರಾಧ್ಯಯನದಿಂದ, ಸಾಧನೆಯ ಕಾವಿನಿಂದ, ಅನುಭವದಿಂದ ಅವನು ಪಡೆದುಕೊಂಡ ಸಿದ್ಧಿಯ ಬೆಳಕಿನ ತುಣುಕುಗಳು ಅವನ ಬರಹಗಳಲ್ಲಿ ಧಾರಾಳವಾಗಿ ಕಾಣಿಸಿಕೊಳ್ಳುತ್ತವೆ.” (ಪು. ೧)
ಎಂ. ಎಸ್. ಸುಬ್ಬುಲಕ್ಷ್ಮಿ ಮತ್ತು ಸದಾಶಿವಂ ಅವರ ದಾಂಪತ್ಯವನ್ನು ರಾಯರು ಬಣ್ಣಿಸುವುದು ಹೀಗೆ: “ಅದೊಂದು ಅನನ್ಯ, ಅನ್ಯೋನ್ಯ, ಅನುಕೂಲ ದಾಂಪತ್ಯ ... ಅನುರಾಗ ಪರಸ್ಪರವಲ್ಲದಿದ್ದರೂ ಊರ್ಜಿತವಾಯಿತು. ಅದೊಂದು ಅನ್ಯೋನ್ಯಾಶ್ರಯದ ಕತೆ. ಅವರಿಂದ ಇವರು ನೆಲೆಗಂಡರು, ಇವರಿಂದ ಅವರು ಮೇಲೇರಿದರು. ಸ್ವಭಾವದಲ್ಲಿ ತೀರ ವಿಭಿನ್ನವಾದರೂ ಅವಿನಾಭಾವ ಅಗತ್ಯವಾಯಿತು.” (‘ಸಂಗೀತಸಾಮ್ರಾಜ್ಞಿ ಎಂ. ಎಸ್. ಸುಬ್ಬುಲಕ್ಷ್ಮಿ’, ಪು. ೮)
ಅದೇ ಕೃತಿಯಲ್ಲಿ ಸುಬ್ಬುಲಕ್ಷ್ಮಿ ಅವರ ಸಾಧನೆಯ ನೆಲೆಗಟ್ಟನ್ನು ಹೀಗೆ ಗುರುತಿಸಿದ್ದಾರೆ: “...ಹೃದಯ ತುಂಬಿ ಹಾಡುವುದು, ಕೈ ತುಂಬಿ ಕೊಡುವುದು; ಮೊದಲನೆಯದರಿಂದ ರಸಿಕರಂಜನೆ, ಎರಡನೆಯದರಿಂದ ಆರ್ತರಕ್ಷಣೆ. ಭಗವದ್ಗೀತೆ ಹೇಳುವಂತೆ ಮೊದಲು ಯಜ್ಞ (ಸಂಗೀತಸಮಾರಾಧನೆಯಿಂದ ಭಗವತ್ಪೂಜೆ), ಅನಂತರ ದಾನ. ಎರಡಕ್ಕೂ ಆಕರವಾಗಿ ತಪಸ್ಸು (ಅವರ ಬದುಕೇ).” (ಪು. ೧೯)
ಉಪಸಂಹಾರ
ಸಂಸ್ಕೃತಪದ್ಯವೊಂದು ಹೇಳುತ್ತದೆ: ಯಾವುದು ಮುಕ್ಕಣ್ಣನ ಮೂರನೆಯ ಕಣ್ಣಿಗೂ ಮೀರಿದ್ದೋ, ನಾಲ್ಮೊಗ ಬೊಮ್ಮನ ಎಂಟು ಕಂಗಳಿಗೂ ಕಾಣುವುದಿಲ್ಲವೋ, ಷಣ್ಮುಖನ ಹದಿನಾರು ನೇತ್ರಗಳಿಗೂ ಅತೀತವಾದುದೋ, ಇಂದ್ರನ ಸಾವಿರ ಕಣ್ಣುಗಳ ದೃಷ್ಟಿಗೂ ದಕ್ಕುವುದಿಲ್ಲವೋ, ಮೂರು ಲೋಕಗಳು ಕಲೆತು ಕಂಡರೂ ಗೋಚರವಾಗದೋ ಅದನ್ನು ಅಂತರ್ದೃಷ್ಟಿಯುಳ್ಳ ಪಂಡಿತರು ಕಣ್ಣು ಮುಚ್ಚಿಕೊಂಡೇ ದರ್ಶಿಸುತ್ತಾರೆ - “ಯನ್ನೇತ್ರೈಸ್ತ್ರಿಭಿರೀಕ್ಷತೇ ನ ಗಿರಿಶೋ ನಾಷ್ಟಾಭಿರಪ್ಯಬ್ಜಭೂಃ ಸ್ಕಂದೋ ದ್ವಾದಶಭಿಸ್ತಥಾ ನ ಮಘವಾ ಚಕ್ಷುಃಸಹಸ್ರೇಣ ವಾ | ಸಂಭೂಯಾಪಿ ಜಗತ್ತ್ರಯಸ್ಯ ನಯನೈರ್ದ್ರಷ್ಟುಂ ನ ಯತ್ಪಾರ್ಯತೇ ಪ್ರತ್ಯಾಹೃತ್ಯ ದೃಶೌ ಸಮಾಹಿತಧಿಯಃ ಪಶ್ಯಂತಿ ತತ್ಪಂಡಿತಾಃ ||” (ಸುಭಾಷಿತರತ್ನಕೋಶ, ೧೨೪೯)
ಸಾ. ಕೃ. ರಾಮಚಂದ್ರರಾಯರು ಇಂಥ ಪಂಡಿತರು. ಅವರು ಗುಣ-ಗಾತ್ರಗಳಲ್ಲಿ ದೊಡ್ಡ ಗಣನೆಗೆ ಬರುವ ವ್ಯಕ್ತಿಚಿತ್ರ ಮತ್ತು ಜೀವನಚರಿತ್ರೆಗಳನ್ನು ರಚಿಸಿ ಈ ಸಾಹಿತ್ಯಪ್ರಕಾರಕ್ಕೆ ಅಮೂಲ್ಯವಾದ ಕೊಡುಗೆಯನ್ನು ಕೊಟ್ಟಿದ್ದಾರೆ. ವ್ಯಕ್ತಿಚಿತ್ರಗಳಲ್ಲಿ ಜೀವನಚರಿತ್ರೆಯ ಸಮಗ್ರತೆಯನ್ನೂ ಜೀವನಚರಿತ್ರೆಯಲ್ಲಿ ವ್ಯಕ್ತಿಚಿತ್ರದ ಆಪ್ತತೆಯನ್ನೂ ತುಂಬಿಕೊಡುವುದು ಅವರ ಬಲ್ಮೆ. ರೇಖಾಚಿತ್ರಗಳಿಂದ, ಬಗೆಬಗೆಯ ಪೂರಕ ಸಂಗತಿಗಳಿಂದ ಪುಷ್ಟವಾದ ಅವರ ಪುಸ್ತಕಗಳು ಓದಿನ ರುಚಿಯನ್ನು ತಿಳಿಯದ ವಾಚಕರನ್ನೂ ಸೆಳೆಯಬಲ್ಲುವು; ಪರಿನಿಷ್ಠಿತರಾದ ಓದುಗರನ್ನೂ ಹಿಡಿದಿಡಬಲ್ಲುವು. ಇನ್ನು ಅವರ ಭಾಷೆಯಂತೂ ಸೌಂದರ್ಯದ ಸೆಲೆ, ತಿಳಿತನದ ನೆಲೆ, ಬಂಗಾರದ ಬೆಳೆ. ಅದನ್ನು ಸವಿದು ಧನ್ಯರಾಗೋಣ.