ಜಗತ್ತಿನಲ್ಲಿ ನಮ್ಮ ಇರವೆಂಬ ಭವಕ್ಕೆ ಸಂಬಂಧಿಸಿದ್ದು ಭಾವ. ಮಾನವನ ನಿಜವಾದ ಗುರುತು ಭಾವವೇ; ಭಾವ ಉಳ್ಳವನು ಎಂಬುದೇ ಅವನ ಸರಿಯಾದ ಲಕ್ಷಣ. ವೈಯಕ್ತಿಕ ಇಷ್ಟಾನಿಷ್ಟಗಳಿಂದ ರೂಪುಗೊಳ್ಳುವ ಭಾವಗಳು ಸ್ವಾರ್ಥದ ವಿವಿಧ ಮುಖಗಳು, ಅದಕ್ಕಿರುವ ಬಗೆಬಗೆಯ ನೆಲೆಗಳು. ಸ್ವಾರ್ಥದ ಸೆಲೆಯಲ್ಲಿ ಸಿಲುಕಿದ ಜೀವಕ್ಕೆ ಯೋಗಕ್ಷೇಮಗಳೇ ಮುಖ್ಯವಾಗಿ ಮನಸ್ಸಿನ ವಿಶ್ರಾಂತಿ ದೂರವಾಗುತ್ತದೆ. ಚಿತ್ತವಿಶ್ರಾಂತಿ ಇಲ್ಲದ ಬದುಕು ಬರಡಾಗುತ್ತದೆ; ಬೇಗದಲ್ಲಿಯೇ ಬೇಸರ ತರಿಸಿ ಅಸಹ್ಯ ಎನಿಸುತ್ತದೆ. ನಿತ್ಯದ ಬದುಕಿನಲ್ಲಿ ಚಿತ್ತವಿಶ್ರಾಂತಿ ನಮಗೆ ಕಂಡುಬರುವುದು ಗಾಢನಿದ್ರೆಯಲ್ಲಿ. ಆಗ ನಾವು ನಮ್ಮಲ್ಲಿಯೇ ನೆಲೆಗೊಂಡು ಆನಂದವನ್ನು ಅನುಭವಿಸುತ್ತೇವೆ. ಹೀಗೆ ದೊರೆತ ಆನಂದವು ನಿದ್ರೆಯಿಂದ ಎಚ್ಚೆತ್ತ ಕೂಡಲೆ ಕಣ್ಮರೆಯಾಗುತ್ತದೆ. ಅದನ್ನು ಎಚ್ಚರದ ಸ್ಥಿತಿಯಲ್ಲಿ ಮತ್ತೆ ಕಂಡುಕೊಳ್ಳಲು ಅನೇಕ ಉಪಾಯಗಳುಂಟು - ಅವುಗಳಲ್ಲಿ ಸುಗಮವಾದದ್ದು, ಸುಂದರವಾದದ್ದು ಕಲೆ. ಕಾವ್ಯ, ಸಂಗೀತ, ನೃತ್ಯ, ಚಿತ್ರ, ಶಿಲ್ಪ ಮೊದಲಾದ ಕಲೆಗಳ ಮೂಲಕ ನಾವು ಚಿತ್ತವಿಶ್ರಾಂತಿರೂಪದ ರಸ ಎಂಬ ಆನಂದವನ್ನು ಅನುಭವಿಸುತ್ತೇವೆ. ರಸಾನಂದದಿಂದ ಭಾವಗಳಿಗೆ ಸಂಸ್ಕಾರವಾಗುತ್ತದೆ; ಅವುಗಳಿಗೆ ಅಂಟಿದ ಸ್ವಾರ್ಥದ ಲೇಪ ಇನಿತು ಕರಗುತ್ತದೆ. ಇದರಿಂದಾಗಿ ಬದುಕು ನಮಗೂ ಇತರರಿಗೂ ಸಹ್ಯವೆನಿಸುತ್ತದೆ. ಇದೇ ಕಾವ್ಯ ಮುಂತಾದ ಸಕಲ ಕಲೆಗಳ ಪ್ರಯೋಜನ. ಈ ಪ್ರಯೋಜನಕ್ಕಾಗಿಯೇ ನಮಗೆ ಸತ್ಕಾವ್ಯ ಬೇಕು.
ಸತ್ಕಾವ್ಯ ಎಂದೊಡನೆ ಭಾರತೀಯರ ಮನಸ್ಸಿಗೆ ತತ್‌ಕ್ಷಣ ಹೊಳೆಯುವುದು ಆದಿಕಾವ್ಯ ಶ್ರೀಮದ್ರಾಮಾಯಣ. ಅದರ ಕರ್ತೃ ವಾಲ್ಮೀಕಿಮುನಿಗಳು ರಸಮಯವಾದ ಪಾತ್ರ-ಸನ್ನಿವೇಶಗಳನ್ನು ಸೃಜಿಸಿ ಅವುಗಳ ಮೂಲಕ ನಮಗೆ ಆನಂದವನ್ನು ಒದಗಿಸಿದ್ದಾರೆ; ಬದುಕನ್ನು ಹಸನಾಗಿಸುವ ದಾರಿಯನ್ನೂ ತೋರಿಸಿಕೊಟ್ಟಿದ್ದಾರೆ. ಆ ದಾರಿ ಯಾವುದು? ದೈವೀ ಸಂಪತ್ತು, ಆಸುರೀ ಸಂಪತ್ತು ಎಂದು ಭಗವದ್ಗೀತೆ ವಿಂಗಡಿಸುವ ನಮ್ಮವೇ ಪ್ರವೃತ್ತಿಗಳಲ್ಲಿ ಎರಡನೆಯದನ್ನು ಹಿಮ್ಮೆಟ್ಟಿ ಮೊದಲನೆಯದನ್ನು ಕೈಗೂಡಿಸಿಕೊಳ್ಳುವುದೇ ಆ ದಾರಿ. ಶ್ರೀಮದ್ರಾಮಾಯಣವು ಈ ಪ್ರವೃತ್ತಿಗಳನ್ನು ಪ್ರಧಾನವಾಗಿ ರಾಮ-ರಾವಣರಲ್ಲಿ ಕಾಣಿಸಿದೆ.
ರಾವಣನಿಗೆ ಅಪಾರವಾದ ಶಕ್ತಿ-ಸಾಮರ್ಥ್ಯಗಳು ಇದ್ದುವು, ನಿಜ. ಆದರೆ ಅವನ್ನು ಆತ ಲೋಕಹಿತಕ್ಕಾಗಿ ಉಪಯೋಗಿಸಲಿಲ್ಲ. ಲೋಕಹಿತ ಹಾಗಿರಲಿ, ತನ್ನ ಶ್ರೇಯಃಸಾಧನೆಗೇ ಉಪಯೋಗಿಸಲಿಲ್ಲ. ಬದಲಿಗೆ ಅರ್ಥ-ಕಾಮಗಳನ್ನು ಕ್ಷುದ್ರವಾಗಿ ಬೆಂಬತ್ತಿ ಪ್ರೇಯಸ್ಸಿನ ವಲಯಕ್ಕೆ ಮಾತ್ರ ಸಂದವನಾದ. ಪ್ರೇಯಸ್ಸಿಗಾಗಿ ಶ್ರೇಯಸ್ಸನ್ನು ಬಲಿಗೊಡುವುದು ಆಸುರೀ ಪ್ರವೃತ್ತಿಯ ಹೆಗ್ಗುರುತು. ಅವನು ಪ್ರೇಯಸ್ಸನ್ನು ಬೆಂಬತ್ತಿದ್ದಾದರೂ ಹೇಗೆ? ಅತಿಶಯವಾದ ತನ್ನ ಶೌರ್ಯದಿಂದ ಕೊಬ್ಬಿ ಮೂರು ಲೋಕಗಳನ್ನೂ ಹಿಂಸಿಸಿದ. ಜಗತ್ತಿನಲ್ಲಿರುವ ಎಲ್ಲ ಮೌಲಿಕ ವಸ್ತುಗಳೂ ತನಗೇ ಸೇರಬೇಕೆಂದು ಬಗೆದು ಪರಸ್ವವನ್ನು ದೋಚಿದ, ಪರಸ್ತ್ರೀಕಾಮುಕನೂ ಆದ. ರಾವಣನ ಅನರ್ಥದ ಮೂಲದಲ್ಲಿರುವುದು ಮಿತಿ ಮೀರಿದ ಆಶೆ, ಕಾಮಲಾಲಸೆ. ಹೀಗೆ ಜಾರುವ ಜಾಡಿನಲ್ಲಿ ಅಡಿಯಿಟ್ಟ ಅವನು ಅರಿಷಡ್ವರ್ಗಕ್ಕೆ ಆಹಾರವಾಗಿದ್ದರಲ್ಲಿ ಅಚ್ಚರಿಯೇನಿಲ್ಲ. ಕಾಮವು ಈಡೇರಿದಾಗ ಆಶೆಯ ವಸ್ತುವಿನಲ್ಲಿ ಮೋಹಗೊಂಡ; ಅದರಲ್ಲಿ ಮತ್ತೆ ಮತ್ತೆ ಮುಳುಗಿ ಮದವನ್ನೂ ಹೆಚ್ಚಿಸಿಕೊಂಡ. ತಾತ್ಕಾಲಿಕವಾಗಿಯಾದರೂ ತನ್ನ ಆಶೆ ಈಡೇರದಿದ್ದಾಗ ಕ್ರೋಧಕ್ಕೆ ವಶನಾದ; ತನ್ನ ಕಾಮಿತ ವಸ್ತು ಯಾರಲ್ಲಿ ಇದೆಯೋ ಅವರ ಬಗೆಗೆ ಮಾತ್ಸರ್ಯವನ್ನು ಬೆಳೆಸಿಕೊಂಡ. ಅರ್ಥದ ಬಲದಿಂದ ಕಾಮವನ್ನು ಗಳಿಸುವ ಹೊಯ್ಲಿನಲ್ಲಿ ಹೊರಗಿನ ಶತ್ರುಗಳನ್ನು ಗೆದ್ದನಾದರೂ ತನ್ನ ಒಳಗೇ ಬಲಿಯುತ್ತಿದ್ದ ಆರು ಅರಿಗಳನ್ನು ಅರಿಯಲೇ ಇಲ್ಲ!
ಇಂಥ ರಾವಣನನ್ನು ಸಂಹರಿಸಲು ಬಂದವನು ಶ್ರೀರಾಮ. ಅರ್ಥ-ಕಾಮಗಳ ಅಂಕೆಯಿಲ್ಲದ ಮೇಲಾಟವನ್ನು ನಿಗ್ರಹಿಸಲು ಬೇಕಾದದ್ದು ಧರ್ಮ. ಡಿ.ವಿ.ಜಿ. ಅವರು ಹೇಳುವಂತೆ “ಲೋಕಜೀವನದ ಸಮ್ಯಗ್ವಿಧಾನವೇ ಧರ್ಮ.” ಇದನ್ನು ನಚ್ಚಿದವನು ರಾಮ. ಆದುದರಿಂದಲೇ “ರಾಮೋ ವಿಗ್ರಹವಾನ್ ಧರ್ಮಃ” ಎಂದು ತನ್ನ ಶತ್ರುವಾದ ರಾಕ್ಷಸ ಮಾರೀಚನಿಂದಲೇ ಕೀರ್ತಿತನಾದ.
ಒಟ್ಟಿನಲ್ಲಿ ಆದಿಕಾವ್ಯ ಶ್ರೀಮದ್ರಾಮಾಯಣವು ಚಿತ್ರಿಸಿರುವುದು - ಅರಿಷಡ್ವರ್ಗವನ್ನು ಧರ್ಮವು ಹತ್ತಿಕ್ಕಿ, ಅರ್ಥ-ಕಾಮಗಳನ್ನು ಸಮನ್ವಯಗೊಳಿಸುವ ಮೂಲಕ ಸ್ವಹಿತ-ಪರಹಿತಗಳನ್ನು ಸಾಧಿಸಬಲ್ಲುದು ಎಂಬುದನ್ನು. ಇದೇ ರಾಮರಾಜ್ಯದ ಆದರ್ಶ.
* * *
ಧರ್ಮವು ಜೀವ-ಜಗತ್ತುಗಳನ್ನು ತಾಳಿ ಬಾಳಿಸುವ ಶಕ್ತಿ. ಅದು ವಿವಿಧ ಗುಣಗಳಾಗಿ ತೋರಿಕೊಳ್ಳುತ್ತದೆ. ಉದಾಹರಣೆಗೆ: ಸುಡುವ ಗುಣವೇ ಬೆಂಕಿಯ ಧರ್ಮ, ತಂಪಾದ ಗುಣವೇ ನೀರಿನ ಧರ್ಮ, ಹಸುರಾದ ಗುಣವೇ ಎಲೆಯ ಧರ್ಮ, ಇತ್ಯಾದಿ. ಮಾನವರಲ್ಲಿ ಕೂಡ ಇಂಥ ನೂರಾರು ಗುಣಗಳಿವೆ. ದಯೆ, ತಾಳ್ಮೆ, ಶುಚಿ, ತೃಪ್ತಿ, ದಿಟ್ಟತನ ಮೊದಲಾದುವು ಅವುಗಳಲ್ಲಿ ಪ್ರಧಾನ. ಈ ಗುಣಗಳು ಒಬ್ಬೊಬ್ಬರಲ್ಲಿ ಒಂದೊಂದು ಪ್ರಮಾಣದಲ್ಲಿ ಕಂಡುಬರುತ್ತವೆ. ಎಲ್ಲ ಗುಣಗಳೂ ಒಬ್ಬನೇ ವ್ಯಕ್ತಿಯಲ್ಲಿದ್ದರೆ, ಅದೆಂಥ ಅಚ್ಚರಿ!
ಸಕಲ ಗುಣಗಳಿಗೂ ಆಕರನಾದ ಒಬ್ಬ ವ್ಯಕ್ತಿ ಸಿಗಬಲ್ಲನೇ? ಎಂಬ ಪ್ರಶ್ನೆಯಿಂದಲೇ ಶ್ರೀಮದ್ರಾಮಾಯಣ ಮೊದಲಾಗುತ್ತದೆ. ಈ ಪ್ರಶ್ನೆಯ ವಿಷಯದಲ್ಲಿ ಪರಮ ಕುತೂಹಲವುಳ್ಳ ವಾಲ್ಮೀಕಿಮುನಿಗಳು ನಾರದರನ್ನು ಕೇಳುತ್ತಾರೆ:
ಕೋ ನ್ವಸ್ಮಿನ್ ಸಾಂಪ್ರತಂ ಲೋಕೇ ಗುಣವಾನ್ ಕಶ್ಚ ವೀರ್ಯವಾನ್ |
ಧರ್ಮಜ್ಞಶ್ಚ ಕೃತಜ್ಞಶ್ಚ ಸತ್ಯವಾಕ್ಯೋ ದೃಢವ್ರತಃ ||
ಚಾರಿತ್ರೇಣ ಚ ಕೋ ಯುಕ್ತಃ ಸರ್ವಭೂತೇಷು ಕೋ ಹಿತಃ |
ವಿದ್ವಾನ್ ಕಃ ಕಃ ಸಮರ್ಥಶ್ಚ ಕಶ್ಚೈಕಪ್ರಿಯದರ್ಶನಃ ||
ಆತ್ಮವಾನ್ ಕೋ ಜಿತಕ್ರೋಧೋ ದ್ಯುತಿಮಾನ್ ಕೋಽನಸೂಯಕಃ |
ಕಸ್ಯ ಬಿಭ್ಯತಿ ದೇವಾಶ್ಚ ಜಾತರೋಷಸ್ಯ ಸಂಯುಗೇ ||
ಏತದಿಚ್ಛಾಮ್ಯಹಂ ಶ್ರೋತುಂ ಪರಂ ಕೌತೂಹಲಂ ಹಿ ಮೇ |
ಮಹರ್ಷೇ ತ್ವಂ ಸಮರ್ಥೋಽಸಿ ಜ್ಞಾತುಮೇವಂವಿಧಂ ನರಮ್ || (೧.೧.೨-೫)
“ಮಹರ್ಷಿಗಳೇ, ಈಗ ನಮ್ಮೀ ಲೋಕದಲ್ಲಿ ಗುಣವಂತನೂ ವೀರನೂ ಆದ ಮನುಷ್ಯನು ಇದ್ದಾನೆಯೇ? ಅವನು ಧರ್ಮವನ್ನು ತಿಳಿದವನೂ ಕೃತಜ್ಞನೂ ಆಗಿರಬೇಕು. ಸತ್ಯ ಹೇಳುವವನೂ ದೃಢಸಂಕಲ್ಪನೂ ಆಗಿರಬೇಕು. ಅವನ ನಡೆವಳಿಕೆ ಪ್ರಶಸ್ತವಾಗಿರಬೇಕು. ಆತ ಎಲ್ಲ ಜೀವಿಗಳ ಹಿತವನ್ನು ಬಯಸುವವನೂ ಪಂಡಿತನೂ ಕಾರ್ಯದಕ್ಷನೂ ಆಗಿರಬೇಕು. ಒಮ್ಮೆ ತನ್ನನ್ನು ಕಂಡ ಜನರಿಗೆ ಆನಂದವನ್ನು ಉಂಟುಮಾಡುವ ರೂಪ ಅವನದ್ದಾಗಿರಬೇಕು. ಅವನು ಧೈರ್ಯಶಾಲಿಯಾಗಿದ್ದರೂ ಕ್ರೋಧವನ್ನು ಗೆದ್ದಿರಬೇಕು. ತೇಜಸ್ವಿಯೂ ಇತರರನ್ನು ಕಂಡು ಕರುಬದವನೂ ಆಗಿರಬೇಕು. ಆತ ಮುನಿದು ಯುದ್ಧಕ್ಕೆ ನಿಂತರೆ ದೇವತೆಗಳೂ ಹೆದರಬೇಕು.”
ಸುದೀರ್ಘವಾದ ಈ ಪ್ರಶ್ನಾವಳಿಗೆ ನಾರದರು ಕೊಟ್ಟ ಉತ್ತರ: ಶ್ರೀರಾಮ.
ವಾಲ್ಮೀಕಿಮುನಿಗಳ ಪ್ರಶ್ನೆಯಲ್ಲಿ ಎರಡು ಅಂಶಗಳು ಮುಖ್ಯವಾಗಿವೆ - ಅವರು ತಿಳಿಯಬಯಸಿದ್ದು ದೇವರನ್ನಲ್ಲ, ಮನುಷ್ಯನನ್ನು; ಯಾವುದೋ ಕಾಲದಲ್ಲಿ ಆಗಿಹೋದವನನ್ನಲ್ಲ, ತಮ್ಮ ಕಾಲದಲ್ಲಿ ಬಾಳುತ್ತಿರುವವನನ್ನು. ದೇವತೆಗಳ ರೀತಿ-ನೀತಿಗಳು ಮಾನವರಿಗೆ ಎಟುಕವು. ಆದರೆ ಮನುಷ್ಯನವು ಹೀಗಲ್ಲ. ಅವು ಎಷ್ಟೇ ಎತ್ತರದ ಸ್ತರದಲ್ಲಿದ್ದರೂ ಕೃತಿಸಾಧ್ಯವೆನಿಸುತ್ತವೆ; ಹೀಗಾಗಿಯೇ ಇತರ ಮಾನವರಿಗೆ ಸ್ಫೂರ್ತಿಪ್ರದಗಳಾಗುತ್ತವೆ. ಈ ಬಗೆಯ ಸ್ಫೂರ್ತಿಯನ್ನು ನೀಡಿ ಸಮಾಜಕ್ಕೆ ಮೇಲ್ಪಂಕ್ತಿಯನ್ನು ಹಾಕಿಕೊಡಲು ಜೀವಂತ ವ್ಯಕ್ತಿಯೇ ಸಮರ್ಥ. ಸಾಂಸ್ಥಿಕ ವ್ಯವಸ್ಥೆಗಳೂ ಸಾಮೂಹಿಕ ಉದ್ಯಮಗಳೂ ಸಾಧಿಸಲಾಗದ್ದನ್ನು ವ್ಯಕ್ತಿಮಾಹಾತ್ಮ್ಯ ಸಾಧಿಸಬಲ್ಲುದು. ಆದುದರಿಂದಲೇ ವಾಲ್ಮೀಕಿಮುನಿಗಳು ರಕ್ತ-ಮಾಂಸಗಳು ತುಂಬಿದ ಮಾನವನನ್ನು ತಿಳಿಯಬಯಸಿದ್ದು. ಶ್ರೀರಾಮನಲ್ಲಿ ಅವರಿಗೆ ಅಂಥ ವ್ಯಕ್ತಿ ಸಿಕ್ಕನು. ಅವರು ಆತನ ಚರಿತ್ರೆಯನ್ನು ಕಾವ್ಯವಾಗಿ ರಚಿಸಿ ಎಲ್ಲ ಕಾಲಕ್ಕೂ ಅವನು ಸಲ್ಲುವಂತೆ ಮಾಡಿದರು. ಮಹಾಕಾವ್ಯ ಎಂದೂ ಪಳೆಯುಳಿಕೆ ಆಗದಷ್ಟೆ!
ಅಯೋಧ್ಯಾಕಾಂಡದ ಪ್ರಾರಂಭದಲ್ಲಿ ವಾಲ್ಮೀಕಿಮುನಿಗಳು ಬಣ್ಣಿಸಿರುವ ಶ್ರೀರಾಮನ ಗುಣಗಳು ವಿಶೇಷವಾಗಿವೆ; ಅವನ ಇಡಿಯ ಬದುಕಿಗೆ ಕನ್ನಡಿಯಂತಿವೆ. ಅವುಗಳಲ್ಲಿ ಕೆಲವನ್ನೀಗ ಪರಿಶೀಲಿಸಬಹುದು:
ಸ ತು ನಿತ್ಯಂ ಪ್ರಶಾಂತಾತ್ಮಾ ಮೃದುಪೂರ್ವಂ ಚ ಭಾಷತೇ |
ಉಚ್ಯಮಾನೋಽಪಿ ಪರುಷಂ ನೋತ್ತರಂ ಪ್ರತಿಪದ್ಯತೇ ||
ಕಥಂಚಿದುಪಕಾರೇಣ ಕೃತೇನೈಕೇನ ತುಷ್ಯತಿ |
ನ ಸ್ಮರತ್ಯಪಕಾರಾಣಾಂ ಶತಮಪ್ಯಾತ್ಮವತ್ತಯಾ || (೨.೧.೧೦-೧೧)
ಬುದ್ಧಿಮಾನ್ ಮಧುರಾಭಾಷೀ ಪೂರ್ವಾಭಾಷೀ ಪ್ರಿಯಂವದಃ |
ವೀರ್ಯವಾನ್ನ ಚ ವೀರ್ಯೇಣ ಮಹತಾ ಸ್ವೇನ ವಿಸ್ಮಿತಃ ||
ನ ಚಾನೃತಕಥೋ ವಿದ್ವಾನ್ ವೃದ್ಧಾನಾಂ ಪ್ರತಿಪೂಜಕಃ |
ಅನುರಕ್ತಃ ಪ್ರಜಾಭಿಶ್ಚ ಪ್ರಜಾಶ್ಚಾಪ್ಯನುರಂಜತೇ || (೨.೧.೧೩-೧೪)
ಕುಲೋಚಿತಮತಿಃ ಕ್ಷಾತ್ತ್ರಂ ಧರ್ಮಂ ಸ್ವಂ ಬಹುಮನ್ಯತೇ |
ನಾಶ್ರೇಯಸಿ ರತೋ ಯಶ್ಚ ನ ವಿರುದ್ಧಕಥಾರುಚಿಃ |
ಉತ್ತರೋತ್ತರಯುಕ್ತೀನಾಂ ವಕ್ತಾ ವಾಚಸ್ಪತಿರ್ಯಥಾ ||
ಲೋಕೇ ಪುರುಷಸಾರಜ್ಞಃ ಸಾಧುರೇಕೋ ವಿನಿರ್ಮಿತಃ || (೨.೧.೧೬-೧೮)
ಧರ್ಮಾರ್ಥಕಾಮತತ್ತ್ವಜ್ಞಃ ಸ್ಮೃತಿಮಾನ್ ಪ್ರತಿಭಾನವಾನ್ |
ಲೌಕಿಕೇ ಸಮಯಾಚಾರೇ ಕೃತಕಲ್ಪೋ ವಿಶಾರದಃ ||
ನಿಭೃತಃ ಸಂವೃತಾಕಾರೋ ಗುಪ್ತಮಂತ್ರಃ ಸಹಾಯವಾನ್ |
ಅಮೋಘಕ್ರೋಧಹರ್ಷಶ್ಚ ತ್ಯಾಗಸಂಗ್ರಹಕಾಲವಿತ್ || (೨.೧.೨೨-೨೩)
ನಿಸ್ತಂದ್ರಿರಪ್ರಮತ್ತಶ್ಚ ಸ್ವದೋಷಪರದೋಷವಿತ್ || (೨.೧.೨೪)
ಸತ್ಸಂಗ್ರಹಪ್ರಗ್ರಹಣೇ ಸ್ಥಾನವಿನ್ನಿಗ್ರಹಸ್ಯ ಚ |
ಅರ್ಥಧರ್ಮೌ ಚ ಸಂಗೃಹ್ಯ ಸುಖತಂತ್ರೋ ನ ಚಾಲಸಃ || (೨.೧.೨೬-೨೭)
ವೈಹಾರಿಕಾಣಾಂ ಶಿಲ್ಪಾನಾಂ ವಿಜ್ಞಾತಾರ್ಥವಿಭಾಗವಿತ್ | (೨.೧.೨೮)
ನ ಚಾವಮಂತಾ ಭೂತಾನಾಂ ನ ಚ ಕಾಲವಶಾನುಗಃ || (೨.೧.೩೧)
“ಅವನು ಪ್ರಶಾಂತಸ್ವಭಾವದವನು. ಎಲ್ಲರೊಡನೆ ಮೃದುವಾಗಿ ಮಾತನಾಡುತ್ತಿದ್ದ. ತನಗೆ ಯಾರಾದರೂ ಕೆಟ್ಟ ಮಾತುಗಳನ್ನು ಆಡಿದರೂ ಅದಕ್ಕೆ ಪ್ರತಿ ಹೇಳುತ್ತಿರಲಿಲ್ಲ. ಯಾರಾದರೂ ಅವನಿಗೆ ಚಿಕ್ಕ ಉಪಕಾರವನ್ನು ಮಾಡಿದರೂ ಅದರಿಂದ ಸಂತೋಷ ಪಡುತ್ತಿದ್ದ; ನೂರಾರು ಅಪಕಾರಗಳನ್ನು ಮಾಡಿದರೂ ತೂಕದ ವ್ಯಕ್ತಿತ್ವವುಳ್ಳ ಅವನು ಅವುಗಳನ್ನು ಗಣಿಸುತ್ತಿರಲಿಲ್ಲ. ಮೇಧಾವಿಯಾದ ಆತ ಜನರನ್ನು ಕಂಡಾಗ ತಾನೇ ಮೊದಲು ಮಾತನಾಡಿಸುತ್ತಿದ್ದ. ಅವನ ಮಾತುಗಳು ಮಧುರವಾಗಿ, ಪ್ರಿಯವಾಗಿ ಇರುತ್ತಿದ್ದುವು. ಮಹಾಪರಾಕ್ರಮಿಯಾಗಿದ್ದರೂ ತಾನು ಶೂರನೆಂಬ ಜಂಭವಿರಲಿಲ್ಲ. ಸುಳ್ಳು ಅವನ ಬಳಿ ಸುಳಿಯುತ್ತಿರಲಿಲ್ಲ. ಶಾಸ್ತ್ರಗಳಲ್ಲಿ ಆಳವಾದ ತಿಳಿವುಳ್ಳ ಅವನು ಹಿರಿಯರನ್ನು ಗೌರವಿಸುತ್ತಿದ್ದ. ಅವನಿಗೆ ಪ್ರಜೆಗಳೆಂದರೆ ಪ್ರೀತಿ, ಪ್ರಜೆಗಳಿಗೂ ಅವನೆಂದರೆ ಪ್ರೀತಿ. ದೀನರಲ್ಲಿ ದಯೆಯುಳ್ಳ ಅವನು ಧರ್ಮವನ್ನು ತಿಳಿದವನೂ ನಿಯಮವಂತನೂ ಇತರರ ಸೊತ್ತನ್ನು ಬಯಸದ ಶುದ್ಧಹಸ್ತನೂ ಆಗಿದ್ದ. ತನ್ನ ಕುಲಕ್ಕೆ ಸಹಜವೂ ಯುಕ್ತವೂ ಆದ ಕ್ಷಾತ್ತ್ರಧರ್ಮದಲ್ಲಿ ವಿಶೇಷವಾದ ಆದರವನ್ನಿರಿಸಿದ್ದ. ಶ್ರೇಯಸ್ಕರವಲ್ಲದ ಕೆಲಸಗಳಲ್ಲಿ ಅವನಿಗೆ ಪ್ರವೃತ್ತಿಯೇ ಇರಲಿಲ್ಲ. ಕುತ್ಸಿತವಾದ ವಿಷಯದ ಬಗೆಗೆ ಮಾತನಾಡಲು ಅವನಿಗೆ ಎಳ್ಳಷ್ಟೂ ಇಷ್ಟವಿರಲಿಲ್ಲ. ಒಂದರ ಮೇಲೆ ಒಂದು ಯುಕ್ತಿಯನ್ನು ಹೂಡಿ ಬೃಹಸ್ಪತಿಯಂತೆ ವಾಕ್ಕೌಶಲವನ್ನು ಮೆರೆಸುತ್ತಿದ್ದ. ವ್ಯಕ್ತಿಗಳ ಯೋಗ್ಯತೆ ಅವನಿಗೆ ಚೆನ್ನಾಗಿ ತಿಳಿಯುತ್ತಿತ್ತು. ಧರ್ಮ-ಅರ್ಥ-ಕಾಮಗಳನ್ನು ಕಾಲಕ್ಕೆ ತಕ್ಕಂತೆ ಅನ್ವಯಿಸುವ ಸಾಮರ್ಥ್ಯ ಅವನಿಗಿತ್ತು. ಒಳ್ಳೆಯ ನೆನಪಿನ ಶಕ್ತಿ ಉಳ್ಳ ಅವನು ಮಹಾಪ್ರತಿಭಾಶಾಲಿ. ಲೌಕಿಕ ವ್ಯವಹಾರದಲ್ಲಿ ಹೇಗೋ ಸಾಂಪ್ರದಾಯಿಕ ವಿಷಯಗಳಲ್ಲಿಯೂ ಹಾಗೆ ನುರಿತಿದ್ದ. ಹೀಗಿದ್ದರೂ ಆತ ವಿನಯಶಾಲಿ. ತನ್ನ ಸುಖವನ್ನಾಗಲಿ, ದುಃಖವನ್ನಾಗಲಿ ಹೊರಗೆ ತೋರಿಸಿಕೊಳ್ಳುತ್ತಿರಲಿಲ್ಲ. ರಾಜ್ಯತಂತ್ರದ ಆಲೋಚನೆಗಳನ್ನು ಗುಟ್ಟಾಗಿರಿಸುತ್ತಿದ್ದ. ಅವನಿಗೆ ಸಮರ್ಥ ಮಂತ್ರಿಗಳಿದ್ದರು. ಅವನ ಕೋಪವೂ ಹರ್ಷವೂ ತಕ್ಕ ಫಲವನ್ನು ಕೊಡದೆ ಎಂದೂ ಹುಸಿ ಹೋಗುತ್ತಿರಲಿಲ್ಲ. ಸಂಪತ್ತನ್ನು ಯಾವಾಗ ಗಳಿಸಬೇಕು, ಯಾವಾಗ ದಾನ ಮಾಡಬೇಕು ಎಂಬುದನ್ನು ಚೆನ್ನಾಗಿ ಬಲ್ಲವನಾಗಿದ್ದ. ಕರ್ತವ್ಯದಲ್ಲಿ ಆಲಸ್ಯ ಇಲ್ಲದ ಅವನಿಂದ ಪ್ರಮಾದವು ನಡೆದದ್ದೇ ಇಲ್ಲ. ತನ್ನಲ್ಲಿಯೂ ಇತರರಲ್ಲಿಯೂ ಇರಬಹುದಾದ ಲೋಪ-ದೋಷಗಳನ್ನು ಅರಿತಿದ್ದ. ಸಜ್ಜನರಿಗೆ ಆಶ್ರಯ ನೀಡಿ ರಕ್ಷಿಸುವುದರಲ್ಲಿಯೂ ದುಷ್ಟರನ್ನು ದಂಡಿಸುವುದರಲ್ಲಿಯೂ ಆತ ನಿಷ್ಣಾತ. ಧರ್ಮಾರ್ಥಗಳಿಗೆ ಧಕ್ಕೆಯಾಗದಂತೆ ಅವನು ಸುಖವನ್ನು ಅನುಭವಿಸುತ್ತಿದ್ದ. ಮನೋರಂಜಕ ಕಲೆಗಳಾದ ಸಂಗೀತ, ಶಿಲ್ಪ ಮೊದಲಾದುವುಗಳಲ್ಲಿ ಅವನಿಗೆ ನೈಪುಣ್ಯವಿದ್ದಿತು. ಅವನು ಯಾರನ್ನೂ ಅವಮಾನಿಸುತ್ತಿರಲಿಲ್ಲ, ಎಂದೂ ಸಮಯಸಾಧಕ ಎನಿಸಿರಲಿಲ್ಲ.”
ಶ್ರೀರಾಮನ ಇಡಿಯ ಬದುಕೇ ಈ ಗುಣಗಳ ಆಡುಂಬೊಲ.
ವಿದ್ಯೆ, ಶೀಲ. ವಿಶ್ವಾಮಿತ್ರರು ಯಾಗರಕ್ಷಣೆಗಾಗಿ ತನ್ನನ್ನೂ ಲಕ್ಷ್ಮಣನನ್ನೂ ಕರೆದೊಯ್ದಾಗ ದಾರಿಯುದ್ದಕ್ಕೂ ವಿವಿಧ ವ್ಯಕ್ತಿ-ದೇಶಗಳ, ಕಥೆ-ಐತಿಹ್ಯಗಳ ಬಗೆಗೆ ಪ್ರಶ್ನಿಸಿ ತಿಳಿದುಕೊಂಡ. ಅವರು ಉಪದೇಶಿಸಿದ ಶಸ್ತ್ರಾಸ್ತ್ರಗಳನ್ನು ಪರಿಗ್ರಹಿಸಿ ಪಳಗಿಸಿಕೊಂಡ. ಕಾಡಿನಲ್ಲಿ ಇದ್ದಾಗಲೂ ಋಷಿ-ಮುನಿಗಳ ಸಂಪರ್ಕವಿಟ್ಟುಕೊಂಡು ಅವರೊಡನೆ ಮಾತನಾಡುತ್ತ ಜ್ಞಾನವನ್ನು ಹೆಚ್ಚಿಸಿಕೊಳ್ಳುತ್ತಿದ್ದ. ಯಾವ ಕೆಲಸವನ್ನೂ ಭಾರವೆಂದು ಭಾವಿಸದೆ ಅದನ್ನು ಪಟುವಾಗಿ, ಲೀಲೆಯಿಂದ ನಿರ್ವಹಿಸಿ ‘ಅಕ್ಲಿಷ್ಟಕರ್ಮಾ’ ಎನಿಸಿಕೊಂಡಿದ್ದ. ರಾತ್ರಿ ಕಳೆದು ಹಗಲಾಗುವುದರೊಳಗೆ ಯುವರಾಜನಾಗಲಿದ್ದ ತಾನು ವನವಾಸಿಯಾಗಬೇಕಾಗಿ ಬಂದರೂ ಚಿತ್ತವಿಕಾರವನ್ನು ಹೊಂದಲಿಲ್ಲ. ಕಾಡಿಗೆ ತೆರಳುವ ತನ್ನ ಆ ಹೊತ್ತಿನ ನಿರ್ಧಾರ ಸದ್ಗುಣದಿಂದ ಮೂಡಿದೆ; ತಡ ಮಾಡಿದರೆ ಆ ಗುಣ ಮರೆಯಾಗಬಹುದು, ಆಗ ಅದನ್ನು ಯಾರು ಕೊಟ್ಟಾರೆಂದು ದಶರಥನಿಗೆ ತಿಳಿಹೇಳಿ ಕೂಡಲೆ ಹೊರಟ. ತಂದೆ-ತಾಯಿಯರ ತಪ್ಪನ್ನು ತಾನು ತಿದ್ದಿದ; ಆದರೆ ತಾನು ಅವರಿಗಿಂತ ಮಿಗಿಲೆಂಬಂತೆ ಎಂದೂ ವರ್ತಿಸಲಿಲ್ಲ. ಇನ್ನು ಆಚಾರ-ಸಂಪ್ರದಾಯಗಳನ್ನು ಶ್ರದ್ಧೆಯಿಂದ ಪಾಲಿಸಿ ತನ್ನ ಪಾಲಿಗೆ ಚಿತ್ತಶುದ್ಧಿಯನ್ನೂ ಪ್ರಜೆಗಳ ಪಾಲಿಗೆ ಆದರ್ಶವನ್ನೂ ಕಲ್ಪಿಸಿದ. ಕೈಕೇಯಿಯ ಮಾತಿನಂತೆ ಕಾಡಿನಲ್ಲಿ ಇದ್ದರಷ್ಟೇ ಸಾಕಾಗುತ್ತಿತ್ತು. ಆದರೆ ರಾಮ ಅವಳ ಇಂಗಿತವನ್ನರಿತು ತನಗೆ ತೊಡಕಾದರೂ ವೈಖಾನಸವ್ರತವನ್ನು ಸ್ವೀಕರಿಸಿ ಜಟಾ-ವಲ್ಕಲಗಳನ್ನು ಧರಿಸಿ ಕಂದ-ಮೂಲಗಳನ್ನು ತಿನ್ನುತ್ತ ಕಾಡಿನಲ್ಲಿದ್ದ. ಶರಭಂಗ ಮಹರ್ಷಿ ತನ್ನ ಪುಣ್ಯವನ್ನು ಕೊಡುವುದಾಗಿ ಹೇಳಿದಾಗ ಬೇಡವೆಂದು ಅಪರಿಗ್ರಹವನ್ನು ಮೆರೆದ. ಗುಹನ ನೌಕೆ ಏರುವಾಗ ಮಂತ್ರ ಹೇಳುವುದನ್ನಾಗಲಿ, ಲಕ್ಷ್ಮಣ ನಿರ್ಮಿಸಿದ ಗೃಹವನ್ನು ಪ್ರವೇಶಿಸುವ ಮುನ್ನ ವಾಸ್ತುಶಾಂತಿ ಮಾಡುವುದನ್ನಾಗಲಿ, ತಂದೆ ಗತಿಸಿದ ಸುದ್ದಿ ತಿಳಿದಾಗ ಇಂಗುದೀಪಿಣ್ಯಾಕದಿಂದ ಪಿಂಡವನ್ನು ಅರ್ಪಿಸುವುದನ್ನಾಗಲಿ ಮರೆಯಲಿಲ್ಲ. ಸುಗ್ರೀವನಿಗೂ ವಿಭೀಷಣನಿಗೂ ತಾನು ಪಟ್ಟಕಟ್ಟದೆ ಲಕ್ಷ್ಮಣನಿಂದ ರಾಜ್ಯಾಭಿಷೇಕ ಮಾಡಿಸಿದ. ಭರತನೇ ಬಂದು ರಾಜ್ಯವನ್ನು ಸ್ವೀಕರಿಸಲು ಬೇಡಿದರೂ ಒಪ್ಪಲಿಲ್ಲ. ಹದಿನಾಲ್ಕು ವರ್ಷ ಕಳೆದ ಮೇಲೂ “ಇಷ್ಟು ಕಾಲ ರಾಜ್ಯವನ್ನು ನಿರ್ವಹಿಸಿ ಅದರ ಮೇಲೆ ಭರತನಿಗೆ ಇಚ್ಛೆಯಾಗಿದ್ದರೆ ಅವನೇ ಅದನ್ನು ಆಳಲಿ” ಎಂದು ನಿರ್ಮಮತೆಯಿಂದ ನುಡಿದ. ಎಂಥ ಕಷ್ಟದ ಸಂದರ್ಭದಲ್ಲಿಯೂ ಮನಃಪ್ರಸನ್ನತೆಯನ್ನು ಉಳಿಸಿಕೊಂಡ. ಕಾಡಿಗೆ ತೆರಳುವ ಮುನ್ನ ಸರ್ವಸ್ವವನ್ನೂ ದಾನ ಮಾಡುವಾಗ ತ್ರಿಜಟನೆಂಬ ವಿಪ್ರನೊಡನೆ ಲಘುಹಾಸ್ಯ ಮಾಡಿ ಅಪಾರ ಸಂಖ್ಯೆಯ ಧೇನುಗಳನ್ನು ಅವನಿಗೆ ನೀಡಿದ. ಶಬರಿ, ಅಹಲ್ಯೆಯರನ್ನು ಅನುಗ್ರಹಿಸಿ ಉದ್ಧರಿಸಿದ. ಸೀತೆಗಾಗಿ ಪ್ರಾಣ ಬಿಟ್ಟ ಜಟಾಯುವನ್ನು ಬಂಧುಗಿಂತ ಹೆಚ್ಚಾಗಿ ಕಂಡು ಕುಗ್ಗಿದ ಮನಸ್ಸಿನಿಂದ ಸಂಸ್ಕಾರವನ್ನು ಮಾಡಿದ. ತನ್ನನ್ನು ಕ್ಲೇಶಕೂಪಕ್ಕೆ ನೂಕಿದ ಕೈಕೇಯಿಯ ವಿಷಯದಲ್ಲಿ ವಿಷ ಕಾರದೆ ಅವಳನ್ನು ತಾನೂ ಕ್ಷಮಿಸಿದ; ಅವಳನ್ನು ಚೆನ್ನಾಗಿ ನೋಡಿಕೊಳ್ಳಲು ಭರತನಿಗೂ ಹೇಳಿದ. ವಿಭೀಷಣ ತನ್ನಲ್ಲಿಗೆ ಬಂದಾಗ ಅವನನ್ನು ಶಂಕಿಸದೆ ಅಭಯದಾನ ಮಾಡಿದ. ರಾವಣನನ್ನು ವಧಿಸಿದ ಬಳಿಕ ‘ನೀನು ನಿನ್ನ ಅಣ್ಣನ ಸಂಸ್ಕಾರವನ್ನು ಮಾಡದಿದ್ದರೆ ನಾನೇ ಮಾಡುತ್ತೇನೆ’ ಎಂಬ ಆಶಯದ ಮಾತುಗಳನ್ನಾಡಿ ಅವನಿಂದ ಆಗಬೇಕಿದ್ದ ಕೆಲಸವನ್ನು ಮಾಡಿಸಿದ. ಹೀಗಾಗಿ “ರಿಪೂಣಾಮಪಿ ವತ್ಸಲ” ಎಂಬ ಯಥಾರ್ಥ ಸಂಬೋಧನೆಗೆ ಅರ್ಹನಾದ.
ಪ್ರೀತಿ, ಸ್ನೇಹ. ರಾಮನಲ್ಲಿ ಸ್ವಲ್ಪವೂ ದರ್ಪವಿರಲಿಲ್ಲ. ಅವನು ಎಲ್ಲರನ್ನೂ ಪ್ರೀತಿಯಿಂದ ಕಂಡು ಎಲ್ಲರೊಡನೆಯೂ ಬಾಂಧವ್ಯವನ್ನು ಬೆಸೆದ. ತಮ್ಮಂದಿರಾದ ಲಕ್ಷ್ಮಣ, ಭರತ ಮತ್ತು ಶತ್ರುಘ್ನರನ್ನು ಹೇಗೋ ಗುಹ, ಸುಗ್ರೀವ ಮತ್ತು ವಿಭೀಷಣರನ್ನೂ ಹಾಗೆಯೇ ಸೋದರಭಾವದಿಂದ ಕಂಡು ನಡಸಿಕೊಂಡ. ಕಪಿ-ರಾಕ್ಷಸ ಎಂಬ ಭೇದಭಾವದಿಂದ ವರ್ತಿಸಲಿಲ್ಲ. ಹನೂಮಂತನ ಉಪಕಾರಕ್ಕೆ ಪ್ರತಿಯಾಗಿ ಏನನ್ನೂ ಮಾಡಲಾಗದೆ “ಏಷ ಸರ್ವಸ್ವಭೂತಸ್ತು ಪರಿಷ್ವಂಗೋ ಹನೂಮತಃ” (೬.೧.೧೪) ಎಂದು ಅಪ್ಪಿಕೊಂಡ. ರಾವಣವಧವಾದ ಮೇಲೆ ಸೀತೆ ಬರುವುದನ್ನು ನೋಡಲು ಕಪಿಗಳೆಲ್ಲ ಉತ್ಸುಕರಾಗಿ ಮುನ್ನುಗ್ಗಿ ಸುಗ್ರೀವ ಅವರನ್ನು ಗದರಿಸಿದಾಗ, “ಹಾಗೆಲ್ಲ ಮಾಡಬೇಡ, ಕಪಿಗಳೆಲ್ಲ ನನ್ನ ಸ್ವಜನರು!” ಎಂದು ಭಾವಾರ್ದ್ರವಾಗಿ ನುಡಿದ. ತಂದೆ-ತಾಯಿಯರ ವಿಷಯದಲ್ಲಂತೂ ಅಮಿತವಾದ ಪ್ರೀತಿ-ಗೌರವಗಳನ್ನು ತಳೆದಿದ್ದ. ಕಾಡಿನಲ್ಲಿ ತನ್ನನ್ನು ಕಾಣಲು ಭರತ ಬಂದಾಗ ಅವನನ್ನು ಮಗುವಿನಂತೆ ತೊಡೆಯ ಮೇಲೆ ಕುಳ್ಳಿರಿಸಿಕೊಂಡು ವಾತ್ಸಲ್ಯದಿಂದ ಮಾತನಾಡಿಸಿದ. “ನ ಸರ್ವೇ ಭ್ರಾತರಸ್ತಾತ ಭವಂತಿ ಭರತೋಪಮಾಃ” (೬.೧೩೧.೧೫) ಎಂದು ಪರೋಕ್ಷದಲ್ಲಿ ಅವನ ಬಗೆಗೆ ಮೆಚ್ಚುಮಾತನ್ನಾಡಿದ. ಲಕ್ಷ್ಮಣನ ಬಗೆಗಂತೂ ಅಪಾರವಾದ ಪ್ರೀತಿಯಿರಿಸಿದ್ದ. ತನಗೆ ರಾಜ್ಯಾಭಿಷೇಕ ಆಗಲಿರುವುದೆಂದು ತಿಳಿದಾಗ “ನನ್ನ ಬದುಕು, ರಾಜ್ಯ ಎಲ್ಲವನ್ನೂ ನಿನಗಾಗಿ ಬಯಸುತ್ತೇನೆ” ಎಂದು ಲಕ್ಷ್ಮಣನಿಗೆ ಉದಾರವಾಗಿ ಹೇಳಿದ. ಕಷ್ಟಪಟ್ಟು ಹುಡುಕಿದರೆ ಸೀತೆಯಂಥ ನಾರಿ ಸಿಗಬಹುದು; ಆದರೆ ಲಕ್ಷ್ಮಣನಂತೆ ರಣಾಂಗಣದಲ್ಲಿ ಕಾರ್ಯನಿಷ್ಠನಾಗಿ ಸಹಕರಿಸುವ ತಮ್ಮ ದೊರೆಯುವುದಿಲ್ಲ (೬.೧೦೨.೧೨-೧೩) ಎಂದು ತನ್ನ ಮನದಿಂಗಿತವನ್ನು ಬಿಚ್ಚಿಟ್ಟ. ಸೀತೆಯನ್ನಂತೂ “ಪ್ರಾಣೇಭ್ಯೋಽಪಿ ಗರೀಯಸೀ,” ತನ್ನ ಪ್ರಾಣಕ್ಕಿಂತಲೂ ಮಿಗಿಲಾದವಳೆಂದು ಭಾವಿಸಿ ಕಣ್ಣಲ್ಲಿ ಕಣ್ಣಿಟ್ಟು ಕಾಪಾಡಿಕೊಂಡ. ಕೈಕೇಯಿ ನಾರುಬಟ್ಟೆಯನ್ನು ತಂದುಕೊಟ್ಟಾಗ ಅದನ್ನುಡಲು ತಿಳಿಯದ ತನ್ನ ಪತ್ನಿಗೆ ತಾನೇ ಸಭಾಮಧ್ಯದಲ್ಲಿ ಸೀರೆಯನ್ನುಡಿಸಿ ಕಸಿವಿಸಿಯ ಪ್ರಸಂಗವನ್ನು ಹಗುರಾಗಿಸಿದ; ಸೀತೆಗೆ ಯಾವ ಸಂಕಟ ಎದುರಾದರೂ ತಾನದನ್ನು ಸಹಿಸುವುದಿಲ್ಲ ಎಂದು ತೋರ್ಪಡಿಸಿದ. ಇನ್ನು ಕಾಡಿನಲ್ಲಿ ಕಾಕಾಸುರ ಅವಳನ್ನು ಕೆಣಕಿದಾಗ ಹಿಂದೆ-ಮುಂದೆ ಆಲೋಚಿಸದೆ ಅವನ ಮೇಲೆ ಬ್ರಹ್ಮಾಸ್ತ್ರವನ್ನೇ ಪ್ರಯೋಗಿಸಿದ - ಗುಬ್ಬಿಯ ಮೇಲೆ ಬ್ರಹ್ಮಾಸ್ತ್ರ! ಅವಳ ವಿಯೋಗದಿಂದ ಅತ್ಯಂತ ಖಿನ್ನನಾದ. “ಸೀತೆಯಿಲ್ಲದ ಸ್ವರ್ಗವೂ ಶೂನ್ಯ” (೩.೬೨.೧೬) ಎಂದು ವಿಲಪಿಸಿದ.
ಶೌರ್ಯ. ಚಿಕ್ಕ ವಯಸ್ಸಿನಲ್ಲಿಯೇ ರಾಕ್ಷಸರಾದ ಸುಬಾಹು-ಮಾರೀಚರನ್ನು ಜಯಿಸಿದ್ದ. ಮಾರೀಚನಿಗೆ ರಾಮನ ಹೆಸರಿರಲಿ, ರ-ಕಾರದಿಂದ ಪ್ರಾರಂಭವಾಗುವ ಯಾವ ಶಬ್ದ ಕೇಳಿದರೂ ಮೈ ನಡುಗುತ್ತಿತ್ತು! ಕ್ಷತ್ತ್ರಿಯಾಂತಕನಾದ ಪರಶುರಾಮನ ಆಟೋಪವನ್ನು ಅಳಿಸಿದ. ಖರ-ದೂಷಣರೇ ಮೊದಲಾದ ಹದಿನಾಲ್ಕು ಸಾವಿರ ರಕ್ಕಸರನ್ನು ಏಕಾಂಗವೀರನಾಗಿ ಸದೆಬಡೆದ. ವನವಾಸದಲ್ಲೊಮ್ಮೆ “ನಾನು ಕ್ರುದ್ಧನಾದರೆ ಒಬ್ಬನೇ ಇಡಿಯ ಭೂಮಂಡಲವನ್ನು ಜಯಿಸಬಲ್ಲೆ. ಆದರೆ ಪರಾಕ್ರಮವನ್ನು ಪ್ರದರ್ಶಿಸುವ ಸಮಯವಿದಲ್ಲ, ಅದಕ್ಕೆ ಆಸ್ಪದವಿಲ್ಲ ಎಂದು ಸುಮ್ಮನಿದ್ದೇನೆ” ಎಂದು ಲಕ್ಷ್ಮಣನಿಗೆ ಹೇಳುತ್ತಾನೆ. “ನನು ವೀರ್ಯಮಕಾರಣಮ್” (೨.೫೩.೨೫) ಎಂಬ ಅವನ ಮಾತಿನಲ್ಲಿ ತನ್ನ ಸಾಮರ್ಥ್ಯದ ಬಗೆಗಿನ ವಿಶ್ವಾಸದಂತೆಯೇ ಆತ್ಮಸಂಯಮವೂ ಕಾಣಿಸುತ್ತದೆ. ತನ್ನ ಬಲದ ಬಗೆಗೆ ಸುಗ್ರೀವನಿಗೆ ನಂಬಿಕೆ ಮೂಡಿಸಲು ಏಳು ತಾಲವೃಕ್ಷಗಳನ್ನು ಒಂದೇ ಬಾಣದಿಂದ ಛೇದಿಸಿದ್ದಲ್ಲದೆ, ದುಂದುಭಿಯ ಅಸ್ಥಿಯನ್ನು ಪಾದಾಂಗುಷ್ಠದಿಂದ ಒದ್ದೆಸೆಯುತ್ತಾನೆ. ಲಂಕೆಗೆ ಹೋಗಲು ಸಮುದ್ರರಾಜ ತಡೆಯಾದಾಗ, “ಬಿಲ್ಲು ತಾ ಲಕ್ಷ್ಮಣ; ಈ ಸಾಗರವನ್ನು ಒಣಗಿಸಿಬಿಡುತ್ತೇನೆ! ಕಪಿಗಳು ಕಾಲ್ನಡಿಗೆಯಿಂದಲೇ ದಾಟಲಿ” ಎಂದು ಗರ್ಜಿಸುತ್ತಾನೆ. ಮೊದಲ ದಿನ ತನ್ನೊಡನೆ ಯುದ್ಧ ಮಾಡಿ ದಣಿದು ನಿಃಶಸ್ತ್ರನಾದ ರಾವಣನಿಗೆ ಕನಿಕರಿಸಿ “ಸಾವರಿಸಿಕೊಂಡು ನಾಳೆ ಮತ್ತೆ ಬಾ” ಎನ್ನುತ್ತಾನೆ! “ಏತದಸ್ತçಬಲಂ ದಿವ್ಯಂ ಮಮ ವಾ ತ್ರ್ಯಂಬಕಸ್ಯ ವಾ” ಎಂದು ರಣಪಂಡಿತನಾಗಿ ನುಡಿದು, ಕುಂಭಕರ್ಣನೇ ಮೊದಲಾದ ರಾಕ್ಷಸರನ್ನು ಲೀಲೆಯಿಂದ ಕೊಂದು ಕಡೆಗೆ ಲೋಕಕಂಟಕನಾದ ರಾವಣನನ್ನೂ ಮುಗಿಸುತ್ತಾನೆ. ನಿಜಕ್ಕೂ “ರಾಮಃ ಸತ್ಯಪರಾಕ್ರಮಃ.”
ರಾಜ್ಯತಂತ್ರ. “ರಾಜಾ ಪ್ರಕೃತಿರಂಜನಾತ್” ಎಂಬುದು ಕಾಳಿದಾಸನ ಕಾಣ್ಕೆ. ಶ್ರೀರಾಮನ ಪ್ರಜಾಪ್ರೀತಿಯನ್ನು ಪರಿಶೀಲಿಸಿಯೇ ಅವನು ಈ ಮಾತನ್ನಾಡಿರಬಹುದು! ಕಾಡಿಗೆ ತೆರಳುವ ಮುನ್ನ ಪ್ರತಿಯೊಬ್ಬ ಪ್ರಜೆಗೂ ಏನು ಬೇಕಾಗಬಹುದೆಂದು ಯೋಚಿಸಿ ಸಮುಚಿತ ಪದಾರ್ಥಗಳನ್ನು ಅವರವರಿಗೆ ನೀಡುತ್ತಾನೆ. ಯಾವ ಮನುಷ್ಯ ರಾಮನನ್ನು ನೋಡಲಿಲ್ಲವೋ ಯಾರು ರಾಮನ ದೃಷ್ಟಿಗೆ ಬೀಳಲಿಲ್ಲವೋ ಆತ ನಿಂದಿತನೇ ಸರಿ; ಅವನ ಆತ್ಮವೇ ಅವನನ್ನು ನಿಂದಿಸುತ್ತದೆ! “ಸ್ವಾತ್ಮಾಪ್ಯೇನಂ ವಿಗರ್ಹತೇ” (೨.೧೭.೧೪-೧೫). ಹೀಗಿತ್ತು ರಾಮ ಮತ್ತು ಪ್ರಜೆಗಳ ಸಂಬಂಧ. ಆದುದರಿಂದಲೇ ಅವನು ಕಾಡಿಗೆ ಹೊರಟಾಗ ಇಡಿಯ ಅಯೋಧ್ಯೆಯೇ ಅವನನ್ನು ಹಿಂಬಾಲಿಸಿತು. ಆ ದಿನ ಚೊಚ್ಚಲು ಮಗನನ್ನು ಹಡೆದ ತಾಯಿಗೂ ಸಂತೋಷವಾಗಲಿಲ್ಲ! (೨.೪೧.೧೦). ಇನ್ನು ಆತ ಪಟ್ಟಾಭಿಷಿಕ್ತನಾದ ಮೇಲೆ ಎಲ್ಲಿ ನೋಡಿದರೂ ಪ್ರಜೆಗಳು ರಾಮನ ಸುದ್ದಿಯನ್ನೇ ಹೇಳಿಕೊಳ್ಳುತ್ತಿದ್ದರು. ರಾಮ, ರಾಮ, ರಾಮ ಎಂಬ ಮೊಳಗೇ ಎಲ್ಲೆಲ್ಲಿಯೂ. ಆಗ ಜಗತ್ತೇ ರಾಮಮಯವಾಯಿತು - “ರಾಮಭೂತಂ ಜಗತ್ ಸರ್ವಂ ರಾಮೇ ರಾಜ್ಯಂ ಪ್ರಶಾಸತಿ” (೬.೧೩೧.೧೦೨). ಅವನ ಪಾಲಿಗೆ ರಾಜ್ಯಪಾಲನೆ ಉಪಾಸನೆಯೇ ಆಗಿದ್ದಿತು - “ರಾಮೋ ರಾಜ್ಯಮುಪಾಸಿತ್ವಾ ಬ್ರಹ್ಮಲೋಕಂ ಪ್ರಯಾಸ್ಯತಿ” (೧.೧.೯೭). ಇಂಥ ರಾಜ್ಯೋಪಾಸಕನು ಮಾತ್ರ ತಾನು ಋಷಿಗಳಿಗೆ ಸಮನಾದವನು, ಧರ್ಮದಲ್ಲಿ ನೆಲೆ ನಿಂತವನು - “ವಿದ್ಧಿ ಮಾಮೃಷಿಭಿಸ್ತುಲ್ಯಂ ಕೇವಲಂ ಧರ್ಮಮಾಸ್ಥಿತಮ್” (೨.೧೯.೨೦) ಎಂದು ಹೇಳಿಕೊಳ್ಳಬಹುದು.
ಹೀಗೆ ಶ್ರೀರಾಮನು ಧರ್ಮವನ್ನು ಸಂರಕ್ಷಿಸುವ ಕವಚದಂತೆ ಇದ್ದಾನೆ. ಈ ಹೊತ್ತು ಅಯೋಧ್ಯೆಯ ಮಂದಿರದಲ್ಲಿ ಪ್ರತಿಷ್ಠಿತವಾಗಿರುವ ಆ ವರ್ಮವೇ ನಮಗೆ ಶರ್ಮವನ್ನು ಅನುಗ್ರಹಿಸಲಿ.