ಪ್ರಾಚೀನ ಭಾರತೀಯರ ಪ್ರಕೃತಿಪ್ರೀತಿಗೆ ಎಣೆಯೇ ಇಲ್ಲ. ‘ಸರ್ವಂ ಖಲ್ವಿದಂ ಬ್ರಹ್ಮ’ ಎಂಬ ಕೇವಲಾದ್ವೈತದೃಷ್ಟಿಗೆ ವಿಶ್ವವೆಲ್ಲ ಸಚ್ಚಿದಾನಂದಘನವಾಗಿ ಅನುಭವಕ್ಕೆ ಬರುವುದು ಸಹಜವೇ ತಾನೆ? ಪಾಂಚಭೌತಿಕ ಪ್ರಕೃತಿಯ ಎಲ್ಲ ಚರಾಚರ ಮತ್ತು ಜಡ-ಚೇತನ ಆಯಾಮಗಳನ್ನೂ ಅವರು ಆರಾಧಿಸುತ್ತ ಬಂದಿದ್ದಾರೆ. ವಿಶೇಷತಃ ಭೂಮಿಗೆ ಸೇರಿದ ಬೆಟ್ಟ-ಗುಡ್ಡ, ನದಿ-ನದ, ಕೆರೆ-ಕಡಲು, ಮರ-ಗಿಡ, ಪ್ರಾಣಿ-ಪಕ್ಷಿಗಳಲ್ಲಿ ನಮ್ಮವರು ಇರಿಸಿದ ಅಕ್ಕರೆ-ಆದರಗಳು ಅಪಾರ. ಇದರ ಇತಿಹಾಸವೂ ಚಿರಂತನ. ವೇದಗಳಲ್ಲಿಯೇ ಇದಕ್ಕೆ ವಿಪುಲ ಸಾಕ್ಷ್ಯಗಳನ್ನು ಕಾಣಬಹುದು.
ಇಡಿಯ ಪ್ರಕೃತಿಯನ್ನು ಆರಾಧಿಸುವಾಗ ಆದರ ಅಂಗವೆನಿಸಿದ ತರು-ಲತೆಗಳನ್ನು ಕುರಿತು ಭಾರತೀಯರು ತಳೆದ ಪ್ರೇಮ ಮತ್ತೂ ಮಿಗಿಲು. ಅದರಲ್ಲಿಯೂ ನಮ್ಮ ಕವಿಗಳು ಈ ನೆಲದ ನೂರಾರು ಮರ-ಗಿಡಗಳನ್ನು ಸಾವಿರಾರು ಹೆಸರುಗಳಿಂದ ಗುರುತಿಸಿ ಅವನ್ನು ತಮ್ಮ ಅಸಂಖ್ಯ ಕವಿತೆಗಳಿಂದ ಕೊಂಡಾಡಿದ ಪರಿಗೆ ಮಿಕ್ಕ ಜಗತ್ಸಾಹಿತ್ಯದಲ್ಲಿ ಹೋಲಿಕೆಯೇ ಇಲ್ಲ. ಹೀಗೆ ಹಸುರನ್ನು ಹಾಡಿ ಹರಸಿದ ನುಡಿಜಾಣರು ನಮ್ಮ ದೇಶದ ಎಲ್ಲ ಭಾಷೆಗಳಲ್ಲಿ ಇದ್ದರೂ ಅವರೆಲ್ಲರಿಗೆ ಮಾರ್ಗದರ್ಶಿಗಳಾಗಿ ಮುಂದೆ ನಿಂತವರು ಸಂಸ್ಕೃತದ ಮಹಾಕವಿಗಳು. ಹೇಗೆ ಕಥೆ, ಕಲ್ಪನೆ, ಪಾತ್ರ, ಇತಿವೃತ್ತ, ಛಂದಸ್ಸು, ಪದಸಂಪದ, ಕವಿಸಮಯ, ಶಬ್ದಾರ್ಥಸೌಂದರ್ಯ ಮುಂತಾದ ಸಾಹಿತ್ಯನಿರ್ಮಾಣದ ಅನೇಕ ಸಾಮಗ್ರಿಗಳಿಗೆ; ರಸ, ಧ್ವನಿ, ಔಚಿತ್ಯ, ವಕ್ರತೆ ಮುಂತಾದ ಕಾವ್ಯಮೀಮಾಂಸೆಯ ಮೂಲತತ್ತ್ವಗಳಿಗೆ ಸಂಸ್ಕೃತವಾಙ್ಮಯವು ಆಕರವಾಯಿತೋ ಹಾಗೆಯೇ ಅದು ನಿಸರ್ಗದ ಅಸಂಖ್ಯ ಆಯಾಮಗಳ ಆರಾಧನೆಗೂ ವನವೈಭವದ ವಿಭೂತಿಪೂಜೆಗೂ ಪ್ರೇರಣೆಯಾಯಿತು. ಇದನ್ನು ತೌಲನಿಕವಾಗಿ ವಿವಿಧ ಭಾಷಾಕೃತಿಗಳ ಅಧ್ಯಯನವನ್ನು ಮಾಡಿದವರೆಲ್ಲ ಬಲ್ಲರು. ಪ್ರಕೃತ ಸಂಸ್ಕೃತಸಾಹಿತ್ಯದ ಕೆಲವರು ಮಹಾಕವಿಗಳು ಕಂಡ ಒಂದೆರಡು ಮಹಾವೃಕ್ಷಗಳ ಪರಿಚಯ ಮಾಡಿಕೊಂಡಲ್ಲಿ ಮೇಲೆ ಕಾಣಿಸಿದ ತಥ್ಯ ಮನದಟ್ಟಾದೀತು.
ದಿಟವೇ, ಸಂಸ್ಕೃತದ ಮಹಾಕವಿಗಳು ತಮ್ಮ ಕಾವ್ಯ-ನಾಟಕಗಳಲ್ಲಿ ಕಾಣಿಸಿದ ಮರ-ಗಿಡಗಳ, ಪೊದೆ-ಬಳ್ಳಿಗಳ ವೈವಿಧ್ಯ ಅಪಾರ. ನಮ್ಮ ದೇಶದ ಒಂದೊಮ್ದು ಪ್ರಾಂತದಲ್ಲಿಯೂ ಒಂದೊಂದು ಋತುವಿನಲ್ಲಿಯೂ ಇವು ತೋರಿಕೊಳ್ಳುವ ಪರಿ; ಇವುಗಳ ಕೊಂಬೆ-ರೆಂಬೆಗಳ, ಎಲೆ-ಚಿಗುರುಗಳ, ಹೂವು-ಹಣ್ಣುಗಳ ಸೊಗಸಿನ ಸಿರಿ ಅನೂಹ್ಯವಾದದ್ದು. ಆದರೆ ಇವನ್ನೆಲ್ಲ ನಿರೂಪಿಸಲು ಇಲ್ಲಿ ಎಡೆಯಿಲ್ಲ. ಕೇವಲ ವಾಲ್ಮೀಕಿ, ವೇದವ್ಯಾಸ, ಕಾಳಿದಾಸ, ಬಾಣಭಟ್ಟ, ಭವಭೂತಿಗಳಂಥ ನಾಲ್ಕೈದು ಮಂದಿ ಮಹಾಕವಿಗಳು ತಮ್ಮ ಕೃತಿಗಳಲ್ಲಿ ಅಕ್ಕರೆಯಿಂದ ಹೆಸರಿಸಿ ಹಾಡಿರುವ ಒಂದೆರಡು ತರುಗಳನ್ನಷ್ಟೇ ನಾವಿಲ್ಲಿ ನೋಡಬಹುದು. ಇಂಥ ಕೆಲವು ಮರಗಳು ಆಯಾ ಕವಿಗಳ ರಚನೆಗಳಲ್ಲಿ ಅಲ್ಲಿಯ ಪಾತ್ರಗಳ, ಘಟನೆಗಳ, ಭಾವನೆಗಳ ಮತ್ತು ವರ್ಣನೆಗಳ ಎಳೆಗಳೊಡನೆ ಮಾಸದ ಬಣ್ಣಗಳಾಗಿ ಬೆರೆತುಹೋಗಿ ಸಾಹಿತ್ಯಸರಸ್ವತಿಯ ಒಡಲಿಗೆ ಚೆಲುವನ್ನು ತುಂಬಿವೆ; ಆಯಾ ಕರ್ತೃಗಳ ಜೀವಸಂವೇದನೆಗೂ ಸಾಕ್ಷಿಗಳಾಗಿ ನಿಂತಿವೆ. ಆದುದರಿಂದ ಇವುಗಳಿಗೊಂದು ವೈಶಿಷ್ಟ್ಯ ಬಂದಿದೆ, ವರ್ಚಸ್ಸು ಸಂದಿದೆ, ಅನಿತರಸಾಧಾರಣವಾದ ಕಾಂತಿ-ಶಾಂತಿಗಳು ಕೂಡಿಕೊಂಡಿವೆ. ಹೀಗಾಗಿ ನಮ್ಮ ಸದ್ಯದ ಪ್ರಕಲ್ಪಕ್ಕೆ ತನ್ನದೇ ಆದ ಸಾರ್ಥಕ್ಯವಿದೆ.
* * *
ಮೊದಲಿಗೆ ಆದಿಕವಿ ವಾಲ್ಮೀಕಿಮುನಿಗಳ ಶ್ರೀಮದ್ರಾಮಾಯಣವನ್ನೇ ನೋಡಬಹುದು. ವನವಾಸಕ್ಕೆ ಹೊರಟುನಿಂತ ಸೀತಾ-ರಾಮ-ಲಕ್ಷ್ಮಣರು ಗುಹನ ಆತಿಥ್ಯವನ್ನು ಪಡೆದು ಗಂಗೆಯನ್ನು ದಾಟುತ್ತಾರೆ. ಚಿತ್ರಕೂಟದ ಹಾದಿಯಲ್ಲಿರುವ ಅವರಿಗೆ ಆಗ ಮಹಾವಟವೃಕ್ಷವೊಂದು ಎದುರಾಗುತ್ತದೆ. ಇಳೆಯಗಲಕ್ಕೂ ಮುಗಿಲೆತ್ತರಕ್ಕೂ ಹಬ್ಬಿ ನಿಂತ ಹಚ್ಚಹಸುರಿನ ಪರ್ವತವೇ ಆದ ಈ ಮರಕ್ಕೆ ‘ಶ್ಯಾಮ’ ಎಂದು ಹೆಸರು. ಎಷ್ಟೋ ಸಂಸ್ಕೃತಿಗಳಲ್ಲಿ ಮನುಷ್ಯರಿಗೇ ಅಂಥ ಒಳ್ಳೆಯ ಹೆಸರುಗಳಿರುವುದಿಲ್ಲ; ಇನ್ನು ಅವರು ಬೆಳಸಿದ ಮರ-ಗಿಡಗಳಿಗೆ ಅಂದ-ಚಂದದ ಅಭಿಧಾನಗಳಾದರೂ ಇರುವುದುಂಟೇ? ಕೇವಲ ತಾವು ಸಾಕಿದ ನಾಯಿ-ಬೆಕ್ಕುಗಳಿಗೆ ಮುದ್ದಿನ ಹೆಸರುಗಳನ್ನು ಇಡಬಹುದೇ ಹೊರತು ಸುತ್ತಮುತ್ತಣ ತರು-ಲತೆಗಳಿಗೆ ಆ ಭಾಗ್ಯವನ್ನು ಕರುಣಿಸುವ ಸಹೃದಯರು ಆರ್ಷಸಂಸ್ಕೃತಿಯಲ್ಲಿ ಮಾತ್ರ ಇರುತ್ತಾರೆಂದರೆ ಪಕ್ಷಪಾತದ ಮಾತಾಗದು. ಆದರೆ ವಾಲ್ಮೀಕಿ ಮಹರ್ಷಿಗಳ ಮಹಾಕಾವ್ಯದಲ್ಲಿ ನಾಡಿನ ಗಿಡ-ಮರಗಳಿಗಿರಲಿ, ಕಾಡಿನ ತರುಸಂತತಿಗೂ ಸರಸವಾದ, ಸಾರ್ಥಕವಾದ ಅಂಕಿತವುಂಟು. ಇಂಥ ಸತ್ಸಂಸ್ಕಾರಕ್ಕೆ ಹೋಲಿಕೆ ಇನ್ನೆಲ್ಲಿ? ವಸ್ತುತಃ ಶ್ಯಾಮ ಎಂದರೆ ಹಸುರ್ಗಪ್ಪೆಂಬ ಬಣ್ಣವೆಂದು ಅರ್ಥ. ಇದು ಮಹಾವಿಷ್ಣುವಿಗೂ ಅನ್ವಯಿಸುವ ಅನ್ವರ್ಥನಾಮವಾದದ್ದು ಇದರ ಮಹತ್ತ್ವಕ್ಕೆ ನಿದರ್ಶನ.
ದಟ್ಟಹಸುರಿನ ಎಲೆಗಳೊಡನೆ ತಂಪಾದ ನೆರಳಿನೊಡನೆ ಕಂಗೊಳಿಸುವ ಶ್ಯಾಮವೆಂಬ ಆ ವಟವೃಕ್ಷವನ್ನು ಕಂಡೊಡನೆಯೇ ಸೀತೆ ಅದನ್ನು ವಂದಿಸಿ ಬಲವಂದು ಬೇಡಿಕೊಳ್ಳುತ್ತಾಳೆ; ತನ್ನ ಪತಿಯು ಕೈಗೊಂಡ ವನವಾಸವ್ರತವು ವಿಘ್ನವಿಲ್ಲದೆ ಸಾಗಿ ತಾವೆಲ್ಲ ಮತ್ತೆ ಅಯೋಧ್ಯೆಯನ್ನು ಕ್ಷೇಮವಾಗಿ ಸೇರುವಂತಾಗಲಿ, ಮಹಾಮಾತೆಯರಾದ ಕೌಸಲ್ಯೆ ಮತ್ತು ಸುಮಿತ್ರೆಯರನ್ನು ನೆಮ್ಮದಿಯಿಂದ ಕಾಣುವಂತಾಗಲಿ ಎಂಬ ಅವಳ ಬೇಡಿಕೆ ತುಂಬ ಹೃದಯಸ್ಪರ್ಶಿ. ಇಲ್ಲಿ ಕೈಕೇಯಿಯ ಹೆಸರಿಲ್ಲದಿರುವುದು ಆದಿಕವಿಗಳ ಮಾನವಸ್ವಭಾವಪರಿಜ್ಞಾನಕ್ಕೆ ಒಳ್ಳೆಯ ನಿದರ್ಶನ ಕೂಡ.
ಶ್ಯಾಮಂ ನ್ಯಗ್ರೋಧಮಾಸೇದುಃ ಶೀತಲಂ ಹರಿತಚ್ಛದಮ್ |
ನ್ಯಗ್ರೋಧಂ ತಮುಪಾಗಮ್ಯ ವೈದೇಹೀ ವಾಕ್ಯಮಬ್ರವೀತ್ ||
ನಮಸ್ತೇಽಸ್ತು ಮಹಾವೃಕ್ಷ ಪಾರಯೇನ್ಮೇ ಪತಿರ್ವ್ರತಮ್ |
ಕೌಸಲ್ಯಾಂ ಚೈವ ಪಶ್ಯೇಯಂ ಸುಮಿತ್ರಾಂ ಚ ಯಶಸ್ವಿನೀಮ್ ||
ಇತಿ ಸೀತಾಂಜಲಿಂ ಕೃತ್ವಾ ಪರ್ಯಗಚ್ಛದ್ವನಸ್ಪತಿಮ್ || (ಶ್ರೀಮದ್ರಾಮಾಯಣ, ಅಯೋಧ್ಯಾಕಾಂಡ ೫೫.೨೪-೨೬)
ಇಡಿಯ ಈ ಪ್ರಕರಣ ನಮ್ಮ ಜಾನಪದಸಂಸ್ಕೃತಿಗೆ ಸೊಗಸಾದ ನಿದರ್ಶನ. ಇಂದೂ ಗ್ರಾಮೀಣರಲ್ಲಿ ಇಂಥ ಒಳ್ಳೆಯ ಪದ್ಧತಿ ಇರುವುದನ್ನು ಕಾಣಬಹುದು. ಇದರ ಮೂಲ ವೇದಗಳ ದರ್ಶನದಲ್ಲಿದೆ.
ಈ ‘ಶ್ಯಾಮ’ ವಟವೃಕ್ಷದ ಆಕರ್ಷಣೆ ಕಾಳಿದಾಸ-ಭವಭೂತಿಗಳನ್ನೂ ಬಿಟ್ಟಿಲ್ಲ; ಅವರೂ ತಮ್ಮ ಕಾವ್ಯ-ನಾಟಕಗಳಲ್ಲಿ ಈ ಮರವನ್ನು ಅಜರಾಮರವನ್ನಾಗಿಸಿದ್ದಾರೆ:
ಲಂಕೆಯಿಂದ ಅಯೋಧ್ಯೆಗೆ ವಿಮಾನದ ಮೂಲಕ ಬರುತ್ತಿದ್ದ ಸೀತಾರಾಮರು ಈ ನ್ಯಗ್ರೋಧತರುವನ್ನು ಮೇಲಿನಿಂದಲೇ ಕಾಣುತ್ತಾರೆ. ಹಚ್ಚಹಸುರಿನ ಈ ಮರ ಕೆಂಪಾದ ಹಣ್ಣುಗಳಿಂದ ಕೂಡಿ ಮರಕತ ಮತ್ತು ಪದ್ಮರಾಗ ಮಣಿಗಳು ಒಟ್ಟುಗೂಡಿದ ರಾಶಿಯ ಹಾಗೆ ಕಂಗೊಳಿಸುತ್ತಿತ್ತಂತೆ. ರಾಮನ ಮಾತಿನಲ್ಲಿ ಸೀತೆಯು ಈ ಮರವನ್ನು ವಂದಿಸಿ ಬೇಡಿಕೊಂಡ ಸಂಗತಿಯೂ ‘ರಘುವಂಶ’ದಲ್ಲಿ ಬಂದಿದೆ:
ತ್ವಯಾ ಪುರಸ್ತಾದುಪಯಾಚಿತೋ ಯಃ
ಸೋಽಯಂ ವಟಃ ಶ್ಯಾಮ ಇತಿ ಪ್ರತೀತಃ |
ರಾಶಿರ್ಮಣೀನಾಮಿವ ಗಾರುಡಾನಾಂ
ಸಪದ್ಮರಾಗಃ ಫಲಿತೋ ವಿಭಾತಿ || (೧೩.೫೩)
ಭವಭೂತಿಯ ‘ಉತ್ತರರಾಮಚರಿತ’ದ ಮೊದಲಿಗೆ ಅಯೋಧ್ಯೆಯಲ್ಲಿ ಸುಖದಿಂದ ಇರುವ ಸೀತಾರಾಮರು ಚಿತ್ರಗಳ ಮೂಲಕ ರೂಪಿಸಲ್ಪಟ್ಟ ತಮ್ಮ ಬಾಳಿನ ಘಟನೆಗಳನ್ನೆಲ್ಲ ಕಾಣುವ ಸುಂದರ ಸನ್ನಿವೇಶವಿದೆ. ಈ ಚಿತ್ರಗಳನ್ನು ಹೇಳಿ ಮಾಡಿಸಿದವನು ಲಕ್ಷ್ಮಣ. ಅವನೇ ಅವರಿಬ್ಬರಿಗೆ ಚಿತ್ರಗಳನ್ನು ತೋರಿಸುತ್ತ ವಿವರಣೆಗಳನ್ನೂ ಕೊಡುತ್ತಿರುತ್ತಾನೆ. ಆಗ ಯಮುನೆಯ ದಡಕ್ಕೆ ಅಂಟಿದಂತೆ ಚಿತ್ರಕೂಟದ ಹಾದಿಯಲ್ಲಿ ಬೆಳೆದ ‘ಶ್ಯಾಮ’ವೆಂಬ ಈ ಆಲದ ಮರವನ್ನು ಚಿತ್ರವೊಂದರಲ್ಲಿ ಕಾಣಿಸಿ ಅದರ ಬಗೆಗೆ ಭರದ್ವಾಜಮುನಿಗಳು ತಿಳಿಸಿದುದನ್ನೂ ನೆನಪಿಸುತ್ತಾನೆ: “ಏಷ ಭರದ್ವಾಜಾವೇದಿತಶ್ಚಿತ್ರಕೂಟಯಾಯಿನಿ ವರ್ತ್ಮನಿ ವನಸ್ಪತಿಃ ಕಾಲಿಂದೀತಟೇ ವಟಃ ಶ್ಯಾಮೋ ನಾಮ” (ಪು. ೨೬).
ರಾಮನು ಇದನ್ನು ಕಂಡೊಡನೆಯೇ ನಡೆದು ಬಳಲಿದ ಸೀತೆ ಈ ಮರದ ನೆಳಲಿನಲ್ಲಿಯೇ ತನ್ನಿಂದ ಕೋಮಲವಾದ ಕೈಕಾಲುಗಳನ್ನು ಅಕ್ಕರೆಯಿಂದ ಒತ್ತಿಸಿಕೊಂಡು ಆ ಬಳಿಕ ತನ್ನ ಎದೆಯ ಮೇಲೆ ಮಲಗಿ ದಣಿವಾರಿಸಿಕೊಂಡದ್ದೆಂದು ಆಕೆಗೆ ನಲ್ಮೆಯಿಂದ ನೆನಪಿಸುತ್ತಾನೆ:
ಅಲಸಲಲಿತಮುಗ್ಧಾನ್ಯಧ್ವಸಂಪಾತಖೇದಾ-
ದಶಿಥಿಲಪರಿರಂಭೈರ್ದತ್ತಸಂವಾಹನಾನಿ |
ಪರಿಮೃದಿತಮೃಣಾಲೀದುರ್ಬಲಾನ್ಯಂಗಕಾನಿ
ತ್ವಮುರಸಿ ಮಮ ಕೃತ್ವಾ ಯತ್ರ ನಿದ್ರಾಮವಾಪ್ತಾ || (೧.೨೪)
ಈ ಬಣ್ಣನೆ ಅದೆಷ್ಟು ಹೃದಯಸ್ಪರ್ಶಿ, ಅದೆಷ್ಟು ಸುಕುಮಾರಮನೋಹರ ಎಂದು ಪ್ರತ್ಯೇಕವಾಗಿ ಹೇಳಬೇಕಿಲ್ಲ.
[ಭವಭೂತಿ ಇಂಥ ಮತ್ತೂ ಒಂದೆರಡು ತರುಸಂಬಂಧಿ ವಿವರಗಳನ್ನು ನೀಡುವುದು ಗಮನಾರ್ಹ. ಅಂಥದ್ದಲ್ಲಿ ಒಂದು ರಾಮ ಮತ್ತು ನಿಷಾದಾಧಿಪತಿ ಗುಹರ ಸಮಾಗಮಕ್ಕೆ ಸಾಕ್ಷಿಯೆಂಬಂತಿದ್ದ ಇಂಗುದೀವೃಕ್ಷವೊAದರ ಪ್ರಸ್ತಾವ (೧.೨೧).]
ಹೀಗೆ ಕಾಳಿದಾಸ-ಭವಭೂತಿಗಳು ವಾಲ್ಮೀಕಿಮುನಿಗಳು ಸೂತ್ರರೂಪವಾಗಿ ಹೇಳಿದ ಶ್ಯಾಮವೃಕ್ಷದ ಸಂಗತಿಗೆ ತಮ್ಮ ಪ್ರತಿಭೆ-ಪ್ರೀತಿಗಳಿಂದ ಸುಂದರವಾದ ಭಾಷ್ಯಗಳನ್ನೇ ಬರೆದಿದ್ದಾರೆ.
* * *
ದ್ಯೂತ, ಯುದ್ಧ, ಸೇಡು, ಕೇಡುಗಳಂಥ ಉಗ್ರಾಂಶಗಳನ್ನೆಲ್ಲ ಒಳಗೊಂಡ ಮಹಾಭಾರತದಲ್ಲಿಯೂ ‘ಶ್ಯಾಮ’ದಂಥ ಆಲದ ಮರ ಕಾಣಸಿಗುತ್ತದೆ. ಅದರ ಹೆಸರು ‘ಪ್ರಮಾಣ’ - ತಾನೇ ಒಂದು ಅಳತೆಯಾಗಬಲ್ಲಂಥ ಎತ್ತರ-ಬಿತ್ತರಗಳನ್ನು ತಳೆದ ತರುವಿದೆಂದು ಹೇಳಬಹುದು. ಇದು ಪಾಂಡವರ ವನವಾಸದ ಪ್ರಸ್ಥಾನಕಾಲದಲ್ಲಿ ಅವರ ಹಾದಿಗೆ ಎದುರಾಗುತ್ತದೆ. ಹೀಗೆ ನಾವು ರಾಮಾಯಣಕ್ಕೆ ಸಂವಾದಿಯಾಗಬಲ್ಲ ವೃಕ್ಷರಾಜನನ್ನು ಇಲ್ಲಿಯೂ ದರ್ಶಿಸುತ್ತೇವೆ. ಆದರೆ ದುರ್ದೈವದಿಂದ ಅದಕ್ಕೆ ಪಾಂಡವರೈವರ ಪೂಜೆಯಾಗಲಿ, ದ್ರೌಪದಿಯ ಪ್ರದಕ್ಷಿಣ-ನಮಸ್ಕಾರಗಳಾಗಲಿ ಸಂದಂತೆ ತೋರದು. ಪ್ರಾಯಶಃ ಅವರು ತಮ್ಮದೇ ಆದ ಪರಾಜಯ-ಪರಾಭವಗಳ ನೋವಿನಿಂದ, ರಾಜ್ಯ-ಕೋಶಗಳ ನಷ್ಟದಿಂದ ನೊಂದ ಮನಸ್ಸನ್ನು ಈ ವೃಕ್ಷವಿಭೂತಿಯತ್ತ ಹಾಯಿಸಲಾಗದಷ್ಟು ಕುಗ್ಗಿದ್ದರೇನೋ. ಮೂಲದಲ್ಲಿ ಅವರು ಆ ತರುವಿನ ಬುಡದಲ್ಲಿಯೇ ಉಳಿದು ಸ್ನಾನ-ಸಂಧ್ಯೆಗಳನ್ನು ಆಚರಿಸಿದರೆಂಬ ಸೂಚನೆಯಿದೆ. ಇದು ‘ಪ್ರಮಾಣ’ಕ್ಕೆ ಅವರು ಸಲ್ಲಿಸಿರಬಹುದಾದ ಗೌರವಕ್ಕೂ ಉಪಲಕ್ಷಣವಾದೀತೆಂದು ಕೂಡ ಊಹಿಸಬಹುದು. ಈ ಪ್ರಕ್ರರಣವನ್ನು ಪಾಂಡವರಿಗೂ ರಾಮಾದಿಗಳಿಗೂ ಇರುವ ಸತ್ತ್ವವ್ಯತ್ಯಾಸಕ್ಕೊಂದು ಧ್ವನಿಪೂರ್ಣ ನಿದರ್ಶನವಾಗಿಯೂ ಗ್ರಹಿಸಬಹುದು. ಏನೇ ಆಗಲಿ, ಪಾಂಡವರು ಈ ಮರದ ಸನ್ನಿಧಿಯಲ್ಲಿ ಒಂದಿರುಳು ಕಳೆದು ಮುಂದೆ ಸಾಗಿದರೆಂಬ ಸಂಗತಿ ತನಗೆ ಸಲ್ಲಬೇಕಾದ ಪೂಜೆ ಸಲ್ಲಲಿ, ಬಿಡಲಿ, ತಾನಂತೂ ಎಲ್ಲರ ಪಾಲಿಗೆ ಆಶ್ರಯದಾತನೆಂಬ ‘ಪ್ರಮಾಣ’ವಟದ ಉದಾರ ಧೀರತೆಗೂ ಸಾಕ್ಷಿ.
ಎರಡೂ ಇತಿಹಾಸಕಾವ್ಯಗಳಲ್ಲಿ ಒಂದೇ ತೆರನಾದ ಸಂದರ್ಭದಲ್ಲಿ ಪ್ರಸ್ತಾವಗೊಂಡಿರುವ ಎರಡೂ ಮಹಾವೃಕ್ಷಗಳು ವಟಗಳೇ; ಕಾಡಿನಲ್ಲಿ ಬೆಳೆದಿರುವ ಇವುಗಳಿಗೆ ಅರ್ಥಪೂರ್ಣವಾದ ಹೆಸರುಗಳೂ ಇರುವುದು ಗಮನಾರ್ಹ. ಇದನ್ನು ಪರಿಭಾವಿಸಿದಾಗ ನಮ್ಮಲ್ಲಿರುವ ವೃಕ್ಷಾರಾಧನೆಯ ಸಂಪ್ರದಾಯ ಅದೆಷ್ಟು ಪ್ರಾಈನ, ವ್ಯಾಪಕ ಮತ್ತು ಹೃದಯಸ್ಪರ್ಶಿ ಎಂದು ತಿಳಿಯದಿರದು.
ನಿವೃತ್ತೇಷು ತು ಪೌರೇಷು ರಥಾನಾಸ್ಥಾಯ ಪಾಂಡವಾಃ |
ಪ್ರಜಗ್ಮುರ್ಜಾಹ್ನವೀತೀರೇ ಪ್ರಮಾಣಾಖ್ಯಂ ಮಹಾವಟಮ್ ||
ತಂ ತೇ ದಿವಸಶೇಷೇಣ ವಟಂ ಗತ್ವಾ ತು ಪಾಂಡವಾಃ |
ಊಷುಸ್ತಾಂ ರಜನೀಂ ವೀರಾಃ ಸಂಸ್ಪೃಶ್ಯ ಸಲಿಲಂ ಶುಚಿ || (ಮಹಾಭಾರತ, ವನಪರ್ವ, ೧.೩೯-೪೦)
ಮುಂದೆ ಮಹಾಭಾರತದಲ್ಲಿಯೇ ಬರುವ ಮತ್ತೊಂದು ತರುವಿನತ್ತ ಗಮನ ಹರಿಸಬಹುದು. ಇದು ವಿರಾಟಪರ್ವದ ಆದಿ-ಅಂತ್ಯಗಳಲ್ಲಿ ಎದುರಾಗುವ ಶಮೀವೃಕ್ಷ. ಅಜ್ಞಾತವಾಸಕ್ಕೆ ಸಿದ್ಧರಾದ ಪಾಂಡವರ ದಿವ್ಯಾಯುಧಗಳನ್ನು ಒಂದು ವರ್ಷಕಾಲ ತನ್ನ ಮುಳ್ಳಿಡಿದ ಹಸುರೆಲೆಗಳ ಗರ್ಭದಲ್ಲಿ ಜತನದಿಂದ ಕಾಪಿಟ್ಟುಕೊಂಡ ಹೆಸರಿಲ್ಲದ ಈ ಬನ್ನಿಯ ಮರವು ಕಾಡಿನಲ್ಲಿ ಬೆಳೆದದ್ದಲ್ಲ, ಸುಡುಗಾಡಿನಲ್ಲಿ ನೆಲೆನಿಂತದ್ದು. ನೋಡುಗರ ಕಣ್ಣಿಗೆ ಎದ್ದುಕಾಣದಂತೆ ಹೆದ್ದಾರಿಯಿಂದ ದೂರದಲ್ಲಿರುವ ಈ ತರುವು ಹಿಂಸ್ರಜಂತುಗಳೂ ಹಾವು-ಚೇಳುಗಳೂ ಸುಳಿದಾಡುವ ತಾಣದಲ್ಲಿದೆ. ಇಲ್ಲಿ ಯಾರೊಬ್ಬರ ಸುಳಿವೂ ಕಾಣಿಸುತ್ತಿಲ್ಲ. ಇದರ ದೊಡ್ಡ ದೊಡ್ಡ ಕೊಂಬೆ-ರೆಂಬೆಗಳು ವಿಸ್ತಾರವಾಗಿ ಚಾಚಿಕೊಂಡಿವೆ, ಹಸುರೆಲೆಗಳು ದಟ್ಟವಾಗಿ ಹರಡಿಕೊಂಡಿವೆ, ಇದನ್ನು ಹತ್ತುವುದು ಎಂಥವರಿಗೂ ಕಷ್ಟ. ಆದುದರಿಂದ ತಮ್ಮೆಲ್ಲರ ಆಯುಧಗಳನ್ನೂ ಶವಾಕಾರದಲ್ಲಿ ಜೋಡಿಸಿ ಇದರ ಮೇಲೆ ಗಟ್ಟಿಯಾಗಿ ಕಟ್ಟಿಟ್ಟ ಬಳಿಕ ತಾವು ನಿಶ್ಚಿಂತೆಯಾಗಿ ಅಜ್ಞಾಸವಾಸಕ್ಕೆ ಅಣಿಯಾಗಬಹುದೆಂದು ಅರ್ಜುನನು ಅಣ್ಣ ಯುಧಿಷ್ಠಿರನಿಗೆ ಹೇಳಿ ಒಪ್ಪಿಸುತ್ತಾನೆ:
ಇಯಂ ಕೂಟೇ ಮನುಷ್ಯೇಂದ್ರ ಗಹನಾ ಮಹತೀ ಶಮೀ |
ಭೀಮಶಾಖಾ ದುರಾರೋಹಾ ಶ್ಮಶಾನಸ್ಯ ಸಮೀಪತಃ ||
ನ ಚಾಪಿ ವಿದ್ಯತೇ ಕಶ್ಚಿನ್ಮನುಷ್ಯ ಇಹ ಪಾರ್ಥಿವ |
ಉತ್ಪಥೇ ಹಿ ವನೇ ಜಾತಾ ಮೃಗವ್ಯಾಲನಿಷೇವಿತೇ ||
ಸಮಾಸಜ್ಯಾಯುಧಾನ್ಯಸ್ಯಾಂ ಗಚ್ಛಾಮೋ ನಗರಂ ಪ್ರತಿ |
ಏವಮತ್ರ ಯಥಾಜೋಷಂ ವಿಹರಿಷ್ಯಾಮ ಭಾರತ || (ಮಹಾಭಾರತ, ವಿರಾಟಪರ್ವ, ೪.೧೨-೧೪)
ಶಮೀವೃಕ್ಷವು ತನ್ನ ಕಾಪನ್ನು ಅನ್ಯಾದೃಶವಾಗಿ ನಿರ್ವಹಿಸಿತು. ಮುಂದೆ ಉತ್ತರಗೋಗ್ರಹಣದ ಹೊತ್ತಿನಲ್ಲಿ ರಾಜಪುತ್ರ ಉತ್ತರಕುಮಾರನನ್ನು ಕರೆದುಕೊಂಡು ಬೃಹನ್ನಲವೇಷಧಾರಿ ಅರ್ಜುನ ಇದರ ಬುಡಕ್ಕೆ ಬರುತ್ತಾನೆ, ಅವನೇ ಮರವನ್ನು ಹತ್ತಿ ತನ್ನ ದಿವ್ಯಾಯುಧಗಳನ್ನು ಅಲ್ಲಿಂದ ಕೆಳಗಿಳಿಸಿ ತನಗೆ ತಂದೀಯುವಂತೆ ಮಾಡುತ್ತಾನೆ. ‘ಶಮೀಮಭಿಮುಖಂ ಯಾತಮ್’, ‘ತಾಂ ಶಮೀಮುಪಸಂಗಮ್ಯ’, ‘ತಸ್ಮಾದ್ಭೂಮಿಂಜಯಾರೋಹ ಶಮೀಮೇತಾಂ ಪಲಾಶಿನೀಮ್’, ‘ಆರುರೋಹ ಶಮೀವೃಕ್ಷಮ್’ (ವಿರಾಟಪರ್ವ, ೩೭.೧, ೩೮.೧,೪,೧೪). ಆ ಬಳಿಕ ತಾನು ವೀರವೇಷವನ್ನು ಧರಿಸಿ, ಅಕ್ಷಯತೂಣೀರವನ್ನು ಬೆನ್ನಿಗೆ ಕಟ್ಟಿಕೊಂಡು ಗಾಂಡೀವವನ್ನು ಕೈಯಲ್ಲಿ ಹಿಡಿದು ಉತ್ತರನನ್ನೇ ಸಾರಥಿಯನ್ನಾಗಿ ಮಾಡಿಕೊಂಡು ಅಲ್ಲಿಂದ ಯುದ್ಧಕ್ಕೆ ಸಾಗುತ್ತಾನೆ. ಅಂಥ ಉತ್ಕಟ ಸಂದರ್ಭದಲ್ಲಿಯೂ ತಮಗೆ ಒದಗಿಬಂದ ಆ ಬನ್ನಿಯ ಮರಕ್ಕೆ ಭಕ್ತಿ-ಗೌರವಗಳಿಂದ ಪ್ರದಕ್ಷಿಣೆ ಮಾಡಿ ಹೊರಡುವುದನ್ನು ಅರ್ಜುನನು ಮರೆಯುವುದಿಲ್ಲ.
ಉತ್ತರಂ ಸಾರಥಿಂ ಕೃತ್ವಾ ಶಮೀಂ ಕೃತ್ವಾ ಪ್ರದಕ್ಷಿಣಮ್ |
ಆಯುಧಂ ಸರ್ವಮಾದಾಯ ತತಃ ಪ್ರಾಯಾದ್ಧನಂಜಯಃ || (ವಿರಾಟಪರ್ವ, ೪೧.೧)
* * *
ಇತಿಹಾಸಕಾವ್ಯಗಳಾದ ರಾಮಾಯಣ-ಮಹಾಭಾರತಗಳು ಭಾರತೀಯ ಸಂಸ್ಕೃತಿಯ ಕಣ್ಣುಗಳಾದರೆ ಸಕಲ ಪುರಾಣಗಳ ಪ್ರತಿನಿಧಿರೂಪದ ಭಾಗವತವನ್ನು ಮೂಗೆನ್ನಬಹುದು. ಇಲ್ಲಿಯೂ ಒಂದು ಆಲದ ಮರದ ಪ್ರಸ್ತಾವವಿದೆ. ಶ್ರೀಕೃಷ್ಣನು ತನ್ನ ಬಾಲ್ಯದಲ್ಲಿ ಗೋಕುಲ-ಬೃಂದಾವನಗಳಲ್ಲಿರುವಾಗ ಅದೊಮ್ಮೆ ಬೇಸಗೆಯ ಕಾಲದಲ್ಲಿ ದನ-ಕರುಗಳ ಮಂದೆಯನ್ನು ಮೇಯಿಸುತ್ತ ಅಣ್ಣ ಬಲರಾಮನ ಒಡಗೂಡಿ ಎಲ್ಲ ಗೋವಳರ ಜೊತೆಯಲ್ಲಿ ಕಾಡಿಗೆ ಹೋಗುತ್ತಾನೆ. ಅಲ್ಲಿ ಹುಡುಗರೆಲ್ಲ ಹರ್ಷದಿಂದ ಬಗೆಬಗೆಯ ಆಟಗಳನ್ನು ಆಡುತ್ತಾರೆ. ಆಗ ಸನಿಹದಲ್ಲಿಯೇ ‘ಭಾಂಡೀರಕ’ ಎಂಬ ಮಹಾವಟವೃಕ್ಷವೊಂದು ಕಾಣುತ್ತದೆ. ಈ ಆಲದ ಮರಕ್ಕೂ ಓಜಸ್ವಿಯಾದ ಹೆಸರಿರುವುದು ಗಮನಾರ್ಹ. ಇದರ ಬುಡದಲ್ಲಿ ಎಲ್ಲರೂ ಸೇರಿಕೊಂಡು ಒಬ್ಬರನ್ನೊಬ್ಬರು ಹೊತ್ತುಕೊಂಡು ಹೋಗುವ ಆಟಕ್ಕೆ ಮುಂದಾಗುತ್ತಾರೆ. ಸೋತವನು ಗೆದ್ದವನ್ನು ಹೆಗಲ ಮೇಲೆ ಹೊತ್ತು ಓಡಬೇಕು – ಇದು ಆಟದ ನಿಯಮ. ಈ ಹೊತ್ತಿನಲ್ಲಿಯೇ ಪ್ರಲಂಬಾಸುರನೆಂಬ ರಕ್ಕಸ ಗೋವಳನ ವೇಷದಲ್ಲಿ ಬಂದು ಅವರೊಡನೆ ಸೇರಿಕೊಳ್ಳುತ್ತಾನೆ; ಆಟದಲ್ಲಿ ಸೋತು ಬಲರಾಮನನ್ನು ಹೊತ್ತೊಯ್ಯುವಾಗ ತನ್ನ ಅಸುರತ್ವವನ್ನು ತೋರಿಸಿ ಹಿಂಸೆಗೆ ತೊಡಗಿದಾಗ ಅವನ ಕೈಯಲ್ಲಿ ಹತನಾಗುತ್ತಾನೆ. ಇದು ಬೇರೆಯೇ ಕಥೆ; ಪ್ರಕೃತೋದ್ದೇಶಕ್ಕೆ ಹೊರತಾದದ್ದು.
ವಹಂತೋ ವಾಹ್ಯಮಾನಾಶ್ಚ ಚಾರಯಂತಶ್ಚ ಗೋಧನಮ್ |
ಭಾಂಡೀರಕಂ ನಾಮ ವಟಂ ಜಗ್ಮುಃ ಕೃಷ್ಣಪುರೋಗಮಾಃ || (ಭಾಗವತ, ದಶಮಸ್ಕಂಧ, ಪೂರ್ವಾರ್ಧ, ೧೮.೨೨)
ರಾಮಾಯಣ-ಮಹಾಭಾರತಗಳಂತಲ್ಲದೆ ಭಾಗವತದಲ್ಲಿ ಕಾಣಸಿಗುವ ಆಲದ ಮರವು ಗೊಲ್ಲರ ಮಕ್ಕಳ ಆಟ-ಪಾಟಗಳಿಗೆ ಒದಗಿಬರುವಂಥದ್ದು. ಆದರೆ ಇದರ ಬುಡದಲ್ಲಿಯೂ ಕೇಡು ಹೊಂಚಿಬರುತ್ತದೆ, ಅದರ ಅಳಿವೂ ಆಗುತ್ತದೆ.
(ಈ ಸಂದರ್ಭದಲ್ಲಿ ಕನ್ನಡದ ಶ್ರೇಷ್ಠಕವಿ ಪುತಿನ ಅವರ ‘ಶ್ರೀಹರಿಚರಿತೆ’ಯಲ್ಲಿ ಬರುವ ‘ಭಾಂಡಿರದರ್ಶನ’ ಎಂಬ ಭಾಗದ ಸ್ವಾರಸ್ಯವನ್ನು ಆಸಕ್ತರು ಗಮನಿಸಬಹುದು: ಪು. ೪೪-೪೬.)
ಭಾಂಡೀರಕದ ಪ್ರಸಂಗಕ್ಕಿಂತ ಮುನ್ನವೇ ಬರುವ ‘ಯಮಲಾರ್ಜುನಭಂಜನ’ ಪ್ರಕರಣವು ಮರಗಳಿಗೆ ಸಂಬಂಧಿಸಿದುದೇ ಆದರೂ ಇಲ್ಲಿ ಅಲೌಕಿಕದ ಪ್ರಮಾಣವೇ ಹೆಚ್ಚು. ಕುಬೇರನ ಮಕ್ಕಳಾದ ನಳಕೂಬರ-ಮಣಿಗ್ರೀವರು ನಾರದಮುನಿಗಳ ಶಾಪದ ಕಾರಣ ಜೋಡಿ ಮತ್ತಿಯ ಮರಗಳಾಗಿ ಹುಟ್ಟಿ ಶ್ರೀಕೃಷ್ಣನ ಮೂಲಕ ತಮ್ಮ ಶಾಪವಿಮೋಚನೆಯಾಗಲೆಂದು ಕಾದಿದ್ದರು. ಒರಳುಕಲ್ಲಿಗೆ ಕಟ್ಟಲ್ಪಟ್ಟ ಬಾಲಕೃಷ್ಣನು ಅದನ್ನೂ ಎಳೆದುಕೊಂಡು ಅಂಬೆಗಾಲಿಡುತ್ತ ಬಂದು ಆ ಮರಗಳ ನಡುವೆ ನುಸುಳಿ ಅವರೆಡೂ ಬೀಳುವಂತೆ ಮಾಡಿ ತನ್ಮೂಲಕ ಕುಬೇರನ ಮಕ್ಕಳಿಗೆ ಮೂಲರೂಪವನ್ನು ಕೊಡಿಸಿದನೆಂಬ ಕಥೆಯಲ್ಲಿ ಯಾವುದೇ ಮರದ ಆರಾಧನೆ, ಅದರ ತಣ್ನೆಲಳಿನ ಸೊಗಸು, ಸಾಂಸ್ಕೃತಿಕ ಮಹತ್ತ್ವ ಮುಂತಾದ ಯಾವುದೇ ವಿಶಿಷ್ಟತೆಗಳು ಇಲ್ಲದ ಕಾರಣ ಪ್ರಕೃತೋದ್ದೇಶಕ್ಕೆ ಒದಗಿಬರುತ್ತಿಲ್ಲ.
To be continued.