ಆಕಲನ-ಅಭಿವ್ಯಕ್ತಿ
ಇಂಥ ನೆಲೆಗಟ್ಟಿನಿಂದ ರಾಯರು ಲೇಖನ-ಅಧ್ಯಾಪನಗಳನ್ನು ಕೈಗೊಂಡ ಕಾರಣ ಅವುಗಳಿಗೆ ಎಲ್ಲಿಲ್ಲದ ಕಾಂತಿ ಬಂದಿತು. ಅವರದು ಮೊದಲಿನಿಂದಲೂ ಮಧುಕರಮನೋಧರ್ಮ - ಜೇನುಹುಳುವಿನಂತೆ ನೂರಾರು ಹೂಗಳ ಮಕರಂದ ಹೀರಿ ಅದನ್ನು ತನ್ನೊಳಗಿನ ಸತ್ತ್ವದಿಂದ ಜೇನ ಹನಿಗಳನ್ನಾಗಿಸಿ ತಾನೇ ಕಟ್ಟಿದ ಚಿಕ್ಕಚಿಕ್ಕ ಗೂಡುಗಳಲ್ಲಿ ಚೊಕ್ಕವಾಗಿ ಹವಣಿಸುವುದು. ಜೇನಿನಲ್ಲಿ ಎಲ್ಲ ಹೂಗಳ ಸಾರವಿದ್ದರೂ ಅದಕ್ಕೆ ತನ್ನದೇ ಆದ ವಿಶಿಷ್ಟತೆ ಇದೆ, ಪ್ರಯೋಜನವೂ ಇದೆ. ರಾಯರ ಅಧ್ಯಾಪನ ಮತ್ತು ಲೇಖನಕರ್ಮಗಳ ರೀತಿಯೂ ಹೀಗೆಯೇ. ಇನ್ನೆಷ್ಟೋ ಮಂದಿ ಇವರಂತೆ ವಿವಿಧ ಜ್ಞಾನಶಾಖೆಗಳನ್ನು ಅರಿತು ಪಾಠ-ಪ್ರವಚನಗಳನ್ನು ಮಾಡಿದ್ದರೂ ಗ್ರಂಥರಚನೆ ನಡಸಿದ್ದರೂ ಅವರÀಲ್ಲಿ ಕಾಣದ ಯಾವುದೋ ಒಂದು ತೆರನಾದ ಸೌಲಭ್ಯ ಮತ್ತು ಸ್ವೋಪಜ್ಞತೆಗಳು ರಾಯರಲ್ಲಿವೆ. ಇದು ಅಲ್ಪಸ್ವಲ್ಪದ ಸಿದ್ಧಿಯಲ್ಲ. ಇದಕ್ಕೆ ಹಲವು ಕಾರಣಗಳಿರಬಹುದಾದರೂ ಪ್ರಧಾನವಾದ ಒಂದೆAದರೆ ಅವರಿಗಿದ್ದ ಆಕಲನಶಕ್ತಿ ಮತ್ತು ಅಭಿವ್ಯಕ್ತಿಶಕ್ತಿ.
ಗ್ರಂಥಾಲಯಸೌಲಭ್ಯ ಹೆಚ್ಚಿಲ್ಲದ ಕಾಲದಲ್ಲಿ, ಅಂತರ್ಜಾಲದ ಅನುಕೂಲತೆಯ ಕಲ್ಪನೆಯೂ ಇಲ್ಲದ ಹೊತ್ತಿನಲ್ಲಿ ಯಾವುದೇ ಶೋಧಸಂಸ್ಥೆಯ ಬೆಂಬಲವಿಲ್ಲದೆ ನೂರಾರು ಮೂಲಗಳಿಂದ ರಾಯರು ತಿಳಿವನ್ನು ಸಂಗ್ರಹಿಸಿದ್ದೊAದು ಸಾಹಸ. ಇನ್ನು ಪ್ರಕಾಶನದ ಸಮೃದ್ಧಿಯಾಗಲಿ, ಮುದ್ರಣಸೌಕರ್ಯಗಳ ಪಾರಮ್ಯವಾಗಲಿ ಅಷ್ಟಾಗಿ ಇಲ್ಲದ ಸಮಯದಲ್ಲಿ ತಮ್ಮ ತಿಳಿವನ್ನು ಪ್ರಕಾಶಕರಿಗೆ ಹೊರೆಯಾಗದ, ಓದುಗರಿಗೆ ಭಾರವೆನಿಸದ ರೀತಿಯಲ್ಲಿ ತಮಗೂ ತೃಪ್ತಿಯಾಗುವಂತೆ ತಿಳಿನುಡಿಯಲ್ಲಿ ತುಂಬಿಕೊಟ್ಟದ್ದು ಮಾತಿಗೆ ಮೀರಿದ ಸಾಹಸ. ಅಥರ್ವವೇದವು ಹೇಳುವಂತೆ ನೂರು ಕೈಗಳಿಂದ ಗಳಿಸಿ ಸಾವಿರ ಕೈಗಳಿಂದ ಹಂಚಬೇಕಲ್ಲವೇ! ಇದೇ ರಾಯರ ಹೆಗ್ಗಳಿಕೆ. ಹೀಗೆ ಸಾವಿರ ಕೈಗಳಿಂದ ಹಂಚುವಾಗ ಅವರು ದೇಶ, ಕಾಲ, ವಸ್ತು ಮತ್ತು ಕಲಿಕೆಯ ಅಧಿಕಾರಿಗಳನ್ನು ಗಮನಿಸಿಕೊಂಡು ನಡೆದಿದ್ದಾರೆ. ಇದನ್ನು ವ್ಯಾಸ-ಸಮಾಸಕೌಶಲವೆನ್ನಬೇಕು.
ವ್ಯಾಸವೆಂದರೆ ವಿಸ್ತರಿಸಿ ವಿವರಿಸುವ ಕಲೆ. ಸಮಾಸವೆಂದರೆ ಅಡಕವಾಗಿ ಬಿಗಿದಿಡುವ ಜಾಣ್ಮೆ. ರಾಯರ ವ್ಯಾಸಶಕ್ತಿಗೆ ‘ಋಗ್ವೇದದರ್ಶನ’ದ ಸಂಪುಟಗಳೂ ‘ಆಗಮಕೋಶ’, ‘ಪ್ರತಿಮಾಕೋಶ’, ‘ಲಲಿತಾಕೋಶ’, ‘ಶಾಲಗ್ರಾಮಕೋಶ’, ‘ನವಗ್ರಹಕೋಶ’, ‘ಆಯುರ್ವೇದವಿಶ್ವಕೋಶ’ ಮೊದಲಾದುವು ಸಮರ್ಥ ನಿದರ್ಶನಗಳು. ಇನ್ನು ಸಮಾಸಶಕ್ತಿಯ ವಿಷಯಕ್ಕೆ ಬಂದರೆ, ‘ಶ್ರೀಕೃಷ್ಣನ ವ್ಯಕ್ತಿತ್ವ’, ‘ಭರತಮುನಿಯ ನಾಟ್ಯಶಾಸ್ತç’, ‘ನಗೆಯ ನೆಲೆ’, ‘ಭಾರತೀಯ ಸಂಸ್ಕöÈತಿ’ ಮುಂತಾದ ಎಷ್ಟೋ ಕೃತಿಗಳೇ ಸಾಕ್ಷಿ. ಈ ಗುಣ ಬರೆವಣಿಗೆಯಲ್ಲಿ ಮಾತ್ರವಲ್ಲದೆ ಪಾಠ, ಪ್ರವಚನ, ಅಧ್ಯಯನಗೋಷ್ಠಿಗಳಲ್ಲಿಯೂ ಕಾಣಸಿಗುತ್ತದೆ. ಯೋಗಸೂತ್ರ, ಪ್ರತ್ಯಭಿಜ್ಞಾಶೈವದರ್ಶನ, ಸೌಂದರ್ಯಲಹರೀ, ಭಾಗವತಪುರಾಣ ಮುಂತಾದ ಎಷ್ಟೋ ವಿಷಯಗಳನ್ನು ಹತ್ತಾರು ವರ್ಷ ಅವರು ಪಾಠ ಮಾಡಿದ್ದುಂಟು. ಹಾಗೆಯೇ ದೊಡ್ಡ ದೊಡ್ಡ ಗ್ರಂಥಗಳ, ವಿಚಾರಗಳ ಬಗೆಗೆ ಕೆಲವೇ ನಿಮಿಷಗಳಲ್ಲಿ ಭಾಷಣ ಮಾಡಿದ್ದೂ ಉಂಟು.
ರಾಯರ ಅಧ್ಯಯನ, ಅಧ್ಯಾಪನ, ಚಿಂತನ, ಕೃತಿನಿರ್ಮಾಣ ಮುಂತಾದ ಹಲವು ಬಗೆಯ ಸಾರಸ್ವತಮುಖಗಳಲ್ಲಿರಲಿ, ಇಡಿಯ ಜೀವನದಲ್ಲಿಯೇ ಅದೊಂದು ಬಗೆಯ ಅನುದ್ವಿಗ್ನ ಪ್ರೀತಿ ಇದ್ದಿತು; ಅನುಲ್ಬಣ ತಾದಾತ್ಮ್ಯವಿದ್ದಿತು. ಆದುದರಿಂದಲೇ ಅವರು ಯಾವ ಕೆಲಸವನ್ನು ಕೈಗೊಂಡರೂ ಅದು ಅಕ್ಲಿಷ್ಟಕರ್ಮವಾಗಿರುತ್ತಿತ್ತು, ಅಕ್ಕರೆಯ ಅನುಸಂಧಾನವಾಗಿರುತ್ತಿತ್ತು. ಇದಕ್ಕೆ ನಾನೇ ಕಂಡ ಹಲವು ಪ್ರಸಂಗಗಳು ಸಾಕ್ಷಿಯಾಗಿವೆ. ಅವುಗಳಲ್ಲೊಂದನ್ನಿಲ್ಲಿ ಹಂಚಿಕೊಳ್ಳಬಹುದು.
ಅದೊಮ್ಮೆ ಶ್ರೀ. ಕೆ. ಸಿ. ಶಿವಪ್ಪನವರು ಯಾವುದೋ ಪತ್ರಿಕೆಗಾಗಿ ರಾಯರಿಂದ ಲೇಖನವೊಂದನ್ನು ತುರ್ತಾಗಿ ಬಯಸಿದ್ದರು. ಅದು ಸಂಗೀತವನ್ನು ಕುರಿತದ್ದಾಗಿತ್ತು. ರಾಯರು ಅದನ್ನು ಕೇವಲ ಮೂರು-ನಾಲ್ಕು ದಿನಗಳಲ್ಲಿಯೇ ಸಜ್ಜುಗೊಳಿಸಿದ್ದರು. ಆ ಲೇಖನವನ್ನು ತರಲು ಶಿವಪ್ಪನವರೊಡನೆ ನಾನೂ ರಾಯರ ಮನೆಗೆ ಹೊರಟೆ. ಮೊಗಸಾಲೆಗೆ ಕಾಲಿರಿಸುತ್ತಿದ್ದಂತೆಯೇ ಅವರ ಅಕ್ಕರೆಯ ಮುಗುಳ್ನಗೆಯೂ ಅಚ್ಚುಕಟ್ಟಾಗಿ ಬರೆಯಲ್ಪಟ್ಟ ಲೇಖನವೂ ನಮಗೆ ಸ್ವಾಗತ ನುಡಿದಿದ್ದವು. ಆರೇಳು ಪುಟಗಳ ಆ ಬರೆಹ ಎಂದಿನAತೆ ಮುತ್ತಿನ ಸಾಲುಗಳಿಗೆ ಸೆಡ್ಡುಹೊಡೆಯುವ ಹಾಗೆ ಕಂಗೊಳಿಸಿತ್ತು. ನಮಗೆ ರಾಯರ ಲೇಖನಲೀಲೆಯ ವಿಕ್ರಮಗಳು ಹೊಸತೇನಲ್ಲ. ಅವರು ಎಂಥ ಗಡುವಿಗೂ ಬರೆಹಗಳನ್ನು ಅಣಿಮಾಡಿಕೊಡಬಲ್ಲವರು. ಆದರೆ ಇದೀಗ ಅಂಥ ಬರೆಹದೊಡನೆ ಚಿಕ್ಕ ಚಿಕ್ಕ ಆರೇಳು ತೆಳುಹಾಳೆಗಳ ಮೇಲೆ ರಾಗ-ರಾಗಿಣಿಯರ ರೇಖಾಚಿತ್ರಗಳನ್ನೂ ಸಿದ್ಧಪಡಿಸಿದ್ದರು! ನಾವಿಬ್ಬರೂ ಅವನ್ನು ಕಂಡು ಆನಂದಾಶ್ಚರ್ಯಗಳಿAದ ಆರಾಧನಪೂರ್ವಕವಾಗಿ ರಾಯರತ್ತ ನೋಡಿದಾಗ ಅವರು ತೃಪ್ತಿಯ ನಗೆ ಬೀರುತ್ತ “ಇದು ನಿಮಗೆ ಬೋನಸ್!” ಎಂದಿದ್ದರು. “ಹೇಗೂ ಸಂಗೀತದ ಮಾಧುರ್ಯವನ್ನು ಬರೆಹದ ಮೂಲಕ ಬಿಂಬಿಸಲಾಗುವುದಿಲ್ಲ; ದೃಶ್ಯರೂಪದಲ್ಲಾದರೂ ರಾಗ-ರಾಗಿಣಿಯರ ಚೆಲುವು ಓದುಗರಿಗೆ ಒಂದಿಷ್ಟು ದಕ್ಕಲಿ ಎಂದು ತೋರಿತು. ಅದಕ್ಕೇ ... ಇದೇನೂ ಕಷ್ಟದ ಕೆಲಸವಲ್ಲ, ಅನಿಷ್ಟದ್ದಂತೂ ಅಲ್ಲವೇ ಅಲ್ಲ!” ಎಂಬ ವಿವರಣೆಯ ಮಾತೂ ಅವರಿಂದ ಆ ಬಳಿಕ ಹೊರಟಿತು. ಹೀಗೆ ‘ಸ್ವಾಂತಃಸುಖಾಯ’ ಎನ್ನುವಂತೆ ರಾಯರ ಎಲ್ಲ ದುಡಿಮೆ ಸಾಗಿದ ಕಾರಣ ಅಲ್ಲಿ ನಮಗೆ ಭಾರವೆನಿಸಬಲ್ಲ ಸಂಗತಿ ಇರುವುದಿಲ್ಲ. ಅರೆಮನದ ಅರಕೆ ಎದುರಾಗುವುದಿಲ್ಲ.
ನಿಗ್ರಹ-ಅನುಗ್ರಹ
ಸಾ. ಕೃ. ರಾಮಚಂದ್ರರಾಯರ ವಕ್ತöÈತ್ವ ಅವರ ಕರ್ತೃತ್ವದಷ್ಟೇ - ಕೆಲವೊಂದು ಅಂಶಗಳಲ್ಲಿ ಆದಕ್ಕಿಂತ - ಮಿಗಿಲೆಂದರೆ ಅತಿಶಯವಲ್ಲ. ಅದೊಮ್ಮೆ ಸಂಸ್ಕöÈತಸಾಹಿತ್ಯದ ಪ್ರವೇಶರೂಪದ ಹತ್ತು ಹೊತ್ತಿಗೆಗಳನ್ನವರು ಅರ್ಧಘಂಟೆಯ ಅವಧಿಯಲ್ಲಿ ಪರಿಚಯಿಸಿಕೊಡಬೇಕಿತ್ತು. ಈ ಕೃತಿಗಳಲ್ಲಿ ವೇದ, ಉಪನಿಷತ್ತು, ಪುರಾಣ, ಧರ್ಮಶಾಸ್ತç, ಕಾವ್ಯ, ನಾಟಕ ಮುಂತಾದ ಎಷ್ಟೋ ವಿಷಯಗಳಿದ್ದುವು. ಇಂತಿದ್ದರೂ ರಾಯರು ಈ ಪುಸ್ತಕಗಳನ್ನು ಬರೆದ ಲೇಖಕರೊಬ್ಬರಿಗೂ ಅರಕೆಯಾಗದಂತೆ, ಸಭೆಯಲ್ಲಿದ್ದ ಶ್ರೋತೃಗಳಿಗೂ ತೃಪ್ತಿಯಾಗುವಂತೆ ಅದ್ಭುತವಾಗಿ ಮಾತನಾಡಿದ್ದರು. ಈ ಘಟನೆಗೆ ಸಾಕ್ಷಿಯಾಗಿದ್ದ ನನಗೆ ಇದನ್ನು ಬರೆಯುವಾಗಲೂ ಮೈನವಿರೇಳುತ್ತದೆ! ಇಂಥ ಸಂದರ್ಭಗಳು ನೂರಾರು.
ಆದುದರಿಂದಲೇ ಯಾವುದೇ ವಿದ್ವತ್‌ಸಭೆಗಾಗಲಿ, ಗ್ರಂಥಲೋಕಾರ್ಪಣದ ಸಮಾರಂಭಕ್ಕಾಗಲಿ ರಾಮಚಂದ್ರರಾಯರ ಉಪಸ್ಥಿತಿ ಅನಿವಾರ್ಯವಾಗಿತ್ತು; ಪರ್ಯಾಪ್ತವೂ ಆಗಿತ್ತು. ಇದು ಕೇವಲ ಒಂದು ವಿದ್ಯೆಗೋ ಒಂದು ಕಲೆಗೋ ಸಂಬAಧಿಸಿದAತೆ ಅಲ್ಲ. ‘ಈ ವಿಷಯದ ಬಗೆಗೆ ಹೇಗಪ್ಪಾ ಮಾತನಾಡುವುದು’ ಎಂದು ಎಂಥ ವಿದ್ವಾಂಸರಿಗೂ ಎದೆ ಮುಟ್ಟಿಕೊಳ್ಳುವಂತಾಗುವ ಸಂದರ್ಭಗಳಲ್ಲಿಯೂ ರಾಯರ ಪ್ರಜ್ಞೆ ಲೀಲಾಜಾಲವಾಗಿ ಸಂಚರಿಸುತ್ತಿತ್ತು; ಆವರೆಗೆ ಆ ನಿಟ್ಟಿನಲ್ಲಿ ಯಾರೂ ಕಾಣದ ಹೊಳಹುಗಳನ್ನು ಕಂಡು ಕಾಣಿಸುತ್ತಿತ್ತು.
ಅದೊಮ್ಮೆ ‘ಶಿಲ್ಪ ಮತ್ತು ಸಂಗೀತಕಲೆಗಳ ಸಂವಾದ’ ಎಂಬ ವಿಚಾರಗೋಷ್ಠಿ ಆಯೋಜಿತವಾಗಿತ್ತು. ರಾಯರದೇ ಆಶಯಭಾಷಣ. ಕಣ್ಣಿನ ಲೋಕಕ್ಕೆ ಸೇರಿದ ಶಿಲ್ಪಕ್ಕೂ ಕಿವಿಯ ಜಗತ್ತಿಗೆ ಸಂದಿರುವ ಸಂಗೀತಕ್ಕೂ ಎಲ್ಲಿಯ ತಾಳ-ಮೇಳ! ರಾಯರು ಈ ವಿಭಿನ್ನೇಂದ್ರಿಯಸAವೇದನೆಯನ್ನೇ ತಮ್ಮ ಮಾತಿನ ಕೇಂದ್ರವಾಗಿ ಇರಿಸಿಕೊಂಡು ಒಳನೋಟಗಳ ವೃತ್ತಗಳನ್ನು ವಿಸ್ತರಿಸಿದ್ದರು. ‘ಆಯುರ್ವೇದದಲ್ಲಿ ಮೌಲ್ಯಪ್ರಜ್ಞೆ’ ಎಂಬ ಮತ್ತೊಂದು ಉಪನ್ಯಾಸ ಸ್ಮರಣೀಯವಾಗಿದೆ. ಬುದ್ಧ-ಶಂಕರರ ಬಗೆಗೆ, ಪುರಂದರ-ತ್ಯಾಗರಾಜರ ಬಗೆಗೆ, ಸಂಗೀತಕೃತಿಗಳಲ್ಲಿಯ ತಂತ್ರಶಾಸ್ತಿçÃಯ ಸಂಗತಿಗಳ ಬಗೆಗೆ ಅವರು ಮಾಡಿದ್ದ ಭಾಷಣಗಳು ಮರೆಯಲಾಗದಂಥವು.
ಕೆಲವೊಮ್ಮೆ ಕೊಟ್ಟ ವಿಷಯಕ್ಕೇ ವಿರುದ್ಧವಾದ ಅಭಿಪ್ರಾಯಗಳನ್ನೂ ಅವರು ಮಂಡಿಸಿದ್ದುAಟು! ಆದರೆ ಇಲ್ಲಿಯೂ ಆಧಾರಗಳಿಗೆ ಅರಕೆ ಇರುತ್ತಿರಲಿಲ್ಲ; ಒಳನೋಟಗಳಿಗೆ ಕೊರತೆ ಇರುತ್ತಿರಲಿಲ್ಲ. ಅದೊಮ್ಮೆ ವಾಸ್ತುವಿದ್ಯೆಯನ್ನು ಕುರಿತ ಅಂತಾರಾಷ್ಟಿçಯ ಸಮ್ಮೇಳನದ ಆಶಯಭಾಷಣದಲ್ಲಿಯೇ ಆ ವಿದ್ಯೆಯ ಲೋಪ-ದೋಷಗಳನ್ನು ಎತ್ತಿ ಆಡಿದ್ದರು; ಇಡಿಯ ಸಮ್ಮೇಳನದ ಉದ್ದೇಶ್ಯವನ್ನೇ ಪ್ರಶ್ನಾರ್ಥಕಚಿಹ್ನೆಯ ಮೇಲೆ ನಿಲ್ಲಿಸಿದ್ದರು! ಇನ್ನೊಮ್ಮೆ ಪ್ರಸಿದ್ಧ ಸಂಶೋಧಕರೊಬ್ಬರ ಸ್ಮರಣೆಯಲ್ಲಿ ನಡೆದ ದತ್ತಿ ಉಪನ್ಯಾಸವನ್ನು ಮಾಡುತ್ತ ಅವರ ಇಡಿಯ ಸಂಶೋಧನೆ ಮತ್ತದರ ಕ್ರಮಗಳನ್ನೇ ಸಾಧಾರವಾಗಿ ತಿರಸ್ಕರಿಸಿದ್ದರು. ಮಗದೊಮ್ಮೆ ಕನ್ನಡ ಸಾಹಿತ್ಯ ಸಮ್ಮೇಳನವೊಂದರ ಗೋಷ್ಠಿಯಲ್ಲಿ ಅಧ್ಯಕ್ಷಭಾಷಣ ಮಾಡುವಾಗ ಆವರೆಗಿನ ಭಾಷಣಕಾರರ ಅಪಸವ್ಯಗಳನ್ನೆಲ್ಲ ಎಳೆದೆಳೆದು ತೋರಿಸಿದ್ದರು. ಹೀಗೆ ರಾಯರು ನಿಗ್ರಹಾನುಗ್ರಹಸಮರ್ಥರು.
ಸಾರಸ್ವತ ಕೃಷಿ
ಸದ್ಯಕ್ಕೆ ನಮಗಿರುವ ಅವಕಾಶ ಅಲ್ಪವಾದ ಕಾರಣ ರಾಮಚಂದ್ರರಾಯರ ಸಾರಸ್ವತ ಕೃಷಿಯನ್ನೆಲ್ಲ ತಡಕಾಡಿ ಅವರ ಸಾರ್ವಪಾರ್ಷದತ್ವವನ್ನು ಸಾಕ್ಷಾತ್ಕರಿಸಿಕೊಳ್ಳಲು ಸಾಧ್ಯವಿಲ್ಲ. ದಿಙ್ಮಾತ್ರವಾಗಿ ಕೆಲವೊಂದು ಕಿರುಹೊತ್ತಿಗೆಗಳನ್ನು ಪರಿಶೀಲಿಸಿ ಅಷ್ಟರಲ್ಲಿಯೇ ಅವರ ಸರ್ವಂಕಷತೆಯನ್ನು ಮನಗಾಣಬಹುದು. ಹೀಗೆ ಕಿರುಹೊತ್ತಿಗೆಗಳನ್ನೇ ಆಯ್ದುಕೊಳ್ಳಲು ಹಲವು ಕಾರಣಗಳಿವೆ: ಮೊದಲಿಗೆ ಪ್ರಕೃತ ಲೇಖನದ ಮಿತಿಗೆ ಅವು ಒದಗಿಬರುತ್ತವೆ. ಎರಡನೆಯದಾಗಿ ಅವುಗಳು ತಮ್ಮ ಗಾತ್ರಕ್ಕೆ ನಿರಪೇಕ್ಷವಾಗಿ ಗುಣಾಧಿಕ್ಯವನ್ನು ಹೊಂದಿವೆ. ಮೂರನೆಯದಾಗಿ ಈ ಪುಸ್ತಿಕೆಗಳ ಸೀಮಿತ ವ್ಯಾಪ್ತಿಯೊಳಗೆ ಅವುಗಳಲ್ಲಿಯ ವಿಚಾರಗಳನ್ನು ಇಷ್ಟು ಅಡಕವಾಗಿ, ಆಕರ್ಷಕವಾಗಿ ಸ್ವೋಪಜ್ಞವಾಗಿ ಅಣಿಗೊಳಿಸಲು ಎಂಥವರಿಗೂ ಕಷ್ಟವೆನಿಸುವುದರಿಂದ ಈ ನಿಟ್ಟಿನಲ್ಲಿ ರಾಮಚಂದ್ರರಾಯರ ಮಹತ್ತ್ವ ಅದೆಷ್ಟು ಮಿಗಿಲೆಂದು ಕಂಡುಕೊಳ್ಳಲು ಇವುಗಳೇ ಚೆನ್ನಾಗಿ ಒದಗಿಬರುತ್ತವೆ. ನಾಲ್ಕನೆಯದಾಗಿ ಈ ಕೃತಿಗಳಲ್ಲಿಯೂ ರಾಯರ ಇಂಥ ಇನ್ನಿತರ ರಚನೆಗಳಲ್ಲಿಯೂ ಸುಳಿದಾಡುವ ಅಪ್ಪಟ ದೇಶಿಯತೆಯ ಪರಿಮಳ ಅನ್ಯತ್ರ ಎಲ್ಲಿಯೂ ಕಾಣಸಿಗದಾದುದರಿಂದ ದಿಟವಾದ ಭಾರತೀಯತೆಯ ವೈಶಿಷ್ಟ್ಯ ಏನೆಂಬುದನ್ನು ಈ ಮೂಲಕ ಅರಿಯಬಹುದು. ಈ ಗುಣವು ಬಹಿರಂಗದಲ್ಲಿ ಸುಲಭವಾಗಿ ತೋರಿಕೊಳ್ಳದ, ಅಂತರAಗಕ್ಕೆ ಮಾತ್ರ ಮುಟ್ಟಬಲ್ಲ ಹದನು.
ಕಟ್ಟುನಿಟ್ಟಾದ ‘ಅಕ್ಯಾಡೆಮಿಕ್’ ಶಿಸ್ತಿನ ಎಷ್ಟೋ ಮಂದಿ ಆಕ್ಷೇಪಿಸಬಹುದಾದ - ಅಂಥ ಕೆಲವು ಆಕ್ಷೇಪಗಳು ಸಾಧುವೆಂದೂ ಭಾವಿಸಬಹುದಾದ - ಸಂದರ್ಭಗಳಲ್ಲಿಯೂ ರಾಯರ ಬರೆಹಗಳು ತಮ್ಮವೇ ರೀತಿಯಿಂದ ಅನನ್ಯವೂ ಅನಿವಾರ್ಯವೂ ಆಗುತ್ತವೆ. ಅವರು ತಮ್ಮ ಬರೆವಣಿಗೆಯ ಆರಂಭಿಕ ಕಾಲದಲ್ಲಿ (ಮುಖ್ಯವಾಗಿ) ಆಂಗ್ಲಭಾಷೆಯಲ್ಲಿ ಗ್ರಂಥಗಳನ್ನು ಬರೆಯುವಾಗ ರಾಚನಿಕ ಸ್ತರದಲ್ಲಿ ಅಕ್ಯಾಡೆಮಿಕ್ ಶಿಸ್ತುಗಳನ್ನು ಅನುಸರಿಸುತ್ತಿದ್ದಂತೆ ತೋರುತ್ತದೆ. ಆದರೆ ಆ ಅವಧಿಯಲ್ಲಿ ಕೂಡ ಕನ್ನಡದ ಕೃತಿಗಳಿಗೆ ಇಂಥ ಕಟ್ಟುಪಾಡುಗಳನ್ನು ಇಟ್ಟುಕೊಂಡಿರಲಿಲ್ಲ. ಆಮೇಲಿನ ದಿನಗಳಲ್ಲಿ ಇಂಗ್ಲಿಷ್ ಗ್ರಂಥಗಳಿಗೂ ಇದೇ ನೀತಿ ಅನ್ವಿತವಾಯಿತೆನ್ನಿ. ವಿಶ್ವವಿದ್ಯಾಲಯಗಳ ಮತ್ತು ಸಂಶೋಧನಕೇAದ್ರಗಳ ಪಟ್ಟಭದ್ರರಿಗಿಂತ ಮಿಗಿಲಾಗಿ ಲೋಕಸಾಮಾನ್ಯದ ಮಂದಿಯೊಡನೆ ತಿಳಿವನ್ನು ಹಂಚಿಕೊಳ್ಳುವುದೇ ಒಳಿತೆಂಬ ಭಾವನೆಯೇ ಅವರ ಈ ಬಗೆಯ ವರ್ತನೆಗೆ ಕಾರಣವೆಂದು ಊಹಿಸಬಹುದು. ಈ ನಿಟ್ಟಿನಿಂದ ಕಂಡಾಗ ರಾಮಚಂದ್ರರಾಯರು ಜನತಾವಿಶ್ವವಿದ್ಯಾಲಯದ ವಕ್ತಾರರೆನ್ನಬೇಕು; ಜಾನಪದರ ಪ್ರಾಚಾರ್ಯರೆನ್ನಬೇಕು. ನಮ್ಮ ದೇಶದಲ್ಲಿ ಬೆಳೆದುಬಂದ ಜ್ಞಾನವಿತರಣೆಯ ಒಂದು ಪ್ರಧಾನ ಧಾರೆ ಈ ಪರಿಯಾದುದು. ಅಲ್ಲದೆ ಇದಕ್ಕೆ ಅಕ್ಯಾಡೆಮಿಕ್ ಶಿಸ್ತುಗಳ ಜೊತೆಗೆ ಯಾವುದೇ ವಿರೋಧವಿರಲಿಲ್ಲ. ಹೇಗೆ ವ್ಯಾಸಕೂಟ ಮತ್ತು ದಾಸಕೂಟಗಳು ಪರಸ್ಪರ ಪೂರಕವೋ ಪಂಡಿತರೂ ಅನುಭಾವಿಗಳೂ ಅನ್ಯೋನ್ಯ ಸಹಕಾರಿಗಳೋ ಇದೂ ಅದೇ ತೆರನಾದದ್ದು. ವಿಶೇಷವೇನೆಂದರೆ, ರಾಯರು ಎರಡು ಹಾದಿಗಳಲ್ಲಿಯೂ ಎಡವದೆ ಸಂಚರಿಸಬಲ್ಲವರಾಗಿದ್ದರು. ಇದಕ್ಕೆ ಮುಖ್ಯ ಕಾರಣ ಅವರಿಗಿದ್ದ ಸಾಕಲ್ಯದೃಷ್ಟಿ, ಸ್ನಿಗ್ಧದೃಷ್ಟಿ. ಈ ಗುಣಗಳು ಪ್ರಧಾನವಾಗಿ ವಿಚಾರಕ್ಕಿಂತ ಆಚಾರವನ್ನೂ ವ್ಯವಕಲನಕ್ಕಿಂತ ಸಂಕಲನವನ್ನೂ ಸಂಯುಗಕ್ಕಿAತ ಸಾಧನೆಯನ್ನೂ ನಚ್ಚಿಕೊಂಡಿವೆ. ಒಂದು ಮಾತಿನಲ್ಲಿ ಹೇಳುವುದಾದರೆ ರಾಯರ ಬರೆಹಗಳು ಆಗ್ನೇಯವಲ್ಲ, ಸೌಮ್ಯ. ಹೀಗಾಗಿಯೇ ಇವು ಜೀವದ ನೆಮ್ಮದಿಯನ್ನು ಮುಖ್ಯವಾಗಿ ಗಣಿಸಿವೆಯಲ್ಲದೆ ಜೀವಿಕೆಯ ಸೆಣಸಾಟವನ್ನಲ್ಲ.
ಮೊದಲಿಗೆ ರಾಮಚಂದ್ರರಾಯರು ಹಲಕೆಲವು ಸಂಸ್ಕöÈತಕವಿಗಳನ್ನೂ ಅವರ ಕಾವ್ಯಗಳನ್ನೂ ಕುರಿತು ಬರೆದ ಕಿರುಹೊತ್ತಿಗೆಗಳ ಪರಿಚಯ ಮಾಡಿಕೊಳ್ಳಬಹುದು. ಇವೆಲ್ಲ ಅವರ ಆರಂಭಿಕ ರಚನೆಗಳು. ಮಾತ್ರವಲ್ಲ, ಅವರ ಅನೇಕ ಗ್ರಂಥಗಳ ಹಾಗೆಯೇ ಸ್ವಲ್ಪ ಕಾಲದ ಬಳಿಕ ಅಷ್ಟಿಷ್ಟು ಸೇರ್ಪಡೆ-ಬೇರ್ಪಡೆಗಳ ಪರಿಷ್ಕಾರವನ್ನು ತಳೆದು ಬೇರೆ ಬೇರೆ ಹೆಸರುಗಳಲ್ಲಿ ಪುನರ್ಮುದ್ರಣ ಕಂಡಿವೆ. ಎಲ್ಲೆಡೆ ರಾಯರ ಅಮ್ಲಾನಸುಂದರವೂ ಅಕೃತ್ರಿಮರಮಣೀಯವೂ ಆದ ಋಜುಪ್ರಸನ್ನ ಭಾಷೆ ತಾಂಡವಿಸಿದೆ. ಜೊತೆಗೆ ನಿರೂಪಣವಿಧಾನದಲ್ಲಿ ಆಕರ್ಷಣೆ, ಅಚ್ಚುಕಟ್ಟುತನ ಮತ್ತು ಸುಬೋಧಕತೆ ಎದ್ದುಕಾಣುತ್ತವೆ.
ಜಗನ್ನಾಥಪಂಡಿತನು ತನ್ನ ‘ರಸಗಂಗಾಧರ’ವೆAಬ ಕಾವ್ಯಮೀಮಾಂಸಾಗ್ರAಥದಲ್ಲಿ ಸಾಹಿತ್ಯದ ವಿವಿಧ ಗುಣಗಳೆನಿಸಿದ ಓಜಸ್ಸು, ಮಾಧುರ್ಯ, ಪ್ರಸಾದ ಎಂಬುವನ್ನು ನಿರೂಪಿಸುತ್ತ ಕಡೆಯದಾದ ಪ್ರಸಾದಗುಣಕ್ಕೆ ನಿದರ್ಶನವಾಗಿ ತನ್ನೆಲ್ಲ ಕೃತಿಗಳೂ ಸಲ್ಲುತ್ತವೆಂದು ಆತ್ಮವಿಶ್ವಾಸದಿಂದ ಸಾರುತ್ತಾನೆ: “ಉದಾಹರಣಾನ್ಯತ್ರ ಪ್ರಾಯಶೋ ಮದೀಯಾನಿ ಸರ್ವಾಣ್ಯೇವ ಪದ್ಯಾನಿ” ಎಂದು! ಮಿಕ್ಕೆಲ್ಲ ವಿಷಯಗಳಲ್ಲಿ ಅವನ ನಿಲವು ಹೇಗೇ ಇದ್ದರೂ ಇಲ್ಲಿ ಮಾತ್ರ ಅದು ಅತಿಶಯೋಕ್ತಿಯಾಗಿಲ್ಲ. ರಾಯರ ಬರೆವಣಿಗೆಯ ಸಂಗತಿಗೇ ಬರುವುದಾದರೆ ಜಗನ್ನಾಥನ ಮಾತು ಇಲ್ಲಿ ಮತ್ತೂ ಮಿಗಿಲಾಗಿ ಸಲ್ಲುವುದೆಂದು ಹೇಳಲೇಬೇಕು.
‘ಆದಿಕವಿ ವಾಲ್ಮೀಕಿ’ ಅಥವಾ ‘ವಾಲ್ಮೀಕಿಪ್ರತಿಭೆ’ ಎಂಬ ಕಿರುಹೊತ್ತಿಗೆ ಮೂರು ಬಾರಿ ಪ್ರಕಟವಾದಂತೆ ತೋರುತ್ತದೆ. ಇಲ್ಲಿ ಮೊದಲಿಗೆ ವಾಲ್ಮೀಕಿ ಮುನಿಗಳ ಪರಿಚಯ-ಪೂರ್ವೋತ್ತರಗಳನ್ನು ವಿವಿಧ ಪುರಾಣಗಳ, ಐತಿಹ್ಯಗಳ ಹಿನ್ನೆಲೆಯಲ್ಲಿ ನೀಡಲಾಗಿದೆ. ಬಳಿಕ ರಾಮಾಯಣದ ಮಹತ್ತ್ವವು ನಿರೂಪಿತವಾಗಿದೆ. ಇಲ್ಲಿ ರಾಯರು ಉತ್ತರಕಾಂಡವು ಮೂಲಕಾವ್ಯದ ಭಾಗವಲ್ಲವೆಂದು ಪ್ರತಿಪಾದಿಸಿದ್ದಾರೆ. ಅನಂತರ ರಾಮಾಯಣಕಥೆಯ ಮೂಲ ಜಾನಪದರ ಬಾಯ್ದೆರೆಗಳಲ್ಲಿ ಮೊದಲು ಬೆಳೆದಿತ್ತೆಂದು ಹೇಳಿ ಈ ಮಹಾಕೃತಿಯ ಇತಿಹಾಸತ್ವವನ್ನು ಬಣ್ಣಿಸಿದ್ದಾರೆ. (ಇಲ್ಲೊಂದೆಡೆ ರಾಯರು ರಾಮಾಯಣದೊಳಗೆ ಆರ್ಯ-ದ್ರಾವಿಡರ ಸಂಘರ್ಷವಿದ್ದಿತೆAಬ ಮಾತುಗಳನ್ನು ಹೇಳಿದ್ದರೂ ಆ ಆವೃತ್ತಿಯ ಸಂಪಾದಕರಾದ ಸೂರ್ಯಪ್ರಕಾಶ ಪಂಡಿತ್ ತಮ್ಮ ಟಿಪ್ಪಣಿಯಲ್ಲಿ ಇವೆಲ್ಲ ಅವರ ಹಳಗಾಲದ ಅಭಿಪ್ರಾಯಗಳೆಂದೂ ಈಚೆಗೆ ಅವನ್ನು ಸ್ವಯಂ ರಾಯರೇ ತಳ್ಳಿಹಾಕಿದ್ದರೆಂದೂ ಒಕ್ಕಣಿಸಿರುವುದು ಸ್ತುತ್ಯರ್ಹ.) ಅನಂತರ ಮಹಾಭಾರತದ ವನಪರ್ವದಲ್ಲಿ ಬರುವ ‘ರಾಮೋಪಾಖ್ಯಾನ’ ಸಂಕ್ಷಿಪ್ತವಾಗಿ ಪ್ರಸ್ತಾವಗೊಂಡಿದೆ. ಕಡೆಗೆ ಆಗ್ನೇಯ ಏಷ್ಯಕ್ಕೆ ಸೇರಿದ ಹಲವು ದೇಶಗಳೂ ಸೇರಿದಂತೆ ಜಗತ್ತಿನ ವಿವಿಧ ಪ್ರಾಂತಗಳಲ್ಲಿ ರಾಮಾಯಣವು ಹೇಗೆ ವ್ಯಾಪಿಸಿದೆ, ಏನೆಲ್ಲ ರೂಪಾಂತರಗಳನ್ನು ತಾಳಿದೆಯೆಂಬ ಅಂಶಗಳನ್ನು ಕೊಡಲಾಗಿದೆ.
‘ಮಹಾಕವಿ ಅಶ್ವಘೋಷ’ ಪುಸ್ತಿಕೆಯು ಹಿಂದೆ ‘ಸೌಂದರನAದ’ ಎಂಬ ಹೆಸರಿನಿಂದ ಪ್ರಕಟವಾಗಿದ್ದ ಕೃತಿಗೆ ಅಶ್ವಘೋಷ ಕವಿಯನ್ನು ಕುರಿತು ಮತ್ತಷ್ಟು ಸಂಗತಿಗಳನ್ನೂ ಆತನ ಇತರ ರಚನೆಗಳಾದ ‘ಬುದ್ಧಚರಿತ’ ಮತ್ತು ‘ಶಾರಿಪುತ್ರಪ್ರಕರಣ’ಗಳನ್ನು ಕುರಿತು ಕೆಲವೊಂದು ಸಣ್ಣ ಪುಟ್ಟ ವಿವರಗಳನ್ನೂ ಸೇರಿಸಿ ರೂಪಿಸಿದ ಬರೆಹವಾಗಿದೆ. ಹೊಸ ಆವೃತ್ತಿಯಲ್ಲಿ ಕವಿಯನ್ನು ಕುರಿತು ಕೆಲವೊಂದು ಹೊಸಹೊಳಹುಗಳಿವೆ. ಉಳಿದಂತೆ ಸೌಂದರನAದ ಕಾವ್ಯದ ಹೃದಯಂಗಮ ಕಥಾನಿರೂಪಣೆ ಮತ್ತು ಆಯ್ದ ಕೆಲವೊಂದು ಶ್ಲೋಕಗಳ ಉಲ್ಲೇಖ ಮೆಚ್ಚುವಂತಿದೆ. ಈ ಕಾವ್ಯವು ಬುದ್ಧಚರಿತಕ್ಕಿಂತ ಹೆಚ್ಚಿನ ಪ್ರಮಾಣದಲ್ಲಿ ಬುದ್ಧನ ಉಪದೇಶವನ್ನು ಒಳಗೊಂಡ ಕಾರಣ ಇದರ ಪರಿಚಯದಿಂದ ಭಗವಾನ್ ಬುದ್ಧನ ತತ್ತ್ವದೃಷ್ಟಿಯೂ ನಮಗೆ ಎಟುಕುತ್ತದೆ.
‘ದಂಡಿಯ ಅವಂತಿಸುAದರೀ’ ಎಂಬ ಪುಟ್ಟ ಪುಸ್ತಿಕೆ ತನ್ನ ಹೆಸರಿನಿಂದಲೇ ಸೂಚಿಸುವಂತೆ ಏಳನೆಯ ಶತಾಬ್ದಿಯಲ್ಲಿ ಕಾಂಚೀನಗರವನ್ನು ಅಲಂಕರಿಸಿದ್ದ ದಂಡಿಕವಿಯ ಅವಂತಿಸುAದರಿ ಎಂಬ ಗದ್ಯಕಾವ್ಯದ ಸರಳ ಪರಿಚಯ. ಮೊದಲಿಗೆ ಇದೇ ಕಾವ್ಯದಲ್ಲಿ ಬರುವ ಕವಿಯ ಪರಿಚಯವನ್ನು ಆಧರಿಸಿ ದಂಡಿಯ ಹುಟ್ಟು-ಹಿನ್ನೆಲೆಗಳನ್ನು ಕೊಡಲಾಗಿದೆ. ಇದಕ್ಕಾಗಿ ಆಧುನಿಕ ಸಂಶೋಧನೆಗಳನ್ನೂ ರಾಯರು ಗಮನಿಸಿದ್ದಾರೆ. ಅನಂತರ ಕೃತಿಯ ಕಥಾವಿಸ್ತರವನ್ನು ತಿಳಿಯಾಗಿ ಸಂಗ್ರಹಿಸಿ ನೀಡಲಾಗಿದೆ. ಕಡೆಯಲ್ಲಿ ಅನುಬಂಧರೂಪವಾಗಿ ಇದೇ ಕಾವ್ಯದ ಕೆಲವೊಂದು ಭಾಗಗಳನ್ನೂ ಹವಣಿಸಲಾಗಿದೆ. ಒಟ್ಟಿನಲ್ಲಿ ಹೆಚ್ಚು ಪ್ರಸಿದ್ಧಿಯನ್ನೂ ಶಾಲೆ-ಕಾಲೇಜುಗಳ ಪಾಠಕ್ರಮದಲ್ಲಿ ವ್ಯಾಪ್ತಿಯನ್ನೂ ಹೊಂದಿರುವ ದಂಡಿಯ ಮತ್ತೊಂದು ಗದ್ಯಕಾವ್ಯ ‘ದಶಕುಮಾರಚರಿತ’ವನ್ನಷ್ಟೇ ಬಲ್ಲವರಿಗೆ ‘ಅವಂತಿಸುAದರೀಕಥಾ’ ಎಂಬ ಆತನದೇ ಬೇರೊಂದು ಕೃತಿಯನ್ನು ಪರಿಚಯಿಸಿಕೊಳ್ಳುವ ಒಳ್ಳೆಯ ಅವಕಾಶವನ್ನು ರಾಯರು ಈ ಮೂಲಕ ಮಾಡಿಕೊಟ್ಟಿದ್ದಾರೆಂದರೆ ಸರಿಯಾದೀತು.
To be continued.











































